SENSEX
NIFTY
GOLD
USD/INR

Weather

24    C

ಡಿಜಿಟಲ್ ಸುದ್ದಿ ಮೂಲಗಳು

...

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ (DCC) ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ನೇಮಕ ಮಾಡಿ AICC ಬುಧವಾರ ಆದೇಶ ಹೊರಡಿಸಿದೆ. AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದು, ಸಂಘಟನ್ ಸೃಜನ್ ಅಭಿಯಾನದ ಭಾಗವಾಗಿ ಈ ನೇಮಕಾತಿ ನಡೆದಿದೆ. ಈ ಅಭಿಯಾನದಡಿ ದಕ್ಷಿಣ ಕನ್ನಡ ಜಿಲ್ಲೆಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಪಕ್ಷದ ಪದಾಧಿಕಾರಿಗಳು ಚರ್ಚೆ ನಡೆಸಿ, ಸಂಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸಿದ್ದರು. ಬಳಿಕ ಎಐಸಿಸಿ ವೀಕ್ಷಕರು ಹಾಗೂ ಹಿರಿಯ ನಾಯಕರ ಚರ್ಚೆಯ ಆಧಾರದಲ್ಲಿ ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ಅನುಮೋದನೆ ನೀಡಲಾಗಿದೆ.

ವಾರ್ತಾ ಭಾರತಿ 10 Sep 2026 9:33 am

ಸಚಿವರ ಈ ಮನಸ್ಥಿತಿಯನ್ನು ಶುಚಿಗೊಳಿಸುವವರು ಯಾರು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ ಪೌರ ಕಾರ್ಮಿಕರ ಮುಂದೆ ಅನಾವರಣಗೊಂಡ ಸಚಿವ ಕೃಷ್ಣ ಬೈರೇಗೌಡರ ಫ್ಯೂಡಲ್ ಮನಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಚಿವರು ಪೌರ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡ ರೀತಿ, ಈ ಸಮಾಜ ಪೌರಕಾರ್ಮಿಕರ ಕುರಿತಂತೆ ಹೊಂದಿರುವ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ‘‘ಭಾರತ ಚಂದ್ರನನ್ನು ತಲುಪಿದೆ ಎಂದು ಹೆಮ್ಮೆ ಪಡುತ್ತಿದ್ದೇವೆ. ಆದರೆ ದೇಶದಲ್ಲಿ ಮಲ ಹೊರುವ ಪದ್ಧತಿ ಮಾತ್ರ ಇನ್ನೂ ಜೀವಂತವಿದೆ. ಜಾತಿ ವ್ಯವಸ್ಥೆಯ ಸಾಮಾಜಿಕ ಅನಿಷ್ಟದ ಭಾಗವಾಗಿ, ಕೆಲವು ನಾಗರಿಕರು ಇನ್ನೂ ಮಾನವ ಘನತೆಗೆ ವಿರುದ್ಧವಾದ ಕೆಲಸವನ್ನು ಮಾಡುವಂತಾಗಿದೆ’’ ಎಂದು ಎರಡು ದಿನಗಳ ಹಿಂದೆಯಷ್ಟೇ ಬಾಂಬೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಭಾರತ ಯಾಕೆ ಇನ್ನೂ ಮಲಹೊರುವ ವ್ಯವಸ್ಥೆಯನ್ನು ಉಳಿಸಿಕೊಂಡಿದೆ ಎನ್ನುವುದಕ್ಕೆ ಕೃಷ್ಣ ಬೈರೇಗೌಡರ ಮಾತಿನಲ್ಲೇ ಉತ್ತರಗಳಿವೆ. ಪೌರ ಕಾರ್ಮಿಕರು ಕೆಲಸಕ್ಕೆ ಸರಿಯಾಗಿ ಬರದಿದ್ದರೆ, ಬಂದರೂ ತಮ್ಮ ಕೆಲಸ ಮಾಡದೇ ಇದ್ದರೆ ನಗರವನ್ನು ಸ್ವಚ್ಛವಾಗಿಡುವುದು ಹೇಗೆ ಎಂಬುದು ಸಚಿವರ ಪ್ರಶ್ನೆ. ನಿಯಮಿತವಾಗಿ ಕರ್ತವ್ಯಕ್ಕೆ ಹಾಜರಾಗದವರನ್ನು ವಜಾಗೊಳಿಸುವ ಬಗ್ಗೆಯೂ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಕೆಲಸಕ್ಕೆ ಬರದೇ ಇರುವುದರಿಂದ ನಗರ ಕೊಳಚೆಯಿಂದ ನಾರುತ್ತಿದೆ. ಕೆಲಸಕ್ಕೇ ಸರಿಯಾಗಿ ಬರದವರನ್ನು ಏಕೆ ಖಾಯಂಗೊಳಿಸಬೇಕು ಎಂದು ಕೇಳಿದ್ದಾರೆ. ಸಚಿವರ ತರಾಟೆಯಲ್ಲಿ ಸತ್ಯ ಇದ್ದಿರಲೂಬಹುದು. ಕನಿಷ್ಠ ಅನುಮತಿಯನ್ನೂ ಪಡೆಯದೆ ಶೇ.30ರಷ್ಟು ಪೌರ ಕಾರ್ಮಿಕರು ಕೆಲಸಕ್ಕೆ ಬರದೇ ಇರುವುದನ್ನು ಗಮನಿಸಿದ್ದಾರೆ. ಇದು ನಿತ್ಯವೂ ನಡೆಯುತ್ತಿರುವುದರ ಬಗ್ಗೆ, ಕೇಳಿದರೆ ಅಥವಾ ಸಂಬಳ ಕಡಿತಗೊಳಿಸಿದರೆ ಧರಣಿಯಂಥ ಒತ್ತಡ ತಂತ್ರಕ್ಕೆ ಮುಂದಾಗುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ವಸ್ತುಸ್ಥಿತಿ ಕಣ್ಣೆದುರಿಗಿದ್ದ ಹೊತ್ತಲ್ಲೇ ಕೆಲಸ ಖಾಯಮಾತಿಗಾಗಿ ಪೌರ ಕಾರ್ಮಿಕರು ಮನವಿ ಕೊಡಲು ಬಂದಿದ್ದಾರೆ ಮತ್ತು ಅವರು ಸಚಿವರ ಆಕ್ರೋಶಕ್ಕೆ ತುತ್ತಾದ ಪ್ರಸಂಗ ನಡೆದಿದೆ. ಯಾವುದೇ ನಗರವೊಂದರ ಒಟ್ಟು ವ್ಯವಸ್ಥೆಯಲ್ಲಿ ಪೌರ ಕಾರ್ಮಿಕರು ಬಹಳ ಮುಖ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪೌರ ಕಾರ್ಮಿಕರಿಲ್ಲದೆ ನಗರ ಸ್ವಚ್ಛವಾಗಿ, ಸುಂದರವಾಗಿ ಮತ್ತು ಆರೋಗ್ಯಪೂರ್ಣವಾಗಿ ಇರಲು ಸಾಧ್ಯವಿಲ್ಲ. ಒಂದು ಮನೆಯೊಳಗೆ ಎಲ್ಲವೂ ಸುಸ್ಥಿತಿಯಲ್ಲಿದೆ ಎಂದರೆ, ಅದನ್ನೆಲ್ಲ ನೋಡಿಕೊಳ್ಳುವ ಒಂದು ಮನಸ್ಸು ಅಲ್ಲಿ ನಿರಂತರವಾಗಿ ಸಕ್ರಿಯವಾಗಿದೆ ಎಂದರ್ಥ. ಹಾಗೆಯೇ, ಬೆಂಗಳೂರಿನಂಥ ಒಂದು ನಗರ ಲಕ್ಷಣವಾಗಿರಲು ಅದರ ಹಿಂದೆ ದುಡಿಯುವ ಅದೆಷ್ಟೋ ಕೈಗಳಿವೆ. ಅಂಥ ಕೈಗಳಲ್ಲಿ, ಕರ್ನಾಟಕದಾದ್ಯಂತದ ಸುಮಾರು 42,000 ಪೌರ ಕಾರ್ಮಿಕರೂ ಸೇರುತ್ತಾರೆ. ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳೂ ಹಲವು. ತಾವು ಮಾಡಬೇಕಿರುವ ಕೆಲಸದ ಕಾರಣಕ್ಕಾಗಿಯೇ ಅವರು ತೀವ್ರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಕಸ, ಧೂಳು ಮತ್ತು ರಾಸಾಯನಿಕಗಳ ಮಧ್ಯೆ ಕೆಲಸ ಮಾಡುವುದರಿಂದ ಉಸಿರಾಟದ ತೊಂದರೆ, ಸಂಧಿವಾತ, ಚರ್ಮದ ಕಾಯಿಲೆಗಳು ಅವರನ್ನು ಕಾಡುತ್ತವೆ. ಅನೇಕ ಕಡೆಗಳಲ್ಲಿ ಇಂದಿಗೂ ಪೌರ ಕಾರ್ಮಿಕರಿಗೆ ಗುಣಮಟ್ಟದ ಕೈಗವಸು, ಮಾಸ್ಕ್ ಮತ್ತು ಬೂಟುಗಳನ್ನು ನಿಯಮಿತವಾಗಿ ವಿತರಿಸುತ್ತಿಲ್ಲ ಎಂಬ ದೂರುಗಳಿವೆ. ಖಾಯಂಗೊಂಡ ಪೌರ ಕಾರ್ಮಿಕರಿಗೆ ಉತ್ತಮ ಅನುಕೂಲಗಳಿದ್ದರೂ, ಗುತ್ತಿಗೆ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವವರು ಆರ್ಥಿಕ ಅಭದ್ರತೆಯನ್ನು ಎದುರಿಸುತ್ತಾರೆ. ಇನ್ನೊಂದೆಡೆ, ಸ್ವಚ್ಛತಾ ಕೆಲಸವನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿ ನೋಡುವ ಸಾಮಾಜಿಕ ವ್ಯವಸ್ಥೆಯಲ್ಲಿ ತಾರತಮ್ಯದ ದೃಷ್ಟಿಗೆ ತುತ್ತಾಗಿದ್ದೇವೆಂಬ ಸಂಕಟವೂ ಅವರಲ್ಲಿದೆ. ಇವತ್ತಿನ ಬದಲಾಗುತ್ತಿರುವ ದಿನಮಾನಗಳಲ್ಲಿ ಬಹಳಷ್ಟು ಸುಧಾರಣೆ ಕಂಡಿದ್ದರೂ, ಘನತೆಯ ಬದುಕಿನ ಹಂಬಲ ಹಾಗೆಯೇ ಉಳಿದಿದೆ. ಸರಕಾರ ಮತ್ತು ಸಂಘಟನೆಗಳು ಪೌರ ಕಾರ್ಮಿಕರ ಸ್ಥಿತಿ ಸುಧಾರಣೆಗೆ ಪ್ರಯತ್ನಿಸುತ್ತಲೇ ಇವೆ. ಕಳೆದ ವರ್ಷ ಕಾರ್ಮಿಕರ ದಿನದಂದೇ 12 ಸಾವಿರ ಪೌರಕಾರ್ಮಿಕರನ್ನು ಇದೇ ಕಾಂಗ್ರೆಸ್ ಸರಕಾರ ಖಾಯಂಗೊಳಿಸಿದೆ. ಇನ್ನೂ 9 ಸಾವಿರ ನೌಕರರ ಸೇವೆ ಖಾಯಂಗೊಳಿಸುವ ಭರವಸೆಯನ್ನೂ ನೀಡಿದೆ. ಮಧ್ಯವರ್ತಿಗಳ ಕಾಟ ತಪ್ಪಿಸಲು ನೇರ ವೇತನ ಪಾವತಿ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ಪೌರ ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಕಾನೂನು ರಕ್ಷೆಯೂ ಇದೆ. ಎಲ್ಲ ವೃತ್ತಿಯಂತಲ್ಲ ಪೌರ ಕಾರ್ಮಿಕರ ಕೆಲಸ. ಆ ಕೆಲಸಕ್ಕೆ ಎಲ್ಲ ಜಾತಿ, ವರ್ಗದ ಜನರು ತಾಮುಂದು ಎಂದು ಬರುವುದಿಲ್ಲ. ಈ ಕೆಲಸದ ಜೊತೆಗೆ ಜಾತಿ ವ್ಯವಸ್ಥೆಯೂ ಸುತ್ತಿಕೊಂಡಿದೆ. ಈ ಕೆಲಸದ ಮೂಲಕವೇ ಅವರ ಸಾಮಾಜಿಕ ಸ್ಥಾನಮಾನವನ್ನು ಸಮಾಜ ನಿರ್ಧರಿಸುತ್ತದೆ. ಆದುದರಿಂದಲೇ ಪೌರ ಕಾರ್ಮಿಕರ ಜೊತೆಗೆ ಅತ್ಯಂತ ಮಾನವೀಯವಾಗಿ ವರ್ತಿಸುವುದು ಸಚಿವರು, ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಪೌರ ಕಾರ್ಮಿಕರ ಬಗ್ಗೆ ಅಧಿಕಾರಿಗಳು ಕಿವಿಯೂದಿದ್ದನ್ನು ಗಂಭೀರವಾಗಿ ತೆಗೆದುಕೊಂಡು ಸಾರ್ವಜನಿಕವಾಗಿ ಕಾರ್ಮಿಕರ ಜೊತೆಗೆ ಸಂವೇದನಾ ಹೀನ ಮಾತುಗಳನ್ನಾಡುವುದು ಸಚಿವರಾಗಿ ಕೃಷ್ಣ ಬೈರೇಗೌಡರಿಗೆ ಶೋಭೆ ತರುವುದಿಲ್ಲ. ಪೌರ ಕಾರ್ಮಿಕರು ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದಾದರೆ, ಅದಕ್ಕೆ ಕಾರಣಗಳೇನು ಎನ್ನುವುದನ್ನು ಅವರು ಕಂಡುಕೊಳ್ಳಬೇಕು. ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಕಾರ್ಮಿಕರ ಜೊತೆಗೆ ಚರ್ಚಿಸಬೇಕು. ಪ್ರತಿ ದಿನ ಕಸ, ಕೊಳಚೆಗಳ ನಡುವೆ ಬದುಕುವ ಈ ಕಾರ್ಮಿಕರ ಆರೋಗ್ಯ ಪದೇ ಪದೇ ಕೆಡುತ್ತದೆ. ಇವರ ಆರೋಗ್ಯದ ಮೇಲೆ ಕಾಳಜಿಯಿಂದ ಸರಕಾರ ಏನೇನು ಕ್ರಮ ತೆಗೆದುಕೊಂಡಿದೆ, ಏನೇನು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಎನ್ನುವುದರ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತನಾಡಬೇಕು. ಪೌರ ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಅವರಿಗೆ ಅತ್ಯಾಧುನಿಕ ಸಲಕರಣೆಗಳನ್ನು ಸರಕಾರ ಎಷ್ಟರ ಮಟ್ಟಿಗೆ ಒದಗಿಸುತ್ತಿದೆ ಎನ್ನುವುದರ ಬಗ್ಗೆ ವಿಚಾರಣೆ ನಡೆಸಲಿ. ಸರಕಾರ ದಾಖಲೆಗಳಲ್ಲಿ ಪೌರಕಾರ್ಮಿಕರಿಗೆ ನೀಡುತ್ತಿದ್ದೇವೆ ಎನ್ನುವ ಸವಲತ್ತುಗಳು ನಿಜಕ್ಕೂ ತಲುಪುತ್ತಿದೆಯೇ ಎನ್ನುವ ಬಗ್ಗೆ ಸಚಿವರು ಮೊದಲು ವಿಚಾರಣೆ ನಡೆಸಬೇಕು. ಆದರೆ ಸಚಿವರಿಗೆ ಪೌರಕಾರ್ಮಿಕರು ಆಲಸಿ, ಸೋಮಾರಿಗಳಾಗಿ ಭಾಸವಾಗಿದ್ದಾರೆ. ಇದು ಫ್ಯೂಡಲ್ ಮನಸ್ಥಿತಿಯೇ ಹೊರತು ಇನ್ನೇನೂ ಅಲ್ಲ. ಕೊಳಚೆಗಳನ್ನು ಎತ್ತುವುದು ನಿಮ್ಮ ಕರ್ತವ್ಯ ಎಂದು ಕಾರ್ಮಿಕರಿಗೆ ನೆನಪಿಸುವಂತಿದೆ ಸಚಿವರ ಮಾತುಗಳು. ತಳಸ್ತರದ ಜನರ ಬದುಕಿನ ಕುರಿತಂತೆ ಸಚಿವ ಕೃಷ್ಣ ಬೈರೇಗೌಡರ ಸಂವೇದನಾ ಹೀನ ನಡವಳಿಕೆ ಹೊಸತೇನಲ್ಲ. ಬೀದಿ ಬದಿ ವ್ಯಾಪಾರಿಗಳ ವಿಷಯದಲ್ಲೂ ಇಷ್ಟೇ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ. ನಗರ ಹೊಲಸೆದ್ದು ಹೋಗಿದ್ದರೆ ಅದನ್ನು ಗುಡಿಸಲು ಪೌರಕಾರ್ಮಿಕರೇ ಸಚಿವರಿಗೆ ಯಾಕೆ ಬೇಕು? ನಗರದ ಮೇಲ್‌ಸ್ತರದ ತರುಣರಿಗೆ ವಾರಕ್ಕೊಂದು ದಿನ ನಗರವನ್ನು ಗುಡಿಸುವ ಹೊಣೆಗಾರಿಕೆಯನ್ನು ನೀಡಲಿ. ಹಾಗೆಯೇ ನಗರವನ್ನು ಪೌರಕಾರ್ಮಿಕರು ಸ್ವಚ್ಛವಾಗಿಟ್ಟಷ್ಟು ಅದನ್ನು ಹೊಲಸೆಬ್ಬಿಸುವ ಮೇಲ್ ಸ್ತರದ ಜನರನ್ನು ತರಾಟೆಗೆ ತೆಗೆದುಕೊಳ್ಳುವ ಎದೆಗಾರಿಕೆಯನ್ನು ಮೊದಲು ಸಚಿವರು ಪ್ರದರ್ಶಿಸಬೇಕು. ಪೌರಕಾರ್ಮಿಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದಕ್ಕಾಗಿ ಸಚಿವರು ಕ್ಷಮೆಯಾಚಿಸಬೇಕು ಮಾತ್ರವಲ್ಲ, ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವ ಭರವಸೆಯನ್ನು ನೀಡಬೇಕು.

ವಾರ್ತಾ ಭಾರತಿ 7 Sep 2026 3:30 pm

ದಲಿತ-ದಮನಿತ ವಿರೋಧಿ ಎಸ್‌ಐಆರ್: ಕರ್ನಾಟಕ ಹೇಳುತ್ತಿರುವ ಸಾಕ್ಷ್ಯಗಳು

ಐಆರ್ ಎಂಬುದು ಮತಪಟ್ಟಿ ಶುದ್ಧೀಕರಣವೂ ಅಲ್ಲ. ಪರಿಷ್ಕರಣೆಯೂ ಅಲ್ಲ. ಅದು ಮೋದಿ ಸರಕಾರ ಈ ದೇಶದ ದಲಿತ ದಮನಿತರ ನಾಗರಿಕತ್ವವನ್ನು ಕಿತ್ತುಕೊಳ್ಳುವ ಸಂಚು. ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಮೂಲಕ ಸೃಷ್ಟಿಸಿದ ಗಣರಾಜ್ಯವನ್ನು ಒಳಗಿನಿಂದಲೇ ನಾಶ ಮಾಡಿ ಕಾರ್ಪೊರೇಟ್ ಹಿಂದುತ್ವ ರಾಷ್ಟ್ರವನ್ನು ಕಟ್ಟುವ ಬೃಹತ್ ಹುನ್ನಾರ. ಕರ್ನಾಟಕದಲ್ಲಿ ಎಸ್‌ಐಆರ್‌ನ ಮೊದಲ ಹಂತ ಮುಕ್ತಾಯವಾಗಿ ಆಗಸ್ಟ್ 24ರಂದು ಕರಡು ಪಟ್ಟಿ ಬಿಡುಗಡೆ ಆಗಿದೆ. ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ ಕರ್ನಾಟಕದಲ್ಲಿ 5.54 ಕೋಟಿ ಮತದಾರರಿದ್ದರೆ ಈಗ ಅದು 4.46 ಕೋಟಿಗೆ ಇಳಿದಿದೆ. ಅಂದರೆ 1.07 ಕೋಟಿ (ಶೇ. 19.48) ಮತದಾರರನ್ನು ಹೊರದಬ್ಬಲಾಗಿದೆ. ಹೀಗೆ ಹೊರದಬ್ಬಲು A (Abesent), S (Shifted), D (Dead), Duplicate (D), O (Others) - ASDDO ಎಂಬ ಅವೈಜ್ಞಾನಿಕ ವರ್ಗಗಳನ್ನು ಸೃಷ್ಟಿಸಿದೆ. ಅದಲ್ಲದೆ ಕರಡು ಪಟ್ಟಿಯಲ್ಲಿ ಹೆಸರು ಉಳಿಸಿಕೊಂಡ 44 ಲಕ್ಷ ಮತದಾರರಿಗೆ ಮ್ಯಾಪಿಂಗ್ ಆಗಿಲ್ಲ, ಆಗಿದ್ದರೂ ಹೊಂದಾಣಿಕೆಯಿಲ್ಲ (Logical Discrepancy) ಎನ್ನುವ ಹೆಸರಲ್ಲಿ ನೋಟಿಸ್ ಕಳಿಸಲಾಗಿದೆ. ಅಂದರೆ 1.51 ಕೋಟಿ ಜನ ಎಸ್‌ಐಆರ್ ಸಂತ್ರಸ್ತರಾಗಿದ್ದಾರೆ. ಆದರೆ ಈ 1.51 ಕೋಟಿ ಜನ ಯಾರು? ಅನರ್ಹ ಮತದಾರರೇ? ಬಾಂಗ್ಲಾ ದೇಶದಿಂದ ನುಸುಳಿ ಬಂದಿರುವ ಅಕ್ರಮ ವಲಸಿಗರೇ? ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು (ಸಿಇಒ) ಆಗಸ್ಟ್ 19ರಂದು ಪ್ರತೀ ಅಸೆಂಬ್ಲಿ ಮತಕ್ಷೇತ್ರದ ASDDO ಪ್ರಮಾಣ ಮತ್ತು ವರ್ಗಾವಾರು ವಿವರಗಳನ್ನು ನೀಡಿದೆ. ( https://ceo.karnataka.gov.in/uploads/Press%20Note%20-%2019.08.2026.pdf ) ಇದನ್ನು ಕರ್ನಾಟಕದ ಸಾಮಾಜಿಕ ತಾರತಮ್ಯಗಳ ಹಾಗೂ ಭೌಗೋಳಿಕ ಮತ್ತು ಅಭಿವೃದ್ಧಿ ತಾರತಮ್ಯಗಳ ವಿವರಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಎಸ್‌ಐಆರ್ ಹೇಗೆ ಕರ್ನಾಟಕ ರಾಜ್ಯದ ಅತ್ಯಂತ ದಮನಿತ-ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ವಿಶೇಷವಾಗಿ ಬಲಿ ತೆಗೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟಗೊಳ್ಳುತ್ತದೆ. ಕರ್ನಾಟಕ ರಾಜ್ಯದ ಅಭಿವೃದ್ಧಿ ತಾರತಮ್ಯದ ಬಗ್ಗೆ 2002ರ ನಂಜುಂಡಪ್ಪ ವರದಿಯ ನಂತರದ ಕಳೆದ 23 ವರ್ಷಗಳಲ್ಲಿ ಯಾವ ಯಾವ ತಾಲೂಕು ಮತ್ತು ಜಿಲ್ಲೆಗಳು ಎಷ್ಟು ಹಿಂದುಳಿದಿವೆ ಎಂಬ ಬಗ್ಗೆ ಪ್ರೊ. ಗೋವಿಂದರಾವ್ ಸಮಿತಿಯು 2026ರ ಜನವರಿಯಲ್ಲಿ ತನ್ನ ವರದಿಯನ್ನು ನೀಡಿದೆ. ( https://planning.karnataka.gov.in/128/prof.govinda-rao-committee-report/en ) ಸಿಇಒ ಅವರು ಕರ್ನಾಟಕದ ಅಸೆಂಬ್ಲಿ ಮಟ್ಟದ ASDDO ವಿವರಗಳನ್ನು ಗೋವಿಂದರಾವ್ ವರದಿಯ ಜೊತೆಗೆ ತುಲನೆ ಮಾಡಿದಾಗ ASDDO ಹೆಚ್ಚಿರುವ ಕ್ಷೇತ್ರಗಳಲ್ಲಿ ಹಿಂದುಳಿದ ಪ್ರದೇಶಗಳೆಷ್ಟು ಎಂಬ ಸ್ಥೂಲ ವಿವರಗಳು ಸಿಗುತ್ತವೆ. ಹಾಗೆಯೇ ಕರ್ನಾಟಕದಲ್ಲಿ 36 ಎಸ್‌ಸಿ ಮೀಸಲು ಕ್ಷೇತ್ರಗಳು ಮತ್ತು 15 ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಸಿಇಒ ನೀಡಿರುವ ಅಸೆಂಬ್ಲಿ ಮಟ್ಟದ ASDDO ವಿವರಗಳ ಜೊತೆಗೆ ಹೋಲಿಸಿ ನೋಡಿದರೆ ASDDO ಹೆಚ್ಚಿರುವ ಅಸೆಂಬ್ಲಿ ಕ್ಷೇತ್ರಗಳಲ್ಲಿ ಎಸ್‌ಸಿ-ಎಸ್‌ಟಿ ಕ್ಷೇತ್ರಗಳೆಷ್ಟು ಎಂಬ ವಿವರಗಳು, ಹೊರದಬ್ಬಿದವರಲ್ಲಿ ದಲಿತ ದಮನಿತರ ಪಾಲು ಪ್ರಮಾಣಕ್ಕೆ ತಕ್ಕಂತೆ ಇದೆಯೋ ಅಥವಾ ಹೆಚ್ಚಿದೆಯೋ ಎಂಬ ಚಿತ್ರಣ ಸಿಗುತ್ತದೆ. ಹಾಗೆಯೇ 2011ರ ಸೆನ್ಸಸ್‌ನ ಅಂಕಿಅಂಶಗಳು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಧರ್ಮವಾರು ಜನಸಂಖ್ಯೆಯ ಪ್ರಮಾಣವನ್ನು ನೀಡುತ್ತದೆ. ಇದರ ಒಟ್ಟಾರೆ ಸಂಖ್ಯೆ ಜಾಸ್ತಿ ಆಗಿದ್ದರೂ ಪ್ರಮಾಣ ಹೆಚ್ಚು ಕಡಿಮೆ ಅದೇ ರೀತಿಯಲ್ಲಿವೆ. ಇದನ್ನು ಸಿಇಒ ನೀಡಿರುವ ASDDO ವಿವರಗಳೊಂದಿಗೆ ಹೋಲಿಸಿದಲ್ಲಿ ಮುಸ್ಲಿಮರು ಹೆಚ್ಚಿರುವ ಜಿಲ್ಲೆ ಮತ್ತು ಕ್ಷೇತ್ರಗಳಲ್ಲಿASDDO ಪ್ರಮಾಣ ಹೆಚ್ಚಿದೆಯೇ ಎಂಬ ವಿವರಗಳು ಸಿಗುತ್ತವೆ. ( https://www.censusindia.gov.in/nada/index.php/catalog/11361?utm_source=chatgpt.com ) ಹೆಚ್ಚು ಹಿಂದುಳಿದ ಪ್ರದೇಶ- ಹೆಚ್ಚು ASDDO ಕರ್ನಾಟಕ ರಾಜ್ಯದ ASDDO ಪ್ರಮಾಣ ಶೇ. 19.48. ಹೀಗಾಗಿ ಕರ್ನಾಟಕವು ಇಡಿ ಭಾರತದಲ್ಲೇ ಅತಿ ಹೆಚ್ಚು ASDDO ಇರುವ ರಾಜ್ಯಗಳಲ್ಲಿ ಒಂದಾಗಿದೆ. ಇದಕ್ಕೆ ಪ್ರಧಾನ ಕಾರಣ ಬೆಂಗಳೂರು ಪ್ರದೇಶ. ಬೆಂಗಳೂರಿನಲ್ಲಿ ಅಂದಾಜು 1.03 ಕೋಟಿ ಮತದಾರರಿದ್ದು ಅಂದಾಜು 50 ಲಕ್ಷ ಜನರು ಹೊರದಬ್ಬಲ್ಪಟ್ಟಿದಾರೆ. ಹೀಗಾಗಿ ಬೆಂಗಳುರಿನ ಸರಾಸರಿ ASDDO ಶೇ. 46. ಇದರಿಂದಾಗಿ ಒಟ್ಟಾರೆ ಕರ್ನಾಟಕದ ಸರಾಸರಿಯು ಶೇ. 19.48 ಆಗಿದೆ. ಆದರೆ ಬೆಂಗಳೂರಿಗೆ ವಲಸೆ ಬರುವರು ಹಿಂದುಳಿದ ಜಿಲ್ಲೆಯವರೇ ಆಗಿರುತ್ತಾರೆ. ಬೆಂಗಳೂರನ್ನು ಹೊರತು ಪಡಿಸಿದರೆ ಉಳಿದ ಕರ್ನಾಟಕದ ASDDOಸರಾಸರಿ ಶೇ. 13.56 ಆಗಿದೆ. ಅದು ಕೂಡ ಉಳಿದ ರಾಜ್ಯಗಳಿಗಿಂತ ಹೆಚ್ಚೇ ಆಗಿದೆ. ಈ ಲೇಖನದ ಜೊತೆಗೆ ಕೊಟ್ಟಿರುವ ಕೋಷ್ಟಕವು ಸ್ಪಷ್ಟಪಡಿಸುವಂತೆ ಬೆಂಗಳೂರನ್ನು ಹೊರತು ಪಡಿಸಿದಂತೆ ASDDO ಹೆಚ್ಚಿರುವ ಜಿಲ್ಲೆಗಳಲ್ಲಿ ಗೋವಿಂದರಾವ್ ಸಮಿತಿ ಗುರುತಿಸಿರುವಂತೆ ಅತ್ಯಂತ ಹಿಂದುಳಿದ ತಾಲೂಕುಗಳು ಹೆಚ್ಚಿರುವ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರುಗಳೇ ಪ್ರಮುಖವಾಗಿವೆ. ಅಷ್ಟು ಮಾತ್ರವಲ್ಲ. ಈ ಜಿಲ್ಲೆಗಳ ASDDO ವರ್ಗೀಕರಣದಲ್ಲಿ Shifting-ಸ್ಥಳಾಂತರ ಪ್ರಮಾಣ ಶೇ.70-75ರಷ್ಟು!. ಏಕೆಂದರೆ ಈ ಜಿಲ್ಲೆಗಳಿಂದ ಬೆಂಗಳೂರು ಇತ್ಯಾದಿ ನಗರಗಳಿಗೆ ವಲಸೆ ಹೆಚ್ಚು. ಆದರೆ ಜಿಲ್ಲೆಗಳಲ್ಲೂ ಈ ಜನರು Shifted, ಬೆಂಗಳೂರಿನಲ್ಲೂ Shifted ಎಂದು ಗುರುತಿಸಲ್ಪಟ್ಟು ನಾಡಿನ ಪಟ್ಟಿಯಿಂದಲೇ ಹೊರಹಾಕಲ್ಪಟ್ಟಿದ್ದಾರೆ. ಅಂದರೆ ಸಾರದಲ್ಲಿ ಹೆಚ್ಚು ಹಿಂದುಳಿದಿರುವಿಕೆ- ಹೆಚ್ಚು ವಲಸೆ - ಹೆಚ್ಚು ಡಿಲೀಶನ್ ಎಂಬ ಸೂತ್ರ ಕರ್ನಾಟಕದಲ್ಲೂ ಸಾಬೀತಾಗಿದೆ. ಎಸ್‌ಸಿ-ಎಸ್‌ಟಿ ಅಸೆಂಬ್ಲಿ ಕ್ಷೇತ್ರಗಳು- ರಾಜ್ಯವಾರು ಸರಾಸರಿಗಿಂತ ಹೆಚ್ಚು ASDDO ಲೇಖನದೊಳಗಿನ ಕೋಷ್ಟಕವು ಸ್ಪಷ್ಟಪಡಿಸುವಂತೆ ರಾಜ್ಯದ 36 ಎಸ್‌ಸಿ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ASDDO ಪ್ರಮಾಣ ಬೆಂಗಳೂರು ಹೊರತು ಪಡಿಸಿದ ರಾಜ್ಯವಾರು ASDDO ಪ್ರಮಾಣಕ್ಕಿಂತ ಹೆಚ್ಚಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಚಿತ್ತಾಪುರ, ಚಿಂಚೋಳಿ, ಔರಾದ್, ಗುಲ್ಬರ್ಗ ಗ್ರಾಮೀಣದಂತಹ ಎಸ್‌ಸಿ ಕ್ಷೇತ್ರಗಳಲ್ಲಿ Shifted ಪ್ರಮಾಣ ಶೇ.70-75! ಹಾಗೆಯೇ 15 ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ 10 ಕ್ಷೇತ್ರಗಳ ASDDO ಬೆಂಗಳೂರು ಹೊರತುಪಡಿಸಿದ ಕರ್ನಾಟಕದ ಸರಾಸರಿಗಿಂತ ಹೆಚ್ಚು. ಮಸ್ಕಿ, ಮಾನ್ವಿ ಮತ್ತು ದೇವದುರ್ಗದಂತಹ ವಲಸೆ ಹೆಚ್ಚಿರುವ ಅಸೆಂಬ್ಲಿ ಕ್ಷೇತ್ರಗಳಲ್ಲಿ ಶೇ. 65ರಷ್ಟು ಸ್ಥಳಾಂತರ-Shifted! ಮತ್ತೊಂದು ರೀತಿಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು Permanently Shifted ಎಂದು ದಾಖಲಾಗಿರುವ 20 ಅಸೆಂಬ್ಲಿ ಕ್ಷೇತ್ರಗಳಲ್ಲಿ 14 ಎಸ್‌ಸಿ-ಎಸ್‌ಟಿ ಕ್ಷೇತ್ರಗಳಾಗಿವೆ. ಅಂದರೆ ಎಸ್‌ಸಿ-ಎಸ್‌ಟಿ ಹೆಚ್ಚಿರುವ ಶೇ. 70 ಕ್ಷೇತ್ರಗಳು. ಹೊಟ್ಟೆಪಾಡಿಗೆ ವಲಸೆ ಹೋಗುತ್ತಿರುವುದಕ್ಕೆ ದಲಿತರನ್ನು ಎಸ್‌ಐಆರ್ ಪ್ರಕ್ರಿಯೆ ಬಲಿಹಾಕುತ್ತಿದೆ ಎಂಬುದಕ್ಕೆ ಇನ್ನು ಹೆಚ್ಚಿನ ಉದಾಹರಣೆ ಬೇಕೆ? ಎಸ್‌ಐಆರ್ ಎಂಬುದು ಮತಪಟ್ಟಿ ಶುದ್ಧೀಕರಣವೂ ಅಲ್ಲ. ಪರಿಷ್ಕರಣೆಯೂ ಅಲ್ಲ. ಅದು ಮೋದಿ ಸರಕಾರ ಈ ದೇಶದ ದಲಿತ ದಮನಿತರ ನಾಗರಿಕತ್ವವನ್ನು ಕಿತ್ತುಕೊಳ್ಳುವ ಸಂಚು. ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಮೂಲಕ ಸೃಷ್ಟಿಸಿದ ಗಣರಾಜ್ಯವನ್ನು ಒಳಗಿನಿಂದಲೇ ನಾಶ ಮಾಡಿ ಕಾರ್ಪೊರೇಟ್ ಹಿಂದುತ್ವ ರಾಷ್ಟ್ರವನ್ನು ಕಟ್ಟುವ ಬೃಹತ್ ಹುನ್ನಾರ. ಹೀಗಾಗಿಯೇ ಎಸ್‌ಐಆರ್ ಜೊತೆಜೊತೆಗೆ ಒಂದು ದೇಶ ಒಂದು ರಾಷ್ಟ್ರ, ಡಿಲಿಮಿಟೇಶನ್ ಇನ್ನಿತ್ಯಾದಿ ಸಾಲು ಸಾಲು ಪ್ರಹಾರಗಳಿಗೆ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಮೋದಿ ಸರಕಾರ ಈವರೆಗೆ ಇಲ್ಲದಿದ್ದ ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅನರ್ಹ ಮತದಾರರನ್ನು ಹೊರಹಾಕುವ ನೆಪದಲ್ಲಿ ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರತೀ ರಾಜ್ಯದಲ್ಲೂ ಅದು ಅರ್ಹ ಅದರಲ್ಲೂ ದಲಿತ-ದಮನಿತ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಹೊರಹಾಕುವ ಪ್ರಕ್ರಿಯೆಯೆಂದು ಪದೇ ಪದೇ ಸಾಬೀತು ಮಾಡುತ್ತಿದೆ. ಮುಸ್ಲಿಮರು ಹೆಚ್ಚಿದ್ದರೆ ASDDO ಮತ್ತು Absent ವರ್ಗ ಹೆಚ್ಚೇಕೆ? ಲೇಖನದ ಜೊತೆಗಿರುವ ಕೋಷ್ಟಕವು ಸ್ಪಷ್ಟಪಡಿಸುವಂತೆ ಕರ್ನಾಟಕದಲ್ಲಿ ಮುಸ್ಲಿಮ್ ಜನಸಂಖ್ಯೆ ಸಾಪೇಕ್ಷವಾಗಿ ಹೆಚ್ಚಿರುವ 20 ಅಸೆಂಬ್ಲಿ ಕ್ಷೇತ್ರಗಳಲ್ಲಿ ರಾಮನಗರ, ಶಿಗ್ಗಾವಿ ಮತ್ತು ಕರಾವಳಿ ಪ್ರಾಂತದ ಬಂಟ್ವಾಳ, ಭಟ್ಕಳ ಮತ್ತು ಮಂಗಳೂರನ್ನು ಹೊರತುಪಡಿಸಿದರೆ ಉಳಿದ 15 ಅಸೆಂಬ್ಲಿ ಕ್ಷೇತ್ರಗಳಲ್ಲಿ ASDDO ಪ್ರಮಾಣವು ಬೆಂಗಳೂರು ಪ್ರಾಂತವಾಗಿದ್ದರೆ ಬೆಂಗಳೂರು ಸರಾಸರಿಗಿಂತ ಜಾಸ್ತಿ, ಬೆಂಗಳೂರು ಹೊರಗಿನ ಕ್ಷೇತ್ರಗಳಾಗಿದ್ದರೆ ಬೆಂಗಳೂರು ಹೊರತು ಪಡಿಸಿದ ರಾಜ್ಯದ ಸರಾಸರಿಗಿಂತ (ಶೇ.13.56) ಜಾಸ್ತಿ. ಮುಸ್ಲಿಮ್ ಕ್ಷೇತ್ರಗಳಲ್ಲಿ ಇನ್ನೊಂದು ವಿಚಿತ್ರ ಸಂಗತಿ ಎಂದರೆ ಇತರ ಕ್ಷೇತ್ರಗಳಿಗಿಂತ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳ ASDDO ಪ್ರಮಾಣದಲ್ಲಿ Absent ಪ್ರಮಾಣ ಅತೀ ಹೆಚ್ಚು!. ನರಸಿಂಹರಾಜದ ASDDOದಲ್ಲಿ ಶೇ.40ರಷ್ಟು, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಶೇ. 53, ಬಿಜಾಪುರ ನಗರ ಶೇ. 48Absent ವರ್ಗದಲ್ಲಿವೆ. ಇದು ಹಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟಿಹಾಕುತ್ತಿವೆ. ಎಸ್‌ಐಆರ್ ಎಂಬುದು ದಲಿತ ದಮನಿತ ಮತ್ತು ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಹೊರದಬ್ಬುವ ಹುನ್ನಾರವೇ ವಿನಾ ವಿದೇಶಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಪ್ರಕ್ರಿಯೆ ಅಲ್ಲ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕೆ? ಎಸ್‌ಐಆರ್ ರದ್ದು ಮಾಡಲು ಬೃಹತ್ ಜನಚಳವಳಿ ಕಟ್ಟುವುದನ್ನು ಬಿಟ್ಟು ಬೇರೆ ದಾರಿ ಇದೆಯೇ?

ವಾರ್ತಾ ಭಾರತಿ 2 Sep 2026 4:07 pm

ಯುವಜನರು ಮಾತನಾಡುತ್ತಿದ್ದಾರೆ

ಸಾಂದರ್ಭಿಕ ಚಿತ್ರ  Photo Credit : PTI ಸರಕಾರಿ ಶಾಲೆಗಳ ಬಗ್ಗೆ ಯುವ ಜನರು ಮಾತನಾಡುತ್ತಿರುವುದು ದೇಶದ ಪಾಲಿಗೆ ನಿಜಕ್ಕೂ ಹೊಸತು. ದೇಶಾದ್ಯಂತ ಸಹಸ್ರಾರು ಸರಕಾರಿ ಶಾಲೆಗಳು ಒಂದರ ಹಿಂದೆ ಒಂದರಂತೆ ಮುಚ್ಚುತ್ತಿರುವುದರ ಬಗ್ಗೆ ಶಿಕ್ಷಣ ತಜ್ಞರು ತಮ್ಮ ಕಳವಳನ್ನು ವ್ಯಕ್ತಪಡಿಸುತ್ತಲೇ ಇದ್ದರು. ಆದರೆ ಸರಕಾರ ಜಾಣ ಕಿವುಡನಂತೆ ವರ್ತಿಸುತ್ತಾ ಬಂದಿದೆ. ಇದೀಗ ಮೊದಲ ಬಾರಿಗೆ, ಯುವಜನರು ಸರಕಾರಿ ಶಾಲೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜೆನ್‌ಝಿಗಳು ಹಮ್ಮಿಕೊಂಡಿರುವ ಸರಕಾರಿ ಶಾಲೆ ಉಳಿಸಿ ಆಂದೋಲನ ಆಳುವವರನ್ನು ಬೆಚ್ಚಿ ಬೀಳಿಸಿದೆ. ಯುವ ತಲೆಮಾರು ದೇಶದ ಭವಿಷ್ಯದ ಬಗ್ಗೆ ಮಾತನಾಡುತ್ತಿರುವುದು, ದೇಶದ ಮೇಲಿನ ಕಾಳಜಿಯಿಂದ ಬೀದಿಗಿಳಿಯುತ್ತಿರುವುದು ಆಳುವವರಿಗೆ ತಲೆನೋವು ತಂದಿದೆ. ಜೆನ್ ಝಿ ಬೆನ್ನಿಗೇ ಇದೀಗ ಜೆನ್ ಆಲ್ಫಾ ಕೂಡ ದೇಶದ ಬಗ್ಗೆ ಮಾತನಾಡತೊಡಗಿದೆ. ಪ್ರಜಾತಂತ್ರವು ಹೊರಳುದಾರಿಗೆ ತಲುಪಿದಾಗ ಅದನ್ನು ಮತ್ತೆ ಸರಿದಾರಿಗೆ ತರುವ ಜವಾಬ್ದಾರಿ ಯಾರದು? ನೀಟ್ ಪರೀಕ್ಷೆಯ ಅವ್ಯವಹಾರಗಳ ಹಿನ್ನೆಲೆಯಲ್ಲಿ ಆರಂಭವಾದ ಯುವಜನರ ಪ್ರತಿಭಟನೆ, ಅದರ ಪರಿಣಾಮವಾಗಿ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನರ ರಾಜೀನಾಮೆ ಮತ್ತು ಆ ನಂತರ ಎಚ್ಚರಗೊಂಡ ಆಳುವ ಪಕ್ಷದ ನಾಯಕರು ಯುವಜನರ ಭವಿಷ್ಯದ ಬಗ್ಗೆ ತೋರಿಸುವ ಆಸಕ್ತಿ ಈ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. 2024ರ ಲೋಕಸಭೆಯ ಚುನಾವಣೆಯಲ್ಲಿ ನಿರೀಕ್ಷೆಯು ಹುಸಿಯಾಗಿ ಭಾರತೀಯ ಜನತಾ ಪಕ್ಷ (ಭಾಜಪ)ಕ್ಕೆ ಪೂರ್ಣ ಬಹುಮತ ಸಿಗದೆ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಮೂರನೆಯ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರು ತಮ್ಮ ಅಧಿಕಾರವನ್ನು ಭದ್ರಗೊಳಿಸಲು ವಿಭಿನ್ನ ದಾರಿಗಳನ್ನು ಬಳಸಿಕೊಂಡರು. ಸಂಸತ್ತು, ನ್ಯಾಯಾಂಗ ಮತ್ತು ಚುನಾವಣಾ ಆಯೋಗಗಳನ್ನು ದುರ್ಬಲಗೊಳಿಸಿ, ಪ್ರಾದೇಶಿಕ ಪಕ್ಷಗಳನ್ನು ವಿಭಜಿಸಿ ತಮ್ಮ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಬಳಿ ಸೆಳೆದುಕೊಂಡರು. ಮೋದಿಯವರ ವ್ಯಕ್ತಿ ಕೇಂದ್ರೀಕೃತ ಆಡಳಿತವು ಭದ್ರವಾಗುತ್ತಿದ್ದಂತೆ ಪ್ರಜಾಸತ್ತೆಯ ಕಂಬಗಳು ದುರ್ಬಲಗೊಂಡವು. ತಮ್ಮತಮ್ಮದೇ ಅಜೆಂಡಾ ಮತ್ತು ಆಂತರಿಕ ಸಮಸ್ಯೆಗಳಿಂದಾಗಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿಯೂ ಅದರ ಹೊರಗೂ ಸರಕಾರವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಲಿಲ್ಲ. ಈ ಸನ್ನಿವೇಶದಲ್ಲಿ ಅನಿರೀಕ್ಷಿತವಾಗಿ ದೇಶದ ಯುವಜನರು ಜುಲೈ ತಿಂಗಳಲ್ಲಿ ಬೀದಿಗಿಳಿದು ತಮ್ಮ ಪ್ರತಿಭಟನೆಗಳ ಮೂಲಕ ಎಚ್ಚರಿಕೆಯ ಸಂದೇಶವನ್ನು ಎನ್‌ಡಿಎ ಸರಕಾರಕ್ಕೆ ನೀಡಿದ್ದಾರೆ. ಈ ಯುವಜನತೆಗೆ ಯಾವುದೇ ಸಂಘಶಕ್ತಿ, ಸಂಪನ್ಮೂಲಗಳು, ಅನುಭವಿ ನಾಯಕರು ಇರಲಿಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರನ್ನು ಕಾಕ್ರೋಚ್ (ಜಿರಳೆ) ಎಂದು ಟೀಕಿಸಿದ್ದರ ವಿರುದ್ಧ ಅದೇ ಹೆಸರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಂದು ಕರೆದುಕೊಂಡು ಪ್ರತಿಭಟನೆಗೆ ಮುಂದಾದ ಚಳವಳಿಯ ನಾಯಕರು ರಾಜಕೀಯಕ್ಕೆ ಹೊಸಬರು. ಇಂಗ್ಲಿಷ್ ಭಾಷೆಯಲ್ಲಿ ಜೆನ್ ಝಿ ಎಂದು ಕರೆಯಲ್ಪಡುವ ಸುಮಾರು 14ರಿಂದ 29 ವರ್ಷ ವಯಸ್ಸಿನ ಅಂದರೆ 1997 ಮತ್ತು 2012ರ ಅವಧಿಯಲ್ಲಿ ಜನಿಸಿದ ಈ ಯುವಕರು ಮತ್ತು ಯುವತಿಯರಿಗೆ ಯಾವುದೇ ಪಕ್ಷಗಳ ಕಟ್ಟುಪಾಡುಗಳಿಲ್ಲ. ಭಾಷೆ, ಜಾತಿ, ಧರ್ಮ, ಬಡವ-ಬಲ್ಲಿದ ಸ್ತ್ರೀ-ಪುರುಷರೆಂಬ ಮನುಷ್ಯ ನಿರ್ಮಿತ ಚೌಕಟ್ಟುಗಳಿಂದ ಹೊರಬಂದು ಒಂದು ನಿರ್ದಿಷ್ಟ ಉದ್ದೇಶದ ಸಾಧನೆಯನ್ನು ಗುರಿಯಾಗಿಟ್ಟು ಒಟ್ಟು ಸೇರಿದವರು. ಸಮಷ್ಟಿಯ ಹಿತ ಅವರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿತು. ಉಡುಗೆ ತೊಡುಗೆ, ವರ್ತನೆ, ಭಾಷೆಯ ಬಳಕೆ, ಆಹಾರ ಪದ್ಧತಿ ಹೀಗೆ ಪ್ರತಿಯೊಂದರಲ್ಲಿಯೂ ತಮ್ಮದೇ ನಡೆಯನ್ನು ಅನುಸರಿಸುವ ಹೊಸ ಪೀಳಿಗೆಯವರ ಪ್ರತಿಭಟನೆಯ ಮಾದರಿಯೂ ವಿಶಿಷ್ಟವೇ. ಕೈಬರಹದ ಭಿತ್ತಿಪತ್ರಗಳು, ವ್ಯಂಗ್ಯ ಚಿತ್ರಗಳು, ನಗು ಬರಿಸುವ ವೀಡಿಯೊಗಳು(Memes), ವಿಶಿಷ್ಟ ಘೋಷಣೆಗಳು, ಅಣಕುವೇಷಗಳು, ಕೆಲವೊಮ್ಮೆ ವೈಯಕ್ತಿಕ ನೆಲೆಯಲ್ಲಿ ಬಳಸುವ ಸಾರ್ವಜನಿಕವಾಗಿ ಅಸಭ್ಯವೆನಿಸುವ ಪದಗಳ ಪ್ರಯೋಗ (ಪ್ರಧಾನಿಯವರಿಗೆ ಸಾಂಸ್ಕೃತಿಕ ಆಘಾತವನ್ನು ಉಂಟುಮಾಡಿದ ಪದಪ್ರಯೋಗಗಳು!) ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸರ್ವೇ ಸಾಮಾನ್ಯವಾಗಿದ್ದವು. ಇವುಗಳ ಜೊತೆಗೆ ತಾವು ಅನುಸರಿಸಿದ (ಗಾಂಧೀಜಿಯವರು ಹಾಕಿಕೊಟ್ಟ) ಅಹಿಂಸಾ ಮಾರ್ಗವು ಎಂದಿಗೂ ಪ್ರಸ್ತುತವೆಂಬುದನ್ನು ಈ ಪೀಳಿಗೆಯವರು ತೋರಿಸಿಕೊಟ್ಟರು. ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಯುವಕರ ಸೊಲ್ಲನ್ನು ಅಡಗಿಸಲು ದಿಲ್ಲಿಯ ಪೊಲೀಸರು ಬಲಪ್ರಯೋಗ ಮಾಡಿ ಪ್ರತಿಭಟನೆಯ ಕಾವು ತೀವ್ರವಾಗುವಂತೆ ಮಾಡಿದರು. ತಮ್ಮ ಮಂತ್ರಿಗಳು ರಾಜೀನಾಮೆ ಕೊಡುವ ಪರಿಪಾಠವಿಲ್ಲ ಎಂದು ಹೇಳುತ್ತಿದ್ದ ಭಾಜಪವು ತನ್ನ ಹಿರಿಯ ಮಂತ್ರಿಯೊಬ್ಬರ ತಲೆದಂಡ ನೀಡಬೇಕಾಗಿ ಬಂತು. ಈ ಬೆಳವಣಿಗೆಯ ಬೆನ್ನಲ್ಲೇ ದೇಶದ ಹಲವೆಡೆ ವಿಭಿನ್ನ ರೂಪದಲ್ಲಿ ಆಳುವ ಪಕ್ಷದ ನೀತಿಗಳಿಂದ ಜನಸಾಮಾನ್ಯರ ಮೇಲೆ ಆಗುತ್ತಿರುವ ಸಂಕಟಗಳ ವಿರುದ್ಧ ಧ್ವನಿಗಳು ಎದ್ದಿವೆ. ಭಾಜಪ ಸರಕಾರವು ಹರಡಿಸುತ್ತಿದ್ದ ಭಯದ ವಾತಾವರಣ ಕರಗಿದೆ. ಬಿಜೆಪಿಯು 12 ವರ್ಷಗಳಿಂದ ಜಪಿಸುತ್ತಿದ್ದ ಹಿಂದೂ-ಮುಸ್ಲಿಮ್-ಆತಂಕವಾದ-ರಾಷ್ಟ್ರಭಕ್ತಿ-ಸನಾತನ ಸಂಸ್ಕೃತಿ ಮುಂತಾದ ವಿಷಯಗಳು ಹಳಸಿವೆ. ಯುವಜನರನ್ನು ತಮ್ಮ ಬಳಿ ಸೆಳೆಯಲು ಪ್ರಧಾನಿ ಮೋದಿ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಅದರ ಜೊತೆಗೆ ಸರಕಾರದ ನೀತಿಗಳನ್ನು ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ (ವೈಚಾರಿಕ ನಕ್ಸಲರು) ಎಂದೂ ಅವಹೇಳನ ಮಾಡಿದ್ದಾರೆ. ಮೇಲ್ನೋಟಕ್ಕೆ ನೀಟ್ ಪರೀಕ್ಷೆಗಳ ಅವ್ಯವಹಾರಗಳು ಪ್ರತಿಭಟನೆಗೆ ಕಾರಣವಾದರೂ ಭಾಜಪ ಸರಕಾರದ ಸುದೀರ್ಘ ಅಧಿಕಾರಾವಧಿಯಲ್ಲಿ ಸಂಭವಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳು ಯುವಜನರನ್ನು ಹತಾಶರನ್ನಾಗಿ ಮಾಡಿದಂತೆ ತೋರುತ್ತಿದೆ. ನಿರಂತರ ಉದ್ಯೋಗ ನಷ್ಟ, ಹೊಸ ಉದ್ಯೋಗಗಳ ಕೊರತೆ, ಬೆಲೆ ಏರಿಕೆ, ಹೆಚ್ಚುತ್ತಿರುವ ಬಡತನ ಹಾಗೂ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯಗಳು ಯುವಜನತೆಯ ಗಮನಕ್ಕೆ ಬಾರದಿರುತ್ತದೆಯೇ? ಈ ದೃಷ್ಟಿಯಿಂದ ಜೆನ್ ಝಿಗಳು ದೇಶದ ರಾಜಕೀಯದಲ್ಲಿ ಹೊಸ ಸಂಚಲನೆಗೆ ಬುನಾದಿ ಹಾಡಿದ್ದಾರೆ. ಶಿಕ್ಷಣ ಮಂತ್ರಿಯ ರಾಜೀನಾಮೆ ಸಣ್ಣ ಹೆಜ್ಜೆ; ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳು ಬಹಳಷ್ಟು ಇವೆ ಎಂದು ಸಿಜೆಪಿಯ ನಾಯಕರು ಹೇಳಿದ್ದಾರೆ. ಸರಕಾರವು ಕೊಟ್ಟ ಮಾತುಗಳನ್ನು ಉಳಿಸಿಲ್ಲ ಎಂದು ಸೆಪ್ಟಂಬರ್ 5ರಿಂದ ಮತ್ತೆ ಆಂದೋಲನಕ್ಕೆ ತೊಡಗುವ ಸೂಚನೆಯನ್ನು ಕೊಟ್ಟಿದ್ದಾರೆ. ಯುವಜನರ ಪ್ರತಿಭಟನೆಯಲ್ಲಿ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೂ ಪಾಠಗಳಿವೆ. ಅವುಗಳು ತಳಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸ್ಪಂದಿಸಬೇಕು. ಅವರ ಆಶೋತ್ತರಗಳನ್ನು ಎಲ್ಲಾ ವೇದಿಕೆಗಳಲ್ಲಿಯೂ ಮುನ್ನೆಲೆಗೆ ತರಬೇಕು. ವೈಯಕ್ತಿಕ ಅಜೆಂಡಾಗಳನ್ನು ಬದಿಗಿರಿಸಿ ಜನಸಾಮಾನ್ಯರ ಸಂಕಟಗಳ ಬಗ್ಗೆ ನಿರಂತರ ಧ್ವನಿಯನ್ನು ಏರಿಸುವ ತುರ್ತು ದೇಶದ ಮುಂದಿದೆ. ಮೋದಿಯವರ 12 ವರ್ಷಗಳ ಅಧಿಕಾರಾವಧಿಯಲ್ಲಿ ಎರಡನೆಯ ಬಾರಿ ಅವರ ಗರ್ವಭಂಗವಾಗಿದೆ. ಹಿಂದೆ 2020-21ರಲ್ಲಿ ಆದ ರೈತರ ಪ್ರತಿಭಟನೆ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿತ್ತು. ಈಗ ಯುವಜನತೆಯ ಶಾಂತಿಯುತ ಪ್ರತಿಭಟನೆಗಳು ದೇಶದ ಪ್ರಜಾಸತ್ತೆಯು ಇನ್ನೂ ಜೀವಂತವಿದೆ ಎಂಬುದನ್ನು ಎತ್ತಿ ತೋರಿಸಿದೆ. ಈ ಬೆಳವಣಿಗೆಯು ದೇಶದ ಭವಿಷ್ಯದ ದೃಷ್ಟಿಯಿಂದ ಸ್ವಾಗತಾರ್ಹ.

ವಾರ್ತಾ ಭಾರತಿ 28 Aug 2026 8:14 am

ದಿನಗೂಲಿ ಕೆಲಸದಿಂದ ಸಿಂಗಾಪುರದಲ್ಲಿ ಪಿಎಚ್‌ಡಿವರೆಗೆ; 15 ಲಕ್ಷ ರೂ. ಸಂಬಳದ ಉದ್ಯೋಗ ತಿರಸ್ಕರಿಸಿದ ರಹ್ಮತುಲ್ಲಾ ಶೇಖ್‌ ರ ಸ್ಪೂರ್ತಿದಾಯಕ ಪಯಣ

Photo Credit : news18.com ಬೆಂಗಳೂರು: ಆರ್ಥಿಕ ಸಂಕಷ್ಟ, ದುಡಿಯುವ ಅನಿವಾರ್ಯತೆ ಅಥವಾ ಉನ್ನತ ಶಿಕ್ಷಣಕ್ಕೆ ತಡವಾಗಿ ಮರಳುವುದು ಸಾಧನೆಗೆ ಅಡ್ಡಿಯಾಗಬೇಕಿಲ್ಲ ಎಂಬುದನ್ನು ಆಂಧ್ರಪ್ರದೇಶದ ರಹ್ಮತುಲ್ಲಾ​ ಶೇಖ್ ಅವರ ಪಯಣ ತೋರಿಸಿಕೊಟ್ಟಿದೆ. ಕೆಳ–ಮಧ್ಯಮ ವರ್ಗದ ಕುಟುಂಬದಿಂದ ಬಂದ ರಹ್ಮತುಲ್ಲಾ​ ಶೇಖ್, ಒಂದು ಕಾಲದಲ್ಲಿ ಸರಕು ಸಾಗಿಸುವ ಕೆಲಸ ಮಾಡುತ್ತಾ ದಿನಕ್ಕೆ ಸುಮಾರು 300 ರೂ. ಗಳಿಸುತ್ತಿದ್ದರು. ಬಳಿಕ ಇಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿ, ಉದ್ಯೋಗ ಮಾಡುತ್ತಲೇ GATEಗೆ ಸಿದ್ಧತೆ ನಡೆಸಿದರು. 2024ರ GATE ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ 809ನೇ ಅಖಿಲ ಭಾರತ ರ‍್ಯಾಂಕ್‌ ಪಡೆದರು. ಈ ಸಾಧನೆಯ ಬಳಿಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ MTech ಪೂರ್ಣಗೊಳಿಸಿದರು. ಇದೀಗ ಸಿಂಗಾಪುರದ ನ್ಯಾಷನಲ್‌ ಯೂನಿವರ್ಸಿಟಿ (NUS)ಯಲ್ಲಿ ಪವರ್‌ ಎಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಆರಂಭಿಸಿದ್ದಾರೆ. ರಹ್ಮತುಲ್ಲಾ ಅವರ ಶೈಕ್ಷಣಿಕ ಸಾಧನೆ ಹಾಗೂ ಹೋರಾಟದ ಕಥೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ. ಅವರ LinkedIn ಪ್ರೊಫೈಲ್‌ ಪ್ರಕಾರ, NUSನಲ್ಲಿ ಡಾಕ್ಟರೇಟ್‌ ಅಧ್ಯಯನ ಆರಂಭಿಸುವ ಮೊದಲು ಅವರು IIScನಲ್ಲಿ MTech ಪೂರ್ಣಗೊಳಿಸಿದ್ದರು. ಆಂಧ್ರಪ್ರದೇಶದಲ್ಲಿ ಆರಂಭ: ರಹ್ಮತುಲ್ಲಾ ತಮ್ಮ ಆರಂಭಿಕ ಶಿಕ್ಷಣವನ್ನು ಆಂಧ್ರಪ್ರದೇಶದಲ್ಲಿ ಪೂರ್ಣಗೊಳಿಸಿದರು. ಜಿಲ್ಲಾ ಪರಿಷತ್‌ ಪ್ರೌಢಶಾಲೆಯಲ್ಲಿ ಓದುವುದಕ್ಕೂ ಮೊದಲು ಸಸಿಕಾಂತ ರೆಡ್ಡಿ ಜೂನಿಯರ್‌ ಕಾಲೇಜಿನಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಅಧ್ಯಯನ ಮಾಡಿದರು. ನಂತರ ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ಗೆ ಸೇರಿದರು. 2021ರಲ್ಲಿ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ನಲ್ಲಿ BTech ಪದವಿ ಪಡೆದರು. 10ರಲ್ಲಿ 8.9 CGPA ಗಳಿಸಿದರು. ಶಿಕ್ಷಣದ ಜತೆಗೆ ಆರ್ಥಿಕ ಸಂಕಷ್ಟವನ್ನೂ ಎದುರಿಸಬೇಕಾಯಿತು. ಈ ಅವಧಿಯಲ್ಲಿ ಪೋರ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಅವರು ದಿನಕ್ಕೆ ಸುಮಾರು 300 ರೂ. ಗಳಿಸುತ್ತಿದ್ದರು. ಉದ್ಯೋಗ ಮಾಡುತ್ತಲೇ GATEಗೆ ಸಿದ್ಧತೆ: BTech ಪೂರ್ಣಗೊಳಿಸಿದ ಬಳಿಕ ರಹ್ಮತುಲ್ಲಾ ಕಾರ್ಪೊರೇಟ್‌ ವಲಯಕ್ಕೆ ಪ್ರವೇಶಿಸಿದರು. 2022ರ ಫೆಬ್ರವರಿಯಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಿಸ್ಟಮ್ಸ್‌ ಇಂಜಿನಿಯರ್‌ ಆಗಿ ಕೆಲಸ ಆರಂಭಿಸಿದರು. ಪೂರ್ಣಕಾಲಿಕ ಉದ್ಯೋಗದ ನಡುವೆಯೂ ಉನ್ನತ ಶಿಕ್ಷಣದ ಗುರಿಯನ್ನು ಅವರು ಕೈಬಿಡಲಿಲ್ಲ. ಕೆಲಸದ ಜತೆಗೆ GATE ಪರೀಕ್ಷೆಗೆ ಸಿದ್ಧತೆ ನಡೆಸಿದರು. ಉದ್ಯೋಗ ಮತ್ತು ಪರೀಕ್ಷೆಯ ತಯಾರಿಯನ್ನು ಒಟ್ಟಿಗೆ ನಿಭಾಯಿಸುವುದು ಸವಾಲಾಗಿದ್ದರೂ ಅವರು ಪ್ರಯತ್ನ ಮುಂದುವರಿಸಿದರು. ಅದರ ಫಲವಾಗಿ 2024ರ GATE ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ 809ನೇ ಅಖಿಲ ಭಾರತ ರ‍್ಯಾಂಕ್‌ ಪಡೆದರು. IIScನಲ್ಲಿ MTech: GATE ಫಲಿತಾಂಶ ರಹ್ಮತುಲ್ಲಾ ಅವರಿಗೆ ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ IIScಗೆ ಪ್ರವೇಶದ ಅವಕಾಶ ಕಲ್ಪಿಸಿತು. ಬೆಂಗಳೂರಿನ IIScನಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ MTechಗೆ ಸೇರಿದರು. IIScನಲ್ಲಿ ವ್ಯಾಸಂಗ ಮಾಡುವ ವೇಳೆ ಅನಲಾಗ್‌ ಇಂಟಿಗ್ರೇಟೆಡ್‌ ಸರ್ಕ್ಯೂಟ್‌ ವಿನ್ಯಾಸ ಮತ್ತು ಪವರ್‌ ಎಲೆಕ್ಟ್ರಾನಿಕ್ಸ್‌ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. MTech ಅಧ್ಯಯನದ ಜತೆಗೆ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಬೋಧನಾ ಸಹಾಯಕರಾಗಿಯೂ ಕೆಲಸ ಮಾಡಿದರು. ಅವರ LinkedIn ಪ್ರೊಫೈಲ್‌ ಪ್ರಕಾರ, ಪವರ್‌ ಎಲೆಕ್ಟ್ರಾನಿಕ್ಸ್‌ ಲ್ಯಾಬೊರೇಟರಿ, ಕಂಟ್ರೋಲ್‌ ಸಿಸ್ಟಮ್ಸ್‌ ಡಿಸೈನ್‌ ಕೋರ್ಸ್‌ ಮತ್ತು SMPC ಲ್ಯಾಬ್‌ನೊಂದಿಗೆ ಅವರು ಕೆಲಸ ಮಾಡಿದ್ದಾರೆ. IIScನಲ್ಲಿ ಉದ್ಯೋಗ ನೇಮಕಾತಿ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ IIScನಲ್ಲಿನ ಅವರ ಅವಧಿ ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಬೋಧನೆ, ಪ್ರಯೋಗಾಲಯದ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ನಿಯೋಜನೆಗೆ ಸಂಬಂಧಿಸಿದ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. GATE ತಯಾರಿಗೆ ಸಂಬಂಧಿಸಿದ ಸಲಹೆಗಳು ಮತ್ತು ತಮ್ಮ ಶೈಕ್ಷಣಿಕ ಪಯಣದ ಮಾಹಿತಿಯನ್ನು Instagramನ @ramnfinity ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. 2026ರ ಜೂನ್‌ನಲ್ಲಿ ಅವರು IIScನಿಂದ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ನಲ್ಲಿ MTech ಪೂರ್ಣಗೊಳಿಸಿದರು. 15 ಲಕ್ಷ ರೂ.ವರೆಗಿನ ಉದ್ಯೋಗದ ಆಫರ್: GATE ಸಾಧನೆಯ ಬಳಿಕ ರಾಮತುಲ್ಲಾ ಅವರಿಗೆ ಹಲವು ಸಾರ್ವಜನಿಕ ವಲಯದ ಕಂಪೆನಿಗಳಿಂದ ವಾರ್ಷಿಕ ಸುಮಾರು 15 ಲಕ್ಷ ರೂ. ಪ್ಯಾಕೇಜ್‌ ನ ಉದ್ಯೋಗ ಆಫರ್ ಗಳು ಬಂದಿದ್ದವು ಎಂದು News18 ಹಿಂದಿ ವರದಿ ಮಾಡಿದೆ. ಉತ್ತಮ ಸಂಬಳದ ಉದ್ಯೋಗಕ್ಕೆ ಸೇರುವ ಅವಕಾಶವಿದ್ದರೂ ಅವರು ಸಂಶೋಧನೆ ಮತ್ತು ಉನ್ನತ ಶಿಕ್ಷಣದ ಹಾದಿಯನ್ನೇ ಆಯ್ಕೆ ಮಾಡಿಕೊಂಡರು. 2026ರ ಆಗಸ್ಟ್‌ನಲ್ಲಿ ಅವರು ಸಿಂಗಾಪುರದ ನ್ಯಾಷನಲ್‌ ಯೂನಿವರ್ಸಿಟಿಯಲ್ಲಿ ಪವರ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಪಿಎಚ್‌ಡಿ ಅಧ್ಯಯನ ಆರಂಭಿಸಿದರು. ‘ಆರಂಭಿಕ ಹಂತವು ಭವಿಷ್ಯವನ್ನು ನಿರ್ಧರಿಸುವುದಿಲ್ಲ’ ತಮ್ಮ LinkedIn ಪೋಸ್ಟ್‌ನಲ್ಲಿ ರಹ್ಮತುಲ್ಲಾ ತಮ್ಮ ಪಯಣವನ್ನು ಹಂಚಿಕೊಂಡಿರುವ ಉದ್ದೇಶವನ್ನೂ ವಿವರಿಸಿದ್ದಾರೆ. ‘ನನ್ನ ಸಾಧನೆಗಳನ್ನು ಪ್ರದರ್ಶಿಸಲು ನಾನು ಇದನ್ನು ಹಂಚಿಕೊಳ್ಳುತ್ತಿಲ್ಲ. ನಿಮ್ಮ ಆರಂಭಿಕ ಹಂತವು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಎಲ್ಲರಿಗೂ ನೆನಪಿಸಲು ಇದನ್ನು ಹಂಚಿಕೊಳ್ಳುತ್ತಿದ್ದೇನೆ. ತಾಳ್ಮೆ, ಸ್ಥಿರತೆ ಮತ್ತು ನಿರಂತರ ಕಠಿಣ ಪರಿಶ್ರಮದಿಂದ ಕನಸುಗಳು ವಾಸ್ತವವಾಗಬಹುದು. ನನ್ನ ಪ್ರಯಾಣವು ಸಣ್ಣ ಹಳ್ಳಿಗಳು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮನ್ನು ತಾವು ನಂಬುವಂತೆ ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ದೃಢನಿಶ್ಚಯ, ಶಿಸ್ತು ಮತ್ತು ಪರಿಶ್ರಮದಿಂದ ಎದುರಿಸಿದಾಗ ಯಾವುದೇ ಕನಸು ತುಂಬಾ ದೊಡ್ಡದಲ್ಲ’ ಎಂದು ಅವರು ಹೇಳಿದ್ದಾರೆ. ಕೃಪೆ: news18.com

ವಾರ್ತಾ ಭಾರತಿ 25 Aug 2026 5:33 pm

ಬರ : ಕೇಂದ್ರದ ನೆರವು ಅಗತ್ಯ

ಸಾಂದರ್ಭಿಕ ಚಿತ್ರ ಇನ್ನೇನು ಮುಂಗಾರು ಮುಗಿಯುತ್ತ ಬಂತು. ಮುಂದಿನ ತಿಂಗಳು ಪ್ರಸಕ್ತ ವರ್ಷದ ಮುಂಗಾರು ಋತು ಕೊನೆಗೊಳ್ಳುತ್ತದೆ. ಈ ವರ್ಷ ಸರಿಯಾಗಿ ಮಳೆಯಾಗಲಿಲ್ಲ. ಪಶ್ಚಿಮ ಘಟ್ಟ ಪ್ರದೇಶವನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಕಡೆ ಮುಂಗಾರು ಮಾಯವಾಗಿದೆ. ಉತ್ತರ ಕರ್ನಾಟಕದ ಪರಿಸ್ಥಿತಿ ಕಳವಳಕಾರಿಯಾಗಿದೆ. ಅಲ್ಲಿ ಮಳೆಯಾಗಿಲ್ಲವೆಂದಲ್ಲ, ಆದರೆ ನಿರೀಕ್ಷಿಸಿದ ಪ್ರಮಾಣದಲ್ಲಿ ಆಗಲಿಲ್ಲ. ಅಲ್ಪಸ್ವಲ್ಪ ಬಿದ್ದ ಮಳೆಗೆ ಶೇಂಗಾ, ಸಜ್ಜೆ, ಹೈಬ್ರೀಡ್ ಜೋಳ ಸೇರಿದಂತೆ ಹಲವು ಧಾನ್ಯಗಳು ಬಿತ್ತನೆಯಾಗಿವೆ. ದಕ್ಷಿಣದ ಜಿಲ್ಲೆಗಳಲ್ಲಿ ರಾಗಿ ಸೇರಿದಂತೆ ಹಲವಾರು ಬೆಳೆಗಳು ನೀರಿಲ್ಲದೇ ಕಮರಿ ಹೋಗಿವೆ. ಒಂದು ಅಂದಾಜಿನ ಪ್ರಕಾರ ಶೇ. 30ರಷ್ಟು ಕೃಷಿ ಜಮೀನುಗಳಲ್ಲಿ ಬಿತ್ತನೆಯೇ ಆಗಿಲ್ಲ. ರಾಜ್ಯದ ರೈತರು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರಕಾರ ಕರ್ನಾಟಕದ ನೆರವಿಗೆ ಬರಬೇಕಾಗಿದೆ. ರಾಜ್ಯ ಸರಕಾರ ಬರ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದರೆ ಸಾಲದು, ಸಮಗ್ರವಾದ ವೈಜ್ಞಾನಿಕ ಅಧ್ಯಯನ ನಡೆಸಿ ಮತ್ತೊಂದು ವರದಿಯನ್ನು ಸಲ್ಲಿಸಬೇಕಾಗಿದೆ. ನಾಲ್ಕು ಹವಾಮಾನ ವಲಯಗಳಲ್ಲಿ ಈಗಾಗಲೇ ಅಧ್ಯಯನ ನಡೆಸಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಬೇಕಾದರೆ ಶೇ. 33ರಷ್ಟು ಬೆಳೆ ನಷ್ಟವಾಗಿದೆ ಎಂಬುದನ್ನು ಸಾಬೀತು ಪಡಿಸಬೇಕಾಗುತ್ತದೆ. ಶೇ. 50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದ್ದರೆ ರಾಜ್ಯವನ್ನು ತೀವ್ರ ಬರ ಪೀಡಿತ ಎಂದು ಘೋಷಣೆ ಮಾಡಬೇಕಾಗುತ್ತದೆ. ನಂತರ ಕೇಂದ್ರದ ನೆರವು ಬರುತ್ತದೆ. ಹಿಂದಿನ ಅನುಭವದಿಂದ ಹೇಳಬೇಕಾದರೆ ಈ ಹಿಂದೆ ಅಂದರೆ ಎರಡು ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಈಗಿನದಕ್ಕಿಂತ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ರಾಜ್ಯ ಸರಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) 18,171.44 ಕೋಟಿ ರೂಪಾಯಿ ನೆರವು ಕೋರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿ ಸಲ್ಲಿಸಿ ಆರು ತಿಂಗಳು ಗತಿಸಿದರೂ ಕೇಂದ್ರ ಸರಕಾರ ಸ್ಪಂದಿಸಲಿಲ್ಲ. ರಾಜ್ಯದ ಜನರು ಪ್ರಾಣ ಸಂಕಟವನ್ನು ಅನುಭವಿಸುತ್ತಿರುವಾಗಲೂ ನೆರವಿಗೆ ಬಾರದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಬಗ್ಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಜವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕೊನೆಗೆ ಬೇರೆ ದಾರಿ ಕಾಣದೆ ವಿಪತ್ತು ಪರಿಹಾರ ನಿಧಿಯಿಂದ ನೆರವು ಕೊಡಿಸುವಂತೆ ಕೇಂದ್ರ ಗೃಹ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಸಂವಿಧಾನದ 14 ಮತ್ತು 22ನೇ ವಿಧಿಯನ್ವಯ ಸುಪ್ರೀಂಕೋರ್ಟ್‌ಗೆ ರಾಜ್ಯ ಸರಕಾರ ಅರ್ಜಿ ಸಲ್ಲಿಸಬೇಕಾಯಿತು. ಈಗ ಹಾಗಾಗಬಾರದು. ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದುವರೆಗೆ ಕೇಂದ್ರದ ಜೊತೆಗೆ ಸಂಘರ್ಷದ ಮಾತನ್ನು ಆಡಿಲ್ಲ. ಈ ಮೆದು ಧೋರಣೆಗೆ ಕೇಂದ್ರ ಸರಕಾರ ಸ್ಪಂದಿಸುವುದೇ ಎಂಬುದನ್ನು ಕಾಯ್ದು ನೋಡಬೇಕಾಗಿದೆ. ಏತನ್ಮಧ್ಯೆ ಈ ತಿಂಗಳ ಅಂತ್ಯದವರೆಗೆ ಮಳೆ ಮತ್ತು ಬೆಳೆ ಪರಿಸ್ಥಿತಿಯನ್ನು ಗಮನಿಸಿ ಬಳಿಕ ಬರ ಘೋಷಣೆಯ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅವರು ಹೇಳಿದ್ದಾರೆ. ಕೃಷಿ ಇಲಾಖೆ ವತಿಯಿಂದ ಐದು ವಾರಗಳ ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು ಅಧ್ಯಯನ ಮಾಡಲಾಗಿದ್ದು, ಬಿತ್ತನೆ ಎಷ್ಟಾಗಿದೆ, ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಮತ್ತು ಮಳೆ-ಬೆಳೆ ಪರಿಸ್ಥಿತಿ ಹೇಗಿದೆ ಎನ್ನುವ ಕುರಿತು ವಾಸ್ತವಾಂಶಗಳನ್ನು ಒಳಗೊಂಡ ವರದಿಯನ್ನು ತಯಾರಿಸಿ ಕಂದಾಯ ಇಲಾಖೆಗೆ ಸಲ್ಲಿಸಲಾಗುತ್ತದೆ. ನಂತರ ಕಂದಾಯ ಇಲಾಖೆ ಅಗತ್ಯ ದಾಖಲೆಗಳ ಜೊತೆಗೆ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಲಿದೆ. ಆನಂತರ ಕೇಂದ್ರದ ತಂಡವು ರಾಜ್ಯದಲ್ಲಿ ಅಧ್ಯಯನ ನಡೆಸಿ ಬರ ಸಂಬಂಧ ನಿರ್ಧಾರ ಕೈಗೊಳ್ಳುತ್ತದೆ. ಹಿಂದೆ ಇವೆಲ್ಲ ಪ್ರಕ್ರಿಯೆಯ ನಂತರವೂ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರಕಾರ ಸತಾಯಿಸಿದ್ದನ್ನು ಮರೆಯಲು ಆಗುವುದಿಲ್ಲ. ವಾಸ್ತವವಾಗಿ ಸದ್ಯದ ಪರಿಸ್ಥಿತಿಯ ಪ್ರಕಾರ ಬಳ್ಳಾರಿ, ವಿಜಯನಗರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವು ಕಡೆ ವಿಪರೀತ ಬೆಳೆ ನಷ್ಟವಾಗಿದೆ. ರಾಜ್ಯದಲ್ಲಿ ಈಗಾಗಲೇ ಬರಗಾಲದ ಛಾಯೆ ಕವಿದಿದೆ. ಇದನ್ನು ರಾಜ್ಯದ ಅಧ್ಯಯನ ತಂಡ ಅತ್ಯಂತ ಎಚ್ಚರದಿಂದ ಸಾಬೀತು ಪಡಿಸಬೇಕಾಗಿದೆ. ಈ ನಡುವೆ ಆಗಸ್ಟ್ 24ರಿಂದ 60 ದಿನಗಳ ಕಾಲ ಮೋಡ ಬಿತ್ತನೆಯನ್ನು ಮಾಡಲಾಗುವುದೆಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯ ಸ್ವಾಮಿ ಅವರು ಹೇಳಿದ್ದಾರೆ. ರಾಜ್ಯದ ವಿವಿಧ ಕಡೆ ಒಟ್ಟು 200 ತಾಸುಗಳಷ್ಟು ಕಾರ್ಯಾಚರಣೆ ನಡೆಸಿ ಮೋಡ ಬಿತ್ತನೆಯನ್ನು ಮಾಡಲಾಗುವುದು, ಇದಕ್ಕೆ 28.52 ಕೋಟಿ ರೂಪಾಯಿಯಷ್ಟು ಖರ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ. ಮಳೆಗಾಗಿ ಹೋಮ ಮಾಡುವಂತೆ ಮುಖ್ಯಮಂತ್ರಿಗಳು ಕೆಲವು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ ಮುಖ್ಯಮಂತ್ರಿಗಳ ಆದೇಶದಂತೆ ಮಡಿಕೇರಿ ಬಳಿಯ ಇಗ್ಗುತ್ತಪ್ಪ ದೇಗುಲದಲ್ಲಿ ರವಿವಾರ ಸಚಿವ ನರೇಂದ್ರ ಸ್ವಾಮಿ ನೇತೃತ್ವದಲ್ಲಿ ಸರಕಾರದಿಂದ ರುದ್ರಾಭಿಷೇಕ ನಡೆದಿದೆ. ಇಂಥ ಪೂಜೆ, ಹೋಮಗಳನ್ನು ನಮ್ಮ ಜನರು ಮಾಡುತ್ತಲೇ ಬಂದಿದ್ದಾರೆ. ಮಳೆ ಬಾರದೇ ಇದ್ದಾಗ ನಮ್ಮ ಜನ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಕಪ್ಪೆ ಮದುವೆ ಮಾಡಿಸುವಂಥ ಮೌಢ್ಯದ ನಂಬಿಕೆಗಳನ್ನೂ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ಜನಸಾಮಾನ್ಯರು ಏನಾದರೂ ಮಾಡಲಿ ಸೆಕ್ಯುಲರ್ ಸರಕಾರ ಇಂಥ ಅರ್ಥ ಹೀನ ಮೌಢ್ಯಗಳಿಗೆ ಕುಮ್ಮಕ್ಕು ಕೊಡಬಾರದು. ಮೋಡ ಬಿತ್ತನೆ ವೈಜ್ಞಾನಿಕ ಕಾರ್ಯಕ್ರಮವಾದರೂ ಇದರಿಂದ ಕೆಲವೊಮ್ಮೆ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುವ ಅಪಾಯವೂ ಇದೆ ಎಂಬುದು ಪರಿಸರ ಪರಿಣಿತರ ಅಭಿಪ್ರಾಯವಾಗಿದೆ. ಇದರ ಜೊತೆಗೆ ಮಳೆ ಯಾಕೆ ಸಕಾಲದಲ್ಲಿ ಬರುವುದಿಲ್ಲ ಎಂಬ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅರಣ್ಯವನ್ನು ಆಕ್ರಮಿಸಿ, ಅವುಗಳನ್ನು ನಾಶ ಮಾಡಿ ಅಲ್ಲಿ ರೆಸಾರ್ಟ್‌ಗಳನ್ನು, ಗಣಿಗಾರಿಕೆಗಳನ್ನು ಮಾಡುವುದು ಮುಂತಾದ ಪರಿಸರ ಮಾರಕ ಕೃತ್ಯಗಳಿಗೆ ಅವಕಾಶ ನೀಡುವುದರಿಂದ ಬಿಸಿಯೇರುತ್ತಿರುವ ಭೂಮಿ, ಪರಿಸರ ಮಾಲಿನ್ಯ ಇವೆಲ್ಲವುಗಳ ಪರಿಣಾಮವಾಗಿ ಸಕಾಲದಲ್ಲಿ ಮಳೆಯಾಗುತ್ತಿಲ್ಲ. ಈ ಬಗ್ಗೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಬೇಕು. ಸರಕಾರ ಮಾಡುವ ಕೆಲಸ ಸರಕಾರ ಮಾಡಲಿ, ದೇವಾಲಯಗಳು ಮಾಡುವ ಕೆಲಸವನ್ನು ಅವು ಮಾಡುತ್ತವೆ. ದೇವಾಲಯಗಳು ಮಾಡುವ ಕೆಲಸವನ್ನು ಸರಕಾರ ಮಾಡುವುದು ಸರಿಯಲ್ಲ. ಅದೇನೇ ಇರಲಿ ಕೇಂದ್ರ ಸರಕಾರ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಆದಷ್ಟು ಬೇಗ ಸ್ಪಂದಿಸಿ ನೆರವಿಗೆ ಬರಬೇಕಾಗಿದೆ.

ವಾರ್ತಾ ಭಾರತಿ 24 Aug 2026 10:40 pm

ಕನ್ನಡ ಕೋಗಿಲೆ

[…]

ಅನಂತರಮೇಶ್ 27 Jul 2026 8:19 pm

ಮುಂಜಾವ ಹನಿ

ಅನಂತರಮೇಶ್ 13 Jul 2026 9:14 pm

ನಂಬಿಕೆ ಕಳೆದುಕೊಂಡ ಸಾಂವಿಧಾನಿಕ ಸಂಸ್ಥೆಗಳು

PC: PTI ಭಾರತದ ಸಾಂವಿಧಾನಿಕ ಸಂಸ್ಥೆಗಳು ಸ್ವಾಯತ್ತತೆ ಕಳೆದುಕೊಂಡು ವಿವಾದಕ್ಕೆ ಕಾರಣವಾಗಿರುವ ಹಾಗೂ ಅಧೋಗತಿಯತ್ತ ಸಾಗಿರುವ ಇಂದಿನ ದಿನಗಳಲ್ಲಿ ಮುಂದೇನು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಸ್ವತಂತ್ರ ಭಾರತದ ಏಳೂವರೆ ದಶಕಗಳ ಇತಿಹಾಸದಲ್ಲಿ ಇಂಥ ಪರಿಸ್ಥಿತಿ ಹಿಂದೆಂದೂ ಉದ್ಭವವಾಗಿರಲಿಲ್ಲ. ಟಿ.ಎನ್. ಶೇಷನ್ ಅವರಂಥ ದಿಟ್ಟ ಮುಖ್ಯ ಚುನಾವಣಾ ಆಯುಕ್ತರನ್ನು ಕಂಡ ಈ ದೇಶದಲ್ಲಿ ಚುನಾವಣಾ ಆಯೋಗದ ಈಗಿನ ಮುಖ್ಯ ಆಯುಕ್ತರನ್ನು ಸಂಶಯದಿಂದ ನೋಡಬೇಕಾಗಿ ಬಂದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈಗಿನ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಇತ್ತೀಚಿನ ಕಾರ್ಯ ನಿರ್ವಹಣೆ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಅವರನ್ನು ಉಚ್ಚಾಟಿಸಲು ಪ್ರತಿಪಕ್ಷಗಳು ನಡೆಸಿರುವ ಪ್ರಯತ್ನ ಅಭೂತಪೂರ್ವವಾದುದು. ಸಂಸತ್ತಿನ ಪ್ರಮುಖ ಪ್ರತಿಪಕ್ಷಗಳು ಈಗಿನ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸಬೇಕೆಂದು ನೋಟಿಸ್ ಸಲ್ಲಿಸಿರುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ ಇಂಡಿಯಾ ಮೈತ್ರಿ ಕೂಟದ 130 ಲೋಕಸಭಾ ಸದಸ್ಯರು ಹಾಗೂ 63 ರಾಜ್ಯಸಭಾ ಸದಸ್ಯರು ಸಹಿ ಹಾಕಿದ್ದಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಸಲ ಇಂಥ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಪ್ರತಿಪಕ್ಷಗಳ ಅಪನಂಬಿಕೆ ಹಾಗೂ ಸಂಘರ್ಷ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ನಡೆಸಿರುವ ರೀತಿಯೇ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಂದ್ರ ಕುಮಾರ್ ಉಚ್ಚಾಟನೆಯ ಪ್ರಯತ್ನಕ್ಕೆ ಮುಖ್ಯ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿರುವಾಗಲೇ ಪರಿಷ್ಕರಣೆಯ ಹೆಸರಿನಲ್ಲಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಹೊರಟಿರುವುದು ಬಿಜೆಪಿಗೆ ಅನುಕೂಲ ಮಾಡಿಕೊಡುವ ದುರುದ್ದೇಶವನ್ನು ಹೊಂದಿದೆ ಎಂದು ಟಿಎಂಸಿ ಹಾಗೂ ಇತರ ಪ್ರತಿಪಕ್ಷಗಳ ಮುಖ್ಯ ಆರೋಪವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ ಚುನಾವಣಾ ಆಯೋಗ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಿರುವ ಇತರ ರಾಜ್ಯಗಳಲ್ಲೂ ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಮುಖ್ಯ ಚುನಾವಣಾ ಆಯುಕ್ತರು ಗುರಿಯಾಗಿದ್ದಾರೆ. ಪ್ರತಿಪಕ್ಷಗಳು ಮಾಡುತ್ತಿರುವ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ಸರ್ವೋಚ್ಚ ನ್ಯಾಯಾಲಯ ಪದೇ ಪದೇ ಮಧ್ಯಪ್ರವೇಶ ಮಾಡಿ ಚುನಾವಣಾ ಆಯೋಗಕ್ಕೆ ನೀಡಿರುವ ನಿರ್ದೇಶನಗಳನ್ನು ಗಮನಿಸಿದರೆ ಸಹಜವಾಗಿ ಈ ಕುರಿತು ಆಯೋಗದ ನಡೆಯ ಬಗ್ಗೆ ಸಂದೇಹ ಉಂಟಾಗುತ್ತದೆ. ಬಿಜೆಪಿಗೆ ಅನುಕೂಲ ಮಾಡಿಕೊಡಲು ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಿದೆ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳ ಇಂಥ ಪಕ್ಷಪಾತದಿಂದ ಕೂಡಿದ ಕಾರ್ಯ ವೈಖರಿ ಸರಿಯಲ್ಲ. ಚುನಾವಣಾ ಆಯೋಗ ಸಂಶಯಾಸ್ಪದವಾಗದಂತೆ ಯಾವುದೇ ಆರೋಪ ಬರದಂತೆ ಎಚ್ಚರವಾಗಿರಬೇಕು, ಅಷ್ಟೇ ಅಲ್ಲ ಎಲ್ಲರನ್ನೂ ಒಳಗೊಳ್ಳುವಂತೆ ಅದರ ಕಾರ್ಯ ವೈಖರಿ ಇರಬೇಕು. ಆದರೆ ಈಗಿನ ಮುಖ್ಯ ಚುನಾವಣಾ ಆಯುಕ್ತರು ಹಲವಾರು ಸಂದರ್ಭಗಳಲ್ಲಿ ಸಂಶಯಾಸ್ಪದವಾಗಿ ನಡೆದುಕೊಂಡಿದ್ದಾರೆ. ಇದು ಕೇವಲ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧ ಪಟ್ಟಂತೆ ಮಾತ್ರವಲ್ಲ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಕುರಿತು (ವೋಟ್ ಚೋರಿ) ಮಾಡಿರುವ ಆರೋಪ ಹಾಗೂ ಕೇಳಿರುವ ಪ್ರಶ್ನೆಗಳಿಗೆ ಮುಖ್ಯ ಚುನಾವಣಾ ಆಯುಕ್ತರು ವ್ಯಕ್ತಪಡಿಸಿದ ಪ್ರತಿಕ್ರಿಯೆ ಸಮಾಧಾನಕರವಾಗಿರಲಿಲ್ಲ. ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೇರಿದಂತೆ ಸರಕಾರದ ಜವಾಬ್ದಾರಿ ಸ್ಥಾನಗಳಲ್ಲಿ ಇರುವವರು ಚುನಾವಣೆಗೆ ಸಂಬಂಧಿಸಿದ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ದೂರುಗಳ ಬಗ್ಗೆಯೂ ಮುಖ್ಯ ಚುನಾವಣಾ ಆಯುಕ್ತರ ಪ್ರತಿಕ್ರಿಯೆಗಳು ನಿಷ್ಪಕ್ಷಪಾತವಾಗಿರಲಿಲ್ಲ. ಚುನಾವಣಾ ವೇಳಾಪಟ್ಟಿ ತಯಾರಿಸುವುದು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಮನವಿಯ ಬಗ್ಗೆ ಸ್ಪಂದಿಸುವಲ್ಲಿ ಮುಖ್ಯ ಚುನಾವಣಾ ಆಯುಕ್ತರು ವಿಫಲಗೊಂಡರು ಎಂಬುದು ಬರೀ ಆರೋಪವಲ್ಲ. ಸಂಸದೀಯ ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗದ ಹೊಣೆಗಾರಿಕೆ ಮಹತ್ವದ್ದಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸುವುದು ಅದರ ಸಾಂವಿಧಾನಿಕ ಕರ್ತವ್ಯವಾಗಿದೆ. ಆದರೆ ಈಗಿನ ಮುಖ್ಯ ಚುನಾವಣಾ ಆಯುಕ್ತರು ಪ್ರತಿಪಕ್ಷಗಳ ಬಗ್ಗೆ ನಕಾರಾತ್ಮಕವಾಗಿ ನಡೆದುಕೊಳ್ಳುತ್ತಲೇ ಬಂದಿದ್ದಾರೆ. ಕೆಲವು ಸಲ ಬಿಜೆಪಿಗೆ ಅನುಕೂಲಕರವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸಬೇಕೆಂದು ಪ್ರತಿಪಕ್ಷಗಳು ಸ್ವಾತಂತ್ರ್ಯಾನಂತರ ಹಿಂದೆಂದೂ ಆಗ್ರಹಿಸಿರಲಿಲ್ಲ. ನೋಟಿಸ್ ನೀಡಿರಲಿಲ್ಲ. ಆದರೆ ಈಗ ಪ್ರತಿಪಕ್ಷಗಳಿಂದ ಇಂಥ ಬೇಡಿಕೆ ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಪ್ರತಿಪಕ್ಷಗಳ ನಡುವಣ ಸಂಬಂಧ ಸಂಪೂರ್ಣ ಹಾಳಾಗಿ ಹೋಗಿದೆ ಅಂದರೆ ಅತಿಶಯೋಕ್ತಿಯಲ್ಲ. ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಯ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತರ ಉಚ್ಚಾಟನೆ ಸಂಬಂಧದ ಪ್ರಸ್ತಾವ ಮಹತ್ವದ ಬೆಳವಣಿಗೆಯಾಗಿದೆ. ಸಂಸತ್ತಿನಲ್ಲಿ ಪ್ರತಿಪಕ್ಷಗಳಿಗೆ ಸಂಖ್ಯಾ ಬಲವಿಲ್ಲದಿರುವುದರಿಂದ ಸ್ಪೀಕರ್ ಪ್ರಕರಣದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕುರಿತ ಗೊತ್ತುವಳಿ ಸದನದಲ್ಲಿ ಪಾಸಾಗದಿರಬಹುದು. ಆದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಎರಡು ಮಹತ್ವದ ಸಾಂವಿಧಾನಿಕ ಹುದ್ದೆಗಳು ಹಳ್ಳ ಹಿಡಿದಿರುವುದಕ್ಕೆ ಈ ವಿದ್ಯಮಾನಗಳು ಸಾಕ್ಷಿಯಾಗಿವೆ. ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ಬಿಜೆಪಿಗೆ ವೋಟು ಹಾಕ ದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಬಿಜೆಪಿಗೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲು ಈಗಿನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಹೊರಟಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಘನ ಘೋರ ಅಪಚಾರವಾಗಿದೆ. ಇದರ ವಿರುದ್ಧ ಜನರು ಶಾಂತಿಯುತ ಪ್ರತಿಭಟನೆಗೆ ಬೀದಿಗೆ ಬರುವುದೊಂದೇ ಉಳಿದ ದಾರಿಯಾಗಿದೆ.

ವಾರ್ತಾ ಭಾರತಿ 24 Mar 2026 9:11 am

ವಸತಿ ಶಾಲೆಗಳಿಗೆ ಬೇಕು ಕಣ್ಗಾವಲು

ಸಾಂದರ್ಭಿಕ ಚಿತ್ರ PC: freepik ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ ಇತ್ತೀಚೆಗೆ ಬಳ್ಳಾರಿಯ ಗುರುಕುಲ ಪರಿಕಲ್ಪನೆಯ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಮಾರಕ ಆಯುಧದಿಂದ ಸಹ ವಿದ್ಯಾರ್ಥಿಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಓರ್ವನನ್ನು ಹತೈಗೈದ ಘಟನೆ ನಾಡನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದಲ್ಲಿ ವಸತಿ ನಿಲಯದ ವಾರ್ಡನ್ ಸಹಿತ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಗಳು ಆರೋಪಿಯಿಂದ ಹೊರ ಬಿದ್ದವು. ಗುರುಕುಲದಲ್ಲಿ ಬೇರೆ ರಾಜ್ಯಗಳ ಬೇರೆ ಭಾಷೆ ಮಾತನಾಡುವ ವಿದ್ಯಾರ್ಥಿಗಳು ಈತನನ್ನು ‘ರ್ಯಾಗಿಂಗ್’ಗೆ ಒಳಪಡಿಸುತ್ತಾ ಇದ್ದರು. ಅಣಕಿಸುವುದು, ವ್ಯಂಗ್ಯ ಮಾಡುವುದು ಹೀಗೆ ಅನೇಕ ಮಾನಸಿಕ, ದೈಹಿಕ ಕಿರುಕುಳಗಳನ್ನು ನೀಡುತ್ತಾ ಬಂದಿದ್ದಾರೆ. ಇದನ್ನು ಗಮನಿಸಿ ತಕ್ಷಣವೇ ಸರಿಪಡಿಸಬೇಕಾದ ಹೊಣೆಗಾರಿಕೆ ವಾರ್ಡನ್‌ಗೆ ಸೇರಿದ್ದು. ಆದರೆ ಆತ ಇದನ್ನೆಲ್ಲ ನೋಡಿಯೂ ನೋಡದಂತಿದ್ದ. ತನ್ನ ಅವಮಾನ, ಅಂಜಿಕೆಯನ್ನು ಯಾರ ಜೊತೆಯೂ ಹಂಚಿಕೊಳ್ಳಲಾಗದೆ ಒಳಗೊಳಗೆ ವಿದ್ಯಾರ್ಥಿ ನೊಂದುಕೊಂಡಿದ್ದ. ಈ ಮಾನಸಿಕ ಒತ್ತಡ ವಿಪರೀತವಾಗಿ ಒಮ್ಮೆ ಸ್ಫೋಟಗೊಂಡಿದೆ. ಇದು ಅಂತಿಮವಾಗಿ ವಿದ್ಯಾರ್ಥಿಯನ್ನು ಹಿಂಸೆಗೆ ಶರಣಾಗುವಂತೆ ಮಾಡಿತು. ಆತ ಮಾರಕಾಯುಧವನ್ನು ಕೈಗೆತ್ತಿಕೊಂಡು ತನ್ನ ಒಳಗಿನ ಅಸಹನೆ, ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿದ. ತಡೆಯಲು ಬಂದ ವಾರ್ಡನ್‌ಗೂ ಹಲ್ಲೆಗೈದ. ಈ ಸಂದರ್ಭದಲ್ಲಿ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ‘ಗುರುಕುಲ ಪರಿಕಲ್ಪನೆಯ ವಸತಿ ಶಾಲೆ’ ಎಂಬ ಹೆಗ್ಗಳಿಕೆೆ ಸಂತ್ರಸ್ತ ವಿದ್ಯಾರ್ಥಿಗಳ ಪಾಲಿಗೆ ಯಾವ ರೀತಿಯ ಸಹಾಯಕ್ಕೂ ಬರಲಿಲ್ಲ. ಇಂದು ವಸತಿಶಾಲೆಗಳು ಈ ನಾಡಿನ ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ದಲಿತ ವಿದ್ಯಾರ್ಥಿಗಳ ಪಾಲಿಗೆ ಬದುಕಿನ ಆಶಾಕಿರಣವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಲವು ಕೊರತೆಗಳ ನಡುವೆಯೂ ಈ ವಸತಿಶಾಲೆಗಳು ಶೋಷಿತ, ದುರ್ಬಲ ವರ್ಗದ ವಿದ್ಯಾರ್ಥಿಗಳನ್ನು ಮೇಲೆತ್ತುವಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಾ ಬರುತ್ತಿವೆೆ. ಮೊರಾರ್ಜಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡಿ ಎಸ್ಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯೊಬ್ಬಳನ್ನು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದ್ದರು. ಇಂದು ರಾಜ್ಯಾದ್ಯಂತ 800ಕ್ಕೂ ಅಧಿಕ ವಸತಿ ಶಾಲೆಗಳು ಶೋಷಿತ ಸಮುದಾಯದ ಮಕ್ಕಳನ್ನು ಪೊರೆಯುತ್ತಿವೆ. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೂ ವಸತಿಶಾಲೆಗಳ ವ್ಯವಸ್ಥೆಗಳಿವೆ. ಇವುಗಳ ನಡುವೆ ಬೇರೆ ಬೇರೆ ಧಾರ್ಮಿಕ ಸಂಸ್ಥೆಗಳು ವಸತಿ ಶಾಲೆಗಳನ್ನು ನಿರ್ಮಾಣ ಮಾಡಿ ಬಡ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ. ಗುರುಕುಲ ಶಿಕ್ಷಣದ ಹೆಸರಿನಲ್ಲಿ ಆರೆಸ್ಸೆಸ್‌ನಂತಹ ಬಲಪಂಥೀಯ ಸಂಘಟನೆಗಳೂ ವಸತಿ ಶಾಲೆಗಳನ್ನು ತೆರೆದಿವೆ. ಹಾಗೆಯೇ ಶ್ರೀಮಂತ ಮಕ್ಕಳಿಗಾಗಿ ವೈಭವೋಪೇತ ವಸತಿಶಾಲೆಗಳೂ ಇವೆ. ವಾಣಿಜ್ಯ ದೃಷ್ಟಿಯನ್ನು ಇಟ್ಟುಕೊಂಡು ತೆರೆದ ವಸತಿ ಶಾಲೆಗಳನ್ನು ಬದಿಗಿಟ್ಟು, ಸಾಮಾಜಿಕ ಕಲ್ಯಾಣದ ಉದ್ದೇಶದಿಂದ ತೆರೆದ ಸರಕಾರಿ ಮತ್ತು ಸರಕಾರೇತರ ವಸತಿ ಶಾಲೆಗಳ ಬಿಕ್ಕಟ್ಟನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲದೇ ಇದ್ದರೆ ಬಳ್ಳಾರಿಯ ಗುರುಕುಲದಲ್ಲಿ ನಡೆದ ಘಟನೆ ಇತರೆಡೆಗೂ ವ್ಯಾಪಿಸುವುದಕ್ಕೆ ದಿನ ದೂರವಿಲ್ಲ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಆತ್ಮಹತ್ಯೆಗೈದ ಘಟನೆಗಳ ಪೈಕಿ ಸರಕಾರಿ ಶಾಲೆಗಳಲ್ಲಿ 10, ವಸತಿ ನಿಲಯಗಳಲ್ಲಿ 5 ಹಾಗೂ ವಿದ್ಯಾರ್ಥಿನಿಲಯಗಳಲ್ಲಿ 12 ಪ್ರಕರಣಗಳು ದಾಖಲಾಗಿವೆ. ಮಾನಸಿಕ ಒತ್ತಡ, ವೈಯಕ್ತಿಕ ಸಮಸ್ಯೆಗಳು ಮತ್ತು ಆನ್‌ಲೈನ್ ಜೂಜಾಟಗಳು ಇದಕ್ಕೆ ಕಾರಣವೆಂದು ಊಹಿಸಲಾಗಿದೆ. ನಾಡಿನಾದ್ಯಂತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚ್ಚುತ್ತಿರುವುದನ್ನು ಸರಕಾರ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಇತ್ತೀಚೆಗಂತೂ ಈ ಆತ್ಮಹತ್ಯೆಗಳಿಗೆ ಮೊಬೈಲ್‌ಗಳನ್ನೇ ಹೊಣೆ ಮಾಡಿ, ಸಮಾಜ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಪಿಯುಸಿ ಮತ್ತು ಎಸ್ಸೆಸೆಲ್ಸಿ ಪರೀಕ್ಷೆಗಳು ಹತ್ತಿರ ಬರುವಾಗ ಅಥವಾ ಫಲಿತಾಂಶ ಘೋಷಣೆಯಾದ ಬೆನ್ನಿಗೇ ಹೆಚ್ಚುವ ಆತ್ಮಹತ್ಯೆಯ ಹಿಂದೆ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಶಾಲೆ, ಕಾಲೇಜುಗಳು ಮತ್ತು ಪೋಷಕರು ಜೊತೆಯಾಗಿ ವಿದ್ಯಾರ್ಥಿಗಳ ಮೇಲೆ ಹೇರುವ ಒತ್ತಡ ಅಂತಿಮವಾಗಿ ಆತ್ಮಹತ್ಯೆಗಳಿಗೆ ಕಾರಣವಾಗುತ್ತದೆ. ಶಿಕ್ಷಣವೆಂದರೆ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಎನ್ನುವ ತಪ್ಪು ಕಲ್ಪನೆಯನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಿ, ಗರಿಷ್ಠ ಅಂಕಗಳನ್ನು ಪಡೆಯದ ವಿದ್ಯಾರ್ಥಿಯನ್ನು ನಿಷ್ಪ್ರಯೋಜಕನೆಂದು ನಿಂದಿಸಿ ಆತನನ್ನು ಮಾನಸಿಕವಾಗಿ ಕುಗ್ಗಿಸಿ ಅಂತಿಮವಾಗಿ ಆತನನ್ನು ಆತ್ಮಹತ್ಯೆಯೆಡೆಗೆ ನೂಕುವ ಕೆಲಸದಲ್ಲಿ ಪೋಷಕರು ಕೂಡ ಶಾಮೀಲಾಗುತ್ತಿರುವುದು ವಿಪರ್ಯಾಸವಾಗಿದೆ. ಆದರೆ ವಸತಿ ಶಾಲೆಗಳ ದುರಂತಗಳೇ ಇನ್ನೊಂದು ಬಗೆಯದು. ಬೇರೆ ಬೇರೆ ಜಾತಿ, ಸಮುದಾಯ, ವರ್ಗ, ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಒಂದಾಗಿ ಬದುಕುವುದು ನಮ್ಮ ಸಮಾಜದಲ್ಲಿ ಸಾಮಾನ್ಯ ವಿಷಯವಲ್ಲ. ಜಾತಿ ಮತ್ತು ವರ್ಗ ವ್ಯವಸ್ಥೆ ಇಂತಹ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವೆಯೂ ದುಷ್ಪರಿಣಾಮಗಳನ್ನು ಬೀರುತ್ತವೆ. ಇಲ್ಲಿ, ಕೆಳಜಾತಿಗೆ ಸೇರಿದ ವಿದ್ಯಾರ್ಥಿಗಳು ಅನುಭವಿಸುವ ಸಮಸ್ಯೆ ಒಂದಾದರೆ, ಹೆಣ್ಣುಮಕ್ಕಳು ಅನುಭವಿಸುವ ವೇದನೆಗಳು ಇನ್ನೊಂದು ಬಗೆಯದು. ತಾವು ಅನುಭವಿಸುವ ನೋವು ದುಮ್ಮಾನಗಳನ್ನು ತೋಡಿಕೊಳ್ಳುವ ಅವಕಾಶಗಳೂ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಪರಿಣಾಮವಾಗಿ ಒಂದೋ ಅವರು ಖಿನ್ನತೆಗೊಳಗಾಗುತ್ತಾರೆ. ಇದು ತೀವ್ರವಾದರೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಕೆಲವೊಮ್ಮೆ ಒತ್ತಡಗಳನ್ನು ಭರಿಸಲಾಗದೆ ಅದು ಆಕ್ರೋಶವಾಗಿ ಮಾರ್ಪಟ್ಟರೆ ಹಿಂಸಾಚಾರಕ್ಕೂ ಕಾರಣವಾಗುತ್ತದೆ. ನೈತಿಕ ಶಿಕ್ಷಣವನ್ನು ಕಲಿಸುವ ಮಠಗ ನೇತೃತ್ವದಲ್ಲಿ ನಡೆಯುವ ವಸತಿಶಾಲೆಗಳಲ್ಲಿಯೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಲೌಕಿಕ ಕಾಮನೆಗಳನ್ನು ತೊರೆದ ಸ್ವಾಮೀಜಿಗಳೇ ಎಳೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ ಆರೋಪಗಳಲ್ಲಿ ಸಿಲುಕಿಕೊಂಡಿದ್ದಾರೆ. ಧಾರ್ಮಿಕ ಸಂಘಟನೆಗಳು ನಡೆಸುವ ವಸತಿಶಾಲೆಗಳಲ್ಲಿ ನಡೆಯುವ ಇಂತಹ ದೌರ್ಜನ್ಯಗಳು ಬೆಳಕಿಗೆ ಬರುವುದು ತೀರಾ ಅಪರೂಪ. ಸರಕಾರಿ ವಸತಿ ಶಾಲೆಗಳಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳ ಕುಟುಂಬ ಆರ್ಥಿಕವಾಗಿ ತುಂಬಾ ಹಿಂದುಳಿದಿರುತ್ತವೆ. ಈ ಕಾರಣಕ್ಕೆ ತಮ್ಮ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳ ವಿರುದ್ಧ ಧ್ವನಿಯೆತ್ತಲು ಅಂಜುತ್ತಾರೆ. ಹೇಗಾದರೂ ಶಿಕ್ಷಣ ಮುಗಿಸುವುದಕ್ಕೆ ಸಾಧ್ಯವಾದರೆ ಸಾಕು ಎಂದು ಎಲ್ಲವನ್ನೂ ಸಹಿಸುತ್ತಾರೆ. ಇಂತಹ ವಸತಿಶಾಲೆಗಳಲ್ಲಿ ನಡೆಯುವ ಜಾತಿ ಅಸಮಾನತೆ, ನಿಂದನೆಗಳಲ್ಲಿ ವಸತಿಶಾಲೆಯ ಸಿಬ್ಬಂದಿಯೇ ನೇರವಾಗಿ ಭಾಗಿಯಾಗುತ್ತಾರೆ. ಈ ಕಾರಣಕ್ಕೆ ಎಲ್ಲ ವಸತಿ ಶಾಲೆಗಳಿಗೆ ಕಡ್ಡಾಯವಾಗಿ ಅರ್ಹ ಮನೋವೈದ್ಯರು, ಕೌನ್ಸಿಲರ್ ಅಥವಾ ಸಮಾಜ ಸೇವಕರನ್ನು ನೇಮಿಸಬೇಕು ಮಾತ್ರವಲ್ಲ ತಿಂಗಳಿಗೊಮ್ಮೆ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿ ಅವರ ನೋವು ದುಮ್ಮಾನಗಳನ್ನು ಆಲಿಸಬೇಕು. ಅವರಿಗೆ ಸಿಗುವ ಅಡುಗೆಯ ಗುಣಮಟ್ಟವನ್ನು ಪರೀಕ್ಷಿಸುವ ಕೆಲಸವೂ ಆಗಾಗ ನಡೆಯುತ್ತಿರಬೇಕು. ಮೇಲಧಿಕಾರಿಗಳು ಮಾಸಿಕವಾಗಿ ಅನಿರೀಕ್ಷಿತ ಭೇಟಿಯನ್ನು ನೀಡಿ ಪರಿಶೀಲನೆಗಳನ್ನು ಮಾಡುವುದು ಅತ್ಯಗತ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಸತಿ ಶಾಲೆಯ ವಾರ್ಡನ್‌ಗಳಿಗೆ, ಸಿಬ್ಬಂದಿಗೆ ವಿದ್ಯಾರ್ಥಿಗಳ ಜೊತೆಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ನಡೆದುಕೊಳ್ಳಬಾರದು ಎನ್ನುವ ಕುರಿತಂತೆ ತರಬೇತಿಯನ್ನು ನೀಡಬೇಕು. ಇಲ್ಲದೇ ಇದ್ದರೆ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಬೇಕಾದ ವಸತಿಶಾಲೆಗಳೇ ಅವರ ಭವಿಷ್ಯವನ್ನು ಹಿಸುಕಿ ಹಾಕಬಹುದು.

ವಾರ್ತಾ ಭಾರತಿ 17 Mar 2026 12:40 am

ರಾಜ್ಯ ಬಜೆಟ್‌ನಲ್ಲಿ ರಾಯಚೂರು ಅಭಿವೃದ್ಧಿಗೆ 200 ಕೋಟಿ ರೂ.: ಮೂಲಸೌಕರ್ಯ ಸುಧಾರಣೆಯ ನಿರೀಕ್ಷೆ; ಭರದಿಂದ ಸಾಗಿದೆ ಕಾಮಗಾರಿಗಳು

ರಾಯಚೂರು: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಜ್ಯ ಬಜೆಟ್‌ನಲ್ಲಿ ನೂತನ ರಾಯಚೂರು ಮಹಾನಗರ ಪಾಲಿಕೆಗೆ 200 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನಗರದ ಅಭಿವೃದ್ಧಿಗೆ ಹೊಸ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷವೇ ಪಾಲಿಕೆಗೆ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ಅನುದಾನ ನೀಡಲು ಪಾಲಿಕೆಯಿಂದ ಮನವಿ ಮಾಡಲಾಗಿತ್ತು ಹಾಗೂ ವಿವಿಧ ಕಾಮಗಾರಿಗಳ ನೀಲಿನಕ್ಷೆ ತಯಾರಿಸಲಾಗಿತ್ತು. ಪಾಲಿಕೆಯ ಪ್ರಕಾರ ಈ ಹಿಂದೆ 200 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು ಅದರಂತೆ ಪ್ರಸ್ತುತ 2026-27ನೇ ಸಾಲಿನಲ್ಲಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ರಾಯಚೂರು ನಗರವು ವೇಗವಾಗಿ ವಿಸ್ತರಿಸುತ್ತಿದ್ದರೂ ಮೂಲಸೌಕರ್ಯ ಅಭಿವೃದ್ಧಿ ಅಗತ್ಯ ಮಟ್ಟದಲ್ಲಿ ನಡೆಯದಿರುವುದು ಹಲವು ವರ್ಷಗಳಿಂದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ನಗರದ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿರುವುದು, ಮಳೆ ಬಂದಾಗ ನೀರು ನಿಲ್ಲುವ ಸಮಸ್ಯೆ, ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆ, ಸ್ಟೇಷನ್ ರಸ್ತೆ, ಬಸವೇಶ್ವರ ರಸ್ತೆ, ಜಿಪಂಮುಂಭಾಗ, ಚಂದ್ರಮೌಳೇಶ್ವರ ರಸ್ತೆ, ಗಂಜ್ ರಸ್ತೆ ಸೇರಿ ಹಲವೆಡೆ ಫುಟ್‌ಪಾತ್ ಅತುಕ್ರಮಣದಿಂದ ಪಾದಾಚಾರಿಗಳಿಗೆ ನಡೆದಾಡಲು ಸಮಸ್ಯೆ ಇದೆ. ಜನಸಂಖ್ಯೆ ಹೆಚ್ಚಳ, ವಾಹನಗಳ ಓಡಾಟಗಳ ಸಂಖ್ಯೆಯೂ ಹೆಚ್ಚಾದರೂ ರಸ್ತೆಗಳ ಅಗಲೀಕರಣ ಆಗುತ್ತಿಲ್ಲ, ಆದರೆ ರಾಯಚೂರು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಪಾಲಿಕೆಯ ಆಯುಕ್ತ ಜುಬೀನ್ ಮೊಹಾಪಾತ್ರ, ಜಿಲ್ಲಾಧಿಕಾರಿ ನಿತಿಶ್.ಕೆ ಅವರು ವಿಶೇಷ ಕಾಳಜಿಯಿಂದ ಅನೇಕ ಸುಧಾರಣೆಯಾಗಿದೆ. ಈಗ ಬಜೆಟ್‌ನಲ್ಲಿ 200ಕೋಟಿ ರೂ. ಬಿಡುಗಡೆಯಾಗಿದ್ದು ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. ನಗರದಲ್ಲಿನ ಸ್ಲಂ ಪ್ರದೇಶ, ಪ್ರತಿಷ್ಠಿತರ ಕಾಲನಿ ಎಂದು ಹೇಳುವ ನಿಜಲಿಂಗಪ್ಪ ಕಾಲನಿ, ಆಜಾದ್ ನಗರ, ಸ್ಟೇಷನ್ ರಸ್ತೆ, ಮಂತ್ರಾಲಯ ರಸ್ತೆ, ಆಶಾಪುರ ರಸ್ತೆಯ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಧಿಕಾರಿಗಳು, ರಾಜಕೀಯ ಗಣ್ಯ ವ್ಯಕ್ತಿಗಳು ವಾಸವಾಗಿದ್ದರು ಕೂಡ ಹದಗೆಟ್ಟ ರಸ್ತೆಯಿಂದ ಬಡಾವಣೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಜನರಿಗೆ ತೊಂದರೆ ಉಂಟಾಗುತ್ತಿದೆ. ಹೊಸ ಡ್ರೈನೇಜ್ ವ್ಯವಸ್ಥೆ ನಿರ್ಮಾಣ ಹಾಗೂ ಹಳೆಯ ಒಳಚರಂಡಿಗಳ ದುರಸ್ತಿ ಮಾಡಿದರೆ ಈ ಸಮಸ್ಯೆ ಕಡಿಮೆಯಾಗಲಿದೆ ಎಂದು ನಾಗರಿಕರು ನಿರೀಕ್ಷಿಸಿದ್ದಾರೆ. ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯಲ್ಲಿಯೂ ಸುಧಾರಣೆಯಾಗಬೇಕಿದೆ. ಕೆಲವು ಪ್ರದೇಶಗಳಲ್ಲಿ ನೀರಿನ ಪೈಪ್‌ಲೈನ್ ಹಳೆಯದಾಗಿ,ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹಲವೆಡೆ ಚರಂಡಿ ಪಕ್ಕದಲ್ಲೇ ನಳದ ಪೈಪ್‌ಲೈನ್ ಇರುವುದರಿಂದ ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂಬ ಆರೋಪವಿದೆ. ಪಾಲಿಕೆಯ ಗಮನಕ್ಕೂ ಬಂದಿದ್ದು ಸರಿಪಡಿಸುವ ಕೆಲಸ ನಡೆಯುತ್ತಿದೆ. ಭರದಿಂದ ಸಾಗಿದ ರಸ್ತೆ ಕಾಮಾಗಾರಿಗಳು: ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಈಗಾಗಲೇ ನಗರದ ರಾಂಪೂರ ರಸ್ತೆಯಲ್ಲಿ ಡಾಂಬರೀಕರಣ, ಎಲ್‌ಬಿಎಸ್ ನಗರದಿಂದ ಆಶ್ರಯ ಕಾಲನಿಗೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ, ಸ್ಲ್ಯಾಬ್ ಅಳವಡಿಕೆ, ಸಿಯತಲಾಬ್ ಹಾಗೂ ಭಂಗಿಕುಂಟಾ ಮತ್ತಿತರೆಡೆ ರಾಜಕಾಲುವೆ ಸ್ವಚ್ಛತೆ,ಹಲವೆಡೆ ಒಳಚರಂಡಿ ಕಾಮಗಾರಿ, ಪ್ರಮುಖ ರಸ್ತೆಗಳಲ್ಲಿ ಧೂಳು ನಿಯಂತ್ರಣ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಿ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿದೆ. ಸಚಿವರ, ವಿಧಾನ ಪರಿಷತ್ ಸದಸ್ಯರ ಸಹಕಾರದಿಂದ ಅನುದಾನ: ಮಹಾನಗರ ಪಾಲಿಕೆಯಾದ ಬಳಿಕ ಒತ್ತುವರಿಯಾಗಿ ನಶಿಸುತ್ತಿದ್ಧ ಮಾವಿನಕೆರೆ ಅಭಿವೃದ್ಧಿಗೆ ಸಚಿವ ಎನ್.ಎಸ್ ಬೋಸರಾಜು ಅವರಿಂದ ಕಾಯಕಲ್ಪ ಸಿಕ್ಕಿದೆ, ಹಲವು ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ವಿಧಾನಪರಿಷತ್ ಸದಸ್ಯ ಎ.ವಸಂತ ಕುಮಾರ ಅವರು ತಮ್ಮ ಕ್ಷೇತ್ರದ ಅನುದಾನದಿಂದ ನೆರವಾಗುತ್ತಿದ್ದಾರೆ. ಆದರೆ ರಿಂಗ್ ರಸ್ತೆಯ ಬಹಳ ಅವಶ್ಯಕತೆ ಇದ್ದರೂ ಕೈತಪ್ಪಿದ್ದು ಶಾಸಕ ಡಾ.ಶಿವರಾಜ ಪಾಟೀಲರು ತಾವು ವಿರೋಧ ಪಕ್ಷದಲ್ಲಿರುವುದರಿಂದಲೇ ನನ್ನ ಕ್ಷೇತ್ರಕ್ಕೆ ಹೆಚ್ಚಿನಯೋಜನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಈಗ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಭ್ರಷ್ಟಾಚಾರ ರಹಿತ ಆಡಳಿತ,ಕಾಮಗಾರಿ ನಡೆಸಿದರೆ ತಕ್ಕ ಮಟ್ಟಿಗೆ ಅಭಿವೃದ್ಧಿ ಆಗಬಹುದು ಎಂದು ನಾಗರಿಕರ ಅಭಿಪ್ರಾಯವಾಗಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಂಪೂರ ಕೆರೆಯ ಕುಡಿಯುವ ನೀರು ಶುದ್ಧೀಕರಣ ಘಟಕದ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಜೊತೆಗೆ ರಾಂಪೂರ ರಸ್ತೆ ಸೇರಿದಂತೆ ನಗರದಲ್ಲಿನ ಹಲವೆಡೆ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯವೂ ಪ್ರಗತಿಯಲ್ಲಿದೆ. ನಗರದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯವರ್ಧನೆಗೆ ಸಂಬಂಧಿಸಿದ ಕಾರ್ಯಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಸ್ಥಳಗಳ ಸುಧಾರಣೆ ಮಾಡಲಾಗುವುದು. -ಜುಬಿನ್ ಮೊಹಪಾತ್ರ ಮಹಾನಗರಪಾಲಿಕೆಯಆಯುಕ್ತರು

ವಾರ್ತಾ ಭಾರತಿ 10 Mar 2026 2:59 pm

ಪ್ರಾಣ ಘಾತುಕ ರಸ್ತೆ ಅಪಘಾತಗಳು

ಸಾಂದರ್ಭಿಕ ಚಿತ್ರ PC: freepik ನಮ್ಮ ಕರ್ನಾಟಕ ಮಾತ್ರವಲ್ಲ, ದೇಶದ ಅನೇಕ ಕಡೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸರಕಾರ ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ರಸ್ತೆ ಅಪಘಾತಗಳಲ್ಲಿ ಸಾಯುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ರಸ್ತೆ ಅಪಘಾತ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಅವರು ಆಗಾಗ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ವಾಸ್ತವ ಸಂಗತಿಯೆಂದರೆ ಕೊರೋನ ವೈರಾಣುನಿಂದ ಸಾವಿಗೀಡಾದವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಜಾಗತಿಕ ವಾಹನ ಚಾಲನಾ ಶಿಕ್ಷಣ ಕಂಪೆನಿಯೊಂದು ನಡೆಸಿದ ಸಮೀಕ್ಷೆಯ ವರದಿಯ ಪ್ರಕಾರ ಜಗತ್ತಿನಲ್ಲಿ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಒಳನಾಡಿನ ರಸ್ತೆಗಳು ಈಗ ಸಾಕಷ್ಟು ಸುಧಾರಿಸಿವೆ. ಈಗ ಎಲ್ಲೆಡೆ ಸುಸಜ್ಜಿತ ಚತುಷ್ಪಥ ರಸ್ತೆಗಳಿವೆ. ಆದರೆ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ಇದರಿಂದ ಬೆಳಕಿಗೆ ಬಂದ ಇನ್ನೊಂದು ಸಂಗತಿಯೆಂದರೆ ಅಪಘಾತಗಳಿಗೆ ರಸ್ತೆಗಳು ಮಾತ್ರವಲ್ಲ, ಬಹುತೇಕ ವಾಹನ ಚಾಲಕರು ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕೂಡ ಕಾರಣವಾಗಿದೆ. ಇದರ ಪರಿಣಾಮವಾಗಿ ಅಪಘಾತಗಳು ಹೆಚ್ಚಾಗುತ್ತಲೇ ಇವೆ.ರಸ್ತೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕಿ ಎಚ್ಚರಿಕೆ ನೀಡಿದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಇದರಿಂದಾಗಿ ಸರಕಾರ ಇನ್ನೊಂದು ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ದೇಶದಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ನಿಯಂತ್ರಿಸಲು ಅಂಕ ಆಧಾರಿತ ದಂಡ ಪದ್ಧತಿಯನ್ನು ಜಾರಿಗೆ ತರಲು ಕ್ರಮ ಕೈಗೊಂಡಿದೆ. ಪ್ರತೀ ಸಲ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಾಗ ಚಾಲನಾ ಪರವಾನಿಗೆಯಿಂದ ನಿರ್ದಿಷ್ಟ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಒಬ್ಬ ಚಾಲಕನು ಗರಿಷ್ಠ ಮಿತಿಯನ್ನು ಮೀರಿದರೆ ತಕ್ಷಣ ಅವನ ವಾಹನ ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ. ಮದ್ಯ ಸೇವಿಸಿ ವಾಹನ ಚಲಾಯಿಸುವುದು ಹಾಗೂ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ಮುಂತಾದ ಅಪರಾಧಗಳಿಗಾಗಿ ಹೆಚ್ಚಿನ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಈ ಹೊಸ ಕ್ರಮಗಳಿಂದ ವಾಹನ ಅಪಘಾತಗಳ ಸಂಖ್ಯೆ ಕಡಿಮೆಯಾಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ರಸ್ತೆ ಅಪಘಾತಗಳಿಗೆ ಒಂದೆರಡು ಕಾರಣಗಳಲ್ಲ, ಹಲವಾರು ಕಾರಣಗಳಿವೆ. ವೇಗದ ವಾಹನ ಚಾಲನೆ, ಅಜಾಗರೂಕತೆಯ ಚಾಲನೆ, ಸಿಗ್ನಲ್ ಜಂಪ್ ಮಾಡುವುದು, ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವುದು ಇತ್ಯಾದಿ ಲೋಪಗಳು ಹೆಚ್ಚಾಗುತ್ತಿರುವುದು ಕೂಡಾ ಅಪಘಾತಗಳಿಗೆ ಕಾರಣವಾಗಿವೆ. ಹೀಗಾಗಿ ಹೊಸದಾಗಿ ಜಾರಿಗೆ ತರಲಿರುವ ಕಠಿಣವಾದ ಸಂಚಾರ ನಿಯಮದ ಪರಿಣಾಮವಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ರಾಜ್ಯದಲ್ಲೂ ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಇನ್ನೊಂದು ಕಾರಣವೆಂದರೆ ರಸ್ತೆಗಳಲ್ಲಿ ಆಗಾಗ ಒಳಚರಂಡಿ ಇತ್ಯಾದಿ ಕಾಮಗಾರಿಗಳಿಗೆ ಹೊಂಡತೆಗೆದು ಸಮರ್ಪಕವಾಗಿ ಅದನ್ನು ಮುಚ್ಚದಿರುವುದು. ಇಂತಹ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಸಮತೋಲನ ಕಳೆದುಕೊಳ್ಳುವುದರಿಂದಾಗಿ ಅಪಘಾತಗಳಾಗುತ್ತ್ತವೆೆ. ಇದರ ಜೊತೆಗೆ ಅವೈಜ್ಞಾನಿಕ ರಸ್ತೆ ವಿನ್ಯಾಸಗಳು ಹಾಗೂ ಸರಿಯಾದ ಫಲಕಗಳಿಲ್ಲದಿರುವುದು ವಾಹನ ಚಾಲಕರನ್ನು ಗೊಂದಲಕ್ಕೀಡು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಕಠಿಣ ನಿಯಮಾವಳಿಗಳು ಒಂದಿಷ್ಟು ಪ್ರಯೋಜನಕಾರಿಯಾಗಿವೆ. ನಿಯಮ ಉಲ್ಲಂಘಿಸುವ ವಾಹನ ಚಾಲಕರು ದಂಡಕ್ಕೆ ಹೆದರುವುದಿಲ್ಲ, ಆದರೆ ಡಿ.ಎಲ್.(ವಾಹನ ಚಾಲನಾ ಪರವಾನಿಗೆ ಪತ್ರ) ಕಳೆದುಕೊಳ್ಳಬಹುದು ಎಂಬ ಭಯದಿಂದ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಲು ಇನ್ನಾದರೂ ಮುಂದಾಗಬಹುದು. ಈಗ ನಗರ ಪ್ರದೇಶಗಳಲ್ಲಿ ಅಳವಡಿಸಲಾಗುವ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಕ್ಯಾಮರಾ ತಾನಾಗಿಯೇ ವಾಹನದ ನಂಬರ್ ಪ್ಲೇಟ್‌ಗಳನ್ನು ಗುರುತಿಸಿ ತಪ್ಪಿತಸ್ಥ ವಾಹನ ಚಾಲಕರ ಲೈಸನ್ಸ್‌ಗೆ ಅಂಕಗಳನ್ನು ಸೇರಿಸುತ್ತದೆ. ಆದ್ದರಿಂದ ಇನ್ನು ಮುಂದೆ ರಸ್ತೆಯಲ್ಲಿ ಪೊಲೀಸರು ಇರಲಿ, ಇಲ್ಲದಿರಲಿ ರಸ್ತೆ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಮಾತ್ರವಲ್ಲ, ಅನಿವಾರ್ಯವಾಗುತ್ತದೆ. ಸರಕಾರ ಇಂತಹ ರಸ್ತೆ ನಿಯಮಾವಳಿಗಳನ್ನು ರೂಪಿಸಿದರೆ ಸಾಲದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ವಾಹನ ಚಾಲಕರು ಮಾತ್ರ ಕಾರಣವೆಂದರೆ ತಪ್ಪಾಗುತ್ತದೆ. ನಮ್ಮ ಮಹಾನಗರಗಳು ಹಾಗೆಯೇ ಸಣ್ಣಪುಟ್ಟ ಪಟ್ಟಣಗಳಲ್ಲಿ ಕಳಪೆಯಾದ ರಸ್ತೆ ನಿರ್ವಹಣೆ, ಕಿತ್ತು ಹೋದ ಡಾಂಬರು, ಅವೈಜ್ಞಾನಿಕ ಜಾಮರ್‌ಗಳು, ಅಸುರಕ್ಷಿತ ತಿರುವುಗಳು, ದಾರಿ ತುಂಬಾ ಜೀವ ತೆಗೆಯುವ ಗುಂಡಿಗಳು, ಪಾದಚಾರಿ ಮಾರ್ಗದ ಒತ್ತುವರಿ, ಏಕಾಏಕಿ ರಸ್ತೆಗೆ ನುಗ್ಗುವ ಪಾದಚಾರಿಗಳು ಹೀಗೆ ನಾನಾ ಕಾರಣಗಳಿವೆ. ಇದರ ಜೊತೆಗೆ ಬೇಕಾಬಿಟ್ಟಿ ವಾಹನ ಚಾಲನೆ, ಎಲ್ಲ ಸೇರಿ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಅಪಘಾತಗಳಿಗೆ ಇದಲ್ಲದೆ ಇನ್ನೂ ಒಂದು ಮುಖ್ಯ ಕಾರಣವಿದೆ. ಜನರ ಅಗತ್ಯಕ್ಕಿಂತ ಹೆಚ್ಚು ವಾಹನಗಳು ರಸ್ತೆಗಿಳಿಯುತ್ತಿರುವುದು ಕೂಡ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ನಗರಗಳಲ್ಲಿ ಮೂವರು ಸದಸ್ಯರನ್ನು ಹೊಂದಿರುವ ಕುಟುಂಬಗಳಲ್ಲಿ ಮೂರ್ನಾಲ್ಕು ಕಾರುಗಳು, ಮೂರ್ನಾಲ್ಕು ದ್ವಿಚಕ್ರ ವಾಹನಗಳಿರುತ್ತವೆ. ಇದರಿಂದಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಸರಕಾರವು ವಾಹನಗಳ ವಹಿವಾಟಿನ ಮೇಲೆ ಇನ್ನಾದರೂ ನಿಗಾ ಇಡುವುದು ತುರ್ತು ಅಗತ್ಯವಾಗಿದೆ. ಆಟೊಮೊಬೈಲ್ ಉದ್ದಿಮೆಯನ್ನು ಕಾಪಾಡಲು ಜನಸಾಮಾನ್ಯರ ಅಮೂಲ್ಯ ಜೀವವನ್ನು ಬಲಿಕೊಡುವುದು ಸರಿಯಲ್ಲ. ಸಾರ್ವಜನಿಕರು ಕೂಡ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ವಾರ್ತಾ ಭಾರತಿ 10 Mar 2026 8:46 am