ಬೆಳಗಾವಿಯಲ್ಲಿ ವರದಕ್ಷಿಣೆಗಾಗಿ 20 ವರ್ಷದ ಪತ್ನಿ ಕೊಲೆ; ಮೃತದೇಹ ಮಂಚದ ಕೆಳಗಿಟ್ಟು ಪತಿ ಪರಾರಿ
ವರದಕ್ಷಿಣೆಗಾಗಿ ಪತ್ನಿಯನ್ನು ಕೊಂದು ಮಂಚದ ಕೆಳಗೆ ಮುಚ್ಚಿಟ್ಟು ಪತಿ ಪರಾರಿಯಾದ ಘಟನೆ ಬೆಳಗಾವಿಯಮೂಡಲಗಿ ತಾಲೂಕಿನಲ್ಲಿ ನಡೆದಿದೆ. ಮದುವೆಯಾಗಿ ನಾಲ್ಕು ತಿಂಗಳೊಳಗೆ ಈ ಘಟನೆ ನಡೆದಿದೆ. ಮೃತ ಯುವತಿ ಇಪ್ಪತ್ತು ವರ್ಷದ ಸಾಕ್ಷಿ ಆಕಾಶ ಕುಂಬಾರ ಎಂದು ಪೊಲೀಸರು ಗುರುತಿಸಿದ್ದಾರೆ. ಈಗಾಗಲೇ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಸಾಕ್ಷಿಯ ಅತ್ತೆಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎನ್ನಲಾಗುತ್ತಿದೆ
ಗಾಝಾ ಕದನ ವಿರಾಮಕ್ಕೆ ಇಸ್ರೇಲ್–ಹಮಾಸ್ ಒಪ್ಪಿಗೆ
ಮೊದಲ ಹಂತದ ಶಾಂತಿ ಮಾತುಕತೆ ಯಶಸ್ವಿ: ಟ್ರಂಪ್ ಘೋಷಣೆ
Karuru Stampede: ʻರಾಜಕೀಯದಲ್ಲಿಇನ್ಮುಂದೆ ಎಚ್ಚರಿಕೆಯಿಂದ ಯೋಚಿಸಿ ಹೆಜ್ಜೆ ಇಡ್ಬೇಕುʼ: ನಟ ವಿಜಯ್ಗೆ ಶಿವಣ್ಣ ಸಲಹೆ
ತಮಿಳುನಾಡಿನ ತಿರುಚೆಂದೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ತಮ್ಮ ಮುಂದಿನ ಸಿನಿಮಾ ಡಿಸೆಂಬರ್ನಲ್ಲಿ ರಿಲೀಸ್ ಆಗಲಿದೆ ಎಂದು ಅಪಡೇಟ್ ಕೊಟ್ಟರು. ಅದರ ಜೊತೆಗೆ ವಿಜಯ್ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಅವರು, ಇನ್ಮುಂದೆ ವಿಜಯ್ ತಮ್ಮ ರಾಜಕೀಯ ಜೀವನದಲ್ಲಿ ಸರಿಯಾದ ನಿರ್ಧಾರ ಕೈಗೊಂಡು ಮುಂದಿನ ಹೆಜ್ಜೆ ಇಡಬೇಕು. ರಾಜಕೀಯಕ್ಕೆ ಬಂದಿದ್ದು ಸ್ವಾಗತಾರ್ಹ ಜನರಿಗೆ ಒಳ್ಳೆ ಕೆಲಸ ಮಾಡಿಕೊಡುತ್ತಾರೆ ಎಂದರು.
ಟ್ರಂಪ್ ಶಾಂತಿ ಯೋಜನೆಗೆ ಹಮಾಸ್ ಗ್ರೀನ್ ಸಿಗ್ನಲ್, 20 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗೆ ಒಪ್ಪಿಗೆ
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಶಾಂತಿ ಒಪ್ಪಂದದ ಮೊದಲ ಹಂತಕ್ಕೆ ಸಹಿ ಬಿದ್ದಿದೆ. ಹಮಾಸ್ 20 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ 2,000 ಪ್ಯಾಲೆಸ್ತೀನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಲಿದೆ. ಈ ಒಪ್ಪಂದವು ಗಾಜಾದಲ್ಲಿ ಯುದ್ಧದ ಅಂತ್ಯ, ಇಸ್ರೇಲ್ ಪಡೆಗಳ ಹಿಂತೆಗೆತ ಮತ್ತು ಗಾಜಾಗೆ ಅಂತಾರಾಷ್ಟ್ರೀಯ ನೆರವಿನ ಪ್ರವೇಶವನ್ನು ಖಚಿತಪಡಿಸುತ್ತದೆ.
Rain Alert: 48 ಗಂಟೆ ಭಾರಿ ಮಳೆ, ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಅಲರ್ಟ್...
2025 ಇನ್ನೇನು ಮುಗಿಯುತ್ತಾ ಬಂತು, ಆದರೆ ಈ ವರ್ಷ ಮಳೆರಾಯ ಮಾತ್ರ ನಿಲ್ಲುವ ಯಾವುದೇ ರೀತಿ ಲಕ್ಷಣ ಕಾಣಿಸುತ್ತಿಲ್ಲ. ವರ್ಷದ ಆರಂಭದಿಂದಲೂ ಬರೀ ಮಳೆಯ ಆರ್ಭಟಕ್ಕೆ ಸಿಲುಕಿ ಒದ್ದಾಡಿರುವ ಕನ್ನಡ ನಾಡಿಗೆ ಮತ್ತೊಂದು ಸ್ಫೋಟಕ ಸುದ್ದಿ ಸಿಕ್ಕಿದೆ. ಚಂಡಮಾರುತ &ವಾಯುಭಾರ ಕುಸಿತದಿಂದ ಇದೀಗ ಮತ್ತೆ ಭಾರಿ ದೊಡ್ಡ ಮಟ್ಟದಲ್ಲಿ ಮಳೆ ಶುರುವಾಗಿದೆ. ಅದರಲ್ಲೂ 48 ಗಂಟೆ
ಬೆಂಗಳೂರಿನಿಂದ ಮತ್ತೊಂದು ವಂದೇ ಭಾರತ್ ರೈಲು, ಎಲ್ಲಿಗೆ? ಎರಡು ರಾಜ್ಯಗಳ ಜನರಿಗೆ ಅನುಕೂಲ
ಬೆಂಗಳೂರು ಮತ್ತು ಕೇರಳದ ಎರ್ನಾಕುಲಂ ನಡುವೆ ನವೆಂಬರ್ ಮಧ್ಯಭಾಗದಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ. ಈ ಹೊಸ ರೈಲು ಸೇವೆಯಿಂದ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವರು ಹೇಳಿದ್ದಾರೆ. ಬೆಂಗಳೂರಿನಲ್ಲಿರುವ ಮಲಯಾಳಿ ಸಮುದಾಯಕ್ಕೆ ಇದರಿಂದ ಅನುಕೂಲವಾಗಲಿದೆ ಎಂದಿರುವ ಅವರು, ಈ ಮಾರ್ಗದಲ್ಲಿ ಹೆಚ್ಚಿನ ರೈಲು ಸೇವೆಗೆ ಬೇಡಿಕೆ ಇತ್ತು ಎಂದು ತಿಳಿಸಿದ್ದಾರೆ.
ರಾತ್ರೋರಾತ್ರಿ ಬಿಗ್ಬಾಸ್ ಮನೆ ಬೀಗ ತೆರವಿಗೆ ಡಿಕೆ ಶಿವಕುಮಾರ್ ಸೂಚನೆ, ಥ್ಯಾಂಕ್ಸ್ ಹೇಳಿದ ಕಿಚ್ಚ ಸುದೀಪ್
ಬಿಗ್ಬಾಸ್ ಚಿತ್ರೀಕರಣ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ಗೆ ಮಾಲಿನ್ಯ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಮಂಗಳವಾರ ಬೀಗ ಜಡಿಯಲಾಗಿತ್ತು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರ ಮಧ್ಯಸ್ಥಿಕೆಯಿಂದ ಪರಿಸರ ನಿಯಮ ಪಾಲನೆಗೆ ಅವಕಾಶ ನೀಡಿ, ಬೀಗ ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಸೂಚನೆಯನ್ನು ನೀಡಲಾಗಿದೆ. ಕನ್ನಡ ಚಿತ್ರರಂಗಕ್ಕೆ ಬೆಂಬಲ ನೀಡುವುದಾಗಿ ಡಿಸಿಎಂ ಭರವಸೆ ನೀಡಿದ್ದು, ಡಿಕೆಶಿ ನಡೆಗೆ ಕಿಚ್ಚ ಸುದೀಪ್ ಧನ್ಯವಾದ ಹೇಳಿದ್ದಾರೆ.
ಬೆಂಗಳೂರು | ಸಿಜೆಐಗೆ ಶೂ ಎಸೆದ ಕೃತ್ಯ ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ
ಬೆಂಗಳೂರು, ಅ.8: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಕೃತ್ಯವನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘ ಬುಧವಾರ ಹೈಕೋರ್ಟ್ನ 'ಗೋಲ್ಡನ್ ಗೇಟ್' ಎದುರು ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ನ್ಯಾಯಾಂಗವು ಪ್ರಜಾಪ್ರಭುತ್ವದ ಅಡಿಗಲ್ಲು, ವಕೀಲರೊಬ್ಬರು ಸಿಜೆಐಗೆ ಎಸೆದ ಕೃತ್ಯವು ಪ್ರಜಾಪ್ರಭುತ್ವದ ಕಂಬಗಳನ್ನು ಅಲ್ಲಾಡಿಸುವ ಪ್ರಯತ್ನವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಘಟನೆ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುತ್ತದೆ ಎಂದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ನ್ಯಾಯಾಂಗವನ್ನು ದುರ್ಬಲಗೊಳಿಸಲು ನ್ಯಾಯಾಂಗದ ಮೇಲೆ ಅನೇಕ ಬಾರಿ ಹಲ್ಲೆಗಳು ನಡೆದಿವೆ. ಶೂ ಎಸೆದ ವಕೀಲನನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕೆಂದರು. ಪ್ರತಿಭಟನೆಯಲ್ಲಿ ಎಎಬಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್, ಖಜಾಂಚಿ ಶ್ವೇತಾ, ಎಸ್. ರಾಜು, ಎಂ.ಚಾಮರಾಜ, ಆತ್ಮ ವಿ.ಹಿರೇಮಠ, ತಮ್ಮಯ್ಯ, ಡಿ.ಎಲ್. ಜಗದೀಶ್, ಜಿ.ಆರ್.ಮೋಹನ್, ವೆಂಕಟೇಶ, ಮುನಿಗಂಗಪ್ಪ ಸಹಿತ 40ಕ್ಕೂ ಅಧಿಕ ವಕೀಲರು ಪಾಲ್ಗೊಂಡಿದ್ದರು.
50 ಅಂಗನವಾಡಿ ಕಾರ್ಯಕರ್ತರಿಗೆ ಟ್ಯಾಬ್ಗಳನ್ನು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು, ಅ.8: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬುಧವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಬೆಂಗಳೂರು ನಗರದ 50 ಅಂಗನವಾಡಿ ಕಾರ್ಯಕರ್ತರಿಗೆ ಸುತಾರ ಲರ್ನಿಂಗ್ ಫೌಂಡೇಶನ್ ವತಿಯಿಂದ ಟ್ಯಾಬ್ ಗಳನ್ನು ವಿತರಿಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕ ಮಹೇಶ್ ಬಾಬು, ಬೆಂಗಳೂರು ನಗರದ ಉಪ ನಿರ್ದೇಶಕಿ ಸುಮಂಗಲಾ ಮಳಾಪುರ್, ಸುತಾರ ಲರ್ನಿಂಗ್ ಫೌಂಡೇಶನ್ನ ಶಂಕರ್ ಸಿಂಗ್, ನವೀನ್ ಎಂ.ಎಲ್, ಕಾರ್ತಿಕ್ ಸ್ವಾಮಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಮಹಾರಾಣಿ ಕ್ಲಸ್ಟರ್ ವಿವಿ ಅಧ್ಯಾಪಕರ ವೇತನ ಪಾವತಿಗೆ 5.95 ಕೋಟಿ ರೂ. ಬಿಡುಗಡೆ
ಬೆಂಗಳೂರು, ಅ.8: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಒಂಬತ್ತು ಅಧ್ಯಾಪಕರಿಗೆ ವೇತನ ಪಾವತಿಸಲು 5.95 ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ 60 ವರ್ಷ ವಯೋಮಿತಿ ಪೂರೈಸಿದ ನಂತರ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸೇವೆಯಲ್ಲಿ ಮುಂದುವರೆದು ನಿವೃತ್ತರಾಗಿರುವ ಒಬ್ಬರು ಮತ್ತು ಪ್ರಸ್ತುತ ವಿವಿಯ ಕರ್ತವ್ಯದಲ್ಲಿ ಮುಂದುವರೆದಿರುವ ಎಂಟು ಮಂದಿ ಸೇರಿ ಒಟ್ಟು ಒಂಬತ್ತು ಅಧ್ಯಾಪಕರಿಗೆ ವೇತನ ಪಾವತಿಸಲು ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜು ಶಿಕ್ಷಣ ಇಲಾಖೆಯ ಕೆಲ ಅಧ್ಯಾಪಕರು 60 ವರ್ಷ ವಯೋಮಿತಿ ಮೀರುತ್ತಿದ್ದಂತೆಯೇ ಹೈಕೋರ್ಟ್ನಲ್ಲಿ ದಾವೆ ಹೂಡಿ, ತಡೆಯಾಜ್ಞೆ ಪಡೆದು ಸೇವೆಯಲ್ಲಿ ಮುಂದುವರೆದಿರುತ್ತಾರೆ. ಈ ಅಧ್ಯಾಪಕರಿಗೆ ವೇತನವನ್ನು ಪಾವತಿ ಮಾಡಬೇಕು ಎಂದು ಹೈಕೋರ್ಟ್ನ ಮಧ್ಯಂತರ ತಡೆಯಾಜ್ಞೆಯಲ್ಲಿ ಹೇಳಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ವೇತನ ಬಿಡುಗಡೆಯಾಗದ ಕಾರಣ, ಜೀವನ ನಿರ್ವಹಣೆಗೆ ಹಣವಿಲ್ಲದೆ ಕಷ್ಟಕರವಾಗಿದ್ದು, ತುರ್ತಾಗಿ ವೇತನ ಪಾವತಿಸಬೇಕು ಎಂದು ಈ ಅಧ್ಯಾಪಕರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಅಧ್ಯಾಪಕರಿಗೆ ವೇತನ ಪಾವತಿಸಲು ವಿಶ್ವವಿದ್ಯಾಲಯದಲ್ಲಿ ಹಣವಿರುವುದಿಲ್ಲ. ವಿಶ್ವವಿದ್ಯಾಲಯದಲ್ಲಿ ಇರುವ ಹಣವನ್ನು ಅಭಿವೃದ್ಧಿ ಕಾರ್ಯ, ಶೈಕ್ಷಣಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೋರ್ಟ್ನ ತಡೆಯಾಜ್ಞೆ ಅನ್ವಯ ಅಧ್ಯಾಪಕರಿಗೆ ವೇತನ/ಬಾಕಿ ವೇತನ ಪಾವತಿಸಲು ಅನುದಾನ ಒದಗಿಸಬೇಕು ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಸಚಿವರು ಸರಕಾರಕ್ಕೆ ಪತ್ರವನ್ನು ಬರೆದಿದ್ದರು. ಹೀಗಾಗಿ, ಸರಕಾರವು ಈ ಅಧ್ಯಾಪಕರಿಗೆ ವೇತನ ಪಾವತಿಸಲು 5.95 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿ, ಆದೇಶ ಹೊರಡಿಸಿದೆ.
ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆತ: ಪ್ರಕರಣ ಖಂಡಿಸಿ ಬೀದಿಗಿಳಿದ ದಲಿತ, ರೈತ, ಕಾರ್ಮಿಕರ ಆಕ್ರೋಶ
ಬೆಂಗಳೂರು, ಅ.8: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿರುವುದನ್ನು ಖಂಡಿಸಿ ಬುಧವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ದಲಿತ, ರೈತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ-ಯುವಜನ, ಸಾಹಿತಿಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ‘ಹಿರಿಯ ವಕೀಲನೊಬ್ಬ ಸಿಜೆಐ ಮೇಲೆ ಶೂ ಎಸೆಯಲು ಪ್ರಯತ್ನ ಮಾಡಿದ್ದರೂ ಅದನ್ನು ಖಂಡಿಸಲು ಪ್ರಧಾನಿ ಮೋದಿ 8 ಗಂಟೆಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ. ವಕೀಲ ಶೂ ಎಸೆದಿರುವುದು ಆಕಸ್ಮಿಕವಲ್ಲ, ಅದರ ಹಿಂದೆ ವ್ಯವಸ್ಥಿತವಾದ ಪಿತೂರಿಯಿದೆ ಎಂದು ದೂರಿದರು. ಭಾರತದಲ್ಲಿ ಹಿಂದುತ್ವ, ಕೋಮುವಾದಿ ಮತ್ತು ಬ್ರಾಹ್ಮಣ್ಯವನ್ನು ಹೇರುವವರು ನಾಚಿಕೆಪಡಬೇಕು. ವಿಶ್ವಗುರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಜಗತ್ತಿನ ಎದುರು ಭಾರತ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ. ದುರಂತ ಎಂದರೆ ಕರ್ನಾಟಕದ ಬಿಜೆಪಿ ನಾಯಕ ಭಾಸ್ಕರ್ ರಾವ್ ಸಿಜೆಐ ಮೇಲೆ ಶೂ ಎಸೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರಿಗೆ ನಾಚಿಕೆಯಿದ್ದರೆ ಭಾಸ್ಕರ್ ರಾವ್ನ್ನು ಕೂಡಲೇ ಆ ಪಕ್ಷದಿಂದ ಹೊರಹಾಕಬೇಕು ಎಂದು ಇಂದೂಧರ ಹೊನ್ನಾಪುರ ಆಗ್ರಹಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಸನಾತನ ಧರ್ಮ ನಿಂತದ್ದು ಅಸಮಾನತೆಯ ಮೇಲೆ. ದಲಿತರಿಗೆ ಒಂದು ಉತ್ತಮ ಹೆಸರಿಟ್ಟುಕೊಳ್ಳುವ ಅಧಿಕಾರವನ್ನು ಮನುಸ್ಮೃತಿ ಕೊಡುವುದಿಲ್ಲ. ಇಂತಹ ಭೀಕರ ಪರಿಸ್ಥಿತಿಯ ನಡುವೆ ಭಾರತದ ವೈವಿಧ್ಯತೆಗೆ ಒಂದು ಸುಂದರವಾದ ವ್ಯಾಕರಣವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಬರೆದರು. ಅದರಿಂದ ಕಳೆದು ಹೋಗುತ್ತಿರುವ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಸನಾತನಿಗಳು ಈ ರೀತಿಯ ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಿಜೆಐ ಮೇಲೆ ಶೂ ಎಸೆದಿರುವ ಘಟನೆ ದೇಶದ ಹಿಂದುಳಿದ, ದಲಿತರ ಎಚ್ಚರಿಕೆಗೆ ಕಾರಣವಾಗಿದೆ. ಇನ್ನೂ ದೊಡ್ಡ ಮಟ್ಟದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ದಂಗೆ ಆಗಬೇಕಿತ್ತು. ರಾಜ್ಯ ಹಾಗೂ ದೇಶದಲ್ಲಿ ಈ ಕೃತ್ಯವನ್ನು ಖಂಡಿಸಿ ಇನ್ನೂ ದೊಡ್ಡಮಟ್ಟದ ಹೋರಾಟಗಳು ನಡೆಯಬೇಕು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು. ದಸಂಸ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ದೇಶದಲ್ಲಿ ಜನರ ಪರವಾಗಿ ಹೋರಾಟ ಮಾಡುವವರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತದೆ. ಜನದ್ರೋಹಿ ಕೆಲಸ ಮಾಡುವವರನ್ನು ರಕ್ಷಿಸಲಾಗುತ್ತದೆ. ಕರ್ನಾಟಕದ ಹೈಕೋರ್ಟ್ಗೆ ಮೊಟ್ಟ ಮೊದಲು ತಳ ಸಮುದಾಯದ ನ್ಯಾಯಮೂರ್ತಿ ಭೀಮಯ್ಯ ಅವರನ್ನು ಅಧಿಕಾರ ಸ್ವೀಕಾರ ಮಾಡಲು ಬಿಟ್ಟಿರಲಿಲ್ಲ’ ಎಂದು ತಿಳಿಸಿದರು. ದೇಶದಲ್ಲಿ ಮನುವಾದಿ ಶಕ್ತಿಗಳು ಸಂವಿಧಾನದ ಮೇಲೆ ದಾಳಿ ಮಾಡುತ್ತಿವೆ. ಮತಗಳನ್ನು ಕದಿಯುವ ಮೂಲಕ ಅಧಿಕಾರಕ್ಕೆ ಬರುತ್ತಿವೆ. ಸಂವಿಧಾನ ವಿರೋಧಿ, ಕೋಮುವಾದಿಗಳನ್ನು ತಿರಸ್ಕಾರ ಮಾಡುವುದು ನಮ್ಮ ಮುಂದೆ ಇರುವ ತೀರ್ಮಾನವಾಗಿದೆ ಎಂದು ಅವರು ತಿಳಿಸಿದರು. ಇತ್ತೀಚಿಗೆ ಗೃಹಮಂತ್ರಿ ಅಮಿತ್ ಶಾ ಡಾ.ಅಂಬೇಡ್ಕರ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು. ಅದಕ್ಕಾಗಿ ಸಂವಿಧಾನದ ಪರವಾಗಿ ಇರುವವರು ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸದಿದ್ದರೆ, ಮತ್ತೊಂದು ಜರ್ಮನಿ, ಫೆಲೆಸ್ತೀನ್ ನಮ್ಮ ಮುಂದೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪತ್ರಕರ್ತ ಡಾ.ಸಿದ್ದನಗೌಡ ಪಾಟೀಲ್, ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಚಿಂತಕ ಶ್ರೀಪಾದ ಭಟ್, ಹಿರಿಯ ವಕೀಲ ವೆಂಕಟೇಶಗೌಡ, ಹೋರಾಟಗಾರ್ತಿ ಕೆ.ಎಸ್.ವಿಮಲಾ ಮತ್ತಿತರರು ಹಾಜರಿದ್ದರು.
ಮಹೇಶ್ ಜೋಶಿ, ಶಿವಾನಂದ ವಿರುದ್ಧ ದೂರು | ಸೂಕ್ತ ಕ್ರಮ ಕೈಗೊಳ್ಳಲು ಸಂಸ್ಕೃತಿ, ಸಹಕಾರ ಇಲಾಖೆಗೆ ಮಹಿಳಾ ಆಯೋಗ ನಿರ್ದೇಶನ
ಬೆಂಗಳೂರು : ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ವಿರುದ್ಧ ಸದಸ್ಯರಾದ ಡಾ.ವಸುಂಧರಾ ಭೂಪತಿ ಅವರು ನೀಡಿದ ದೂರನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಮಹಿಳಾ ಆಯೋಗವು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸಹಕಾರ ಇಲಾಖೆಗೆ ನಿರ್ದೇಶನ ನೀಡಿದೆ. ಬುಧವಾರ ಈ ಕುರಿತು ಮಹಿಳಾ ಆಯೋಗದ ಕಾರ್ಯದರ್ಶಿ, ಸಂಸ್ಕೃತಿ ಇಲಾಖೆಯ ನಿರ್ದೇಶಕರು ಮತ್ತು ಸಹಕಾರ ಉಪನಿಬಂಧಕರಿಗೆ ಪತ್ರ ಬರೆದಿದ್ದು, ವಸುಂಧರಾ ಭೂಪತಿ ಅವರಿಗೆ ರಕ್ಷಣೆ ಒದಗಿಸಿ, ತೆಗೆದುಕೊಂಡ ಕ್ರಮದ ಕುರಿತು ಮಹಿಳಾ ಆಯೋಗಕ್ಕೆ ವರದಿ ನೀಡಬೇಕು ಎಂದು ತಿಳಿಸಿದ್ದಾರೆ. ವಸುಂಧರಾ ಭೂಪತಿ ಅವರು ಕಸಾಪ ಆಜೀವ ಸದಸ್ಯರಾಗಿದ್ದು, ಇತ್ತೀಚೆಗೆ ಅಧ್ಯಕ್ಷ ಮಹೇಶ ಜೋಶಿ ಹಾಗೂ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಸರ್ವ ಸದಸ್ಯರ ಸಭೆಗೆ ವಸುಂಧರಾ ಭೂಪತಿ ಬಂದರೆ ‘ಕುತ್ತಿಗೆ ಹಿಡಿದು ದಬ್ಬುತ್ತೇವೆ’ ಎಂದು ಹೇಳಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಇದರಿಂದ ಅವರು ಮಾನಸಿಕ ಹಿಂಸೆಗೆ ಒಳಗಾಗಿರುವುದಾಗಿ, ಘನತೆಗೆ ಧಕ್ಕೆ ಉಂಟಾಗಿರುವುದಾಗಿ ತಿಳಿಸಿದ್ದು, ಸೂಕ್ತ ಕ್ರಮವಹಿಸಿ, ನ್ಯಾಯ ಮತ್ತು ರಕ್ಷಣೆ ಒದಗಿಸಿರುವ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ಮಹಿಳಾ ಆಯೋಗದ ಕಾರ್ಯದರ್ಶಿ ಪತ್ರದಲ್ಲಿ ತಿಳಿಸಿದ್ದಾರೆ.
ಹನೂರು | ಹುಲಿ ಹತ್ಯೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಕುಟುಂಬಸ್ಥರು
ಹನೂರು, ಅ.8: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹೆಬ್ಬುಲಿಯನ್ನು ಪ್ರತಿಕಾರಕ್ಕೆ ವಿಷವಿಟ್ಟು ಹತ್ಯೆ ಮಾಡಿ ತಲೆ ಮರೆಯಿಸಿಕೊಂಡಿದ್ದ ಆರೋಪಿಯನ್ನು ಕುಟುಂಬಸ್ಥರೇ ಪತ್ತೆ ಹಚ್ಚಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಬುಧವಾರ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಪಚ್ಚೆದೊಡ್ಡಿಯಲ್ಲಿ ನಡೆದಿದ್ದ ಹೆಬ್ಬುಲಿ ಹತ್ಯೆ ಪ್ರಕರಣದ ಆರೋಪಿ ಸಿದ್ದ ತಲೆಮರೆಯಿಸಿಕೊಂಡಿದ್ದನು. ಈತನನ್ನು ಕುಟುಂಬಸ್ಥರೇ ಪತ್ತೆ ಹಚ್ಚಿ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ ಅಪರೂಪದ ಘಟನೆಯಾಗಿದೆ. ಹುಲಿ ಹತ್ಯೆಯ ಮೂವರು ಆರೋಪಿಗಳಾದ ಗೋವಿಂದ, ಅಭಿಷೇಕ ಹಾಗೂ ಹಸುವಿನ ಮಾಲಕ ಚಂದು ತಲೆಮರೆಯಿಸಿಕೊಂಡಿದ್ದು, ಅವರುಗಳ ಪತ್ತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಎಂಎ ಗಫೂರ್ ಉಳ್ಳಾಲ ದರ್ಗಾಕ್ಕೆ ಭೇಟಿ
ಉಳ್ಳಾಲ: ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಎಂ ಎ ಗಫೂರ್ ಬುಧವಾರ ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅವರನ್ನು ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಮತ್ತು ಪದಾಧಿಕಾರಿಗಳು ಬರ ಮಾಡಿ ಕೊಂಡರು. ಬಳಿಕ ಕರಾವಳಿಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಎಂ ಎ ಗಫೂರ್ ಅವರನ್ನು ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭ ದರ್ಗಾ ಕೋಶಾಧಿಕಾರಿ ನಾಝಿಮ್ ರಹ್ಮಾನ್, ಮೇಲಂಗಡಿ ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲ, ಪ್ರದೇಶ ಕಾಂಗ್ರೆಸ್ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ, ದರ್ಗಾ ಸಮಿತಿ ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ಅಮೀರ್ ಕಲ್ಲಾಪು, ಮೊಯ್ದಿನ್ ಪಟ್ಲ, ರಫೀಕ್ ಕೋಡಿ, ಸಾಜಿದ್ ಉಳ್ಳಾಲ್, ಅಶ್ರಫ್ ಕೋಡಿ, ರಫೀಕ್ ಮೇಲಂಗಡಿ, ಸೋಶಿಯಲ್ ಫಾರೂಕ್ ಉಪಸ್ಥಿತರಿದ್ದರು.
ಬೆನ್ನುನೋವು ತಡೆಯಲಾಗದೇ ಎಂಟು ಜೀವಂತ ಕಪ್ಪೆಗಳನ್ನು ನುಂಗಿದ ಚೀನಾ ಅಜ್ಜಿ! ಆಮೇಲೆ ಆಗಿದ್ದು ಘನಘೋರ!
ಬೆನ್ನುನೋವಿನಿಂದ ಬಳಲುತ್ತಿದ್ದ ಝಾಂಗ್ ಎಂಬ 82 ವರ್ಷದ ವೃದ್ಧೆಯೊಬ್ಬರು ಆ ನೋವಿನಿಂದ ಪಾರಾಗಲು ಸ್ಥಳೀಯ ನಾಟಿ ಔಷಧದನ್ವಯ ಎಂಟು ಜೀವಂತ ಕಪ್ಪೆಗಳನ್ನು ನುಂಗಿದ್ದಾರೆ. ಅದರಿಂದ ಆಕೆಗೆ ಅನುಕೂಲವಾಗುವ ಬದಲು ಹೆಚ್ಚಿನ ಅನಾನುಕೂಲವೇ ಆಗಿದೆ. ಆಕೆ ಪಟ್ಟ ಪಾಡು ಯಾರಿಗೂ ಬೇಡ ಎಂಬಂತಾಗಿದೆ ಆಕೆಯ ಸ್ಥಿತಿ. ಈಗ ಅಜ್ಜಿ ಹೇಗಿದ್ದಾರೆ? ಇಲ್ಲಿದೆ ನೋಡಿ ವಿವರಣೆ.
ಅಮ್ಜದ್ ಕೊಲೆ ಪ್ರಕರಣ | ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು
ಶಿವಮೊಗ್ಗ,ಅ.8 : ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹೊಡೆದ ಘಟನೆ ನಗರದ ಹೊರವಲಯದ ಪುರಲೆ ಬಳಿ ನಡೆದಿದೆ. ನಗರದಲ್ಲಿ ಇತ್ತೀಚೆಗೆ ನಡೆದ ಅಮ್ಜದ್ ಕೊಲೆ ಪ್ರಕರಣ ಸಂಬಂಧ ರೌಡಿಶೀಟರ್ ಅಕ್ಬರ್(21) ಎಂಬಾತನನ್ನು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ನ್ಯೂಮಂಡ್ಲಿಯ ನಿವಾಸಿ ಅಕ್ಬರ್ ಮೇಲೆ ಈಗಾಗಲೇ ನಾಲ್ಕಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅಮ್ಜದ್ ಕೊಲೆ ಪ್ರಕರಣದಲ್ಲಿ ಸಹ ಆತ ಆರೋಪಿಯಾಗಿದ್ದಾನೆ. ದೊಡ್ಡಪೇಟೆ ಠಾಣೆ ಪಿಎಸ್ಸೈ ಮಂಜುನಾಥ್ ನೇತೃತ್ವದಲ್ಲಿ ಬಂಧಿಸಲು ತೆರಳಿದ್ದಾಗ ಅಕ್ಬರ್ ಪೊಲೀಸ್ ಸಿಬ್ಬಂದಿ ಚಂದ್ರನಾಯ್ಕ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.ಪಿಎಸ್ಸೈ ಮಂಜುನಾಥ್ ಅವರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಅಕ್ಬರ್ಗೆ ಶರಣಾಗುವಂತೆ ಸೂಚಿಸಿದ್ದಾರೆ. ಪಿಎಸ್ಸೈ ಮಾತು ಧಿಕ್ಕರಿಸಿದ ಅಕ್ಬರ್ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡ ರೌಡಿಶೀಟರ್ ಅಕ್ಬರ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಸಿಬ್ಬಂದಿ ಚಂದ್ರನಾಯ್ಕ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಎನ್.ಎಚ್.ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಬರ್ ಸೇರಿ ಆರು ಜನರ ಬಂಧನ: ಎಸ್ಪಿ ಶಿವಮೊಗ್ಗ,ಅ.8: ಅಮ್ಜದ್ ಕೊಲೆ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆಲ ದಿನಗಳ ಹಿಂದೆ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಮ್ಜದ್ ಕೊಲೆ ಪ್ರಕರಣದಲ್ಲೂ ಅಕ್ಬರ್ ಆರೋಪಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಮ್ಮ ಅಧಿಕಾರಿಗಳು ಅಕ್ಬರ್ಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ತೆರಳಿದಾಗ, ನಮ್ಮ ಸಿಬ್ಬಂದಿ ಮೇಲೆ ಆತ ಹಲ್ಲೆಗೆ ಮುಂದಾಗಿದ್ದಾನೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ, ಪಿಎಸ್ಸೈ ಮಂಜುನಾಥ್ ಅವರು ಆತ್ಮರಕ್ಷಣೆಗಾಗಿ ರೌಡಿಶೀಟರ್ ಅಕ್ಬರ್ನ ಎಡಗಾಲಿಗೆ ಫೈರ್ ಮಾಡಿ ಬಂಧಿಸಿದ್ದಾರೆ. ಅಕ್ಬರ್ ಒಬ್ಬ ರೌಡಿಶೀಟರ್ ಆಗಿದ್ದು, ಈತನ ಮೇಲೆ ಗಂಭೀರ ಪ್ರಕರಣಗಳಿವೆ. ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ
ಸೋಮವಾರಪೇಟೆ | ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಅಧ್ಯಕ್ಷೆ; 25 ಸಾವಿರ ರೂ. ಲಂಚ ಪಡೆದ ಆರೋಪ
ಮಡಿಕೇರಿ, ಅ.8: ತುಂಡು ಕಾಮಗಾರಿ ಗುತ್ತಿಗೆದಾರನ ಬಿಲ್ ಮೊತ್ತ ಪಾವತಿಸಲು 25 ಸಾವಿರ ರೂ. ಲಂಚ ಪಡೆದ ಆರೋಪದಡಿ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ ಹಿರೇಶ್ ಎಂಬವರನ್ನು ಕೊಡಗು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರಸಂತೆ ಹೋಬಳಿ ಒಡೆಯನಪುರ ಗ್ರಾಮ ನಿವಾಸಿ ಡಿ ದರ್ಜೆ ಗುತ್ತಿಗೆದಾರ ಹಮೀದ್ ಎಸ್.ಎ. ಎಂಬವರು ಹಂಡ್ಲಿ ಗ್ರಾಮ ಪಂಚಾಯತ್ನಲ್ಲಿ ಪಡೆದಿರುವ ತುಂಡು ಗುತ್ತಿಗೆ ಕಾಮಗಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ಹುಲುಸೆ ಗ್ರಾಮದ ಭರತ್ ಎಂಬವರನ್ನು ನೇಮಿಸಿಕೊಂಡಿದ್ದರು. 15ನೇ ಹಣಕಾಸು ಅನುದಾನದಡಿ 2 ಕಾಮಗಾರಿಗಳು ಹಾಗೂ ಇತರ 6 ಕಾಮಗಾರಿಗಳ ಒಟ್ಟು ಮೊತ್ತ 14,79,700 ರೂ. ಮಂಜೂರು ಮಾಡಲು ಹಂಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಧಾ ಹಿರೇಶ್ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಗುತ್ತಿಗೆದಾರ ಹಮೀದ್ ಎಸ್.ಎ. ಅವರಿಗೆ ಭರತ್ ತಿಳಿಸಿದ ಸಂದರ್ಭ ಅಧ್ಯಕ್ಷರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡುವಂತೆ ಹೇಳಿದ್ದರು. ಅದರಂತೆ ಭರತ್ ಮಡಿಕೇರಿ ಲೋಕಾಯುಕ್ತ ಕಚೇರಿಗೆ ಆಗಮಿಸಿ ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ ಹಿರೇಶ್ ವಿರುದ್ಧ ಹಣದ ಬೇಡಿಕೆ ಕುರಿತು ದೂರು ನೀಡಿದ್ದರು. ಅ.8ರಂದು ಹಂಡ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿದ ಭರತ್ ಅಧ್ಯಕ್ಷೆ ಸುಧಾ ಹಿರೇಶ್ ಅವರಿಗೆ 25 ಸಾವಿರ ರೂ.ಯನ್ನು ನೀಡಲು ಮುಂದಾದರು. ಈ ಸಂದರ್ಭ ಫೈಲ್ ಒಳಗೆ ಹಣ ಇಡಲು ಹೇಳಿದ ಕಾರಣಕ್ಕಾಗಿ ಹಣವನ್ನು ಫೈಲಿನಲ್ಲಿಟ್ಟ ನಂತರ ಪಡೆದುಕೊಂಡರು ಎಂದು ಆರೋಪಿಸಲಾಗಿದೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಹಿತ ಆರೋಪಿ ಪಂಚಾಯತ್ ಅಧ್ಯಕ್ಷೆ ಸುಧಾ ಹಿರೇಶ್ ಅವರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಮಹಾ ನಿರೀಕ್ಷಕ ಸುಬ್ರಮಣೇಶ್ವರ ರಾವ್, ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ, ಪೊಲೀಸ್ ನಿರೀಕ್ಷಕ ಲೋಕೇಶ್, ವೀಣಾ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ವಯನಾಡ್ ದುರಂತ ಸಂತ್ರಸ್ತರಿಗೆ ನೆರವು ನೀಡದ ಕೇಂದ್ರ ಸರ್ಕಾರದ ವಿರುದ್ಧ ಕೇರಳ ಹೈಕೋರ್ಟ್ ತೀವ್ರ ಆಕ್ರೋಶ
“ನಿಮ್ಮ ದಾನ ನಮಗೆ ಅಗತ್ಯವಿಲ್ಲ”: ನ್ಯಾಯಾಲಯದ ತೀಕ್ಷ್ಣ ಪ್ರತಿಕ್ರಿಯೆ
ಕಲಬುರಗಿ | 59 ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಮನವಿ
ಕಲಬುರಗಿ : 59 ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. 101 ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಲು ಆಗ್ರಹಿಸಿ ರಾಜ್ಯದಲ್ಲಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸಲಾಯಿತು. ಈ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ 7 ಜನ ನ್ಯಾಯಾಧೀಶರ ಪೀಠ 2024ರ ಆಗಸ್ಟ್ 1 ರಂದು ಐತಿಹಾಸಿಕ ತೀರ್ಪು ನೀಡಿತು. ಈ ತೀರ್ಪನ್ನು ಆಧರಿಸಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯನ್ನು ಪರಿಷ್ಕರಿಸಿ ರಾಜ್ಯ ಸರ್ಕಾರದ ಸಚಿವ ಸಂಪುಟ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6, ಹೊಲೆಯ ಮತ್ತು ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.6 ಮತ್ತು ಬೋವಿ, ಕೊರಮ, ಕೊರಚ, ಲಮಾಣಿ ಹಾಗೂ 59 ಅಲೆಮಾರಿ ಜಾತಿಗಳಿಗೆ ಶೇ.5 ಮೀಸಲಾತಿ ಕಲ್ಪಿಸಿ 3 ಗುಂಪುಗಳನ್ನಾಗಿಸಿ ವರ್ಗೀಕರಿಸಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗ 59 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳು ಪ್ರವರ್ಗ-ಎ, ಶೇ.1ರಷ್ಟು, ಪ್ರವರ್ಗ-ಸಿ, ಮಾದಿಗ ಮತ್ತು ಮಾದಿಗ ಸಂಬಂಧಿತ 18 ಪ್ರವರ್ಗ-ಬಿ, ಜಾತಿಗಳಿಗೆ ಶೇ.6, ಹೊಲೆಯ ಮತ್ತು ಹೊಲೆಯ ಸಂಬಂಧಿತ 17 ಜಾತಿಗಳಿಗೆ ಶೇ. 5, ಮತ್ತು ಬೋವಿ, ಕೊರಮ, ಕೊರಚ, ಲಮಾಣಿ ಜಾತಿಗಳಿಗೆ ಶೇ 4. ಹಾಗೂ ಎ.ಕೆ., ಎ.ಡಿ., ಮತ್ತು ಎಎ ಜಾತಿಗಳಿಗೆ ಶೇ. 1 ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿತು. ನಾಗಮೋಹನ್ ದಾಸ್ ವರದಿಯು ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಪ್ರೇರಕವಾಗಿತ್ತು. ಆದರೆ ಈ ವರದಿಯನ್ನು ಸರ್ಕಾರ ಕಡೆಗಣಿಸಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್. ಬೀಜನಳ್ಳಿಕರ್, ವಿಭಾಗಿ ಕಾರ್ಯಧ್ಯಕ್ಷ ಹಂಪಣ್ಣ ಹುಳಾಗಡ್ಡಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಕಾಂತ ಡಿ ಕೋಲಕುಂದಾ, ತಾಲೂಕ ಉಪಾಧ್ಯಕ್ಷ ನರಸಪ್ಪ ಕಾಮರಡಗಿ, ಮಲ್ಲಿಕಾರ್ಜುನ ತಾರಫೈಲ್, ಬಸವರಾಜ ಬಿಲಗುಂದಿ, ಆಂಜನೇಯ ಆಲೂರ ಮತ್ತಿತರರು ಇದ್ದರು.
ಸೇಡಂ | ಸಿಜೆಐ ಗವಾಯಿ ಮೇಲೆ ಶೂ ಎಸೆದ ಕಿಶೋರ್ ವಕೀಲನ ವಿರುದ್ಧ ಕಠಿಣ ಶಿಕ್ಷೆಗೆ ಬಹುಜನ ಸಮಾಜ ಪಕ್ಷ ಆಗ್ರಹ
ಕಲಬುರಗಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಕಿಶೋರ್ ರಾಕೇಶ್ ವಕೀಲನಿಗೆ ಕಠಿಣ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಸೇಡಂ ಪಟ್ಟಣದಲ್ಲಿ ಬುಧವಾರ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೌದ್ಧ ಎಸ್.ಸಿ ಮೂಲದ ವ್ಯಕ್ತಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿರುವ ಬಗ್ಗೆ ಸಹಿಸದೆ ಜಾತಿವಾದಿಯಾಗಿರುವ ಮನುವಾದಿ ಆರೋಪಿ ಕಿಶೋರ್ ರಾಕೇಶ್ ವಕೀಲನ ಕೃತ್ಯಕ್ಕೆ ವಕೀಲ ವೃತ್ತಿ ರದ್ದುಪಡಿಸಿ, ಅವರ ವಿರುದ್ಧ ಕೂಡಲೇ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಬಹುಜನ ಸಮಾಜ ಪಕ್ಷದಿಂದ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ಎಸ್ ಸಿಂದೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರಾಮಚಂದ್ರ ಗುತ್ತೇದಾರ್, ರಾಮು, ಇಂಜೆಳ್ಳಿಕರ್ ಸಿದ್ದು ದೊರೆ, ಕೃಷ್ಣ ಟೈಗಾರ, ಜಗದೀಶ ಇಮಾಡಪೂರ ಶಿವು ನಾಮವಾರ್, ಶ್ಯಾಮ್ ಗುಂಡೇಪಲ್ಲಿ, ಪ್ರದೀಪ ಸಿಂಧೆ, ಸಂದೀಪ ಸೇರಿದಂತೆ ಮತ್ತಿತರರು ಇದ್ದರು.
ಮಂಗಳೂರು| ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ 29,000 ರೂ. ದಂಡ
ಮಂಗಳೂರು, ಅ.8: ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವ್ಯಕ್ತಿಗೆ ನ್ಯಾಯಾಲಯ 29,000 ರೂ. ದಂಡ ವಿಧಿಸಿದೆ. ಮಾರುತಿ ಕಂಬಾಲ್ ದಂಡ ಪಾವತಿಸಬೇಕಾದ ವ್ಯಕ್ತಿ ಎಂದು ತಿಳಿದುಬಂದಿದೆ. ಜೆಎಂಎಫ್ಸಿ 4 ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಶಿಲ್ಪ ಎಸ್ ಬ್ಯಾಡಗಿ ಅವರು ಮಾರುತಿ ಕಂಬಾಲ್ಗೆ ದಂಡ ವಿಧಿಸಿ ಆದೇಶ ನೀಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಲಬುರಗಿ | ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲ ಕಿಶೋರ್ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯ
ಕಲಬುರಗಿ: ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ರಾಕೇಶ್ ಕಿಶೋರ್ ಎಂಬ ವಕೀಲನ ಮೇಲೆ ದೇಶ ದ್ರೋಹಿ ಪ್ರಕರಣ ದಾಖಲಿಸಿ, ಮರಣದಂಡನೆ ವಿಧಿಸುವಂತೆ ಒತ್ತಾಯಿಸಿ ಬುಧವಾರ ದಲಿತ ಸೇನೆ ರಾಮವಿಲಾಸ್ ಪಾಸ್ವಾನ್ ಸಂಘಟನೆಯಿಂದ ಜಿಲ್ಲಾಧಿಕಾರಿ ಅವರಣದಲ್ಲಿ ಪ್ರತಿಭಟನೆ ನಡೆಸಿ ಡಿಸಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಲಾಗಿದ್ದು, ಆರೋಪಿಯು ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಲಾಗಿದೆ ಎಂಬುದು ಅತ್ಯಂತ ಆಘಾತಕಾರಿ ಮತ್ತು ಶೋಚನೀಯ. ಹಿಂದೂ ಧರ್ಮದ ಹೆಸರು, ದೇವರ ಹೆಸರು ಹೇಳಿಕೊಂಡು ಸನಾತನ ಧರ್ಮದಿಂದ ಜಾತಿ ವ್ಯವಸ್ಥೆ ಜೀವಂತ ವಿರುದ್ಧ ಮನುವಾದಿಗಳು ಒಂದಿಲ್ಲವೊಂದು ಕುತಂತ್ರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದು ಅವಮಾನ ಮಾಡಿದ ರಾಕೇಶ್ ಕಿಶೋರ್ ವಕೀಲನ ಮೇಲೆ ದೇಶದ್ರೋಹ ಕೇಸು ದಾಖಲಿಸಿ ಮರಣದಂಡನೆ ವಿಧಿಸಬೇಕು ಹಾಗೂ ಅವರ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಬೇಕೆಂದು ದಲಿತ ಸೇನೆ ರಾಮವಿಲಾಸ್ ಪಾಸ್ವಾನ್ ಸಂಘಟನೆ ಜಿಲ್ಲಾಧ್ಯಕ್ಷ ಶ್ರವಣಕುಮಾರ ಮೊಸಲಗೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಸೇವೆ ರಾಮವಿಲಾಸ್ ಪಾಸ್ವಾನ್ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕೆ ಜವಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳಣಿ, ಅಲಿಬಾಬಾ ಜೈನೊದಿ, ಸುನೀಲ್, ನಿರ್ಮಾಣ ಬಂಗರಗಿ, ಬಂಡಪ್ಪಾ ಚಿಂಚೋಳಿ, ಸಂಜೀವಕುಮಾರ ಕಾಳಗಿ, ರಘುವೀರ ಚಿತ್ತಾಪೂರ, ನಿಂಗಣಾ ಜೇವರ್ಗಿ, ನಿಂಗಣ್ಣಾ ಯಡ್ರಾಮಿ, ಮೋಹನ ಚಿನ್ನಾ, ಷಣ್ಮುಖ ಹೀರಾಪೂರ, ಮಲ್ಲಿಕಾರ್ಜುನ ತಾರಫೇಲ್, ಉಮೇಶ್ ಎಸ್. ಝಳಕಿ, ಮನೋಹರ ಬೆಳಿಗೇರಿ, ಗುರುರಾಜ ಸಾಸರಗಾಂವ್, ಹಣಮಂತ ಸೇರಿದಂತೆ ಮತ್ತಿತರರು ಇದ್ದರು.
ಕಲಬುರಗಿ | ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಒಂದು ದಿನದ ಇನ್ಕ್ಯುಬೇಷನ್ ಜಾಗೃತಿ
ಕಲಬುರಗಿ : ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ವಿಶ್ವ ಬ್ಯಾಂಕ್ ನೆರವಿನ ಭಾರತ ಸರ್ಕಾರದ ರ್ಯಾಂಪ್ ಯೋಜನೆಯಡಿ ಒಂದು ದಿನದ ಇನ್ಕ್ಯುಬೇಷನ್ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಕಲಬುರಗಿಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಉದ್ಘಾಟಿಸಿ, ಕಲ್ಯಾಣ-ಕರ್ನಾಟಕ ಭಾಗದ ಯುವಕ-ಯುವತಿಯರು ಹೊಸ ಕಲ್ಪನೆ, ಸೃಜನಶೀಲತೆಯಿಂದ ನವೋದ್ಯಮ ಪ್ರಾರಂಭಿಸಲು ಯೋಜಿಸಿದ್ದಲ್ಲಿ ಇಲಾಖೆ ಮತ್ತು ಸರ್ಕಾರವು ಸಹಾಯ ಮಾಡಲು ಸದಾಸಿದ್ಧವಿದೆ ಎಂದು ತಿಳಿಸಿದರು. ರ್ಯಾಂಪ್ ಎಂಬುದು ಭಾರತ ಸರ್ಕಾರ ಪ್ರಾರಂಭಿಸಿದ ವಿಶ್ವಬ್ಯಾಂಕ್ ಬೆಂಬಲಿತ ಕೇಂದ್ರ ವಲಯ ಯೋಜನೆಯಾಗಿದೆ. RAMP ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂ ಇ) ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಒಂದು ಕಾರ್ಯತಂತ್ರದ ಉಪಕ್ರಮವಾಗಿದೆ. ಈ ಕಾರ್ಯಕ್ರಮದ ಉದ್ದೇಶವು ಎಂಎಸ್ಎಂಇಗಳನ್ನು ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ, ಮಾರುಕಟ್ಟೆ ಅವಕಾಶಗಳು ಮತ್ತು ಸಾಲದ ಪ್ರವೇಶವನ್ನು ಸುಧಾರಿಸುವ ಮೂಲಕ, ನಾವೀನ್ಯತೆಯನ್ನು ಬೆಳೆಸುವ ಮೂಲಕ ಮತ್ತು ಹೊಸ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುವ ಮೂಲಕ ಬಲಪಡಿಸುವುದಾಗಿದೆ ಎಂದರು. ಈ ಕಾರ್ಯಕ್ರಮವು ಮಾರುಕಟ್ಟೆ ಮತ್ತು ಸಾಲ ಪ್ರವೇಶವನ್ನು ಸುಧಾರಿಸುವ ಮೂಲಕ, ವಿಳಂಬಿತ ಪಾವತಿಗಳಲ್ಲಿ ಸಂಸ್ಥೆಗಳು ಮತ್ತು ಆಡಳಿತವನ್ನು ಬಲಪಡಿಸುವ ಮೂಲಕ ಮತ್ತು ಒಒಇ ಗಳನ್ನು ಹಸಿರೀಕರಣಗೊಳಿಸುವ ಮೂಲಕ ಎಂಎಸ್ಎಂ ಇ ಗಳಿಗೆ ಸಮಗ್ರ ಬೆಂಬಲವನ್ನು ಒದಗಿಸುವುದನ್ನು ಉದ್ದೇಶಿಸುತ್ತದೆ. ರ್ಯಾಂಪ್ ಕಾರ್ಯಕ್ರಮವು ಎಂಎಸ್ಎಂ ಇ ಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಅವುಗಳ ಏಕೀಕರಣವನ್ನು ಬೆಂಬಲಿಸಲು ಸಹ ಪ್ರಯತ್ನಿಸುತ್ತದೆ ಎಂದು ವಿವರಿಸಿದರು. ಅಲ್ಲದೆ ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಎಂಎಸ್ಎಂಇ ಗಳಿಗೆ ಮಾರ್ಗದರ್ಶನ, ನೆಟ್ವರ್ಕಿಂಗ್ ಮತ್ತು ಬಂಡವಾಳ ಸಹಾಯವನ್ನು ನೀಡುತ್ತದೆ. ಈ ಕಾರ್ಯಾಗಾರಗಳನ್ನು ಯುವ ವಿದ್ಯಾರ್ಥಿಗಳು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಇನ್ಕ್ಯುಬೇಷನ್ ಯೋಜನೆಯ ಬಗ್ಗೆ ಶಿಕ್ಷಣ ನೀಡಲು ಆಯೋಜಿಸಲಾಗಿದೆ. ಈ ಕಾರ್ಯಾಗಾರಗಳು ಯುವಕರಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಇನ್ಕ್ಯುಬೇಷನ್ ಅವಕಾಶಗಳ ಅರಿವನ್ನು ಬೆಳೆಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ವಿ.ಟಿ.ಯು, ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ . ಶುಭಾಂಗಿ ಡಿ.ಸಿ., ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಾಂತ್ರಿಕ ಅಧಿವೇಶನಗಳ ಸದುಪಯೋಗ ಪಡೆಯಲು ಕರೆ ನೀಡಿದರು. ಕೆ.ಎಸ್.ಎಫ್.ಸಿ ಶಾಖಾ ವ್ಯವಸ್ಥಾಪಕ ಡಾ. ಚಂದ್ರಕಾಂತ ಚಂದಾಪೂರ, ಡಾ.ಮುಹಮ್ಮದ್ ಅಬ್ದುಲ್ ವಹೀದ್, ಡಾ.ಬ್ರಿಜಭೂಷಣ ಎಸ್, ಡಾ.ಸತೀಶ್ ಉಪಲಾಂವಕರ್ , ರವಿಗೌಡ, ಮಣಿ ತೇಜಾ, ಸಯ್ಯದ್ ಅಶ್ಫಾಕ್ ಅಹ್ಮದ್, ಕು. ರುಪಾಲಿ ಶೇರಖಾನೆ, ಜಾಫರ ಖಾಸಿಮ ಅನ್ಸಾರಿ ಹಾಜರಿದ್ದರು. 5 ತಾಂತ್ರಿಕ ಅಧಿವೇಶನಗಳು ನಡೆದವು. ಸಾನಿಯಾ ಫರ್ಹಿನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
525 ಪಂಚಾಯಿತಿಗಳಲ್ಲಿ ‘ನೀರಿದ್ದರೆ ನಾಳೆ’ ಯೋಜನೆ ಅನುಷ್ಠಾನ: ನಾಳೆ(ಅ.9) ಚಾಲನೆ
ನಟ ವಸಿಷ್ಟಸಿಂಹ ಜಾಗೃತಿ ಅಭಿಯಾನದ ರಾಯಭಾರಿ : ಸಚಿವ ಎನ್.ಎಸ್.ಭೋಸರಾಜು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ : ಜಿಲ್ಲಾಧಿಕಾರಿ
ಬೆಂಗಳೂರು, ಅ.8 : ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕಾ ಕಾರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನ.6ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ. ತಿಳಿಸಿದ್ದಾರೆ. ಬುಧವಾರ ನಗರದ ಕೆ.ಜಿ.ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ-2025ರ ಸಂಬಂಧ ಮತದಾರರ ಪಟ್ಟಿ ತಯಾರಿಕೆ ಮತ್ತು ಮತದಾರರ ಪಟ್ಟಿ ವಿಶೇಷ ತ್ರೀವ ಪರಿಷ್ಕರಣೆ-2026ರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಂಗಳೂರು ನಗರ ಜಿಲ್ಲೆಯ ಎಲ್ಲ 7-ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಹ ಶಿಕ್ಷಕರು ನಮೂನೆ -19ರಲ್ಲಿ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ/ನಿಯೋಜಿತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು. ನಮೂನೆ-19 ಅರ್ಜಿಗಳನ್ನು ನಿಯಮಾನುಸಾರ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ನೀಡಲಾಗಿದ್ದು. ಕೊನೆಯ ದಿನದೊಳಗಾಗಿ ಬರುವಂತಹ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ, ನ.25ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅರ್ಜಿ ಸಲ್ಲಿಸುವ ಅರ್ಹ ಶಿಕ್ಷಕರು ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳೀಯ ನಿವಾಸಿಯಾಗಿರಬೇಕು, ನಿರ್ಧಿಷ್ಟಪಡಿಸಲಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನ ನ.1ಕ್ಕೆ ಆರು ವರ್ಷಗಳ ಪೂರ್ವದ ಅವಧಿಯೊಳಗೆ, ಕನಿಷ್ಠ 3 ವರ್ಷಗಳು ಶಿಕ್ಷಕರಾಗಿ ಪ್ರೌಢಶಾಲಾ ಶಿಕ್ಷಣಕ್ಕಿಂತ ಕಡಿಮೆ ಇಲ್ಲದಂತೆ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡಿರಬೇಕು ಎಂದು ಅವರು ಹೇಳಿದರು. ಈ 3 ವರ್ಷಗಳ ಅವಧಿಯಲ್ಲಿ ಶಿಕ್ಷಕರು ಒಂದಕ್ಕಿಂತ ಮೇಲ್ಪಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ಅಂತಹ ಅವಧಿಯನ್ನು ಪರಿಗಣಿಸಲಾಗುವುದು ಹಾಗೂ ಪ್ರತ್ಯೇಕವಾಗಿ ಆಯಾ ಶಾಲಾ ಶಿಕ್ಷಣ ಸಂಸ್ಥೆಯಿಂದ ಅನುಬಂಧ-2ರಲ್ಲಿ ಕಡ್ಡಾಯವಾಗಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಜಗದೀಶ್ ತಿಳಿಸಿದರು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ನಿಗಧಿಪಡಿಸಿರುವ ದಿನಾಂಕದಂದೆ ಮಾಹಿತಿಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೆ ಮಾಹಿತಿಯನ್ನು ನೀಡಲು ವಿಳಂಬ ಮಾಡಬಾರದು. ವಿಳಂಬವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ವಿಶ್ವವಿದ್ಯಾಲಯ ಹಾಗೂ ಡೀಮ್ಡ್ ವಿಶ್ವವಿದ್ಯಾಲಯ ಅಡಿಯಲ್ಲಿ ನೋಂದಣಿಯಾಗಿರುವ ಕಾಲೇಜುಗಳ ಪಟ್ಟಿ ದೊರೆಯಲಿದೆ, ಸಂಬಂಧಿಸಿದ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ಗಳಿಗೆ ಪತ್ರವನ್ನು ಬರೆದು ಕಾಲೇಜುಗಳ ಪಟ್ಟಿಯನ್ನು ತರಿಸಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್, ಉಪ ವಿಭಾಗಾಧಿಕಾರಿಗಳಾದ ವಿ.ಆರ್.ವಿಶ್ವನಾಥ್ ಹಾಗೂ ಡಾ.ಕಿರಣ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಗಳು, ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿ ಒಳಮೀಸಲಾತಿ: ಮೂಲ ಜಾತಿಯೊಂದಿಗೆ ಪ್ರವರ್ಗ ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಲು ಸುತ್ತೋಲೆ
ಬೆಂಗಳೂರು, ಅ.8: ಪರಿಶಿಷ್ಟ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಣೆ ಮಾಡಿ ಒಳಮೀಸಲಾತಿ ಜಾರಿ ಮಾಡಿದ್ದು, ಜಾತಿ ಪ್ರಮಾಣ ಪತ್ರವನ್ನು ನೀಡುವ ವೇಳೆ, ಮೂಲ ಜಾತಿಯೊಂದಿಗೆ ಪ್ರವರ್ಗವನ್ನು ನಮೂದಿಸಿ, ಪ್ರಮಾಣ ಪತ್ರವನ್ನು ನೀಡಬೇಕು ಎಂದು ಸರಕಾರವು ಬುಧವಾರ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದವರ ಮೂಲ ಜಾತಿಯು 'ಹೊಲೆಯ' ಎಂದು ಇದ್ದಲ್ಲಿ, ಈಗ ಜಾತಿ ಪ್ರಮಾಣ ಪತ್ರದಲ್ಲಿ 'ಆದಿ ಕರ್ನಾಟಕ (ಹೊಲೆಯ/ಪ್ರವರ್ಗ-ಬಿ)' ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಲಾಗುವುದು. ಅಭ್ಯರ್ಥಿಯು 'ಆದಿ ಕರ್ನಾಟಕ' ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಹಾಗೂ ಮೂಲ ಜಾತಿಯು 'ಮಾದಿಗ' ಎಂದು ಇದ್ದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ 'ಆದಿ ಕರ್ನಾಟಕ (ಮಾದಿಗ/ಪ್ರವರ್ಗ-ಎ)' ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಲಾಗುವುದು. ಅಭ್ಯರ್ಥಿಯು 'ಕೊರಚ' ಎಂದು ಜಾತಿ ಪ್ರಮಾಣ ಪತ್ರ ಈಗಾಗಲೇ ಪಡೆದಿದ್ದರೆ, ಕೊರಚ ಸಮುದಾಯವನ್ನು ಪ್ರವರ್ಗ-ಸಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಕೊರಚ(ಪ್ರವರ್ಗ-ಸಿ) ಎಂದು ನೀಡಲಾಗುತ್ತದೆ. ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕಕ್ಕೆ ಸೇರಿದ ಮೂಲ ಜಾತಿಯನ್ನು ತಿಳಿಸದೇ ಇರುವ ಅಭ್ಯರ್ಥಿಗಳು, 'ಪ್ರವರ್ಗ- ಎ ಅಥವಾ ಪ್ರವರ್ಗ- ಬಿ'ಯನ್ನು ಆಯ್ಕೆ ಮಾಡಿಕೊಂಡು ಸ್ಪಷ್ಟವಾಗಿ ನಮೂದಿಸಿ, ಮುಚ್ಚಳಿಕೆ ಪತ್ರ(ಆಫಿಡೆವಿಟ್) ದೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಅಭ್ಯರ್ಥಿಗಳೂ ಪರಿಶಿಷ್ಟ ಜಾತಿಗೆ ಸೇರಿರುವ ಬಗ್ಗೆ ಖಾತರಿಪಡಿಸಿಕೊಂಡು, ಅಭ್ಯರ್ಥಿಗಳು ನೀಡಿರುವ ಮುಚ್ಚಳಿಕೆ ಪತ್ರದಲ್ಲಿ ಘೋಷಿಸಿರುವ ಪ್ರವರ್ಗವನ್ನು ನಮೂದಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಈ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡು ಯಾವ ಪ್ರವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆಯೋ ಅದೇ ಪ್ರವರ್ಗ ಅವರ ಕುಟುಂಬಕ್ಕೆ ಶಾಶ್ವತವಾಗಿ ಮುಂದುವರೆಯುತ್ತದೆ. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶವಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಭಾರತದ ಜೊತೆ ಯುದ್ಧದ ಸಾಧ್ಯತೆ ವಾಸ್ತವ: ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್
ಇಸ್ಲಾಮಾಬಾದ್,ಅ.8: ಭಾರತದ ಜೊತೆಗೆ ಯುದ್ಧ ನಡೆಯುವ ಸಾಧ್ಯತೆ ವಾಸ್ತವವಾದುದೆಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ. ಒಂದು ವೇಳೆ ಭಾರತದ ಜೊತೆಗೆ ಭವಿಷ್ಯದಲ್ಲಿ ಯಾವುದೇ ಸಶಸ್ತ್ರ ಸಂಘರ್ಷ ಏರ್ಪಟ್ಟಲ್ಲಿ ತನ್ನ ದೇಶವು ದೊಡ್ಡ ಯಶಸ್ಸನ್ನು ಸಾಧಿಸಲಿದೆಯೆಂದು ಅವರು ಹೇಳಿದ್ದಾರೆ. ಸಾಮಾ ಟಿವಿಗೆ ಮಂಗಳವಾರ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಭಾರತದಿಂದ ಸಶಸ್ತ್ರ ಸಂಘರ್ಷದ ಬೆದರಿಕೆಯಿದ್ದು, ಪಾಕಿಸ್ತಾನವು ಪರಿಸ್ಥಿತಿಯ ಬಗ್ಗೆ ನಿಗಾ ಇರಿಸಿದೆ ಎಂದರು. ‘‘ನಾನು ಯುದ್ಧ ನಡೆಯುವುದನ್ನು ಬಯಸುವುದಿಲ್ಲ. ಆದರೆ ಯುದ್ಧದ ಆಪಾಯಗಳು ವಾಸ್ತವವಾದುದಾಗಿದೆ ಎಂಬುದನ್ನು ನಾನು ನಿರಾಕರಿಸುವುದಿಲ್ಲ. ಹಿಂದಿಗಿಂತ ನಾವು ಉತ್ತಮ ಫಲಿತಾಂಶವನ್ನು ಸಾಧಿಸಲಿದ್ದೇವೆ’’ ಎಂದವರು ಹೇಳಿದ್ದಾರೆ. ಪಾಕಿಸ್ತಾನವು ಈಗ ಆರು ತಿಂಗಳುಗಳ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಹಾಗೂ ಮಿತ್ರನ್ನು ಹೊಂದಿದೆ ಎಂದವರು ಉಲ್ಲೇಖಿಸಿದ್ದಾರೆ. ಮುಗಲ್ ಚಕ್ರವರ್ತಿ ಔರಂಗಜೇಬ್ ನ ಆಡಳಿತವನ್ನು ಹೊರತುಪಡಿಸಿ ಭಾರತವು ಎಂದೂ ಒಂದು ರಾಷ್ಟ್ರವಾಗಿ ಒಗ್ಗೂಡಿರಲಿಲ್ಲ. ಆದರೆ ಪಾಕಿಸ್ತಾನವು ಹಲವಾರು ಆಂತರಿಕ ಸಮಸ್ಯೆಗಳ ಹೊರತಾಗಿಯೂ ಮೇ ತಿಂಗಳ ಸಂಘರ್ಷವನ್ನು ಅದು ಒಗ್ಗಟ್ಟಿನಿಂದ ಎದುರಿಸಿ ನಿಂತಿದೆ ಎಂದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳ ಸೇರ್ಪಡೆ
ಮಂಗಳೂರು: ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ಗೆ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಈ ಎರಡು ಅಗ್ನಿಶಾಮಕ ವಾಹನ(ಸಿಎಫ್ಟಿ)ಗಳ ಸೇರ್ಪಡೆಯೊಂದಿಗೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕದ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಿದಂತಾಗಿದೆ. ಅಗ್ನಿ ಶಾಮಕ ವಾಹನಗಳನ್ನು ಆಸ್ಟ್ರಿಯಾದಿಂದ ಆಮದು ಮಾಡಿಕೊಳ್ಳಲಾಗಿದ್ದು, ರೋಸೆನ್ಬೌರ್ ಈ ವಾಹನ ಗಳನ್ನು ತಯಾರಿಸಿದೆ. ಪ್ರಪಂಚದಾದ್ಯಂತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂತಹ ಅಗ್ನಿಶಾಮಕ ವಾಹನ ಗಳು ಇವೆ. ಇವುಗಳ ಸೇರ್ಪಡೆಯು ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಗೆ ಬದ್ಧತೆಯನ್ನು ಬಲಪಡಿಸುತ್ತದೆ. ಈ ವಾಹನಗಳು 12,500 ಲೀಟರ್ ನೀರು ಮತ್ತು 1,500 ಲೀಟರ್ ಫೋಮ್ ಲೋಡ್ ಅನ್ನು ಹೊತ್ತೊಯ್ಯುತ್ತವೆ, 2009ರ ಹಿಂದಿನ ಸಿಎಫ್ಟಿ ಗಳಲ್ಲಿ 10,000 ಲೀಟರ್ ನೀರು ಮತ್ತು 1,300 ಲೀಟರ್ ಫೋಮ್ ಸಾಮರ್ಥ್ಯದ್ದು ಆಗಿತ್ತು. ಬ್ಯಾಟರಿ ಚಾಲಿತ ವಾಹನಗಳು ಅವುಗಳಲ್ಲಿರುವ ಆಟೋ ಎಜೆಕ್ಟರ್ ವ್ಯವಸ್ಥೆಯನ್ನು ಶೇ 100 ಸಾಮರ್ಥ್ಯದಲ್ಲಿ 90 ಮೀಟರ್ ವರೆಗೆ ನೀರನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ, ಇದು ಡೀಸೆಲ್ ಬಳಕೆಯನ್ನು ಬಹಳ ಕಡಿಮೆ ಮಾಡುತ್ತದೆ. ಈ ವಾಹನದಲ್ಲಿ ನಾಲ್ವರಿಗೆ ಆಸನಗಳ ವ್ಯವಸ್ಥೆ ಇದರಲ್ಲಿರುತ್ತದೆ. ಗಂಟೆಗೆ 120 ಕಿಮೀ ಗರಿಷ್ಠ ವೇಗದಲ್ಲಿ ವಾಹನಗಳು ಸಂಚರಿಸುವ ಸಾಮರ್ಥ್ಯ ಹೊಂದಿವೆ.
ಸಿಂಗಾಪುರ: ಡ್ರಗ್ಸ್ ಕಳ್ಳಸಾಗಣೆ ಆರೋಪಿಗೆ ಗಲ್ಲು
ಕೌಲಾಲಂಪುರ,ಅ.8: ಸಿಂಗಾಪುರವು ಮಲೇಶ್ಯದ ಡ್ರಗ್ ಕಳ್ಳಸಾಗಣೆದಾರನೊಬ್ಬನನ್ನು ಬುಧವಾರ ಗಲ್ಲಿಗೇರಿಸಿದೆ. ಸಿಂಗಾಪುರದಲ್ಲಿ ಈ ವರ್ಷ ನಡೆದ ಹನ್ನೆರಡೇ ಗಲ್ಲುಶಿಕ್ಷೆ ಇದಾಗಿದೆ. 38 ವರ್ಷದ ಪನ್ನೀರ್ ಸೆಲ್ವಂ ಪ್ರಾಂಥಮಾನ್ ಅವರನ್ನು ಚಾಂಗಿ ಕಾರಾಗೃಹದಲ್ಲಿ ಗಲ್ಲಿಗೇರಿಸಿರುವುದನ್ನು ಸಿಂಗಾಪುರದ ಮರಣದಂಡನೆ ವಿರೋಧಿ ಹೋರಾಟಗಾರ ಕಿರ್ಸ್ಟೆನ್ ಹ್ಯಾನ್ ದೃಢಪಡಿಸಿದ್ದಾರೆ. 2014ರಲ್ಲಿ 52 ಗ್ರಾಂ. ಹೆರಾಯಿನ್ ಹೊಂದಿದ ಆರೋಪದಲ್ಲಿ ಪನ್ನೀರ್ ಗೆ ಸಿಂಗಾಪುರದ ನ್ಯಾಯಾಲಯವು ಗಲ್ಲು ಶಿಕ್ಷೆ ಘೋಷಿಸಿತ್ತು. ತನಗೆ ಕ್ಷಮಾದಾನ ನೀಡುವಂತೆ ಕೋರಿ ಪನ್ನೀರ್ ಸೆಲ್ವಂ ರಾಷ್ಟ್ರಾಧ್ಯಕ್ಷರಿಗೆ ಸಲ್ಲಿಸಿದ ಅಂತಿಮ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ಬಳಿಕ ಆತನ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.
ಬೀದರ್ | ಪಿಎಂ ಕಿಸಾನ್ ಎಂಬ ಎಪಿಕೆ ಫೈಲ್ ನಿಂದ 4 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ನಿವೃತ್ತ ನೌಕರ : ಪ್ರಕರಣ ದಾಖಲು
ಬೀದರ್ : ಪಿಎಂ ಕಿಸಾನ್ ನ್ಯೂ ರಿಜಿಸ್ಟ್ರೇಷನ್ ಎಪಿಕೆ (PM KISHAN NEW REGISTRATION APK) ಎಂಬ ಫೈಲ್ ನಿಂದ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದ ನೌಕರರೊಬ್ಬರು 4 ಲಕ್ಷ 29 ಸಾವಿರ ರೂ. ಕ್ಕಿಂತಲೂ ಅಧಿಕ ಹಣ ಕಳೆದುಕೊಂಡಿದ್ದು, ಮಂಗಳವಾರ ಪ್ರಕರಣ ದಾಖಲಾಗಿದೆ. ನಗರದ ವಿದ್ಯಾನಗರ ಕಾಲೋನಿಯ ಶಿವಕಾಂತ್ ಎನ್ನುವವರು ಹಣ ಕಳೆದುಕೊಂಡ ನಿವೃತ್ತ ನೌಕರರಾಗಿದ್ದಾರೆ. 2023ರಲ್ಲಿ ನಿವೃತ್ತನಾಗಿದ್ದು, ನನ್ನ ಖಾತೆಗೆ ಪಿಂಚಣಿ ಹಣ ಜಮೆಯಾಗಿತ್ತು. ನನ್ನ ಖಾತೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ನೆಟ್ವರ್ಕ್ ಸಮಸ್ಯೆ ಇರುವ ಕಾರಣ ಸಿಮ್ ಬದಲಾಯಿಸಿದ್ದೇನೆ. ಕೆಲ ದಿನಗಳು ನಾನು ನನ್ನ ಖಾತೆಯಲ್ಲಿರುವ ಹಣದ ಬಗ್ಗೆ ಪರಿಶೀಲನೆ ಮಾಡಲಿಲ್ಲ. ಅ. 3 ರಂದು ಹಣ ತೆಗೆಯಲು ಬ್ಯಾಂಕಿಗೆ ಹೋದಾಗ ಪಿಎಂ ಕಿಸಾನ್ ನ್ಯೂ ರಿಜಿಸ್ಟ್ರೇಷನ್ ಎಪಿಕೆ (PM KISHAN NEW REGISTRATION APK) ಎಂಬ ಫೈಲ್ ನಿಂದ ಅಪರಿಚಿತರು ಹಣ ವರ್ಗಾಯಿಸಿಕೊಂಡಿರುವುದು ಪತ್ತೆಯಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೀದರ್ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಭಾರತ-ಪಾಕ್ ಶಾಂತಿ ಸ್ಥಾಪನೆಗೆ ಟ್ರಂಪ್ ಕಾರಣ ಎಂದ ಕೆನಡಾ ಪ್ರಧಾನಿ
ವಾಶಿಂಗ್ಟನ್,ಅ.8: ಡೊನಾಲ್ಡ್ ಟ್ರಂಪ್ ಓರ್ವ ಪರಿವರ್ತನಾತ್ಮಕ ಅಧ್ಯಕ್ಷ ಕೆನಡದ ಪ್ರಧಾನಿ ಮಾರ್ಕ್ ಕಾರ್ನಿ ಬಣ್ಣಿಸಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವೆ ‘ಶಾಂತಿ’ಯನ್ನು ಸ್ಥಾಪಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕೆಂದು ಹೇಳಿದ್ದಾರೆ. ಶ್ವೇತಭವನದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಮಾರ್ಕ್ಕಾರ್ನಿ ಅವರು, ಜಾಗತಿಕ ವ್ಯವಹಾರಗಳು ಹಾಗೂ ಆರ್ಥಿಕ ಸ್ಥಿರತೆಯ ಮೇಲೆ ಅಮೆರಿಕ ಅಧ್ಯಕ್ಷರು ಪ್ರಭಾವಬೀರಿದ್ದಾರೆಂದು ಟ್ರಂಪ್ ಅವರನ್ನು ಶ್ಲಾಘಿಸಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ಟ್ರಂಪ್ ಜೊತೆ ಮಾತುಕತೆ ನಡೆಸಿದ ಕಾರ್ನಿ ಅವರು, ‘‘ಕೆಲವು ತಿಂಗಳುಗಳ ಹಿಂದೆ ನನಗೆ ಹಾಗೂ ನನ್ನ ಸಹದ್ಯೋಗಿಗಳಿಗೆ ನೀವು (ಟ್ರಂಪ್) ಆತಿಥ್ಯ ನೀಡಿದ ಸಂದರ್ಭ, ನೀವು ಓರ್ವ ಪರಿವರ್ತನಾಶೀಲ ಅಧ್ಯಕ್ಷರೆಂದು ನಾನು ಹೇಳಿದ್ದೆ. ಆವಾಗಿನಿಂದ ಆರ್ಥಿಕತೆಯಲ್ಲಿ ಪರಿವರ್ತನೆಗಳಾಗಿವೆ, ನೇಟೊದ ಪಾಲುದಾರರ ನಡುವೆ ರಕ್ಷಣಾ ವ್ಯಯದ ಕುರಿತು ಅಭೂತಪೂರ್ವ ಬದ್ಧತೆಗಳು ಏರ್ಪಟ್ಟಿವೆ. ಭಾರತ-ಪಾಕಿಸ್ತಾನ ನಡುವೆ ಹಾಗೂ ಅಝರ್ಬೈಝಾನ್-ಆರ್ಮೆನಿಯ ನಡುವೆ ಶಾಂತಿ ಸ್ಥಾಪನೆ, ಇರಾನ್ ನ ಭಯೋತ್ಪಾದನಾ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸಲಾಗಿದೆ. ಇವೆಲ್ಲವೂ ಅತ್ಯಂತ ಮುಖ್ಯವಾಗಿವೆ’’ ಎಂದವರು ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಶನ್ ಸಿಂಧೂರ ಕಾರ್ಯಾಚರಣೆಯ ಆನಂತರ ಭಾರತ ಹಾಗೂ ಪಾಕ್ ನಡುವೆ ಭುಗಿಲೆದ್ದ ಸಂಘರ್ಷವನ್ನು ನಿಲ್ಲಿಸಿ, ಕದನವಿರಾಮವನ್ನು ತಾನು ಏರ್ಪಡಿಸಿದ್ದಾಗಿ ಡೊನಾಲ್ಡ್ ಟ್ರಂಪ್ ಹಲವಾರು ಸಲ ಪುನರುಚ್ಚರಿಸುತ್ತಾ ಬಂದಿದ್ದಾರೆ. ಆದರೆ ಭಾರತ ಸರಕಾರ ಅವರ ವಾದವನ್ನು ತಳ್ಳಿಹಾಕುತ್ತಾ ಬಂದಿದೆ.
ಹಮಾಸ್-ಇಸ್ರೇಲ್ ನಿಂದ ಒತ್ತೆಯಾಳು ಕೈದಿಗಳ ಪಟ್ಟಿ ವಿನಿಮಯ
ಗಾಝಾ,ಅ.8: ವಿನಿಮಯ ಒಪ್ಪಂದದಡಿ ಬಿಡುಗಡೆಗೊಳಿಸಲಾಗುವ ಇಸ್ರೇಲಿ ಒತ್ತೆಯಾಳುಗಳು ಹಾಗೂ ಫೆಲೆಸ್ತೀನ್ ಕೈದಿಗಳ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿರುವುದಾಗಿ ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ಬುಧವಾರ ತಿಳಿಸಿದೆ. ಗಾಝಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಕುರಿತಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯ ಕುರಿತು ಈಜಿಪ್ಟ್ ನಲ್ಲಿ ನಡೆಯುತ್ತಿರುವ ಮಾತುಕತೆಯ ಬಗ್ಗೆ ತಾನು ಆಶಾವಾದವನ್ನು ಹೊಂದಿರುವುದಾಗಿ ಅದು ಹೇಳಿದೆ. ಗಾಝಾ ಸಂಘರ್ಷವನ್ನು ಅಂತ್ಯಗೊಳಿಸುವ ಕಾರ್ಯವಿಧಾನ, ಗಾಝಾದಿಂದ ಇಸ್ರೇಲಿ ಪಡೆಗಳ ಹಿಂತೆಗೆತ ಹಾಗೂ ಇಸ್ರೇಲಿ ಒತ್ತೆಯಾಳುಗಳು ಹಾಗೂ ಫೆಲೆಸ್ತೀನ್ ಕೈದಿಗಳ ವಿನಿಮಯ ಒಪ್ಪಂದ ಈ ವಿಷಯಗಳ ಬಗ್ಗೆ ಮಾತುಕತೆಯು ಹೆಚ್ಚು ಗಮನಹರಿಸಲಾಗುತ್ತಿದೆಯೆಂದು ಹಮಾಸ್ ಹೇಳಿಕೆ ತಿಳಿಸಿದೆ. ಈಜಿಪ್ಟ್ ನ ವಿಹಾರಪಟ್ಟಣವಾದ ಶರ್ಮ್ ಅಲ್ ಶೇಖ್ ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ, ಗಾಝಾ ಸಂಘರ್ಷ ಅಂತ್ಯಕ್ಕೆ ಟ್ರಂಪ್ ಅವರು ರೂಪಿಸಿರುವ 20 ಅಂಶಗಳ ಉಪಕ್ರಮದ ಮೊದಲನೇ ಹಂತವನ್ನು ಜಾರಿಗೊಳಿಸುವ ಸಮಯದ ಬಗ್ಗೆ ಈವರೆಗೆ ನಿರ್ಧಾರಕ್ಕೆ ಬರಲಾಗಿಲ್ಲವೆಂದು ತಿಳಿದುಬಂದಿದೆ. ಶಾಂತಿ ಒಪ್ಪಂದವು ಏರ್ಪಡುವ ಬಗ್ಗೆ ಟ್ರಂಪ್ ಅವರು ಗಾಝಾದಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಘರ್ಷದ ಎರಡನೇ ವರ್ಷಾಚರಣೆಯ ದಿನವಾದ ಮಂಗಳವಾರ ಆಶಾವಾದ ವ್ಯಕ್ತಪಡಿಸಿದ್ದರು. ಶರ್ಮ್ ಅಲ್ ಶೇಖ್ ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಪಾಲ್ಗೊಂಡಿರುವ ಅಮೆರಿಕದ ನಿಯೋಗದಲ್ಲಿ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹಾಗೂ ಟ್ರಂಪ್ ಅವರ ಅಳಿಯ ಜರೇಡ್ ಕುಶ್ನರ್ ಅವರೂ ಕೂಡಾ ಇದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಕುಶ್ನರ್ ಅವರು ಅಮೆರಿಕ ಆಡಳಿತದ ಮಧ್ಯಪ್ರಾಚ್ಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ಬುಧವಾರ ನಡೆದ ಮಾತುಕತೆಯಲ್ಲಿ ಇಸ್ರೇಲಿನ ಆಯಕಟ್ಟಿನ ವ್ಯವಹಾರಗಳ ಸಚಿವ, ಪ್ರಧಾನಿ ನೆತನ್ಯಾಹು ಅವರ ನಿಕಟವರ್ತಿ ರಾನ್ ಡೆರ್ಮರ್ ಭಾಗವಹಿಸಿದ್ದರು. ಕತರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್-ಥಾನಿ, ಟರ್ಕಿಯ ಹಿರಿಯ ಬೇಹುಗಾರಿಕಾ ಅಧಿಕಾರಿ ಇಬ್ರಾಹೀಂ ಕಾಲಿನ್ ಕೂಡಾ ಪಾಲ್ಗೊಂಡಿರುವುದಾಗಿ ವರದಿಯಾಗಿದೆ.
ಗಾಝಾ ತೀರ ತಲುಪಲು ಯತ್ನಿಸಿದ 9 ‘ನೆರವು’ ನೌಕೆಗಳನ್ನು ತಡೆಹಿಡಿದ ಇಸ್ರೇಲ್
ಜೆರುಸಲೇಂ,ಅ.8: ಗಾಝಾಕ್ಕೆ ಇಸ್ರೇಲ್ ವಿಧಿಸಿರುವ ನೌಕಾ ನಿರ್ಬಂಧವನ್ನು ಭೇದಿಸಲು ಯತ್ನಿಸಿದ 9 ‘ನೆರವು’ ನೌಕೆಗಳ ಸಮೂಹವನ್ನು ಮೆಡಿಟರೇನಿಯನ್ ಸಮುದ್ರದಲ್ಲಿ ಇಸ್ರೇಲಿ ಸೇನೆ ಅಡ್ಡಗಟ್ಟಿದೆ ಹಾಗೂ ನೌಕೆಗಳಲ್ಲಿದ್ದ ಹಲವಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಚಳವಳಿಯ ಸಂಘಟಕರು ಹಾಗೂ ಇಸ್ರೇಲ್ ವಿದೇಶಾಂಗ ಸಚಿವಾಲಯ ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿವೆ. ಗಾಝಾ ಸಂತ್ರಸ್ತರಿಗೆ ನೆರವು ಸಾಮಾಗ್ರಿಗಳೊಂದಿಗೆ ಆಗಮಿಸಿದ ನೌಕೆಗಳಲ್ಲಿದ್ದ ಎಲ್ಲಾ 145 ಕಾರ್ಯಕರ್ತರ ಆರೋಗ್ಯ ಪರಿಸ್ಥಿತಿ ಉತ್ತಮವಾಗಿದ್ದು, ಅವರನ್ನು ಮುಂದಿನ ಪ್ರಕ್ರಿಯೆಗಾಗಿ ಇಸ್ರೇಲ್ ನ ತೀರಕ್ಕೆ ಕರೆತರಲಾಗಿದೆ ಹಾಗೂ ಶೀಘ್ರದಲ್ಲೇ ಗಡಿಪಾರು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ನೌಕಾಯಾನವನ್ನು ಆಯೋಜಿಸಿದ್ದ ‘ಫ್ರೀಡಂ ಫ್ಲೋಟಿಲ್ಲಾ ಕೋಲಿಶನ್’ ಹಾಗೂ ‘ದ ಥೌಸಂಡ್ ಮ್ಯಾಡ್ಲಿನ್ಸ್ ಟು ಗಾಝಾ’ ಸಂಘಟನೆಗಳು, ಕಾರ್ಯಕರ್ತರ ಬಂಧನವನ್ನು ಖಂಡಿಸಿದ್ದು, ಇಸ್ರೇಲಿ ಸೇನೆಯ ಈ ನಡೆಯು ಏಕಪಕ್ಷೀಯ ಹಾಗೂ ಕಾನೂನುಬಾಹಿರವೆಂದು ಖಂಡಿಸಿವೆ. ಕಳೆದ ವಾರ ಮಾನವೀಯ ನೆರವಿನ ಸಾಮಾಗ್ರಿಗಳೊಂದಿಗೆ 40ಕ್ಕೂ ಅಧಿಕ ನೌಕೆಗಳೊಂದಿಗೆ ಗಾಝಾವನ್ನು ತಲುಪಲು ಯತ್ನಿಸಿದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಹಾಗೂ ಯುರೋಪ್ನ ಸಂಸದರು ಒಳಗೊಂಡಂತೆ ಸುಮಾರು 450 ಕಾರ್ಯಕರ್ತರನ್ನು ಇಸ್ರೇಲ್ ಸೇನೆ ವಶಕ್ಕೆ ತೆಗೆದುಕೊಂಡಿತ್ತು.
ಯುಟ್ಯೂಬರ್ ಮನೆಯಲ್ಲಿ ಕೆಲಸ ಮಾಡುವಾಕೆಯಿಂದ 60 ಲಕ್ಷ ರೂ. ಬೆಲೆಯ 3 BHK ಮನೆ ಖರೀದಿ! 4 ಲಕ್ಷ ರೂ. ಫರ್ನಿಚರ್ ಖರೀದಿ!
ಹಿಂದಿ ಕಂಟೆಂಟ್ ಕ್ರಿಯೇಟರ್ ನಳಿನಿ ಉನಾಗರ್ ಅವರ ಮನೆಯ ಕೆಲಸದಾಕೆ 60 ಲಕ್ಷ ರೂ. ಮೌಲ್ಯದ ಮನೆಯನ್ನು ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. ಸೂರತ್ ಬಳಿ ಮೂರು ಬೆಡ್ರೂಮ್ ಮನೆ, ವೆಲೆಂಜಾದಲ್ಲಿ ಎರಡು ಫ್ಲೋರ್ ಮನೆ ಹಾಗೂ ಅಂಗಡಿ ಸ್ಥಳವನ್ನು ಬಾಡಿಗೆಗೆ ನೀಡಿ ಆದಾಯ ಗಳಿಸುತ್ತಿರುವುದು ತಿಳಿದುಬಂದಿದೆ. ಬಡವರು ಹಣವನ್ನು ಉಳಿಸಿ ಜೀವನಕ್ಕೆ ಅಗತ್ಯವಿರುವುದಕ್ಕೆ ವ್ಯಯಿಸುತ್ತಾರೆ ಎಂದು ಅವರು ವಿವರಿಸಿದ್ದಾರೆ.
ಕಲಬುರಗಿ | ಪೆಟ್ರೋಲ್ ಬಂಕ್ ಕೆಲಸಗಾರನ ಮೇಲೆ ಹಲ್ಲೆ ಪ್ರಕರಣ : ಮೂವರ ಬಂಧನ
ಕಲಬುರಗಿ: ನಗರದ ವಿಶ್ವರಾಧ್ಯ ದೇವಸ್ಥಾನದ ಬಳಿಯ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕುವ ವಿಷಯಕ್ಕೆ ಜಗಳ ತೆಗೆದು ಬಂಕ್ ಕೆಲಸಗಾರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಒಂದು ಹರಿತ ಆಯುಧ ಹಾಗೂ ಎರಡು ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ್ಯೂ ರಾಘವೇಂದ್ರ ಕಾಲೋನಿಯ ಬಲಬೀಮ್ ಸೇನೆ ಹುನಮಾನ ಗುಡಿ ಸಮೀಪದ ಮೋರೆ ಕಾಂಪ್ಲೇಕ್ಸ್ ಹತ್ತಿರ ನಿವಾಸಿ ವಿನೋದ @ ಚಾಕಲೇಟ ವಿನ್ಯಾ ಬಾಪು ಪಾಟೀಲ (18), ಕಲಬುರಗಿ ತಾಲ್ಲೂಕಿನ ಭೂಪಾಲ ತೆಗನೂರ ಗ್ರಾಮದ ನಾಗೇಶ ತಂದೆ ವಿಠಲರಾವ ಕಟ್ಟಿಮನಿ (19) ಹಾಗೂ ಆಳಂದ ಚಿಕ್ ಪೋಸ್ಟ್ ಹತ್ತಿರದ ರಾಮತೀರ್ಥ ನಗರ ನಿವಾಸಿ ವಿನೋದ @ ಟೈಗರ್ ವಿನೋದ ತಂದೆ ತಾಯಪ್ಪ ದಂಡಗುಲೆ (19) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್ ಬಂಕ್ ನಲ್ಲಿ ತ್ರಿಶೂಲ್ ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈ ಕುರಿತು ತ್ರಿಶೂಲ್ ತಂದೆ ಶಿವಕುಮಾರ್ ದೇವೇಂದ್ರಪ್ಪ ಧರ್ಮವಾಡಿ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹಲ್ಲೆ ಮಾಡಿದ ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ಐಪಿಎಂ ನ್ಯಾಶನಲ್ ಬಿಸಿನೆಸ್ ಕ್ವಿಝ್ : ರೋಶನಿ ನಿಲಯ ಕಾಲೇಜಿಗೆ ಚಾಂಪಿಯನ್ಶಿಪ್
ಮಂಗಳೂರು: ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ (ಎನ್ಐಪಿಎಂ)ನ ಮಂಗಳೂರು ಘಟಕ ವತಿಯಿಂದ ನಗರದ ಸ್ವಸ್ತಿಕ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ನಲ್ಲಿ ನಡೆದ ಎನ್ಐಪಿಎಂ ನ್ಯಾಶನಲ್ ಬಿಸಿನೆಸ್ ಕ್ವಿಝ್ನಲ್ಲಿ ಮಂಗಳೂರಿನ ರೋಶನಿ ನಿಲಯ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ತಂಡ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳ ತಂಡ ತೃತೀಯ ಬಹುಮಾನ ಪಡೆಯಿತು. ವಿವಿಧ ಶಿಕ್ಷಣ ಸಂಸ್ಥೆಗಳ ಒಟ್ಟು 18 ತಂಡಗಳು ಭಾಗವಹಿಸಿದ್ದವು. ಮಂಗಳೂರು ಕ್ವಿಜಿಂಗ್ ಫೌಂಡೇಶನ್ನ ಡಾ. ಅಣ್ಣಪ್ಪ ಕಾಮತ್ ಮತ್ತು ಡಾ.ವಿಶ್ವಾಸ್ ಪೈ ಇವರು ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಸ್ವಸ್ತಿಕ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಅವರು ಕಾರ್ಪೊರೇಟ್ ಜಗತ್ತಿನ ವಿಕಸನಗೊಳ್ಳುತ್ತಿರುವ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕಾ ವೃತ್ತಿಪರರ ನಡುವಿನ ನಿರಂತರ ಸಹಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಕಿಝಿಂಗ್ ಫೌಂಡೇಶನ್ನ ಕಾರ್ಯಕಾರಿ ಸಮಿತಿ ಸದಸ್ಯರಾದ ಯೋಗೀಶ್ ಕಲಸಡ್ಕ , ಮನೋಜ್ ಕುಮಾರ್ ಉಪಸ್ಥಿತರಿದ್ದರು. ಎನ್ಐಪಿಎಂ ಮಂಗಳೂರು ಘಟಕದ ಅಧ್ಯಕ್ಷ ಪ್ರಭೋದ ಕೆ.ಎಸ್. ಸ್ವಾಗತಿಸಿ, ಜತೆ ಕಾರ್ಯದರ್ಶಿ ನಿತಿನ್.ಎಂ.ಆರ್.ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ದಿವ್ಯಶ್ರೀ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಹಿಳೆಗೆ ಬಾಂಬೆ ಬ್ಲಡ್ ಪೂರೈಸಿದ ಮಂಗಳೂರಿನ ರೆಡ್ಕ್ರಾಸ್
ಮಂಗಳೂರು , ಅ.8: ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಮಂಗಳೂರು ಘಟಕದ ಬ್ಲಡ್ಬ್ಯಾಂಕ್ ವಿಶ್ವದ ಅಪರೂಪದ ಬಾಂಬೆ ಗುಂಪಿನ ರಕ್ತದ ಅಗತ್ಯವನ್ನು ಪೂರೈಸಿ ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರಿಗೆ ತುರ್ತಾಗಿ ಎರಡು ಯೂನಿಟ್ ಬಾಂಬೆ ಗುಂಪಿನ ರಕ್ತದ ಅಗತ್ಯವಿತ್ತು. ಈ ರಕ್ತಗುಂಪು ಅತ್ಯಂತ ವಿರಳವಾಗಿದ್ದು, ಸ್ಥಳೀಯ ರಕ್ತನಿಧಿಗಳಲ್ಲಿ ಲಭ್ಯವಾಗದ ಕಾರಣ ಪರಿಸ್ಥಿತಿ ಗಂಭೀರವಾಗಿತ್ತು. ರೆಡ್ಕ್ರಾಸ್ ಮಂಗಳೂರು ಘಟಕದ ಬ್ಲಡ್ಬ್ಯಾಂಕ್ನ ಸಿಬ್ಬಂದಿ ತಕ್ಷಣ ರಾಜ್ಯದ ವಿವಿಧ ಭಾಗಗಳು ಹಾಗೂ ಪಕ್ಕದ ರಾಜ್ಯಗಳ ರಕ್ತದಾನಿಗಳನ್ನು ಸಂಪರ್ಕಿಸಿದರು. ಸತತ ಪ್ರಯತ್ನದ ಫಲವಾಗಿ ಉಡುಪಿಯ ವಿದ್ಯಾ ನಗರ ನಿವಾಸಿ ಸುಧೀರ್ ಹಾಗೂ ಕೇರಳದ ಕ್ರಿಸ್ಟಿ ಸ್ಯಾಮ್ ಜೋನ್ ಎಂಬ ಇಬ್ಬರು ದಾನಿಗಳನ್ನು ಸಂಪರ್ಕಿಸಲಾಯಿತು. ಇಬ್ಬರು ದಾನಿಗಳು ಮಂಗಳೂರಿಗೆ ಆಗಮಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಸಕಾಲದಲ್ಲಿ ಅಗತ್ಯ ರಕ್ತ ಪೂರೈಸಿದ ಕಾರಣ ಜೀವ ರಕ್ಷಣೆ ಸಾಧ್ಯವಾಗಿದೆ. ರಕ್ತದಾನಿಗಳ ಸೇವೆಯನ್ನು ಹಾಗೂ ಬ್ಲಡ್ಬ್ಯಾಂಕ್ ಸಿಬ್ಬಂದಿಯ ನೆರವನ್ನು ಆಸ್ಪತ್ರೆಯ ವೈದ್ಯರು ಹಾಗೂ ರೋಗಿಯ ಕುಟುಂಬದವರು ಪ್ರಶಂಸಿದ್ದಾರೆ. ರಕ್ತದಾನ ಜೀವದಾನವಾಗಿದ್ದು ಇದು ಪ್ರತಿಯೊಬ್ಬ ನಾಗರಿಕನ ಮಾನವೀಯ ಕರ್ತವ್ಯವಾಗಿದೆ. ಅಪರೂಪದ ರಕ್ತಗುಂಪು ಇರುವವರು ಅತ್ಯಂತ ಅಗತ್ಯವಾಗುವ ಸಂದರ್ಭಗಳಲ್ಲಿ, ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ರೆಡ್ಕ್ರಾಸ್ ಸಂಸ್ಥೆ ವಿನಂತಿಸಿದೆ.
ಕಲಬುರಗಿ | 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು
ಕಲಬುರಗಿ: ಸಂಘವೊಂದರ ನೋಂದಣಿ ಮಾಡುವುದಕ್ಕಾಗಿ ಲಂಚದ ಬೇಡಿಕೆಯಿಟ್ಟು, 5 ಸಾವಿರ ರೂಪಾಯಿ ಹಣ ಪಡೆಯುತ್ತಿರುವಾಗಲೇ ಅಧಿಕಾರಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬುಧವಾರ ಸೇಡಂ ಪಟ್ಟಣದಲ್ಲಿ ನಡೆದಿದೆ. ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಮಲ್ಲಿಕಾರ್ಜುನ್ ಹಾಗೂ ಕಂಪ್ಯೂಟರ್ ಆಪರೇಟರ್ ಸಂಗೀತಾ ಎಂಬಾತರೆ ಲೋಕಾಯುಕ್ತರ ಬಲೆಗೆ ಬಿದ್ದಿರುವ ಅಧಿಕಾರಿಗಳಾಗಿದ್ದಾರೆ. ಶ್ರೀ ಬೀರಲಿಂಗೇಶ್ವರ ಹೊಸ ಕೋಳಿ ಸಾಕಾಣಿಕೆ ಮಾಡೋದಕ್ಕೆ ಹಾಗೂ ಮಾರಾಟಗಾರರ ಸಹಕಾರಿ ಸಂಘದ ನೊಂದಣಿಗೆ ಅಧಿಕಾರಿ ಮಲ್ಲಿಕಾರ್ಜುನ್ ಅವರು 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಬೀರಪ್ಪ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ ಮೇರೆಗೆ ಲೋಕಾ ಪೊಲೀಸರು ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ನಿಬಂಧಕ ಹಾಗೂ ಕಂಪ್ಯೂಟರ್ ಆಪರೇಟರ್ ರನ್ನು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೀತಾ ಬೆನಾಳ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಸಿಬ್ಬಂದಿ ಮಲ್ಲಿನಾಥ ಸೇರಿದಂತೆ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪಡೆಯುವ ಜ್ಞಾನವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು : ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು ವಿವಿಯಲ್ಲಿ 60ನೇ ಘಟಿಕೋತ್ಸವ
ಬಹುಕೋಟಿ ವಂಚನೆ ಪ್ರಕರಣ | ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ವಿರುದ್ಧ ಲುಕೌಟ್ ನೋಟಿಸ್
ಲಕ್ನೊ, ಅ. 8: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಹಾಗೂ ಅವರ ಕುಟುಂಬದ ವಿರುದ್ಧ ಉತ್ತರಪ್ರದೇಶದ ಸಂಭಲ್ ಪೊಲೀಸರು ಲುಕೌಟ್ ನೋಟಿಸು ಜಾರಿ ಮಾಡಿದ್ದಾರೆ. ಜಾವೇದ್ ಹಬೀಬ್, ಅವರ ಪುತ್ರ ಹಾಗೂ ಇತರ ಮೂವರ ವಿರುದ್ಧ 20 ಎಫ್ಐಆರ್ಗಳು ದಾಖಲಾದ ಬಳಿಕ ಈ ನೋಟಿಸು ನೀಡಲಾಗಿದೆ. ‘‘ಈ ಪ್ರಕರಣ 5ರಿಂದ 7 ಕೋಟಿ ರೂ. ವಂಚನೆಯನ್ನು ಒಳಗೊಂಡಿರುವಂತೆ ಕಂಡು ಬರುತ್ತದೆ. ಸಂತ್ರಸ್ತರು ನಿರಂತರ ದೂರು ದಾಖಲಿಸಿದ್ದಾರೆ. ಅಲ್ಲದೆ, ವಂಚಿಸಿದ ಒಟ್ಟು ಮೊತ್ತ ಹೆಚ್ಚಾಗುವ ನಿರೀಕ್ಷೆ ಇದೆ. ತನಿಖೆ ಇದುವರೆಗೆ 1 ಕೋಟಿ ರೂ. ವರೆಗಿನ ವಂಚನೆಯನ್ನು ಬಹಿರಂಗಪಡಿಸಿದೆ’’ ಎಂದು ಸಂಭಲ್ ಪೊಲೀಸ್ ವರಿಷ್ಠ ಕೆ.ಕೆ. ಬಿಷ್ಣೋಯಿ ತಿಳಿಸಿದ್ದಾರೆ. ‘‘ಸಂಭಲ್ ನಲ್ಲಿ ಅಪರಾಧ ಹಾಗೂ ಅಪರಾಧಿಗಳನ್ನು ಮಟ್ಟ ಹಾಕಲು ಜಾವೇದ್ ಹಬೀಬ್, ಆತನ ಪುತ್ರ ಹಾಗೂ ಇತರ ಮೂವರ ವಿರುದ್ಧ ಒಟ್ಟು 20 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವ್ಯಕ್ತಿಗಳು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದರು ಹಾಗೂ ಜನರನ್ನು ವಂಚಿಸುತ್ತಿದ್ದರು. ಹೂಡಿಕೆಯ ಆಮಿಷ ಒಡ್ಡಿ ಜನರಿಂದ 5-7 ಕೋಟಿ ವರೆಗೆ ಹಣ ಪಡೆದುಕೊಂಡಿದ್ದಾರೆ. ಈ ವಿಷಯದ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ. ಒಟ್ಟು 35 ಜನರು ದೂರು ದಾಖಲಿಸಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ತನ್ನ ಸೊತ್ತುಗಳು ಹಾಗೂ ಡಿಜಿಟಲ್ ವಹಿವಾಟಿನ ಹಿನ್ನೆಲೆಯಲ್ಲಿ ಪರಿಶೀಲನೆಗೆ ಒಳಪಟ್ಟಿರುವ ಕಂಪೆನಿ ಎಫ್ಎಲ್ಸಿಯ ಸ್ಥಾಪಕಿ ಹಬೀಬ್ ಅವರ ಪತ್ನಿ ಎಂಬುದನ್ನು ಪೊಲೀಸರ ತನಿಖೆ ಸೂಚಿಸಿದೆ. ಎಫ್ಎಲ್ಸಿ 2023ರಲ್ಲಿ ಸಂಭಲ್ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭ 100ಕ್ಕೂ ಅಧಿಕ ಜನರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಮಂಗಳವಾರ ಜಾವೇದ್ ಹಬೀಬ್ ಅವರ ವಕೀಲ, ಜಾವೇದ್ ಹಬೀಬ್ ಅವರ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಬೀಬ್ ಹಾಗೂ ಅವರ ಪುತ್ರ ಕೂದಲು ಹಾಗೂ ಸೌಂದರ್ಯ ವ್ಯವಹಾರವನ್ನು ಉತ್ತೇಜಿಸಲು ಎಫ್ಎಲ್ಸಿ ಸಂಭಲ್ ನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಂಪೆನಿಯೊಂದಿರೆಗೆ ಅವರಿಗೆ ಯಾವುದೇ ಹಣಕಾಸು ಅಥವಾ ವ್ಯವಹಾರದ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್ಐ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗಾಗಲೇ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರರಿಗೆಹಣಕಾಸು ನೆರವು ಒದಗಿಸುತ್ತಿರುವ ಐಎಸ್ಐ, ಇದೀಗ ಬಲೂಚಿಸ್ತಾನದಲ್ಲೂ ರಕ್ತ ಹರಿಸಲು ಎರಡು ಉಗ್ರ ಸಂಘಟನೆಗಳನ್ನು ಒಂದುಗೂಡಿಸಿದೆ. ಲಷ್ಕರ್-ಎ-ತೋಯ್ಬಾ ಮತ್ತು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ಸಂಘಟನೆ ನಡುವೆ ರಹಸ್ಯ ಮೈತ್ರಿ ಏರ್ಪಡಿಸಿರುವ ಐಎಸ್ಐ, ಬಲೂಚ್ ಹೋರಾಟಗಾರರ ರಕ್ತ ಹರಿಸಲು ಹಣಕಾಸು ಮತ್ತು ಶಸ್ತ್ರಾಸ್ತ್ರ ನೆರವು ಒದಗಿಸುತ್ತಿದೆ.
ಮಂಗಳೂರು, ಅ.8: ಮೂಲತ: ಗದಗ ಜಿಲ್ಲೆಯವನಾಗಿದ್ದು ನಗರದ ಸುಭಾಷ್ ನಗರದಲ್ಲಿ ವಾಸವಿದ್ದ ಪಿಯುಸಿ ವಿದ್ಯಾರ್ಥಿ ಸಮರ್ಥ್ ಅರುಣ್ ಗುಜಮಾಗಡಿ ನಾಪತ್ತೆಯಾಗಿದ್ದಾನೆ. ನಗರದ ಬಾವುಟಗುಡ್ಡೆಯ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಯಾಗಿದ್ದ ಸಮರ್ಥ್ ಅ.4ರಂದು ಬೆಳಗ್ಗೆ ಕಾಲೇಜಿಗೆ ಹೋಗಿ ಕಾಲೇಜು ಮುಗಿಸಿ ಮನೆಗೆ ಬಂದು ಮ್ಯಾರಥಾನ್ಗೆ ಹೋಗಲೆಂದು ಹೇಳಿ ತಾಯಿಯ ಬಳಿಯಿಂದ ಆಧಾರ್ ಕಾರ್ಡ್ನ್ನು ಕೇಳಿದ್ದ. ತಾಯಿ ಈ ಬಗ್ಗೆ ವಿಚಾರಿಸಿ, ಕೊಡುವು ದಿಲ್ಲ ಎಂದು ಹೇಳಿದಾಗ ಮನೆಯಿಂದ ಹೊರಟು ಹೋದವನು ವಾಪಸಾಗಿಲ್ಲ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಕೆಮ್ಮಿನ ಸಿರಪ್ನಿಂದ ಸಾವುಗಳು | ಕೇಂದ್ರೀಯ ಸಮಿತಿಯಿಂದ ತನಿಖೆಗೆ ಎಫ್ಎಐಎಂಎ ಆಗ್ರಹ
ಹೊಸದಿಲ್ಲಿ,ಅ.8: ಕಲುಷಿತ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳ ಸಾವುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು(ಎಫ್ಎಐಎಂಎ), ಪ್ರಕರಣಗಳ ತನಿಖೆಗಾಗಿ ಕೇಂದ್ರೀಯ ಸಮಿತಿಯನ್ನು ರಚಿಸುವಂತೆ ಬುಧವಾರ ಆರೋಗ್ಯ ಸಚಿವಾಲಯವನ್ನು ಆಗ್ರಹಿಸಿದೆ. ತಮಿಳುನಾಡಿನ ಕಾಂಚೀಪುರಂ ಮೂಲದ ಶ್ರೀಸನ್ ಫಾರ್ಮಾಸ್ಯೂಟಿಕಲ್ಸ್ ನ ತಯಾರಿಕೆಯ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ 20 ಮಕ್ಕಳ ಸಾವುಗಳಿಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಮಕ್ಕಳ ಔಷಧಿಗಳ ಸುರಕ್ಷತೆ, ಗುಣಮಟ್ಟ, ತಯಾರಿಕೆ ಮತ್ತು ವಿತರಣೆಗೆ ಸಂಬಂಧಿಸಿದ ಮೇಲ್ವಿಚಾರಣಾ ಕಾರ್ಯವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿರುವ ಎಫ್ಎಐಎಂಎ, ಘಟನೆಯ ಕುರಿತು ವಿವರವಾದ ಮತ್ತು ನಿಷ್ಪಕ್ಷ ತನಿಖೆಗಾಗಿ ಕೇಂದ್ರೀಯ ತನಿಖಾ ಸಮಿತಿಯನ್ನು ರಚಿಸುವಂತೆ ಆರೋಗ್ಯ ಸಚಿವಾಲಯವನ್ನು ಕೋರಿದೆ. ತನಿಖೆಯು ತಯಾರಿಕೆ, ಗುಣಮಟ್ಟ ಪರೀಕ್ಷೆ ಮತ್ತು ವಿತರಣೆಯ ಎಲ್ಲ ಹಂತಗಳನ್ನು ಒಳಗೊಂಡಿರಬೇಕು ಹಾಗೂ ಪಾರದರ್ಶಕತೆ, ತಟಸ್ಥತೆ ಮತ್ತು ಬಹುಶಿಸ್ತೀಯ ಮೇಲ್ವಿಚಾರಣೆಯನ್ನು ಕಾಯ್ದುಕೊಳ್ಳಲು ಅರ್ಹ ವೈದ್ಯಕೀಯ ತಜ್ಞರು, ಔಷಧಿ ಶಾಸ್ತ್ರಜ್ಞರು ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳು ಸಮಿತಿಯಲ್ಲಿರಬೇಕು ಎಂದು ಅದು ಹೇಳಿದೆ. ಸಮಿತಿಯು ಸ್ಥಾಪಿತ ಗುಣಮಟ್ಟ ಮಾನದಂಡಗಳ ಅನುಸರಣೆಯನ್ನು ಪರಿಶೀಲಿಸಲು ಮಕ್ಕಳ ಔಷಧಿಗಳು ಹಾಗೂ ಸಿರಪ್ಗಳ ರಾಷ್ಟ್ರವ್ಯಾಪಿ ತಪಾಸಣೆಗಳು ಮತ್ತು ಯಾದೃಚ್ಛಿಕ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ಕಾರ್ಯಸಾಧ್ಯ ಶಿಫಾರಸುಗಳೊಂದಿಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಆಗ್ರಹಿಸಿರುವ ಎಫ್ಎಐಎಂಎ,ಏಕರೂಪದ ಜಾರಿ ಮತ್ತು ಕಣ್ಗಾವಲಿಗಾಗಿ ರಾಜ್ಯ ಔಷಧಿ ನಿಯಂತ್ರಣ ಅಧಿಕಾರಿಗಳು ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ನಡುವೆ ಸಮನ್ವಯವನ್ನು ಬಲಗೊಳಿಸಲು ಕರೆಯನ್ನೂ ನೀಡಿದೆ. ದೋಷಪೂರಿತ ಕೆಮ್ಮಿನ ಸಿರಪನ್ನು ಶಿಫಾರಸು ಮಾಡಿದ್ದಕ್ಕಾಗಿ ಮಧ್ಯಪ್ರದೇಶದಲ್ಲಿ ವೈದ್ಯರೋರ್ವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಎಫ್ಎಐಎಂಎ,ತನಿಖೆಯು ಪೂರ್ಣಗೊಳ್ಳುವವರೆಗೆ ನೋಂದಾಯಿತ ವೈದ್ಯರನ್ನು ತಪ್ಪಾಗಿ ದೂಷಿಸಲಾಗುವುದಿಲ್ಲ ಅಥವಾ ಕಿರುಕುಳ ನೀಡಲಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಆಗ್ರಹಿಸಿದೆ. ಬಂಧಿತ ವೈದ್ಯರನ್ನು ತಕ್ಷಣ ಬಿಡುಗಡೆಗೊಳಿಸುವಂತೆಯೂ ಅದು ಒತ್ತಾಯಿಸಿದೆ.
ಸಿಜೆಐ ಮೇಲೆ ಶೂ ಎಸೆತ ಘಟನೆ : ವಕೀಲ ರಾಕೇಶ್ ಕಿಶೋರ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್
ಬೆಂಗಳೂರು, ಅ.8: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಕೀಲ ರಾಕೇಶ್ ಕಿಶೋರ್ ವಿರುದ್ಧ ಬುಧವಾರ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಕೀಲ ಭಕ್ತವತ್ಸಲ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 132 ಹಾಗೂ 133ನೇ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯು ದಿಲ್ಲಿಯಲ್ಲಿ ನಡೆದಿದ್ದರೂ, ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಇದನ್ನು 'ಶೂನ್ಯ ಎಫ್ಐಆರ್' ಎಂದು ದಾಖಲಿಸಲಾಗಿದೆ. ನಾವು ಶೂನ್ಯ ಎಫ್ಐಆರ್ ದಾಖಲಿಸಿಕೊಂಡಿದ್ದು, ಇದನ್ನು ದಿಲ್ಲಿ ಪೊಲೀಸರಿಗೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದ ಸಭಾಂಗಣದಲ್ಲಿ (ಕೋರ್ಟ್ ನಂ.1) ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಕ್ತವತ್ಸಲ ಅವರು ತಮ್ಮ ದೂರಿನಲ್ಲಿ ಕೋರಿದ್ದಾರೆ.
ಮಾದಕ ವಸ್ತು ಸೇವನೆ ಆರೋಪ: ನಾಲ್ವರ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಅ.8: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಬುಧವಾರ ವರದಿಯಾಗಿದೆ. ಬಂಗ್ರ ಕೂಳೂರು ಬಳಿ ಮಾದಕ ವಸ್ತು ಸೇವನೆ ಆರೋಪದಲ್ಲಿ ಬೈಕಂಪಾಡಿಯ ನೋಯಲ್ ಪಿಯೂಷ್ ಡಿ ಸೋಜ (23) ವಿರುದ್ದ, ಮೇರಿಹಿಲ್ ಜಂಕ್ಷನ್ನಲ್ಲಿ ಕೊಂಚಾಡಿಯ ಉದಿತ್ ಬಿ(29) ಮತ್ತು ಕಾವೂರು ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿ ನಿಂತಿದ್ದ ಶಕ್ತಿನಗರದ ಜೀತೇಶ(21)ನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪದವಿನಂಗಡಿ ಬಳಿ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದಲ್ಲಿ ಶಕ್ತಿನಗರದ ವರುಣ್ ಸಾಲಿಯಾನ್(25)ನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೀದರ್ | ಸಿಜೆಐ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಮನವಿ
ಔರಾದ್ : ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರನ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಬುಧವಾರ ಔರಾದ್ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ತಾಲೂಕು ಸಮಿತಿಯ ಅಧ್ಯಕ್ಷ ರಾಜಕುಮಾರ್ ಡೊಂಗರೆ ಅವರು ಮಾತನಾಡಿ, ಅ.6ರಂದು ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ನಡೆದ ಈ ಘಟನೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಶೂ ಎಸೆದ ವಕೀಲ ರಾಕೇಶ್ ಕಿಶೋರನ ಕೃತ್ಯದಿಂದ ದೇಶ ಹಾಗೂ ದೇಶದ ಸಂವಿಧಾನಕ್ಕೆ ಅಪಮಾನಿಸಿದಂತಿದೆ. ಈ ಘಟನೆಯ ಕುರಿತು ತೀವ್ರ ತನಿಖೆ ನಡೆಯಬೇಕು. ತಪ್ಪಿತಸ್ಥ ಪೂರ್ವಗ್ರಹ ಪೀಡಿತ ವಕೀಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಂಡರಿ ಆಡೆ, ಎಸ್ಸಿ-ಎಸ್ಟಿ ನೌಕರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಾಜಿ ಅಮರವಾಡಿ, ಗೊಂಡ್ ನೌಕರ ಸಂಘದ ಅಧ್ಯಕ್ಷ ಗಣಪತಿ ಮೇತ್ರೆ, ಕಲ್ಯಾಣ ಕರ್ನಾಟಕ ನೌಕರ ಸಂಘದ ಅಧ್ಯಕ್ಷ ರವಿ ಡೋಳೆ, ತಾಲೂಕು ಮಟ್ಟದ ಅಧಿಕಾರಿಗಳಾದ ಬಿ.ಜೆ ರಂಗೇಶ್, ಇಮಾಲಪ್ಪ, ಅನೀಲಕುಮಾರ್ ಹಾಗೂ ಆರೋಗ್ಯ ಇಲಾಖೆಯ ಅನೀತಾ ಸೇರಿದಂತೆ ಇತರರಿದ್ದರು.
ಕಲಬುರಗಿ | ಸಿಜೆಐ ಅವರಿಗೆ ಶೂ ಎಸೆಯುವಂತಹ ವಕೀಲನ ಕೃತ್ಯ ಹೇಡಿತನ : ಆರ್.ಜಿ.ಶೇಟಕಾರ್
ಕಲಬುರಗಿ: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಪ್ರಕರಣವನ್ನು ಖಂಡಿಸುತ್ತೇವೆ ಎಂದು ರಾಷ್ಟ್ರೀಯ ಬಸವದಳ ಕಲಬುರಗಿ ಅಧ್ಯಕ್ಷ ಆರ್.ಜಿ. ಶೇಟಕಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಜೆಐ ಅವರಿಗೆ ಶೂ ಎಸೆಯುವಂತಹ ವಕೀಲನ ಕೃತ್ಯ ಹೇಡಿತನದ ಲಕ್ಷಣವಾಗಿದೆ, ನ್ಯಾಯ ಕೊಡುವ ನ್ಯಾಯಾಧೀಶರೇ ಆರೋಪಿಗಳಾದರೆ ದೀನ, ದಲಿತ, ಹಿಂದುಳಿದ ಹಾಗೂ ತುಳಿತಕ್ಕೆ ಒಳಗಾದವರಿಗೆ ಯಾವ ರೀತಿಯ ನ್ಯಾಯ ಕೊಡಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ವಕೀಲ ಎನಿಸಿಕೊಂಡವರು ಇಂತಹ ಕೃತ್ಯ ಮಾಡಿರುವುದು ದೊಡ್ಡ ಅಪರಾಧ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಬ್ಬ ಹೊಂಬುತನದ ರಾಜಕಾರಣಿ, ಬಸವಣ್ಣನವರ ಬಗ್ಗೆ ಮತ್ತೊಮ್ಮೆ ಮಾತನಾಡಿದರೆ ಅವರಿಗೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿಷೇಧಿಸಲು ಆಗ್ರಹಿಸಲಾಗುತ್ತದೆ. 900 ವರ್ಷಗಳ ಹಿಂದೆನೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ, ಅಂತಹ ಮಹಾನ್ ವ್ಯಕ್ತಿ ವಿರುದ್ಧ ಹೇಳಿಕೆ ನೀಡುವುದನ್ನು ಯತ್ನಾಳ್ ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸಿಎಂ ಸಿದ್ದರಾಮಯ್ಯ ಅವರನ್ನು ನೂರಾರು ಸ್ವಾಮೀಜಿಗಳ ನೇತೃತ್ವದಲ್ಲಿ ಕೃತಜ್ಞತೆ ಸಲ್ಲಿಸಲಾಗಿದೆ ಎಂದರು.
ಯೆನೆಪೋಯ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು, ಅ.8: ಯೆನೆಪೋಯ ಮೊಯ್ದೀನ್ ಕುಂಞ್ಞ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಜೆಪ್ಪಿನಮೊಗರು ಮಂಗಳೂರು ಇವರು ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆ ಹಾಗೂ ನಾವೀನ್ಯತೆಗಳನ್ನು ಪ್ರೋತ್ಸಾಹಿಸುವ ಯೆನೆಪೋಯ ಶಿಕ್ಷಕ ಪ್ರಶಸ್ತಿ-2025’ ಅರ್ಜಿ ಆಹ್ವಾನಿಸಲಾಗಿದೆ. ಈ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಶಿಕ್ಷಕರು, ಕಲೆ ಮತ್ತು ಕರಕುಶಲ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಪದವಿ ಪೂರ್ವ ಕಾಲೇಜು ಶಿಕ್ಷಕರು, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಅರ್ಜಿ ಸಲ್ಲಿಸಬಹುದು. ಯಾವುದೇ ರಾಜ್ಯ, ಕೇಂದ್ರ ಅಥವಾ ಖಾಸಗಿ ಶಾಲಾ ಯೋಜನೆಯಡಿಯಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರಾಗಿರಬೇಕು. ಈ ಶಿಕ್ಷಕ ಪ್ರಶಸ್ತಿಗೆ ಅರ್ಹರಾದವರಿಗೆ ರೂಪಾಯಿ 15000 ರೂ. ನ್ನು ನವೆಂಬರ್ 14, 2025 ಸ್ಥಾಪಕರ ದಿನದಂದು ಸನ್ಮಾನಿಸಿ ಹಸ್ತಾಂತರಿಸಲಾಗುವುದು, ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಹೊಂದಿರಬೇಕಾದ ಅರ್ಹತೆಯ ವಿವರ ಇಂತಿವೆ. ಅರ್ಜಿದಾರನು 10 ವರ್ಷಗಳ ಬೋಧನಾ ಸೇವೆಯನ್ನು ಪೂರ್ಣಗೊಳಿಸಿರಬೇಕು, ಶಿಕ್ಷಣ ಕ್ಷೇತ್ರದಲ್ಲಿ ಅರ್ಹತೆ ಹಾಗೂ ಶ್ರೇಷ್ಠತೆಯ ದಾಖಲೆಯನ್ನು ಸಾಬೀತುಪಡಿಸಿರಬೇಕು. ವಾರ್ಷಿಕ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲು ಟ್ರಸ್ಟ್ನಿಂದ ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಶಿಕ್ಷಕರು ಅರ್ಜಿ ನಮೂನೆಯನ್ನು ಸಂಸ್ಥೆಯ ಮುಖ್ಯಸ್ಥರು/ಕ್ಷೇತ್ರ ಶಿಕ್ಷಣಾಧಿಕಾರಿ ಇವರಿಂದ ದೃಢೀಕರಿಸಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದ ಮೊದಲು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 1. ಹೆಚ್ಚಿನ ವಿವರಗಳಿಗಾಗಿ ಯೆನೆಪೋಯ ಸ್ಕೂಲ್ ಜೆಪ್ಪಿನಮೊಗರು (08242241846 / 9945922705 / 8217392045) ಸಂಪರ್ಕಿಸುವಂತೆ ಯೆನೆಪೋಯ ಶಾಲೆಯ ಸಹಾಯಕ ನಿರ್ದೇಶಕ ಅಂಥೋನಿ ಜೋಸೆಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೊಸ BPL ರೇಷನ್ ಕಾರ್ಡ್ಗೆ ಕಾಯುತ್ತಿರುವವರಿಗೆ ಗುಡ್ನ್ಯೂಸ್: ಆಹಾರ ಸಚಿವ ಕೆಎಚ್ ಮುನಿಯಪ್ಪ ಮಹತ್ವದ ಮಾಹಿತಿ
ಹೊಸ ರೇಷನ್ ಕಾರ್ಡ್ಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಶೀಘ್ರದಲ್ಲೇ ಬಿಪಿಎಲ್ ಕಾರ್ಡ್ಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದಾರೆ. ಅರ್ಹತೆ ಇಲ್ಲದವರನ್ನು ಎಪಿಎಲ್ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ಕಾರ್ಡ್ಗಳನ್ನು ನೀಡಲಾಗುವುದು. ಕಳೆದ ಎರಡು ವರ್ಷಗಳಿಂದ ಹೊಸ ಕಾರ್ಡ್ ವಿತರಣೆ ಸ್ಥಗಿತಗೊಂಡಿತ್ತು.
ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ | ಮನುವಾದದ ಬೆಂಬಲಿಗರ ಷಡ್ಯಂತ್ರ: ರಮೇಶ್ ಬಾಬು
ಬೆಂಗಳೂರು, ಅ.8: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದಿರುವುದು ಮನುವಾದದ ಬೆಂಬಲಿಗರ ಷಡ್ಯಂತ್ರದ ಭಾಗವಾಗಿದ್ದು, ಇದರ ಹಿಂದಿರುವ ಕೈಗಳು ಹೊರಬರಬೇಕು. ಅದಕ್ಕಾಗಿ ಉನ್ನತ ಮಟ್ಟದ ತನಿಖೆಯಾಗಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ತಿಳಿಸಿದ್ದಾರೆ. ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶೂ ಎಸೆತ ಸಣ್ಣ ಪ್ರಮಾಣದ ಕೃತ್ಯವಲ್ಲ. ಇದರ ಹಿಂದಿರುವ ಕುತಂತ್ರ ಬಹಿರಂಗ ಆಗಬೇಕಾದರೆ, ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು. ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಬಿಜೆಪಿ ಮನಸ್ಥಿತಿ ಕಾರಣವಾಗಿದ್ದು, ಹಿಂದುಳಿದ ವರ್ಗಗಳ, ದಲಿತರ ನಾಯಕರು, ಅಧಿಕಾರಿಗಳನ್ನು ಗುರಿ ಮಾಡಿ ಟೀಕೆ ಮಾಡಲಾಗುತ್ತಿದೆ ಎಂದು ಖಂಡಿಸಿದರು. ದೇಶದ ಇತಿಹಾಸದಲ್ಲಿ ಇಬ್ಬರು ದಲಿತರು ಮಾತ್ರ ಮುಖ್ಯನ್ಯಾಯಧೀಶರಾಗಿ ಕೆಲಸ ಮಾಡಿದ್ದಾರೆ. ಮೊದಲನೆಯದಾಗಿ ಜಸ್ಟೀಸ್ ಬಾಲಕೃಷ್ಣ ಅವರು ಎರಡನೇ ವ್ಯಕ್ತಿಯಾಗಿ ಗವಾಯಿ ಅವರು. ಇಂತಹ ಉನ್ನತ ಸ್ಥಾನಕ್ಕೆ ದಲಿತರು ಹೋಗಿದ್ದಾರೆ ಎಂಬುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇದರ ವಿರುದ್ದ ಬಿಜೆಪಿ ಕೆಲಸ ಮಾಡುತ್ತಿದೆ. ದೇಶದ ಪ್ರಧಾನ ಮಂತ್ರಿಗಳು ಇಡೀ ದೇಶದಲ್ಲಿ ಯಾವುದೇ ಸಣ್ಣ ಘಟನೆಯಾದರೂ ಪ್ರಚಾರದ ಉದ್ದೇಶಕ್ಕಾದರೂ ಟ್ವೀಟ್ ಮಾಡುತ್ತಾರೆ. ಆದರೆ ಶೂ ಎಸೆತ ಘಟನೆಯಾದ ಆರು ಗಂಟೆಗಳ ನಂತರ ಪ್ರತಿಕ್ರಿಯೆ ನೀಡಿದ್ದಾರೆ. ಅಂದರೆ ಘಟನೆಯಲ್ಲಿ ಅವರ ಪಾತ್ರವೂ ಇದೆಯೇ ಎನ್ನುವ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದರು.
ಕೋಟೆಪುರ: ಮೀನಿನ ಆಹಾರ ತಯಾರಿಕಾ ಸಂಸ್ಕರಣಾ ಘಟಕ ಗೋದಾಮು ಬೆಂಕಿಗಾಹುತಿ
ಉಳ್ಳಾಲ: ಕೋಟೆಪುರದಲ್ಲಿರುವ ಮೀನಿನ ಆಹಾರ ತಯಾರಿಕ ಸಂಸ್ಕರಣಾ ಘಟಕದ ಗೋದಾಮು ಬೆಂಕಿಗೆ ಆಹುತಿಯಾಗಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಎಚ್.ಕೆ.ಖಾದರ್ ಹಾಜಿ ಎಂಬವರಿಗೆ ಸೇರಿದ ಎಂಎಂಪಿ ಫಿಶ್ ಫುಡ್ ಗೋದಾಮು ಬೆಂಕಿ ಅವಘಡಕ್ಕೆ ಒಳಗಾಗಿದೆ. ಸಂಜೆ ವೇಳೆ ಗೋದಾಮಿನ ಒಳಗೆ ಬೆಂಕಿ ಕಾಣಿಸಿಕೊಂಡು ಒಮ್ಮಿಂದೊಮ್ಮೆಲೇ ಸುತ್ತಲೂ ಹರಿದಾಡಿದೆ. ಬೆಂಕಿಯ ಕೆನ್ನಾಲೆ ಹೊರಗೂ ಆವರಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ನಂತರ ಮಂಗಳೂರಿನಿಂದ ಅಗ್ನಿ ಶಾಮಕ ದಳದ ವಾಹನ ಬಂದು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದೆ. ಉಳ್ಳಾಲ ಪೊಲೀಸರು ಸ್ಥಳದಲ್ಲಿದ್ದರು. ಇದರಿಂದ ಒಂದೂವರೆ ಕೋಟಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಪಿಜಿ ನೀಟ್-25: ಅರ್ಜಿ ಸಲ್ಲಿಕೆಗೆ ಅ.15ರ ವರೆಗೆ ದಿನಾಂಕ ವಿಸ್ತರಣೆ
ಬೆಂಗಳೂರು, ಅ.8: ಸ್ನಾತಕೋತ್ತರ ವೈದ್ಯಕೀಯ ಪದವಿ, ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಅ.15ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಎದುರಾಗಿರುವ ಕೆಲ ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ಎಚ್.ಪ್ರಸನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮನುವಾದಿ ವಕೀಲ ರಾಕೇಶ್ ಕಿಶೋರ್ಗೆ ಗಲ್ಲು ಶಿಕ್ಷೆ ವಿಧಿಸಲು ಗುಲಬರ್ಗಾ ನ್ಯಾಯವಾದಿಗಳ ಸಂಘ ಆಗ್ರಹ
ಕೆಂಪು ಪಟ್ಟಿ ಧರಿಸಿ ಪ್ರತಿಭಟನೆಗೆ ಇಳಿದ ವಕೀಲರು
‘ಜಾಲಿವುಡ್ ಸ್ಟುಡಿಯೋಸ್’ಗೆ ಬೀಗ ಜಡಿದ ಪ್ರಕರಣ : 10 ದಿನಗಳ ಕಾಲಾವಕಾಶ ಕೇಳಿ ಮನವಿ
ಬೆಂಗಳೂರು, ಅ.8: ಪರಿಸರ ನಿಯಮ ಉಲ್ಲಂಘನೆ ಆರೋಪದ ಕಾರಣ ಜಾಲಿವುಡ್ ಸ್ಟುಡಿಯೋಸ್ಗೆ ಬೀಗ ಜಡಿದ ಪ್ರಕರಣ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ ನಿಯೋಗ ಭೇಟಿ ನೀಡಿ, ನೋಟಿಸ್ಗೆ ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದೆ. ಜಿಲ್ಲಾಧಿಕಾರಿಯನ್ನು ಭೇಟಿಯಾಗಿರುವ ಜಾಲಿವುಡ್ ಆಡಳಿತ ಮಂಡಳಿಯವರು, ಜಾಲಿವುಡ್ ಸ್ಟುಡಿಯೋಸ್ನಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬಿಗ್ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ. ಈ ರೀತಿ ಏಕಾಏಕಿ ಬಂದ್ ಮಾಡಿದರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬರಲಿದೆ. ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ ಎಂದು ಮನವಿಯಲ್ಲಿ ಕೋರಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್, ಜಾಲಿವುಡ್ ಸ್ಟುಡಿಯೋಸ್ನವರು 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಮನವಿ ಪುರಸ್ಕರಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರ್ಗಾಯಿಸಿದ್ದೇವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಧಾರದಂತೆ ನಮ್ಮ ಮುಂದಿನ ಕ್ರಮ ಇರಲಿದೆ ಎಂದು ತಿಳಿಸಿದ್ದಾರೆ. ‘ಜಾಲಿವುಡ್ ಸ್ಟುಡಿಯೋಸ್ಗೆ 10 ದಿನ ಕಾಲಾವಕಾಶ ಕೊಟ್ಟಿರುವ ಸಂಬಂಧ ನಮಗೆ ಯಾವುದೇ ಮನವಿ ಬಂದಿಲ್ಲ. ನಾವು ಯಾವುದೇ ರೀತಿ ಅವಕಾಶವನ್ನೂ ನೀಡಿಲ್ಲ. ನಮಗೆ ಬಿಗ್ಬಾಸ್ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ. ಕಾನೂನು ಉಲ್ಲಂಘನೆ ಮಾಡಿದ ಕಾರಣಕ್ಕೆ ನಾವು ಜಾಲಿವುಡ್ ಸಂಸ್ಥೆಗೆ ನೋಟಿಸ್ ಕೊಟ್ಟಿದ್ದೇವೆ. 10 ದಿನದ ಕಾಲಾವಕಾಶ ಕೊಡುವ ಬಗ್ಗೆ ಅವರ ಮನವಿ ಬಂದ ಬಳಿಕ ನಾವು ಪರಿಶೀಲಿಸುತ್ತೇನೆ. ಈ ಪ್ರಕರಣ ಸದಸ್ಯ ನ್ಯಾಯಾಲಯದಲ್ಲಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ’ -ಪಿ.ಎಂ.ನರೇಂದ್ರಸ್ವಾಮಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
School Students: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: \ಕರ್ನಾಟಕದ ವಿದ್ಯಾರ್ಥಿಗಳು &ಶಿಕ್ಷಕರಿಗೆ ಸಂಕಷ್ಟ\
School Students: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾದಾಗಿನಿಂದಲೂ ಹಲವು ಕಾರಣಗಳಿಗೆ ವಿವಾದಕ್ಕೆ ಕಾರಣವಾಗುತ್ತಿದೆ. ಇದೀಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಇದರಿಂದ ಮಕ್ಕಳು ಹಾಗೂ ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಸಂಸದರು ಹಾಗೂ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವರು ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಷಯದ
ಅಕ್ರಮ ಮರಳುಗಾರಿಕೆಗೆ ದಾಳಿ: ವಾಹನ ವಶಕ್ಕೆ
ಕೋಟ, ಅ.8: ನಂಚಾರು ಗ್ರಾಮದ ಚೀನಿಬೆಟ್ಟು ಚೌಂಡಾಲ ಸೀತಾನದಿ ಹೊಳೆಯಲ್ಲಿ ಅ.8ರಂದು ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ದಾಳಿ ನಡೆಸಿದ ಕೋಟ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಪಿಕ್ಅಪ್ ವಾಹನ ಹಾಗೂ ಸುಮಾರು 5,000ರೂ. ಮೌಲ್ಯದ ಮರಳನ್ನು ಸ್ವಾದೀನಪಡಿಸಿ ಕೊಳ್ಳಲಾಗಿದೆ. ಈ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಗಣೇಶ್ ಶೆಟ್ಟಿ ನಂಚಾರು ಹಾಗೂ ಚೇತನ ನಾಯ್ಕ ಎಂಬವರು ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ| ಗಿಫ್ಟ್ ಹೆಸರಿನಲ್ಲಿ ಮಹಿಳೆಗೆ 11.92 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಕುಂದಾಪುರ, ಅ.8: ಸೈಬರ್ ವಂಚಕರು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ಮೂಲಕ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೇಶ್ವರ ಗ್ರಾಮದ ಹೊಸ ಬಡಾಕೇರಿಯ ಅಭಿನಯ(40) ಎಂಬವರು ಫೇಸ್ಬುಕ್ಗೆ ಡೆನಿಯಲ್ ಮೈಕಲ್ ಎಂಬ ಹೆಸರಿನ ವ್ಯಕ್ತಿ ಮೇ ತಿಂಗಳಲ್ಲಿ ಸಂದೇಶ ಕಳುಹಿಸಿ, ಒಂದು ಮೊಬೈಲ್ ಹಾಗೂ ಬ್ಯಾಗ್ ಮತ್ತು 50000 ಡಾಲರ್ ನೀಡುವುದಾಗಿ ತಿಳಿಸಿದ್ದನು. ಅದು ಇಂಡಿಯನ್ ಕರೆನ್ಸಿಯಲ್ಲಿ 56 ಲಕ್ಷ ರೂ. ಆಗುವುದಾಗಿ ಹೇಳಿ ಇದನ್ನು ಗಿಫ್ಟ್ ರೂಪದಲ್ಲಿ ಮನೆಗೆ ಕಳುಹಿಸುವುದಾಗಿ ಹೇಳಿದ್ದನು. ಈ ಗಿಫ್ಟ್ ಮನೆಗೆ ಬರಬೇಕಾದರೆ ಹಣ ಹಾಕುವಂತೆ ಆತ ತಿಳಿಸಿದ್ದು, ಅದನ್ನು ನಂಬಿದ ಅಭಿನಯ, ವಿವಿಧ ಹಂತ ಗಳಲ್ಲಿ ಒಟ್ಟು 11,92,500ರೂ. ಹಣವನ್ನು ಹಾಕಿದ್ದರು. ಆದರೆ ಸೈಬರು ವಂಚಕರು ಗಿಫ್ಟ್ ನೀಡದೆ, ಹಣವನ್ನೂ ವಾಪಾಸ್ಸು ಮಾಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
ಟ್ರಂಪ್ ತೊಂದರೆ ಕೊಟ್ಟಷ್ಟು ಅಭಿವೃದ್ದಿಯಲ್ಲಿ ವೇಗ : ಐಫೋನ್ ರಫ್ತಿನಲ್ಲಿ ಜಾಗತಿಕ ದಾಖಲೆ ಬರೆದ ಭಾರತ!
Achievement in iPhone Exports : ಅಮೆರಿಕಾದ ಚಿತ್ರವಿಚಿತ್ರ ಸುಂಕದ ಹೇರಿಕೆಯ ನಡುವೆಯೂ, ಅಮೆರಿಕ ಎಲ್ಲಾ ರಂಗದಲ್ಲೂ ಅಭಿವೃದ್ದಿಯಲ್ಲಿ ವೇಗವನ್ನು ಪಡೆದುಕೊಳ್ಳುತ್ತಿದೆ. ಐಫೋನ್ ರಫ್ತಿನಲ್ಲಿ ಭಾರತ ಗಮನಾರ್ಹ ಅಭಿವೃದ್ದಿಯನ್ನು ಸಾಧಿಸಿದೆ. ಮೊದಲಾರ್ಧದಲ್ಲೇ ಹತ್ತು ಬಿಲಿಯನ್ ಮೌಲ್ಯದ ರಫ್ತನ್ನು ಭಾರತ ಸಾಧಿಸಿದೆ.
ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು: ಪ್ರಕರಣ ದಾಖಲು
ಬೈಂದೂರು, ಅ.8: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗದು ಹಾಗೂ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಬಿಜೂರ ಗ್ರಾಮದ ಪರ್ಕೇರಿ ಎಂಬಲ್ಲಿ ಅ.5ರ ಬೆಳಗ್ಗೆಯಿಂದ ಅ.8ರ ಬೆಳಗ್ಗಿನ ಮಧ್ಯಾವಧಿಯಲ್ಲಿ ನಡೆದಿದೆ. ಮುಂಬೈಯಲ್ಲಿ ವ್ಯವಹಾರ ಮಾಡಿಕೊಂಡಿರುವ ನಾಗರಾಜ್ ಭಟ್ ಎಂಬವರ ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ 260000ರೂ. ನಗದು ಮತ್ತು ಸುಮಾರು ಎರಡೂವರೆ ಯಿಂದ 3 ಕೆಜಿ ತೂಕದ 2,50000ರೂ. ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 5,10,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಫುದ್ದೀನ್ ಕೊಲೆ ಪ್ರಕರಣ: ಆರೋಪಿಗೆ ರಿಧಾ ಶಭನಾಗೆ ನ್ಯಾಯಾಂಗ ಬಂಧನ
ಉಡುಪಿ, ಅ.8: ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಕೊಲೆ ಪ್ರಕರಣದ ಆರೋಪಿ ರಿಧಾ ಶಭನಾ(27)ಗೆ ಉಡುಪಿ ನ್ಯಾಯಾಲಯವು 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ರಿಧಾ ಶಭನಾಳನ್ನು ಪೊಲೀಸರು ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಉಡುಪಿಯ ಸಿನೀಯರ್ ಸಿವಿಲ್ ಜಡ್ಜ್ ಹಾಗೂ ಸಿಜೆಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯವು ಆಕೆಯನ್ನು ಅ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಆರೋಪಿಗಳಾದ ಮಹಮದ್ ಫೈಸಲ್ ಖಾನ್, ಮೊಹಮದ್ ಶರೀಫ್, ಅಬ್ದುಲ್ ಶುಕೂರು ಯಾನೆ ಅದ್ದು ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇವರು ನಾಲ್ವರು ಆರೋಪಿಗಳನ್ನು ಪೊಲೀಸರು ಅ.18ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಮುಖ್ಯನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆತ: ಉಡುಪಿ ವಕೀಲರ ಸಂಘದಿಂದ ಖಂಡನಾ ನಿರ್ಣಯ
ಉಡುಪಿ, ಅ.8: ವಕೀಲನೊಬ್ಬ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಪಾದರಕ್ಷೆ ಎಸೆದು ನ್ಯಾಯಾಂಗದ ಘನತೆಗೆ ಧಕ್ಕೆ ಎಸಗಿದ ಘಟನೆಯನ್ನು ಇಂದು ಉಡುಪಿ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ಸರ್ವಾನುಮತದಿಂದ ಖಂಡಿಸಲಾಯಿತು. ಮತ್ತು ಈ ದುಷ್ಕೃತ್ಯವನ್ನು ಎಸಗಿದ ಆರೋಪಿಯನ್ನು ಉಗ್ರ ಶಿಕ್ಷೆಗೆ ಒಳಪಡಿಸಿ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಲಾಯಿತು. ಈ ಘಟನೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ. ಸಂವಿಧಾನ ಓದಿದ, ಪ್ರಜಾಸತ್ತೆ ಯನ್ನು ಎತ್ತಿ ಹಿಡಿಯ ಬೇಕಾದ ಹಿರಿಯ ವಕೀಲರೊಬ್ಬರು ನ್ಯಾಯಪೀಠದ ಕಡೆಗೆ ಚಪ್ಪಲಿ ಎಸೆಯುತ್ತಾರೆ ಮಾತ್ರವಲ್ಲ ಅದನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದಾದರೆ ಆತನದು ಎಂತಹ ಕ್ರಿಮಿನಲ್ ಮನಸ್ಥಿತಿ ಇರಬೇಕು? ಅರಿವಿದ್ದೂ ಎಸಗಿದ ಈ ಕೃತ್ಯಕ್ಕೆ ಕಠಿಣ ಶಿಕ್ಷೆ ಆಗಲೇ ಬೇಕು. ನ್ಯಾಯಪೀಠದ ಮೇಲೆ ಎಸಗಿರುವ ಈ ಕೃತ್ಯವನ್ನು ಸಂವಿಧಾನದ ಮೇಲೆ ಗೌರವವಿರುವ ಪ್ರತಿಯೊಬ್ಬ ನಾಗರಿಕನೂ ಖಂಡಿಸಬೇಕಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಸಭೆಯಲ್ಲಿ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯ ದರ್ಶಿ ರಾಜೇಶ್ ಎ.ಆರ್., ಖಜಾಂಚಿ ಗಂಗಾಧರ ಎಚ್.ಎಂ., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಮೂಡುಬೆಳ್ಳೆ ಸಹಿತ ಕಾರ್ಯಕಾರಿ ಸಮಿತಿಯ ಸಕಲ ಸದಸ್ಯರು ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಘಟನೆಯ ಬಗ್ಗೆ ಉನ್ನತ ಮಟ್ಟದ ನಡೆಸಬೇಕೆಂದು ಮತ್ತು ಇಂತಹ ದುರ್ಘಟನೆಗಳು ಪುನರಾವರ್ತನೆ ಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೊರಗರು, ಜೇನುಕುರುಬರಿಗೆ ಪ್ರತ್ಯೇಕ ಒಳ ಮೀಸಲಾತಿ ಅಗತ್ಯ: ಪಾಂಗಾಳ ಬಾಬು ಕೊರಗ
ಶಿರ್ವ, ಅ.8: ಕೊರಗರು ಮತ್ತು ಜೇನುಕುರುಬರನ್ನು ನೈಜ ದುರ್ಬಲ ಬುಡಕಟ್ಟು ಸಮುದಾಯಗಳೆಂದು ಸರಕಾರ ಈ ಹಿಂದೆಯೇ ಗುರುತಿಸಿದೆ. ಆದ್ದರಿಂದ ಸರಕಾರ ಕಾಲ ವಿಳಂಬ ಮಾಡದೆ ಈ ಎರಡು ಆದಿಮ ಬುಡ ಕಟ್ಟುಗಳನ್ನು ಪ್ರತ್ಯೇಕಿಸಿ, ಒಳಮೀಸಲಾತಿಯನ್ನು ಘೋಷಿಸಬೇಕು ಎಂದು ಹಿರಿಯ ಸಾಹಿತಿ, ಕೊರಗ ಸಮುದಾಯದ ಹೋರಾಟ ಗಾರ ಪಾಂಗಾಳ ಬಾಬು ಕೊರಗ ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಸುಮಾರು 51 ಸಮುದಾಯಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿವೆ. ವಾಲ್ಮೀಕಿ, ಬೇಡ, ಮರಾಠಿ, ನಾಯ್ಕದಂತಹ ಬಲಿಷ್ಠ ಹಾಗೂ ಪ್ರಭಾವಿ ಸಮುದಾಯಗಳು ಸರಕಾರದ ಎಲ್ಲಾ ಮೀಸಲಾತಿಯ ಅವಕಾಶ ಗಳನ್ನು ಹಾಗೂ ಸರಕಾರದ ಸವಲತ್ತು ಕಬಳಿಸಿಕೊಂಡು ಕೊರಗರಂತಹ ಸಣ್ಣಪುಟ್ಟ ಸಮುದಾಯಗಳಿಗೆ ವಂಚಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಜನಸಂಖ್ಯೆ, ಶಿಕ್ಷಣ, ಭೂ ಬಳಕೆ, ಹಾಗೂ ರಾಜಕೀಯ ವಾಗಿಯೂ ಈ ಸಮುದಾಯಗಳು ಪ್ರಬಲವಾಗಿವೆ ಎಂದು ಅವರು ತಿಳಿಸಿದ್ದಾರೆ. ಅನಾದಿ ಕಾಲದಿಂದಲೂ ಸಾಮಾಜಿಕ ಶೋಷಣೆ, ದಬ್ಬಾಳಿಕೆಗಳಿಂದ ನೊಂದು ಬೆಂದಿರುವ ಹಾಗೂ ವಿನಾಶದ ಅಂಚಿನಲ್ಲಿರುವ ಕೊರಗರಂತಹ ಅಸುರಕ್ಷಿತ ಸಮುದಾಯಗಳು ಅವರೊಂದಿಗೆ ಸ್ಫರ್ಧಿಸಿ ಸಮಪಾಲು ಪಡೆಯುವುದು ಸಾಧ್ಯವೇ ಇಲ್ಲ. ಪರಿಶಿಷ್ಟ ವರ್ಗಗಳ ಒಟ್ಟು ಶೇ.7 ಶೇಕಡ ಮೀಸಲಾತಿಯಲ್ಲಿ ಅರ್ಧ ಪರ್ಸೆಂಟ್ನ್ನು ಈ ಎರಡು ಸಮುದಾಯಗಳಿಗೆ ಮೀಸಲಿಟ್ಟರೆ ಮಾತ್ರ ಇವರ ಪ್ರಗತಿ ಸಾಧ್ಯ. ಇಲ್ಲವಾದಲ್ಲಿ ಕೆಲವೇ ವರ್ಷಗಳಲ್ಲಿ ಕೊರಗ ಸಮುದಾಯವು ಸರ್ವನಾಶ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಸಮಾಜಿಕ ಬದ್ಧತೆ ಇರುವ ಜನಸಾಮಾನ್ಯರು, ಸಾರ್ವಜನಿಕರು ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಪಾಂಗಾಳ ಬಾಬು ಕೊರಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅ.10: ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ಕಾರ್ಡ್ ವಿತರಣೆ
ಉಡುಪಿ, ಅ.8: ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಿಲ್ಲೆಯ ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ಕಾರ್ಡ್ ವಿತರಣೆಯನ್ನು ಅ.10ರಂದು ಬೆಳಗ್ಗೆ 11 ಗಂಟೆಗೆ ಅಜ್ಜರಕಾಡಿನಲ್ಲಿರುವ ಆರೂರು ಲಕ್ಮೀನಾರಾಯಣ್ ರಾವ್ ಸ್ಮಾರಕ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಉಪಸ್ಥಿತರಿದ್ದು ಸ್ಮಾರ್ಟ್ಕಾರ್ಡ್ ವಿತರಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಮಿಕ ಇಲಾಖೆ ಆಯುಕ್ತ ಎಚ್.ಎನ್ ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಇತರರು ಭಾಗವಹಿಸಲಿದ್ದಾರೆ.
ವಿದೇಶಕ್ಕೆ ಹೋಗಬೇಕಾದರೆ 60 ಕೋಟಿ ರೂ. ಠೇವಣಿ ಇಡಿ; ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಮುಂಬೈ ಹೈಕೋಟ್ ನಿರ್ದೇಶನ
ಮುಂಬೈ, ಅ. 8: ಲಾಸ್ ಏಂಜಲಿಸ್ ಗೆ ಅಥವಾ ಯಾವುದೇ ವಿದೇಶಿ ಸ್ಥಳಗಳಿಗೆ ಹೋಗಲು ಬಯಸಿದರೆ ನೀವು ಮೊದಲು 60 ಕೋಟಿ ರೂಪಾಯಿ ಮೊತ್ತವನ್ನು ಠೇವಣಿಯಾಗಿಡಬೇಕು ಎಂದು ಬಾಂಬೆ ಹೈಕೋರ್ಟ್ ಬುಧವಾರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಗಂಡ ರಾಜ್ ಕುಂದ್ರಾಗೆ ನಿರ್ದೇಶನ ನೀಡಿದೆ. ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ನ್ಯಾಯಾಲಯವು, ಅವರ ವಿರುದ್ಧ ಹೊರಡಿಸಲಾಗಿರುವ ‘ಲುಕೌಟ್ ಸರ್ಕ್ಯುಲರ್’ (ಎಲ್ಒಸಿ)ನ್ನು ರದ್ದುಪಡಿಸಲೂ ನಿರಾಕರಿಸಿದೆ. 60 ಕೋಟಿ ರೂ. ವಂಚಿಸಿದ ಆರೋಪದಲ್ಲಿ ತಮ್ಮ ವಿರುದ್ಧ ಮೊಕದ್ದಮೆ ದಾಖಲಾದ ಬಳಿಕ, ತಮ್ಮ ವಿರುದ್ಧ ಹೊರಡಿಸಲಾಗಿರುವ ಎಲ್ಒಸಿಯನ್ನು ರದ್ದುಪಡಿಸಬೇಕೆಂದು ಕೋರಿ ದಂಪತಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ. ಮುಂಬೈಯ 60 ವರ್ಷದ ಉದ್ಯಮಿ ಹಾಗೂ ಲೋಟಸ್ ಕ್ಯಾಪ್ ಫೈನಾನ್ಶಿಯಲ್ ಸರ್ವಿಸಸ್ ನ ನಿರ್ದೇಶಕ ದೀಪಕ್ ಕೊಠಾರಿ ಎಂಬವರು ಸಲ್ಲಿಸಿದ ದೂರಿನ ಆಧಾರದಲ್ಲಿ ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸ್ ನ ಆರ್ಥಿಕ ಅಪರಾಧಗಳ ವಿಭಾಗ ನಡೆಸುತ್ತಿದೆ. ನಾನು ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾಗೆ ಅವರ ಉದ್ಯಮವನ್ನು ಬೆಳೆಸುವುದಕ್ಕಾಗಿ 2015 ಮತ್ತು 2023ರ ನಡುವೆ ಹಣ ಕೊಡುತ್ತಾ ಬಂದಿದ್ದೇನೆ. ಆದರೆ ಅವರು ಹಣವನ್ನು ತಮ್ಮ ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ ಎಂಬುದಾಗಿ ತನ್ನ ದೂರಿನಲ್ಲಿ ಕೊಠಾರಿ ಆರೋಪಿಸಿದ್ದಾರೆ. ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಎಂಬ ತಮ್ಮ ಕಂಪೆನಿಗೆ 75 ಕೋಟಿ ರೂ. ಸಾಲ ನೀಡುವಂತೆ ಕೋರಿ ಶೆಟ್ಟಿ ಮತ್ತು ಕುಂದ್ರಾ ಓರ್ವ ಮಧ್ಯವರ್ತಿಯ ಮೂಲಕ 2015ರಲ್ಲಿ ನನ್ನನ್ನು ಸಂಪರ್ಕಿಸಿದ್ದರು ಎಂದು ಅವರು ಹೇಳಿದ್ದಾರೆ. ಆ ಕಂಪೆನಿಯು ಆಧುನಿಕ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿತ್ತು ಮತ್ತು ಆನ್ ಲೈನ್ ಮಾರಾಟ ಸಂಸ್ಥೆಯೊಂದನ್ನೂ ನಡೆಸುತ್ತಿತ್ತು. ಬಳಿಕ, ಈ ಮೊತ್ತವನ್ನು ಸಾಲವಾಗಿ ಪರಿಗಣಿಸದೆ ‘‘ಹೂಡಿಕೆ’’ ಎಂಬುದಾಗಿ ಪರಿಗಣಿಸುವಂತೆ ದಂಪತಿ ನನಗೆ ಮನವಿ ಮಾಡಿದರು. ಪ್ರತಿ ತಿಂಗಳು ಲಾಭ ನೀಡಲಾಗುವುದು ಮತ್ತು ಅಸಲನ್ನು ಹಿಂದಿರುಗಿಸಲಾಗುವುದು ಎಂದು ಅವರು ಹೇಳಿದರು. 2015 ಎಪ್ರಿಲ್ ನಲ್ಲಿ 31.95 ಕೋಟಿ ರೂ. ಮತ್ತು 2015 ಸೆಪ್ಟಂಬರ್ ನಲ್ಲಿ 28.53 ಕೋಟಿ ರೂ. ಮೊತ್ತವನ್ನು ಬೆಸ್ಟ್ ಡೀಲ್ ಟಿವಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೇನೆ ಎಂದಿದ್ದಾರೆ. ಆದರೆ, ಇನ್ನೊಬ್ಬ ಹೂಡಿಕೆದಾರನಿಗೆ ವಂಚಿಸಿದ ಆರೋಪದಲ್ಲಿ ಕಂಪೆನಿಯ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭವಾಗಿರುವುದು ನನಗೆ ತಿಳಿದು ಬಂತು. ನನ್ನ ಹಣವನ್ನು ವಸೂಲು ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾದವು. ದಂಪತಿಯು ಈ ಹಣವನ್ನು ಅಪ್ರಾಮಾಣಿಕತೆಯಿಂದ ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ ಎಂದು ಕೊಠಾರಿ ಆರೋಪಿಸಿದ್ದಾರೆ.
ಬೈಂದೂರು: ರೈತರ ಧರಣಿ 17ನೇ ದಿನಕ್ಕೆ; ಮೀನುಗಾರಿಕಾ ಸಚಿವ ಎಸ್.ಮಂಕಾಳ ವೈದ್ಯ ಭೇಟಿ
ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ
3 ವಿಜ್ಞಾನಿಗಳಿಗೆ ರಸಾಯನ ಶಾಸ್ತ್ರದ ನೊಬೆಲ್
‘ಮೆಟಲ್-ಆರ್ಗಾನಿಕ್ ಫ್ರೇಮ್ವರ್ಕ್’ ಅಭಿವೃದ್ಧಿಗಾಗಿ ಜಾಗತಿಕ ಪುರಸ್ಕಾರ
ಕೋಡಿಬೇಂಗ್ರೆ- ಹಂಗಾರಕಟ್ಟೆ ನಡುವೆ ಬಾರ್ಜ್ ಸೇವೆ ಲೋಕಾರ್ಪಣೆ
ಉಡುಪಿ, ಅ.8: ಸುಮಾರು 2.05 ಕೋಟಿ ರೂ. ವೆಚ್ಚದಲ್ಲಿ ಕೋಡಿ ಬೇಂಗ್ರೆ ಹಾಗೂ ಹಂಗಾರಕಟ್ಟೆ ನಡುವೆ ನದಿಯ ಮೂಲಕ ಸಂಪರ್ಕ ಕಲ್ಪಿಸುವ ಮದ್ಯಮ ಗಾತ್ರದ ಹೊಸ ಬಾರ್ಜ್ ‘ಕಾವೇರಿ’ಯನ್ನು ರಾಜ್ಯ ಮೀನುಗಾರಿಕಾ ಸಚಿವ ಮಂಕಾಳ ಎಸ್.ವೈದ್ಯ ಅವರು ಇಂದು ಹಂಗಾರಕಟ್ಟೆ ಬಂದರಿನಲ್ಲಿ ಲೋಕಾರ್ಪಣೆಗೊಳಿಸಿದರು. ದ್ವೀಪದಂತಿರುವ ಕೋಡಿಬೇಂಗ್ರೆಯ ಜನರಿಗೆ ಅಗತ್ಯ ವಸ್ತುಗಳಿಗಾಗಿ ಈ ಬಾಗದೊಂದಿಗೆ ಸಂಪರ್ಕ ಕಲ್ಪಿಸಲು ಬಳಸುವ ಬಾರ್ಜ್ನ್ನು ಲೋರ್ಕಾಪಣೆ ಗೊಳಿಸಿ ಮಾತನಾಡಿದ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ ವೈದ್ಯ, ಈ ಬಾರ್ಜ್ನಿಂದಾಗಿ ಸ್ಥಳೀಯ ಜನರಿಗೆ ಹಾಗೂ ಪ್ರವಾಸಕ್ಕೆಂದು ಆಗಮಿಸುವ ಪ್ರವಾಸಿಗರಿಗೆ ಕಡಿಮೆ ಅವಧಿಯಲ್ಲಿ ಪ್ರಯಾಣ ಬೆಳಸಲು ಇದು ಅನುಕೂಲವಾಗಲಿದೆ. ಬಾರ್ಜ್ ಇಲ್ಲದಿದ್ದಲ್ಲಿ ರಸ್ತೆ ಮೂಲಕ ಸುತ್ತುಬಳಸಿ ಹೋಗಬೇಕಿತ್ತು ಎಂದರು. ಮುಂದಿನ ದಿನಗಳಲ್ಲಿ ಸ್ಥಳೀಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆಯನ್ನು ನೀಡಿದರು. ಹಂಗಾರಕಟ್ಟೆ ಬಂದರಿನಲ್ಲಿ ಮೀನುಗಾರಿಕೆಗೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿ ಯಲ್ಲಿ ಬಂದರಿನ ಅಭಿವೃದ್ದಿ ಕಾರ್ಯ ಗಳನ್ನು ಕೈಗೊಳ್ಳಲಾಗುವುದು. ಹಾಗೂ ಇದರ ಜೊತೆಯಲ್ಲಿ ಹೂಳೆತ್ತುವ ಕಾರ್ಯವನ್ನು ಸಹ ಮಾಡಲಾಗುವುದು ಎಂದರು. ಬಂದರಿನಲ್ಲಿ ಶೆಡ್ನ ನಿರ್ಮಾಣದ ಕಾಮಗಾರಿಯನ್ನು 50ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಇದನ್ನು ಉನ್ನತೀಕರಣಗೊಳಿಸಿ ಅಭಿವೃದಿ ಪಡಿಸಬೇಕಾಗಿದೆ. ಇದಕ್ಕೆ ಸರಕಾರದ ಮಟ್ಟದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಕೋಡಿ ಬೆಂಗ್ರೆ ಗ್ರಾಮವನ್ನು ಈಗಾಗಲೇ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಸ್ಥಳೀಯ ಜನರು ವ್ಯಸನ ಮುಕ್ತವಾಗಿರುವುದು ಒಂದು ಉತ್ತಮ ಕಾರ್ಯವಾಗಿದ್ದು ಇದರಿಂದ ಜನರ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಸಾಧ್ಯವಾಗಲಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು. ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಸುಮ, ಮುಖಂಡರಾದ ದಿನೇಶ್ ಹೆಗ್ಡೆ,ರಾಜು ಬಂಗೇರ, ಪ್ರಸಾದ್ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.
ಹೊಸ ಕಟ್ಟಡಗಳಿಗೆ ವಿದ್ಯುತ್, ನೀರು ಸಂಪರ್ಕ; ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಡಿ.ಕೆ.ಶಿವಕುಮಾರ್
ಬೆಂಗಳೂರು, ಅ.8: ಸ್ವಾಧೀನ ಪ್ರಮಾಣಪತ್ರ(ಒಸಿ) ಹೊಂದಿರದ ಕಟ್ಟಡಗಳಿಗೆ ವಿದ್ಯುತ್, ನೀರು ಹಾಗೂ ಒಳ ಚರಂಡಿ ಸಂಪರ್ಕ ಕಲ್ಪಿಸಿಕೊಡದಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಇದರಿಂದಾಗಿ, ಈಗಾಗಲೆ ಮನೆಗಳನ್ನು ಕಟ್ಟಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಯಾವ ರೀತಿ ನೆರವು ನೀಡಬಹುದು ಎಂಬುದರ ಕುರಿತು ಗುರುವಾರ(ಅ.9) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸುವ ಕುರಿತು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಇಂಧನ, ಕಾನೂನು, ಪೌರಾಡಳಿತ ಇಲಾಖೆಯ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂಬಂಧ ಚರ್ಚೆ ಮಾಡಿದ್ದಾರೆ. ಅನೇಕ ಅಭಿಪ್ರಾಯಗಳು ಬಂದಿವೆ ಎಂದು ಶಿವಕುಮಾರ್ ಹೇಳಿದರು. 30/40 ಚ.ಅ. ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ಕಟ್ಟಿರುವ ಮನೆಗಳಿಗೆ ವಿದ್ಯುತ್, ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಇನ್ನೂ ಹೆಚ್ಚಿನ ವಿಸ್ತೀರ್ಣದ ಮನೆಗಳಿಗೆ ಹೇಗೆ ಈ ಸಂಪರ್ಕ ಕಲ್ಪಿಸಬಹುದು ಎಂಬುದರ ಕುರಿತು ಚರ್ಚೆ ಮಾಡಿದ್ದೇವೆ ಎಂದು ಅವರು ತಿಳಿಸಿದರು. ಸುಪ್ರೀಂಕೋರ್ಟ್ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ಗಳು ಜಾರಿಯಾಗಿವೆ. ಆದುದರಿಂದ, ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆಗದೆ ಹೇಗೆ ಜನರಿಗೆ ಅನುಕೂಲ ಮಾಡಿಕೊಡಬಹುದು ಎಂಬುದರ ಕುರಿತು ಸಲಹೆ ನೀಡುವಂತೆ ಕಾನೂನು ಇಲಾಖೆಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಾನೂನು ಇಲಾಖೆ ನೀಡುವ ಸಲಹೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಕೂಲಂಕಷವಾಗಿ ಚರ್ಚೆ ಮಾಡುತ್ತೇವೆ. ಈಗಾಗಲೆ ಮನೆಗಳನ್ನು ಕಟ್ಟಿರುವವರಿಗೆ ಹೇಗೆ ರಕ್ಷಣೆ ಮಾಡಬಹುದು ಎಂಬುದರ ಕುರಿತು ಕಾನೂನು ಚೌಕಟ್ಟಿನಲ್ಲಿ ಮಾರ್ಗಗಳನ್ನು ಹುಡುಕುತ್ತಿದ್ದೇವೆ. ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಈ ಸಂಬಂಧ ಯಾವ ರೀತಿ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ಮಾಹಿತಿಗಳನ್ನು ತರಿಸಿಕೊಳ್ಳುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಡಳಿತ ಸಚಿವ ರಹೀಂ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಬಳ್ಳಾರಿ | ಮಹರ್ಷಿ ವಾಲ್ಮೀಕಿಯ ಚಿಂತನೆಗಳು ಅಜರಾಮರ : ಪ್ರೊ.ವೆಂಕಟಗಿರಿ ದಳವಾಯಿ
ಬಳ್ಳಾರಿ : ಮಹರ್ಷಿ ವಾಲ್ಮೀಕಿಯ ಚಿಂತನೆಗಳು ಮತ್ತು ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಅರ್ಥಪೂರ್ಣವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರೊ.ವೆಂಕಟಗಿರಿ ದಳವಾಯಿ ಅವರು ಹೇಳಿದರು. ಮಂಗಳವಾರ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದ ಪರಂಪರೆ ಕಾಪಾಡುವುದರಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ವ್ಯಕ್ತಿಯ ನಡತೆ ಮತ್ತು ಅವನ ಜೀವನವನ್ನು ನಡೆಸಲು ವಾಲ್ಮೀಕಿ ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ. ಆಧುನಿಕ ದಿನಗಳಲ್ಲಿ ಜಯಂತಿಗಳು ವರ್ತಮಾನಗಳ ಬಗ್ಗೆ ತಿಳಿಸುತ್ತದೆ ಎಂದರು. ವಿಶ್ವವಿದ್ಯಾಲಯದ ಕುಲಸಚಿವ ಸಿ.ನಾಗರಾಜು, ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ ಸಾಲಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಜಯಲಕ ಅವರು ಮಾತನಾಡಿದರು. ಈ ವೇಳೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಕುಮಾರ, ಪ.ಜಾತಿ ಮತ್ತು ಪ.ಪಂಗಡಗಳ ವಿಶೇಷ ಘಟಕದ ಸಂಯೋಜಕ ಡಾ.ಕುಮಾರ, ವಿದ್ಯಾರ್ಥಿ ಕ್ಷೇಮಪಾಲನ ಘಟಕದ ನಿರ್ದೇಶಕರಾದ ಡಾ.ಗೌರಿ ಮಾಣಿಕ್ ಮಾನಸ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಬಿಎ ಪಾಲಿಕೆಗಳಲ್ಲಿ ಶೇ.50ರಷ್ಟು ಮಹಿಳಾ ಕಾರ್ಪೊರೇಟರ್ : ಡಿ.ಕೆ.ಶಿವಕುಮಾರ್
ಬೆಂಗಳೂರು, ಅ.8: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಿಗೆ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್ ಗಳು ಆಯ್ಕೆಯಾಗಿ ಬರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಬುಧವಾರ ನಗರದಲ್ಲಿ ಬಿ.ಪ್ಯಾಕ್ ಸಂಸ್ಥೆಯು ಆಯೋಜಿಸಿದ್ದ ‘ನಮ್ಮ ಬೆಂಗಳೂರಿನ ಉತ್ತಮ ಆಡಳಿತಕ್ಕೊಂದು ದೃಷ್ಟಿಕೋನ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ನಗರದಲ್ಲಿ ಅನೇಕ ಸವಾಲುಗಳಿವೆ. ಶಿಕ್ಷಣ, ಉದ್ಯೋಗ ಹಾಗೂ ಉತ್ತಮ ಜೀವನ ಕಟ್ಟಿಕೊಳ್ಳುವ ಆಸೆಯಿಂದ ಜನ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಯಾವುದೇ ನಗರದ ಜನಸಂಖ್ಯೆ ಹೆಚ್ಚಿದಾಗ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದರು. ಶಿಕ್ಷಣದ ವಿಚಾರದಲ್ಲಿ ಬೆಂಗಳೂರು ದೇಶದ ಇತರೇ ನಗರಗಳಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ಉದ್ಯೋಗಿಗಳು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿದೆ ಎಂದು ಅವರು ಹೇಳಿದರು. ನಗರದ ಹೊರ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದಾರೆ. ಹೀಗಾಗಿ ಈ ರೀತಿ ಕಸ ಎಸೆಯುವ ಎಲ್ಲ ವಾಹನ ಮಾಲಕರಿಗೆ ನೋಟೀಸ್ ನೀಡುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡೂವರೆ ವರ್ಷಗಳಿಂದ ನಾನು ಕಸ ವಿಲೇವಾರಿ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕಸದ ಮಾಫಿಯಾ ನನ್ನ ಪ್ರಯತ್ನವನ್ನು ತಡೆಯುತ್ತಿವೆ. ಕೋರ್ಟ್ನಲ್ಲಿ ಪಿಐಎಲ್ ಹಾಕಿ ನಮ್ಮನ್ನು ತಡೆಯುತ್ತಿದ್ದಾರೆ ಎಂದು ಅವರು ವಿವರಿಸಿದರು. ನಗರದ ಆಸ್ತಿಗಳ ಸಮೀಕ್ಷೆ ಮಾಡುತ್ತಿದ್ದು, ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಪತ್ತೆ ಮಾಡುತ್ತಿದ್ದೇವೆ. ದಿಲ್ಲಿಯಲ್ಲಿ ಕೇವಲ 2 ಸಾವಿರ ಕೋಟಿ ರೂ. ತೆರಿಗೆ ಮೂಲಕ ಆದಾಯ ಸಂಗ್ರಹವಾಗುತ್ತಿದೆ. ಆದರೆ ನಮ್ಮ ಸರಕಾರ ಬೆಂಗಳೂರಿನಲ್ಲಿ ಓಟಿಎಸ್ ಅನ್ನು ಜಾರಿ ಮಾಡಿ, 7 ಸಾವಿರ ಕೋಟಿ ರೂ.ವರೆಗೆ ತೆರಿಗೆ ಸಂಗ್ರಹ ಮಾಡಿದ್ದೇವೆ. ನಗರದಲ್ಲಿ ರಸ್ತೆಗುಂಡಿ ವಿಚಾರವಾಗಿ ಸಾಕಷ್ಟು ಟೀಕೆ ಮಾಡುತ್ತಾರೆ. ಆದರೆ ದಿಲ್ಲಿಯಲ್ಲಿರುವ ನನ್ನ ಮನೆ ಮುಂದಿನ ರಸ್ತೆಯಲ್ಲಿ 100 ಮೀಟರ್ ವ್ಯಾಪ್ತಿಯಲ್ಲೇ 70 ರಸ್ತೆಗುಂಡಿಗಳಿವೆ. ಆದರೂ ದಿಲ್ಲಿ ಹಾಗೂ ಇತರೆ ನಗರಗಳಲ್ಲಿರುವ ರಸ್ತೆಗುಂಡಿಗಳು ಸುದ್ದಿಯಾಗುವುದಿಲ್ಲ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ 1.25 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ಮಾಡಲು ಮುಂದಾಗಿದ್ದೇವೆ. ಟನಲ್ ರಸ್ತೆಗೆ 35-40 ಸಾವಿರ ಕೋಟಿ ರೂ., ಮೇಲ್ಸೇತುವೆಗೆ ಸುಮಾರು 14 ಸಾವಿರ ಕೋಟಿ ರೂ., ಡಬಲ್ ಡೆಕ್ಕರ್ ರಸ್ತೆಗೆ 10 ಸಾವಿರ ಕೋಟಿ ರೂ., 16,100 ಕೋಟಿ ರೂ., ಬಫರ್ ಜೋನ್ ರಸ್ತೆಗೆ 4 ಸಾವಿರ ಕೋಟಿ ರೂ. ಅನುದಾನದ ಅಗತ್ಯವಿದೆ. ಕೇವಲ ಒಂದೆರಡು ವರ್ಷಗಳಲ್ಲಿ ಎಲ್ಲವನ್ನು ಸರಿಪಡಿಸಲು ಸಾಧ್ಯವಿಲ್ಲ. ಟನಲ್ ಹೊರತಾಗಿ ಉಳಿದ ಎಲ್ಲ ಯೋಜನೆಗಳು ಮೂರ್ನಾಲ್ಕು ವರ್ಷಗಳಲ್ಲಿ ಮುಕ್ತಾಯವಾಗಲಿದ್ದು, ಟನಲ್ ರಸ್ತೆಗೆ ನಾಲ್ಕು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ಬೇಕಾಗಿದೆ ಎಂದು ಅವರು ವಿವರಿಸಿದರು. ಕಾಂಗ್ರೆಸ್ ತಂದಿರುವ ಕಾನೂನು, ಯೋಜನೆಗಳನ್ನು ಬದಲಿಸಲು ಸಾಧ್ಯವಿಲ್ಲ: ಈ ದೇಶದಲ್ಲಿ ಕಾಂಗ್ರೆಸ್ ಸರಕಾರ ತಂದಿರುವ ಕಾನೂನು, ಯೋಜನೆಗಳನ್ನು ಬೇರೆ ಯಾವುದೇ ಸರಕಾರಗಳು ಬದಲಾಯಿಸಲು ಸಾಧ್ಯವಾಗಿಲ್ಲ. ಶೈಕ್ಷಣಿಕ ಹಕ್ಕು, ಆಹಾರ ಭದ್ರತೆ, ಉದ್ಯೋಗ ಖಾತ್ರಿ, ಬ್ಯಾಂಕುಗಳ ರಾಷ್ಟ್ರೀಕರಣ, ಆಧಾರ್, ಭೂ ಸುಧಾರಣೆ ಕಾಯ್ದೆ ಯಾವುದೇ ಆಗಿರಲಿ ನಮ್ಮ ಯೋಜನೆಯನ್ನು ಬೇರೆಯವರು ಬದಲಿಸಲು ಆಗುವುದಿಲ್ಲ. ನಾವು ಯಾವುದೇ ತೀರ್ಮಾನ ಮಾಡಿದರೂ ಕಾನೂನಾತ್ಮಕವಾಗಿ ಹಾಗೂ ದೂರದೃಷ್ಟಿಯಿಂದ ಮಾಡಿರುತ್ತೇವೆ. ಹೀಗಾಗಿ ಬೇರೆ ಸರಕಾರಗಳು ಬದಲಾಯಿಸಲು ಆಗುವುದಿಲ್ಲ. ಜಿಬಿಎ ಮಾಡುವಾಗಲೂ ನಾನು ಸಮಿತಿ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಮುಂದುವರೆದಿದ್ದೇನೆ. -ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಬಿಹಾರ ವಿಧಾನಸಭಾ ಚುನಾವಣೆ | 15 ಸ್ಥಾನಗಳಿಗೆ ಮಾಂಜಿ ಪಟ್ಟು
ಪಾಟ್ನಾ,ಅ.8: ‘ನಾಲ್ವರು ಶಾಸಕರ ಬಲದ ನಮ್ಮ ಹಿಂದುಸ್ತಾನಿ ಆವಾಮ್ ಮೋರ್ಚಾ(ಎಚ್ಎಎಂ) ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧದಷ್ಟರಲ್ಲಿ ಸ್ಪರ್ಧಿಸಲು ಬಯಸಬಹುದಿತ್ತು, ಆದರೆ ಎನ್ಡಿಎ ಪಾಲುದಾರರ ವಿರುದ್ಧ ಹೋರಾಟವನ್ನು ತಪ್ಪಿಸಲು 15 ಸ್ಥಾನಗಳನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ಕೇಂದ್ರ ಸಚಿವ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರು ಬುಧವಾರ ಹೇಳಿದ್ದಾರೆ. ‘ನೀವು ನ್ಯಾಯವನ್ನು ಒದಗಿಸಲು ಬಯಸಿದರೆ ನಮಗೆ ಅರ್ಧದಷ್ಟು ಸ್ಥಾನಗಳನ್ನು ನೀಡಿ. ಆದರೆ ಅದು ಸಾಧ್ಯವಾಗದಿದ್ದರೆ ಕೇವಲ 15 ಸ್ಥಾನಗಳನ್ನು ನಮಗೆ ನೀಡಿ ಮತ್ತು ಉಳಿದಿದ್ದನ್ನು ನೀವೇ ಇಟ್ಟುಕೊಳ್ಳಿ’ ಎಂದು ಮಾಂಜಿ ಎಕ್ಸ್ ಪೋಸ್ಟ್ ನಲ್ಲಿ ಬಿಜೆಪಿಯನ್ನುದ್ದೇಶಿಸಿ ಹೇಳಿದ್ದಾರೆ. ಎಚ್ಎಎಂ ಸ್ಥಾಪನೆಯಾಗಿ 10 ವರ್ಷಗಳು ಕಳೆದಿದ್ದರೂ ಅದು ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕಾಗಿ ಅದು ಎಂಟು ಕ್ಷೇತ್ರಗಳಲ್ಲಿ ಗೆಲ್ಲುವುದು ಅಗತ್ಯವಾಗಿದೆ. ಹೀಗಾಗಿ ಮಾಂಜಿ ತನ್ನ ಪಕ್ಷಕ್ಕೆ ಕನಿಷ್ಠ 15 ಸ್ಥಾನಗಳಿಗಾಗಿ ಆಗ್ರಹಿಸುತ್ತಿದ್ದಾರೆ. ಹಿರಿಯ ಬಿಜೆಪಿ ನಾಯಕರಾದ ಧಮೇಂದ್ರ ಪ್ರಧಾನ ಮತ್ತು ವಿನೋದ ತಾವ್ಡೆ ಅವರು ಮೂರು ದಿನಗಳ ಹಿಂದೆ ಇಲ್ಲಿಯ ಮಾಂಜಿಯವರ ನಿವಾಸಕ್ಕೆ ಭೇಟಿ ನೀಡಿ ಸ್ಥಾನ ಹಂಚಿಕೆ ಕುರಿತು ಚರ್ಚಿಸಿದ್ದರು.
ಪಾಟ್ನಾ,ಅ.8: ಬಿಹಾರ ವಿಧಾನಸಭಾ ಚುನಾವಣೆಗಾಗಿ ಸ್ಥಾನ ಹಂಚಿಕೆ ಕುರಿತು ಎನ್ಡಿಎ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ತಳ್ಳಿ ಹಾಕಿರುವ ಬಿಜೆಪಿಯು, ಹಾಲಿ ಸಿಎಂ ನಿತೀಶ್ ಕುಮಾರ್ ಅವರೇ ಮೈತ್ರಿಕೂಟದ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯಾಗಿರಲಿದ್ದಾರೆ ಎಂದು ಹೇಳಿದೆ. ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು,‘ಎನ್ಡಿಎದಲ್ಲಿ ಎಲ್ಲವೂ ಸರಿಯಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಹುದ್ದೆಗೆ ನಮ್ಮ ಅಭ್ಯರ್ಥಿಯಾಗಿರಲಿದ್ದಾರೆ. ಸ್ಥಾನ ಹಂಚಿಕೆ ಕುರಿತು ಎನ್ಡಿಎ ಪಾಲುದಾರರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆ ಕುರಿತು ಮಾತುಕತೆಗಳು ಪ್ರಗತಿಯಲ್ಲಿವೆ ಮತ್ತು ಅಂತಿಮ ಸೂತ್ರ ಶೀಘ್ರವೇ ರೂಪುಗೊಳ್ಳಲಿದೆ’ ಎಂದು ತಿಳಿಸಿದರು. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ಟೀಕಿಸಿದ ಅವರು, ಮಹಾಘಟಬಂಧನ್ ಒಡೆದ ಮನೆಯಾಗಿದೆ ಎಂದರು.
ಬೀದರ್ | ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ಜೋಳ ಖರೀದಿ ಕೇಂದ್ರ ಆರಂಭ : ಡಿಸಿ ಶಿಲ್ಪಾ ಶರ್ಮಾ
ಬೀದರ್ : ಕರ್ನಾಟಕ ಸರ್ಕಾರದ ಆದೇಶದಂತೆ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತವು ಸಾಮಾನ್ಯ ಪ್ರತಿ ಕ್ವಿಂಟಲ್ಗೆ 2,369 ರೂ. ಹಾಗೂ ಭತ್ತ-ಗ್ರೇಡ್ ಎ ಪ್ರತಿ ಕ್ವಿಂಟಲ್ಗೆ 2,389 ರೂ. ರಂತೆ ಖರೀದಿಸಲು ಹಾಗೂ ಬಿಳಿಜೋಳ-ಹೈಬ್ರಿಡ್ ಪ್ರತಿ ಕ್ವಿಂಟಲ್ಗೆ 3,699 ರೂ. ಮತ್ತು ಬಿಳಿಜೋಳ-ಮಾಲ್ದಂಡಿ ಪ್ರತಿ ಕ್ವಿಂಟಲ್ಗೆ 3,745 ರೂ. ರಂತೆ ತಾಲೂಕುವಾರು ನೋಂದಣಿ ಮತ್ತು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖರೀದಿ ಕೇಂದ್ರಗಳ ವಿವರ : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಎಪಿಎಂಸಿ ಯಾರ್ಡ್ ಔರಾದ್ (ಬಿ) (95357 95880), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಇಂಡಸ್ಟ್ರಿಯಲ್ ಏರಿಯಾ ಬಸವಕಲ್ಯಾಣ (88845 63795), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಎಪಿಎಂಸಿ ಯಾರ್ಡ್ ಭಾಲ್ಕಿ (94828 72583), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮೈಲೂರು ಬೀದರ್ (94828 72583), ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಆರ್ಟಿಓ ಚೆಕ್ ಪೊಸ್ಟ್ ಹತ್ತಿರ ಹುಮನಾಬಾದ್ (97434 30353). ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಸಂಬಂಧಿಸಿದಂತೆ ಸೆ.15 ರಿಂದ ಅ.31ರ ವರೆಗೆ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಕಾರ್ಯವನ್ನು ಪ್ರಾರಂಭಿಸಲಾಗುವುದು. ಹಾಗೆಯೇ ನ.1 ರಿಂದ ಫೇ.28, 2026 ರ ಅವಧಿಯವರೆಗೆ ಭತ್ತ ಖರೀದಿ ಕಾರ್ಯವನ್ನು ಕೈಗೊಳ್ಳಲಾಗುವುದು ಅವರು ಹೇಳಿದ್ದಾರೆ. ಜೋಳ ಖರೀದಿಗೆ ಸಂಬಂಧಿಸಿದಂತೆ ಡಿ.1, 2025 ರಿಂದ ಮಾ.31, 2026ರ ವರೆಗೆ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಕಾರ್ಯವನ್ನು ಪ್ರಾರಂಭಿಸಲಾಗುವುದು. ಹಾಗೆಯೇ ಜ.1, 2026ರಿಂದ ಮಾ.31, 2026ರ ಅವಧಿಯವರೆಗೆ ಜೋಳ ಖರೀದಿ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಆದ ಕಾರಣ ರೈತರು ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ಸ್ ಎಂಬ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆಯಿದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೋಂದಣಿ ಮಾಡಿಕೊಳ್ಳಲು ಅವರು ತಿಳಿಸಿದ್ದಾರೆ.
ತಮಿಳುನಾಡಿನ ಔಷಧ ಕಾರ್ಖಾನೆಯಲ್ಲಿ ಮಧ್ಯಪ್ರದೇಶದ SIT ತನಿಖೆ
ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣ
ಅ.13: ಎಸ್ಸಿಡಿಸಿಸಿ ಬ್ಯಾಂಕ್ ಗುತ್ತಿಗಾರು ಶಾಖೆಯ ಸ್ಥಳಾಂತರ ,ಎಟಿಎಂ ಕೇಂದ್ರದ ಉದ್ಘಾಟನೆ
ಮಂಗಳೂರು , ಅ.8: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಸುಳ್ಯ ಗುತ್ತಿಗಾರು ಶಾಖೆಯು ಈಗ ಇರುವ ಕಟ್ಟಡದಿಂದ ಗುತ್ತಿಗಾರು ಮುಖ್ಯರಸ್ತೆಯಲ್ಲಿರುವ ರಾಘವೇಂದ್ರ ಕಾಂಪ್ಲೆಕ್ಸ್’ನ ಪ್ರಥಮ ಅಂತಸ್ತಿಗೆ ಸ್ಥಳಾಂತರಗೊಳ್ಳಲಿದ್ದು, ಸ್ಥಳಾಂತರ ಸಮಾರಂಭ ಹಾಗೂ ಹೊಸ ಎಟಿಎಂ ಕೇಂದ್ರದ ಉದ್ಘಾಟನೆ ಅ.13ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ. ಬ್ಯಾಂಕಿನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸುವರು. *16ನೇ ಎ.ಟಿ.ಎಂ. ಕೇಂದ್ರದ ಉದ್ಘಾಟನೆ ಪ್ರಸ್ತುತ ಗುತ್ತಿಗಾರು ಶಾಖೆಯಲ್ಲಿ ಉದ್ಘಾಟನೆಗೊಳ್ಳಲಿರುವ 16ನೇ ಎ.ಟಿ.ಎಂ. ಕೇಂದ್ರದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ನೆರವೇರಿಸಲಿರುವರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗುತ್ತಿಗಾರು ಗಾ.ಪಂ. ಅಧ್ಯಕ್ಷೆ ಸುಮಿತ್ರ ಮೂಕಮಲೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ , ಗುತ್ತಿಗಾರು ಮಾಜಿ ಮಂಡಲ ಪ್ರಧಾನ ಮುಳಿಯ ತಿಮ್ಮಪ್ಪಯ್ಯ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಕಟ್ಟಡ ಮಾಲಕ ಅನಿಲ್ ಕುಮಾರ್ ಭಾಗವಹಿಸಲಿರುವರು. ಗ್ರಾಹಕರಿಗೆ ಉನ್ನತ ಸೇವೆಯನ್ನು ನೀಡುವುದರೊಂದಿಗೆ ಜನಮನ್ನಣೆ ಪಡೆದಿರುವ ಈ ಶಾಖೆ ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಗಣಕೀಕೃತಗೊಂಡು, ಏಕಗವಾಕ್ಷಿ. ಕೋರ್ ಬ್ಯಾಂಕಿಂಗ್ ಹಾಗೂ ಆರ್ಟಿಜಿಎಸ್ ಮತ್ತು ನೆಪ್ಟ್ ಸೌಲಭ್ಯಗಳೊಂದಿಗೆ ಕಾರ್ಯಾರಂಭಗೊಳ್ಳಲಿದೆ ಗಣನೀಯ ಪ್ರಗತಿ ಸಾಧಿಸಿರುವ ಜಿಲ್ಲಾ ಬ್ಯಾಂಕ್: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 111 ವರ್ಷಗಳ ಸಾರ್ಥಕ ಸೇವೆಯ ಇತಿಹಾಸವನ್ನು ಹೊಂದಿದೆ. 1914ರಲ್ಲಿ ಪುತ್ತೂರಿನಲ್ಲಿ ದಿವಂಗತ ಮೊಳಹಳ್ಳಿ ಶಿವರಾವ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ಪ್ರಸ್ತುತ 113 ಶಾಖೆಗಳನ್ನು ಹೊಂದಿದೆ. ಸದಾ ಗ್ರಾಹಕ ಸ್ನೇಹಿಯಾಗಿರುವ ಈ ಬ್ಯಾಂಕಿನಲ್ಲಿ ಈಗಾಗಲೇ 15 ಎಟಿಎಂಗಳು ಕಾರ್ಯನಿರ್ವಹಿಸುತ್ತಿದೆ. ಸಹಕಾರ ರತ್ನ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅವರ ಸಮರ್ಥ ಅಧ್ಯಕ್ಷತೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿರುವ ಎಸ್ಸಿಡಿಸಿಸಿ ಬ್ಯಾಂಕ್ ಗ್ರಾಹಕರ ಅವಶ್ಯಕತೆಗೆ ಸದಾ ಸ್ಪಂದಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
ಗುಡ್ನ್ಯೂಸ್: 708 ಸರ್ಕಾರಿ ಹುದ್ದೆಗಳ ನೇಮಕಾತಿ; 8 ಇಲಾಖೆ 1 ಪಠ್ಯಕ್ರಮ! KEA ಅರ್ಜಿ ಸಲ್ಲಿಕೆ ಆರಂಭ - ಕೊನೆ ಯಾವಾಗ?
ರಾಜ್ಯ ಸರ್ಕಾರದ 8 ವಿವಿಧ ಇಲಾಖೆ, ಮಂಡಳಿ, ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ಪರೀಕ್ಷೆ ನಡೆಸಲಿದ್ದು, ಅಕ್ಟೋಬರ್ 9 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. 708 ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕಕ್ಕೆ 321 ಹುದ್ದೆಗಳು ಮೀಸಲಾಗಿವೆ. ಈ ನೇಮಕಾತಿ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಅರುಣಾಚಲಪ್ರದೇಶ ಸರಕಾರದಿಂದಲೂ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಗೆ ನಿಷೇಧ
ಇಟಾನಗರ್, ಅ. 8: ಅರುಣಾಚಲಪ್ರದೇಶ ಸರಕಾರ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟ ಹಾಗೂ ಬಳಕೆಗೆ ನಿಷೇಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ 20 ಮಕ್ಕಳು ಸಾವನ್ನಪ್ಪಿದ ಬಳಿಕ ಅರುಣಾಚಲಪ್ರದೇಶ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ಸ್ರೇಸನ್ ಔಷಧ ಕಂಪೆನಿ ಉತ್ಪಾದಿಸುವ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ನ ಮಾರಾಟ, ವಿತರಣೆ ಹಾಗೂ ದಾಸ್ತಾನು ನಿಷೇಧಿಸಿ ಅರುಣಾಚಲಪ್ರದೇಶದ ಔಷಧ ನಿಯಂತ್ರಣ ಇಲಾಖೆ ಈ ಆದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳಲ್ಲಿ ಮಕ್ಕಳ ಸಾವು ಹಾಗೂ ಕೆಮ್ಮಿನ ಸಿರಪ್ ನ ನಡುವೆ ಸಂಬಂಧವಿದೆ ಎಂದು ವರದಿಯಾದ ಹಾಗೂ ಭಾರತ ಸರಕಾರದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು ಮಕ್ಕಳಲ್ಲಿ ಕೆಮ್ಮಿನ ಸಿರಪ್ ನ ಸುರಕ್ಷಿತ ಬಳಕೆಗೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ ಎಂದು ಅರುಣಾಚಲಪ್ರದೇಶದ ಔಷಧ ನಿಯಂತ್ರಕ ಡಾ. ಕೊಮ್ಲಿಂಗ್ ಪೆರ್ಮೆ ತಿಳಿಸಿದ್ದಾರೆ. ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಖರೀದಿಸಬಾರದು, ಮಾರಾಟ ಮಾಡಬಾರದು ಅಥವಾ ಸಾರ್ವಜನಿಕ ಬಳಕೆಗೆ ದಾಸ್ತಾನು ಮಾಡಬಾರದು ಎಂದು ಆರೋಗ್ಯ ಇಲಾಖೆ ದಾಸ್ತಾನುಗಾರರು/ಚಿಲ್ಲರೆ ವ್ಯಾಪಾರಸ್ಥರಿಗೆ ನಿರ್ದೇಶಿಸಿದೆ. ದಾಸ್ತಾನುಗಾರರು/ಚಿಲ್ಲರೆ ವ್ಯಾಪಾರಿಗಳು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಹೊಂದಿದ್ದರೆ, ಕೂಡಲೇ ಸ್ಥಳೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳಿಗೆ ಕೆಮ್ಮಿನ ಸಿರಪ್ ಶಿಫಾರಸು ಮಾಡುವಾಗ ಎಚ್ಚರಿಕೆ ವಹಿಸುವಂತೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಕೂಡ ಸಲಹೆಯಲ್ಲಿ ಹೇಳಲಾಗಿದೆ. ಈ ನಡುವೆ ಇಲಾಖೆ ಕೆಮ್ಮಿನ ಸಿರಪ್ ಸೇವಿಸದಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
ಬಳ್ಳಾರಿ | ಯಶಸ್ವಿಯಾಗಿ ನಡೆದ ʼತೆರಿಗೆʼ ಕಾರ್ಯಾಗಾರ
ಬಳ್ಳಾರಿ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಆಫ್ ಇಂಡಿಯಾ, ಬಳ್ಳಾರಿ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್, ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಸ್ಟೀರಿಂಗ್ ಕೌನ್ಸಿಲ್ ಮತ್ತು ಚೇತನ್ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಸೊಲ್ಯೂಷನ್ಸ್ಗಳ ಜಂಟಿ ಆಶ್ರಯದಲ್ಲಿ “ತೆರಿಗೆ” ಕುರಿತ ಕಾರ್ಯಾಗಾರವು ಬುಧವಾರ ಬಳ್ಳಾರಿ ಡಿಸಿಸಿಐ ಆಡಿಟೋರಿಯಂನಲ್ಲಿ ನಡೆಯಿತು. ಕಾರ್ಯಾಗಾರವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ವಾಣಿಜ್ಯ ತೆರಿಗೆ ಜಾರಿ ಇಲಾಖೆಯ ಜಂಟಿ ಆಯುಕ್ತ ಡಾ.ಕುಮಾರ್ ನಾಯಕ್ ಜಿ, ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್ ಸಹಾಯಕ ಆಯುಕ್ತ ಎನ್.ಎಂ. ಗಣೇಶ್ ಕುಮಾರ್, ಆಲ್ ಇಂಡಿಯಾ ಟ್ಯಾಕ್ಸ್ ಪೇಯರ್ಸ್ ಒಕ್ಕೂಟದ ಅಧ್ಯಕ್ಷ ಎಸ್.ಆರ್. ಮಠಪತಿ, ಕೆಪಿಸಿಇಎಸ್ಸಿಯ ಕಲಬುರ್ಗಿ ವಿಭಾಗದ ಉಪಾಧ್ಯಕ್ಷ ಕೆ.ಬಿ. ಸಂಜೀವ ಪ್ರಸಾದ್, ಹಾಗೂ ಟ್ಯಾಲಿ ಸೊಲ್ಯೂಷನ್ಸ್ನ ರವಿ ತಾಳಿಕೋಟೆ ಅವರು ಜಂಟಿಯಾಗಿ ಉದ್ಘಾಟಿಸಿದರು. ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಸ್ವಾಗತ ಭಾಷಣದಲ್ಲಿ, ನಮ್ಮ ಸಂಸ್ಥೆಯು ಜನಪರ ಸೇವಾ ಚಟುವಟಿಕೆಗಳಿಗೆ ಬದ್ಧವಾಗಿದ್ದು, ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಭವಿಷ್ಯದ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲು ಇಂಕ್ಯುಬೇಷನ್ ಸೆಂಟರ್ ಆರಂಭಿಸಲಾಗಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಜಸ್ಟಿನ್ ಕ್ರಿಸ್ಟಫರ್ ಅವರು ಸ್ಪಾಂಜ್ ಐರನ್, ಮೆಡಿಕಲ್, ಕಿರಾಣಿ, ಕೋಲ್ಡ್ ಸ್ಟೋರೇಜ್ ಮತ್ತು ಕಾಟನ್ ಮಿಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೆರಿಗೆ ವ್ಯವಸ್ಥೆಯ ಕುರಿತು ವಿವರಿಸಿದರು. ಶ್ರೀಧರ ಪಾರ್ಥಸಾರಥಿ ಅವರು ತೆರಿಗೆ ಪಾವತಿ ಪ್ರಕ್ರಿಯೆ, ತಾಂತ್ರಿಕ ಗೊಂದಲಗಳು ಹಾಗೂ ಸಮಸ್ಯೆಗಳ ಪರಿಹಾರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಟ್ಯಾಕ್ಸೇಷನ್ ಸಮಿತಿ ಅಧ್ಯಕ್ಷ ಸಿಎ.ಕೆ.ರಾಜಶೇಖರ ಅವರು ನಿರೂಪಿಸಿದರು. ವೆಂಕಟೇಶ ಕುಲಕರ್ಣಿ ಅವರು ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿಗಳು ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ವಕೀಲ ಅಪ್ಪಯ್ಯ ಭಟ್, ಟ್ಯಾಕ್ಸ್ ಪ್ರಾಕ್ಟೀಷನರ್ ಉಸ್ಮಾನ್ ಶರೀಫ್, ಚೇತನ್ ಇನ್ಸಿಟ್ಯೂಟ್ನ ಚೌವ್ಹಾಣ ಮನೋಹರ, ಹಾಗೂ ಬೆಳಗಾವಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಉದ್ಯಮಿಗಳು, ವೃತ್ತಿಪರರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು.
ಅ.12: ಪಾಲ್ದನೆ ಚರ್ಚ್ ನಲ್ಲಿ ವಾರ್ಷಿಕ ಹಬ್ಬ
ಮಂಗಳೂರು: ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ವಾರ್ಷಿಕ ಹಬ್ಬ (ಸಾಂತ್ ಮಾರಿ) ವನ್ನು ಅ, 12 ರಂದು ಆಚರಣೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಧರ್ಮ ಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂ.ಡಾ. ಅಲೋಷಿಯಸ್ ಪಾವ್ಲ್ ಡಿ' ಸೋಜಾ ಅವರು ಬಲಿ ಪೂಜೆಯ ನೇತೃತ್ವ ವಹಿಸಿ ಸಮಸ್ತ ಭಕ್ತರನ್ನು ಆಶೀರ್ವದಿಸುವರು. ಪಾಲ್ದನೆ ಚರ್ಚ್ ಧರ್ಮ ಗುರು ವಂ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಮತ್ತು ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ ವ್ಯಾಪ್ತಿಯ 12 ಚರ್ಚ್ ಗಳ ಧರ್ಮ ಗುರುಗಳು ಬಲಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಐ ಸಿ ವೈ ಎಂ ಸದಸ್ಯರು 'ನಶೀಬಚೊ ಖೆಳ್' ಎಂಬ ಮನೋರಂಜನಾ ಕಾರ್ಯಕ್ರಮ ಮತ್ತು ಗೇಮ್ಸ್ ಗಳನ್ನು ನಡೆಸುವರು. ಅಲ್ಲದೆ ಸ್ಟಾಲ್ ಗಳ ವ್ಯವಸ್ಥೆಯನ್ನು ಮಾಡಲಿದ್ದಾರೆ. ಸಂಜೆ 'ತಾಲೆಂತಾಚೊ ಸಂಭ್ರಮ್' ಎಂಬ ಕಾರ್ಯಕ್ರಮವಿದ್ದು, ಅದರಲ್ಲಿ ಚರ್ಚಿನ ಸದಸ್ಯರಿಗೆ ವಿವಿಧ ಸ್ಪರ್ಧೆಗಳು, ಫುಡ್ ಫೆಸ್ಟಿವಲ್, ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ ಇರಲಿದೆ ಎಂದು ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯನಗರ | ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಸೂರ್ಯಕಾಂತಿ ಖರೀದಿ ಕೇಂದ್ರಗಳ ಪ್ರಾರಂಭ
ವಿಜಯನಗರ(ಹೊಸಪೇಟೆ), ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇಂಗಾ ಮತ್ತು ಸೂರ್ಯಕಾಂತಿ ಉತ್ಪನ್ನ ಖರೀದಿಸುವ ಸಂಬಂಧ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಕವಿತಾ.ಎಸ್.ಮನ್ನಿಕೇರಿ ತಿಳಿಸಿದ್ದಾರೆ. 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾವನ್ನು ಪ್ರತಿ ಕ್ವಿಂಟಾಲ್ಗೆ 7,263 ರೂ. ಹಾಗೂ ಸೂರ್ಯಕಾಂತಿ 7,721 ರೂ. ಗಳಂತೆ ನಿಗಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ರೈತರಿಂದ ಖರೀದಿಗಾಗಿ ವಿಜಯನಗರ ಜಿಲ್ಲೆಯ ಎಣ್ಣೇ ಬೀಜ ಬೆಳೆಗಾರರ ಸಹಕಾರ ಸಂಘ ನಿಯಮಿತಗಳಲ್ಲಿ ಎಲ್ಲಾ ತಾಲೂಕಿನ ಖರೀದಿ ಕೇಂದ್ರಗಳ ತೆರೆಯಲಾಗಿದೆ. ರೈತರು ಖರೀದಿ ಕೇಂದ್ರಗಳಿಗೆ ಸಂಪರ್ಕಿಸಲು ಹೂವಿನಹಡಗಲಿಯ ಇಟಗಿ ಗ್ರಾಮದ ಚಂದ್ರಪ್ಪ ಮೊ.9902812417, ಹರಪನಹಳ್ಳಿಯ ನಂದಿಬೇವೂರು ಗ್ರಾಮ ಮೊ.9902128437, ಹಗರಿಬೊಮ್ಮನಹಳ್ಳಿಯ ಉಪನಾಯಕನಹಳ್ಳಿ ಗ್ರಾಮ ಕೃಷ್ಣಪ್ಪ ಮೊ.7899891663, ಕೂಡ್ಲಿಗಿ ಹುರುಳಿಹಾಳ ಗ್ರಾಮ ಅಜ್ಜಪ್ಪ ಮೊ.9880421083, ಕೊಟ್ಟೂರು ಕೋಗಳಿ ಗ್ರಾಮದ ಶಿವಣ್ಣ ಮೊ.9945073015 ಹಾಗೂ ಹೊಸಪೇಟೆ ಚಿತ್ತವಾಡ್ಗಿ ರಸ್ತೆ ಅಂಬೇಡ್ಕರ ಸರ್ಕಲ್ ಹತ್ತಿರ ಹುಲುಗಪ್ಪ ಮೊ.944847752 ಸೇರಿದಂತೆ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ ವಿಭಾಗೀಯ ಕಚೇರಿ ವಿಜಯನಗರ ಜಿಲ್ಲೆಯ ಅಧಿಕಾರಿ ಅಯ್ಯಪ್ಪ ಡಂಬಾಳ ಮೊ.8073797774 ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೂಡ್ಲಿಗಿಯಲ್ಲಿ ‘ಜನಸ್ಪಂದನ’, ‘ಮನೆ ಮನೆಗೆ ನಮ್ಮ ಶಾಸಕರು’ ಕಾರ್ಯಕ್ರಮ
ವಿಜಯನಗರ (ಹೊಸಪೇಟೆ–ಕೂಡ್ಲಿಗಿ): ತಾಲೂಕಿನ ಸೋಲದಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ಕೂಡ್ಲಿಗಿ ಇವರ ಸಂಯುಕ್ತ ಆಶ್ರಯದಲ್ಲಿ “ಜನಸ್ಪಂದನ” ಮತ್ತು “ಮನೆ ಮನೆಗೆ ನಮ್ಮ ಶಾಸಕರು – ಮನೆ ಬಾಗಿಲಿಗೆ ನಮ್ಮ ಸರ್ಕಾರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಶ್ರೀನಿವಾಸ್ ಎನ್.ಟಿ.ಅವರು, ಕ್ಷೇತ್ರದ ಜನರಿಗೆ ಸರ್ಕಾರದ ವಿವಿಧ ಸೇವೆಗಳನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ. ತಾಲೂಕು ಆಡಳಿತವನ್ನು ಗ್ರಾಮಮಟ್ಟಕ್ಕೆ ಕೇಂದ್ರೀಕರಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿ ಪರಿಹಾರ ನೀಡುವುದು ಈ ಕಾರ್ಯಕ್ರಮದ ಮೂಲ ತತ್ವವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಅಧಿಕಾರಿಗಳಾದ ಕವಿತಾ ಎಸ್. ಮನ್ನಿಕೇರಿ, ತಹಶೀಲ್ದಾರ್ ಕುಮಾರಿ ನೇತ್ರಾವತಿ, ಎ.ಇ.ಇ ಮಲ್ಲಿಕಾರ್ಜುನ, ಇ.ಒ ನರಸಪ್ಪ, ಬಿ.ಒ ಮೈಲೇಶ ಬೆವೂರು, ಟಿ.ಹೆಚ್.ಓ ಪ್ರದೀಪ್, ಎ.ಇ.ಇ ನಾಗನಗೌಡ, ಕೂಡ್ಲಿಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀ ಕಾವಳ್ಳಿ ಶಿವಪ್ಪನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಹಿರಿಯ ಮುಖಂಡರು ನಾಗರಕಟ್ಟೆ ರಾಜಣ್ಣ, ಶಶಿಧರ ಸ್ವಾಮಿ, ಅಜ್ಜನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರತ್ನಮ್ಮ, ಉಪಾಧ್ಯಕ್ಷರು, ಸದಸ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.
ಉಪ್ಪಿನಂಗಡಿ: ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಸ್ಥಗಿತ
ಉಪ್ಪಿನಂಗಡಿ: ಕೇಂದ್ರ ಸರಕಾರದ ಅಧೀನದಲ್ಲಿರುವ ಅಂಚೆಕಚೇರಿಯಲ್ಲಿ ಉತ್ತಮ ಸೇವೆ ನೀಡುತ್ತಿದ್ದ ಆಧಾರ್ ಸೇವೆಯು ಸಿಬ್ಬಂದಿ ಕೊರತೆಯಿಂದ ಸ್ಥಗಿತಗೊಂಡು 15 ತಿಂಗಳು ಕಳೆದರೂ ಇನ್ನೂ ಇದು ಇಲ್ಲಿ ಪುನಾರಾರಂಭ ಗೊಂಡಿಲ್ಲ. ನಾಲ್ಕು ತಾಲೂಕುಗಳ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ, ಇದರಿಂದ ಪುತ್ತೂರು ತಾಲೂಕಿನ ಹೋಬಳಿ ಕೇಂದ್ರವಾಗಿರುವ ಉಪ್ಪಿನಂಗಡಿಯಲ್ಲಿ ಸಮರ್ಪಕ ಆಧಾರ್ ಸೇವೆ ಒದಗಿಸುವ ಕೇಂದ್ರವಿಲ್ಲದೆ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೊದಲು ಇಲ್ಲಿನ ನಾಡ ಕಚೇರಿಯಲ್ಲಿ ಆಧಾರ್ ಸೇವೆ ಒದಗಿಸಲಾಗುತ್ತಿತ್ತು. ಕೆಲ ಕಾಲ ಸೇವೆ ನೀಡಿದ ಬಳಿಕ ಅದನ್ನು ಸ್ಥಗಿತಗೊಳಿಸಲಾಯಿತು. ಖಾಸಗಿ ಸಂಸ್ಥೆಯ ನೇತೃತ್ವದಲ್ಲಿ ಇಲ್ಲಿನ ಬಿಎಸ್ಎನ್ಎಲ್ ಕಚೇರಿಯಲ್ಲಿ ಆಧಾರ್ ಸೇವೆ ಲಭಿಸುತ್ತಿದ್ದರೂ ಅಲ್ಲಿ ಎಲ್ಲಾ ಸ್ವರೂಪದ ಸೇವೆಗಳು ಲಭಿಸುತ್ತಿಲ್ಲ. ಮುಖ್ಯವಾಗಿ ಸಣ್ಣ ಮಕ್ಕಳ ಆಧಾರ್ ಕಾರ್ಡ್ ಅಪ್ಡೇಟ್ ಕಾರ್ಯ ನಡೆಯದಿರುವುದರಿಂದ ದಿನವಿಡೀ ಸರತಿ ಸಾಲಿನಲ್ಲಿ ನಿಂತು ಬಳಿಕ ನಿರಾಸೆಯಿಂದ ನಿರ್ಗಮಿ ಸುವ ಸ್ಥಿತಿ ಪ್ರಸಕ್ತ ಇದೆ. ಇದರಿಂದಾಗಿ ಎಳೆಯ ಮಕ್ಕಳನ್ನು ದೂರದ ಪುತ್ತೂರಿಗೆ ಕರೆದೊಯ್ದು ಅಲ್ಲಿ ಸರತಿ ಸಾಲಿನಲ್ಲಿ ನಿಂತು ಆಧಾರ್ ಸೇವೆ ಪಡೆದುಕೊಳ್ಳುವ ಸ್ಥಿತಿ ಇದೆ. ಅಂಚೆ ಕಚೇರಿಯಲ್ಲಿ ಸೇವೆ ಪುನರಾರಂಭವಾಗಲಿ: ಈ ಹಿಂದೆ ಉಪ ಅಂಚೆ ಕಛೇರಿಯಾಗಿರುವ ಉಪ್ಪಿನಂಗಡಿಯಲ್ಲಿ ಆಧಾರ್ ಸೇವೆಗೆಂದೇ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಿನಂಪ್ರತಿ 40 ಕ್ಕೂ ಮಿಕ್ಕಿದ ಮಂದಿಗೆ ಆಧಾರ್ ಸೇವೆ ಒದಗಿಸಲಾಗುತ್ತಿತ್ತು. ಆದರೆ ಸಿಬ್ಬಂದಿ ವರ್ಗಾವಣೆಯ ಬಳಿಕ ಸಿಬ್ಬಂದಿ ಇಲ್ಲ ಎಂಬ ಕಾರಣ ನೀಡಿ 2024 ರ ಜೂನ್ ತಿಂಗಳಿಂದ ಆಧಾರ್ ಸೇವೆ ಸ್ಥಗಿತಗೊಳಿಸಿರುವುದು ಮತ್ತೆ ಪುನರಾಂಭವಾಗದಿರುವುದು ಈ ಪರಿಸರದ ಜನತೆಯನ್ನು ಹೈರಾಣವಾಗಿಸಿದೆ. ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ಆಧಾರ್ ಸೇವೆ ದೊರಕುವಂತಾಗಲು ಅಧಿಕಾರಿಗಳು ಗಮನ ಹರಿಸಬೇಕೆನ್ನುವುದು ನಾಗರಿಕರ ಅಗ್ರಹವಾಗಿದೆ. ಅವಶ್ಯಕತೆ ಹೆಚ್ಚಾದಂತೆ ಸೇವೆ ಕುಂಠಿತವಾಗುವುದು ಸರಿಯಲ್ಲ: ಈ ಬಗ್ಗೆ ಪ್ರತಿಕ್ರಿಯಿಸಿದ ಉಪ್ಪಿನಂಗಡಿ ವ್ಯಾಪಾರ ಮತ್ತು ವಾಣಿಜ್ಯ ಮಂಡಳಿಯ ಪೂರ್ವಾಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಪ್ರಸಕ್ತ ಆಧಾರ್ ದಾಖಲೆಯನ್ನು ಹೊಂದು ವುದು ಮತ್ತು ಅದನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕಾಗುವುದು ಅತ್ಯಗತ್ಯವಾಗಿರುವಾಗ ಅದಕ್ಕೆ ಸಂಬಂಧಿಸಿ ಸೇವೆ ಲಭಿಸುವಂತೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಸಿಬ್ಬಂದಿ ಕೊರತೆಯ ಕಾರಣಕ್ಕೆ ಅಂಚೆ ಕಚೇರಿಯಲ್ಲಿ ಹದಿನೈದು ತಿಂಗಳಿಂದ ಆಧಾರ್ ಸೇವೆ ಸ್ಥಗಿತಗೊಂಡಿದೆ ಎನ್ನುವುದು ಆಡಳಿತ ವ್ಯವಸ್ಥೆಗೆ ಶೋಭೆಯಲ್ಲ. ಜನರು ಆಧಾರ್ ಸೇವೆಗಾಗಿ ದಿನಗಟ್ಟಲೆ ಅಲೆದಾಡುವ ಸ್ಥಿತಿ ಇಂದಿಗೂ ಇದೆ ಎನ್ನುವುದು ಖೇದಕರ. ಜನಪ್ರತಿನಿಧಿಗಳು ಇದರತ್ತ ಗಮನಹರಿಸಿ ಉಪ್ಪಿನಂಗಡಿಯಲ್ಲಿ ಮುಖ್ಯವಾಗಿ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ದೊರಕುವಂತಾಗಲು ಕ್ರಮ ಕೈಗೊಳ್ಳಬೇಕು. ಅಂಚೆಕಚೇರಿಯಲ್ಲಿ ಸೇವೆ ಕಣ್ಮರೆಯಾಗುತ್ತಿರುವುದು ಯಾಕೆ ? ದೇಶದ ವಿಶ್ವಾಸಾರ್ಹ ಸಂಸ್ಥೆಯಾಗಿರುವ ಅಂಚೆ ಕಚೇರಿಯಲ್ಲಿ ಕಳೆದ ಕೆಲ ತಿಂಗಳ ವರೆಗೆ ಮೆಸ್ಕಾಂ ಬಿಲ್ ಪಾವತಿ , ಎಲ್ ಐ ಸಿ ಪ್ರೀಮಿಯಂ ಪಾವತಿ ವ್ಯವಸ್ಥೆ ಇದ್ದು ಗ್ರಾಹಕರಿಗೆ ದಿನ ನಿತ್ಯ ಸೇವೆ ಲಭಿಸುತ್ತಿತ್ತು. ಆದರೆ ಅದೆರಡೂ ಸೇವೆಯೂ ಸದ್ದಿಲ್ಲದೆ ಕಣ್ಮರೆಯಾಗಿದೆ. ಉತ್ತಮ ಆದಾಯವನ್ನು ತಂದುಕೊಡುತ್ತಿದ್ದ ಆಧಾರ್ ಸೇವೆಯೂ ಕೂಡಾ ಕಳೆದ ಹದಿನೈದು ತಿಂಗಳಿಂದ ಸಿಬ್ಬಂದಿ ಇಲ್ಲವೆಂಬ ಕಾರಣಕ್ಕೆ ಸ್ಥಗಿತಗೊಂಡಿರುವುದು ಗ್ರಾಹಕರನ್ನು ತೀವ್ರ ಸಮಸ್ಯೆಗೆ ಸಿಲುಕುವಂತೆ ಮಾಡಿದೆ. ಉತ್ತಮ ಸೇವೆಯೊಂದಿಗೆ ಜನಮಾನಸದಲ್ಲಿ ಬೆರೆತಿರುವ ಅಂಚೆ ಕಚೇರಿಯಲ್ಲಿ ಸೇವೆಗಳು ನಿರಂತರ ದೊರಕುವಂತೆ ಮಾಡಬೇಕಾದ ಅಗತ್ಯತೆ ಇದೆ ಎಂದು ಗೆಳೆಯರು-94 ಸಂಸ್ಥೆಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು ಅಭಿಪ್ರಾಯಿಸಿದ್ದಾರೆ.
ಪರಿಸರದ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ
ಬೆಂಗಳೂರು, ಅ. 8: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ‘ಸುವರ್ಣ ಮಹೋತ್ಸವ’ದ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಹಾಗೂ ಪರಿಸರದ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಲು ‘ಪರಿಸರದ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ. ಬುಧವಾರ ನಗರದ ಖಾಸಗಿ ಹೊಟೇಲ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ ಅ.10 ರಿಂದ ನ.19ರ ವರಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿ ಹಳ್ಳಿ, ತಾಲೂಕು ಹಾಗೂ ಪಟ್ಟಣ ಪ್ರದೇಶಗಳಲ್ಲಿಯೂ ಪರಿಸರದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು. ಪರಿಸರ ಕಾಳಜಿ, ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉತ್ತಮ ರೀಲ್ಸ್ ಮಾಡುವವರಿಗೆ 50 ಸಾವಿರ ರೂ. ಪ್ರಥಮ, 25ಸಾವಿರ ರೂ.ದ್ವಿತೀಯ ಹಾಗೂ 10 ಸಾವಿರ ರೂಪಾಯಿ ತೃತೀಯ ಬಹುಮಾನ ನೀಡಲಾಗುವುದು. ಅ.10ಕ್ಕೆ ಬಳ್ಳಾರಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನ.19ರಂದು ಬೆಂಗಳೂರಿನಲ್ಲಿ ಬೃಹತ್ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಗಲು ಮೂಲ ಕಾರಣಕರ್ತರಾದ ಮಾಜಿ ಪ್ರಧಾನಿ ಇಂದಿರಾಗಾಂಧಿ ನೆನಪಿನಲ್ಲಿ ರಾಜ್ಯದ 15 ಭಾಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಎಲ್ಲ ಜಿಲ್ಲೆಗಳೂ ಒಳಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಜಿಲ್ಲಾ ಮತ್ತು ತಾಲೂಕು ಮಟ್ಟ ಮಾತ್ರವಲ್ಲದೆ, ಪ್ರತಿ ಹಳ್ಳಿಯಲ್ಲೂ ಪರಿಸರ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು. ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಕ್ಷೇತ್ರವಾರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 3ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಪರಿಸರ ಉಳಿವು ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಶ್ರಮಿಸುವ ವ್ಯಕ್ತಿ ಮತ್ತು ಸಂಘ-ಸಂಸ್ಥೆಗಳಿಗೆ ಜಿಲ್ಲಾಮಟ್ಟದಲ್ಲಿ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.ನ.18 ಮತ್ತು 19ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದು ನರೇಂದ್ರಸ್ವಾಮಿ ಮಾಹಿತಿ ನೀಡಿದರು. ಮಂಡಳಿಯ ಸಿಬ್ಬಂದಿ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಬ್ಬಂದಿ ಭರ್ತಿಗೆ ಕ್ರಮ ವಹಿಸಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ವಾಯು ಮತ್ತು ಜಲ ಮಾಲಿನ್ಯ ತಡೆಗಟ್ಟಲು ಮಂಡಳಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ ಮಾಲಿನ್ಯಕ್ಕೆ ಕಾರಣವಾಗಿರುವ 152 ವಿವಿಧ ಸಂಸ್ಥೆಗಳನ್ನು ಮುಚ್ಚಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸಲಹೆಗಾರರೂ ಆಗಿರುವ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜು ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಅಫಜಲಪುರ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ
ಕಲಬುರಗಿ: ಸುಪ್ರೀಂಕೋರ್ಟ್ ಕಲಾಪದಲ್ಲಿ ನ್ಯಾಯಾಧೀಶರತ್ತ ಬೂಟು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತ ವಕೀಲ ರಾಕೇಶ್ ಕಿಶೋರ್ ಅವರನ್ನು ಬಂಧಿಸಿ ತಕ್ಷಣವೇ ಗಡಿಪಾರು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ, ಅಫಜಲಪುರ ತಾಲ್ಲೂಕು ವಕೀಲರ ಸಂಘದಿಂದ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಹಿರಿಯ ವಕೀಲರಾದ ಕೆ.ಜಿ. ಪೂಜಾರಿ ಅವರು ಈ ವೇಳೆ ಮಾತನಾಡಿ, ಸಂವಿಧಾನದ ಅಡಿಯಲ್ಲಿ ನ್ಯಾಯಾಂಗದ ಸರ್ವೋಚ್ಚ ಪೀಠವದಲ್ಲಿ ಇರುವ ನ್ಯಾಯಾಧೀಶರನ್ನು ಅವಮಾನಿಸುವುದು ದೇಶದ್ರೋಹದ ಅಪರಾಧವಾಗಿದೆ. ಆಪಾದಿತನನ್ನು ಗಡಿಪಾರು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು. ವಸೀಮ ಜಾಗೀರ್ದಾರ್ ಮಾತನಾಡಿ, ಸನಾತನ ಧರ್ಮದ ರಕ್ಷಣೆಗಾಗಿ ನಾನು ಈ ಕಾರ್ಯ ಮಾಡಿದ್ದೇನೆ ಎಂದು ಹೇಳುವ ಅಪರಾಧಿಯ ಡೋಂಗಿ ಮಾತುಗಳನ್ನು ಯಾರೂ ಪರಿಗಣಿಸಬಾರದು, ಧರ್ಮ ರಕ್ಷಣೆಗಾಗಿ ಇಂಥ ಕಾರ್ಯ ಮಾಡಲು ಸಾಧ್ಯವಿಲ್ಲ, ಆಪಾದಿತನ ಉದ್ದೇಶಗಳು ಬೇರೆ ಇದ್ದಿರಬಹುದು, ಆದ್ದರಿಂದ ಆಪಾದಿತನನ್ನು ತಕ್ಷಣವೇ ಬಂಧಿಸಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಒತ್ತಾಯಿಸಿದರು. ವಕೀಲರಾದ ಅನಿತಾ ಅವರು ಮಾತನಾಡಿ, ಇಂಥ ಪ್ರಕರಣ ನ್ಯಾಯಾಂಗದ ಇತಿಹಾಸದಲ್ಲಿ ನಡೆದಿಲ್ಲ ಮತ್ತು ನಡೆಯಬಾರದು, ಅಂತಹ ಕಠಿಣವಾದ ಶಿಕ್ಷೆಯನ್ನು ಆಪಾದಿತನಿಗೆ ಕೊಡಬೇಕು ಎಂದು ಹೇಳಿದರು. ಯುವ ವಕೀಲರಾದ ಗುರು ಪೂಜಾರಿ, ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎಸ್. ಪಾಟೀಲ್ ಅವರು ಮಾತನಾಡಿದರು. ಅಫಜಲಪುರ ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ಆರ್.ಎ.ನೂಲಾ, ಆರ್.ಎನ್.ಪೂಜಾರಿ, ಜಂಟಿ ಕಾರ್ಯದರ್ಶಿ ಸುರೇಶ ಅವಟೆ, ಖಜಾಂಚಿ ರಾಜೇಂದ್ರ ಸರ್ದಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಎಸ್.ಹಿರೇಮಠ, ಅನಿತಾ ದೊಡ್ಡಮನಿ, ಎಸ್. ಎನ್. ಪೂಜಾರಿ, ಎಸ್.ಬಿ.ತಳಕೇರಿ, ಎಸ್.ಟಿ.ರಾಥೋಡ್, ಪಿ.ಆರ್.ಪಾಟೀಲ್, ಎಂ.ಬಿ.ಪವಾರ್, ಎ.ಎಸ್.ಜಮಾದಾರ, ದತ್ತು ಪೂಜಾರಿ, ಸಿದ್ದರಾಮ ಇಸ್ಪೂರ, ಎಸ್.ಡಿ.ಮಂಜುನಾಥ್, ಸುಪ್ರಿಯಾ ಅಂಕಲಗಿ, ಡಿ.ಎಸ್.ಕುಂಬಾರ್, ಮತ್ತು ಸಲಹಾ ಸಮಿತಿಯ ಸದಸ್ಯರಾದ ಎಸ್.ಕೆ.ಪೂಜಾರಿ, ಎಸ್.ಜೆ.ಗುತ್ತೇದಾರ್, ನಾಗೇಶ್ ಕೊಳ್ಳಿ, ಮಂಜುನಾಥ್ ಕೊಳ್ಳಿ, ಅರ್ಜುನ್ ಕೆರೂರ್ ಮತ್ತು ಪಟ್ಟಣದ ಅನೇಕ ನಾಗರಿಕರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಲಾಯಿತು.
ಕೇಂದ್ರದ ಮಲತಾಯಿ ಧೋರಣೆ ಬಗ್ಗೆ ಬಿಜೆಪಿಗರು ದಿಲ್ಲಿಗೆ ಹೋಗಲಿ: ಎನ್.ಎಸ್.ಭೋಸರಾಜು
ಬೆಂಗಳೂರು, ಅ.8 : ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದ್ದು, ಕೇಂದ್ರ ಸರಕಾರ ಪರಿಹಾರ ಕೊಡದೆ ಮಲತಾಯಿ ಧೋರಣೆ ಮಾಡುತ್ತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ದಿಲ್ಲಿಗೆ ಹೋಗಿ ಮಾತನಾಡಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ವಾಗ್ದಾಳಿ ನಡೆಸಿದ್ದಾರೆ. ಬುಧವಾರ ವಿಕಾಸಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ಮಾಡಿದರೂ ಬಿಜೆಪಿಯವರು ವಿರೋಧ ಮಾಡುತ್ತಾರೆ. ಪ್ರವಾಹ ಬಂದಾಗ ರಸ್ತೆ ಮೂಲಕ ಸಮೀಕ್ಷೆ ಮಾಡಲು ಆಗುತ್ತದೆಯೇ? ಮೋದಿ ಏನು ರಸ್ತೆ ಮೂಲಕ ನೆರೆ ಸಮೀಕ್ಷೆ ಮಾಡುತ್ತಾನಾ? ಎಂದು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ರಾಜ್ಯಕ್ಕೆ ಪರಿಹಾರ ಕೊಡದೆ ಮಲತಾಯಿ ಧೋರಣೆ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲ. ಇವರಿಗೆ ಏನಾದರೂ ನೀತಿ ನಿಯಮ ಇದೆಯೇ? ಬಿಜೆಪಿಗರು ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಾ ರಾಜ್ಯದಲ್ಲಿ ಬೊಗಳುವುದನ್ನು ಬಿಟ್ಟು ದಿಲ್ಲಿಗೆ ಹೋಗಿ ಬೊಗಳಲಿ ಎಂದು ಭೋಸರಾಜು ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಬಿಜೆಪಿಯವರು ಪೈಪೋಟಿಯ ಮೇಲೆ ಟೀಕೆ ಮಾಡುತ್ತಿದ್ದರೂ ಸಹ ಜನರು ಸಂತೋಷದಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಜೆಪಿಯವರದ್ದು ರಾಜಕೀಯ ಟೀಕೆ ಎಂಬುದು ಜನರಿಗೆ ತಿಳಿದಿದೆ ಎಂದು ಭೋಸರಾಜು ತಿಳಿಸಿದರು. ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಭೋಸರಾಜು, ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ಸೃಷ್ಟಿ ಮಾಡುವವರು ಬಿಜೆಪಿಯವರು. ಸತೀಶ್ ಜಾರಕಿಹೊಳಿಯವರ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ. ನಮ್ಮಲ್ಲಿ ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಆಗುತ್ತದೆ. ಸಿಎಂ, ಡಿಸಿಎಂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸಿಎಂ ಬದಲಾವಣೆ ಎಂದು ನೂರು ಸಾರಿ ಬಿಜೆಪಿಯವರು ಹೇಳುತ್ತಾರೆ. ಅವರಿಗೆ ನೀತಿ-ನಿಯಮವಿಲ್ಲ ಎಂದು ಕಿಡಿಕಾರಿದರು.
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಕಲಬುರಗಿ ನಗರಾಭಿವೃದ್ಧಿ ಕಚೇರಿಯಲ್ಲಿ ಸಲಹಾ ಕೇಂದ್ರ ಸ್ಥಾಪನೆ
ಕಲಬುರಗಿ : ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರ ಪದಾವಧಿಯು ದಿನಾಂಕ: 11-11-2026ಕ್ಕೆ ಮುಕ್ತಾಯಗೊಳ್ಳಲಿದ್ದು, ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ–2026ಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಹಾಗೂ ಮತದಾರರರಿಗೆ ಮಾಹಿತಿ ನೀಡಲು ಕಲಬುರಗಿ ಮಿನಿ ವಿಧಾನಸೌಧದಲ್ಲಿನ ಕೋಣೆ ಸಂಖ್ಯೆ-11ರಲ್ಲಿನ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ (Complaints Monitoring Cell & Voters helpdesk) ವನ್ನು ಸ್ಥಾಪಿಸಿ ಈ ಕೆಳಕಂಡ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಆದ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ. ಈ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08472-278606/ 9008440605 ಇದ್ದು, ಸಾರ್ವಜನಿಕರು ಈ ಸಲಹಾ ಕೇಂದ್ರಕ್ಕೆ ಸಂಪರ್ಕಿಸಿ ಮತದಾರರ ನೋಂದಣಿ ಹಾಗೂ ಚುನಾವಣೆ ಕುರಿತಾದ ಮಾಹಿತಿ ಪಡೆಯಬಹುದಾಗಿದೆ. ಯಾವುದೇ ದೂರುಗಳಿದ್ದದಲ್ಲಿ ದಾಖಲಿಸಬಹುದಾಗಿದೆ. ಅರ್ಹತಾ ದಿನಾಂಕ: 01-11-2025ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ವೇಳಾಪಟ್ಟಿಯನ್ನು ಹೊರಡಿಸಿದ್ದು, ದಿನಾಂಕ:25.11.2025 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿ, ದಿನಾಂಕ:25.11.2025 ರಿಂದ 10.12.2025ರ ವರೆಗೆ ಆಕ್ಷೇಪಣೆಗಳನ್ನು ಅಹ್ವಾನಿಸಿ, ದಿನಾಂಕ:30.12.2025 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕಾಗಿದ್ದು, ಈ ಕಾರ್ಯಕ್ಕಾಗಿ ಅರ್ಹ ಮತದಾರರು ನೋಂದಣಿಗಾಗಿ ಮಾಹಿತಿ ಕೋರಿದ್ದಲ್ಲಿ ಸೂಕ್ತ ಮಾಹಿತಿಯನ್ನು ನೀಡಿ, ಅವರ ಹೆಸರನ್ನು ನೋಂದಾಯಿಸಲು ಅಲ್ಲದೇ ಈಗಾಗಲೇ ನೋಂದಣಿಯಾಗಿದ್ದಲ್ಲಿ ಅವರ ಮತದಾರರ ಪಟ್ಟಿಯ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯ ಮಾಹಿತಿ ನೀಡುವುದು ಇದನ್ನು ಹೊರತುಪಡಿಸಿಯು ಸಹ ಮತದಾರರ ನೋಂದಣಿ ಪ್ರಕ್ರೀಯೆ ಪ್ರಾರಂಭದಿಂದ ಈ ಚುನಾವಣೆಯ ಫಲಿತಾಂಶ ಘೋಷಣೆಯಾಗುವವರೆಗೂ ಲಿಖಿತವಾಗಿ, ಮೌಖಿಕವಾಗಿ ಹಾಗೂ ದೂರವಾಣಿ ಮುಖಾಂತರ ಸ್ವೀಕೃತವಾಗುವಂತಹ ದೂರುಗಳ ಮೇಲೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಮಕೈಗೊಳ್ಳಲು ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸ್ಥಾಪಿಸಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರಕ್ಕೆ ನೇಮಿಸಲಾದ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳ ವಿವರ ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ. ಕಲಬುರಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನ್ನಾವರ್ ದೌಲಾ ಇವರ ಮೋಬೈಲ್ ಸಂಖ್ಯೆ: 9986108000, ತಹಶೀಲ್ದಾರ್ ವಿಠಾಬಾಯಿ ಮೋಬೈಲ್ ಸಂ. 9008440605 ಹಾಗೂ ಸಿನಿಯರ್ ಪ್ರೊಗ್ರಾಮರ್ ರಮೇಶ ಸಿಂಗ್ ರಜಪೂತ ಮೋಬೈಲ್ ಸಂ. 8431521983 ಗೆ ಸಂಪರ್ಕಿಸಬೇಕು. ಅಫಜಲಪುರ ತಾಲೂಕು : ಗ್ರೇಡ್-2 ತಹಶೀಲ್ದಾರ್ ಶರಣಬಸವ ಮೋ: 7899132333 ಹಾಗೂ ಶಿರಸ್ತೆದಾರ ಮಂಜುನಾಥ ಜೋಗ ಮೋಬೈಲ್ ಸಂಖ್ಯೆ: 9901755150, ಜೇವರ್ಗಿ ತಾಲೂಕು ಗ್ರೇಡ್-2 ತಹಶೀಲ್ದಾರ್ ಗೋಪಾಲ ಕಪೂರ ಮೋಬೈಲ್ ಸಂಖ್ಯೆ 9739478018 ಹಾಗೂ ಶಿರಸ್ತೆದಾರ ದೇವಿಂದ್ರ ಮೊಬೈಲ್ ಸಂಖ್ಯೆ 9538560700, ಚಿತ್ತಾಪೂರ ತಾಲೂಕು: ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಎಂ. ಇವರ ಮೊಬೈಲ್ ಸಂಖ್ಯೆ 8105190111 ಹಾಗೂ ಶಿರಸ್ತೆದಾರ ಅಶ್ವಥ ನಾರಾಯಣ ಮೋಬೈಲ್ ಸಂ. 9448652111, ಸೇಡಂ ತಾಲೂಕು: ಗ್ರೇಡ್-2 ತಹಶೀಲ್ದಾರ್ ಭೀಮಣ್ಣ ಕುದುರಿ ಮೋ: 9901625928 ಹಾಗೂ ಶಿರಸ್ತೆದಾರ ರಾಜಕುಮಾರ ಮೋಬೈಲ್ ಸಂಖ್ಯೆ 6361376408,ಚಿಂಚೋಳಿ ತಾಲೂಕು: ಗ್ರೇಡ್-2 ತಹಶೀಲ್ದಾರ್ ವೆಂಕಟೇಶ ದುಗ್ಗನ್ ಮೋಬೈಲ್ 9945939641 ಹಾಗೂ ಶಿರಸ್ತೇದಾರ ಅಶೋಕ ಕುಲಕರ್ಣಿ ಇವರ ಮೊಬೈಲ್ ಸಂಖ್ಯೆ 9449437000. ಗುಲಬರ್ಗಾ ತಾಲೂಕು: ಗ್ರೇಡ್-2 ತಹಶೀಲ್ದಾರ್ ಗಂಗಾಧರ ಪಾಟೀಲ-8105477749 ಹಾಗೂ ಶಿರಸ್ತೇದಾರ್ ದಯಾನಂದ ರೆಡ್ಡಿ ಮೋ: 9731738788, ಶಹಾಬಾದ ತಾಲೂಕು: ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ ಮೋಬೈಲ್ ಸಂ. 8147126716 ಹಾಗೂ ಶಿರಸ್ತೇದಾರ್ ರಾಜೇಶ ದೇವಣಿ ಮೋ: 9632410622, ಕಮಲಾಪೂರ ತಾಲೂಕು: ಗ್ರೇಡ್-2 ತಹಶೀಲ್ದಾರ್ ಶಿವಕುಮಾರ ಸಾಬಾ ಮೋ: 8722584444 ಹಾಗೂ ಶಿರಸ್ತೇದಾರ್ ದೀಪಕಶೆಟ್ಟಿ ಮೋ:9972898112, ಕಾಳಗಿ ತಾಲೂಕು: ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ ಮೊಬೈಲ್ ಸಂ. 9945454043 ಹಾಗೂ ಶಿರಸ್ತೇದಾರ್ ಸಂತೋಷ ಕೇಶ್ವಾರ ಇವರ ಮೋಬೈಲ್ ಸಂ. 9901164297 ಹಾಗೂ ಯಡ್ರಾಮಿ ತಾಲೂಕು: ಗ್ರೇಡ್-2 ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮೊಬೈಲ್ ಸಂ. 9986518344 ಹಾಗೂ ಶಿರಸ್ತೇದಾರ್ ಇವರ ಮೊಬೈಲ್ ಸಂ. ಮಹಾನಿಂಗ ಮೊಬೈಲ್ ಸಂಖ್ಯೆ: 8310770063. ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ (Complaints Monitoring Cell & Voters helpdesk) ಕ್ಕೆ ನೇಮಕ ಮಾಡಲಾದ ಅಧಿಕಾರಿ ಹಾಗೂ ಸಿಬ್ಬಂದಿಗಳು ತಕ್ಷಣದಿಂದಲೇ ಕಾರ್ಯನಿರ್ವಹಿಸಿ ಲಿಖಿತವಾಗಿ / ಮೌಖಿಕವಾಗಿ / ದೂರವಾಣಿ ಮುಖಾಂತರ ಸ್ವೀಕೃತವಾಗುವ ಎಲ್ಲಾ ರೀತಿಯ ಸಲಹೆ ಹಾಗೂ ದೂರುಗಳಿಗೆ ದಾಖಲಾಧಾರಿತವಾದ ವಹಿಯನ್ನು ನಿರ್ವಹಿಸಿ ನಿಯಮಾನುಸಾರ ವಿಲೇಗೊಳಿಸಿ ಕಾಲೋಚಿತಗೊಳಿಸಬೇಕೆಂದು ಅವರು ಸೂಚಿಸಿದ್ದಾರೆ.
ಭರತನಾಟ್ಯದಂತಹ ಕಲೆಗಳಿಂದ ಸೌಂದರ್ಯಪ್ರಜ್ಞೆ ಮೂಡಲು ಸಾಧ್ಯ: ಡಾ. ಮೋಹನ್ ಆಳ್ವ
ಮಂಗಳೂರು,ಅ.8; ಶಾಸ್ತ್ರೀಯ ಕಲೆಗಳಾದ ಭರತನಾಟ್ಯ, ಯಕ್ಷಗಾನ, ಮದ್ದಳೆ, ಚೆಂಡೆ, ಚಿತ್ರಕಲೆ ಹಾಗೂ ಕರ್ನಾಟಕ ಸಂಗೀತದ ಮೂಲಕ ಸೌಂದರ್ಯಪ್ರಜ್ಞೆ ಬೆಳೆಸುವ ಪ್ರಯತ್ನ ಸಮಾಜದ ಶ್ರೇಯೋಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮೂಡಬಿದಿರೆಯ ಆಳ್ವಾಸ್ ಎಜ್ಯುಕೇಶನ್ ಫೌಂಡೇಷನ್ ನ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಅಭಿಪ್ರಾಯಪಟ್ಟರು. ಅವರು ಮಂಗಳೂರು ಪುರಭವನದಲ್ಲಿ ಸೋಮವಾರ ಕೊಲ್ಯ ನಾಟ್ಯನಿಕೇತನದ ಭರತನಾಟ್ಯ ಕಲಾವಿದ ಪ್ರದ್ಯುಮ್ನ ಅಶ್ವಿನ್ ತೇಜಸ್ವಿ ರಂಗಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ನಿವೃತ್ತ ಸೇನಾಧಿಕಾರಿ ಗಣೇಶ್ ಕಾರ್ಣಿಕ್ ಭರತನಾಟ್ಯ ಕೇವಲ ಪ್ರದರ್ಶನ ಕಲೆಯಲ್ಲ ಇದರಲ್ಲಿ ದೊಡ್ಡ ಅಧ್ಯಾತ್ಮ ಇದೆ. ಭಾರತೀಯ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮಲ್ಲಿರುವ ದಿವ್ಯತೆಯ ಅನುಸಂದಾನ ಮಾಡಿಕೊಳ್ಳುವಂತಹ ಅವಕಾಶ ನಮ್ಮ ಹಿರಿಯರು ಮಾಡಿಕೊಟ್ಟಿದ್ದಾರೆ ಎಂದರು. ಕಲೆ ವಿದ್ಯಾರ್ಥಿಗಳಲ್ಲಿ ಚಿಂತನೆ, ಮಾನವೀಯತೆ ಮತ್ತು ಪ್ರಜ್ಞೆಯನ್ನು ವಿಸ್ತರಿಸುತ್ತದೆ ಎಂದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾನು ಕೆ. ಎಸ್. , ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಕುಲ ಸಚಿವ ಪ್ರೊ| ಡಾl ಹರ್ಷ ಹಾಲಹಳ್ಳಿ ಮಾತನಾಡಿದರು. ನಾಟ್ಯನಿಕೇತನ ಕೊಲ್ಯ ಇದರ ನೃತ್ಯಗುರುಗಳಾದ ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾ ತಿಲಕ ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಮತ್ತು ವಿದುಷಿ ರಾಜಶ್ರೀ ಉಳ್ಳಾಲ್ ಅವರಿಗೆ ನೃತ್ಯ ಕಲಾವಿದ ಪ್ರದ್ಯುಮ್ನ ಅಶ್ವಿನ್ ತೇಜಸ್ವಿ ಗುರುನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಮದ್ದಳೆಗಾರ ಮುರಾರಿ ಕಡಂಬಡಿತ್ತಾಯ ಮತ್ತು ಯಕ್ಷಗುರು ರಾಕೇಶ್ ರೈ ಅಡ್ಕ ಅವರನ್ನು ಗೌರವಿಸಲಾಯಿತು. ಹಿಮ್ಮೇಳದಲ್ಲಿ ನಟುವಂಗಂ ಮತ್ತು ನಿರ್ದೇಶನ ವನ್ನು ಗುರು ವಿದುಷಿ ರಾಜಶ್ರೀ ಉಳ್ಳಾಲ್, ಗಾಯನದಲ್ಲಿ ವಿದ್ವಾನ್ ಶ್ರೀ ಸ್ವರಾಗ್, ಮಾಹೆ, ಮೃದಂಗಂನಲ್ಲಿ ವಿದ್ವಾನ್ ಸುರೇಶ್ ಬಾಬು, ಕಣ್ಣೂರು , ಕೊಳಲಿನಲ್ಲಿ ವಿದ್ವಾನ್ ಕೆ. ಮುರಳೀಧರ್, ಉಡುಪಿ, ಮೋರ್ಸಿಂಗ್ ನಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ, ವಿಟ್ಲ ಭಾಗವಹಿಸಿದ್ದರು. ಶಾಲಿನಿ ಅಶ್ವಿನ್ ಸಹಕರಿಸಿದರು. ಜರ್ನಿ ಥಿಯೇಟರನ್ ನ ರೋಹನ್ ಎಸ್. ಸ್ವಾಗತಿಸಿದರು. ಭರತನಾಟ್ಯ ವಿದುಷಿ ಸುಮಂಗಲಾ ರತ್ನಾಕರ ,ಮತ್ತು ಡಾ| ಶಾಲಿನಿ ರಾಜೀವ್ ಕಾರ್ಯಕ್ರಮ ನಿರ್ವಹಿಸಿದರು. ಡಾl ಅಶ್ವಿನ್ ತೇಜಸ್ವಿ ವಂದಿಸಿದರು.
ಕಲಬುರಗಿ | ಕೋರವಾರ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ
ಕಲಬುರಗಿ : ಕೋರವಾರ (ಕಲಬುರಗಿ-02) ಜವಾಹರ ನವೋದಯ ವಿದ್ಯಾಲಯದಲ್ಲಿ 2026-27ನೇ ಸಾಲಿನಲ್ಲಿ 9ನೇ ಹಾಗೂ 11ನೇ ತರಗತಿಗಳ ಪ್ರವೇಶ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2025ರ ಅ.21 ರವರೆಗೆ ವಿಸ್ತರಿಸಲಾಗಿದೆ ಎಂದು ಕೋರವಾರ (ಕಲಬುರಗಿ-02) ಜವಾಹರ ನವೋದಯದ ಪ್ರಾಚಾರ್ಯರು ತಿಳಿಸಿದ್ದಾರೆ. ಕೋರವಾರ ನವೋದಯ ವಿದ್ಯಾಲಯಕ್ಕೆ ಒಳಪಡುವ ತಾಲೂಕುಗಳಾದ ಚಿಂಚೋಳಿ, ಚಿತ್ತಾಪೂರ ಹಾಗೂ ಸೇಡಂ ಶೈಕ್ಷಣಿಕ ವರ್ಷ 2025-26 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 8ನೇ ತರಗತಿಯಲ್ಲಿ ಹಾಗೂ 10ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 9ನೇ ತರಗತಿಯ ಪ್ರವೇಶ ಪರೀಕ್ಷೆಗೆ https://cbseitms.nic.in/2025/nvsix_9 ಲಿಂಕ್ ಮೂಲಕ ಹಾಗೂ 11ನೇ ತರಗತಿಗೆ ಪ್ರವೇಶ ಪರೀಕ್ಷೆಗೆ https://cbseitms.nic.in/2025/nvsxi_11 ಲಿಂಕ್ ಮೂಲಕ 2025ರ ಅ.21 ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಹಿಂದೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2025ರ ಅಕ್ಟೋಬರ್ 7 ರಂದು ನಿಗದಿಪಡಿಸಲಾಗಿತ್ತು. ಈ ಪ್ರವೇಶ ಪರೀಕ್ಷೆಯು ದಿನಾಂಕ: 07-02-2026 ರಂದು ಜರುಗಲಿದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕೋರವಾರ ಜವಾಹರ ನವೋದಯ ವಿದ್ಯಾಲಯದ ಮೊಬೈಲ್ ಸಂಖ್ಯೆ 8951741851, 8618468593, 9648963192 ಹಾಗೂ 8495866274 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಉಡುಪಿ, ಅ. 8: ಪರ್ಯಾಯ ಶ್ರೀಪುತ್ತಿಗೆ ಮಠದ ಅಧಿಕಾರಿ ಅನಂತಕೃಷ್ಣ ಪ್ರಸಾದ(45) ಮಂಗಳವಾರ ನಿಧನರಾದರು. ಇವರು ಉಡುಪಿ ರಥಬೀದಿಯ ಶ್ರೀರಾಘವೇಂದ್ರ ಮಠಕ್ಕೆ ಭೇಟಿ ನೀಡಿದ ಈ ಸಂದರ್ಭ ಕುಸಿದು ಬಿದ್ದು ಪ್ರಜ್ಞಾಹಿನ ಸ್ಥಿತಿಗೆ ತಲುಪಿದರು. ತಕ್ಷಣ ಸಮಾಜ ಸೇವಕ ನಿತ್ಯಾನಂದ ಒಳಕಾಡು ಆಗಮಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಸುಬ್ರಹ್ಮಣ್ಯ ಮೂಲದವರಾದ ಅನಂತಕೃಷ್ಣರು ಕೋಟಿ ಗೀತಾ ಲೇಖನ ಯಜ್ಞದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಮೃತರು ತಂದೆ, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬಿಹಾರದಲ್ಲಿ ಪರ್ಯಾಯ ರಾಜಕಾರಣದ ಭರವಸೆ ನೀಡಿರುವ ಜನ ಸ್ವರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ನಾಳೆ (ಅ.09-ಗುರುವಾರ) ಬಿಹಾರ ವಿಧಾನಸಭೆ ಚುನಾವಣೆಗೆ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಹಿಂದೆ ವಾಗ್ದಾನ ಮಾಡಿದಂತೆ ಉತ್ತಮ ಚಾರಿತ್ರ್ಯ ಮತ್ತು ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿರುವ ಅಭ್ಯರ್ಥಿಗಳಿಗೆ ಪ್ರಶಾಂತ್ ಕಿಶೋರ್ ಮಣೆ ಹಾಕಿದ್ದಾರೆ. ಸ್ವತಃ ಪ್ರಶಾಂತ್ ಕಿಶೋರ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದ್ದು, ರಾಘೋಪುರ್ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ ವಿರುದ್ಧ ತೊಡೆ ತಟ್ಟುವ ಸಾಧ್ಯತೆ ಇದೆ.