SENSEX
NIFTY
GOLD
USD/INR

Weather

34    C
...

ಕ್ರಿಕೆಟ್ ಆಸ್ಟ್ರೇಲಿಯ ಗುತ್ತಿಗೆಗೆ ಸಹಿ ಹಾಕಲು ಐವರು ಆಟಗಾರರು ನಿರಾಸಕ್ತಿ?

Photo: x ಕ್ಯಾನ್‌ಬೆರ, ಮೇ 10: ತನ್ನ ಪ್ರಮುಖ ದೇಶಿ ಟಿ20 ಪಂದ್ಯಾವಳಿ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್)ನ್ನು ಖಾಸಗೀಕರಿಸುವ ಪ್ರಯತ್ನವು ವಿಫಲವಾದ ಬಳಿಕ, ಕ್ರಿಕೆಟ್ ಆಸ್ಟ್ರೇಲಿಯವು ಇನ್ನೊಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಲೀಗನ್ನು ಖಾಸಗೀಕರಿಸುವ ಪ್ರಯತ್ನಕ್ಕೆ ಕ್ರಿಕೆಟ್ ಆಸ್ಟ್ರೇಲಿಯದ ಆರು ರಾಜ್ಯ ಅಸೋಸಿಯೇಶನ್‌ಗಳ ಪೈಕಿ ಮೂರು ಅಸೋಸಿಯೇಶನ್‌ಗಳು- ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್ ಮತ್ತು ಸೌತ್ ಆಸ್ಟ್ರೇಲಿಯ- ತಡೆ ಹಾಕಿದವು. ಅವುಗಳು ಪ್ರಸಕ್ತ 600- 800 ಮಿಲಿಯ ಡಾಲರ್ ಖಾಸಗೀಕರಣ ಮಾದರಿಯನ್ನು ತಿರಸ್ಕರಿಸಿವೆ. ಈಗ ಕ್ರಿಕೆಟ್ ಆಸ್ಟ್ರೇಲಿಯವು ಇದಕ್ಕಿಂತಲೂ ದೊಡ್ಡದಾದ ಬಿಕ್ಕಟ್ಟೊಂದನ್ನು ಎದುರಿಸುತ್ತಿದೆ. ಅದರ ಐವರು ಸೀನಿಯರ್ ಆಟಗಾರರು ತಮಗೆ ನೀಡಲಾಗಿರುವ ಕೇಂದ್ರೀಯ ಗುತ್ತಿಗೆಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎನ್ನಲಾಗಿದೆ. ಆಟಗಾರರು ತಮಗೆ ನೀಡಲಾಗಿರುವ ಗುತ್ತಿಗೆಗಳ ಬಗ್ಗೆ ಅತೃಪ್ತಿ ಹೊಂದಿದ್ದು, ಇನ್ನೂ ಸಹಿ ಹಾಕಿಲ್ಲ ಎಂಬುದಾಗಿ ‘ಕೋಡ್ ಸ್ಪೋರ್ಟ್ಸ್’ ವರದಿ ಮಾಡಿದೆ. ಖಾಸಗೀಕರಣ ಯೋಜನೆಯು ತಿರಸ್ಕೃತಗೊಂಡ ಬಳಿಕ, ಹಲವು ಬಿಬಿಎಲ್ ಆಟಗಾರರು ಉತ್ತಮ ಸಂಭಾವನೆ ಪಡೆಯಲು ವಿದೇಶಗಳಲ್ಲಿ ಆಡಲು ಮುಂದಾಗಬಹುದು ಎಂದು ವರದಿ ಹೇಳಿದೆ. ಬಿಬಿಎಲ್‌ನಲ್ಲಿ ಆಸ್ಟ್ರೇಲಿಯದ ಆಟಗಾರರು ಒಂದು ಲಕ್ಷ ಆಸ್ಟ್ರೇಲಿಯನ್ ಡಾಲರ್ (ಸುಮಾರು 68.5 ಲಕ್ಷ ರೂಪಾಯಿ)ನಿಂದ ಎರಡು ಲಕ್ಷ ಆಸ್ಟ್ರೇಲಿಯನ್ ಡಾಲರ್ (ಸುಮಾರು 1.37 ಕೋಟಿ ರೂಪಾಯಿ) ಗಳಿಸುತ್ತಿದ್ದಾರೆ. ಇದು ವಿದೇಶಿ ಆಟಗಾರರು ಗಳಿಸುವ ಮೊತ್ತಕ್ಕಿಂತ ಕಡಿಮೆಯಾಗಿದೆ. ಕ್ರಿಕೆಟ್ ಆಸ್ಟ್ರೇಲಿಯವು ಟೆಸ್ಟ್ ಮತ್ತು ಏಕದಿನ ನಾಯಕ ಪ್ಯಾಟ್ ಕಮಿನ್ಸ್‌ಗೆ ಮೂರು ವರ್ಷದ ಗುತ್ತಿಗೆಗೆ 12 ಮಿಲಿಯ ಆಸ್ಟ್ರೇಲಿಯನ್ ಡಾಲರ್ (ಸುಮಾರು 82 ಕೋಟಿ ರೂಪಾಯಿ) ನೀಡಲು ಮುಂದಾಗಿದೆ. ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿರುವ ಕಮಿನ್ಸ್ ಪ್ರತಿ ಋತುವಿನಲ್ಲಿ 18 ಕೋಟಿ ರೂ. ಸಂಪಾದಿಸುತ್ತಿದ್ದಾರೆ.

ವಾರ್ತಾ ಭಾರತಿ 10 May 2026 10:23 pm

ಜಿಟಿ ವಿರುದ್ಧ ಅನಪೇಕ್ಷಿತ ಸರ್ವಕಾಲಿಕ ದಾಖಲೆ ಸರಿಗಟ್ಟಿದ ಆರ್‌ಆರ್

Photo: x.com/EnglishSalar ಜೈಪುರ: ಗುಜರಾತ್ ಟೈಟನ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಎದುರಾಳಿಗಳಿಗೆ 20 ಓವರ್‌ಗಳಲ್ಲಿ 229 ರನ್ ಬಿಟ್ಟುಕೊಡುವ ಮೂಲಕ ಅನಪೇಕ್ಷಿತ ದಾಖಲೆಯನ್ನು ಸೃಷ್ಟಿಸಿದೆ. ಪ್ರಸಕ್ತ ಸೀಸನ್‌ನಲ್ಲಿ ಎದುರಾಳಿಗಳಿಗೆ ಏಳನೇ ಬಾರಿಗೆ 200ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟ ಕುಖ್ಯಾತಿಗೆ ಆರ್‌ಆರ್ ಪಾತ್ರವಾಗಿದೆ. ಈ ಮೂಲಕ 2024ರಲ್ಲಿ ಒಂದೇ ಸೀಸನ್‌ನಲ್ಲಿ ಎದುರಾಳಿ ತಂಡಕ್ಕೆ 200ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಸನ್‌ರೈಸರ್ಸ್ ಹೈದರಾಬಾದ್ ದಾಖಲೆಯನ್ನು ರಾಜಸ್ಥಾನ ರಾಯಲ್ಸ್ ಸರಿಗಟ್ಟಿದೆ. 2025ರಲ್ಲೂ ಆರ್‌ಆರ್ ತಂಡದ ವಿರುದ್ಧ ಬೇರೆ ತಂಡಗಳು 7 ಬಾರಿ 200ಕ್ಕಿಂತ ಹೆಚ್ಚು ರನ್ ಸಿಡಿಸಿದ್ದವು. ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಕೂಡಾ ಕಳೆದ ಐಪಿಎಲ್ ಋತುವಿನಲ್ಲಿ ಈ ಸಾಲಿಗೆ ಸೇರಿದ್ದವು. ಇದೀಗ ರಾಜಸ್ಥಾನ ರಾಯಲ್ಸ್ ಸತತ ಎರಡು ಸೀಸನ್‌ಗಳಲ್ಲಿ ಈ ಕುಖ್ಯಾತಿಗೆ ಪಾತ್ರವಾಗಿದೆ. ಸಮತಟ್ಟಾದ ಪಿಚ್‌ನಲ್ಲಿ ಶುಭಮನ್ ಗಿಲ್ ಅವರ ಭರ್ಜರಿ ಅರ್ಧಶತಕ (44 ಎಸೆತಗಳಲ್ಲಿ 84 ರನ್) ಎದುರಾಳಿ ತಂಡದ ಪ್ರಾಬಲ್ಯಕ್ಕೆ ಕಾರಣವಾಯಿತು. ಇವರಿಗೆ ಉತ್ತಮ ಸಾಥ್ ನೀಡಿದ ಸಾಯಿ ಸುದರ್ಶನ್ 55 ರನ್ ಬಾರಿಸಿದರು. ರಾಹುಲ್ ತೆವಾಟಿಯಾ ಕೊನೆಯ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಪ್ರಸಕ್ತ ಸೀಸನ್‌ನಲ್ಲಿ ಜಿಟಿ ಗರಿಷ್ಠ ರನ್ ದಾಖಲಿಸಲು ಕಾರಣರಾದರು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ (4/33), ಜೇಸನ್ ಹೋಲ್ಡರ್ (3/12) ಹಾಗೂ ಕಗಿಸೊ ರಬಾಡಾ (2/33) ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಸಿಂಹಸ್ವಪ್ನವಾಗಿ ಕಾಡಿದರು. ಕೇವಲ 16.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆದ ಆರ್‌ಆರ್ ತಂಡ 77 ರನ್‌ಗಳ ಸೋಲೊಪ್ಪಿಕೊಂಡಿತು.

ವಾರ್ತಾ ಭಾರತಿ 10 May 2026 8:33 am

ಟೂರ್ನಮೆಂಟ್ ಗೆದ್ದು 5 ತಿಂಗಳಾದರೂ 5.5 ಲಕ್ಷ ರೂ. ಬಹುಮಾನದ ಹಣ ಬಂದಿಲ್ಲ!

ಚೆಸ್ ಫೆಡರೇಶನ್ ವಿರುದ್ಧ ಗ್ರ್ಯಾಂಡ್‌ ಮಾಸ್ಟರ್ ಅಭಿಜಿತ್ ಗುಪ್ತಾ ಆಕ್ರೋಶ

ವಾರ್ತಾ ಭಾರತಿ 9 May 2026 9:49 pm