ʼಧರ್ಮಸ್ಥಳ ಪ್ರಕರಣʼ ತನಿಖೆಯನ್ನು ಎನ್.ಐ.ಎಗೆ ವಹಿಸುವ ಅಗತ್ಯವಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಮೈಸೂರು, ಆ.25 : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಸಮರ್ಪಕವಾಗಿ ತನಿಖೆ ನಡೆಸುತ್ತಿದೆ. ಅವರನ್ನು ಹೀಗೆ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ಐ.ಟಿ ವರದಿಗೂ ಮುನ್ನ ಬಿಜೆಪಿಯವರು ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಎಸ್.ಐ.ಟಿ ಅಧಿಕಾರಿಗಳು ತನ್ನ ಕೆಲಸವನ್ನು ಪ್ರಮಾಣಿಕವಾಗಿ ಹಾಗೂ ಸಮರ್ಥವಾಗಿ ಮಾಡುತ್ತಿದ್ದಾರೆ. ಮಂಪರು ಪರೀಕ್ಷೆ ಮಾಡಬೇಕೋ ಬೇಡವೊ ಎಂಬುದನ್ನು ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಎಸ್.ಐ.ಟಿ ವರದಿ ಆದಷ್ಟು ಬೇಗ ಮುಗಿಸುವಂತೆ ಹೇಳಿದ್ದೇನೆ. ವರದಿ ಬಂದ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಹೇಳಿದರು. ಧರ್ಮಸ್ಥಳ ರ್ಯಾಲಿ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಲ್ಲಾ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೋಗುತ್ತಿದ್ದಾರೆ. ಹೋಗಲಿ, ಅವರನ್ನು ತಡೆಯಲು ಸಾಧ್ಯವೇ? ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು. ʼದಸರಾʼ ಧಾರ್ಮಿಕ ಆಚರಣೆ ಎಂದು ನೋಡಬಾರದು : ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನದ ಬಗ್ಗೆ ಬಿಜೆಪಿ ಅಪಸ್ವರ ಎತ್ತುತ್ತಿರುವುದು ಸರಿಯಲ್ಲ, ಈ ಹಿಂದೆ ನಿಸಾರ್ ಅಹ್ಮದ್ ಉದ್ಘಾಟನೆ ಮಾಡಿಲ್ಲವೇ? ದಸರಾ ನಾಡಹಬ್ಬ, ಇದನ್ನು ಧಾರ್ಮಿಕ ಆಚರಣೆ ಎಂದು ನೋಡಬಾರದು. ಬಾನು ಮುಷ್ತಾಕ್ ಅವರಿಗೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದಿಯೋ ಇಲ್ಲವೊ ಆದರೆ ಇದು ನಾಡಹಬ್ಬ. ಹಾಗಾಗಿ ಎಲ್ಲರೂ ಸೇರಿ ಆಚರಣೆ ಮಾಡಬೇಕು ಎಂದು ಹೇಳಿದರು.
ದಸರಾ ಉದ್ಘಾಟನೆ | ಬಾನು ಮುಷ್ತಾಕ್ ಜೊತೆ ದೀಪಾ ಭಸ್ತಿಯವರನ್ನು ಆಹ್ವಾನಿಸಬಹುದಿತ್ತು: ವಿಜಯೇಂದ್ರ
ಬೆಂಗಳೂರು, ಆ.25: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತರ್‍ರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರೊಂದಿಗೆ ದೀಪಾ ಭಸ್ತಿಯವರನ್ನು ಆಹ್ವಾನಿಸಬಹುದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನು ಒಪ್ಪಿ, ಅದರ ಬಗ್ಗೆ ನಂಬಿಕೆ ಇಟ್ಟು ಬರುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು. ಬಾನು ಮುಷ್ತಾಕ್ ಮತ್ತು ಕೊಡಗಿನ ದೀಪಾ ಭಸ್ತಿ ಸೇರಿ ಇಬ್ಬರಿಗೂ ಅಂತರ್‍ರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದೆ. ರಾಜ್ಯ ಸರಕಾರವು ದಸರಾ ಉತ್ಸವಕ್ಕೆ ಬಾನು ಮುಷ್ತಾಕ್ ಜೊತೆಗೆ ದೀಪಾ ಭಸ್ತಿ ಅವರನ್ನು ಕರೆಯಬಹುದಾಗಿತ್ತು. ಅವರನ್ನು ಕರೆಯಬೇಕೆಂದು ಸಿದ್ದರಾಮಯ್ಯನವರಿಗೆ ಯಾಕೆ ಅನಿಸಿಲ್ಲ? ಎಂದು ವಿಜಯೇಂದ್ರ ಪ್ರಶ್ನಿಸಿದರು. ನಂತರ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ಧರ್ಮಸ್ಥಳ ಕುರಿತ ಸಂಪೂರ್ಣ ತನಿಖೆಯನ್ನು ಕೂಡಲೇ ಎನ್‍ಐಎಗೆ ಕೊಡಬೇಕಿದೆ. ಇದರ ಮೂಲಕ ಅಗತ್ಯವಾದಲ್ಲಿ ಹಣಕಾಸು ವಿಷಯವಾಗಿ ಈ.ಡಿ. ತನಿಖೆ ನಡೆಸಲು ಅವಕಾಶ ಆಗಲಿದೆ ಎಂದು ತಿಳಿಸಿದರು. ಬುರುಡೆ ವ್ಯಕ್ತಿಯ ಪ್ರಾಥಮಿಕ ತನಿಖೆ ನಡೆಸುತ್ತಿದ್ದರೆ ಇಂಥ ಅಪಪ್ರಚಾರ ನಡೆದು ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ ಆಗುತ್ತಿರಲಿಲ್ಲ. ಧರ್ಮಸ್ಥಳದ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ವಿಶ್ವನಾಥ್ ತಿಳಿಸಿದರು. ಬುರುಡೆ ವ್ಯಕ್ತಿ ಮತ್ತು ಸುಜಾತಾ ಭಟ್ ವಿಷಯದಲ್ಲಿ ಮಾಧ್ಯಮಗಳು ಎಲ್ಲ ವಿಚಾರಗಳನ್ನು ಬೆಳಕಿಗೆ ತಂದಿವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿ ಎಲ್ಲ ಪಕ್ಷದವರು ಕೇಸರಿ ಧ್ವಜ ಕಟ್ಟಿ ಮಂಜುನಾಥ ಸ್ವಾಮಿ ಜೊತೆ ಇದ್ದೇವೆ ಎಂದು ರ್ಯಾಲಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಇಸ್ಲಾಮ್ ಧರ್ಮವನ್ನು ಅನುಸರಿಸುವ ಬಾನು ಮುಷ್ತಾಕ್ ಅವರು ಮೂರ್ತಿ ಪೂಜೆ, ಹಿಂದೂ ದೇವತೆಗಳನ್ನು ನಂಬುವುದಿಲ್ಲ. ನನಗೆ ನಾಡದೇವತೆ ಚಾಮುಂಡಿ ಮೇಲೆ ನಂಬಿಕೆ ಇದೆ, ಹಿಂದೂ ಧರ್ಮದ ಮೇಲೆ ನಂಬಿಕೆ ಇದೆ, ಈ ಆಚಾರ ವಿಚಾರಕ್ಕೆ ಬದ್ಧನಾಗಿದ್ದೇನೆ ಎಂದು ಬಾನು ಮುಷ್ತಾಕ್ ಹೇಳಿಕೆ ಕೊಡಬೇಕು. ಇಲ್ಲವಾದರೆ ರಾಜ್ಯ ಸರಕಾರದ ದಸರಾ ಉದ್ಘಾಟನೆ ಕುರಿತ ಆಹ್ವಾನವನ್ನು ಅವರು ತಿರಸ್ಕಾರ ಮಾಡಿದರೆ ಸೂಕ್ತ ಎಂದು ವಿಶ್ವನಾಥ್ ತಿಳಿಸಿದರು. ಕನ್ನಡದ ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಈ ಹಿಂದೆ ದಸರಾ ಉದ್ಘಾಟಿಸಿದ್ದರು. ಅವರ ಕುರಿತಂತೆ ಗೌರವವಿದ್ದು, ಆಗ ಅದನ್ನು ವಿವಾದ ಮಾಡಿರಲಿಲ್ಲ. ಬಾನು ಮುಷ್ತಾಕ್ ಎಡಪಂಥೀಯ ಮಹಿಳೆ ಎಂದು ಮುಖ್ಯಮಂತ್ರಿಗಳೆ ಹೇಳಿದ್ದು, ಪತ್ರಿಕೆಗಳಲ್ಲಿ ಬಂದಿದೆ. ಆದುದರಿಂದ, ಅವರಿಗೆ ಆಹ್ವಾನ ಕೊಟ್ಟಿದ್ದನ್ನು ವಿರೋಧಿಸಲಿದ್ದೇವೆ ಎಂದು ಅವರು ತಿಳಿಸಿದರು.