ಮೈಸೂರು | ಪ್ರೇಕ್ಷಕರ ಮನಗೆದ್ದ ಡ್ರೋನ್ ಶೋ; 2ನೇ ದಿನವೂ ರಂಜಿಸಿದ ಅತ್ಯಾಕರ್ಷಕ ಪ್ರದರ್ಶನ
ಮೈಸೂರು : ಬಾನಂಗಳದಲ್ಲಿ ಸಹಸ್ರಾರು ಡ್ರೋನ್ ಗಳ ಮೂಲಕ ಅತ್ಯಾಕರ್ಷಕ ಚಿತ್ತಾರ ಬಿಡಿಸಿ ನೋಡುಗರ ಕಣ್ಮನ ಸೆಳೆದಿದ್ದ ಡ್ರೋನ್ ಪ್ರದರ್ಶನ ಎರಡನೇ ದಿನವಾದ ಸೋಮವಾರ ಪ್ರೇಕ್ಷಕರನ್ನು ರಂಜಿಸಿತು. ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿರುವ ಡ್ರೋನ್ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾವಿರಾರು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ 3000 ಡ್ರೋನ್ ಗಳು ಆಗಸದಲ್ಲಿ ವಿವಿಧ ಕಲಾಕೃತಿಗಳ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸುವ ಮೂಲಕ ಎಲ್ಲರನ್ನು ರೋಮಾಂಚನಗೊಳಿಸಿತು. ಆಗಸದಲ್ಲಿ ಡ್ರೋನ್ ಗಳ ಮೆರಗು: ಏಕಕಾಲದಲ್ಲಿ ಆಗಸಕ್ಕೆ ಲಗ್ಗೆ ಹಾಕಿದ ಡ್ರೋನ್ ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಿದವು. ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್, ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ ಮಾಡುವುದು, ಕಾವೇರಿ ಮಾತೆ, ಕರ್ನಾಟಕ ಭೂಪಟದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಅದ್ಭುತ ಮನರಂಜನೆ ನೀಡಿದವು. ಇದೇ ವೇಳೆ ಡ್ರೋನ್ ಪ್ರದರ್ಶನಕ್ಕೆ ಸಚಿವರಾದ ಕೆ. ವೆಂಕಟೇಶ್, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಶಾಸಕ ಡಿ. ರವಿಶಂಕರ್, ಜಿಲ್ಲಾಧಿಕಾರಿ ಡಿ. ರವಿಶಂಕರ್, ದಸರಾ ದೀಪಾಲಂಕಾರ ಸಮಿತಿ ಅಧ್ಯಕ್ಷ (ಅಧಿಕಾರೇತರ) ರಾಘವೇಂದ್ರ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು, ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಅಧೀಕ್ಷಕ ಇಂಜಿನಿಯರ್ ಸುನೀಲ್ ಸೇರಿದಂತೆ ಹಲವರಿದ್ದರು.
ಮೇಲ್ಮನವಿ ಸಲ್ಲಿಕೆಗೆ 14 ವರ್ಷ ವಿಳಂಬ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಚಾಟಿ
ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಬಳಿಕ ಮೇಲ್ಮನವಿ ಸಲ್ಲಿಸಿದ್ದ ಕರ್ನಾಟಕ ಸರಕಾರದ ನಡೆಯನ್ನು ತೀವ್ರವಾಗಿ ಟೀಕಿಸಿರುವ ಹೈಕೋರ್ಟ್, ರಾಜ್ಯ ಸರಕಾರವನ್ನು 14 ವರ್ಷಗಳ ಕಾಲ ವನವಾಸದಲ್ಲಿದ್ದ ಶ್ರೀರಾಮನಂತೆ ಪರಿಗಣಿಸಲಾಗದು ಎಂದು ಮಾರ್ಮಿಕವಾಗಿ ನುಡಿದಿದೆ. ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ನ ದಿವಾಳಿ ಪ್ರಕ್ರಿಯೆ ಸಂಬಂಧಿಸಿದಂತೆ ನಿಜಿನೊಯ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಕಿರ್ಲೋಸ್ಕರ್ ಸಂಸ್ಥೆಯ ಅಧಿಕೃತ ಬರ್ಖಾಸ್ತುದಾರರ (Official Liquidator) ವಿರುದ್ಧ ಕಂದಾಯ ಇಲಾಖೆ ಮುದ್ರಾಂಕ ಮತ್ತು ನೋಂದಣಿ ವಿಭಾಗದ ಪ್ರಧಾನ ಕಾರ್ಯದರ್ಶಿ, ನೋಂದಣಿ ಇಲಾಖೆ ಮಹಾನಿರೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರು ಹಾಗೂ ದಾವಣಗೆರೆ ಜಿಲ್ಲಾ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮೇಲ್ಮನವಿ ಸಲ್ಲಿಸಲು 14 ವರ್ಷ ವಿಳಂಬ ಮಾಡಿದ್ದ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹೈಕೋರ್ಟ್ ಹೇಳಿದ್ದೇನು? ರಾಜ್ಯ ಸರಕಾರ 13 ವರ್ಷ, 319 ದಿನಗಳ ಬಳಿಕ ಮೇಲ್ಮನವಿ ಹಾಗೂ ಮೇಲ್ಮನವಿ ಸಲ್ಲಿಕೆಯಲ್ಲಿನ ವಿಳಂಬ ಮನ್ನಿಸಲು ಕೋರಿ ಅರ್ಜಿ ಸಲ್ಲಿಸಿದೆ. 14 ವರ್ಷಗಳ ಬಳಿಕ ಎಚ್ಚೆತ್ತು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಗತ್ಯತೆಯನ್ನು ಸರಕಾರ ಮನಗಂಡಿದೆ. 14 ವರ್ಷ ಎಂದರೆ ಅದು ಶ್ರೀರಾಮ ವನವಾಸದಲ್ಲಿದ್ದು, ಬಳಿಕ ಅಯೋಧ್ಯೆಗೆ ಮರಳಿದ ಅವಧಿ. ಆದರೆ, ಈ ಪ್ರಕರಣದಲ್ಲಿ ವಿಳಂಬ ಕ್ಷಮಿಸುವುದಕ್ಕೆ ಸರಕಾರವೇನೂ 14 ವರ್ಷ ವನವಾಸದಲ್ಲಿ ಇರಲಿಲ್ಲ. ಆದ್ದರಿಂದ, ಇಷ್ಟು ಅತಿಯಾದ ವಿಳಂಬವನ್ನು ಮನ್ನಿಸಲು ಯಾವುದೇ ಆಧಾರ ಕಂಡುಬರುತ್ತಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಮೇಲ್ಮನವಿ ಸಲ್ಲಿಸಿರುವ ಸರ್ಕಾರ ನೀಡಿರುವ ಕಾರಣಗಳು ಲಿಮಿಟೇಷನ್ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಮೇಲ್ಮನವಿ ಸಲ್ಲಿಕೆ ವಿಳಂಬಕ್ಕೆ ಸಮರ್ಪಕ ಕಾರಣ ಮಾನದಂಡವನ್ನು ಪೂರೈಸಿಲ್ಲ. ಸಮಂಜಸ ವಿವರಣೆ ನೀಡಿದರೆ ವಿಳಂಬವನ್ನು ಮನ್ನಿಸಿ, ಮೇಲ್ಮನವಿ ಪರಿಗಣಿಸಬಹುದಿತ್ತು. ಆದರೆ, ಸರ್ಕಾರದ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವನ್ನು ಮನ್ನಿಸಲಾಗದು ಎಂದು ತೀಕ್ಷ್ಣವಾಗಿ ನುಡಿದಿರುವ ಹೈಕೋರ್ಟ್, ಸರ್ಕಾರದ ಮೇಲ್ಮನವಿ ಹಾಗೂ ವಿಳಂಬ ಮನ್ನಿಸಲು ಕೋರಿದ್ದ ಅರ್ಜಿ ಎರಡನ್ನೂ ವಜಾಗೊಳಿಸಿದೆ. ಪ್ರಕರಣವೇನು? ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ನ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಫೆಬ್ರವರಿ 2011ರಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸರಕಾರ 2024ರಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇತ್ತೀಚೆಗಷ್ಟೇ 11 ವರ್ಷ ತಡವಾಗಿ ಮೇಲ್ಮನವಿ ಸಲ್ಲಿಸಿ ಸುಪ್ರೀಂಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡು ದಂಡನೆಗೆ ಗುರಿಯಾಗಿದ್ದ ರಾಜ್ಯ ಸರಕಾರ ಇದೀಗ 14 ವರ್ಷದ ನಂತರ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್ನಿಂದಲೂ ತಪರಾಕಿ ಹಾಕಿಸಿಕೊಂಡಿದೆ.
ಶತ್ರುರಾಷ್ಟ್ರವಾದ ಕತಾರ್ ಪ್ರಧಾನಿಗೆ ಕರೆ ಮಾಡಿ 'Sorry' ಹೇಳಿದ ಇಸ್ರೇಲ್ ಪಿಎಂ ನೆತನ್ಯಾಹು!
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಕಡುವೈರಿ ರಾಷ್ಟ್ರವಾದ ಕತಾರ್ ನಾಯಕರಿಗೆ ಕರೆ ಮಾಡಿ ಇದೇ ಸೆಪ್ಟಂಬರ್ ನಲ್ಲಿ ಇಸ್ರೇಲ್ ವಾಯುಪಡೆಯಿಂದ ಕತಾರ್ ರಾಜಧಾನಿ ದೋಹಾ ಮೇಲೆ ಆದ ವೈಮಾನಿಕ ದಾಳಿಯ ಬಗ್ಗೆ ಕ್ಷಮೆ ಕೋರಿದ್ದಾರೆ. ಅಮೆರಿಕ ಅಧ್ಯಕ್ಷರ ನಿವಾಸದವಾದ ವೈಟ್ ಹೌಸ್ ನಿಂದ ಬೆಂಜಮಿನ್, ಅಮೆರಿಕ ಅಧ್ಯಕ್ಷ ಟ್ರಂಪ್ ಸಮ್ಮುಖದಲ್ಲಿ ಈ ಕರೆ ಮಾಡಿದ್ದರು. ಆ ವೇಳೆ ಏನೇನು ಮಾತುಕತೆಯಾಯ್ತು? ಇಲ್ಲಿದೆ ವಿವರ.
ಮೈಸೂರು | ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ಓರ್ವ ಮಹಿಳೆ ಬಂಧನ
ಮೈಸೂರು, ಸೆ.29: ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಲು ಯತ್ನಿಸಿದ್ದ ಮಹಿಳೆಯನ್ನು ಬಂಧಿಸಿದ ಪೊಲೀಸರು, ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರೊಂದಿಗೆ ಒಡನಾಡಿ ಸೇವಾ ಸಂಸ್ಥೆ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ವೇಶ್ಯಾವಾಟಿಕೆಯಲ್ಲಿ ಹೊಸದೊಂದು ಜಾಲ ಆರಂಭವಾಗಿದ್ದು, ದಂಧೆಯು ಬೃಹತ್ ಸ್ವರೂಪವನ್ನು ಪಡೆಯುತ್ತಿದೆ. ಬಾಲಕಿಯರನ್ನು ಟಾರ್ಗೆಟ್ ಮಾಡುವ ದುಷ್ಕರ್ಮಿಗಳು, ನಂತರ ಆ ಹೆಣ್ಣುಮಕ್ಕಳನ್ನು ದೊಡ್ಡ ದೊಡ್ಡ ಉದ್ಯಮಿಗಳು, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮಾರಾಟ ಮಾಡುತ್ತಾರೆ. ಬಾಲಕಿಯ ಮಾರಾಟ ಯತ್ನವನ್ನು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಪ್ಯಾನ್ಸಿ ಮತ್ತು ಪರಶು ವಿಫಲಗೊಳಿಸಿದ್ದಾರೆ. ಬಾಲಕಿಯನ್ನು ಮೈಸೂರಿಗೆ ಕರೆ ತರುವಂತೆ ಪುಸಲಾಯಿಸಿ ಮಹಿಳೆಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಬಾಲಕಿಯನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಬೆಂಗಳೂರು ಮೂಲದ ಮಹಿಳೆಯು ಬಾಲಕಿಯನ್ನು ಒಂದು ದಿನದ ಮಟ್ಟಿಗೆ ಉದ್ಯಮಿಗಳಿಗೆ ಪೂರೈಸುತ್ತಾಳೆ ಎಂಬ ಮಾಹಿತಿ ಒಡನಾಡಿಗೆ ಬಂದಿದೆ. ಸ್ಪ್ಯಾನ್ಸಿ ಹಾಗೂ ಪರಶು ತಂಡ ಆಕೆಯ ಬೆನ್ನು ಬಿದ್ದಿದೆ. ಡೀಲ್ ಕುದುರಿಸುವವರಂತೆ ನಟಿಸಿ ಆಕೆಯೊಂದಿಗೆ ಮಾತನಾಡಿದ್ದಾರೆ. ಮೊದಲಿಗೆ ಆಕೆ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ನಂತರ ಚೌಕಾಸಿಗಿಳಿದು 20 ಲಕ್ಷ ರೂ.ಗೆ ಒಪ್ಪಿದ್ದಾಳೆ. ಬಾಲಕಿಯೊಡನೆ ಮೈಸೂರಿಗೆ ಬಂದಿದ್ದ ಆಕೆಯನ್ನು ಒಡನಾಡಿ ತಂಡ ವಿಜಯನಗರದ ಬಳಿ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ದಸರಾ ಪ್ರಯುಕ್ತ ದ.ಕ. ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ: ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ತಂಡಕ್ಕೆ ಪ್ರಶಸ್ತಿ
ಮಂಗಳೂರು: ದಸರಾ ಪ್ರಯುಕ್ತ ಶ್ರೀ ವೀರ ಮಾರುತಿ ದೇವಾಲಯ, ವ್ಯಾಯಾಮ ಶಾಲೆ ಮತ್ತು ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್, ಬ್ರದರ್ಸ್ ಯುವಕ ಮಂಡಲ (ರಿ) ಮೊಗವೀರ ಪಟ್ಟಣ, ಉಳ್ಳಾಲ ಇದರ ಜಂಟಿ ಅಶ್ರಯದಲ್ಲಿ ದಿ.ಫೈಲ್ವಾನ್ ಮೋತಿ ಪುತ್ರನ್ ಇವರ ಸ್ಮಾರಣಾರ್ಥ 78ನೇ ಶ್ರೀ ಶಾರದೋತ್ಸವ ಪ್ರಯುಕ್ತ ದ. ಕ. ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟ ರವಿವಾರ ನಡೆಯಿತು. ಶ್ರೀ ಶಾರದಾ ಕಿಶೋರ್, ಶಾರದಾ ಶ್ರೀ, ಶಾರದಾ ಕೇಸರಿ, ಶ್ರೀ ಶಾರದಾ ಕುಮಾರಿ ಎಂಬ ಕುಸ್ತಿ ಪಂದ್ಯಾಟದಲ್ಲಿ ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ತಂಡವು 2 ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 42 ಕೆಜಿ ವಿಭಾಗದಲ್ಲಿ ಫಾಹಿಮ್ ಪ್ರಥಮ, 50 ಕೆಜಿ ವಿಭಾಗದಲ್ಲಿ ಇಶಾಮ್ ಪ್ರಥಮ ಬಹುಮಾನ ಪಡೆದುಕೊಂಡರು ಎಂದು ಪ್ರಕಟನೆ ತಿಳಿಸಿದೆ.
ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ: ಮಾದನಾಯಕನಹಳ್ಳಿ ಠಾಣಾ ಇನ್ಸ್ಪೆಕ್ಟರ್ ವಿರುದ್ಧ ಕ್ರಮಕ್ಕೆ ಮಹಿಳಾ ಆಯೋಗ ಪತ್ರ
ಬೆಂಗಳೂರು, ಸೆ.29: ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳಾ ಆಯೋಗವು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೋಮವಾರ ಪತ್ರ ಬರೆದಿದೆ. ಅನ್ಯಾಯಕ್ಕೆ ಒಳಗಾದ ರೈತರ ಪರವಾಗಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ಎಸ್) ಪಕ್ಷದ ಕಾರ್ಯಕರ್ತರು ನ್ಯಾಯ ಕೇಳಲು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಹೋದಾಗ, ಅಲ್ಲಿ ಸುಳ್ಳು ಪ್ರಕರಣ ದಾಖಲಿಸಿ ರೈತರ ಬಂಧಿಸಿದ್ದನ್ನು ಪ್ರಶ್ನಿಸಲು ಮುಂದಾದಾಗ ನೆಲಮಂಗಲ ಠಾಣೆಯ ಇನ್ಸ್ಪೆಕ್ಟರ್ ನರೇಂದ್ರ ಬಾಬು ಎಂಬುವರು ಕೆಆರ್ ಎಸ್ ಕಾರ್ಯಕರ್ತರ ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಲ್ಲದೆ, ವೀಡಿಯೋ ಚಿತ್ರೀಕರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದೂ ತಿಳಿದುಬಂದಿದೆ ಎಂದು ಪತ್ರದಲ್ಲಿ ಆಯೋಗ ಉಲ್ಲೇಖಿಸಿದೆ. ಈ ನಡುವೆ, ಮಾದನಾಯಕನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಒಬ್ಬ ಮಹಿಳೆಯೊಬ್ಬರ ಮೊಬೈಲ್ ಕಸಿದುಕೊಂಡು, ಸಾರ್ವಜನಿಕವಾಗಿ ನಡು ರಸ್ತೆಯಲ್ಲಿ ಅವಳನ್ನು ದರದರನೆ ಎಳೆದುಕೊಂಡು ಹೋಗಿ ದೌರ್ಜನ್ಯವೆಸಗಿರುವ ಅಮಾನುಷ ಕೃತ್ಯದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ. ಆ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯವನ್ನು ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸುತ್ತದೆ. ಇದನ್ನು ಗಂಭೀರ ಘಟನೆ ಎಂದು ಪರಿಗಣಿಸಿ, ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿಗೆ ಮಹಿಳಾ ಆಯೋಗ ಪತ್ರದಲ್ಲಿ ಕೋರಿದೆ.
ಝುಬೀನ್ ಗರ್ಗ್ ಮೃತ್ಯು ಪ್ರಕರಣ | ತನಿಖೆಯಲ್ಲಿ ಉದ್ದೇಶಪೂರ್ವಕ ವಿಳಂಬ; ಗೌರವ್ ಗೊಗೊಯಿ ಆರೋಪ
ಸಿಎಂ ಪಾತ್ರ ಸಂಶಯಾಸ್ಪದ ಎಂದ ಕಾಂಗ್ರೆಸ್ ನಾಯಕ
ಬೆಂಗಳೂರು, ಸೆ.29 : ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ 2 ಮತ್ತು 3ನೇ ವಾರ್ಷಿಕ ಘಟಿಕೋತ್ಸವವನ್ನು ಅ.3ರಂದು ಬೆಂಗಳೂರು ನಗರ ವಿವಿ ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ನಟಿ ಭಾರತಿ ವಿಷ್ಣುವರ್ಧನ್, ಲೇಖಕಿ ದು.ಸರಸ್ವತಿ ಸೇರಿದಂತೆ ಆರು ಮಂದಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಮಹಾರಾಣಿ ಕ್ಲಸ್ಟರ್ ವಿವಿ ಕುಲಪತಿ ಡಾ.ಟಿ.ಎಂ.ಮಂಜುನಾಥ್ ತಿಳಿಸಿದ್ದಾರೆ. ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಮಿಯೋಪತಿ ವೈದ್ಯ ಡಾ.ಬಿ.ಟಿ. ರುದ್ರೇಶ್, ಶಿಕ್ಷಣ ತಜ್ಞೆ ಡಾ.ಎಚ್.ಎನ್.ಉಷಾ, ಬಯೋಕಾನ್ ಲಿಮಿಟೆಡ್ನ ಎಕ್ಸಿಕ್ಯೂಟಿವ್ ಸಂಸ್ಥಾಪಕ ಡಾ.ಕಿರಣ್ ಮಜುಂದಾರ್ ಷಾ, ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಗುವುದು ಎಂದು ಮಾಹಿತಿ ನೀಡಿದರು. 2023-24ನೇ ಸಾಲಿನಲ್ಲಿ 1346 ಯುಜಿ ಪದವಿ, 481 ಸ್ನಾತಕೋತ್ತರ ಪದವಿ, 28 ವಿದ್ಯಾರ್ಥಿಗಳಿಗೆ ಯುಜಿ ರ್ಯಾಂಕ್, 23 ವಿದ್ಯಾರ್ಥಿಗಳಿಗೆ ಪಿಜಿ ರ್ಯಾಂಕ್ ಹಾಗೂ 6 ಯುಜಿ, 18 ಪಿಜಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪ್ರದಾನ ಮಾಡಲಾಗುವುದು. 2024-25ನೇ ಸಾಲಿನಲ್ಲಿ 1209 ಯುಜಿ, 537 ಪಿಜಿ ಪದವಿ ಹಾಗೂ 30 ಯುಜಿ ರ್ಯಾಂಕ್, 26 ಪಿಜಿ ರ್ಯಾಂಕ್, 10 ಯುಜಿ, 18 ಪಿಜಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ನೀಡಲಾಗುವುದು ಎಂದು ಹೇಳಿದರು. ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಜರಿರುತ್ತಾರೆ. ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾರಾಣಿ ಕ್ಲಸ್ಟರ್ ವಿವಿಯ ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ.ಎಸ್.ಸತೀಶ್ ಮತ್ತಿತರರು ಹಾಜರಿದ್ದರು.
ಅದಾನಿ ವಿದ್ಯಾ ಮಂದಿರದ ಮಕ್ಕಳಿಗೆ ಸ್ಫೂರ್ತಿದಾಯಕ ಸಂದೇಶ ಕೊಟ್ಟ ರಾಜ್ಯಪಾಲ ದೇವವ್ರತ್
ಅಹಮದಾಬಾದ್ನ ಅದಾನಿ ವಿದ್ಯಾ ಮಂದಿರ (ಎವಿಎಂ) ಕ್ಯಾಂಪಸ್ನಲ್ಲಿ ನಡೆದ ಚೇಂಜ್ ಮೇಕರ್ ಸರಣಿ ಸಮಾರಂಭದಲ್ಲಿ ಗುಜರಾತ್ನ ಗೌರವಾನ್ವಿತ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿಯ ಮಾತನಾಡಿದರು. ಅದಾನಿ ಫೌಂಡೇಶನ್ನ ಅಧ್ಯಕ್ಷೆ ಡಾ.ಪ್ರೀತಿ ಅದಾನಿ ಮತ್ತು ಟ್ರಸ್ಟಿ ಶ್ರೀಮತಿ ಶಿಲಿನ್ ಅದಾನಿ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಅವರಿಗೆ ಗಾರ್ಡ್ ಆಫ್ ಹಾನರ್ ಮತ್ತು ಸಾಂಪ್ರದಾಯಿಕ
ಎಲ್ ಪಿಜಿ ಸಿಲಿಂಡರ್ ಡೆಲಿವರಿಗಾಗಿ ಬರಲಿದೆ ಹೊಸ ವ್ಯವಸ್ಥೆ - ಖಂಡಿತವಾಗಿಯೂ ಇದು ಗ್ರಾಹಕರಿಗೆ ಖುಷಿ ಕೊಡುವ ವಿಚಾರ!
ಇನ್ನು ಎಲ್ ಪಿಜಿ ಸಿಲಿಂಡರ್ ಡೆಲಿವರಿ ಸೇವೆಗಳು ಅತ್ಯಂತ ತ್ವರಿತವಾಗಿ ಸಾಗಲಿವೆ. ಅಂಥದ್ದೊಂದು ಕೇಂದ್ರೀಕೃತ ವ್ಯವಸ್ಥೆಯೊಂದನ್ನು ಸದ್ಯದಲ್ಲೇ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದು ಜಾರಿಗೆ ಬಂದರೆ, ನೀವು ಬುಕ್ಕಿಂಗ್ ಮಾಡಿದ ಗ್ಯಾಸ್ ಸಿಲಿಂಡರ್ ಅನ್ನು ನಿಮ್ಮ ಎಲ್ ಪಿಜಿ ಸೇವಾದಾರರೇ ಪೂರೈಸಬೇಕೆಂದೇನಿಲ್ಲ. 24 ಗಂಟೆಯೊಳಗೆ ಸಿಲಿಂಡರ್ ಡೆಲಿವರಿ ಸಾಧ್ಯವಾಗದಿದ್ದರೆ ಆ ಬುಕ್ಕಿಂಗ್ ಆರ್ಡರ್ ಹತ್ತಿರವಿರುವ ಮತ್ತೊಂದು ಗ್ಯಾಸ್ ಏಜೆನ್ಸಿಗೆ ಸ್ವಯಂಚಾಲಿತವಾಗಿ ರವಾನೆಯಾಗುತ್ತದೆ. ಅದು ಹೇಗೆ? ಇಲ್ಲಿದೆ ಮಾಹಿತಿ.
ಮಂಗಳೂರು| ಬಟ್ಟೆ ಅಂಗಡಿಯಲ್ಲಿ ಬೆಂಕಿ; ಅಪಾರ ನಷ್ಟ
ಮಂಗಳೂರು, ಸೆ.29: ನಗರದ ಹಂಪನಕಟ್ಟೆಯ ಟೋಕಿಯೊ ಮಾರ್ಕೆಟ್ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಸೋಮವಾರ ರಾತ್ರಿ ಬೆಂಕಿ ಆಕಸ್ಮಿಕದಿಂದ ಲಕ್ಷಾಂತರ ಮೌಲ್ಯದ ಬಟ್ಟೆಬರೆಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ವರದಿಯಾಗಿದೆ. ಕಟ್ಟಡವೊಂದರ ಮೇಲಿನ ಮಹಡಿಯಲ್ಲಿನ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಕಿ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.
ಜಲಸಂಚಾಯಿ ಜನ ಭಾಗಿದಾರಿ 1.0 ಅಭಿಯಾನ: ರಾಜ್ಯದಲ್ಲೇ ಗದಗ ಪ್ರಥಮ
ಗದಗ, ಸೆ.29: ಕೇಂದ್ರ ಜಲಶಕ್ತಿ ಅಭಿಯಾನದ ಅಂಗವಾಗಿ ‘ಜಲಸಂಚಾಯಿ ಜನಭಾಗಿದಾರಿ 1.0’ ಕಾರ್ಯಕ್ರಮದಡಿ ಗದಗ ಜಿಲ್ಲೆಯು ಜಲ ಸಂರಕ್ಷಣೆ ಅಡಿಯಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ, ದೇಶದ 780 ಜಿಲ್ಲೆಗಳಲ್ಲಿ ಝೋನ್ 3 ಕೆಟಗರಿ 3 ರಲ್ಲಿ 4ನೇ ಸ್ಥಾನ ಪಡೆದು, 25 ಲಕ್ಷ ನಗದು ಬಹುಮಾನಕ್ಕೆ ಭಾಜನವಾಗಿದೆ. ಏನಿದು ಜಲಸಂಚಾಯಿ ಜನಭಾಗಿದಾರಿ ಅಭಿಯಾನ? : ನೀರಿಗಾಗಿ ಒಂದಾಗಿ ‘ಪ್ರತಿ ಹನಿ ನೀರನ್ನು ಸಂರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಜಲಸಂಚಾಯಿ ಜನಭಾಗಿದಾರಿ 1.0 ಅಭಿಯಾನವು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ಹವಾಮಾನ ಸ್ಥಿತಿಗತಿಯನ್ನು ಉತ್ತೇಜಿಸುವುದು ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಸ್ಥಳೀಯ ಸಮುದಾಯ, ಸರಕಾರಿ ಸಂಸ್ಥೆಗಳು ಮತ್ತು ಎನ್ಜಿಒಗಳ ಸಹಯೋಗದಿಂದ ಈ ಕಾರ್ಯಕ್ರಮವು ನೀರಿನ ಕೊರತೆಯ ಸವಾಲಿಗೆ ಸಮರ್ಥ ಪರಿಹಾರವನ್ನು ಹುಡುಕುವುದಾಗಿದೆ. ಗದಗ ಜಿಲ್ಲೆಯ ಜಲಕ್ರಾಂತಿ ಕೊಡುಗೆ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಸೇರಿದಂತೆ ಇತರ ಯೋಜನೆಗಳಡಿ, ಗದಗ ಜಿಲ್ಲೆಯು 01-04-2024ರಿಂದ 31-03-2025ರವರೆಗೆ 11,971 ಜಲಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಜಲಸಂಚಾಯಿ ಪೋರ್ಟಲ್ನಲ್ಲಿ ದಾಖಲಿಸಿದೆ. ಇವುಗಳಲ್ಲಿ 11,329 ವೈಯಕ್ತಿಕ ಮತ್ತು ಸಮುದಾಯ ಬದು ನಿರ್ಮಾಣಗಳು, 75 ಬೋರ್ವೆಲ್ ರೀಚಾರ್ಜ್ಗಳು, 60 ಸೋಕ್ಪಿಟ್ಗಳು, 465 ಮಳೆನೀರು ಕೊಯ್ಲು ಕಾಮಗಾರಿಗಳು, 10 ಚೆಕ್ ಡ್ಯಾಂಗಳು ಮತ್ತು 32 ಗಲ್ಲಿ ಪ್ಲಗ್ಗಳು ಸೇರಿವೆ. ಕೇಂದ್ರ ತಂಡದಿಂದ ಮನ್ನಣೆ ಪಡೆದ ಜಿಲ್ಲಾ ಪಂಚಾಯತ್ : ಕೇಂದ್ರ ನೋಡಲ್ ಆಫೀಸರ್ ತಂಡವು 2025ರ ಜೂನ್ 16ರಿಂದ 21ರವರೆಗೆ ಗದಗ ಜಿಲ್ಲೆಯಲ್ಲಿ ಶೇ.1 ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗಳ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತು. ಶೇ.99 ಡೆಸ್ಕ್ಟಾಪ್ ಮೌಲ್ಯ ಮಾಪನದಲ್ಲಿಯೂ ಈ ಕಾಮಗಾರಿಗಳು ಉನ್ನತ ಮಾನದಂಡಗಳನ್ನು ಪೂರೈಸಿವೆ ಎಂದು ದಾಖಲಾಗಿದೆ. ಈ ಸಾಧನೆಯು ಗದಗ ಜಿಲ್ಲೆಯನ್ನು ಕರ್ನಾಟಕದಲ್ಲಿ ಮೊದಲ ಸ್ಥಾನಕ್ಕೆ ಒಯ್ದಿತ್ತಲ್ಲದೆ, ದೇಶದಲ್ಲಿ ಝೋನ್ 3 ಕೆಟಗರಿ 3, 4ನೇ ಸ್ಥಾನವನ್ನು ಗಳಿಸುವಂತೆ ಮಾಡಿದೆ. ಈ ಅಭಿಯಾನದ ಯಶಸ್ಸಿಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮನರೇಗಾ ಯೋಜನೆಯ ಸಹಾಯಕ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕಿರಣಕುಮಾರ್ ಮತ್ತು ಅವರ ತಂಡ, ಜಿಲ್ಲೆಯ ಡಿಇಒರವರ ಅವಿರತ ಶ್ರಮವೇ ಕಾರಣ. ಗದಗ ಜಿಲ್ಲೆಯ ಈ ಜಲಕ್ರಾಂತಿಯು ರಾಜ್ಯಕ್ಕೆ ಮಾದರಿಯಾಗಿದೆ. ಜಲಸಂಚಾಯಿ ಜನಭಾಗಿದಾರಿ ಅಭಿಯಾನದಲ್ಲಿ ಕರ್ನಾಟಕದಲ್ಲೇ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ಸಂತಸ ತಂದಿದೆ. ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಪರಿಸರ ಸಂರಕ್ಷಣೆ ಕುರಿತು ಜಿಲ್ಲೆಯ ಅಧಿಕಾರಿಗಳು ಶ್ರಮ ವಹಿಸಿ ಹಲವು ಕಾಮಗಾರಿಗಳನ್ನು ಅನುಷ್ಠಾನ ಮಾಡಿರುವುದು ಪ್ರಶಂಸನೀಯ. ಪ್ರಥಮ ಸ್ಥಾನ ಬಂದಿರುವುದಕ್ಕೆ ಜಿಲ್ಲೆಗೆ ನಗದು ರೂಪದಲ್ಲಿ 25 ಲಕ್ಷ ಅನುದಾನ ನೀಡುತ್ತಿದ್ದಾರೆ. ಬರುವ ಅನುದಾನವನ್ನು ಅಭಿಯಾನದ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲು ಶ್ರಮಿಸಲಾಗುವುದು. ► ಶ್ರೀಧರ ಸಿ.ಎನ್., ಗದಗ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಬದು ನಿರ್ಮಾಣ ಕಾಮಗಾರಿ, ಚೆಕ್ ಡ್ಯಾಂ ನಿರ್ಮಾಣ, ಬೋರ್ವೆಲ್ ರೀಚಾರ್ಜ್ ಕಾಮಗಾರಿ ಸೇರಿದಂತೆ ಹಲವು ಪರಿಸರ ಸ್ನೇಹಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಅನುಷ್ಠಾನ ಮಾಡಲಾದ ಎಲ್ಲ ಕಾಮಗಾರಿಗಳನ್ನು ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಪರಿಶೀಲನೆ ಸಂದರ್ಭದಲ್ಲಿ ಕೇಂದ್ರ ತಂಡ ಜಿಲ್ಲೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ ಗದಗ ಜಿಲ್ಲೆಗೆ ಈ ಅಭಿಯಾನದಡಿ ಪ್ರಥಮ ಸ್ಥಾನ ದೊರಕಿರುವುದು ನಮಗೆ ಮತ್ತಷ್ಟು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಪ್ರೋತ್ಸಾಹ ಸಿಕ್ಕಿದಂತಾಗಿದೆ. ► ಸಿ.ಆರ್.ಮುಂಡರಗಿ, ಜಿಪಂ ಉಪ ಕಾರ್ಯದರ್ಶಿ, ಗದಗ ಜಿಲ್ಲೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ 11,971 ಕಾಮಗಾರಿಗಳ ಮಾಹಿತಿಯನ್ನು ಜಲಸಂಚಾಯಿ ಜನಭಾಗಿದಾರಿ 1.0 ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅತೀ ಹೆಚ್ಚು ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಗೊಳಿಸಿರುವುದರಿಂದಲೇ ಈ ಪ್ರಶಸ್ತಿ ಬಂದಿದೆ. ಇದಕ್ಕೆ ಪೂರಕವಾಗಿ ಇನ್ನಷ್ಟು ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮನರೇಗಾ ಯೋಜನೆಯಡಿಯಲ್ಲಿ ನಿಯಮನುಸಾರ ಕ್ರಿಯಾ ಯೋಜನೆ ತಯಾರಿಸಲಾಗುವುದು ಮತ್ತು ಅನುಮೋದನೆ ತೆಗೆದುಕೊಂಡು ಇನ್ನೂ ಹೆಚ್ಚಿನ ಕ್ರಿಯಾತ್ಮಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮ ವಹಿಸಲಾಗುವುದು. ► ಕಿರಣ್ಕುಮಾರ್ ಎಸ್.ಎಚ್., ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ, ಮನರೇಗಾ ವಿಭಾಗ
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ | ಭಯೋತ್ಪಾದಕ ಗುಂಪು ಎಂದು ಘೋಷಿಸಿದ ಕೆನಡಾ
ಭಾರತದೊಂದಿಗೆ ಸಂಬಂಧಗಳ ಮರುಸ್ಥಾಪನೆ ಮಾತುಕತೆಗಳ ಬೆನ್ನಿಗೇ ಕ್ರಮ
ಗಾದಿಗನೂರು ಸಿಲಿಂಡರ್ ಸ್ಪೋಟ ಪ್ರಕರಣ: ಗಾಯಾಳುಗಳ ಭೇಟಿಯಾದ ಸಚಿವ ಝಮೀರ್ ಅಹ್ಮದ್
ವಿಜಯನಗರ (ಹೊಸಪೇಟೆ): ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸಿಲಿಂಡರ್ ಸ್ಪೋಟ ಘಟನೆಯಲ್ಲಿ ಗಾಯಗೊಂಡವರನ್ನು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಭೇಟಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಇಂತಹ ದುರ್ಘಟನೆ ನಡೆಯಬಾರದಿತ್ತು. ಅದರಲ್ಲೂ ಎರಡು ವರ್ಷದ ಮಗುವಿಗೆ ಶೇ.70 ರಷ್ಟು ಸುಟ್ಟ ಗಾಯವಾಗಿದೆ. ನೋಡಿ ದುಃಖವಾಗಿದೆ. ಇವರೆಲ್ಲರಿಗೂ ಸೂಕ್ತ ಆರೋಗ್ಯ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸೂಕ್ತ ಕ್ರಮ ವಹಿಸಲಾಗಿದೆ. ಶೀಘ್ರ ಗುಣಮುಖರಾಗಿ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಸದ್ಯಕ್ಕೆ ಸ್ಥಳೀಯ ತಹಶೀಲ್ದಾರರಿಗೆ ಚಿಕಿತ್ಸೆ ನಿಗಾ ವಹಿಸಲು ಸೂಚಿಸಲಾಗಿದೆ. ಎಲ್ಲಾ ರೀತಿಯ ಸೌಕರ್ಯ ನೀಡಲಾಗುವುದು ಎಂದರು. ಈ ವೇಳೆ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಇದ್ದರು.
ಹುಲಿವೇಷ ಸರದಾರ ಬಜಿಲಕೇರಿ ಕಮಲಾಕ್ಷರಿಗೆ ತುಳು ಅಕಾಡೆಮಿ ಚಾವಡಿ ತಮ್ಮನ ಪ್ರದಾನ
ಮಂಗಳೂರು, ಸೆ.29: ತುಳುನಾಡಿನ ಹಿರಿಯ ಹುಲಿ ವೇಷ ಕಲಾವಿದ ಹಾಗೂ ಸಂಘಟಕ ಬಜಲಕೇರಿ ಕಮಲಾಕ್ಷ ಅವರಿಗೆ ಸೋಮವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಚಾವಡಿ ತಮ್ಮನ ಪ್ರದಾನ ಮಾಡಿ ಗೌರವಿಸಲಾಯಿತು. ಮಂಗಳೂರು ನಗರದ ಮಣ್ಣಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಎಚ್.ಎಂ.ಎಸ್. ಮುಖಂಡ ಹಾಗೂ ಮಣ್ಣಗುಡ್ಡ ಸರಕಾರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಚಂದ್ರ ಶೆಟ್ಟಿ ಅವರು ಸನ್ಮಾನ ನೆರವೇರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಜಿಲಕೇರಿ ಕಮಲಾಕ್ಷ ಅವರು ‘‘ತಾನು ತಂದೆಯ ಕಾಲದಿಂದ ಹುಲಿವೇಷವನ್ನು ಸಾಂಪ್ರದಾಯಿಕವಾಗಿ ಹಾಗೂ ನಿಷ್ಠೆಯಿಂದ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರು. ಹಿಂದಿನ ಕಾಲದಲ್ಲಿ ಕಡಿಮೆ ವೆಚ್ಚದಲ್ಲಿ ವೇಷ ನಡೆಯುತ್ತಿತ್ತು, ಈಗ ತುಂಬಾ ದುಬಾರಿಯಾಗಿದೆ ಎಂದರು. ಹಿಂದೆ ಊದು ಪೂಜೆ ಎಂಬ ಸಂಪ್ರದಾಯ ಇರಲಿಲ್ಲ, ಈಗ ಕೆಲವೆಲ್ಲ ವಿಚಾರಗಳು ಬದಲಾಗಿದೆ, ಹುಲಿ ವೇಷಧಾರಿ ಗಳ ಮೈ ಮೇಲೆ ದೈವ ಅಥವಾ ಬೇರೆ ಯಾವುದೇ ಶಕ್ತಿಗಳು ಬರುವುದು ಸಾಧ್ಯವೇ ಇಲ್ಲ ಎಂದು ಕಮಲಾಕ್ಷ ಅವರು ಹೇಳಿದರು. ತುಳು ಅಕಾಡೆಮಿಯ ಚಾವಡಿ ತಮ್ಮನದ ಗೌರವ ಅತೀವ ಖುಷಿ ಕೊಟ್ಟಿದೆ ಎಂದು ಕಮಲಾಕ್ಷ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ನಾಡಿನ ಜಾನಪದ ಲೋಕದಲ್ಲಿ ಹುಲಿ ವೇಷ ಕುಣಿತ ಮಹತ್ವವಾದದ್ದು, ಹುಲಿ ಕುಣಿತಕ್ಕೆ ಬಜಿಲಕೇರಿ ಕಮಲಾಕ್ಷ ಅವರು ನೀಡಿರುವ ಸೇವೆಗೆ ಅವರ ಊರಿನ ಜನರ ಸಮ್ಮುಖದಲ್ಲಿ ಚಾವಡಿ ತಮ್ಮನದ ಮೂಲಕ ಸನ್ಮಾನಿಸಿರುವುದು ಹುಲಿವೇಷ ಕಲೆಯ ಬಗ್ಗೆ ಹಾಗೂ ಕಲಾವಿದರ ಬಗೆಗಿನ ಗೌರವದ ದ್ಯೋತಕವಾಗಿದೆ ಎಂದರು. ಅಭಿನಂದನಾ ಭಾಷಣ ಮಾಡಿದ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗ್ಡೆ ಅವರು ತುಳುನಾಡಿನಂತಹ ಶ್ರೀಮಂತ ಬಹು ಸಂಸ್ಕೃತಿ ದೇಶದ ಬೇರೆಲ್ಲೂ ಇಲ್ಲ. ಹುಲಿ ಕುಣಿತವು ರಾಷ್ಟ್ರ-ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯು ವಲ್ಲಿ ಕಮಲಾಕ್ಷರ ಕೊಡುಗೆ ದೊಡ್ಡದು. ಕಬಡ್ಡಿ ಕ್ರೀಡೆ ಸಂಘಟಿಸುವಲ್ಲೂ ಕಮಲಾಕ್ಷರು ಬಹುವಾಗಿ ಶ್ರಮಿಸಿದವರು ಎಂದು ಬಣ್ಣಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ .ಗಟ್ಟಿ, ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಶೆಟ್ಟಿ ಶುಭ ಹಾರೈಸಿದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ ಬರ್ಕೆ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ,ಸನ್ಮಾನ ಪತ್ರ ವಾಚಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್ ಕಾರ್ಯಕ್ರಮ ನಿರೂಪಿಸಿದರು, ರಾಜೇಶ್ ಶೆಟ್ಟಿ ವಂದಿಸಿದರು.
ಬ್ಯಾಂಕ್ ಆಫ್ ಬರೋಡಾ -ಐಐಎಫ್ಎಲ್ ಫೈನಾನ್ಸ್ ಸಹ-ಸಾಲ ಒಪ್ಪಂದಕ್ಕೆ ಸಹಿ
ಸಮರ್ಪಕ ಸೇವೆ ಲಭಿಸಿದ ಗ್ರಾಹಕರಿಗೆ ಸೌಲಭ್ಯ ವಿಸ್ತರಿಸುವ ಉದ್ದೇಶ
ಕಲಬುರಗಿ| ನೆರೆ ಹಾವಳಿ ಪ್ರದೇಶಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಎಂ) ನಿಯೋಗದಿಂದ ಭೇಟಿ; ಅಗತ್ಯ ಕ್ರಮಕ್ಕೆ ಆಗ್ರಹ
ಕಲಬುರಗಿ: ನೆರೆ ಹಾವಳಿಗೆ ಒಳಗಾದ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಎಂ) ನಿಯೋಗದಿಂದ ಭೇಟಿ ಮಾಡಿ, ಪರಿಶೀಲನೆ ನಡೆಸಿದೆ. ಫರಹತಾಬಾದ್ ಸಮೀಪದ ಕೂಡಿ ದರ್ಗಾದಲ್ಲಿ ಆಸರೆ ಪಡೆದುಕೊಂಡ ನಾಲ್ಕು ಗ್ರಾಮಗಳ ಸಂತ್ರಸ್ತರನ್ನು ಭೇಟಿ ಮಾಡಿದ ನಿಯೋಗವು ಸಂತ್ರಸ್ತರಿಗೆ ನೀಡಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದೆ. ಮನೆಗಳ ಎಲ್ಲ ವಸ್ತುಗಳು ನೆರೆಯಲ್ಲಿ ಕೊಚ್ಚಿ ಹೋಗಿವೆ. ಉಟ್ಟ ಬಟ್ಟೆಯ ಮೇಲೆ ಕೂಡಿ ದರ್ಗಾದಲ್ಲಿ ಆಸರೆ ಪಡೆದುಕೊಂಡಿದ್ದಾರೆ. ಇಂತಹ ಸಂತ್ರಸ್ತರಿಗೆ ಅಗತ್ಯ ಸವಲತ್ತು ನೀಡಬೇಕೆಂದು ನಿಯೋಗದ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕಾಳಜಿ ಕೇಂದ್ರದಲ್ಲಿ ಮಕ್ಕಳು, ವೃದ್ಧರಿಗೂ ಬೆಚ್ಚನೆಯ ಹೊದಿಕೆ ಇಲ್ಲವಾಗಿದೆ. ಕುಡಿಯಲು ಶುದ್ಧ ನೀರು ಇಲ್ಲ. ಗಂಜಿ ಕೇಂದ್ರದಲ್ಲಿ ಅನ್ನ ಮತ್ತು ಸಾರು ಬಿಟ್ಟರೆ ಮತ್ತೇನೂ ಇಲ್ಲ. ನೆರೆಯ ಸಂದರ್ಭದಲ್ಲಿ ತೀವ್ರ ತಣ್ಣನೆ ಹವಾಮಾನ ಇತ್ಯಾದಿಯಿಂದಾಗಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಮ ಬೀರುವ ಸಾಧ್ಯತೆಗಳು ಇರುತ್ತವೆ. ಇದೇ ವೇಳೆ ಸಂತ್ರಸ್ತರಿಗೆ ಪೌಷ್ಠಿಕಯುಕ್ತ ಆಹಾರ, ಮಕ್ಕಳಿಗೆ ಹಾಲು ವಿತರಿಸುವ ಅಗತ್ಯ ಇರುತ್ತದೆ. ಕೂಡಲೇ ಸರ್ಕಾರ ಅಗತ್ಯತೆಗಳನ್ನು ಪೂರೈಸಬೇಕು ಎಂದಿದ್ದಾರೆ. ಹೆಣ್ಣು ಮಕ್ಕಳ ಮಾಸಿಕ ಋತು ಸ್ರಾವದ ಸಂದರ್ಭದಲ್ಲಿ ಉಪಯೋಗಿಸುವ ಪ್ಯಾಡ್ ಒದಗಿಸಬೇಕು, ಉದ್ಯೋಗ ಖಾತ್ರಿ ಕೆಲಸದ ಕೂಲಿಹಣ ಬಾಕಿ ಇರುವುದನ್ನು ಕೂಡಲೇ ವಿತರಿಸಬೇಕು, ಮೂರು ದಿನಗಳಲ್ಲಿ ಎಲ್ಲರಿಗೂ ಉದ್ಯೋಗ ಖಾತ್ರಿ ಕೆಲಸವನ್ನು ಎನ್ ಎಂ ಆರ್ ಜನರೇಟ್ ಮಾಡಿ ಒದಗಿಸಬೇಕು, ಕೂಡಲೇ ಎಲ್ಲರ ಆರೋಗ್ಯ ತಪಾಸಣೆ ಮಾಡಿಸಿ ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯ ಮೇರೆಗೆ ಉಚಿತವಾಗಿ ಔಷಧಿ ಒದಗಿಸಬೇಕು ಎಂದು ನಿಯೋಗ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ. ನಿಯೋಗದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ರಾಜ್ಯ ಸಮಿತಿ ಸದಸ್ಯೆ ಡಾ.ಮೀನಾಕ್ಷಿ ಬಾಳಿ, ಕೃಷಿ ಕೂಲಿ ಕಾರ್ಮಿಕರ ಸಂಘದ ಮುಖಂಡ ಸಿದ್ಧರಾಮ ಹರವಾಳ, ನಿಂಗಣ್ಣ ಆಡಿನ್ ಕೋಳಕೂರ, ಸಿದ್ದಣ್ಣ ಹಂಗರಗಿ ಕೋಳಕೂರ ಸೇರಿದಂತೆ ಮತ್ತಿತರರು ಇದ್ದರು.
4,033 ಕೋಟಿ ರೂ. ವೆಚ್ಚದ ರೈಲು ಮಾರ್ಗ ಯೋಜನೆ; ಭಾರತ-ಭೂತಾನ್ ಘೋಷಣೆ
ಹೊಸದಿಲ್ಲಿ, ಸೆ. 29: ಭಾರತ ಹಾಗೂ ಭೂತಾನ್ ಅನ್ನು ಸಂಪರ್ಕಿಸುವ 2 ಹೊಸ ರೈಲು ಯೋಜನೆಗಳನ್ನು ಭಾರತ ಸೋಮವಾರ ಘೋಷಿಸಿದೆ. ಈ ಯೋಜನೆಗಳೆಂದರೆ ಅಸ್ಸಾಂನ ಕೊಕ್ರಝಾರ್-ಗೆಲೆಫು ರೈಲು ಮಾರ್ಗ ಯೋಜನೆ ಹಾಗೂ ಪಶ್ಚಿಮಬಂಗಾಳದ ಬನರ್ಹಾತ್-ಸಮ್ ತ್ಸೆ ರೈಲು ಮಾರ್ಗ ಯೋಜನೆ. 89 ಕಿ.ಮೀ. ವ್ಯಾಪ್ತಿಯ ಈ ರೈಲು ಮಾರ್ಗ ಯೋಜನೆಗಳ ಅಂದಾಜು ವೆಚ್ಚ 4,033 ಕೋ.ರೂ. ಆಗಿದೆ. ಈ ಎರಡು ಯೋಜನೆಗಳು ಉಭಯ ದೇಶಗಳ ನಡುವಿನ ರೈಲು ಸಂಪರ್ಕಗಳ ಮೊದಲ ಹಂತವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಭೂತಾನ್ ಗೆ ಭೇಟಿ ನೀಡಿದ ಸಂದರ್ಭ ಈ ಯೋಜನೆಯ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು. ಭಾರತವು ಭೂತಾನ್ ನ ಅತಿ ದೊಡ್ಡ ಪಾಲುದಾರ ರಾಷ್ಟ್ರ. ಭೂತಾನ್ ನ ಹೆಚ್ಚಿನ ಎಕ್ಸಿಮ್ ವ್ಯಾಪಾರ ಭಾರತದ ಬಂದರುಗಳ ಮೂಲಕವೇ ನಡೆಯುತ್ತದೆ. ಭೂತಾನ್ನ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಹಾಗೂ ಅಲ್ಲಿನ ಜನರಿಗೆ ಜಾಗತಿಕ ಮಾರುಕಟ್ಟೆಗಳಿಗೆ ಸುಧಾರಿತ ಪ್ರವೇಶವನ್ನು ಕಲ್ಪಿಸಲು ತಡೆ ರಹಿತ ರೈಲು ಮಾರ್ಗ ನಿರ್ಣಾಯಕವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹೊಸ 89 ಕಿ.ಮೀ. ರೈಲು ಮಾರ್ಗಗಳು ಭೂತಾನ್ಗೆ ಭಾರತದ 1,50, 000 ಕಿ.ಮೀ. ರೈಲ್ವೆ ಜಾಲದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಿದೆ. ಕೊಕ್ರಝಾರ್-ಗೆಲೆಫು ರೈಲು ಮಾರ್ಗ ಪೂರ್ಣಗೊಳ್ಳಲು 4 ವರ್ಷಗಳು ಬೇಕಾಗಲಿದೆ. ಇದು ಆರು ನಿಲ್ದಾಣಗಳು ಹಾಗೂ ಎರಡು ವಯಾಡಕ್ಟ್, 29 ದೊಡ್ಡ ಸೇತುವೆಗಳು, 65 ಸಣ್ಣ ಸೇತುವೆಗಳು, 2 ಗೂಡ್ಸ್ ಶೆಡ್, 1 ಫ್ಲೈಓವರ್ ಹಾಗೂ 39 ಅಂಡರ್ ಪಾಸ್ ಗಳನ್ನು ಒಳಗೊಂಡಿರಲಿದೆ ಎಂದು ಅವರು ತಿಳಿಸಿದ್ದಾರೆ. ಬನಾರ್ಹತ್-ಸಮ್ ತ್ಸೆ ರೈಲು ಮಾರ್ಗಕ್ಕೆ 577 ಕೋ.ರೂ. ವೆಚ್ಚವಾಗಲಿದೆ. ಇದು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆ 2 ನಿಲ್ದಾಣ, 1 ಮುಖ್ಯ ಫ್ಲೈಓವರ್, 27 ಸಣ್ಣ ಫ್ಲೈ ಓವರ್, 37 ಅಂಡರ್ ಪಾಸ್ಗಳನ್ನು ಒಳಗೊಂಡಿರಲಿದೆ ಎಂದು ಅವರು ಹೇಳಿದ್ದಾರೆ.
67,00,000 ರೂಪಾಯಿ ಚೆಕ್ ಬಿಸಾಡಿದ ತಿರ್ಬೋಕಿ ಪಾಕಿಸ್ತಾನ ತಂಡದ ಕ್ಯಾಪ್ಟನ್... India And Pakistan
ಭಾರತ &ಪಾಕಿಸ್ತಾನ ಮ್ಯಾಚ್ ಅಂದ್ರೆ ಮಹಾಯುದ್ಧ ಇದ್ದಂತೆ, ಅದರಲ್ಲೂ ಭಾರತೀಯರು ಪಂದ್ಯ ಗೆದ್ದು ಪಾಪಿ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಬೇಕು ಅಂತಾ ಕಾಯುತ್ತಾರೆ. ಭಾರತ &ಪಾಕಿಸ್ತಾನ ನಡುವೆ ಮ್ಯಾಚ್ ನಡೆಯುತ್ತಿದ್ದರೆ ಜಗಳ ಕೂಡ ಅದೇ ರೀತಿ ಇರುತ್ತೆ. ಈಗಲೂ ಅದೇ ರೀತಿ ಏಷ್ಯಾಕಪ್ ಫೈನಲ್ ಮ್ಯಾಚ್ ಸಮಯದಲ್ಲಿ ಭಾರತದ ಆಟಗಾರರನ್ನು ಕೆಣಕಲು ಬಂದು ಪಾಪಿ
ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ದಕ್ಷತೆ ತರಲು ʼಏಕೀಕೃತ ಭೂಸ್ವಾಧೀನ ವ್ಯವಸ್ಥೆʼಗೆ ಸಚಿವ ಕೃಷ್ಣಭೈರೇಗೌಡ ಚಾಲನೆ
ಬೆಂಗಳೂರು, ಸೆ.29: ರಾಜ್ಯಾದ್ಯಂತ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನ್ಯಾಯಸಮ್ಮತೆಯನ್ನು ತರುವ ನಿಟ್ಟಿನಲ್ಲಿ ನಮ್ಮ ಸರಕಾರವು ಏಕೀಕೃತ ಭೂಸ್ವಾಧೀನ ವ್ಯವಸ್ಥೆ(ಯುಎಲ್ಎಂಎಸ್) ಮಾಡ್ಯೂಲ್ ಅನ್ನು ಹೊರತಂದಿದೆ. ಈ ವ್ಯವಸ್ಥೆಯು, ರಾಜ್ಯಾದ್ಯಂತ ಭೂಸ್ವಾಧೀನ ಪ್ರಕ್ರಿಯೆಯನ್ನು ಸಮನ್ವಯಗೊಳಿಸಲು ಮತ್ತು ಪ್ರಸ್ತುತ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳು ಮತ್ತು ಹಿಂದಿನ ಭೂಸ್ವಾಧೀನ ಪ್ರಕರಣಗಳಲ್ಲಿನ ಮೊಕದ್ದಮೆಗಳನ್ನು ಗುರುತಿಸುವ ಏಕೀಕೃತ ಡಿಜಿಟಲ್ ವೇದಿಕೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆನ್ಲೈನ್ ವ್ಯವಸ್ಥೆಗೆ ಚಾಲನೆ ನೀಡಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾಡ್ಯೂಲ್ ಅನ್ನು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು, ಎಎಲ್ಒಗಳು ಮತ್ತು ಕ್ಷೇತ್ರ ಅಧಿಕಾರಿಗಳಿಂದ ರಚಿಸಲ್ಪಟ್ಟ ತಜ್ಞರ ಸಮಿತಿಯ ಮಾರ್ಗದರ್ಶನ ಮತ್ತು ಪರಿಶೀಲನೆಯಡಿಯಲ್ಲಿ, ಇ-ಆಡಳಿತ ವಿಭಾಗದ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ ನ ಏಕೀಕೃತ ಭೂ-ನಿರ್ವಹಣಾ ವ್ಯವಸ್ಥೆ (ಯುಎಲ್ಎಂಎಸ್)ಯ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ ಎಂದರು. ಈ ಮಾಡ್ಯೂಲ್ ಎಲ್ಲಾ ಭೂಸ್ವಾಧೀನಪಡಿಸುವ ಇಲಾಖೆಗಳು- ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ, ಮೂಲಸೌಲಭ್ಯ ಅಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಲೋಕೋಪಯೋಗಿ ಇಲಾಖೆ, ಕೆಶಿಪ್, ಕೆ-ರೈಡ್, ಮೆಟ್ರೋ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಂತಾದ ಇಲಾಖೆಗಳು ಭೂಸ್ವಾಧೀನ ಪ್ರಕ್ರಿಯೆಯ ವಿವಿಧ ಇಲಾಖೆಗಳೊಂದಿಗೆ ಕೊಂಡಿಯಾಗಿ ಸಂಪೂರ್ಣ ವಿವರಗಳನ್ನು ನಮೂದಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಹಕ್ಕು ಅಧಿನಿಯಮ 2013ರ ಕಾಯ್ದೆಗೆ ಅನುಗುಣವಾಗಿ ಹೊಸ ಪುಸ್ತಾವನೆಗಳಿಗೆ ಪ್ರಕ್ರಿಯೆ ಆಧಾರಿತ ಕಾರ್ಯ ಹರಿವನ್ನು ಒದಗಿಸಲು ಈ ಭೂಸ್ವಾಧೀನ ವ್ಯವಸ್ಥೆಯನ್ನು ಇಮ್ಮಡಿಗೊಳಿಸಲಾಗಿದೆ. ಪ್ರಸ್ತಾವನೆ ಸಲ್ಲಿಕೆಯಿಂದ ಹಿಡಿದು ಪರಿಹಾರ ವಿತರಣೆ ಮತ್ತು ಪುನರ್ವಸತಿವರೆಗಿನ ಭೂಸ್ವಾಧೀನದ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸಲು ಈ ವ್ಯವಸ್ಥೆಯು ಏಕಮಾತ್ರ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು. ಈ ವ್ಯವಸ್ಥೆಯು ಅಭಿವೃದ್ಧಿಯ ಅಗತ್ಯಗಳನ್ನು ನಾಗರಿಕರ ಹಕ್ಕುಗಳೊಂದಿಗೆ ಸಮತೋಲನಗೊಳಿಸುತ್ತದೆ. ವಿವಿಧ ತಂತ್ರಜ್ಞಾನಗಳ ಏಕೀಕರಣದೊಂದಿಗೆ ಮತ್ತಷ್ಟು ಮಾಡ್ಯೂಲ್ಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ | ‘ಪ್ರವಾಹ’ ಪರಿಹಾರ ನೀಡಲು ಕೋರಿ ಪ್ರಧಾನಿಗೆ ಪತ್ರ : ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಸೆ. 29 : ಬೀದರ್, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದಾಗಿ ಉಂಟಗಿರುವ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳೆ ಹಾನಿಗೆ ಅಗತ್ಯ ಪರಿಹಾರ ಕೋರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುತ್ತೇನೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಲವು ಸಚಿವರು ಕಲ್ಯಾಣ ಕರ್ನಾಟಕ ಭಾಗಕ್ಕೆ ನಾಳೆ(ಸೆ.30) ಖುದ್ದು ಭೇಟಿ ನೀಡಲಿದ್ದಾರೆ. ತೊಗರಿ, ಹೆಸರು, ಉದ್ದು ಸೇರಿದಂತೆ ಹಲವು ಬೆಳೆಗಳಿಗೂ ಹಾನಿಯಾಗಿದೆ ಎಂದು ಹೇಳಿದರು. ಬೆಳೆ ಹಾನಿಯ ಬಗ್ಗೆ ವರದಿ ಬಂದ ಬಳಿಕ ಪರಿಹಾರ ನೀಡುವಂತೆ ಪ್ರಧಾನಿಗೆ ಪತ್ರ ಬರೆಯುತ್ತೇನೆ. ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಬಳಿಕ ಯಾವ ರೀತಿ ರೈತರಿಗೆ ಸಹಾಯ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ಮಾಡಲಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಅಗತ್ಯ ನೆರವು ನೀಡಬೇಕು ಎಂದು ಅವರು ತಿಳಿಸಿದರು.
ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದ ಎಕ್ಸ್ಪರ್ಟೈಸ್ನ ಸಿಒಒ ಕೆ.ಎಸ್. ಶೇಖ್ ಕರ್ನಿರೆ
► ಔದ್ಯಮಿಕ ಪ್ರಗತಿ ಮತ್ತು ಬೆಳವಣಿಗೆ ಕುರಿತು ಚರ್ಚೆ
ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ‘ಅ.2ಕ್ಕೆ ದಿಲ್ಲಿ ಚಲೋ’
ಬೆಂಗಳೂರು, ಸೆ.29: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಅ.2ಕ್ಕೆ ದಿಲ್ಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಶೇಷಪ್ಪ ತಿಳಿಸಿದ್ದಾರೆ. ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಹಲವು ವರ್ಷಗಳೇ ಕಳೆದಿದ್ದರೂ ಅಲೆಮಾರಿ ಸಮುದಾಯಗಳ ಬದುಕು ಬೀದಿಯಲ್ಲೇ ಕಳೆಯುವಂತಾಗಿದ್ದು, ಇಂತಹ ಪರಿಸ್ಥಿತಿಯಿಂದ ಮೇಲೆತ್ತಲು ರಾಹುಲ್ ಗಾಂಧಿ ಮಧ್ಯೆಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ಶೀಘ್ರದಲ್ಲೇ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಒಳ ಮೀಸಲಾತಿ ಜಾರಿಯಾಗಬೇಕು. ಶತಮಾನಗಳ ಅನ್ಯಾಯವನ್ನು ಸರಿಪಡಿಸಲು ಪರಿಣಾಮಕಾರಿ ಪ್ಯಾಕೇಜ್ ಘೋಷಿಸಬೇಕು. ಸುಪ್ರೀಂ ಕೋರ್ಟ್ನ ಮಾರ್ಗಸೂಚಿ, ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸುಗಳಿಗೆ ವ್ಯತಿರಿಕ್ತವಾಗಿರುವ ಅಲೆಮಾರಿ ಸಮುದಾಯಗಳಿಗೆ ಸಂಬಂಧಿಸಿದಂತೆ ಸರಕಾರ ತೆಗೆದುಕೊಂಡಿರುವ ತೀರ್ಮಾನಗಳನ್ನು ಬದಲಾಯಿಸಬೇಕು. ಅಲೆಮಾರಿ ಸಮಯದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ಆಯೋಗ ರಚಿಸಬೇಕು ಎಂದು ಆಗ್ರಹಿಸಿದರು. ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಅಲೆಮಾರಿ ಸಮುದಾಯಗಳಿಗೆ ಸೂಕ್ತ ವಸತಿ ವ್ಯವಸ್ಥೆ, ಉದ್ಯೋಗ ಮತ್ತು ಶಿಕ್ಷಣವನ್ನು ನೀಡಬೇಕು. ದಿಲ್ಲಿ ಚಲೋದಲ್ಲಿ ಒಳಮೀಸಲಾತಿ ಹೋರಾಟಗಾರರಾದ ಅಂಬಣ್ಣ ಅರೋಲಿಕರ್, ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ, ಉಪನ್ಯಾಸಕ ಡಾ.ಹುಲಿಕುಂಟೆ ಮೂರ್ತಿ, ಜಿ.ಎನ್.ದೇವಿ, ಸುರೇಶ್ ನೇಹಾಲ್ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಖಜಾಂಚಿ ಚಿನ್ನ ಮತ್ತಿತರರು ಹಾಜರಿದ್ದರು.
ಬೀದರ್ ಜಿಲ್ಲೆಯು ಮಾದಕ ಮುಕ್ತ ಜಿಲ್ಲೆಯಾಗಿಸಲು ಎಲ್ಲರೂ ಶ್ರಮಿಸೋಣ : ಸಂಸದ ಸಾಗರ್ ಖಂಡ್ರೆ
ಬೀದರ್ : ಜಿಲ್ಲೆಯನ್ನು ಮಾದಕ ಮುಕ್ತ ಜಿಲ್ಲೆಯಾಗಲು ಎಲ್ಲರೂ ಶ್ರಮಿಸೋಣ ಎಂದು ಸಂಸದ ಸಾಗರ್ ಖಂಡ್ರೆ ಅವರು ತಿಳಿಸಿದರು. ಸೋಮವಾರ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ-ಕರ್ನಾಟಕ ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಾದಕ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ವಸ್ತುಗಳ ವ್ಯಸನ ಒಂದು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ. ಆದ್ದರಿಂದ ಇದನ್ನು ಹೋಗಲಾಡಿಸಲು ನಾವೆಲ್ಲರೂ ಕೈಜೋಡಿಸಬೇಕು. ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಭವಿಷ್ಯ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಮನೆ ಮನೆಗಳಲ್ಲಿ, ಶಾಲಾ, ಕಾಲೇಜುಗಳಲ್ಲಿ ತಿಳಿಸಿ ಹೇಳಬೇಕು. ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮನೆಗಳಲ್ಲಿ ಪೋಷಕರು ಮಕ್ಕಳ ಬಗ್ಗೆ ವಿಶೇಷ ಗಮನ ವಹಿಸಿ, ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ಮಾತನಾಡಿ, ಮಾದಕ ಮುಕ್ತ ಜಿಲ್ಲೆ ಮಾಡಲು ನಾವು ಮನೆಯಿಂದಲೇ ಕೆಲಸ ಆರಂಭಿಸಬೇಕು. ಯುವ ಪೀಳಿಗೆಯನ್ನು ಮಾದಕ ವಸ್ತುಗಳಿಂದ ದೂರ ಇಟ್ಟರೆ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಬಹುದು. ಈಗಾಗಲೇ ಜಿಲ್ಲೆಯಲ್ಲಿ ಆ. 1 ರಿಂದ ಸೆ.30ರ ವರೆಗೆ ಮಾದಕ ಮುಕ್ತ ಕರ್ನಾಟಕ ಅಭಿಯಾನದಡಿಯಲ್ಲಿ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗಿದೆ ಎಂದು ಹೇಳಿದರು. ಮನೋವೈದ್ಯ ತಜ್ಞ ರಾಘವೇಂದ್ರ ವಾಗೋಲೆ ಅವರು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ಮಾದಕ ಮುಕ್ತದ ಧ್ಯೇಯ ಬೋಧನೆ ಹಾಗೂ ಕರಪತ್ರ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸೂರ್ಯಕಾಂತ್ ಬೀರಾದರ್, ಎನ್ ಆರ್ ಎಲ್ ಎಂ ಮ್ಯಾನೇಜರ್ ಪ್ರವೀಣಕುಮಾರ್, ಎನ್ ಆರ್ ಎಲ್ ಎಂ ಅಧಿಕಾರಿ ಸುಭಾಷ್ ಸೇರಿದಂತೆ ಸ್ವಸಹಾಯ ಸಂಘಗಳ ಮಹಿಳೆಯರು ಮತ್ತು ಇತರರು ಉಪಸ್ಥಿತರಿದ್ದರು.
ಚಲನಚಿತ್ರ ಪ್ರದರ್ಶನಕ್ಕೆ 200 ರೂ. ಏಕರೂಪ ದರ ನಿಗದಿ; ಮಧ್ಯಂತರ ತಡೆಯಾಜ್ಞೆ ತೆರವಿಗೆ ಕೋರಿ ಹೈಕೋರ್ಟ್ಗೆ ಮೇಲ್ಮನವಿ
ಬೆಂಗಳೂರು: ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂ. ಏಕರೂಪ ದರ ನಿಗದಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. 'ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025'ಕ್ಕೆ ತಡೆ ನೀಡಿ ಸೆಪ್ಟೆಂಬರ್ 23ರಂದು ಏಕಸದಸ್ಯ ನ್ಯಾಯಪೀಠ ನೀಡಿರುವ ಮಧ್ಯಂತರ ಆದೇಶ ತೆರವು ಮಾಡುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ ಮತ್ತಿತರರು ಪ್ರತ್ಯೇಕವಾಗಿ ಒಟ್ಟು ಆರು ಮೇಲ್ಮನವಿಗಳನ್ನು ಸಲ್ಲಿಸಿದ್ದು, ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರ ರಜಾಕಾಲದ ನ್ಯಾಯಪೀಠದ ಮುಂದೆ ಮಂಗಳವಾರ ಮೇಲ್ಮನವಿಗಳು ವಿಚಾರಣೆಗೆ ನಿಗದಿಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಸಿನಿಮಾ ನಿರ್ಮಾಪಕರ ಸಂಘ, ಕನ್ನಡ ಸಿನಿಮಾ ನಿರ್ದೇಶಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಡಾ.ರಾಜಕುಮಾರ್ ಸೇನೆ, ಸುವರ್ಣ ಕರ್ನಾಟಕ ಚಲನಚಿತ್ರ ವಿತರಕರ ಸಂಘ, ಕರ್ನಾಟಕ ಸಿನಿ ಕಲಾವಿದರು, ತಂತ್ರಜ್ಞರ ಒಕ್ಕೂಟ, ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ, ಎ ಗಣೇಶ್, ಕೆ ವಿ ವೆಂಕಟೇಶ್, ಪ್ರಿಯಾಮ ದಾಸರ ಚಂದ್ರು, ಆರ್ ಶಿವಶಂಕರ್, ಸಿ ಎಸ್ ವೆಂಕಟಸುಬ್ಬು, ರಮೇಶ್ ಕಶ್ಯಪ್ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿಯಲ್ಲಿ ಮಲ್ಟಿಪ್ಲೆಕ್ಸ್ ಅಸೋಶಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್ನ ಷೇರುದಾರ ಸಂತನು ಪೈ, ಸಿನಿಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್, ಕೀ ಸ್ಟೋನ್ ಎಂಟರ್ಪ್ರೈಸಸ್, ಹೊಂಬಾಳೆ ಫಿಲ್ಮ್ಸ್, ವಿಕೆ ಫಿಲ್ಮ್ಸ್ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಪ್ರಕರಣವೇನು? ರಾಜ್ಯ ಸರಕಾದ ನಿಯಮ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತಿತರ ಸಂಸ್ಥೆಗಳು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅನುಕೂಲತೆಯ ಸಮಾನತೆಯ ಪರೀಕ್ಷೆಯ ಅನ್ವಯ ಸರಕಾರದ ತಿದ್ದುಪಡಿ ನಿಯಮಕ್ಕೆ ತಡೆ ನೀಡದಿದ್ದರೆ ಹಾಗೂ ಅರ್ಜಿದಾರರು ರಿಟ್ ಅರ್ಜಿಯಲ್ಲಿ ಯಶಸ್ಸು ಕಂಡರೆ ಶಾಶ್ವತವಾಗಿ ತಮ್ಮ ಗಳಿಕೆಯನ್ನು ಕಳೆದುಕೊಳ್ಳಲಿದ್ದಾರೆ. ತಿದ್ದುಪಡಿ ನಿಯಮಕ್ಕೆ ತಡೆ ನೀಡಿದರೆ ಮತ್ತು ಅರ್ಜಿದಾರರು ಅಂತಿಮವಾಗಿ ನಷ್ಟ ಅನುಭವಿಸಿದರೆ ಗಳಿಸಿರುವ ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಮಾಡಬಹುದು. ಆದ್ದರಿಂದ, ತಿದ್ದುಪಡಿ ನಿಯಮಗಳಿಗೆ ಮುಂದಿನ ಆದೇಶದವರೆಗೆ ತಡೆ ನೀಡಲಾಗಿದೆ ಎಂದು ಮಧ್ಯಂತರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.
ಬೀದರ್ : ನಾಗಪುರದ ದೀಕ್ಷಾ ಭೂಮಿಗೆ ತೆರಳಲು ರೈಲು ವ್ಯವಸ್ಥೆ ಮಾಡಲು ಮನವಿ
ಬೀದರ್: ಮಹಾರಾಷ್ಟ್ರ ರಾಜ್ಯದ ನಾಗಪುರದ ದೀಕ್ಷಾ ಭೂಮಿಗೆ ಅಶೋಕ್ ವಿಜಯ್ ದಶಮಿ, ಧಮ್ಮ ಚಕ್ರ ಪರಿವರ್ತನ ದಿನಕ್ಕೆ ತೆರಳಲು ರೈಲಿನ ವ್ಯವಸ್ಥೆ ಮಾಡಬೇಕು ಎಂದು ದಲಿತ್ ಯೂನಿಟಿ ಮೂವ್ಮೆಂಟ್ ಸಂಘಟನೆಯಿಂದ ಮನವಿ ಪತ್ರ ಸಲ್ಲಿಸಲಾಗಿದೆ. ಸೋಮವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಶೋಕ್ ವಿಜಯ್ ದಶಮಿ, ಧಮ್ಮ ಚಕ್ರ ಪರಿವರ್ತನ ದಿನದ ನಿಮಿತ್ಯ ನಾಗಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಉಪಾಸಕ, ಉಪಾಸಕಿಯರು ತೆರಳುತ್ತಾರೆ. ಪ್ರತಿ ವರ್ಷ ರೈಲಿನ ವ್ಯವಸ್ಥೆ ಮಾಡಲಾಗುತಿತ್ತು. ಅದೇ ರೀತಿ ಈ ವರ್ಷವು ಕೂಡ ರೈಲು ವ್ಯವಸ್ಥೆ ಮಾಡಿ ಬೌದ್ಧ ಉಪಾಸಕ, ಉಪಾಸಕಿಯರಿಗೆ ನಾಗಪುರಕ್ಕೆ ತೆರಳಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ದಲಿತ್ ಯೂನಿಟಿ ಮೂವ್ಮೆಂಟ್ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಗೌತಮ್ ಡಾಕುಳಗಿ, ಜಿಲ್ಲಾಧ್ಯಕ್ಷ ವಿನೀತ್ ಗಿರಿ, ಉತ್ತಮ್ ಕೆಂಪೆ ಹಾಗೂ ರಾಜಶೇಖರ್ ಸೇರಿಕಾರ್ ಇದ್ದರು
ಚಿಂಚೋಳಿ: ಧಾರಾಕಾರ ಮಳೆಯಿಂದ ರಸ್ತೆ, ಬೆಳೆ ಹಾನಿ; ಪರಿಹಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಆಗ್ರಹ
ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಪ್ಲಾ ನಾಯಕ್ ತಾಂಡಾದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮವಾಗಿ ಭಾರೀ ಪ್ರಮಾಣದ ರಸ್ತೆ ಹಾಗೂ ಬೆಳೆ ಹಾನಿಗೀಡಾಗಿದೆ. ಸರ್ಕಾರ ಕೂಡಲೇ ಪರಿಹಾರ ಕ್ರಮಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಆಗ್ರಹಿಸಿದೆ. ಭಾರೀ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಕುಸಿದು ಹೋಗಿದ್ದು, ಸೋಯಾ, ಕಬ್ಬು ಸಂಪೂರ್ಣ ನೆಲಕಚ್ಚಿದೆ. ಇದರಿಂದ ರೈತರು ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಕೂಡಲೇ ರಸ್ತೆಯನ್ನು ದುರಸ್ಥಿಗೊಳಿಸಬೇಕು, ಹಾನಿಯಾದ ರೈತರ ಬೆಳೆಗೆ ಪರಿಹಾರ ನೀಡಬೇಕೆಂದು ಸೇನೆಯ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಚಿಂಚೋಳಿ ತಾಲ್ಲೂಕು ಅಧ್ಯಕ್ಷ ಲಿಂಬಾಜಿ ಚವ್ಹಾಣ್ ಅವರ ನೇತೃತ್ವದಲ್ಲಿ ರಸ್ತೆ ತಡೆದು ಹೋರಾಟ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಂಕರ್ ಪವಾರ್, ಸುಧಾ, ರಮೇಶ್ ಚವ್ಹಾಣ್ ಸೇರಿದಂತೆ 20ಕ್ಕೂ ಹೆಚ್ಚು ಯುವ ಕಾರ್ಯಕರ್ತರು ಭಾಗವಹಿಸಿದ್ದರು.
ಕಲಬುರಗಿ| ನೆರೆ ಸಂತ್ರಸ್ತರಿಗೆ ಬಿಸ್ಕಟ್, ಚಿಪ್ಸ್ ನೀಡಿದ ಬಾಲಕರು
ಕಲಬುರಗಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲಿ ಜಿಲ್ಲಾಡಳಿತ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಮುಂದಾಗುತ್ತಿದ್ದಾರೆ. ಅದರಂತೆಯೇ ಕಲಬುರಗಿ ನಗರದ ದರ್ಗಾ ಪ್ರದೇಶದ ಕೆಲ ಬಾಲಕರು ಸೇರಿಕೊಂಡು ತಮ್ಮ ಕೈಲಾದಷ್ಟು ಹಣ ಕೂಡಿಸಿಕೊಂಡು ಕೆಲವು ತಿನ್ನುವ ಪದಾರ್ಥಗಳನ್ನು ಅಧಿಕಾರಿಗಳ ಮೂಲಕ ಸಂತ್ರಸ್ತರಿಗೆ ತಲುಪಿಸಿದ್ದಾರೆ. ನಗರದ ದರ್ಗಾ ಪ್ರದೇಶದ ನಿವಾಸಿಗಳಾದ ಅಮನ್, ಕಮ್ರಾನ್, ಅತೀಫ್, ಇರ್ಫಾನ್ ಶೇಖ್, ರೆಹಮತ್,, ದಿಲಾಶದ ಅವರು, ಕಲಬುರಗಿ ತಾಲೂಕಿನ ಭೀಮಾ ನದಿಯ ಪ್ರವಾಹ ಪೀಡಿತ ಜನರಿಗೆ ಕಲಬುರಗಿ ತಹಸೀಲ್ದಾರ್ ಮೂಲಕ 1000 ಬಿಸ್ಕೆಟ್ ಪಿಕೆಟ್ಗಳು ಮತ್ತು 150 ಚಿಪ್ಸ್ ಪಾಕೆಟ್ಗಳನ್ನು ಒದಗಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ದೇವಿಂದ್ರ ನಾಡಗೀರ್, ಎಂಡಿ ಮುನೀರ್, ಮತ್ತು ಸಂತೋಷ ಯಡ್ರಾಮಿ ಮತ್ತಿತ್ತರ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಯವರು ಬಾಲಕರು ನೀಡಿದ ಪೊಟ್ಟಣಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಿದರು.
ಸೆ.30ರಂದು ದಸರಾ ಕಾವ್ಯ ಸಂಭ್ರಮದ ಮಹಿಳಾ ಕವಿಗೋಷ್ಠಿ: ತೇಗಲತಿಪ್ಪಿ
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಸರಾ ಕಾವ್ಯ ಸಂಭ್ರಮದ ಮಹಿಳಾ ಕವಿಗೋಷ್ಠಿಯನ್ನು ಸೆ.30 ರ ಮಧ್ಯಾಹ್ನ 12.15 ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸಲಿರುವ ಸುಮಾರು ಹದಿನಾರು ಕವಯತ್ರಿಯರು ತಮ್ಮೆದೆಯೊಳಗಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು, ಪ್ರಚಲಿತ ವಿದ್ಯಮಾನಗಳ ಕುರಿತು ಅನೇಕ ಸಂಗತಿಗಳು ನಮ್ಮೆದುರು ತೆರೆದಿಡಲಿದ್ದಾರೆ. ಜಿಪಂ ನ ಮಾಜಿ ಉಪಾಧ್ಯಕ್ಷೆ ಶೋಭಾ ಸಿದ್ಧು ಸಿರಸಗಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಸ್ಕಾಂ ನ ನೂತನ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಎಂ.ಎಸ್.ಐ. ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮೈತ್ರಾದೇವಿ ಹಳೇಮನಿ, ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆನರಾ ವಾಣಿಜ್ಯ, ಕೈಗಾರಿಕಾ ಸಂಸ್ಥೆಯ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಸೆ.29: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಎಲ್ಲಾ ಸದಸ್ಯರ 85ನೇ ವಾರ್ಷಿಕ ಮಹಾ ಸಭೆಯು ಸಂಸ್ಥೆಯ ನೋಂದಾಯಿತ ಕಚೇರಿಯಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ 2025-26ನೇ ಸಾಲಿಗೆ ನೂತನ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಂಸ್ಥೆಯ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ವಿವರ ಇಂತಿವೆ ಅಧ್ಯಕ್ಷರಾಗಿ ಉದ್ಯಮಿ ಪಿ. ಬಿ. ಅಹ್ಮದ್ ಮುದಸ್ಸರ್ ಆಯ್ಕೆಯಾದರು. ಇತರ ಪದಾಧಿಕಾರಿಗಳ ವಿವರ ಇಂತಿವೆ. ದಿವಾಕರ್ ಪೈ ಕೊಚ್ಚಿಕರ್(ಉಪಾಧ್ಯಕ್ಷರು) , ಸಿಎ ಅಬ್ದುರ್ ರೆಹಮಾನ್ ಮುಸ್ಬಾ(ಗೌರವ ಖಜಾಂಚಿ), ಅಶ್ವಿನ್ ಪೈ ಮರೂರ್ ಮತ್ತು ಜೀತನ್ ಅಲೆನ್ ಸಿಕ್ವೇರಾ(ಗೌರವ ಕಾರ್ಯದರ್ಶಿಗಳು) ಆದಿತ್ಯ ಪದ್ಮನಾಭ ಪೈ, ಎಂ. ಆತ್ಮಿಕಾ ಅಮೀನ್, ಅಮಿತ್ ರಾಮಚಂದ್ರ ಆಚಾರ್ಯ, ನಿಸ್ಸಾರ್ ಫಕೀರ್ ಮುಹಮ್ಮದ್, ಬಿ.ಎ. ನಝೀರ್, ವಿನ್ಸೆಂಟ್ ಕುಟಿನ್ಹಾ, ಆಶಿತ್ ಬಿ. ಹೆಗ್ಡೆ, ಸಿಎ ನಂದಗೋಪಾಲ್ ಶೆಣೈ, ಸುಜೀರ್ ಪ್ರಸಾದ್ ನಾಯಕ್, ಅಜಯ್ ಪ್ರಭು ಕಾರ್ಕಳ, ನಿಟ್ಟೆ ದಶರಥ ಶೆಟ್ಟಿ( ನಿರ್ದೇಶಕರು). *ಸುಸ್ಥಿರ ಅಭಿವೃದ್ಧಿ ಪ್ರಥಮ ಆದ್ಯತೆಯಾಗಲಿ: ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ. ಬಿ.ಅಹ್ಮದ್ ಮುದಸ್ಸರ್ ಅವರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸಮಾನ ಮನಸ್ಕ ಸಂಸ್ಥೆಗಳು ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಘಟಕಗಳೊಂದಿಗೆ ಸಕ್ರಿಯವಾಗಿ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಐಟಿ, ಪ್ರವಾಸೋದ್ಯಮ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನಗರವು ಬೆಳವಣಿಗೆಯ ಹಾದಿಯಲ್ಲಿದ್ದು, ಸುಸ್ಥಿರ ಅಭಿವೃದ್ಧಿ ಪ್ರಥಮ ಆದ್ಯತೆಯಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಲಬುರಗಿ ನಗರಕ್ಕೆ ನಾಳೆ ಸಿಎಂ ಭೇಟಿ ಹಿನ್ನಲೆ; ಸಂಚಾರ ಮಾರ್ಗದಲ್ಲಿ ಬದಲಾವಣೆ
ಕಲಬುರಗಿ: ಪ್ರವಾಹ ಹಾಗೂ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ವಿವಿಧ ಖಾತೆಗಳ ಸಚಿವರು ನಾಳೆ (ಸೆ.30) ಕಲಬುರಗಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವಾಗ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಎಸ್.ಬಿ ಪೆಟ್ರೋಲ್ ಪಂಪ್ ವರೆಗೆ ಎಲ್ಲ ಮಾದರಿಯ ಓಡಾಟ ನಿಷೇಧಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿರುವಾಗ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ವಿಜಯ ವಿದ್ಯಾಲಯ ಕಾಲೇಜು ಹತ್ತಿರವಿರುವ ಚರ್ಚವರೆಗೆ ಎಲ್ಲ ಮಾದರಿಯ ಓಡಾಟ ನಿಷೇಧಿಸಲಾಗಿದೆ. ಗಣ್ಯ ವ್ಯಕ್ತಿಗಳ ವಾಹನಗಳ ಪಾರ್ಕಿಂಗ್ ಸ್ಥಳಗಳು: 1) ಮುಖ್ಯಮಂತ್ರಿಗಳ ವಾಹನ, ಸಚಿವರು ಹಾಗೂ ಶಾಸಕರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ವಾಹನಗಳಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಪಾರ್ಕಿಂಗ್ ಸ್ಥಳವನ್ನು ನಿಗದಿಪಡಿಸಲಾಗಿರುತ್ತದೆ. 2) ಮುಖ್ಯಮಂತ್ರಿಗಳ ಸಭೆಗೆ ಆಗಮಿಸುವ ಇನ್ನಿತರ ಅಧಿಕಾರಿಗಳ ವಾಹನಗಳನ್ನು NCC ಹಾಗೂ ಕನ್ನಡ ಭವನದ ಕಛೇರಿಯ ಆವರಣದಲ್ಲಿ ಪಾರ್ಕಿಂಗ್ ಮಾಡುವುದು. 3) ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರು ನಾಳೆ ಕುಡಾ (KUDA) ಕಛೇರಿಯ ಆವರಣದಲ್ಲಿ ಪಾರ್ಕಿಂಗ್ ಮಾಡುವುದು. ಮಾರ್ಗ ಬದಲಾವಣೆಯ ಸ್ಥಳಗಳು: ► ಕೇಂದ್ರ ಬಸ್ ನಿಲ್ದಾಣದಿಂದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದ ಕಡೆಗೆ ಚಲಿಸುವ ವಾಹನಗಳು ರಾಷ್ಟ್ರಪತಿ ವೃತ್ತದಿಂದ ಶರಣಬಸವೇಶ್ವರ ಕಾಲೇಜು ಎದುರುಗಡೆಯಿಂದ ಆನಂದ ಓ.ಪಿ ಮಾರ್ಗವಾಗಿ ಗೋವಾ ಹೋಟೆಲ್ ಕ್ರಾಸ್ ಮೂಲಕ ಸಂಚಾರ ಮಾಡುವುದು. ► ಸೂಪರ್ ಮಾರ್ಕೆಟ್ ದಿಂದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ ಕಡೆಗೆ ಚಲಿಸುವ ವಾಹನಗಳು ಎಸ್.ಬಿ ಪೆಟ್ರೋಲ್ ಮೂಲಕ ಜಿಲ್ಲಾ ನ್ಯಾಯಾಲಯದ (ಕೋರ್ಟ) ಎದುರುಗಡೆಯಿಂದ ನೋಬೆಲ್ ಶಾಲೆ ಮಾರ್ಗವಾಗಿ ಚಲಿಸುವುದು. ► ಸಭೆ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸದರಿ ಮಾರ್ಗಗಳನ್ನು ಬಳಸದೇ ಪರ್ಯಾಯ ಮಾರ್ಗಗಳಲ್ಲಿ ಚಲಿಸಲು ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ| ಮುಖ್ಯಮಂತ್ರಿ ಆಗಮನ ಹಿನ್ನೆಲೆ ಸಚಿವದ್ವಯರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆಗಾಗಿ ನಾಳೆ ಮಂಗಳವಾರ (ಸೆ 30) ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಕೌಶಾಲ್ಯಭಿವೃದ್ಧಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ತಯಾರಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಹಮ್ಮಿಕೊಳ್ಳಲಾಯಿತು. ಮುಖ್ಯಮಂತ್ರಿಗಳ ಜೊತೆಯಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಸಂಬಂಧಿತ ಸಚಿವರುಗಳು ಹಾಗೂ ಹಿರಿಯ ಅಧಿಕಾರಿಗಳು ಸಮೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಬೀದರ್, ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ನಂತರ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ಭಾಗದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನಾಳಿನ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾದ ಅಂಶಗಳ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ಆಗಮಿಸಲು ಸಚಿವರು ಸೂಚಿಸಿದರು. ಪ್ರತಿ ತಾಲ್ಲೂಕಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಪ್ರವಾಹ ಪೀಡಿತ ತಾಲ್ಲೂಕಗಳ ಸಮಸ್ಯೆಗಳನ್ನು ದಾಖಲೆಗಳ ಸಮೇತ ತಕ್ಷಣವೆ ಒದಗಿಸಲು ವಿಡಿಯೋ ಕಾನ್ಫೆರೆನ್ಸ್ ಮೂಲಕ ತಿಳಿಸಲಾಯಿತು. ಸಭೆಯಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ರಿಶ್ಚಿಯನ್ ಚೇಂಬರ್ ಆಪ್ ಕಾಮರ್ಸ್ನ ಪ್ರೇರಣಾ ಪ್ರಶಸ್ತಿ-2025ಕ್ಕೆ ನಾಲ್ವರು ಸಾಧಕರ ಆಯ್ಕೆ
ಉಡುಪಿ, ಸೆ.29: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಉಡುಪಿ ಜಿಲ್ಲೆ ಸಂಘಟನೆಯ ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ- 2025ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅ.2ರಂದು ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದ ಸಮುದಾಯ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಸಂತೋಷ್ ಡಿ’ಸಿಲ್ವಾ ತಿಳಿಸಿದ್ದಾರೆ. ಸೋಮವಾರ ಉಡುಪಿ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ ಪ್ರಾರಂಭಗೊಂಡು 13ನೆ ವರ್ಷಕ್ಕೆ ಪಾದಾರ್ಪಣೆಗೊಂಡ ಈ ಸಂಘಟನೆ (ಕೆಸಿಸಿಸಿಐ) ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ (ಇಫ್ಕಾ)ದ ಕರ್ನಾಟಕ ರಾಜ್ಯ ಸ್ಥಾಪಕಾಧ್ಯಕ್ಷರಾಗಿದ್ದ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಇವರ ಕನಸಿನ ಕೂಸು ಎಂದವರು ವಿವರಿಸಿದರು. ಇಫ್ಕಾದ ಅಂದಿನ ಜಿಲ್ಲಾಧ್ಯಕ್ಷ ಲೂವಿಸ್ ಲೋಬೊ ಮುಂದಾಳತ್ವದಲ್ಲಿ ಡಾ. ಜೆರಿ ವಿನ್ಸೆಂಟ್ ಡಾಯಸ್ ಅಧ್ಯಕ್ಷತೆಯಲ್ಲಿ ಇದು ಪ್ರಾರಂಭಗೊಂಡಿದ್ದು, ಈ ಸಂಘಟನೆ ಸಹಕಾರಿ ಸೊಸೈಟಿ ಕಾಯ್ದೆ 1860 ಅಡಿಯಲ್ಲಿ ನೊಂದಾವಣೆ ಗೊಂಡಿದೆ. ಸಂಸ್ಥೆಯ ಕಾರ್ಯವ್ಯಾಪ್ತಿ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಒಳಗೊಂಡಿದ್ದರೂ ಸದ್ಯಕ್ಕೆ ಇದರ ಕಾರ್ಯವ್ಯಾಪ್ತಿಯನ್ನು ಉಡುಪಿ ಜಿಲ್ಲೆಗೆ ಸೀಮಿತಗೊಳಿಸಿದ್ದೇವೆ ಎಂದು ಸಂತೋಷ್ ಡಿ ಸಿಲ್ವ ತಿಳಿಸಿದರು. ಕ್ರೈಸ್ತ ಸಮಾಜದ ಎಲ್ಲಾ ವರ್ಗಗಳನ್ನು (ಕೆಥೋಲಿಕ್, ಪ್ರೊಟೆಸ್ಟೆಂಟ್, ಸೀರಿಯನ್ ಒರ್ತೊಡೊಕ್ಸ್ ಹಾಗೂ ಇತರ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು, ವೃತ್ತಿಪರರು ಹಾಗೂ ಕೃಷಿಕರು ಇದರ ಸದಸ್ಯರಾಗಿ ದ್ದಾರೆ. ಕೇವಲ 30 ಮಂದಿ ಅಜೀವ ಸದಸ್ಯರಿಂದ ಪ್ರಾರಂಭ ಗೊಂಡ ಸಂಸ್ಥೆ ಸದಸ್ಯರ ಸಂಖ್ಯೆ 170ರ ಗಡಿ ದಾಟಿದೆ ಎಂದರು. ಸಂಘಟನೆ ಕಳೆದ ಐದು ವರ್ಷಗಳಿಂದ ಸಮುದಾಯದ ಅರ್ಹ ಉದ್ಯಮಿಗಳನ್ನು ಗುರುತಿಸಿ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದೇ ಅ.2ರಂದು ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ಬೆಸಿಲಿಕಾದ ಸಮುದಾಯ ಭವನದಲ್ಲಿ ನಡೆಯುವ ಸಂಘಟನೆಯ ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ 2025ನ್ನು ಸಮಾಜದ ನಾಲ್ವರು ಸಾಧಕರಿಗೆ ಪ್ರದಾನ ಮಾಡಲಿದ್ದೇವೆ ಎಂದರು. ವರ್ಷದ ಉದ್ಯಮಿ ಪ್ರಶಸ್ತಿಯನ್ನು ಪಲಿಮಾರಿನ ಫ್ರಾನ್ಸಿಸ್ ಡಿ’ಸೋಜಾ, ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಉಡುಪಿಯ ಲವಿಟಾ ಅಂದ್ರಾದೆ ಅವರಿಗೆ, ವರ್ಷದ ಯುವ ಉದ್ಯಮಿ ಪ್ರಶಸ್ತಿಯನ್ನು ಸುಭಾಷ್ ನಗರದ ಅರುಣ್ ಸುಶೀಲ್ ಕೋಟ್ಯಾನ್ಗೆ ಹಾಗೂ ವರ್ಷದ ಪ್ರಗತಿಪರ ಕೃಷಿಕ ಪ್ರಶಸ್ತಿ ಯನ್ನು ಶಂಕರಪುರದ ಡಾ.ಜೋಸೆಫ್ ಲೋಬೋ ಇವರಿಗೆ ನೀಡಿ ಗೌರವಿಸಲಾಗುತ್ತದೆ ಎಂದು ಸಂತೋಷ್ ತಿಳಿಸಿದರು. ಸಂಜೆ 6:00ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಚೇಂಬರಿನ ಗೌರವಾಧ್ಯಕ್ಷ ಡಾ. ಜೆರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ, ಸಿಎಸ್ಐ ಸಭೆಯ ಧರ್ಮಾಧ್ಯಕ್ಷ ರೈಟ್ ರೆವರೆಂಡ್ ಹೇಮಚಂದ್ರ ಕುಮಾರ್ ಭಾಗವಹಿಸಲಿದ್ದಾರೆ ಎಂದರು. ಆಸಕ್ತ ಕ್ರೈಸ್ತ ಯುವ ಉದ್ಯಮಿಗಳಿಗೆ ಪರಿಣಿತ ಸಂಪನ್ಮೂಲ ವ್ಯಕ್ತಿಗಳಾದ ಪತ್ರಕರ್ತ ವಾಲ್ಟರ್ ನಂದಳಿಕೆ, ಉದ್ಯಮಿ ಸೌಜನ್ಯ ಹೆಗ್ಡೆ ಮಾಹಿತಿ ಕಾರ್ಯಗಾರ ನಡೆಸಿಕೊಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಖಜಾಂಚಿ ಮ್ಯಾಕ್ಷಿಮ್ ಸ್ಟೇಫನ್ ಸಲ್ಡಾನಾ, ಸಹಕಾರ್ಯದರ್ಶಿ ವಿಲ್ಸನ್ ಡಿಸೋಜಾ, ನಿರ್ದೇಶಕ ಜೀವನ್ ಸಾಲಿನ್ಸ್ ಉಪಸ್ಥಿತರಿದ್ದರು.
ಕಲಬುರಗಿ: ಸೆಪ್ಟೆಂಬರ್ 30 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಕಲಬುರಗಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಘಟಕ ಇವುಗಳ ಸಹಯೋಗದೊಂದಿಗೆ “ವಿಶ್ವ ಪ್ರವಾಸೋದ್ಯಮ ದಿನಾಚರಣೆ-2025”ರ ಅಂಗವಾಗಿ ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳ ಛಾಯಾಚಿತ್ರ ಪ್ರದರ್ಶನ, ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯುಳ್ಳ ಕ್ಯೂ.ಆರ್. ಕೋಡ್ ಬಿಡುಗಡೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸೆಪ್ಟೆಂಬರ್ 30 ರಂದು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿನ ಸುವರ್ಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಘನ ಉಪಸ್ಥಿತಿ ವಹಿಸುವರು. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ, ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ, ಜೇವರ್ಗಿ ಶಾಸಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್, ಅಫಜಲಪುರ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಎಂ.ವೈ. ಪಾಟೀಲ, ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ನಿಯಮಿತದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಜ್ ಫಾತೀಮಾ, ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ ಅವರು ಗೌರವ ಉಪಸ್ಥಿತಿ ವಹಿಸುವರು. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ, ಶಾಸಕರುಗಳಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ, ವಿಧಾನ ಪರಿಷತ್ ಶಾಸಕರುಗಳಾದ ಡಾ. ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಡಾ. ತಳವಾರ ಸಾಬಣ್ಣ, ಸುನೀಲ್ ವಲ್ಲ್ಯಾಪುರೆ, ತಿಮ್ಮಣ್ಣಪ್ಪ ಕಮಕನೂರ, ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ, ಜಗದೇವ ಗುತ್ತೇದಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ದುಲ್ ರಶೀದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಹಾಗೂ ಮಹಾನಗರಪಾಲಿಕೆ ಮಹಾಪೌರ ವರ್ಷಾ ರಾಜೀವ್ ಜಾನೆ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಶಾಂತನು ಸಿನ್ಹಾ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಲಿನ್ ಅತುಲ್, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ, ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಪಾಂಡ್ವೆ ರಾಹುಲ್ ತುಕಾರಾಮ್ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ “ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ” ಸಂದೇಶದಡಿ ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಸ್. ತಿಪ್ಪೇಸ್ವಾಮಿ ಅವರು ಉಪನ್ಯಾಸ ನೀಡುವರು. ವಿಜನ್ ಪ್ಲೈ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಎಂಬ ಸಂದೇಶದೊಂದಿಗೆ ವಿಶ್ವ ಪರಿಸರ ದಿನಾಚರಣೆ-2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಳಿಗ್ಗೆ 11 ಗಂಟೆಗೇ ಜನಸಮೂಹ ನೆರೆದಿತ್ತು, ವಿಜಯ ಸಂಜೆ ಏಳು ಗಂಟೆಗೆ ಆಗಮಿಸಿದ್ದರು: ಎಫ್ಐಆರ್ ನಲ್ಲಿ ಉಲ್ಲೇಖ
ಚೆನ್ನೈ,ಸೆ.29: ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ ಅವರಿಂದ ‘ರಾಜಕೀಯ ಶಕ್ತಿಯ ಉದ್ದೇಶಪೂರ್ವಕ ಪ್ರದರ್ಶನ’ವು ತಮಿಳುನಾಡಿನ ಕರೂರಿನಲ್ಲಿ ಶನಿವಾರ ಸಂಜೆ ಕಾಲ್ತುಳಿತದಲ್ಲಿ 41 ಜನರ ಸಾವಿಗೆ ಕಾರಣವಾಗಿತ್ತು ಎಂದು ಪೋಲಿಸರು ಎಫ್ಐಆರ್ನಲ್ಲಿ ಬೆಟ್ಟು ಮಾಡಿದ್ದಾರೆ. ರ್ಯಾಲಿಯು ಬೆಳಿಗ್ಗೆ ಒಂಭತ್ತು ಗಂಟೆಗೆ ಆರಂಭಗೊಳ್ಳಬೇಕಿತ್ತು ಮತ್ತು 11 ಗಂಟೆಯ ವೇಳೆಗೆ ಬೃಹತ್ ಜನಸಮೂಹ ಸೇರಿತ್ತು. ವಿಜಯ ಮಧ್ಯಾಹ್ನ 12 ಗಂಟೆಗೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ತಾನು ಸ್ಥಳವನ್ನು ತಲುಪುತ್ತಿರುವುದಾಗಿ ಜನರಿಗೆ ತಿಳಿಸಿದ ಬಳಿಕ ನಾಲ್ಕು ಗಂಟೆಗಳಷ್ಟು ವಿಳಂಬವಾಗಿ ವಿಜಯ ಆಗಮಿಸಿದ್ದರು. ‘ಅನಗತ್ಯ ನಿರೀಕ್ಷೆಗಳನ್ನು’ ನಿರ್ಮಿಸಲು ತನ್ನ ಆಗಮನವನ್ನು ಅವರು ವಿಳಂಬಗೊಳಿಸಿದ್ದರು ಎಂದು ಪೋಲಿಸರು ಎಫ್ಐಆರ್ ನಲ್ಲಿ ಹೇಳಿದ್ದಾರೆ. ಪೋಲಿಸರ ಪ್ರಕಾರ, ವಿಜಯ್ ಇದ್ದ ಬಸ್ ಹಲವಾರು ಕಡೆಗಳಲ್ಲಿ ನಿಗದಿತವಲ್ಲದ ನಿಲುಗಡೆಗಳನ್ನು ಮಾಡಿತ್ತು, ವಾಸ್ತವಿಕವಾಗಿ ಇದು ಯಾವುದೇ ಅನುಮತಿ ಪಡೆದಿರದ ರೋಡ್ ಶೋ ಆಗಿತ್ತು. ವಿಜಯ ಮತ್ತು ಪುದುಚೇರಿಯ ಮಾಜಿ ಶಾಸಕ ಎನ್ ‘ಬಸ್ಸಿ’ ಆನಂದ ಸೇರಿದಂತೆ ಟಿವಿಕೆ ನಾಯಕರು ಜನಸಮೂಹಕ್ಕೆ ಆಹಾರ, ನೀರು ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದರು. ಪ್ರಚಾರ ವಾಹನಗಳು ಆಗಾಗ್ಗೆ ನಿಗದಿತವಲ್ಲದ ನಿಲುಗಡೆಗಳನ್ನು ಮಾಡಿದ್ದೂ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತ್ತು ಎಂದು ಪೋಲಿಸರು ಹೇಳಿದ್ದಾರೆ. ಶನಿವಾರ ಸಂಜೆ ನಡೆದ ದುರಂತಗಳಲ್ಲಿ ಒಂದನ್ನು ಉಲ್ಲೇಖಿಸಿರುವ ಎಫ್ಐಆರ್, ಜನಜಂಗುಳಿಯನ್ನು ನಿಯಂತ್ರಿಸಲು ಮತ್ತು ಕಾಲ್ತುಳಿತದಂತಹ ವಿಪತ್ತುಗಳನ್ನು ತಡೆಯಲು ಸ್ಥಾಪಿಸಲಾಗಿದ್ದ ಪೋಲಿಸ್ ಬ್ಯಾರಿಯರ್ ಗಳನ್ನು ಭೇದಿಸಿದ ಟಿವಿಕೆ ಕಾರ್ಯಕರ್ತರು ಬಹುಶಃ ನಟನ ದರ್ಶನಕ್ಕಾಗಿ ಶೆಡ್ ವೊಂದರ ತಗಡಿನ ಛಾವಣಿಯನ್ನು ಹತ್ತಿದ್ದರು. ದುರದೃಷ್ಟವಶಾತ್ ಅದು ಕುಸಿದು ಬಿದ್ದು ಟಿವಿಕೆ ಕಾರ್ಯಕರ್ತರು ಮೃತಪಟ್ಟರು ಎಂದು ಹೇಳಿದೆ. 10,000 ಜನರು ಸೇರಲಿದ್ದಾರೆ ಎಂದು ತಮಗೆ ತಿಳಿಸಲಾಗಿತ್ತು. ಆದರೆ 25,000ಕ್ಕೂ ಅಧಿಕ ಜನರು ಜಮಾಯಿಸಿದ್ದರು ಎಂದೂ ಪೋಲಿಸರು ಹೇಳಿದ್ದಾರೆ. ಕಾಲ್ತುಳಿತವು ಆಡಳಿತಾರೂಢ ಡಿಎಂಕೆ ಮತ್ತು ಟಿವಿಕೆ ನಡುವೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾಲ್ತುಳಿತವು ಡಿಎಂಕೆ ರೂಪಿಸಿದ್ದ ಪಿತೂರಿಯಾಗಿತ್ತು ಎಂದು ಟಿವಿಕೆ ದೂರಿದ್ದರೆ,‘ಇದನ್ನು ರಾಜಕೀಯಗೊಳಿಸಲು ನಾವು ಬಯಸುವುದಿಲ್ಲ. ಕಾನೂನು ತನ್ನದೇ ಮಾರ್ಗದಲ್ಲಿ ಸಾಗುತ್ತದೆ ’ಎಂದು ಡಿಎಂಕೆ ಹೇಳಿದೆ. ಈ ನಡುವೆ ಕಾಲ್ತುಳಿತ ಘಟನೆಯ ಕುರಿತು ತನಿಖೆಗೆ ವಿಶೇಷ ತಂಡವನ್ನು ರಚಿಸುವಂತೆ ಅಥವಾ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಟಿವಿಕೆ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ. ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 41 ಜನರು ಮೃತಪಟ್ಟಿದ್ದರು.
ಕರೂರು ಕಾಲ್ತುಳಿತ | ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಯಮಗಳನ್ನು ರೂಪಿಸಲಿರುವ ತಮಿಳುನಾಡು ಸರಕಾರ
ಚೆನ್ನೈ,ಸೆ.29: ರಾಜಕೀಯ ಪಕ್ಷಗಳು ಮತ್ತು ಇತರ ಸಂಸ್ಥೆಗಳು ನಡೆಸುವ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ‘ನ್ಯಾ.ಅರುಣಾ ಜಗದೀಶನ್ ವಿಚಾರಣಾ ಆಯೋಗವು ತನ್ನ ವರದಿಯನ್ನು ಸಲ್ಲಿಸಿದ ಬಳಿಕ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಇತರ ಸಂಸ್ಥೆಗಳೊಂದಿಗೆ ಸಮಾಲೋಚನೆಗಳನ್ನು ನಡೆಸಲಾಗುವುದು. ಇಂತಹ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವುದು ನಮ್ಮ ಸಾಮೂಹಿಕ ಕರ್ತವ್ಯವಾಗಿದೆ ’ ಎಂದು ಅವರು ತಿಳಿಸಿದ್ದಾರೆ. ಕರೂರು ದುರಂತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪರಿಶೀಲಿಸಲ್ಪಡದ ಹೇಳಿಕೆಗಳು ಮತ್ತು ಊಹಾಪೋಹಗಳನ್ನು ಉಲ್ಲೇಖಿಸಿರುವ ಸ್ಟಾಲಿನ್, ಸಂಯಮವನ್ನು ಪ್ರದರ್ಶಿಸುವಂತೆ ಮತ್ತು ಬೇಜವಾಬ್ದಾರಿಯ ಅಥವಾ ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡದಂತೆ ಜನರಿಗೆ ಕಿವಿಮಾತು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಕೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ನೇಮಕಾತಿ ವಿಳಂಬದಿಂದ ಆತಂಕದಲ್ಲಿದ್ದ ಅಭ್ಯರ್ಥಿಗಳಿಗೆ ಇದು ಹೊಸ ಅವಕಾಶ ಕಲ್ಪಿಸಿದೆ. ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಅನ್ವಯಿಸುವ ಈ ಸಡಿಲಿಕೆಯು ಸೆಪ್ಟೆಂಬರ್ 29, 2025 ರಿಂದ ಡಿಸೆಂಬರ್ 27, 2027 ರವರೆಗಿನ ಅಧಿಸೂಚನೆಗಳಿಗೆ ಮಾನ್ಯವಾಗಿರುತ್ತದೆ.
ಅ.5 ರಂದು ಬೆಂಗಳೂರಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ: ಬಸವರಾಜ್ ಧನ್ನೂರ್
ಬೀದರ್: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ಜರುಗಿದ್ದು, ಅ. 5 ರಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ಸಂಖ್ಯೆ 4ರ ಗಾಯತ್ರಿ ವಿಹಾರದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಸುಮಾರು 500ಕ್ಕೂ ಅಧಿಕ ಬಸವಪರ ಮಠಾಧೀಶರು, ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಬಸವರಾಜ್ ಧನ್ನೂರ್ ಅವರು ತಿಳಿಸಿದರು. ಸೋಮವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ, ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸಲು ಆದೇಶಿಸಿ ಒಂದು ವರ್ಷ ಪೂರೈಸಿದೆ. ಮುಂದಿನ ಪೀಳಿಗೆಗೆ ಬಸವಣ್ಣನವರ ಜೀವನ ಸಾಧನೆ ಪರಿಚಯಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಪ್ರಯುಕ್ತ ಈ ಅಭಿಯಾನ ಜರುಗಿದ್ದು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ ಸೇರಿದಂತೆ ಹತ್ತಾರು ಬಸವಪರ ಸಂಘಟನೆಗಳ ವತಿಯಿಂದ ಅ. 5ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು. ಬೀದರ್ ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಅಧಿಕ ಬಸವ ಭಕ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಯೊಬ್ಬರೂ ಬಿಳಿ ಧೋತಿ ಮತ್ತು ಇಳಕಲ್ ಸೀರೆ ಧರಿಸತಕ್ಕದ್ದು. ಬೆಂಗಳೂರಿಗೆ ಹೋಗಲು ವಿಶೇಷ ರೈಲಿನ ವ್ಯವಸ್ಥೆಗಾಗಿ ಈಗಾಗಲೇ ಸಂಸದ ಸಾಗರ್ ಖಂಡ್ರೆ ಹಾಗೂ ಕೇಂದ್ರದ ರಾಜ್ಯ ರೈಲ್ವೆ ಖಾತೆಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಸಕಾರಾತ್ಮಕವಾಗಿ ಅವರು ಸ್ಪಂದನೆ ಮಾಡಿದ್ದಾರೆ. ಸರ್ಕಾರಿ ಬಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಒಬ್ಬರಿಗೆ ಹೋಗಿ ಬರಲು 2 ಸಾವಿರ ರೂ. ಮತ್ತು ಸ್ಲೀಪರ್ ಕೋಚ್ ಬಸ್ಸಿಗೆ ಹೋಗಿ ಬರಲು ಒಬ್ಬರಿಗೆ 3 ಸಾವಿರ ಹಣ ನಿಗದಿಪಡಿಸಲಾಗಿದೆ. ನಾಲ್ಕು ಚಕ್ರದ ವಾಹನದಲ್ಲಿ ಹೋಗುವವರು ಅ. 4ರಂದು ಸಾಯಂಕಾಲ 6 ಗಂಟೆಗೆ ನೌಬಾದ್ ನ ಬಸವೇಶ್ವರ್ ವೃತ್ತದ ಹತ್ತಿರ ಸೇರಬೇಕು ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸುರೇಶ್ ಸ್ವಾಮಿ (94482 63614), ಯೋಗೇಶ್ ಶ್ರೀಗಿರಿ (99498 21117), ವಿಲಾಸ್ ಪಾಟೀಲ್ (95350 76555), ವೀರಶೆಟ್ಟಿ ಪಾಟೀಲ್ (98454 55630) ಯೋಗೇಂದ್ರ ಯದಲಾಪುರೆ (70190 71385) ಇವರಿಗೆ ಗೆ ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದರು. ಬೆಂಗಗಳೂರಿನ ಅಭಿಯಾನಕ್ಕೆ ಬರುವ ಶರಣರಿಗಾಗಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸ್ನಾನ, ಪೂಜೆ, ಪ್ರಸಾದದ ವ್ಯವಸ್ಥೆ ಮಾಡಿಸಲಾಗಿದೆ. ಶ್ರೀಮಠದ ಪಿಆರ್ಓ ನಾಗರಾಜ್ (94488 99233) ಇವರನ್ನು ಸಂಪರ್ಕಿಸಬಹುದಾಗಿದೆ ಎಂದರು. ತ್ರಿಪುರಾಂತ ಕೆರೆಗೆ ರೇವಣಸಿದ್ಧರ ಹೆಸರಿಡಬೇಕು. ಬಸವಕಲ್ಯಾಣದಲ್ಲಿ ರೇಣುಕಾಚಾರ್ಯರ ವೃತ್ತ ಸ್ಥಾಪಿಸಬೇಕು ಎಂದು ಹೇಳಿಕೆ ನೀಡಿರುವ ರಂಭಾಪುರಿ ಶ್ರೀಗಳು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ನಾವು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡುವುದಿಲ್ಲ. ಹಾಗೆನಾದರೂ ಪ್ರಯತ್ನಗಳು ನಡೆದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ಜೈರಾಜ್ ಖಂಡ್ರೆ, ವೀರಭದ್ರಪ್ಪ ಬುಯ್ಯಾ, ಯೋಗೇಂದ್ರ ಯದಲಾಪುರ್ ಹಾಜರಿದ್ದರು.
ಮತ್ತೊಂದು ಶೇ. 100ರಷ್ಟು ತೆರಿಗೆ ಅಸ್ತ್ರ ಬಿಟ್ಟ ಟ್ರಂಪ್ - ಈ ಬಾರಿ ಸಿನಿಮಾ ರಂಗಕ್ಕೆ ಶಾಕ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ಮನರಂಜನಾ ವಲಯಕ್ಕೆ ತೆರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ಚಿತ್ರೀಕರಣಗೊಳ್ಳದ ಯಾವುದೇ ಚಲನಚಿತ್ರಗಳಿಗೆ (ಅಮೆರಿಕದ ಸಿನಿಮಾಗಳೂ ಸೇರಿ) ಶೇ. 100ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ. ಹಾಲಿವುಡ್ ಉದ್ಯಮದ ನಷ್ಟವನ್ನು ಸರಿದೂಗಿಸಲು ಮತ್ತು ಅಮೆರಿಕದಲ್ಲಿ ಚಿತ್ರೀಕರಣವನ್ನು ಉತ್ತೇಜಿಸಲು ಈ ಕ್ರಮ ಕೈಗೊಂಡಿದ್ದಾರೆ. ಇದು ಅಮೆರಿಕದ ಚಿತ್ರೋದ್ಯಮಕ್ಕೆ ಹೊಸ ಸವಾಲು ತಂದಿದೆ.
ರಾಜ್ಯಾದ್ಯಂತ 41 ಲಕ್ಷಕ್ಕೂ ಅಧಿಕ ಕುಟುಂಬಗಳ ಸಮೀಕ್ಷೆ ಪೂರ್ಣ
ಬೆಂಗಳೂರು, ಸೆ.29: ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಇಲ್ಲಿಯ ವರೆಗೆ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ 41,22,865 ಕುಟುಂಬಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಸೋಮವಾರ ಒಂದೇ ದಿನ 13,86,969 ಕುಟುಂಬಗಳ ಸಮೀಕ್ಷೆ ನಡೆದಿದೆ. ರವಿವಾರದ ವರೆಗೆ 27,35,879 ಕುಟುಂಬಗಳ ಹಾಗೂ ಇದುವರೆಗೆ 1.56 ಕೋಟಿಗೂ ಅಧಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಇಲ್ಲಿಯವರೆಗೂ ಚಾಮರಾಜನಗರ 78,176, ಚಿಕ್ಕಬಳ್ಳಾಪುರ 95,734, ಚಿಕ್ಕಮಗಳೂರು 1,12,222, ಚಿತ್ರದುರ್ಗ 1,64,109, ದಕ್ಷಿಣ ಕನ್ನಡ 80,494, ದಾವಣಗೆರೆ 1,79,048, ಧಾರವಾಡ 1,42,382, ಗದಗ 1,13,833, ಹಾಸನ 1,73,570, ಹಾವೇರಿ 1,85,413 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಕಲಬುರಗಿ ಜಿಲ್ಲೆಯಲ್ಲಿ 1,65,261, ಕೊಡಗು 41,154, ಕೋಲಾರ 1,14,761, ಕೊಪ್ಪಳ 1,41,182, ಮಂಡ್ಯ 1,81,148, ಮೈಸೂರು 1,70,437, ರಾಯಚೂರು 1,15,698, ಶಿವಮೊಗ್ಗ 1,50,255, ತುಮಕೂರು 2,17,692, ಉಡುಪಿ 50,748, ಉತ್ತರ ಕನ್ನಡ 1,03,268, ವಿಜಯನಗರ 91,706, ವಿಜಯಪುರ 1,26,130 ಮತ್ತು ಯಾದಗಿರಿ ಜಿಲ್ಲೆಯಲ್ಲಿ 74,658 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಆಯೋಗವು ಅಂಕಿ-ಅಂಶಗಳನ್ನು ಪ್ರಕಟಿಸಿದೆ.
ಜ್ಯುವೆಲ್ಲರಿಯಿಂದ ಚಿನ್ನ ಖರೀದಿಸಿ ವಂಚನೆ ಪ್ರಕರಣ: ಆರೋಪಿ ಸೆರೆ
ಅಮಾಸೆಬೈಲು, ಸೆ.29: ಜ್ಯುವೆಲ್ಲರಿಯಿಂದ ಚಿನ್ನ ಖರೀದಿಸಿ ಹಣ ಕೊಡದೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ. ಹೊಸಂಗಡಿಯ ಶ್ರೀಕೃಷ್ಣ ಜ್ಯುವೆಲ್ಲರಿಯಿಂದ 2024ರ ನ.3ರಂದು ಸಂತೋಷ ಎಂದು ಹೆಸರು ಹೇಳಿಕೊಂಡು ಕಾರಿನಲ್ಲಿ ಬಂದ ವ್ಯಕ್ತಿ ಗಿಪ್ಟ್ ಕೊಡುವ ಬಗ್ಗೆ 30 ಸಾವಿರ ರೂ. ಮೌಲ್ಯದ 2 ಚಿನ್ನದ ಉಂಗುರಗಳನ್ನು ಖರೀದಿ ಮಾಡಿದ್ದನು. ಹಣವನ್ನು ನೆಫ್ಟ್ ಮೂಲಕ ಹಣ ಹಾಕಿರುವುದಾಗಿ ಮೊಬೈಲ್ ಪೋನ್ ತೋರಿಸಿ ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದನು. ಆದರೆ ಹಣ ಖಾತೆಗೆ ಜಮಾ ಆಗದ ಬಗ್ಗೆ ಮಂಜುನಾಥ ಗೊಲ್ಲ ಆತನಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದು, ಆತ ನಾಳೆ ಕೊಡುವುದಾಗಿ ಹೇಳಿ ವಂಚಿಸಿದ್ದನು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿ ಪ್ರವೀಣ್ ಎಂಬಾತನನ್ನು ಸೆ.29ರಂದು ಬಂಧಿಸಿ, ಕಾರು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಳೆಯಿಂದ ಹಾನಿ: ಬೆಳೆ ನಷ್ಟ ಪರಿಹಾರಕ್ಕಾಗಿ ಅ.13 ರಂದು ಪ್ರತಿಭಟನೆ
ರಾಯಚೂರು: ಸತತ ಮಳೆಯಿಂದ ಬೆಳೆಹಾನಿಯಾದ ಬಗ್ಗೆ ಸಮರ್ಪಕವಾಗಿ ಸಮೀಕ್ಷೆ ಹಾನಿಗೆ ಪೂರ್ಣ ಪ್ರಮಾಣದ ನಷ್ಟ ಪರಿಹಾರ ಸರ್ಕಾರ ನೀಡಬೇಕೆಂದು ಆಗ್ರಹಿಸಿ ಅ.13 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಂಘಟನೆ ರಾಜ್ಯ ಸಂಚಾಲಕ ಬಸವಲಿಂಗಪ್ಪ ಹೇಳಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ಅನೇಕ ಬೆಳೆಗಳು ಮಳೆಯಿಂದ ಹಾನಿಯಾಗಿವೆ. ಆದರೆ ರಾಜ್ಯ ಸರ್ಕಾರ ಬೆಳೆ ಸಮೀಕ್ಷೆ ನಡೆಸುವದಾಗಿ, ಡ್ರೋನ್ ಮೂಲಕ ಸರ್ವೆ ಮಾಡುವದಾಗಿ ಹೇಳುತ್ತಿದೆ. ರೈತರು ಪ್ರತಿ ಎಕರೆ ಮಾಡುವ ವೆಚ್ಚಕ್ಕೂ ಸರ್ಕಾರ ನೀಡುವ ಪರಿಹಾರಕ್ಕೂ ಹೋಲಿಕೆಯೇ ಇಲ್ಲದಂತಾಗಿದೆ. ದುಬಾರಿ ದರದಲ್ಲಿ ಬೀಜ, ಗೊಬ್ಬರ, ಕ್ರಿಮಿನಾಶಕ್ಕೆ ವೆಚ್ಚ ಮಾಡಿರುವ ರೈತರಿಗೆ ಸರ್ಕಾರದ ಮೇಲೆ ಭರವಸೆಯೇ ಕಳೆದುಕೊಳ್ಳುವಂತಾಗಿದೆ. ಪ್ರತಿಬಾರಿ ನಷ್ಟವಾದಾಗಲೂ ಸರ್ಕಾರ ನೀಡುವ ಪರಿಹಾರ ಬೀಜಕ್ಕೂ ಸಾಕಾಗುತ್ತಿಲ್ಲ. ಕೃಷಿ ನಷ್ಟದಿಂದ ಹೊರಬರದಂತಾಗಿದೆ. ಈ ಮಧ್ಯೆ ಹತ್ತಿ ಆಮುದು ನೀತಿಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅನುಸುತ್ತಿರುವ ಪರಿಣಾಮ ಹತ್ತಿಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿದೇಶಿ ಹತ್ತಿ ಬರುತ್ತಿರುವ ಪರಿಣಾಮ ಹತ್ತಿ ಬೆಲೆ ಕುಸಿತವಾಗಲುಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ. ಕಾರ್ಪೋರೇಟ್ ಪರವಾದ ನೀತಿಗಳನ್ನೇ ಅನುಸರಿಸುತ್ತಲೇ ಇವೆ. ಸರ್ಕಾರದ ನೀತಿ ವಿರುದ್ದ ಸಂಘಟನೆಯಿಂದ ಜಿಲ್ಲಾಧ್ಯಕ್ಷ ಮುದಕಪ್ಪ ನಾಯಕ ನೇತೃತ್ವದಲ್ಲಿ ಜಿಲ್ಲೆಯಾಧ್ಯಂತ ಸಂಚರಿಸಿ ರೈತರನ್ನು ಸಂಘಟಿಸಲಾಗುತ್ತದೆ. ಬೆಳೆನಷ್ಟಕ್ಕೆ ಕೂಡಲೇ ಪರಿಹಾರ ನೀಡಲು ಹೋರಾಟ ನಡೆಸುವುದಾಗಿ ಹೇಳಿದರು. ಈ ಸಂದರ್ಬಧಲ್ಲಿ ಮದುಕಪ್ಪ ನಾಯಕ, ಈರಪ್ಪ ಕುರ್ಡಿ, ಯಲ್ಲಪ್ಪ ನಾಯಕ, ಆನಂದ ಭೋವಿ, ಪ್ರಸಾದ, ಯಲ್ಲಪ್ಪ ಮಲ್ಲಾಪುರು ಸೇರಿ ಅನೇಕರಿದ್ದರು.
ಸರಕಾರದಲ್ಲಿ ಕಮಿಷನ್ ದುಪ್ಪಟ್ಟು ಆರೋಪ : ಸಿಎಂಗೆ ಗುತ್ತಿಗೆದಾರರ ಸಂಘ ಪತ್ರ
ಬೆಂಗಳೂರು, ಸೆ.29: ‘ಹಿಂದಿನ ಬಿಜೆಪಿ ಸರಕಾರಕ್ಕಿಂತ ನಿಮ್ಮ ನೇತೃತ್ವದ ಸರಕಾರದಲ್ಲಿ ಬಿಲ್ ಪಾವತಿಗೆ ಕಮಿಷನ್ ದುಪ್ಪಟ್ಟಾಗಿದೆ’ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ‘ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೀರಿ. ಆದರೆ, ಹಿಂದಿನ ಸರಕಾರಕ್ಕಿಂತ ಎಲ್ಲ ಇಲಾಖೆಗಳಲ್ಲೂ ಈಗ ಕಮಿಷನ್ ದುಪ್ಪಟ್ಟು ಆಗಿದೆ ಎಂದು ನಿಮ್ಮ ಗಮನಕ್ಕೆ ತರಲು ಸಂಘ ವಿಷಾದ ವ್ಯಕ್ತಪಡಿಸುತ್ತದೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ‘ರಾಜ್ಯದಲ್ಲಿ ಹಿಂದಿದ್ದ ಬಿಜೆಪಿ ನೇತೃತ್ವದ ಸರಕಾರಕ್ಕಿಂತ ಈಗಿನ ಕಾಂಗ್ರೆಸ್ ಸರಕಾರದಲ್ಲಿ, ಅಧಿಕಾರಿಗಳು ಹೆಚ್ಚು ಕಮಿಷನ್ ಪಡೆಯುತ್ತಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘ 2025ರ ಮಾರ್ಚ್ನಲ್ಲಿ ಆರೋಪಿಸಿತ್ತು. ಆಗ ಮುಖ್ಯಮಂತ್ರಿಯವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಎಪ್ರಿಲ್ನಲ್ಲಿ ಶೇ.50ರಷ್ಟು ಬಾಕಿ ಬಿಲ್ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ‘ಸುಮಾರು ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ವಿಚಾರ ಮತ್ತು ಹಲವು ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಹಲವು ಬಾರಿ ಸಂಘದ ಪದಾಧಿಕಾರಿಗಳು ಚರ್ಚೆ ಮಾಡಿದ್ದೇವೆ. ನಮ್ಮ ಸಂಘವು ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಫಲವಾಗಿ, ತಮ್ಮ ಸರಕಾರ ಬರುವುದಕ್ಕೆ ಸ್ವಲ್ಪವಾದರೂ ನಾವು ಕಾರಣಕರ್ತರಾಗಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ' ಎಂದು ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಪತ್ರದಲ್ಲಿ ತಿಳಿಸಿದ್ದಾರೆ. ‘ನಮ್ಮನ್ನು ಪ್ರತಿ ಬಾರಿ ಸಮಾಧಾನ ಮಾಡಿ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೀರಿ. ನಿಮಗೆ ಗೌರವ ಕೊಟ್ಟು, ಅಪಾರ ನಂಬಿಕೆಯಿಂದ ಜಿಲ್ಲೆಗಳ ಎಲ್ಲ ಗುತ್ತಿಗೆದಾರರೂ ಸಮಾಧಾನದಿಂದ ಇದ್ದಾರೆ. ಆದರೆ, ಇದುವರೆಗೆ ನಿಮ್ಮ ಸರಕಾರದಿಂದ ನಮಗೆ ಪ್ರಯೋಜನವಾಗಿಲ್ಲ. ಇಲಾಖೆಗಳ ಸಚಿವರು, ಕಾರ್ಯದರ್ಶಿಗಳನ್ನು ಭೇಟಿ ಮಾಡಿದರೂ ಹಣ ಬಿಡುಗಡೆಯಾಗಿಲ್ಲ’ ಎಂದು ಆರ್.ಮಂಜುನಾಥ್ ದೂರಿದ್ದಾರೆ. ‘ಜೇಷ್ಠತೆ ಮತ್ತು ಪಾರದರ್ಶಕ ಕಾಯ್ದೆ ಅನುಸರಿಸದೆ, ಅವರದೇ ‘ಫಾರ್ಮುಲಾ’ಗಳನ್ನು ತಯಾರಿಸಿಕೊಂಡು, ಸ್ಪೆಷಲ್ ಎಲ್ಸಿ ರೂಪದಲ್ಲಿ ಗುತ್ತಿಗೆದಾರರ ಬಾಕಿ ಹಣದಲ್ಲಿ ಮೂರು ತಿಂಗಳಿಗೊಮ್ಮೆ ಶೇ.15ರಿಂದ ಶೇ.20ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದಾರೆ’ ಪತ್ರದಲ್ಲಿ ಎಂದು ಆರ್.ಮಂಜುನಾಥ್ ಆರೋಪಿಸಿದ್ದಾರೆ.
ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅನಿರೀಕ್ಷಿತ ಭೇಟಿ; ಬಾಕಿ ಕಾಮಗಾರಿಗಳ ಪರಿಶೀಲನೆ
ರಾಯಚೂರು: ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಸೆ.29ರಂದು ವಿವಿಧೆಡೆ ಅನಿರೀಕ್ಷಿತ ಭೇಟಿ ಕೈಗೊಂಡು 15ನೇ ಹಣಕಾಸು ಆಯೋಗದ ಅಡಿಯಲ್ಲಿನ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. 6-7 ವರ್ಷಗಳಿಂದ ಬಾಕಿ ಉಳಿದ ಕಾರ್ಯಗಳ ಬಗ್ಗೆ ಪರಿಶೀಲಿಸಿದ ಆಯುಕ್ತರು, ಬಾಕಿ ಇರಿಸಿಕೊಂಡ ಎಲ್ಲ ರಸ್ತೆಗಳು ಮತ್ತು ಚರಂಡಿ ಕಾರ್ಯಗಳನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ರಸ್ತೆಗಳು ಮತ್ತು ಚರಂಡಿಗಳು ನಿಗದಿಪಡಿಸಿದಂತೆ ವೈಜ್ಞಾನಿಕ ರೀತಿಯಲ್ಲಿಯೇ ಅಗಲ, ಉದ್ದ ಇರುವಂತೆ ಮತ್ತು ಕಾಮಗಾರಿಯು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಘಆಯುಕ್ತರು ಇದೇ ವೇಳೆ ಘನ ತ್ಯಾಜ್ಯ ನಿರ್ವಹಣೆ ಕಾರ್ಯಗಳ ಪರಿಶೀಲನೆ ನಡೆಸಿದರು. ನಾಗರಿಕರು, ತ್ಯಾಜ್ಯ ವಿಸರ್ಜಿಸುವ ಅನಧಿಕೃತ ಸ್ಥಳಗಳನ್ನು ತ್ವರಿತವಾಗಿ ತೆರವುಗೊಳಿಸುವಂತೆ ಘನ ತ್ಯಾಜ್ಯ ನಿರ್ವಹಣೆ ತಂಡಕ್ಕೆ ಸೂಚಿಸಿದರು. ಘನ ತ್ಯಾಜ್ಯ ನಿರ್ವಹಣೆ ತಂಡದವರು ಈಗಾಗಲೇ, ತ್ಯಾಜ್ಯ ವಿಸರ್ಜಿಸುವ ಅನಧಿಕೃತ ಅನೇಕ ಸ್ಥಳಗಳನ್ನು ತೆರವುಗೊಳಿಸಿದ್ದರಿಂದಾಗಿ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ನಾಗರಿಕರು ಆಯುಕ್ತರ ಮುಂದೆ ಸಂತಷ ವ್ಯಕ್ತಪಡಿಸಿದರು. ನಾಗರಿಕರಲ್ಲಿ ಮನವಿ: ಸಾರ್ವಜನಿಕರು, ಚರಂಡಿಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಎಸೆಯುವುದರಿಂದ ಅದು ತುಂಬಿ, ಮಳೆ ನೀರು ಸರಾಗವಾಗಿ ಹರಿಯದೇ ರಸ್ತೆಗಳಿಗೆ ಬರುತ್ತಿದೆ. ಈ ರೀತಿ ಆಗಬಾರದು. ಸಾರ್ವಜನಿಕರು ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದರು. ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಕಂಡುಬಂದಲ್ಲಿ ಇನ್ಮುಂದೆ ಅಂತವರಿಗೆ ದಂಡ ವಿಧಿಸಲಾಗುವುದು ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಇದೆ ವೇಳೆ ಎಚ್ಚರಿಕೆ ನೀಡಿದರು.
ನೇರ ನೇಮಕಾತಿ | ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ : ರಾಜ್ಯ ಸರಕಾರ ಆದೇಶ
ಬೆಂಗಳೂರು, ಸೆ.29: ನೇರ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳ ಸಡಿಲಿಕೆ ನೀಡಿದ್ದು, ಸೋಮವಾರದಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ. 2025ರ ಸೆ.6ರಿಂದ 2027ರ ಡಿ.31ರ ವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ನೀಡಲಾಗಿದೆ. ಪರಿಶಿಷ್ಟ ಜಾತಿ(ಎಸ್ಸಿ)ಯ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು 2024ರ ಅ.28ರಿಂದ ಮುಂದಿನ ಆದೇಶದವರೆವಿಗೂ ಹೊರಡಿಸಬಾರದೆಂದು ಎಲ್ಲ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿತ್ತು. ಈಗ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದ್ದು, ಈಗ ನೇರ ನೇಮಕಾತಿಗಳಿಗೆ ವಯೋಮಿತಿ ಸಡಲಿಕೆ ಮಾಡಲಾಗಿದೆ.
ರಾಯಚೂರು | ಕ್ರಿಕೆಟ್ ಬೆಟ್ಟಿಂಗ್; ಓರ್ವನ ಬಂಧನ
ರಾಯಚೂರು: ಏಶ್ಯ ಕಪ್ ಫೈನಲ್ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಮುಹಮ್ಮದ್ ಕಲೀಂ ಪಾಷ ಎಂಬಾತನ್ನು ರವಿವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ವಿವಿಧೆಡೆ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ನಿರಂತರವಾಗಿ ಪೊಲೀಸರ ಕಾರ್ಯಚರಣೆ ನಡೆಯುತ್ತಿದೆ. ಬಂಧಿತನಿಂದ ಮೊಬೈಲ್, ಹಣ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನೇತಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಬಸವರಾಜ ನಾಯಕ ಹಾಗೂ ಎಎಸ್ಐ ಶಿವಶರಣಪ್ಪ, ಮಲ್ಲಿಕಾರ್ಜುನ, ಮಲ್ಲಪ್ಪ, ಮಹಾಂತೇಶ , ಚಂದ್ರಶೇಖರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಮ್ಮು-ಕಾಶ್ಮೀರ: 12 ಪ್ರವಾಸಿ ಸ್ಥಳಗಳ ಮರು ಆರಂಭ
ಶ್ರೀನಗರ, ಸೆ. 29: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಮುಚ್ಚಲಾಗಿದ್ದ ಜಮ್ಮು ಮತ್ತು ಕಾಶ್ಮೀರದ ಸುಮಾರು 12 ಪ್ರವಾಸಿ ಸ್ಥಳಗಳನ್ನು ಸೋಮವಾರ ವಿಸ್ತೃತ ಭದ್ರತಾ ಪರಿಶೀಲನೆಯ ಬಳಿಕ ಪ್ರವಾಸಿಗಳಿಗೆ ತೆರೆಯಲಾಗಿದೆ. ಎಪ್ರಿಲ್ ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯ ಬಳಿಕ, ಜಮ್ಮು ಮತ್ತು ಕಾಶ್ಮೀರ ಸರಕಾರವು ಭದ್ರತಾ ಕಾರಣಗಳಿಗಾಗಿ ಸುಮಾರು 50 ಪ್ರವಾಸಿ ಸ್ಥಳಗಳನ್ನು ಮುಚ್ಚಿತ್ತು. ಶ್ರೀನಗರದಲ್ಲಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಧ್ಯಕ್ಷತೆಯಲ್ಲಿ ನಡೆದ ಏಕೀಕೃತ ಪ್ರಧಾನಕಚೇರಿ ಸಭೆಯಲ್ಲಿ ಕಾಶ್ಮೀರದ ಏಳು ಮತ್ತು ಜಮ್ಮುನ ಐದು ಪ್ರವಾಸಿ ಸ್ಥಳಗಳ ಮರು ಆರಂಭಕ್ಕೆ ಭದ್ರತಾ ಪರವಾನಿಗೆ ನೀಡಲಾಯಿತು. ‘‘ಇಂದಿನ ಸಭೆಯಲ್ಲಿ ನಡೆದ ವಿವರವಾದ ಭದ್ರತಾ ಪರಿಶೀಲನೆ ಮತ್ತು ಚರ್ಚೆಯ ಬಳಿಕ, ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿನ ಹೆಚ್ಚಿನ ಪ್ರವಾಸಿ ಸ್ಥಳಗಳ ಮರು ಆರಂಭಕ್ಕೆ ನಾನು ಆದೇಶ ನೀಡಿದ್ದೇನೆ. ಅವುಗಳನ್ನು ಮುನ್ಚೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು’’ ಎಂದು ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ವಿಜಯ್ ತುಂಬಾ ಹೊತ್ತು ವಾಹನದ ಒಳಗಿದ್ದಾಗ ಜನರು ಚಡಪಡಿಸಿದರು: ಎಫ್ಐಆರ್
ಟಿವಿಕೆ ಪಕ್ಷದ 3 ನಾಯಕರ ವಿರುದ್ಧ ಮೊಕದ್ದಮೆ
ಮನೆಗೆ ನುಗ್ಗಿ ನಗನಗದು ಕಳವು: ಪ್ರಕರಣ ದಾಖಲು
ಕೋಟ, ಸೆ.29: ಮನೆಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿ ರುವ ಘಟನೆ ತೆಕ್ಕಟ್ಟೆ ಗ್ರಾಮದ ಕನ್ನುಕೆರೆ ಎಂಬಲ್ಲಿ ಸೆ.28ರಂದು ರಾತ್ರಿ ವೇಳೆ ನಡೆದಿದೆ. ಶರತ್ ಎಂಬವರ ಮನೆಯ ಮಾಡಿನ ಹಂಚನ್ನು ತೆಗೆದು ಒಳಪ್ರವೇಶಿಸಿದ ಕಳ್ಳರು, ಕಾಪಾಟಿನಲ್ಲಿದ್ದ 18,000ರೂ. ನಗದು, 3 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ ಮಗುವಿನ ಬೆಳ್ಳಿಯ ಬಳೆ, ಕಾಲುಂಗುರ, ಸೊಂಟದ ಉಡಿದಾರ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಡ್ನ್ಯೂಸ್: ಕರ್ನಾಟಕದ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಹೃದಯ ಜ್ಯೋತಿ ಯೋಜನೆ ವಿಸ್ತರಣೆ
ರಾಜ್ಯದಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಯಶಸ್ವಿಯಾಗಿದೆ. ಸಕಾಲದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಯೋಜನೆಯಡಿ 9,21,020 ಜನರಿಗೆ ಇಸಿಜಿ ಮಾಡಲಾಗಿದೆ. 13,515 ಸ್ಟೆಮಿ ಪ್ರಕರಣಗಳು ವರದಿಯಾಗಿವೆ. 1,106 ಜನರಿಗೆ ಹಠಾತ್ ಹೃದಯಾಘಾತವಾಗುವುದನ್ನು ತಪ್ಪಿಸಲಾಗಿದೆ.
ದೇಶದಲ್ಲಿ ವಿರೋಧ ಪಕ್ಷಗಳು ಅರಾಜಕತೆ ಸೃಷ್ಠಿಸುತ್ತಿವೆ: ಪಿ.ರಾಜೀವ್
ರಾಯಚೂರು: ದೇಶವು ಆಪತ್ತಿನ ಸಂದರ್ಭವನ್ನು ಎದುರಿಸುತ್ತಿರುವಾಗ, ವಿರೋಧ ಪಕ್ಷಗಳು ಅರಾಜಕತೆ ಸೃಷ್ಟಿಸುವ ಪ್ರಯತ್ನದಲ್ಲಿವೆ. ಆದರೆ ಬಿಜೆಪಿ ಕಾರ್ಯಕರ್ತರು ದೇಶ ಕಟ್ಟುವ ಕೆಲಸ ಮುಂಚೂಣಿಯಲ್ಲಿರಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದರು. ನಗರದ ಹೊರವಲಯದ ರಾಯಲ್ ಫೋರ್ಟ್ ಹೊಟೆಲ್ ಆವರಣದಲ್ಲಿ ನಡೆದ ರಾಯಚೂರು ಗ್ರಾಮೀಣ ಮಂಡಲ ನೂತನ ಅಧ್ಯಕ್ಷ ಮಹಾಂತೇಶ ಮುಕ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಕುರ್ಡಿ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯಲ್ಲಿ ಜವಾಬ್ದಾರಿ ಎಂದರೆ ಅದು ಅಧಿಕಾರಕ್ಕಾಗಿ ಅಲ್ಲ, ಸಮಾಜದ ನೆಮ್ಮದಿಗಾಗಿ ದುಡಿಯುವ ಪಕ್ಷ. ಆದರೆ ಕಾಂಗ್ರೆಸ್ 75 ವರ್ಷಗಳ ಆಡಳಿತದಲ್ಲಿ ಪ್ರಜಾಪ್ರಭುತ್ವವನ್ನು ಹಾಳುಮಾಡಿ, ಕುಟುಂಬ ರಾಜಕಾರಣ ನಡೆಸಿದೆ ಎಂದು ದೂರಿದರು. ಪಶ್ಚಿಮ ಬಂಗಾಳ, ಕೇರಳ, ಜಮ್ಮು-ಕಾಶ್ಮೀರದಂತಹ ರಾಜ್ಯಗಳ ಸವಾಲುಗಳು, ದೇಶದ ಸಮಗ್ರತೆಗೆ ಬೆದರಿಕೆಯಾದ ಸಂದರ್ಭದಲ್ಲೂ ಬಿಜೆಪಿ ಮಾತ್ರ ದೇಶ ಕಟ್ಟುವ ರಾಜಕೀಯ ಮಾಡುತ್ತದೆ. ಮತ್ತೊಬ್ಬರ ಮನೆ ಕಾಯುವುದಿಲ್ಲ, ದೇಶ ಕಟ್ಟುತ್ತದೆ, ಎಂದರು. ಭೀಮಾ ನದಿತೀರ ಪ್ರವಾಹದಲ್ಲಿ ಜನ ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರ ಮಾನವೀಯತೆಯನ್ನು ಮರೆತಿದೆ. ಕೇಂದ್ರದತ್ತ ಬೆರಳು ತೋರಿಸುವ ಬದಲು, 2009ರಲ್ಲಿ ಯಡಿಯೂರಪ್ಪ ಅವರು ಮಾಡಿದಂತೆ ತಕ್ಷಣ ನೆರವು ನೀಡಬೇಕು ಎಂದು ಸಲಹೆ ನೀಡಿದರು. ಮಾಜಿ ವಿಧಾನಪರಿಷತ್ ಸದಸ್ಯ ಎನ್. ಶಂಕ್ರಪ್ಪ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ನೂತನ ಅಧ್ಯಕ್ಷ ಮಹಾಂತೇಶ ಮುಕ್ತಿ, ನೂತನ ಪ್ರಧಾನ ಕಾರ್ಯದರ್ಶಿ ಜಿ.ಎಚ್. ನವೀನಕುಮಾರ್ ಕುರ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಸಂಸದರು ರಾಜಾ ಅಮರೇಶ್ವರ ನಾಯಕ, ಬಿ.ವಿ. ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ದೇವದುರ್ಗದ ಅಧ್ಯಕ್ಷ ಶರಣಬಸವ ಪಾಟೀಲ, ಮುಖಂಡರಾದ ಜಗದೀಶ ವಕೀಲ, ಶಂಕರರೆಡ್ಡಿ, ಸುಲೋಚನಾ, ಸಿದ್ದನಗೌಡ ನೆಲಹಾಳ್, ಅಚ್ಯುತ್ ರೆಡ್ಡಿ, ರವೀಂದ್ರ ಜಲ್ದಾರ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಯಾದಗಿರಿ | ವಾಲ್ಮೀಕಿ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ : ಠಾಣಗುಂದಿ
ಯಾದಗಿರಿ: ಮಹರ್ಷಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಅ. 7 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಮಾಜದ ವತಿಯಿಂದ ನಿರ್ಧಾರ ಮಾಡಿದ್ದೇವೆ ಎಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡ ಭೀಮರಾಯ ಠಾಣಗುಂದಿ ಹೇಳಿದರು. ಸೋಮವಾರ ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿಯನ್ನು ಉದ್ದೇಶಿಸಿ ಮಾತನಾಡಿದರು. ವಾಲ್ಮೀಕಿ ನಾಯಕ ಸಮಾಜದ ಜನಸಂಖ್ಯೆ ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಇದ್ದಾರೆ ಸಮಾಜದ ಭಾಂದವರು ಎಲ್ಲರು ಸೇರಿ ನಮ್ಮ ಕುಲ ಗುರುಗಳಾದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಆಚರಣೆ ಮಾಡೋಣ ಅಂದು ತಮ್ಮ ತಮ್ಮ ಗ್ರಾಮಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ ಜಯಂತಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಮಹಿಳೆಯರು, ಯುವಕರು, ಪಾಲ್ಗೊಂಡು ಯಶಸ್ವಿಯಾಗಿ ಕಾರ್ಯಕ್ರಮ ಮಾಡೋಣ ಎಂದು ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜಕ್ಕೆ ಸೇವೆ ಸಲ್ಲಿಸಿ ಶ್ರಮಿಸಿದ ಹಿರಯರನ್ನು ಗೌರವವಿಸುವುದು. ವಿಶೇಷ ಉಪನ್ಯಾಸ ನೀಡುವುದು. ಕಾರ್ಯಕ್ರಮದ ಮುಂಚಿತವಾಗಿ ನಗರದ ತಹಸೀಲ್ದಾರರ ಕಛೇರಿಯಿಂದ ವಾಲ್ಮೀಕಿ ಭವನದವರೆಗೆ ಮೆರವಣಿಗೆ ಇರುತ್ತದೆ ಎಂದು ಮಾಹಿತಿ ನೀಡಿದರು.
ರೈಲು ಢಿಕ್ಕಿ: ರಾಜಸ್ಥಾನದ ವಿದ್ಯಾರ್ಥಿ ಮೃತ್ಯು
ಪಡುಬಿದ್ರಿ, ಸೆ.29: ಚಲಿಸುತ್ತಿದ್ದ ರೈಲು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಪಣಿಯೂರು ಕುಂಜೂರು ರೈಲು ಹಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮೃತರನ್ನು ರಾಜಸ್ಥಾನದ ದವಕಿಶನ್ ಬಾಂಬು(17) ಎಂದು ಗುರುತಿಸ ಲಾಗಿದೆ. ಈತ ಶಾಲೆಯ ರಜೆಯ ಹಿನ್ನೆಲೆಯಲ್ಲಿ ಕುಮಟಾದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಅಲ್ಲಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದ ಎನ್ನಲಾಗಿದೆ. ದಾರಿ ಮಧ್ಯೆ ಪಡುಬಿದ್ರಿ ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದ ಬಾಂಬು, ಬಳಿಕ ರೈಲ್ವೇ ಹಳಿ ಬಳಿ ನಡೆದುಕೊಂಡು ಹೋಗುತ್ತಿದ್ದನು. ಈ ವೇಳೆ ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ರೈಲು ಆತನಿಗೆ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಂಬು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಉಚ್ಚಿಲದ ಸಮಾಜ ಸೇವಕ ಜಲಾಲುದ್ದೀನ್, ಎಸ್ಡಿಪಿಐ ಆಂಬುಲೆನ್ಸ್ ಚಾಲಕ ಹಮೀದ್, ತೌಫೀಕ್, ರೈಫ್, ಹಸನ್ ಕುಂಜೂರು, ಸುಜಿತ್ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲು ಸಹಕರಿಸಿದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಡೀಪಾರು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೊರೆ ಹೋದ ಮಹೇಶ್ ಶೆಟ್ಟಿ ತಿಮರೋಡಿ!
ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಗಡೀಪಾರು ಆದೇಶ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಾರ್ವಜನಿಕ ಶಾಂತಿ ಭಂಗದ ಆರೋಪದ ಮೇಲೆ ಪುತ್ತೂರು ಸಹಾಯಕ ಆಯುಕ್ತರು ಹೊರಡಿಸಿದ ಈ ಆದೇಶ ಕಾನೂನು ಬಾಹಿರ, ಏಕಪಕ್ಷೀಯ ಹಾಗೂ ತಮ್ಮ ಅಹವಾಲು ಆಲಿಸದೆ ಹೊರಡಿಸಲಾಗಿದೆ ಎಂದು ತಿಮರೋಡಿ ವಾದಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ಸೇರ್ಪಡೆ? ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ!
ತುಮಕೂರು: ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆಗೊಳಿಸುವ ಕುರಿತು ಸರಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆದಿದ್ದು, ತೀವ್ರ ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ. ಬೆಂಗಳೂರಿನೊಂದಿಗೆ ವ್ಯಾಪಾರ, ಶೈಕ್ಷಣಿಕ ಸಂಬಂಧಗಳ ಕಾರಣದಿಂದ ಸೇರ್ಪಡೆಗೆ ಕೆಲವರು ಒತ್ತಾಯಿಸಿದರೆ, ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿ ಉಳಿಯಬೇಕೆಂದು ಹಲವರು ವಿರೋಧಿಸಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಜೆಡಿಎಸ್ ಅಧ್ಯಕ್ಷರು ಆರೋಪಿಸಿದ್ದಾರೆ. ಶಾಸಕರು, ಸರಕಾರದ ಮಟ್ಟದಲ್ಲಿ ಚರ್ಚೆ ನಡೆದಿಲ್ಲ, ಜನಾಭಿಪ್ರಾಯ ಪಡೆಯಲಾಗುವುದು ಎಂದಿದ್ದಾರೆ. ಈ ಬೆಳವಣಿಗೆ ತಾಲೂಕಿನಲ್ಲಿ ಕುತೂಹಲ ಮೂಡಿಸಿದೆ.
ವಿಶ್ವದ ಮೊದಲ AI ಆಧಾರಿತ ವೈರಾಣು ಸೃಷ್ಟಿಸಿದ ವಿಜ್ಞಾನಿಗಳು!
ನ್ಯೂಯಾರ್ಕ್, ಸೆ.29: ಕೃತಕ ಬುದ್ಧಿಮತ್ತೆಯ(ಎಐ) ಸಹಾಯದಿಂದ ಸೃಷ್ಠಿಸಲಾದ ವಿಶ್ವದ ಮೊತ್ತ ಮೊದಲ ವೈರಾಣುವನ್ನು ಅಮೆರಿಕಾದ ಸ್ಟಾನ್ಫೋರ್ಡ್ ವಿವಿ ಮತ್ತು ಆರ್ಕ್ ಇನ್ಸಿಟ್ಯೂಟ್ನ ವಿಜ್ಞಾನಿಗಳು ಯಶಸ್ವಿಯಾಗಿ ಅಭಿವೃದ್ಧಿಪಡಿಸಿರುವುದಾಗಿ ವರದಿಯಾಗಿದೆ. ಇ.ಕೊಲಿ(ಎಸ್ಕರೇಚಿಯಾ ಕೊಲಿ) ಎಂಬ ಆ್ಯಂಟಿಬಯೋಟಿಕ್(ಪ್ರತಿಜೀವಕ) ಪ್ರತಿರೋಧವನ್ನು ಕೊಲ್ಲುವ ಬ್ಯಾಕ್ಟೀರಿಯಾ ಭಕ್ಷಕ ವೈರಾಣು ಇದಾಗಿದೆ. ಫಲಿತಾಂಶಗಳು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಸಂಭಾವ್ಯ ಹೊಸ ಚಿಕಿತ್ಸೆಯನ್ನು ಸೂಚಿಸುತ್ತವೆ, ಜೀನ್ ಸಂವಹನ, ವಿಕಸನ ಮತ್ತು ನಿಯಂತ್ರಣದ ಬಗ್ಗೆ ಆಳವಾದ ತಿಳುವಳಿಕೆಯನ್ನು ಒದಗಿಸುತ್ತದೆ. ಜೊತೆಗೆ ದೊಡ್ಡ ಸಾಧ್ಯತೆಗಳನ್ನೂ ಸಹ ಹೆಚ್ಚಿಸುತ್ತದೆ. ಮುಂದಿನ ಹಂತವು ಎಐ ರಚಿತ ಜೀವದ ಸೃಷ್ಟಿ' ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಐ ಮಾದರಿಗಳನ್ನು ಈ ಹಿಂದೆ ಡಿಎನ್ಎ ಅನುಕ್ರಮಗಳು, ಏಕ ಪ್ರೊಟೀನ್ ಗಳು ಮತ್ತು ಬಹು ಘಟಕ ಸಂಕೀರ್ಣಗಳನ್ನು ಉತ್ಪಾದಿಸಲು ಬಳಸಲಾಗುತ್ತಿತ್ತು. ಮೊದಲ ಬಾರಿಗೆ ಎಐ ಪ್ರತ್ಯೇಕವಾದ ಪ್ರೊಟೀನ್ಗಳು ಅಥವಾ ಜೀವ ತುಣುಕುಗಳಿಗಿಂತ ಸಂಪೂರ್ಣ ಕ್ರಿಯಾತ್ಮಕ ಆನುವಂಶಿಕ ಮಾಹಿತಿಯನ್ನು ವಿನ್ಯಾಸಗೊಳಿಸುವ ಕ್ಷೇತ್ರಕ್ಕೆ ದಾಟಿದೆ.
ಚೀನಾ | ವಿಶ್ವದ ಅತೀ ಎತ್ತರದ ಸೇತುವೆ ಉದ್ಘಾಟನೆ
ಎರಡು ಗಂಟೆಗಳ ಪ್ರಯಾಣವನ್ನು ಎರಡು ನಿಮಿಷಕ್ಕಿಳಿಸಿದ ಸೇತುವೆ!
ಉತ್ತರ ಪ್ರದೇಶ | ಮರ್ಯಾದೆಗೇಡು ಹತ್ಯೆ; ಗುಂಡು ಹಾರಿಸಿ ಬಾಲಕಿಯ ಹತ್ಯೆಗೈದ ತಂದೆ
ಮುಝಪ್ಫರ್ ನಗರ್, ಸೆ. 29: ಹದಿನೇಳು ವರ್ಷದ ಬಾಲಕಿಯನ್ನು ಆಕೆಯ ತಂದೆ ಹಾಗೂ ಅಪ್ರಾಪ್ತ ಸಹೋದರ ಗುಂಡು ಹಾರಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದೆಗೇಡು ಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ. ಕಾಂಧಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೆಹ್ಟಾ ಗ್ರಾಮದಲ್ಲಿ ರವಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠ ಎನ್.ಪಿ. ಸಿಂಗ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮೃತಪಟ್ಟ ಬಾಲಕಿಯನ್ನು ಮುಸ್ಕಾನ್ (12)ಎಂದು ಗುರುತಿಸಲಾಗಿದೆ. ಈಕೆಯನ್ನು ತಂದೆ ಜುಲ್ಫಂ ಹಾಗೂ 15 ವರ್ಷದ ಸಹೋದರ ಮನೆಯ ಮೇಲಿನ ಮಹಡಿಗೆ ಕರೆದೊಯ್ದು, ಅಲ್ಲಿ ಪಿಸ್ತೂಲ್ ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ. ಝುಲ್ಫಂ ಹಾಗೂ ಆತನ ಅಪ್ರಾಪ್ತ ಪುತ್ರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದೆ ಹಾಗೂ ಅವರು ಅಪರಾಧಕ್ಕೆ ಬಳಸಿದ ಪಿಸ್ತೂಲ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ‘‘ಕುಟುಂಬದ ಹೆಸರು ಹಾಳು ಮಾಡುತ್ತಿರುವುದಕ್ಕೆ ಮಗಳನ್ನು ಹತ್ಯೆಗೈದಿರುವುದಾಗಿ ಆರೋಪಿ ತಂದೆ ಒಪ್ಪಿಕೊಂಡಿದ್ದಾನೆ’’ ಎಂದು ಸಿಂಗ್ ತಿಳಿಸಿದ್ದಾರೆ. ಮುಸ್ಕಾನ್ ಆ ಪ್ರದೇಶದ ಹುಡುಗನೊಂದಿಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದಳು. ಆದರೆ, ಕುಟುಂಬದವರು ಇದನ್ನು ವಿರೋಧಿಸಿದ್ದರು. ಫೋನ್ ನಲ್ಲಿ ಚಾಟ್ ಮಾಡುತ್ತಿದ್ದ ಆಕೆಯನ್ನು ರವಿವಾರ ಸಂಜೆ ತಂದೆ ಪತ್ತೆ ಹಚ್ಚಿದರು. ಇದು ಈ ದುರ್ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕರೂರ್ ಕಾಲ್ತುಳಿತದ ಬಗ್ಗೆ ವದಂತಿ ಹರಡಬೇಡಿ: ಮುಖ್ಯಮಂತ್ರಿ ಸ್ಟಾಲಿನ್
ಚೆನ್ನೈ, ಸೆ. 29: ಕರೂರ್ ನಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆ ಕುರಿತು ಸಾಮಾಜಿಕ ಮಾದ್ಯಮದಲ್ಲಿ ವದಂತಿ ಹರಡುವುದರ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಸೆಪ್ಟಂಬರ್ 27ರಂದು ನಡೆದ ದುರ್ಘಟನೆಯಲ್ಲಿ 41 ಜನರು ಸಾವನ್ನಪ್ಪಿರುವುದು ದುಃಖದ ವಿಚಾರವಾಗಿದೆ. ದುರ್ಘಟನೆಯಲ್ಲಿ ಮೃತಪಟ್ಟವರನ್ನು ಒಂದು ಪಕ್ಷಕ್ಕೆ ಸೇರಿದವರು ಎಂದು ನೋಡಬಾರದು. ಬದಲಿಗೆ ಅವರನ್ನು ತಮಿಳರು ಎಂದು ನೋಡಬೇಕು ಎಂದು ಅವರು ಹೇಳಿದ್ದಾರೆ. ‘‘ಕರೂರಿನಲ್ಲಿ ನಡೆದಿರುವುದು ಒಂದು ದೊಡ್ಡ ದುರಂತ. ಇದರಿಂದ ನನ್ನ ಹೃದಯ ದುಃಖತಪ್ತವಾಗಿದೆ. ಮಾಹಿತಿ ದೊರಕಿದ ಕೂಡಲೇ ಜಿಲ್ಲಾಡಳಿತವನ್ನು ಸಜ್ಜುಗೊಳಿಸಲಾಯಿತು. ನನಗೆ ಚೆನ್ನೈಯಲ್ಲಿ ಇರಲು ಸಾಧ್ಯವಾಗಲಿಲ್ಲ. ಸಂತ್ರಸ್ತರನ್ನು ಸಂತೈಸಿಸಲು ನಾನು ಕೂಡಲೇ ಕರೂರಿಗೆ ಧಾವಿಸಿದೆ’’ ಎಂದು ಸ್ಟಾಲಿನ್ ತನ್ನ ಅಧಿಕೃತ ‘ಎಕ್ಸ್’ ಖಾತೆಯ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಸಾಮಾಜಿಕ ಮಾದ್ಯಮದ ಪೋಸ್ಟ್ ಗಳನ್ನು ತಾನು ಗಮನಿಸುತ್ತಿದ್ದೇನೆ ಎಂದು ಹೇಳಿದ ಸ್ಟಾಲಿನ್, ಈ ಘಟನೆ ಕುರಿತು ಕೆಲವು ಜನರು ವದಂತಿಗಳನ್ನು ಹರಡುತ್ತಿರುವುದು ಹಾಗೂ ನಿಂದನೆಯಲ್ಲಿ ತೊಡಗಿರುವುದು ವಿಷಾದಕರ ಎಂದಿದ್ದಾರೆ. ‘‘ಕರೂರಿನಲ್ಲಿ ನಡೆದ ದುರಂತದ ಬಗ್ಗೆ ವದಂತಿಗಳನ್ನು ಹರಡಬೇಡಿ, ನಿಂದನೆಯಲ್ಲಿ ತೊಡಗಬೇಡಿ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ವರ್ತಿಸಿ’’ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಲೇಹ್ನಲ್ಲಿ 6ನೇ ದಿನವೂ ಮುಂದುವರಿದ ಕರ್ಫ್ಯೂ
ಲೇಹ್, ಸೆ. 29: ಹಿಂಸಾಚಾರ ಪೀಡಿತ ಲೇಹ್ನಲ್ಲಿ 6ನೇ ದಿನವಾದ ಸೋಮವಾರ ಕೂಡ ಕರ್ಫ್ಯೂ ಮುಂದುವರಿದಿದೆ. ಕರ್ಫ್ಯೂ ಹೇರಲಾದ ಪ್ರದೇಶಗಳಲ್ಲಿ ಪರಿಸ್ಥಿತಿ ಬಹುತೇಕ ಶಾಂತಿಯುತವಾಗಿದೆ. ಎಲ್ಲೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಹಾಗೂ ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ನಿಗಾ ಇರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರದ ಸಂದರ್ಭ ಮೃತಪಟ್ಟ ಸ್ಟೆಂಝಿನ್ ನಾಮ್ಗ್ಯಾಲ್ (24) ಹಾಗೂ ಜಿಗ್ಮತ್ ದೋರ್ಜೆ (25)ಯ ಅಂತ್ಯ ಸಂಸ್ಕಾರವನ್ನು ರವಿವಾರ ನಡೆಸಲಾಗಿದೆ. ಪಟ್ಟಣದಲ್ಲಿ ಹಿಂಸಾಚಾರ ನಡೆದ ಸಂದರ್ಭ ಸೆಪ್ಟಂಬರ್ 24ರಂದು ನಾಲ್ವರು ಸಾವನ್ನಪ್ಪಿದ್ದರು. ಲೇಹ್ ಪಟ್ಟಣದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಾರ್ಗಿಲ್ ಸೇರಿದಂತೆ ಲಡಾಖ್ ನ ಪ್ರಮುಖ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ಪ್ರತಿಬಂಧಿಸುವ ನಿಷೇಧಾಜ್ಞೆ ಈಗಲೂ ಜಾರಿಯಲ್ಲಿದೆ. ಲಡಾಖ್ ಗೆ ರಾಜ್ಯದ ಸ್ಥಾನ ಮಾನ ಹಾಗೂ ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಆಗ್ರಹಿಸಿ ಲೇಹ್ ಅಪೆಕ್ಸ್ ಬಾಡಿ (ಎಲ್ಎಬಿ) ಕರೆ ನೀಡಿದ್ದ ಬಂದ್ನ ಸಂದರ್ಭ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಲೇಹ್ ನಲ್ಲಿ ಬುಧವಾರ ಕರ್ಫ್ಯೂ ಹೇರಲಾಗಿತ್ತು. ಘರ್ಷಣೆಯಲ್ಲಿ ಸುಮಾರು 80 ಪೊಲೀಸ್ ಸಿಬ್ಬಂದಿ ಸೇರಿದಂತೆ 150ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಇಬ್ಬರು ಕೌನ್ಸಿಲರ್ಗಳ ಸಹಿತ 60ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ಇಂಗ್ಲೆಂಡ್ ನ ಕ್ರಿಸ್ ವೋಕ್ಸ್ ನಿವೃತ್ತಿ
ಲಂಡನ್, ಸೆ.29: ಇಂಗ್ಲೆಂಡ್ ತಂಡದ ವೇಗದ ಬೌಲರ್ ಕ್ರಿಸ್ ವೋಕ್ಸ್ ಎಲ್ಲ ಮಾದರಿಯ ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಘೋಷಿಸಿದ್ದಾರೆ. 36ರ ವಯಸ್ಸಿನ ಮಧ್ಯಮ ವೇಗದ ಬೌಲರ್ ವೋಕ್ಸ್ ಭಾರತ ವಿರುದ್ಧ ಓವಲ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿ ತನ್ನ ದೇಶವನ್ನು ಪ್ರತಿನಿಧಿಸಿದ್ದರು. ಭುಜಕ್ಕೆ ಗಾಯವಾದ ನಂತರ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿದ್ದ ವೋಕ್ಸ್ ಎಲ್ಲರ ಗಮನ ಸೆಳೆದಿದ್ದರು. 2011ರಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಟಿ-20 ಪಂದ್ಯವನ್ನಾಡುವ ಮೂಲಕ ವೋಕ್ಸ್ ಇಂಗ್ಲೆಂಡ್ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ್ದರು. ವಿಶೇಷವಾಗಿ ಟೆಸ್ಟ್ ಕ್ರಿಕೆಟಿನಲ್ಲಿ ಸ್ವದೇಶದ ವಾತಾವರಣದಲ್ಲಿ ಹೆಚ್ಚು ಮಿಂಚಿದ್ದರು. 12 ವರ್ಷಗಳ ವೃತ್ತಿಜೀವನದಲ್ಲಿ 62 ಟೆಸ್ಟ್ ಪಂದ್ಯಗಳನ್ನು ಆಡಿರುವ ವಾರ್ವಿಕ್ಶೈರ್ ಆಲ್ರೌಂಡರ್ ವೋಕ್ಸ್ 29.61ರ ಸರಾಸರಿಯಲ್ಲಿ ಒಟ್ಟು 194 ವಿಕೆಟ್ಗಳನ್ನು ಕಬಳಿಸಿದ್ದರು. ಬ್ಯಾಟಿಂಗ್ನಲ್ಲಿ ಒಂದು ಶತಕ ಹಾಗೂ 7 ಅರ್ಧಶತಕಗಳ ಸಹಿತ 2,034 ರನ್ ಕೊಡುಗೆ ನೀಡಿದ್ದರು. 2019ರಲ್ಲಿ ಸ್ವದೇಶದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಜಯಶಾಲಿಯಾಗಿದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದ ವೋಕ್ಸ್ ಆಸ್ಟ್ರೇಲಿಯ ವಿರುದ್ದ ಸೆಮಿ ಫೈನಲ್ನಲ್ಲಿ 3 ವಿಕೆಟ್ ಸಹಿತ 11 ಪಂದ್ಯಗಳಲ್ಲಿ 16 ವಿಕೆಟ್ಗಳನ್ನು ಉರುಳಿಸಿದ್ದರು. ನ್ಯೂಝಿಲ್ಯಾಂಡ್ ವಿರುದ್ದ ಫೈನಲ್ ಪಂದ್ಯದಲ್ಲಿ ಇನ್ನೂ ಮೂರು ವಿಕೆಟ್ಗಳನ್ನು ಕಬಳಿಸಿದ್ದರು. ಸೂಪರ್ ಓವರ್ ಕೂಡ ಟೈ ಆದಾಗ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು. 2022ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯನ್ನು ಗೆದ್ದಿರುವ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ‘‘ನಾನು ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದ್ದೇನೆ. ಇಂಗ್ಲೆಂಡ್ ಪರ ಆಡುವುದು ನನ್ನ ಕನಸಾಗಿತ್ತು. ಆ ಕನಸು ನನಸಾಗಿದ್ದು ನನ್ನ ಅದೃಷ್ಟ. ಕೌಂಟಿ ಕ್ರಿಕೆಟ್ನಲ್ಲಿ ಆಡುವುದನ್ನು ಮುಂದುವರಿಸಲು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಫ್ರಾಂಚೈಸಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ’’ ಎಂದು ವೋಕ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮಿಚಿಗನ್: ಚರ್ಚ್ ನಲ್ಲಿ ಶೂಟೌಟ್; 4 ಸಾವು; 8 ಮಂದಿಗೆ ಗಾಯ
ನ್ಯೂಯಾರ್ಕ್, ಸೆ.29: ಅಮೆರಿಕಾದ ಮಿಚಿಗನ್ ರಾಜ್ಯದ ಗ್ರ್ಯಾಂಡ್ ಬ್ಲಾಂಕ್ ನಗರದಲ್ಲಿ ವ್ಯಕ್ತಿಯೊಬ್ಬ ರವಿವಾರ ಚರ್ಚ್ನ ಬಾಗಿಲಿಗೆ ಟ್ರಕ್ ಅನ್ನು ಅಪ್ಪಳಿಸಿ ಬಳಿಕ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು ಇತರ 8 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಟ್ರಕ್ ಅಪ್ಪಳಿಸಿದ್ದರಿಂದ ಚರ್ಚ್ ನ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಬಳಿಕ ಪೊಲೀಸರು ಶಂಕಿತ ಆರೋಪಿಯನ್ನು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆರೋಪಿಯನ್ನು ಪಕ್ಕದ ಬೌರ್ಟನ್ ನಗರದ ನಿವಾಸಿ ಥಾಮಸ್ ಜಾಕೋಬ್ ಸ್ಯಾನ್ಫೋರ್ಡ್ (40 ವರ್ಷ) ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಚರ್ಚ್ ನ ಒಳಗೆ ಪರಿಶೀಲನೆ ನಡೆಸಲಾಗುತ್ತಿದ್ದು ಸಾವು ನೋವಿನ ಪ್ರಮಾಣ ಹೆಚ್ಚಬಹುದು ಎಂದು ಮೂಲಗಳು ಹೇಳಿವೆ.
ಪಿಒಕೆಯಲ್ಲಿ ಪಾಕ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ | ಇಂಟರ್ ನೆಟ್ ಸ್ಥಗಿತ; ಲಾಕ್ಡೌನ್ ಘೋಷಣೆ
ಹೊಸದಿಲ್ಲಿ, ಸೆ.29: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಮೂಲಭೂತ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ ಜಮ್ಮು ಕಾಶ್ಮೀರ್ ಜಾಯಿಂಟ್ ಅವಾಮಿ ಆ್ಯಕ್ಷನ್ ಕಮಿಟಿ(ಜೆಕೆಜೆಎಎಸಿ) ಕರೆ ನೀಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಸರಕಾರದ ವಿರುದ್ಧ ಘೋಷಣೆ ಕೂಗಿರುವುದಾಗಿ ವರದಿಯಾಗಿದೆ. ಜನರಿಗೆ ಅವರ ಹಕ್ಕುಗಳನ್ನು ಒದಗಿಸುವಂತೆ ಜೋರಾದ ಮತ್ತು ಸ್ಪಷ್ಟವಾದ ಸಂದೇಶವನ್ನು ರವಾನಿಸಲು ಸೋಮವಾರ ಪಿಒಕೆಯಲ್ಲಿ ಲಾಕ್ ಡೌನ್ ಘೋಷಿಸಿರುವುದಾಗಿ ಜೆಕೆಜೆಎಎಸಿ ಹೇಳಿತ್ತು. ವಲಯದಲ್ಲಿ ಫೋನ್ ಸಂಪರ್ಕ, ಇಂಟರ್ ನೆಟ್ ಸೇವೆಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದರಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಅನಿರ್ದಿಷ್ಟಾವಧಿಯ ಮುಷ್ಕರ ನಡೆಯಲಿದೆ ಎಂದು ನಾಗರಿಕ ಸಮಾಜ ಸಂಘಟನೆಯ ಒಕ್ಕೂಟ ಜೆಕೆಜೆಎಎಸಿ ಹೇಳಿದೆ. ಇದಕ್ಕೂ ಮುನ್ನ ಪಿಒಕೆ ಸರಕಾರ ಹಾಗೂ ಶೆಹಬಾಝ್ ಷರೀಫ್ ನೇತೃತ್ವದ ಪಾಕಿಸ್ತಾನ ಸರಕಾರಗಳು ಜೆಕೆಜೆಎಎಸಿ ಜೊತೆ ನಡೆಸಿದ ಮಾತುಕತೆ ವಿಫಲವಾಗಿತ್ತು. ಜಮ್ಮು ಕಾಶ್ಮೀರದ(ಭಾರತದ ಬದಿಯಿಂದ ಬರುವ) ನಿರಾಶ್ರಿತರಿಗಾಗಿ 12 ಶಾಸಕಾಂಗ ಸ್ಥಾನಗಳ ಮೀಸಲಾತಿ ರದ್ದುಗೊಳಿಸಬೇಕು, ಸಬ್ಸಿಡಿ ದರದಲ್ಲಿ ಹಿಟ್ಟು, ಮಂಗ್ಲಾ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿ ನ್ಯಾಯವಾದ ರಾಯಲ್ಟಿ(ಸ್ವಾಮ್ಯ ಶುಲ್ಕ) ಮತ್ತು ಪಾಕ್ ಸರಕಾರ ಭರವಸೆ ನೀಡಿರುವ ದೀರ್ಘಾವಧಿಯಿಂದ ವಿಳಂಬಗೊಂಡಿರುವ ಸುಧಾರಣಾ ಪ್ರಕ್ರಿಯೆಗಳನ್ನು ತಕ್ಷಣ ಜಾರಿಗೊಳಿಸುವುದು ಸೇರಿದಂತೆ 38 ಅಂಶಗಳ ಬೇಡಿಕೆಯನ್ನು ಮುಂದಿರಿಸಿ ಪ್ರತಿಭಟನೆ ನಡೆಯುತ್ತಿದೆ. ಮುಜಫರಬಾದ್ನಲ್ಲಿ ಸಮಿತಿಯ ಸದಸ್ಯ ಶಾರೂಕತ್ ನವಾಜ್ ಮಿರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾಗಿರುವ ಪಾಕ್ ಸರಕಾರ ರವಿವಾರ ರಾತ್ರಿ ಜೆಕೆಎಸಿಸಿಯ ಪ್ರಮುಖ ಸದಸ್ಯರನ್ನು ಬಂಧಿಸಿದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವುದಾಗಿ ವರದಿಯಾಗಿದೆ. ಪ್ರತಿಭಟನೆಯನ್ನು ದಮನಿಸಲು ಪಂಜಾಬ್ ಪೊಲೀಸ್, ಗಡಿ ಭದ್ರತಾ ಪಡೆಯ 2000 ಹೆಚ್ಚುವರಿ ತುಕಡಿಗಳನ್ನು ಪಾಕ್ ಸರಕಾರ ನಿಯೋಜಿಸಿದೆ. ಪಿಒಕೆಯ ಎಲ್ಲಾ ಜಿಲ್ಲಾ ಕೇಂದ್ರಗಳನ್ನು ಅರೆ ಸೇನಾಪಡೆಯನ್ನು ನಿಯೋಜಿಸಲಾಗಿದ್ದು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದ್ದು ಚೆಕ್ಪಾಯಿಂಟ್ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ. ಪ್ರತಿಭಟನೆ ಉಲ್ಬಣಗೊಳ್ಳುವ ಭಯ: ವ್ಯಾಪಕ ಪ್ರತಿಭಟನೆಯು `ಪಾಕಿಸ್ತಾನದಿಂದ ಸ್ವಾತಂತ್ರ್ಯ'ದ ಆಗ್ರಹವಾಗಿ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಭದ್ರತಾ ಮೂಲಗಳು ಎಚ್ಚರಿಕೆ ಸಂದೇಶ ರವಾನಿಸಿರುವುದಾಗಿ ವರದಿಯಾಗಿದೆ. ನಿರಾಶ್ರಿತರಿಗೆ ಮೀಸಲಿರಿಸಿದ ಅಸೆಂಬ್ಲಿ ಸ್ಥಾನಗಳನ್ನು ರದ್ದುಗೊಳಿಸುವ ಬೇಡಿಕೆಯು ಪಿಒಕೆಯನ್ನು ನಿಯಂತ್ರಿಸಲು ಪಾಕಿಸ್ತಾನ ಬಳಸಿದ ರಾಜಕೀಯ ವ್ಯವಸ್ಥೆಗೆ ನೇರ ಬೆದರಿಕೆ ಎಂದು ಪರಿಗಣಿಸಲಾಗಿದೆ.
ರಾಯಚೂರು | ಸಮೀಕ್ಷೆಯಲ್ಲಿ ಕರ್ತವ್ಯ ಲೋಪ: ಆರು ಅಂಗನವಾಡಿ ಕಾರ್ಯಕರ್ತರ ವಜಾ
ರಾಯಚೂರು: ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿದ್ದ ದೇವದುರ್ಗ ತಾಲೂಕಿನ ಆರು ಅಂಗನವಾಡಿ ಕಾರ್ಯಕರ್ತೆಯನ್ನು ಗೌರವ ಸೇವೆಯಿಂದ ವಜಾಗೊಳಿಸಲಾಗಿದೆ. ಅಂಜಳ–2 ಅಂಗನವಾಡಿ ಕೇಂದ್ರದ ಗುಂಡಮ್ಮ, ನಗರಗುಂಡ–2ರ ರಂಗಮ್ಮ, ಅಶೋಕ–ನೇತಾಜಿ ಓಣಿಯ ಮುತ್ತಮ್ಮ, ಮಟ್ಟೇರ್ದೊಡ್ಡಿಯ ಚಾಂದಬಿ, ದೇವದುರ್ಗ ನೇತಾಜಿ ಓಣಿಯ ವಿಜಯಲಕ್ಷ್ಮಿ ಹಾಗೂ ಬಾಪೂಜಿ ಓಣಿಯ ರೇಣುಕಾ ಅವರನ್ನು ವಜಾಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಆದೇಶ ಹೊರಡಿದ್ದಾರೆ. ನಾಲ್ಕು ದಿನವಾದರೂ ಸಮೀಕ್ಷೆಯಲ್ಲಿ ಪ್ರಗತಿ ಕಾಣಿಸಿಲ್ಲ. ಗಣತಿ ಕಾರ್ಯಕ್ಕೆ ಹೋಗದಂತೆ ಬೇರೆ ಕಾರ್ಯಕರ್ತೆಯರಿಗೂ ಪ್ರಚೋದಿಸಿದ್ದಾರೆ. ಗಣತಿ ಕಾರ್ಯಕ್ಕೂ ಹಾಜರಾಗಿಲ್ಲ. ಹೀಗಾಗಿ ಕರ್ತವ್ಯ ಲೋಪ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ನಡೆದುಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಂಗನವಾಡಿ ಕಾರ್ಯಕರ್ತೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಲಿಂಗಸುಗೂರು ವರದಿ: ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ನಿರಂತರವಾಗಿ ಗೈರಾದ 57 ಜನ ಸಮೀಕ್ಷೆ ಸಿಬ್ಬಂದಿಗೆ ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಭಾನುವಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಒಂದೇ ದಿನ 7 ಸಾವಿರ ರೂ ಏರಿಕೆ ಕಂಡ ಬೆಳ್ಳಿ ದರ! ಒಂದೂವರೆ ಲಕ್ಷ ರೂ. ತಲುಪಿದ ಬೆಳ್ಳಿ ಬೆಲೆ; ಚಿನ್ನ ಎಷ್ಟಿದೆ?
ಬೆಳ್ಳಿ ದರ ಸೋಮವಾರ ಪ್ರತಿ ಕೆ.ಜಿ.ಗೆ 1.5 ಲಕ್ಷ ರೂ. ತಲುಪಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಚಿನ್ನದ ದರ 10 ಗ್ರಾಂ.ಗೆ 1,19,500 ರೂ.ಗೆ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳು ದರ ಏರಿಕೆಗೆ ಕಾರಣವಾಗಿವೆ. ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯನ್ನು ಆಯ್ಕೆ ಮಾಡುತ್ತಿದ್ದಾರೆ.
ದೇವಸ್ಥಾನಗಳ ಹೊರಗೆ ಪ್ರಸಾದ ಮಾರುವ ಹಿಂದುಯೇತರರನ್ನು ಥಳಿಸಿ: ಪ್ರಜ್ಞಾ ಠಾಕೂರ್
ಭೋಪಾಲ(ಮ.ಪ್ರ),ಸೆ.29: ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಆಘಾತಕಾರಿ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ರವಿವಾರ ಇಲ್ಲಿ ವಿಶ್ವ ಹಿಂದು ಪರಿಷತ್ನ ದುರ್ಗಾ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಸ್ಥಾನಗಳ ಹೊರಗೆ ಪ್ರಸಾದ ಮಾರುತ್ತಿರುವ ಹಿಂದುಯೇತರರು ಕಂಡು ಬಂದರೆ ಅವರನ್ನು ಥಳಿಸುವಂತೆ ಹಿಂದು ಭಕ್ತರನ್ನು ಆಗ್ರಹಿಸಿದರು. ದೇವಸ್ಥಾನಗಳ ಸುತ್ತಮುತ್ತ ಯಾರು ಪ್ರಸಾದ ಮಾರಾಟ ಮಾಡುತ್ತಿದ್ದಾರೆ ಎನ್ನುವುದನ್ನು ಪರಿಶೀಲಿಸಲು ಗುಂಪುಗಳನ್ನು ರೂಪಿಸುವಂತೆ ಮತ್ತು ಮಾರಾಟಗಾರರು ಹಿಂದುಗಳಲ್ಲದಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮತ್ತು ಸರಿಯಾಗಿ ಥಳಿಸುವಂತೆ ಹಿಂದುಗಳನ್ನು ಒತ್ತಾಯಿಸಿದರು. ಭಕ್ತರು ಹಿಂದುಯೇತರ ಮಾರಾಟಗಾರರಿಂದ ಪ್ರಸಾದ ಖರೀದಿಸಲು ನಿರಾಕರಿಸಬೇಕು. ಅವರು ಪ್ರಸಾದ ಮಾರಲು ಅಥವಾ ದೇವಸ್ಥಾನವನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದರು. ಹಿಂದುಗಳು ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಮನೆಗಳಲ್ಲಿ ಹರಿತವಾದ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂಬ ತನ್ನ ಹೇಳಿಕೆಯನ್ನು ಪುನರುಚ್ಚರಿಸಿದ ಠಾಕೂರ್,‘ನಮ್ಮ ಪುತ್ರಿಯರು ಮತ್ತು ಸೋದರಿಯರನ್ನು ಮನೆಗಳಿಂದ ಕರೆದುಕೊಂಡು ಹೋಗಿ ಅವರನ್ನು ತುಂಡುಗಳಾಗಿ ಕತ್ತರಿಸಿ ರಸ್ತೆಯಲ್ಲಿ ಎಸೆದಾಗ ನಮಗೆ ತೀವ್ರ ನೋವುಂಟಾಗುತ್ತದೆ. ಈ ನೋವನ್ನು ನಿವಾರಿಸಲು ಶತ್ರು ನಿಮ್ಮ ಮನೆಯ ಹೊಸ್ತಿಲು ದಾಟಲು ಪ್ರಯತ್ನಿಸಿದರೆ ಅವರನ್ನು ತುಂಡರಿಸಿ. ಪ್ರತಿ ಮನೆಯಲ್ಲಿಯೂ ದುರ್ಗೆಯನ್ನು ಸಿದ್ಧಪಡಿಸಲು ದುರ್ಗಾ ವಾಹಿನಿಯು ಶ್ರಮಿಸುತ್ತಿದೆ. ನಾವು ಪ್ರತಿಯೊಂದೂ ಮನೆಯಲ್ಲಿಯೂ ನಿಯಮಗಳು ಮತ್ತು ಕಾನೂನುಗಳನ್ನು ಅನುಸರಿಸುತ್ತೇವೆ,ಏಕೆಂದರೆ ಈ ದೇಶ ನಮ್ಮದು’ ಎಂದು ಹೇಳಿದರು.
ಸೋನು ನಿಗಮ್ ಗೆ ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿ ಪ್ರದಾನ
ಇಂದೋರ್(ಮ.ಪ್ರ),ಸೆ.29: ಲಘು ಸಂಗೀತ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಗಾಗಿ ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ರವಿವಾರ ಇಲ್ಲಿ ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಲತಾ ಮಂಗೇಶ್ಕರ್ ಅವರ 96ನೇ ಜನ್ಮದಿನದ ಪ್ರಯುಕ್ತ ಅವರ ಜನನ ಸ್ಥಳವಾದ ಇಂದೋರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ನಿಗಮ್ ಗೆ ಪ್ರಶಸ್ತಿಯನ್ನು ಪ್ರದಾನಿಸಿದರು. ಭಾರತರತ್ನ ಲತಾ ಮಂಗೇಶ್ಕರ್ ಅವರು ತನ್ನ ಕಂಠಸಿರಿಯೊಂದಿಗೆ ಭಾರತೀಯ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿಯು ವಿಶಿಷ್ಟವಾಗಿದೆ. ಇದು ಸಂಗೀತ ಕ್ಷೇತ್ರದಲ್ಲಿ ಅಳಿಸಲಾದ ಛಾಪು ಮೂಡಿಸಿರುವ ಕಲಾವಿದರ ಕೊಡುಗೆಗೆ ನೀಡುವ ಗೌರವವಾಗಿದೆ ಎಂದು ಯಾದವ್ ಹೇಳಿದರು. ಗೌರವಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ 52ರ ಹರೆಯದ ನಿಗಮ್, ‘ಮೂರು ದಶಕಗಳ ಹಿಂದೆ ಲತಾ ಮಂಗೇಶ್ಕರ್ ಅಲಂಕರಣ ಕಾರ್ಯಕ್ರಮದಲ್ಲಿ ಹಾಡಿದ್ದ ನಾನು ಇಂದು ಅದೇ ವೇದಿಕೆಯಲ್ಲಿ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಲತಾಜಿ ಕೇವಲ ಸ್ಫೂರ್ತಿಯಲ್ಲ,ಅವರು ಸಂಗೀತದ ಜೀವಂತ ಸಂಪ್ರದಾಯವೂ ಆಗಿದ್ದಾರೆ. ಈ ಗೌರವ ಸ್ವೀಕರಿಸಿ ನಾನು ಧನ್ಯನಾಗಿದ್ದೇನೆ. ಇದು ನನ್ನ ಜೀವನದ ಅತ್ಯಂತ ವಿಶೇಷ ಘಳಿಗೆಗಳಲ್ಲಿ ಒಂದಾಗಿದೆ ’ಎಂದು ಹೇಳಿದರು. ಇಂದೋರಿನಲ್ಲಿ 1929,ಸೆ.28ರಂದು ಜನಿಸಿದ್ದ ಲತಾ ಮಂಗೇಶ್ಕರ್ 2020, ಫೆ.6ರಂದು ಮುಂಬೈನಲ್ಲಿ 92ನೇ ವಯಸ್ಸಿನಲ್ಲಿ ನಿಧನರಾದರು. ಮಧ್ಯಪ್ರದೇಶ ಸರಕಾರವು 1984ರಲ್ಲಿ ಸ್ಥಾಪಿಸಿದ ಈ ವಾರ್ಷಿಕ ಪ್ರಶಸ್ತಿಯನ್ನು ಲಘು ಸಂಗೀತ ಕ್ಷೇತ್ರದಲ್ಲಿ ಸಾಧಕರಿಗೆ ಪ್ರದಾನಿಸಲಾಗುತ್ತದೆ. ಈ ಹಿಂದೆ ನೌಷಾದ್,ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಅವರಂತಹ ದಿಗ್ಗಜರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕರೂರು ಕಾಲ್ತುಳಿತ ಪ್ರಕರಣ | ಸ್ಟಾಲಿನ್, ವಿಜಯ್ ಜೊತೆ ಮಾತನಾಡಿದ ರಾಹುಲ್ ಗಾಂಧಿ
ಹೊಸದಿಲ್ಲಿ,ಸೆ.29: ತಮಿಳುನಾಡಿನ ಕರೂರಿನಲ್ಲಿ ಶನಿವಾರ ರಾಜಕೀಯ ರ್ಯಾಲಿ ವೇಳೆ ಕಾಲ್ತುಳಿತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಟಿವಿಕೆ ಅಧ್ಯಕ್ಷ ವಿಜಯ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ದೂರವಾಣಿಯಲ್ಲಿ ಸ್ಟಾಲಿನ್ ಜೊತೆ ಮಾತನಾಡಿದ ರಾಹುಲ್ ಘಟನೆಯ ಮತ್ತು ಗಾಯಾಳುಗಳಿಗೆ ಚಿಕಿತ್ಸೆಯ ಬಗ್ಗೆ ವಿಚಾರಿಸಿಕೊಂಡರು. ರಾಹುಲ್ ರ ಹೃತ್ಪೂರ್ವಕ ಕಳಕಳಿ ಮತ್ತು ಬೆಂಬಲಕ್ಕಾಗಿ ಸ್ಟಾಲಿನ್ ಎಕ್ಸ್ ಪೋಸ್ಟ್ನಲ್ಲಿ ಧನ್ಯವಾದಗಳನ್ನು ಹೇಳಿದ್ದಾರೆ. ರಾಹುಲ್ ವಿಜಯ್ ಜೊತೆಗೂ ಮಾತನಾಡಿ ಅವರ ಬೆಂಬಲಿಗರ ಸಾವುಗಳ ಬಗ್ಗೆ ಸಂತಾಪಗಳನ್ನು ವ್ಯಕ್ತಪಡಿಸಿದರು. ಸೆ.27ರಂದು ವಿಜಯ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದು, 60ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ತನ್ನ ವಿರುದ್ಧ ಟೀಕೆಗಳು ಹೆಚ್ಚುತ್ತಿದ್ದಂತೆ ರವಿವಾರ ವಿಜಯ್ ಮೃತರ ಕುಟುಂಬಗಳಿಗೆ ತಲಾ 20 ಲ.ರೂ.ಮತ್ತು ಗಾಯಾಳುಗಳಿಗೆ ಎರಡು ಲ.ರೂ.ಪರಿಹಾರವನ್ನು ಘೋಷಿಸಿದ್ದಾರೆ. ಕಾಲ್ತುಳಿತ ಘಟನೆಯ ಬಗ್ಗೆ ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ಕೋರಿ ಟಿವಿಕೆ ಮದ್ರಾಸ್ ಹೈಕೋರ್ಟ್ನ ಮಧುರೆ ಪೀಠದ ಮೆಟ್ಟಲೇರಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಕರೂರು ಪೋಲಿಸರು ಟಿವಿಕೆ ಪದಾಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪವನ್ನು ಹೊರಿಸಿದ್ದಾರೆ.
ಎರಡು ದಿನಗಳಿಂದ ವೇಗವಾಗಿ ಸಾಗಿರುವ ಗಣತಿ ಕಾರ್ಯ: ಉಡುಪಿ ಜಿಲ್ಲೆಯಲ್ಲಿ ಶೇ.14.36ರಷ್ಟು ಸಮೀಕ್ಷೆ ಪೂರ್ಣ
ಉಡುಪಿ, ಸೆ.29: ಸರ್ವರ್ ಮತ್ತು ನೆಟ್ವರ್ಕ್ ಸಮಸ್ಯೆ, ಸರಿಯಾಗಿ ಕಾರ್ಯ ನಿರ್ವಹಿಸದ ಆ್ಯಪ್ ಸೇರಿದಂತೆ ವಿವಿಧ ಕಾರಣಗಳಿಂದ ಮೊದಲ ಐದು ದಿನಗಳ ಕಾಲ ಮಂದಗತಿಯಲ್ಲಿ ಸಾಗಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಿನ್ನೆ ಮತ್ತು ಇಂದು ವೇಗವನ್ನು ಪಡೆದುಕೊಂಡಿದೆ. ಇಂದು ಸಂಜೆಯವರೆಗೆ ಉಡುಪಿ ಜಿಲ್ಲೆಯಲ್ಲಿ ಇರುವ ಒಟ್ಟು 3,55,771 ಮನೆಗಳ ಗಣತಿ ಪೈಕಿ 51,110 ಮನೆಗಳ ಸರ್ವೆ ಕಾರ್ಯವನ್ನು ಗಣತಿದಾರರು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ.14.36 ರಷ್ಟು ಗಣತಿ ಕಾರ್ಯ ನಡೆದಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸೋಮವಾರ ಇಡೀ ದಿನದಲ್ಲಿ ಒಟ್ಟು 19,826 ಮನೆಗಳ ಸರ್ವೆ ಕಾರ್ಯವನ್ನು ಗಣತಿದಾರರು ನಡೆಸಿದ್ದಾರೆ. ಕೆಲವು ಕಡೆಗಳಲ್ಲಿ ಸರ್ವರ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆ ಹಾಗೂ ಮೊಬೈಲ್ ಆ್ಯಪ್ನಲ್ಲಿ ತೊಂದರೆ ಕಾಣಿಸಿಕೊಂಡರೂ ಅವುಗಳನ್ನು ತ್ವರಿತವಾಗಿ ಪರಿಹರಿಸಿಕೊಂಡು ವೇಗವಾಗಿ ಗಣತಿಯನ್ನು ಕೈಗೊಂಡಿದ್ದಾರೆ ಎಂದು ಗದ್ಯಾಳ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3231 ಗಣತಿ ಬ್ಲಾಕ್ಗಳಿದ್ದು, 3219 ಗಣತಿದಾರರನ್ನು ಗೊತ್ತುಪಡಿಸಲಾಗಿದೆ. ಇವುಗಳಲ್ಲಿ ಇಂದೂ ಸಹ ಕೆಲವರು ವಿವಿಧ ಕಾರಣಗಳಿಂದ ಗಣತಿಗೆ ಬಂದಿರಲಿಲ್ಲ. ಆದರೂ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳದೇ ಗಣತಿದಾರರು ವೇಗವಾಗಿ ಮನೆ ಮನೆ ಸರ್ವೆ ನಡೆಸಿದ್ದಾರೆ ಎಂದವರು ಹೇಳಿದ್ದಾರೆ. ರವಿವಾರ ಉಡುಪಿ ಜಿಲ್ಲೆಯಲ್ಲಿ 11,428 ಮನೆಗಳ ಸರ್ವೆ ನಡೆದಿದ್ದು, ಒಟ್ಟು 27,031 ಮನೆಗಳ ಗಣತಿ ಕಾರ್ಯ ಮುಗಿದಿದೆ ಎಂದು ಸರಕಾರದಿಂದ ಬಿಡುಗಡೆಯಾದ ಮಾಹಿತಿ ತಿಳಿಸಿತ್ತು. ಅಲ್ಲಲ್ಲಿ ಸಮಸ್ಯೆ: ಕಳೆದ ಶನಿವಾರದ ಬಳಿಕ ಜಿಲ್ಲೆಯಲ್ಲಿ ಸರ್ವೆ ಕಾರ್ಯ ವೇಗವಾಗಿ ನಡೆಯುತ್ತಿದೆ. ನಿನ್ನೆ ಮತ್ತು ಇಂದು 10,000ಕ್ಕೂ ಅಧಿಕ ಮನೆಗಳ ಸರ್ವೆ ಕಾರ್ಯ ನಡೆದಿದೆ. ಆದರೆ ಇಂದು ಸಹ ಅಪರಾಹ್ನದ ಬಳಿಕ ಕೆಲವು ಕಡೆ ಸರ್ವರ್ ಡೌನ್, ಆ್ಯಪ್ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಇದನ್ನು ಹೊರತು ಪಡಿಸಿದರೆ ಗಣತಿ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ. ಆದರೆ ಎಂಟು ದಿನಗಳ ಬಳಿಕ ಶೇ.10ರಷ್ಟು ಸರ್ವೆ ಕಾರ್ಯ ಮಾತ್ರ ನಡೆದಿರುವುದರಿಂದ ನಿಗದಿಯಾದ ಅ.7ರ ಒಳಗೆ ಗಣತಿ ಕಾರ್ಯ ಪೂರ್ಣಗೊಳ್ಳುವುದು ಕಷ್ಟ ಸಾಧ್ಯ ಎಂದು ಅಭಿಪ್ರಾಯಪಟ್ಟ ಅಂಪಾರು, ಸರ್ವೆಯ ದಿನಾಂಕವನ್ನು ವಿಸ್ತರಿಸಬೇಕಾಗಬಹುದು ಎಂದರು. ಶಿಸ್ತು ಕ್ರಮದ ಎಚ್ಚರಿಕೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸಲಾಗಿದ್ದು, ಸಮೀಕ್ಷೆಗೆ ನಿಯೋಜನೆಗೊಂಡ ಗಣತಿದಾರರು ತಮಗೆ ನಿಯೋಜಿಸಲಾಗಿರುವ ಸಮೀಕ್ಷಾ ಬ್ಲಾಕ್ಗಳಲ್ಲಿ ಸಮೀಕ್ಷೆಯನ್ನು ನಿರ್ವಹಿಸಲು ಆದೇಶಿಸಲಾಗಿದೆ. ಯಾವುದೇ ಗಣತಿದಾರರು ಸಮೀಕ್ಷೆಯಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ. ಗಣತಿದಾರರು ಸಮೀಕ್ಷೆಯಲ್ಲಿ ನಿರಾಸಕ್ತಿ ಅಥವಾ ಅಸಡ್ಡೆ ತೋರಿದಲ್ಲಿ, ಅನಗತ್ಯ ನೆಪಗಳನ್ನು ಹೇಳಿ ಗಣತಿ ಕಾರ್ಯದಲ್ಲಿ ನಿಷ್ಕಾಳಜಿ ತೋರಿದಲ್ಲಿ ನಿರ್ದಾಕ್ಷಿಣ್ಯವಾಗಿ ಇಲಾಖಾ ವಿಚಾರಣೆ ನಡೆಸಲು ಹಾಗೂ ಶಿಸ್ತುಕ್ರಮ ಜರುಗಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ. ಸಮೀಕ್ಷೆಗೆ ದಾಖಲೆಗಳನ್ನು ನೀಡಿ ಸಹಕರಿಸಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಸೆ.22ರಿಂದ ಅ.7ರ ವರೆಗೆ ನಡೆಸಲಾಗುತ್ತಿದ್ದು, ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಿಯೋಜಿತ ಸಿಬ್ಬಂದಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಪಡಿತರ ಚೀಟಿ, ಮನೆಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ಗಳು, ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ವಿಕಲಚೇತನರ ಕಾರ್ಡ್, ವಿಕಲಚೇತನ ಪ್ರಮಾಣ ಪತ್ರ ಮತ್ತು ಚುನಾವಣಾ ಗುರುತಿನ ಪತ್ರವನ್ನು ನೀಡಿ ಸರ್ವೆ ಕಾರ್ಯಕ್ಕೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಧಾರವಾಡ | ಮಾಜಿ ಸೈನಿಕನ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ
ಧಾರವಾಡ, ಸೆ.29: ಮಾಜಿ ಸೈನಿಕನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಧಾರವಾಡದ ಸಪ್ತಾಪುರದ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿಯ ಡಾಲ್ಫಿನ್ ಹೊಟೇಲ್ ಪಕ್ಕದಲ್ಲೇ ಇರುವ ಸೈನಿಕ ಮೆಸ್ನಲ್ಲಿ ರವಿವಾರ ರಾತ್ರಿ ನಡೆದಿದೆ. ಘಟನೆಯ ವೀಡಿಯೊ ಮೊಬೈಲ್ನಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಎಂದು ಗುರುತಿಸಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಸ್ ನಡೆಸುತ್ತಿರುವ ನನಗೆ ನಾಲ್ಕೈದು ಪೊಲೀಸರು ಹಾಗೂ ಓರ್ವ ಎಎಸ್ಸೈ ಸೇರಿಕೊಂಡು ಹೆಲ್ಮೆಟ್, ಲಾಠಿ ಸೇರಿದಂತೆ ಇತರ ವಸ್ತುಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ರಾಮಪ್ಪ ನಿಪ್ಪಾಣಿ ಆರೋಪಿಸಿದ್ದಾರೆ. ‘ರಾತ್ರಿ 11 ಗಂಟೆ ಸುಮಾರಿಗೆ ಮೆಸ್ನಲ್ಲಿ ಊಟ ಮಾಡಲು ರಾಮಪ್ಪ ಹಾಗೂ ಇತರರು ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೊಲೀಸರು, ಮೆಸ್ ಇನ್ನೂ ಏಕೆ ಬಂದ್ ಮಾಡಿಲ್ಲ ಎಂದು ಏಕಾಏಕಿ ರಾಮಪ್ಪನ ಕೊರಳುಪಟ್ಟಿ ಹಿಡಿದರು. ಮಾತಿಗೆ ಮಾತು ಬೆಳೆದು ಪೊಲೀಸರು ಹೆಲ್ಮೆಟ್, ಬಡಿಗೆಯಿಂದ ಹಲ್ಲೆ ನಡೆಸಿದರಲ್ಲದೆ, ಬೂಟುಗಾಲಿನಿಂದ ಎದೆಗೆ ಒದ್ದರು. ನನಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಬಾರದು ಎಂದು ಕ್ಯಾಮರಾಗಳನ್ನು ಕಿತ್ತೊಗೆದರು. ಅವರು ಮದ್ಯಪಾನ ಮಾಡಿಯೇ ಅಲ್ಲಿಗೆ ಬಂದಿದ್ದರು’ ಎಂದು ರಾಮಪ್ಪ ಅವರ ಪತ್ನಿ ಆರೋಪಿಸಿದ್ದಾರೆ. ‘ಈ ಘಟನೆ ನಡೆದ ಬಳಿಕ ಸ್ಥಳಕ್ಕೆ ಇನ್ಸ್ಪೆಕ್ಟರ್ ಅವರೂ ಭೇಟಿ ನೀಡಿದ್ದರು. ಮಾಜಿ ಸೈನಿಕ ರಾಮಪ್ಪ ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಅವರನ್ನು ಆಸ್ಪತ್ರೆಗೆ ದಾಖಲಿಸಲು ಅವಕಾಶ ಕೊಡದ ಪೊಲೀಸರು ಮೆಸ್ನಲ್ಲೇ ಇಟ್ಟುಕೊಂಡಿದ್ದರು. ನಂತರ ವಕೀಲರ ಸಹಾಯದಿಂದ ರಾಮಪ್ಪನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಯಿತು. ಈ ಘಟನೆ ಸಂಬಂಧ ನಾವು ಉಪನಗರ ಠಾಣೆಯಲ್ಲಿ ದೂರನ್ನೂ ನೀಡಿದ್ದೇವೆ’ ಎಂದು ರಾಮಪ್ಪನ ಸಂಬಂಧಿಕರು ತಿಳಿಸಿದ್ದಾರೆ.
BRS ಶಾಸಕರ ಅನರ್ಹತೆ ಅರ್ಜಿ: ವಿಚಾರಣೆ ಪ್ರಾರಂಭಿಸಿದ ತೆಲಂಗಾಣ ಸ್ಪೀಕರ್
ಹೈದರಾಬಾದ್: 2023ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರಗೊಂಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ವಿರೋಧ ಪಕ್ಷ BRS ಸಲ್ಲಿಸಿರುವ ಅರ್ಜಿಯ ಸಂಬಂಧ ತೆಲಂಗಾಣ ವಿಧಾನಸಭಾ ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಸೋಮವಾರ ಸಂವಿಧಾನದ ಹತ್ತನೆ ಪರಿಚ್ಛೇದದಡಿ ವಿಚಾರಣೆಗೆ ಚಾಲನೆ ನೀಡಿದರು. ಅಂತಹ ಹತ್ತು ಶಾಸಕರ ವಿರುದ್ಧ BRS ಅರ್ಜಿ ಸಲ್ಲಿಸಿದೆ. ಈ ಪೈಕಿ ನಾಲ್ವರು ಶಾಸಕರಾದ ಟಿ.ಪ್ರಕಾಶ್ ಗೌಡ್, ಕಾಳೆ ಯಾದಯ್ಯ, ಗುಡೆಂ ಮಹಿಪಾಲ್ ರೆಡ್ಡಿ ಹಾಗೂ ಬಂದ್ಲಾ ಕೃಷ್ಣಮೋಹನ್ ರೆಡ್ಡಿಯ ವಿಚಾರಣೆಯನ್ನು ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಸೋಮವಾರ ಮತ್ತು ಬುಧವಾರ ನಿಗದಿಗೊಳಿಸಿದ್ದಾರೆ. ಅರ್ಜಿದಾರರು ಹಾಗೂ ಪಕ್ಷಾಂತರಗೊಂಡ ಶಾಸಕರನ್ನು ಪ್ರತಿನಿಧಿಸುತ್ತಿರುವ ವಕೀಲರ ಪಾಟಿ ಸವಾಲಿನೊಂದಿಗೆ ಮುಚ್ಚಿದ ಕೋಣೆಯಲ್ಲಿ ವಿಡಿಯೊ ವಿಚಾರಣೆಯನ್ನು ನಡೆಸಲಾಯಿತು. ವಿಚಾರಣೆಯ ಮೊದಲ ಅವಧಿಯಲ್ಲಿ BRS ಶಾಸಕ ಕಲ್ವಕುಂಟ್ಲಾ ಸಂಜಯ್ ಅವರನ್ನು ಪಾಟಿ ಸವಾಲಿಗೊಳಪಡಿಸಲಾಯಿತು. ಇದಾದ ಬಳಿಕ ಕಾಳೆ ಯಾದಯ್ಯ ಮತ್ತು ಗುಡೆಮ್ ಮಹಿಪಾಲ್ ರೆಡ್ಡಿ ಪರ ವಕೀಲರು ಚಿಂತಾ ಪ್ರಭಾಕರ್ ಅವರನ್ನು ಪಾಟಿ ಸವಾಲಿಗೊಳಪಡಿಸಿದರು. ಈ ವಿಚಾರಣಾ ಅವಧಿಯ ಅಂತಿಮ ಸುತ್ತಿನಲ್ಲಿ ಪಲ್ಲ ರಾಜೇಶ್ವರ ರೆಡ್ಡಿಯನ್ನು ಬಂದ್ಲಾ ಕೃಷ್ಣಮೋಹನ್ ರೆಡ್ಡಿ ಪರ ವಕೀಲರು ಪಾಟಿ ಸವಾಲಿಗೊಳಪಡಿಸಿದರು. ಸ್ವತಃ ಸ್ಪೀಕರ್ ಅವರೇ ಅನರ್ಹತೆ ಅರ್ಜಿಗಳ ಕುರಿತು ನೇರವಾಗಿ ವಿಚಾರಣೆ ನಡೆಸುತ್ತಿರುವುದು ತೆಲಂಗಾಣ ವಿಧಾನಸಭಾ ಇತಿಹಾಸದಲ್ಲಿ ಇದೇ ಮೊದಲನೆಯದಾಗಿದೆ. ಆಡಳಿತಾರೂಢ ಕಾಂಗ್ರೆಸ್ ಸೇರ್ಪಡೆಯಾದ ಹತ್ತು ಮಂದಿ ಪಕ್ಷದ ಶಾಸಕರನ್ನು ಅನರ್ಹಗೊಳಿಸುವಂತೆ BRS ನಾಯಕರು ಸ್ಪೀಕರ್ ಎದುರು ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ನಿಗೆ 50ಕ್ಕೂ ಹೆಚ್ಚು ಬಾರಿ ಚಾಕು ಇರಿದಿದು ಕೊಂದ ಪತಿ! ಬಳಿಕ ತಾನೂ ಆತ್ಮಹತ್ಯೆ; ಕಾರಣವೇ ವಿಚಿತ್ರ
ಬೆಂಗಳೂರಿನ ಉಲ್ಲಾಳದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ 50 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಕೆಲಸಕ್ಕೆ ಹೋಗುತ್ತಿದ್ದಳು ಎಂಬ ಕಾರಣಕ್ಕೆ ಗಂಡ ಹೆಂಡತಿ ಮಧ್ಯ ಜಗಳವಾಗಿದೆ. ಜಗಳ ಅತಿರೇಕಕ್ಕೆ ತಿರುಗಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು | ಪತ್ನಿಗೆ ಚಾಕು ಇರಿದು ಕೊಲೆಗೈದು ಪತಿ ಆತ್ಮಹತ್ಯೆ
ಬೆಂಗಳೂರು, ಸೆ.29: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಗೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಉಲ್ಲಾಳ ಮುಖ್ಯರಸ್ತೆಯ ಪ್ರೆಸ್ಲೇಔಟ್ನಲ್ಲಿ ವಾಸವಾಗಿದ್ದ ಮಂಜುಳ(27) ಕೊಲೆಯಾದ ಮಹಿಳೆ. ಧರ್ಮಶೀಲನ್(29) ಎಂಬಾತ ಪತ್ನಿಯನ್ನು ಕೊಲೆ ಮಾಡಿದ ನಂತರ ತಾನು ಮನೆಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ಮಧ್ಯೆ ಸೆ.28ರ ತಡರಾತ್ರಿ ಜಗಳವಾಗಿ ಈ ಕೃತ್ಯ ನಡೆದಿದೆ. ತಮಿಳುನಾಡು ಮೂಲದ ಧರ್ಮಶೀಲನ್ ವೃತ್ತಿಯಲ್ಲಿ ಪೆಂಟರ್ ಕೆಲಸ ಮಾಡುತ್ತಿದ್ದು, ಮಂಜುಳ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೆ.28ರ ತಡರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಪತ್ನಿಗೆ 15ಕ್ಕೂ ಹೆಚ್ಚು ಬಾರಿ ಇರಿದು, ಕೊಲೆ ಮಾಡಿದ್ದಾನೆ. ನಂತರ ಆತನೂ ಸಹ ಅದೇ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ವ್ಯಕ್ತಿ ಮಂಗಳೂರಿನಲ್ಲಿ ನಾಪತ್ತೆ
ಮಂಗಳೂರು, ಸೆ.29: ಹಾಸನ ಜಿಲ್ಲೆಯ ಅರಸೀಕೆರೆ ಎಂಬಲ್ಲಿನ ವಡೇರಹಳ್ಳಿ ಮೂಲದ ನಗರದ ಎಕ್ಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದೇವರಾಜು ವಿ.ಇ. (48) ಎಂಬವರು ನಾಪತ್ತೆಯಾಗಿದ್ದಾರೆ. ಸೆ.25ರಂದು ಸಂಜೆಯ ಬಳಿಕ ಕಾಣೆಯಾಗಿದ್ದಾರೆ. ಸುಮಾರು 5.5 ಅಡಿ ಎತ್ತರದ, ಬಿಳಿ ಮೈಬಣ್ಣದ, ಸಾಧಾರಣ ಶರೀರದ, ದುಂಡು ಮುಖದ ದೇವರಾಜು ಕಾಣೆಯಾದಾಗ ಕೆಂಪು ಮತ್ತು ಕಂದು ಬಣ್ಣದ ಟಿ-ಶರ್ಟ್, ಆಕಾಶ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರಿನಲ್ಲಿ ಧಾರಾಕಾರ ಮಳೆ; ಭಾರೀ ಗಾಳಿ-ಮಳೆಯ ಎಚ್ಚರಿಕೆ
ಉಡುಪಿ, ಸೆ.29: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷ ವಾಗಿ ಬೈಂದೂರು ತಾಲೂಕಿನ ವಿವಿದೆಡೆ ಭಾರೀ ಮಳೆಯಾಗಿದ್ದು, ಮುಂದಿನ ಅಕ್ಟೋಬರ್ 2ರವರೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯೊಂದಿಗೆ ಗಾಳಿಯೂ ಬೀಸುವ ಹಾಗೂ ಅರಬ್ಬಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಎಚ್ಚರಿಕೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ನೀಡಿದೆ. ಇದರಿಂದಾಗಿ ಸಮುದ್ರದ ಕಡೆಯಿಂದ ಬಲವಾದ ಗಾಳಿ ಬೀಸಲಿದ್ದು, ಸಮುದ್ರ ಪ್ರಕ್ಷುಬ್ದವಾಗಿದ್ದು, ಎತ್ತರದ ಅಲೆಗಳು ದಡವನ್ನು ಅಪ್ಪಳಿಸಲಿವೆ ಎಂದು ಹವಾಮಾನ ಮುನ್ಸೂಚನೆಯನ್ನು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೀನುಗಾರರು ನದಿ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ತುರ್ತು ಸೇವೆಗೆ ಶುಲ್ಕ ರಹಿತ 1077, ದೂ.ಸಂಖ್ಯೆ: 0820-2574802, ತಹಶೀಲ್ದಾರರ ಕಚೇರಿಯ ಸಹಾಯವಾಣಿ ಸಂಖ್ಯೆಗಳಾದ ಉಡುಪಿ :0820-2520417, ಕುಂದಾಪುರ:08254-230357, ಕಾಪು: 0820- 2551444, ಬ್ರಹ್ಮಾವರ:0820-2560494 ಹಾಗೂ ಬೈಂದೂರು: 08254 -251657 ಮತ್ತು ಉಡುಪಿ ನಗರಸಭೆಯ ಸಹಾಯವಾಣಿ ಸಂಖ್ಯೆ: 0820-2593366 ಅಥವಾ 0820-2520306 ಅನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೈಂದೂರಿನಲ್ಲಿ 106ಮಿ.ಮೀ ಮಳೆ: ಕಳೆದ ಕೆಲವು ದಿನಗಳಲ್ಲಿ ಸುರಿಯುತ್ತಿರುವ ಮಳೆ ರವಿವಾರ ಬಿರುಸು ಪಡೆ ದಿದ್ದು, ಜಿಲ್ಲೆಯಲ್ಲಿ ಸರಾಸರಿ 42ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಅಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 106.6ಮಿ.ಮೀ. ಮಳೆಯಾದ ವರದಿ ಬಂದಿದೆ. ಉಳಿದಂತೆ ಕುಂದಾಪುರದಲ್ಲಿ 50.9ಮಿ.ಮೀ, ಹೆಬ್ರಿಯಲ್ಲಿ 26.8, ಕಾರ್ಕಳದಲ್ಲಿ 23.8, ಬ್ರಹ್ಮಾವರದಲ್ಲಿ 18.6, ಉಡುಪಿಯಲ್ಲಿ 16.8 ಹಾಗೂ ಕಾಪುವಿನಲ್ಲಿ 10.1ಮಿ.ಮೀ. ಮಳೆಯಾಗಿರುವುದಾಗಿ ಮಾಹಿತಿ ಬಂದಿದೆ.
ಸಮೀಕ್ಷ ಬೇಗ ಮುಗಿಸಿ ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗೆ ಮನವಿ
ಬೀದರ್: ಆದಷ್ಟು ಬೇಗ ಬೆಳೆ ಸಮೀಕ್ಷೆ ಮುಗಿಸಿ, ರೈತರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ನೇತ್ರತ್ವದ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸೋಮವಾರ ಮುಖ್ಯಮಂತ್ರಿಯವರ ಗೃಹದಲ್ಲಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಬೀದರ್ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿ ಜಿಲ್ಲೆಯ ರೈತರು ಬಹಳ ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಸಮೀಕ್ಷೆ ಬೇಗ ಮುಗಿಸಿ ಆದಷ್ಟು ಬೇಗ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಲಾಯಿತು. ಇವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಆದಷ್ಟು ಬೇಗ ಪರಿಹಾರ ನೀಡಲಾಗುವುದು ಎಂದು ಅಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಧರ್ಭದಲ್ಲಿ ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ್ ತಾಳಂಪಳ್ಳಿ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಪುಂಡಲಿಕರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿದ್ಯಾಸಾಗರ್ ಶಿಂದೆ, ಮಾಜಿ ಡಿಸಿಸಿ ಅದ್ಯಕ್ಷ ಬಸವರಾಜ್ ಬುಳ್ಳಾ, ಔರಾದ್ ತಾಲೂಕು ಮಾಜಿ ಕಾಂಗ್ರೆಸ್ ಅದ್ಯಕ್ಷ ಶಿವರಾಜ್ ದೇಶಮುಖ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೈಜಿನಾಥ್ ಯನಗುಂದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾನ್ಸಾ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ: ಸಿಧು ಮೂಸೆವಾಲಾರ ತಂದೆ
ಬಠಿಂಡಾ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ವೇಳೆ ತಾನು ಮಾನ್ಸಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ ಎಂದು ಮೃತ ಗಾಯಕ ಸಿಧು ಮೂಸೆವಾಲಾರ ತಂದೆ ಬಾಲ್ಕುರ್ ಸಿಂಗ್ ಹೇಳಿದ್ದಾರೆ. 2022ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸಿಧು ಮೂಸೆವಾಲಾ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಮಾನ್ಸಾದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಬಾಲ್ಕುರ್ ಸಿಂಗ್, ನಾನು ನನ್ನ ಪುತ್ರನನ್ನು ಕಳೆದುಕೊಂಡ ನಂತರ, ಮಾನ್ಸಾ ಕ್ಷೇತ್ರದ ಜನರು ನನಗೆ ಶಕ್ತಿ ತುಂಬಿದರು ಹಾಗೂ ನಮ್ಮ ಕುಟುಂಬದ ಬೆನ್ನಿಗೆ ನಿಲ್ಲುವುದನ್ನು ಮುಂದುವರಿಸಿದರು ಎಂದು ಸ್ಮರಿಸಿದ್ದಾರೆ. “ನಾವು ಚುನಾವಣೆಯಲ್ಲಿ ಹೋರಾಟ ನಡೆಸಲಿದ್ದೇವೆ. ನನಗೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ನನ್ನ ಶಕ್ತಿ” ಎಂದು ಅವರು ಜನರನ್ನುದ್ದೇಶಿಸಿ ಮನವಿ ಮಾಡಿದ್ದಾರೆ. “ವಿಧಾನಸಭೆಗೆ ಹೋಗಬೇಕು ಎಂಬ ನನ್ನ ಪುತ್ರನ ಬಯಕೆ ಅಪೂರ್ಣವಾಗಿತ್ತು. ನಾವು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಹಾಗೂ ಗೆಲುವು ಸಾಧಿಸಲಿದ್ದೇವೆ. ಆತನ ಬಯಕೆಯನ್ನು ಪೂರೈಸಲು ನಾನು ನನ್ನ ಪುತ್ರನ ಭಾವಚಿತ್ರವನ್ನು ವಿಧಾನಸಭೆಗೆ ಕೊಂಡೊಯ್ಯಲಿದ್ದೇನೆ” ಎಂದು ಅವರು ಘೋಷಿಸಿದ್ದಾರೆ. ಸಿಧು ಮೂಸೆವಾಲಾ ಎಂದೇ ಜನಪ್ರಿಯರಾಗಿದ್ದ ಶುಭ್ ದೀಪ್ ಸಿಂಗ್ ಸಿಧುರನ್ನು ಮೇ 29, 2022ರಲ್ಲಿ ಪಂಜಾಬ್ ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಧು ಮೂಸೆವಾಲಾ, ಆಪ್ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು.
ಕಲಬುರಗಿ| ಪ್ರವಾಹ ಪೀಡಿತ ಪ್ರದೇಶಕ್ಕೆ ಡಾ.ಶರಣಪ್ರಕಾಶ ಪಾಟೀಲ ಭೇಟಿ
ಕಲಬುರಗಿ: ಸೇಡಂ ತಾಲೂಕಿನ ಸಟಪಟನಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಗಿಣಾ ನದಿ ನೀರಿನ ಪ್ರವಾಹದಿಂದ ಕೆಲ ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಸೋಮವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿದರು. ಸಟಪಟನಳ್ಳಿ ಗ್ರಾಮಸ್ಥರಿಗೆ ಭೇಟಿಯಾದ ಸಚಿವ ಡಾ.ಶರಣಪ್ರಕಾಶ ಪಾಟೀಲ ಮನೆಗಳು ಸಂಪೂರ್ಣ ಹಾನಿಯಾದ ವರದಿ ಸಲ್ಲಿಕೆ ನಂತರ ಪರಿಹಾರ ಹಾಗೂ ಪ್ರಾಥಮಿಕ ಸಹಾಯ ಮಾಡಲಾಗುತ್ತದೆ ಎಂದು ಅಭಯದ ಮಾತುಗಳಾಡಿದರು. ಹೆಚ್ಚಿನ ತೊಂದರೆ ಕಂಡುಬಂದರೆ ತಕ್ಷಣವೇ ಗ್ರಾಮಸ್ಥರನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಸೂಚನೆ ನೀಡಿದರು. ಹಬ್ಬದ ನಡುವೆ ಈ ತರ ಪ್ರವಾಹ ಬಂದು ಜನರಿಗೆ ತೊಂದರೆಯಾಗಿದ್ದು ಮನೆಗಳಲ್ಲಿ ನೀರು ನುಗ್ಗಿ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾವಗಿರುವುದು ಶೋಚನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕಾಡಳಿತ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಅಗ್ನಿ ಶಾಮಕಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು
ಸದೃಢ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ
ಕಲಬುರಗಿ: ಸದೃಢ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಹೇಳಿದರು. ರವಿವಾರ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಗರದ ಸೇಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕಲಬುರಗಿ ಜಿಲ್ಲೆಯ 10 ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ,ಪದವಿ, ಸ್ನಾತಕೋತ್ತರ ಪದವಿಯ 75 ಶಿಕ್ಷಕರಿಗೆ ಅವರ ಸೇವೆಯನ್ನು ಗುರುತಿಸಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇವತ್ತಿನ ಕಾರ್ಯಕ್ರಮ ತುಂಬಾ ಶಿಸ್ತಿನಿಂದ ಹಾಗೂ ಜವಾಬ್ದಾರಿಯಿಂದ ನಿರಗುಡಿ ಸರ್, ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಡಾ ಮಾಜಿ ಅಧ್ಯಕ್ಷರಾದ ಶರಣಪ್ಪ ತಳವಾರ್ ಅವರು ಮಾತನಾಡುತ್ತಾ, ಮಕ್ಕಳ ಸಮಗ್ರ ವಿಕಾಸಕ್ಕೆ ಶಿಕ್ಷಕನೆ ಕಾರಣ. ಶಿಕ್ಷಕ ಮಾನವ ಜನಾಂಗಕ್ಕೆ ದಾರಿ ದೀಪ ಎಂದರು. ಸೋಮಶೇಖರ್ ಗೋಯನಾಯಕ ಮಾತನಾಡಿ, ತಂದೆ ತಾಯಿ ಮಗುವಿಗೆ ಭೌತಿಕ ದೇಹಕ್ಕೆ ಜೀವ ಕೊಟ್ಟರೆ ಶಿಕ್ಷಕ ಬೌದ್ಧಿಕ ಪ್ರಗತಿಗೆ ಅಡಿಪಾಯ ಆಗಿದ್ದಾನೆ. ಅಜ್ಞಾನ ಅಂಧಕಾರದಿಂದ ಬೆಳಕಿನ ಕಡೆ ಕೊಂಡೊಯ್ಯುವ ವ್ಯಕ್ತಿ ಶಿಕ್ಷಕನಾಗಿದ್ದಾನೆ ಎಂದು ಹೇಳಿದರು. ವೇದಿಕೆಯ ಮೇಲೆ ಶರಣಬಸವ ವಿಶ್ವವಿದ್ಯಾಲಯದ ಡಾ.ಲಕ್ಷ್ಮಿ ಪಾಟೀಲ್ ಮಾಕಾ, ಸೆಂಟ್ ಮೇರಿ ಚರ್ಚ್ ನ ಫಾದರ್ ಪ್ರವೀಣ್ ಹಾಗೂ ಸಿಪಿಐ ಮಾಂತೇಶ್ ಪಾಟೀಲ್ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಯ್ಯ ಗುತ್ತೇದಾರ್ ವಹಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಮಾರಂಭದಲ್ಲಿ 75 ಶಿಕ್ಷಕರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಡಾ. ಶರಣಬಸಪ್ಪ ವಡ್ಡನಕೇರಿ ಮಾಡಿದರು. ಡಾ ಚಿ.ಸಿ. ನಿಂಗಣ್ಣ ವಂದಿಸಿದರು. ಕಿರಣ್ ಪಾಟೀಲ್ ಪ್ರಾರ್ಥಿಸಿದರು. ಡಾ. ರಾಜಶೇಖರ್ ಮಾಂಗ್ ಹಾಗೂ ಗೋದಾವರಿ ಪಾಟಿಲ್ ಗೀತ ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಿವಾನಂದ ಖಜೂರಿ ಡಾ. ಪ್ರಹ್ಲಾದ್ ಬುರ್ಲಿ, ಡಾ. ವಿಜಯಕುಮಾರ್ ಪರುತೆ, ರೇವಣಸಿದ್ದಪ್ಪ ದುಃಖಾನ್, ಡಾ ಆನಂದ್ ಸಿದ್ದಾಮಣಿ, ಸಿದ್ದರಾಮ ಬೇತಾಳೆ,ಶಿವಶರಣಪ್ಪ ಉದನೂರ್, ಅಂಬಾರಾಯ ಕೋಣೆ, ಬಿಎಸ್ ಮಾಲಿಪಾಟೀಲ್, ನಾಗಲಿಂಯ್ಯ ಮಠಪತಿ, ಮಲ್ಲಿಕಾರ್ಜುನ್ ಪಾಲಮಾರ್, ಸಿದ್ದಪ್ಪ ತಳ್ಳಳ್ಳಿ ರಾಜೇಂದ್ರ ಜಳಕಿ, ಎಸ್. ಎಸ್ ಹೂಗಾರ ಸೇರಿದಂತೆ ಮತ್ತಿತರರು ಇದ್ದರು.
ಹಿರಿಯ ಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬುಗೆ ಆನ್ ಲೈನ್ ಮೂಲಕ 4 ಲಕ್ಷ ರೂ. ವಂಚನೆ
ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರಿಗೆ ಆನ್ ಲೈನ್ ಮೂಲಕ 4 ಲಕ್ಷ ರೂ.ಗಳ ವಂಚನೆಯಾಗಿದೆ. ಬಾಬು ಅವರು ತಮ್ಮ ರಕ್ತ ಕಾಶ್ಮೀರ ಎಂಬ ಚಿತ್ರದ ಬಿಡುಗಡೆಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಇದರ ನಡುವೆ ಅವರಿಗೆ ಪರಿಚಯವಾದ ನವೀನ್ ಕುಮಾರ್ ಎಂಬಾತ ತೆಲುಗು ಡಬ್ಬಿಂಗ್ ರೈಟ್ಸ್ ಕೇಳಿಕೊಂಡು ಫೋನ್ ನಲ್ಲೇ ವ್ಯಾಪಾರ ಮಾತನಾಡಿದ್ದಾನೆ. ಅಗ್ರಿಮೆಂಟ್ ಖರ್ಚುಗಳಿಗಾಗಿ 4 ಲಕ್ಷ ರೂ.ಗಳನ್ನು ಹಾಕಿಸಿಕೊಂಡು ಆನಂತರ ಎಸ್ಕೇಪ್ ಆಗಿದ್ದಾನೆ. ಮೋಸ ಹೋಗಿರುವ ನಿರ್ದೇಶಕರಾದ ಬಾಬು ಅವರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು, ಸೆ.29: ಆರಂಭಿಕ ಪ್ರಮಾಣಪತ್ರ(ಸಿಸಿ) ಮತ್ತು ಸ್ವಾಧೀನ ಪ್ರಮಾಣಪತ್ರ(ಒಸಿ) ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಲು ಇರುವ ಕಾನೂನು ತೊಡಕುಗಳ ಬಗ್ಗೆ ಅ.8ರಂದು ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸೋಮವಾರ ಇಲ್ಲಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ಸಿಸಿ ಮತ್ತು ಒಸಿ ಇಲ್ಲದೆ ಕಟ್ಟಡಗಳು ನಿರ್ಮಾಣಗೊಂಡಿದ್ದು, ಇಂತಹ ಕಟ್ಟಡಗಳನ್ನು ಸುಪ್ರಿಂ ಕೋರ್ಟ್ ಆದೇಶದಂತೆ ನಿರ್ನಾಮ ಮಾಡಬೇಕಾಗುತ್ತದೆ. ಆದರೆ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸಾಧ್ಯವಿಲ್ಲ. ಸರಕಾರದ ನಿರ್ಧಾರದಿಂದ ಜನರಿಗೆ ಅನುಕೂಲವಾಗಬೇಕು ಎಂದರು. ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳ್ಳುವ ಮುಂಚೆ ಸಲ್ಲಿಕೆಯಾಗಿರುವ ಮಾರ್ಚ್ 2025ರವರೆಗಿನ ಅರ್ಜಿಗಳನ್ನು ಪರಿಗಣಿಸಿ ಒಸಿ ಮತ್ತು ಸಿಸಿಯಿಂದ ವಿನಾಯ್ತಿಗೊಳಿಸಿ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ಬಗ್ಗೆ ಕಾನೂನಿನ ಸಾಧ್ಯತೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲು ಅ.8ರಂದು ಸಭೆ ನಡೆಸಬೇಕು. ಈ ಸಭೆಯಲ್ಲಿ ಸರಕಾರದ ಮುಖ್ಯಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖಾ ಸಚಿವರು, ಸರಕಾರದ ಅಡ್ವೋಕೇಟ್ ಜನರಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಾಗಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಸುಪ್ರೀಂಕೋರ್ಟ್ನ ಆದೇಶ ಭಾರತದ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತಿದ್ದೂ, ಎಲ್ಲ ರಾಜ್ಯಗಳೂ ಆದೇಶವನ್ನು ಅನುಷ್ಠಾನಗೊಳಿಸುತ್ತಿವೆಯೇ ಎಂದು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡುವ ಸಾಧ್ಯತೆ ಇದೆಯೇ ಎಂದು ಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಸದಿಲ್ಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ದೇಶದ ಗಡಿಗಳನ್ನು ರಕ್ಷಿಸುವ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಸುಧಾರಿಸಲು ಸೋಮವಾರ ಗಡಿ ಭದ್ರತಾ ಪಡೆಯು ತನ್ನ ಮುಖ್ಯ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆ ಚಾಲಿತ ಸೌಲಭ್ಯಗಳುಳ್ಳ ನೂತನ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಗೆ ಚಾಲನೆ ನೀಡಿತು. ಈ ಕೇಂದ್ರವನ್ನು ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಉದ್ಘಾಟಿಸಿದರು. ಈ ಕೇಂದ್ರಕ್ಕೆ ನಿರ್ಣಯ ನೆರವು ವ್ಯವಸ್ಥೆ (Decision Support System) ಎಂದು ಹೆಸರಿಸಲಾಗಿದ್ದು, ಈ ಕೇಂದ್ರವು ಎಲ್ಲ ಹಂತದ ಕಮಾಂಡರ್ ಗಳ ನಿರ್ಣಯ ಕೈಗೊಳ್ಳುವ ಸಾಮರ್ಥ್ಯವನ್ನು ವೃದ್ಧಿಸಲಿದೆ. “ತಂತ್ರಜ್ಞಾನ ಪರಿಹಾರಗಳನ್ನು ಸಜ್ಜುಗೊಳಿಸುವ ಮೂಲಕ, ಭವಿಷ್ಯದಲ್ಲಿ ಉದ್ಭವಿಸುವ ಗಡಿ ಭದ್ರತಾ ಅಪಾಯಗಳನ್ನು ಎದುರಿಸಲು ಗಡಿ ಭದ್ರತಾ ಪಡೆಗೆ ಸಾಧ್ಯವಾಗಲಿದೆ” ಎಂದು ಗಡಿ ಭದ್ರತಾ ಪಡೆ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ಹೇಳಲಾಗಿದೆ.
ಎಲ್ಲೂರು, ಸಾಂತೂರಿನ 942 ಎಕ್ರೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ: ಉಡುಪಿ ಡಿಸಿ ಸ್ವರೂಪ ಟಿ.ಕೆ
ಉಡುಪಿ, ಸೆ.29: ಕಾಪು ತಾಲೂಕು ಪಡುಬಿದ್ರಿ ಬಳಿಯ ಎಲ್ಲೂರು ಹಾಗೂ ಸಾಂತೂರುಗಳ ಸುಮಾರು 941.98 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕೆ ಪ್ರದೇಶಗಳ ವಿಸ್ತರಣಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ರಫ್ತು ಉತ್ತೇಜನ ಸಮಿತಿ ಸಭೆ, ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ ಸಭೆ ಹಾಗೂ ಪಿ.ಎಂ.ವಿಶ್ವಕರ್ಮ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಇದೇ ವೇಳೆ ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಾಣಗೊಳ್ಳುವ ಹೆಬ್ರಿ ತಾಲೂಕು ಶಿವಪುರದಲ್ಲಿ 74.84 ಎಕರೆ, ಕೆರೆಬೆಟ್ಟುನಲ್ಲಿ 38.75 ಎಕರೆ, ನಿಟ್ಟೆಯಲ್ಲಿ 50.42 ಎಕರೆ ಸೇರಿದಂತೆ ಒಟ್ಟು 165.98 ಎಕರೆ ಜಮೀನಿನ ಗಡಿ ಗುರುತಿಸುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದು ಅವರು ಕೆಐಎಡಿಬಿ ಅಭಿಯಂತರರಿಗೆ ಸೂಚನೆಗಳನ್ನು ನೀಡಿದರು. ಕೈಗಾರಿಕೆಗಳ ಸ್ಥಾಪನೆಗೆ ನಿವೇಶನ ಮಂಜೂರಾಗಿರುವ ಕೈಗಾರಿಕೋದ್ಯಮಿ ಗಳು ಘಟಕಗಳನ್ನು ಕೂಡಲೇ ಸ್ಥಾಪಿಸಬೇಕು.ಅವರಿಗೆ ಹೆಚ್ಚುವರಿ ಕಾಲಾವಕಾಶ ವನ್ನು ಕಲ್ಪಿಸಲಾಗುವುದಿಲ್ಲ. ಘಟಕ ಪ್ರಾರಂಭಿಸಲಿದ್ದರೆ ನಿವೇಶನ ವನ್ನು ಮರುಹಂಚಿಕೆ ಮಾಡಲಾಗುವುದು ಎಂದು ಸ್ವರೂಪ ಟಿ.ಕೆ ತಿಳಿಸಿದರು. ಘಟಕ ಸ್ಥಾಪಿಸಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲು ನಿವೇಶನವನ್ನು ನೀಡಿದ್ದರೂ ಸಹ ಕೈಗಾರಿಕಾ ಯೋಜನೆಗಳ ಅನುಷ್ಠಾನವನ್ನು ಕಾಲಮಿತಿ ಯೊಳಗೆ ಅನೇಕರು ಪ್ರಾರಂಭಿಸುತ್ತಿಲ್ಲ. ಘಟಕಗಳ ಸ್ಥಾಪನೆಗೆ ಸಮರ್ಪಕ ಕಾರಣಗಳು ಕಂಡುಬರದೇ ಇದ್ದಲ್ಲಿ ಅಂತಹ ನಿವೇಶನಗಳನ್ನು ಕೈಗಾರಿಕೆ ಪ್ರಾರಂಭಿಸಲು ನಿವೇಶನ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿರುವ ಇತರರಿಗೆ ಮರು ಹಂಚಿಕೆ ಮಾಡಲು ಕ್ರಮ ವಹಿಸಬೇಕೆಂದು ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಆದ್ಯತೆಯ ಮೇಲೆ ಕೈಗೊಂಡು ರಸ್ತೆ ಕಾಮಗಾರಿಯನ್ನು ಅಭಿವೃದ್ಧಿಪಡಿಸಬೇಕು ಎಂದ ಜಿಲ್ಲಾಧಿಕಾರಿಗಳು, ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆಯ ಕೈಗಾರಿಕಾ ಪ್ರದೇಶದ ನಿವೇಶನಗಳ ನಮೂನೆ 9/11 ದಾಖಲೆಗಳನ್ನು ಈಗಾಗಲೇ 16 ಘಟಕಗಳಿಗೆ ನೀಡಿದ್ದು, ಬಾಕಿ ಉಳಿದ 8 ಘಟಕಗಳಿಗೆ ಕೂಡಲೇ ಅವುಗಳನ್ನು ಮಾಡಿಕೊಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಕೈಗಾರಿಕಾ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿಗೆ ಅಳವಡಿಸಿರುವ 100 ಕೆ.ವಿ. ವಿದ್ಯುತ್ ಪರಿವರ್ತಕವನ್ನು 250 ಕೆ.ವಿ.ಗೆ ಹೆಚ್ಚಿಸುವ ಟ್ರಾನ್ಸ್ಫಾರ್ಮ್ ಅಳವಡಿಸುವ ಕಾರ್ಯವನ್ನು ಮುಂದಿನ ಒಂದು ವಾರದ ಒಳಗೆ ಕೈಗೊಳ್ಳಬೇಕೆಂದು ಮೆಸ್ಕಾಂ ಇಲಾಖೆಯ ಅಭಿಯಂತರರಿಗೆ ಅವರು ಸೂಚಿಸಿದರು. ವಿಶ್ವಕರ್ಮ ಯೋಜನೆ: ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಪಿ.ಎಂ ವಿಶ್ವಕರ್ಮ ಯೋಜನೆಯ 6,274 ಫಲಾನುಭವಿ ಗಳಿಗೆ ಈಗಾಗಲೇ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದೆ. 3,916 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಸಾಲ ಸೌಲಭ್ಯ ಮಂಜೂರಾಗಿದ್ದು, 3,573 ಫಲಾನುಭವಿಗಳ ಖಾತೆಗೆ ಆರ್ಥಿಕ ಸಹಾಯಧನವನ್ನು ಪಾವತಿಸಲಾಗಿದೆ ಎಂದು ವಿವರಿಸಿದ ಡಿಸಿ, ಈ ಯೋಜನೆಯಡಿ ಆಯ್ಕೆಯಾದವರಿಗೆ ಕೌಶಲ್ಯ ತರಬೇತಿಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ನೀಡುವ ಜೊತೆಗೆ ಬ್ಯಾಂಕ್ಗಳು ಆರ್ಥಿಕ ಸೌಲಭ್ಯವನ್ನು ಸಹ ಒದಗಿಸಬೇಕು ಎಂದರು. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಆಯುಕ್ತ ಮಂಹಾತೇಶ ಹಂಗರಗಿ, ಖಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ‘ಜಿಲ್ಲೆಯಲ್ಲಿ ರಫ್ತು ಉದ್ಯಮವನ್ನು ಉತ್ತೇಜಿಸಲು ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ರಫ್ತನ್ನು ಹೆಚ್ಚಿಸಲು ಸಹ ಕ್ರಮಕೈಗೊಳ್ಳಬೇಕು. ಮರೈನ್ ಪ್ರೊಡಕ್ಟ್ (ಸಮುದ್ರ ಉತ್ಪನ್ನ) ಗಳ ರಫ್ತಿಗೆ ಇರುವ ಸಮಸ್ಯೆಗಳನ್ನು ಪರಿಹರಿಸಲು ಸೆಂಟ್ರಲೈಸ್ಡ್ ಸೀ ಫುಡ್ ಪಾರ್ಕ್ಗಳ ನಿರ್ಮಾಣ ಹಾಗೂ ಎಕ್ಸ್ಪೋರ್ಟ್ ಇನ್ಸ್ಪೆಕ್ಷನ್ ಏಜೆನ್ಸಿಗಳನ್ನು ಹೆಚ್ಚುವರಿಯಾಗಿ ನೇಮಿಸಲು ಕ್ರಮವಹಿಸಬೇಕು.’ -ಸ್ವರೂಪ ಟಿ.ಕೆ., ಜಿಲ್ಲಾಧಿಕಾರಿ
ಬೆಂಗಳೂರು, ಸೆ.29: ರಾಜ್ಯದ ವಿವಿಧ ನಿಗಮ-ಮಂಡಳಿ ನೇಮಕದಲ್ಲಿ ಬಾಕಿ ಉಳಿದಿದ್ದ ಐದು ನಿಗಮ ಮಂಡಳಿಗಳಿಗೂ ಅಧ್ಯಕ್ಷರ ನೇಮಕ ಮಾಡಲಾಗಿದ್ದು, ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅದಲು-ಬದಲು ಮಾಡಿ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನಿಕೇತ್ ರಾಜ್ ಮೌರ್ಯ ಅವರಿಗೆ ಇದೀಗ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಿಎಂಟಿಸಿ ಅಧ್ಯಕ್ಷರಾಗಿ ವಿ.ಎಸ್.ಆರಾಧ್ಯ ಅವರನ್ನು ನೇಮಕ ಮಾಡಲಾಗಿದೆ. ಸೆ.25ರಂದು ಬಿಎಂಟಿಸಿ ಅಧ್ಯಕ್ಷರನ್ನಾಗಿ ನಿಕೇತ್ರಾಜ್ ಮೌರ್ಯ ಅವರನ್ನು ನೇಮಕ ಮಾಡಲಾಗಿತ್ತು. ಬಳಿಕ ನಿಕೇತ್ರಾಜ್ ಮೌರ್ಯ ಅಧಿಕಾರವನ್ನೂ ಸ್ವೀಕಾರ ಮಾಡಿದ್ದರು. ಆದರೆ, ಸೆ.29ರಂದು ಅವರನ್ನು ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ಮರು ನೇಮಿಸಿ ಆದೇಶದಲ್ಲಿ ತಿಳಿಸಲಾಗಿದೆ. ಇನ್ನು ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ವಿ.ಎಸ್.ಆರಾಧ್ಯ ಅವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮರು ನೇಮಿಸಲಾಗಿದೆ. ಇನ್ನು ಬಾಕಿ ಉಳಿದ 5 ನಿಗಮ ಮಂಡಳಿಗಳ ಪೈಕಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಸೈಯದ್ ಮೆಹಮೂದ್ ಚಿಸ್ತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ಶರಣಪ್ಪ ಸಲಾದ್ ಪುರ್, ರಾಜ್ಯ ಬೀಜ ನಿಗಮ ನಿಯಮಿತ ಅಧ್ಯಕ್ಷರನ್ನಾಗಿ ಆಂಜನಪ್ಪ, ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ನೀಲಕಂಠರಾವ್ ಎಸ್. ಮೂಲಗೆ ಹಾಗೂ ಜವಾಹರ ಬಾಲಭವನ ಸೊಸೈಟಿ ಉಪಾಧ್ಯಕ್ಷರನ್ನಾಗಿ ಅನಿಲ್ ಕುಮಾರ್ ಜಮಾದಾರ್ ಅವರನ್ನು ನೇಮಿಸಿ ಆದೇಶದಲ್ಲಿ ತಿಳಿಸಲಾಗಿದೆ.
ಹೊಸದಿಲ್ಲಿ: ಮಂಗಳೂರಿನ ಮುಕ್ಕಾದ ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಮೆಟೀರಿಯಲ್ ಸೈನ್ಸಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಹಾಗೂ ಪ್ರಧಾನ ಸಂಶೋಧನಾ ವಿಜ್ಞಾನಿಯಾದ ಯು.ಸಂಧ್ಯಾ ಶೆಣೈ ಅವರು ಸೆಪ್ಟೆಂಬರ್ 19ರಂದು ಪ್ರಕಟಗೊಂಡಿರುವ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ‘updated sciencewide author databases of standardised citation indicators’ನಲ್ಲಿ ಸತತ ಮೂರನೆಯ ವರ್ಷವೂ ಶೇ. 2ರಷ್ಟು ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಶ್ರೇಯಾಂಕವು ಸಂಯುಕ್ತ ಅಂಕವನ್ನು ಆಧರಿಸಿದ್ದು, ಸಂಶೋಧನಾ ಕೆಲಸದ ಪರಿಣಾಮದ ಮೇಲೆ ಗಮನ ಕೇಂದ್ರೀಕರಿಸಿದೆ. ಈ ಅಂಕವನ್ನು ಆಗಸ್ಟ್ 1, 2025ರಂತೆ ಎಲ್ಲ ಪ್ರಬಂಧ ಲೇಖಕರ ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ಲೆಕ್ಕ ಮಾಡಲಾಗಿದೆ. ಯು.ಸಂಧ್ಯಾ ಶೆಣೈ ಅವರ ಸಂಶೋಧನಾ ಕಾರ್ಯವು ಮುಖ್ಯವಾಗಿ ದಕ್ಷ ಉಷ್ಣ ವಿದ್ಯುತ್ ಸಾಮಗ್ರಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ, ತ್ಯಾಜ್ಯ ಉಷ್ಣತೆಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವತ್ತ ಕೇಂದ್ರೀಕರಿಸಿದೆ.
ಬೆಂಗಳೂರು | ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಢಿಕ್ಕಿ; ವಿದ್ಯಾರ್ಥಿನಿ ಮೃತ್ಯು
ಬೆಂಗಳೂರು, ಸೆ.29 : ರಸ್ತೆ ಗುಂಡಿ ತಪ್ಪಿಸುವ ಯತ್ನದಲ್ಲಿ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ನಗರದ ಬೂದಿಗೆರೆ ಕ್ರಾಸ್ ಬಳಿ ನಡೆದಿದೆ. ಸೆ.29ರ ಸೋಮವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ಟಿಪ್ಪರ್ ಲಾರಿ ಹರಿದ ಪರಿಣಾಮ ಧನುಶ್ರೀ(22) ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಸಮೇತ ಚಾಲಕ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದರು. ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದ ಧನುಶ್ರೀ, ದ್ವಿಚಕ್ರ ವಾಹನದಲ್ಲಿ ಸೋಮವಾರ ಬೆಳಗ್ಗೆ ಕಾಲೇಜಿನತ್ತ ತೆರಳುತ್ತಿದ್ದರು. ಬೂದಿಗೆರೆ ಕ್ರಾಸ್ ಬಳಿ ಸಾಗುವಾಗ ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಯತ್ನಿಸಿದ ಧನುಶ್ರೀಯ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಢಿಕ್ಕಿಯಾಗಿತ್ತು. ಈ ವೇಳೆ ನೆಲಕ್ಕೆ ಬಿದ್ದಾಗ ಆಕೆಯ ದೇಹದ ಮೇಲೆ ಟಿಪ್ಪರ್ ಹರಿದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಧನುಶ್ರೀಯ ತಾಯಿ ನೀಡಿರುವ ದೂರಿನನ್ವಯ ಅವಲಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳ | ಇಪತ್ತು ವರ್ಷ ಹಳೆಯ ಸರ್ಕಾರಿ ಹಣ ದುರುಪಯೋಗ ಪ್ರಕರಣ: ಆರೋಪಿಗೆ ದಂಡ ಸಹಿತ 7 ವರ್ಷ ಜೈಲು ಶಿಕ್ಷೆ
ಕೊಪ್ಪಳ: ಸರ್ಕಾರಿ ಹಣ ದುರುಪಯೋಗಕ್ಕೆ ಸಂಬಂಧಿಸಿದ 20 ವರ್ಷ ಹಳೆಯ ಪ್ರಕರಣದ ತೀರ್ಪನ್ನು ಕೊಪ್ಪಳ ಜೆಎಂ ನ್ಯಾಯಾಲಯವು ನೀಡಿದೆ. ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೊಪ್ಪಳ ಭಾಗ್ಯನಗರ ಶಾಖೆಯ ಜೂನಿಯರ್ ಅಸಿಸ್ಟೆಂಟ್ ಅಧಿಕಾರಿ ಜಿ.ಮಂಜುನಾಥ ಎಂಬವರಿಗೆ ಕೊಪ್ಪಳ ಸಿಜೆಎಂ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.10 ಸಾವಿರಗಳ ದಂಡವನ್ನು ವಿಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿ ಪಿಐ ಪಿ.ಶಿವಲಿಂಗರಾದ್ಯ ಅವರು ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ ಅಪರಾಧಕ್ಕೆ ಭಾ.ದಂ.ಸಂ. ಕಲಂ 409 ಅಡಿಯಲ್ಲಿನ ಅಪರಾಧಕ್ಕೆ 7 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.10,000/- ಗಳ ದಂಡವನ್ನು ವಿಧಿಸಿ ಮುಖ್ಯ ನ್ಯಾಯಾಧೀಶರಾದ ಮಲ್ಕಾರಿ ರಾಮಪ್ಪ ಒಡೆಯರ್ ತೀರ್ಪು ನೀಡಿದ್ದಾರೆ. ಪ್ರಕರಣದ ಹಿನ್ನೆಲೆ: 2002-03ನೇ ಸಾಲಿನಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೊಪ್ಪಳ ಭಾಗ್ಯನಗರ ಶಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಗೋರೂರಿನ ಜಿ.ಮಂಜುನಾಥ ಎಂಬವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ರೂ.2,66,100/- ಮೌಲ್ಯದ 20 ಬೇಲ್ಸ್ಗಳ ಪೈಕಿ 4 ಬೇಲ್ಸ್ಗಳನ್ನು ಮರಳಿ ಒಪ್ಪಿಸಿದ್ದು, ಉಳಿದ 16 ಬೇಲ್ಸ್ಗಳನ್ನು ಇತರರಿಗೆ ಮಾರಾಟ ಮಾಡಿ, ಅದರಿಂದ ರೂ.2,12,100/- ಗಳನ್ನು ಪಡೆದು ಅದನ್ನು ಸರ್ಕಾರಕ್ಕೆ ಭರಿಸದೇ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 150/2005 ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವಸಂತ ಅವರು ವಾದ ಮಂಡಿಸಿದ್ದರು. ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸಿ.ಎಚ್.ಸಿ 15 ಲತೀಫ್, ಸಿ.ಎಚ್.ಸಿ 183 ಸೂರ್ಯಕಾಂತ, ಪಿಸಿ 156 ಗವಿಸಿದ್ದಪ್ಪ ಹಾಗೂ ಪಿಸಿ 605 ಮಂಜುನಾಥ ಕಡಗತ್ತಿ ಅವರು ಸಮಯಕ್ಕೆ ಸರಿಯಾಗಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ ನಗರ ಸಭೆ: ಸ್ಥಾಯಿ ಸಮಿತಿಗೆ ಅಧ್ಯಕ್ಷರ ನೇಮಕಕ್ಕೆ ಆಕ್ಷೇಪ
ಉಳ್ಳಾಲ: ನಗರ ಸಭೆ ಸ್ಥಾಯಿ ಸಮಿತಿಗೆ ಮೂರು ಮಂದಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಗೆ ಪರ - ವಿರೋಧ ಚರ್ಚೆಗಳು ನಡೆದು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಉಳ್ಳಾಲ ನಗರ ಸಭೆ ಸಾಮಾನ್ಯ ಸಭೆ ಯಲ್ಲಿ ನಡೆಯಿತು. ನಗರ ಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ದಿನಕರ್ ಉಳ್ಳಾಲ ಅವರು ಸ್ಥಾಯಿ ಸಮಿತಿ ಗೆ ಮೂರು ಮಂದಿ ಅಧ್ಯಕ್ಷರ ನೇಮಕಾತಿ ಬಗೆ ಕಾರ್ಯ ಸೂಚಿ ಪಟ್ಟಿಯಲ್ಲಿ ಪ್ರಸ್ತಾಪಿಸಿಲ್ಲ. ಅವರ ನೇಮಕಾತಿ ಆದ ಬಗೆ ನಿರ್ಣಯ ಆಗದೇ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮೂವರು ಅಧಿಕಾರ ವಹಿಸಿದ್ದು ಹೇಗೆ ? ಸ್ಥಾಯಿ ಸಮಿತಿ ಗೆ ಈ ರೀತಿ ಅಧ್ಯಕ್ಷರ ನೇಮಕ ಸರಿಯಲ್ಲ. ಜೆಡಿಎಸ್ ನಿಂದ ಕೌನ್ಸಿಲರ್ ಆಗಿ ಆಯ್ಕೆ ಆದವರು ಅವಧಿ ಮುಗಿಯುವ ಮೊದಲೇ ಕಾಂಗ್ರೆಸ್ ಸೇರಿ ಸ್ಥಾಯಿ ಸಮಿತಿಗೆ ಅಧ್ಯಕ್ಷ ಹೇಗೆ ಆಗುತ್ತಾರೆ? ಅವರನ್ನು ಅಮಾನತು ಮಾಡಬೇಕು ಎಂದರು. ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತೇಜು ಮೂರ್ತಿ ಮಾತನಾಡಿ ಸ್ಥಾಯಿ ಸಮಿತಿಗೆ ಮೂವರ ಅಧ್ಯಕ್ಷರ ನೇಮಕಕ್ಕೆ ತೀರ್ಮಾನ ಆಗಿದೆ. ಜಿಲ್ಲಾಧಿಕಾರಿ , ಶಾಸಕರ ಸೂಚನೆ ಮೇರೆಗೆ ಆಯ್ಕೆ ನಡೆದಿದೆ ಎಂದಾಗ ನಿರ್ಣಯ ಆಗಿರುವ ಬಗ್ಗೆ ಮಾಹಿತಿ ನೀಡಿ ಎಂದು ದಿನಕರ್ ಉಳ್ಳಾಲ ಪಟ್ಟು ಹಿಡಿದರು. ಈ ವಿಚಾರದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ಜಬ್ಬಾರ್ ಮಾತನಾಡಿ, ದಿನಕರ್ ಉಳ್ಳಾಲ ಜೆಡಿಎಸ್ ಗೆ ರಾಜೀನಾಮೆ ನೀಡಿದ್ದಾರೆ ಅವರು ಯಾವ ಪಕ್ಷದಲ್ಲಿ ಇದ್ದಾರೆ ಎಂದು ಪ್ರಶ್ನಿಸಿದರು. ಕುಡಿಯುವ ನೀರು ಪೈಪ್ ಲೈನ್ ನಲ್ಲಿ ಚರಂಡಿ ನೀರು ಮಿಶ್ರಿತ ಗೊಂಡು ಸರಬರಾಜು ಆಗುತ್ತಿದೆ.60 ಮನೆಗಳಿಗೆ ಕಲುಷಿತ ನೀರು ಹೋಗುತ್ತಿದೆ. ಮೂರು ವಾರ್ಡ್ ಗಳಲ್ಲಿ ಈ ಸಮಸ್ಯೆ ಇದೆ.ಇದನ್ನು ಇಂಜಿನಿಯರ್ ಗೆ ತೋರಿಸಿ ದ್ದೇವೆ. ಇದರಿಂದ ಜನರಿಗೆ ಜನರಿಗೆ ತೊಂದರೆ ಆಗುತ್ತಿದೆ. ಅಲ್ಲದೆ ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿ ಗೆ ಗಮ್ ಬಳಕೆ ಮಾಡುವುದು ಅಪಾಯಕಾರಿ.ಇದರಿಂದ ವಾಂತಿಭೇದಿ ರೋಗ ಬಂದಿದೆ.ಈ ಬಗ್ಗೆ ಕ್ರಮ ಆಗಬೇಕು ಎಂದು ಅಯ್ಯೂಬ್ ಆಗ್ರಹಿಸಿದರು. ಅಸ್ಗರ್ ಮಾತನಾಡಿ,ಕುಡಿಯುವ ನೀರಿನ ಸಮಸ್ಯೆಯೇ ಬಗೆ ಕರೆ ಮಾಡಿದರೆ ಎರಡು ದಿನ ಬಿಟ್ಟು ಬರುತ್ತಾರೆ. ಇದರಿಂದ ಸಮಸ್ಯೆ ಇತ್ಯರ್ಥ ಆಗದು ಎಂದರು. 1.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕಾಮಗಾರಿ ಅವ್ಯವಸ್ಥೆ ಆದರೆ ಹೇಗೆ, ಇದನ್ನು ಜವಾಬ್ದಾರಿ ಯುತ ವಾಗಿ ನಿರ್ವಹಣೆ ಮಾಡಬೇಕಲ್ವೇ ಎಂದು ದಿನಕರ್ ಉಳ್ಳಾಲ ಅಧಿಕಾರಿಗಳ ಗಮನ ಸೆಳೆದರು. ಅಮೃತ 20 ಕುಡಿಯುವ ನೀರಿನ ಯೋಜನೆ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಮಾತನಾಡಿ, ಇದನ್ನು ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು. ಚೆಂಡು ಗುಡ್ಡೆ, ಮಾಸ್ತಿಕಟ್ಟೆ ಸಹಿತ ನಗರ ಸಭೆ ವ್ಯಾಪ್ತಿಯ ಎಲ್ಲಾ ರಸ್ತೆಗಳು ಹೊಂಡಗಳಿಂದ ತುಂಬಿವೆ. ಈ ಹೊಂಡ ಮುಚ್ಚುವ ಕಾರ್ಯ ಆಗುತ್ತಿಲ್ಲ. ಚೆಂಡು ಗುಡ್ಡೆ ಬಳಿ ಪರವಾನಿಗೆ ಇಲ್ಲದೆ ಏಳು ಅಂತಸ್ತಿನ ಕಟ್ಟಡ ನಿರ್ಮಾಣ ಆಗುತ್ತಿದೆ. ಇದರಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು. ಹೊಂಡಗಳ ರಸ್ತೆ ಗುರುತಿಸಿ ಶೀಘ್ರ ಕಾಮಗಾರಿ ಮಾಡಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜು ಮೂರ್ತಿ ಸಭೆಗೆ ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ನೇಮಕದ ಬಗ್ಗೆ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ ಬಗೆ ದಿನಕರ್ ಉಳ್ಳಾಲ ಪ್ರಶ್ನಿಸಿ ದಾಗ ವ್ಯಾಪಕ ಚರ್ಚೆ ನಡೆಯಿತು. ನಗರಸಭೆ ವತಿಯಿಂದ ಜಾಹೀರಾತು ಮೊತ್ತ ನೀಡಲಾಗಿಲ್ಲ ಎಂದು ಅಧ್ಯಕ್ಷ ಶಶಿಕಲಾ ಹೇಳಿದರು.ಬಿಲ್ ಇಲ್ಲದೇ ಹಣ ನೀಡುವುದು ಹೇಗೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಖಲೀಲ್ ಪ್ರಶ್ನಿಸಿದರು. 2018-19 ನೇ ಸಾಲಿನ ಎಸ್ ಎಫ್ ಸಿ ವಿಶೇಷ ಅನುದಾನ ದಡಿ ಕೆ.ಪಿ.ಪಿ. ಮುಖಾಂತರ ಟೆಂಡರ್ ಕರೆದ ಕಾಮಗಾರಿಗೆ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಉಳ್ಳಾಲ ದರ್ಗಾ ಉರೂಸ್ ಸಮಾರಂಭಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಗಮಿಸಿದ ಸಂದರ್ಭ ವೇದಿಕೆಯಿಂದ ಹಿಡಿದು 10 ಮೀ.ವ್ಯಾಪ್ತಿಯಲ್ಲಿ ಎರಡು ಶೌಚಾಲಯ ನಿರ್ಮಾಣಕ್ಕೆ 60,000 ರೂ. ಪಾವತಿಗೆ ಎಸ್ ಡಿಪಿಐ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಆದೇಶ ಮೇರೆಗೆ ನಡೆಯುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಗೆ ದೂರದೂರುಗಳ ಶಿಕ್ಷಕರ ನೇಮಕಾತಿ ಮಾಡಬಾರದು. ಅವರಿಗೆ ಸಮೀಕ್ಷೆ ನಡೆಸಲು ಆಗುವುದಿಲ್ಲ. ದಿನಕ್ಕೆ ಒಂದು ಸಮೀಕ್ಷೆ ಕಷ್ಟದಲ್ಲಿ ಆಗು ತ್ತದೆ. ಇದರ ಬದಲು ಹತ್ತಿರದ ಶಾಲೆಗಳ ಶಿಕ್ಷಕರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಕಾಶ ನೀಡಬೇಕು ಎಂದು ಕೌನ್ಸಿಲರ್ ದಿನಕರ್ ಅವರು ಗ್ರಾಮಕರಣಿಕ ಸುರೇಶ್ ಅವರ ಗಮನ ಸೆಳೆದರು. ಪೈಪ್ ಲೈನ್ ಕಾಮಗಾರಿಯಿಂದ ಇಂಟರ್ ಲಾಕ್ ಹಾನಿ ಆಗಿದೆ.ಅದನ್ನು ದುರಸ್ತಿ ಮಾಡುವ ಜವಾಬ್ದಾರಿ ಅಮೃತ್ 2.0 ಯೋಜನೆ ಯ ಅಧಿಕಾರಿಗಳದ್ದು, ಇದನ್ನು ದುರಸ್ತಿ ಯಾಕೆ ಮಾಡಿಲ್ಲ ಎಂದು ಗೀತಾ ಬಾಯಿ ಪ್ರಶ್ನಿಸಿದರು. ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿ ಬಗೆ ವ್ಯಾಪಕ ಚರ್ಚೆ ನಡೆಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶ್ರಫ್, ಖಲೀಲ್, ವೀಣ ಶಾಂತಿ ಡಿ ಸೋಜ ಉಪಸ್ಥಿತರಿದ್ದರು.
‘ಬಿಡದಿ ಟೌನ್ಶಿಪ್’ ಕಾಂಗ್ರೆಸ್-ಜೆಡಿಎಸ್ ಮುಖಂಡರ ನಡುವೆ ಜಟಾಪಟಿ
ಬೆಂಗಳೂರು, ಸೆ. 29: ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯ ‘ಬಿಡದಿ ಟೌನ್ಶಿಪ್’ ವಿಚಾರ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ(ಜೆಡಿಎಸ್) ನಡುವೆ ಆರೋಪ-ಪ್ರತ್ಯಾರೋಪ, ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಸೋಮವಾರ ಇಲ್ಲಿನ ಸದಾಶಿವನಗರದಲ್ಲಿ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ‘ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಿಡದಿ ಟೌನ್ಶಿಪ್ ಮಾಡಬೇಕೆಂದು ಹೊರಟಿದ್ದರು. ಈ ಕಾರಣಕ್ಕೆ ಯಾವುದೇ ರೈತರಿಗೆ ಭೂ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದು 18 ವರ್ಷಗಳಿಂದ ನಡೆಯುತ್ತಿದೆ. ಆದ ಕಾರಣಕ್ಕೆ ನಾವು ಈ ಕೆಲಸವನ್ನು ಮುಂದುವರೆಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು. ‘ಭೂಮಿ ಕಳೆದುಕೊಳ್ಳುವ ರೈತರಿಗೆ ಕೇಂದ್ರದ 2013ರ ಪರಿಹಾರ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ. ಒಂದು ಎಕರೆ ಜಮೀನಿಗೆ ಒಂದುವರೆ ಕೋಟಿ ರೂ.ಗಳಷ್ಟು ಪರಿಹಾರ ದೊರೆಯುವಂತೆ ಮಾಡುವುದು ಸರಕಾರದ ಉದ್ದೇಶ. ಹಣ ಕೊಡುವುದೇ ಮುಖ್ಯವಲ್ಲ, ರೈತರನ್ನೂ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗುವುದು. ಜೊತೆಗೆ ಪುರ್ನವಸತಿ ಬಗ್ಗೆಯೂ ಆಲೋಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಯೋಜನೆಗೆ ಬಹುತೇಕ ಜನರು ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿ-ಜೆಡಿಎಸ್ನವರು ರಾಜಕೀಯ ಮಾಡುತ್ತಿದ್ದಾರೆ. ರಾಜಕಾರಣಕ್ಕೆ ರಾಜಕೀಯವಾಗಿ ಉತ್ತರ ನೀಡುತ್ತೇವೆ. ನಾವು ಕುಮಾರಸ್ವಾಮಿ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇವೆ ಹೊರತು. ಇಲ್ಲಿ ನಮ್ಮದೇನೂ ಇಲ್ಲ ಎಂದು ಡಿ.ಕೆ.ಸುರೇಶ್ ತಿಳಿಸಿದರು. ಅನಿತಾ ಕುಮಾರಸ್ವಾಮಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಂಬಂಧಪಟ್ಟವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು ಅದರಲ್ಲಿ ಏನು ಕೇಳಿಕೊಂಡಿದ್ದಾರೆ ಎಂಬುದನ್ನೂ ತಿಳಿಸಲಾಗಿದೆ ಎಂದ ಡಿ.ಕೆ.ಸುರೇಶ್, ‘ಕೆಲವರು ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಬಳಿ ಇನ್ನೂ ಏನೇನು ಮಾಹಿತಿ ಇದೆಯೆಂದು ನನಗೆ ಗೊತ್ತಿಲ್ಲ. ಕಾದು ನೋಡೋಣ’ ಎಂದು ಹೇಳಿದರು. ಸುಳ್ಳು ಹೇಳುವ ಚಾಳಿ ಏಕೆ: ಡಿ.ಕೆ.ಸುರೇಶ್ ಅವರೇ, ಪದೇಪದೆ ಸುಳ್ಳು ಹೇಳುವ ಚಾಳಿ ಏಕೆ ನಿಮಗೆ? ಬಡ ರೈತರ ಜಮೀನು ಕೊಳ್ಳೆ ಹೊಡೆದು ಕೋಟೆ ಕಟ್ಟಿಕೊಳ್ಳಲು ಇಷ್ಟೆಲ್ಲಾ ಸುಳ್ಳಿನ ಕಥೆ ಕಟ್ಟಬೇಕೆ?. ನಿಮಗೆ ಮಾಹಿತಿ ಕೊರತೆ ಇದ್ದರೆ ಇನ್ನೊಬ್ಬರನ್ನು ಕೇಳಿ ತಿಳಿದುಕೊಳ್ಳಿ. ಬಿಡದಿ ಟೌನ್ಶಿಪ್ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಯಾವುದೇ ವಿಷಯವನ್ನೂ ಮುಚ್ಚಿಟ್ಟಿಲ್ಲ ಎಂಬುದನ್ನು ಮೊದಲು ತಿಳಿಯಿರಿ ಎಂದು ಜೆಡಿಎಸ್ ತಿರುಗೇಟು ನೀಡಿದೆ. ‘ನಿಮ್ಮ ಹಾಗೆ ದುಂಡಾವರ್ತನೆ ತೋರುವ ಜಾಯಮಾನ ಅವರದಲ್ಲ. ನಿಮ್ಮ ಯೋಗ್ಯತೆಗೆ ಈವರೆಗೆ ರೈತರನ್ನು ಕರೆದು ಒಂದು ಸಭೆಯನ್ನಾದರೂ ಮಾಡಿದ್ದೀರಾ? ಅದೇ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ರೈತರನ್ನು 3-4 ಬಾರಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರೆಸಿ ಸಭೆ ನಡೆಸಿದ್ದರು ಎಂಬುದು ನಿಮಗೆ ಗೊತ್ತೇ?’ ಎಂದು ಜೆಡಿಎಸ್ ಪ್ರಶ್ನಿಸಿದೆ. ಈ ಯೋಜನೆ ವಿರುದ್ಧ ನಿಮ್ಮದೇ ಪಕ್ಷದ ಎಚ್.ಕೆ.ಪಾಟೀಲ್, ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ರಚನೆ ಮಾಡಿದ್ದ ಸಮಿತಿ ಅಗೆದು ಬಗೆದೂ ಹೊರತೆಗೆದ ಸತ್ಯಶೋಧನಾ ವರದಿ ಏನಾಯಿತು?. ಅಂದು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರೇ ವಿರೋಧ ಮಾಡಿದರಲ್ಲಾ. ಅವರೆಲ್ಲ ಈಗ ಎಲ್ಲಿ ಹೋಗಿ ಅವಿತಿದ್ದಾರೆ’ ಎಂದು ಜೆಡಿಎಸ್ ಕೇಳಿದೆ. ಕುಮಾರಸ್ವಾಮಿ, ಯೋಜನೆಯ ಸ್ವರೂಪ ಜನಪಾಲುದಾರಿಕೆಯಲ್ಲಿತ್ತು. ನಿಮ್ಮದು ರಿಯಲ್ ಎಸ್ಟೇಟ್ ಪಾಲುದಾರಿಕೆ ಮತ್ತು ನಿಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವ ಹಪಾಹಪಿ. ನಿಮ್ಮ ಪ್ರತೀ ಹೆಜ್ಜೆಯೂ ಅನುಮಾನಾಸ್ಪದ. ಬೆಂಗಳೂರಿನಲ್ಲಿ ಗುಂಡಿ ಮುಚ್ಚಲಿಕ್ಕೆ ಬಿಡಿಗಾಸಿಲ್ಲ, ಆದರೆ ಬಿಡದಿಯಲ್ಲಿ ಸ್ಮಾರ್ಟ್ಸಿಟಿ, ಮೊದಲು ರಸ್ತೆಗುಂಡಿಗೆ ಒಂದು ಸನಿಕೆ ಮಣ್ಣು ಹಾಕಿ, ಆಮೇಲೆ ಮಿಕ್ಕಿದ್ದು. ಮೊದಲು ಹೊಟ್ಟೆಗೆ ಹಿಟ್ಟು, ಆಮೇಲೆ ಜುಟ್ಟಿಗೆ ಮಲ್ಲಿಗೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ನಿಮ್ಮ ಸ್ಮಾರ್ಟ್ಸಿಟಿ ಗೋಲ್ಮಾಲ್ ಏನೆಂದು ಗೊತ್ತಿದೆ. ಹೊಸಕೆರೆಹಳ್ಳಿ ಬಳಿ ನೈಸ್ ಯೋಜನೆ ಭೂಮಿಯನ್ನು ನೈಸಾಗಿ ಡಿನೋಟಿಫೈ ಮಾಡಿಸಿಕೊಂಡು ಕಬ್ಜಾ ಮಾಡಿ ಗಗನಚುಂಬಿ ಕಟ್ಟಡ ಕಟ್ಟುತ್ತಿರುವಿಲ್ಲ. ಅದೇ ರೀತಿ ಬಿಡದಿಯಲ್ಲಿಯೂ ಗಗನಚುಂಬಿ ಕಟ್ಟಡಗಳನ್ನು ಎಬ್ಬಿಸಲು ಹೊರಟಿದ್ದೀರಿ. ಅಷ್ಟೇ ಅಲ್ಲವೇ? ಎಂದು ಜೆಡಿಎಸ್ ಲೇವಡಿ ಮಾಡಿದೆ. ‘ಬಿಡದಿ ಟೌನ್ಶಿಪ್'ಗೆ ಜೆಡಿಎಸ್ ವಿರೋಧ, ಕುಮಾರಸ್ವಾಮಿ ವಿರೋಧ, ನಿಖಿಲ್ ಕುಮಾರಸ್ವಾಮಿ ವಿರೋಧ ಎಂದು ಸುಳ್ಳಿನ ಮೇಲೆ ಸುಳ್ಳಿನ ಕಥೆ ಸೃಷ್ಟಿ ಮಾಡುತ್ತಿದ್ದೀರಿ. ಆದರೆ, ಜೆಡಿಎಸ್ ಸತ್ಯದ ಪರ ಇದೆ. ರೈತರ ಪರ ನಿಂತಿದೆ. ನೀವು ಹೋಗಬೇಕಿರುವುದು ಆ ಮಾರ್ಗದಲ್ಲಿ’ ಎಂದು ಜೆಡಿಎಸ್ ಸಲಹೆ ನೀಡಿದೆ.
ಕೊಪ್ಪಳ: ಮೂರು ದಿನ ಪೆಂಕಾಕ್ ಸಿಲತ್ ರಾಷ್ಟ್ರೀಯ ಕ್ರೀಡಾಕೂಟ ಮುಕ್ತಾಯ
ಸಿಲತ್ ಕ್ರೀಡೆಗೆ ರಾಜ್ಯ ಸರಕಾರ ಮಾನ್ಯತೆ: ಸಚಿವ ತಂಗಡಗಿ ಭರವಸೆ