(ಸಮಗ್ರ) ಬಿಹಾರ ಚುನಾವಣಾ ಫಲಿತಾಂಶ 2025: ಎನ್.ಡಿ.ಎ ಮೈತ್ರಿಗೆ ದಾಖಲೆಯ ಜಯ, ಸದ್ದು ಮಾಡದ 'ಘಟ'
2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ನಿರೀಕ್ಷೆಗೂ ಮೀರಿ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿ ಮತ್ತು ಜೆಡಿಯು ಮೈತ್ರಿ 202 ಸ್ಥಾನಗಳನ್ನು ಪಡೆದು ಅಭೂತಪೂರ್ವ ಸಾಧನೆ ಮಾಡಿದೆ. ಮಹಾಘಟಬಂಧನ್ ಕೇವಲ 35 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್ ಪಕ್ಷದ ಸಾಧನೆ ತೀರಾ ಕಳಪೆಯಾಗಿದೆ. ಎನ್ ಡಿಎ ಗೆಲುವಿಗೆ ಸೀಟ್ ಹಂಚಿಕೆ, ಅಭಿವೃದ್ಧಿ, ಜಾತಿ ಸಮೀಕರಣ, ಮಹಿಳಾ ಮತ್ತು ಯುವ ಮತದಾರರ ಬೆಂಬಲ, ಹಾಗೂ ಡಬಲ್ ಇಂಜಿನ್ ಸರ್ಕಾರದ ಭರವಸೆಗಳು ಕಾರಣವಾಗಿವೆ.
ಎನ್ಡಿಎಯನ್ನು ಗೆಲ್ಲಿಸಿತೇ ಚುನಾವಣಾ ಆಯೋಗ?
ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ ಸಂಸ್ಥೆಗಳನ್ನೂ ಆಘಾತಕ್ಕೆ ತಳ್ಳುವಂತೆ ಫಲಿತಾಂಶ ಹೊರಬಿದ್ದಿದೆ. ಬಿಹಾರ ವಿಧಾನಸಭೆಯಲ್ಲಿ ಎನ್ಡಿಎ ಬಹುಮತವನ್ನು ಪಡೆಯುತ್ತದೆ ಎಂದು ಸಮೀಕ್ಷೆಗಳು ಹೇಳಿತ್ತಾದರೂ, ‘ನಾನು ಹೇಳಿದ್ದು ಇದಲ್ಲ’ ಎಂದು ಸಮೀಕ್ಷೆಗಳು ಸ್ಪಷ್ಟೀಕರಣ ನೀಡುವಂತಿದೆ ಫಲಿತಾಂಶ. 243 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎ 205ಕ್ಕೂ ಅಧಿಕ ಕ್ಷೇತ್ರಗಳನ್ನು ಗೆದ್ದು ದೇಶದ ಹುಬ್ಬೇರುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿಯು ಒಂದು ಸ್ಥಾನದಿಂದ 21 ಸ್ಥಾನಕ್ಕೆ ನೆಗೆಯುವ ಮೂಲಕ ಉತ್ತರ ಭಾರತದ ದಲಿತ ರಾಜಕಾರಣದ ಚುಕ್ಕಾಣಿಯನ್ನು ಹೊಸ ದಿಕ್ಕಿಗೆ ತಿರುಗಿಸುವ ಸೂಚನೆ ನೀಡಿದೆ. ನಿತೀಶ್ಗೆ ಪರ್ಯಾಯವಾಗಿ ಬಿಹಾರದಲ್ಲಿ ಬೆಳೆಯುವ ಸಾಧ್ಯತೆಗಳನ್ನು ಪ್ರಕಟ ಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಉವೈಸಿ ನಾಯಕತ್ವದ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದೆ ಮಾತ್ರವಲ್ಲ, ಕಾಂಗ್ರೆಸ್ನ ಮತಗಳನ್ನು ದೊಡ್ಡ ಮಟ್ಟದಲ್ಲಿ ಸೆಳೆದು ಬಿಜೆಪಿಗೆ ಮುನ್ನಡೆಯಾಗುವಂತೆ ನೋಡಿಕೊಂಡಿದೆ. ಮುಸ್ಲಿಮ್ ಮತದಾರರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ಎನ್ಡಿಎ ವಿಜಯ ಸಾಧಿಸಿರುವುದು ಬಿಹಾರದ ರಾಜಕೀಯದಲ್ಲಾಗಿರುವ ಪಲ್ಲಟಗಳನ್ನು ಹೇಳುತ್ತದೆ. ಮುಸ್ಲಿಮರು ಎನ್ಡಿಎಯನ್ನು ಬೆಂಬಲಿಸಿದ್ದಾರೆ ಎನ್ನುವುದಕ್ಕಿಂತಲೂ, ಮುಸ್ಲಿಮರ ಮತಗಳನ್ನು ಒಡೆಯುವಲ್ಲಿ ಎನ್ಡಿಎ ಯಶಸ್ವಿಯಾಗಿದೆ ಎಂದು ಹೇಳಬಹುದು. ಇದೇ ಹೊತ್ತಿಗೆ, ಚುನಾವಣಾ ಆಯೋಗದ ಶತ ಪ್ರಯತ್ನದಿಂದ ಅಳಿಸಲ್ಪಟ್ಟ ಲಕ್ಷಾಂತರ ಮತದಾರರ ಹೆಸರುಗಳಲ್ಲಿ ಮುಸ್ಲಿಮರ ಹೆಸರುಗಳು ಎಷ್ಟು ಎನ್ನುವುದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಎರಡು ಬಹುಮುಖ್ಯ ಅಂಶಗಳು ಎನ್ಡಿಎ ಭರ್ಜರಿ ಗೆಲುವಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಅವೆರಡರಲ್ಲಿ ಮುಖ್ಯವಾಗಿ, ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಹೊತ್ತಿಗೇ 1.5 ಕೋಟಿಗೂ ಅಧಿಕ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10,000 ರೂ.ಗಳನ್ನು ಜಮೆ ಮಾಡಿರುವುದು. ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯ ಹೆಸರಿನಲ್ಲಿ ಈ ಹಣವನ್ನು ತಲುಪಿಸಲಾಗಿದೆಯಾದರೂ ಉದ್ದೇಶ ಚುನಾವಣೆಯೇ ಆಗಿತ್ತು. ಈ ಹಿಂದೆಲ್ಲ ಒಂದು ಮತಗಳಿಗೆ ನೂರೋ ಇನ್ನೂರೋ ಪಡೆಯುತ್ತಿದ್ದ ಬಿಹಾರದ ಬಡ ವರ್ಗಕ್ಕೆ ಇದು ಭಾರೀ ದೊಡ್ಡ ಉಡುಗೊರೆಯಾಗಿ ಕಂಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಬಿಹಾರದ ಮಹಿಳೆಯರ ಕೈಗೇ ಈ ಹಣ ತಲುಪಿರುವುದು ಮತದಾನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿತ್ತು. ಇದಕ್ಕೆ ಪೂರಕವಾಗಿ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಶೇ.71.78ರಷ್ಟು ಮಹಿಳೆಯರು ಮತದಾನ ಮಾಡಿದ್ದರೆ ಶೇ.62.98ರಷ್ಟು ಪುರುಷರು ಮತ ಚಲಾಯಿಸಿದ್ದಾರೆ. ಏಳು ಜಿಲ್ಲೆಗಳಲ್ಲಿ ಪುರುಷರಿಗಿಂತ ಶೇ.14ಕ್ಕೂ ಅಧಿಕ ಮಹಿಳೆಯರು ಮತಗಳನ್ನು ಚಲಾಯಿಸಿದ್ದರೆ ಇತರ 10 ಜಿಲ್ಲೆಗಳಲ್ಲಿ ಇದು ಶೇ.10ರಷ್ಟಿದೆ. ಇತರ ಪಕ್ಷಗಳೂ ಮಹಿಳೆಯರಿಗೆ ಆರ್ಥಿಕ ನೆರವಿನ ಭರವಸೆಗಳನ್ನು ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ್ದವು. ಈ ಹಿಂದೆ ಕರ್ನಾಟಕದಲ್ಲಿ ಮಹಿಳೆಯರಿಗಾಗಿ ಘೋಷಿಸಿದ ಗ್ಯಾರಂಟಿ ಯೋಜನೆಗಳ ಕಾರಣದಿಂದ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದಿಂದ ಅಧಿಕಾರವನ್ನು ಹಿಡಿಯಿತು. ಆದರೆ ಪ್ರಧಾನಿ ಮೋದಿಯವರು ಚುನಾವಣೆಯ ಹೊತ್ತಿಗೆ ಅವರ ಖಾತೆಗಳಿಗೆ ನೇರವಾಗಿ ಹಣವನ್ನೇ ಹಾಕಿ ಬಿಟ್ಟರು. ಇದು ಚುನಾವಣೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ ಎನ್ನುವುದು ಗೊತ್ತಿದ್ದೂ ಚುನಾವಣಾ ಆಯೋಗ ಕಣ್ಣು, ಕಿವಿ ಮುಚ್ಚಿ ಕೂತಿತ್ತು. ಈ ಹಿಂದೆ, ರಾಜಸ್ಥಾನದಲ್ಲಿ ಚುನಾವಣಾ ನೀತಿ ಸಂಹಿತೆಯ ಬಳಿಕ ಪಿಂಚಣಿ ವಿತರಣೆ ಮಾಡುವುದನ್ನೂ ತಡೆದಿದ್ದ ಚುನಾವಣಾ ಆಯೋಗ, ಚುನಾವಣಾ ನೀತಿ ಸಂಹಿತೆಯ ಬಳಿಕವೂ ಮಹಿಳೆಯರ ಖಾತೆಯಲ್ಲಿ 10,000 ರೂಪಾಯಿ ಬೀಳುವುದನ್ನು ನೋಡಿಯೂ ನೋಡದಂತೆ ವರ್ತಿಸಿತು. ಪ್ರತಿ ಕುಟುಂಬಕ್ಕೆ 10,000 ರೂಪಾಯಿಗಳನ್ನು ನೀಡಿ ಈ ಬಾರಿಯ ಚುನಾವಣಾ ಫಲಿತಾಂಶವನ್ನು ನರೇಂದ್ರಮೋದಿಯವರು ಕೊಂಡುಕೊಂಡರು ಎನ್ನುವ ಆರೋಪ ಈ ಕಾರಣಕ್ಕೆ ಮಹತ್ವವನ್ನು ಪಡೆಯುತ್ತದೆ. ಅಷ್ಟು ದೊಡ್ಡ ಮೊತ್ತವನ್ನು ಅದೇ ಮೊದಲ ಬಾರಿ ಕಂಡ ಬಿಹಾರದ ಬಡ ಮಹಿಳಾ ವರ್ಗ ಬಿಜೆಪಿಗೆ ಮತ ಹಾಕದೇ ಇರುವುದಕ್ಕೆ ಕಾರಣವೇ ಇರಲಿಲ್ಲ. ಒಟ್ಟಿನಲ್ಲಿ ಮಹಿಳಾ ಮತದಾರರು ಚುನಾವಣೆಯಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದಾರೆ ಮತ್ತು ಅವರನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣಾ ಪ್ರಣಾಳಿಕೆಗಳು ಸಿದ್ಧಗೊಳ್ಳುತ್ತಿವೆ. ಇದಕ್ಕೆ ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆ ಸ್ಫೂರ್ತಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯೂ ಚುನಾವಣೆಯ ಮೇಲೆ ಪರಿಣಾಮವನ್ನು ಬೀರಿದೆ. ಲಕ್ಷಾಂತರ ಮತದಾರರನ್ನು ಚುನಾವಣಾ ಆಯೋಗವು ಪರಿಷ್ಕರಣೆಯ ಹೆಸರಿನಲ್ಲಿ ಮತದಾನದಿಂದ ಹೊರಗಿಟ್ಟಿತು. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಚುನಾವಣಾ ಆಯೋಗ ಚುನಾವಣೆಯಲ್ಲಿ ಭಾಗವಹಿಸಲು ಮತದಾರರನ್ನು ಉತ್ತೇಜಿಸಬೇಕು. ಆದರೆ ಅದಕ್ಕೆ ವಿರುದ್ಧವಾಗಿ, ಎಸ್ಐಆರ್ ಹೆಸರಿನಲ್ಲಿ ಮತದಾರರನ್ನು ಹೇಗೆ ಚುನಾವಣೆಯಿಂದ ದೂರವಿಡಬಹುದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡಿತು. ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿಗೆ ಆತುರಾತುರವಾಗಿ ಪರಿಷ್ಕರಣೆ ನಡೆಸಲು ಮುಂದಾಗಿರುವುದು ಒಟ್ಟು ಗೊಂದಲಗಳಿಗೆ ಕಾರಣವಾಯಿತು. ಮತದಾರರ ಪಟ್ಟಿಯಿಂದ ಹೊರಬಿದ್ದ ಜನರು ಅದರ ವಿರುದ್ಧ ಹೋರಾಟ ನಡೆಸುವ ಶಕ್ತಿಯನ್ನೂ ಹೊಂದಿರಲಿಲ್ಲ. ಯಾಕೆಂದರೆ ಅವರಲ್ಲಿ ಬಹುತೇಕರು ಬಡವರ್ಗ ಮತ್ತು ದುರ್ಬಲ ಜಾತಿಗಳಿಗೆ ಸೇರಿದವರಾಗಿದ್ದರು. ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲರಾಗುವ ಬಹುತೇಕರು ಇದೇ ವರ್ಗಕ್ಕೆ ಸೇರಿರುತ್ತಾರೆ ಎನ್ನುವುದು ಚುನಾವಣಾ ಆಯೋಗಕ್ಕೆ ಗೊತ್ತಿಲ್ಲದೇ ಇಲ್ಲ. ಆದುದರಿಂದಲೇ ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಜೊತೆಗೆ ಚುನಾವಣಾ ಆಯೋಗವೂ ಕೈ ಜೋಡಿಸಿತ್ತು ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ ಮತ್ತು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಯ ಗೆಲುವಿನ ಹೆಗ್ಗಳಿಕೆ ಚುನಾವಣಾ ಮುಖ್ಯ ಆಯುಕ್ತರಿಗೆ ಸೇರಬೇಕು ಎಂದು ವ್ಯಂಗ್ಯವಾಡುತ್ತಿವೆ. ಆರ್ಜೆಡಿಯೊಳಗಿನ ಕುಟುಂಬ ಕಲಹ, ಇಂಡಿಯಾ ಒಕ್ಕೂಟದ ಟಿಕೆಟ್ ವಿತರಣೆಯಲ್ಲಾಗಿರುವ ಅವಾಂತರಗಳು ಫಲಿತಾಂಶದ ಮೇಲೆ ತನ್ನದೇ ರೀತಿಯಲ್ಲಿ ಪರಿಣಾಮಗಳನ್ನು ಬೀರಿವೆ. ಇದೇ ಸಂದರ್ಭದಲ್ಲಿ ದಲಿತರು, ಮುಸ್ಲಿಮರ ಮತಗಳು ತನ್ನ ಹಕ್ಕು ಎನ್ನುವ ಭ್ರಮೆಯಿಂದ ಕಾಂಗ್ರೆಸ್ ಹೊರಗೆ ಬರಬೇಕಾಗಿದೆ. ಈ ಫಲಿತಾಂಶಕ್ಕೆ ಚುನಾವಣಾ ಆಯೋಗದ ಕೊಡುಗೆಗಳೆಷ್ಟು ಎನ್ನುವುದನ್ನು ಲೆಕ್ಕ ಹಾಕುವುದರ ಜೊತೆಗೆ ತಮ್ಮ ತಮ್ಮ ಕೊಡುಗೆಗಳೆಷ್ಟು ಎನ್ನುವ ಆತ್ಮವಿಮರ್ಶೆಯನ್ನು ಆರ್ಜೆಡಿ, ಕಾಂಗ್ರೆಸ್ನಂತಹ ಪಕ್ಷಗಳು ನಡೆಸಿದಾಗ ಮಾತ್ರ ಮುಂದಿನ ಚುನಾವಣೆಗಳನ್ನು ಗೆಲ್ಲುವುದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬಹುದು. ಇದೇ ಸಂದರ್ಭದಲ್ಲಿ ಬಿಜೆಪಿ, ಜೆಡಿಯುಗಿಂತ ಹೆಚ್ಚು ಮತಗಳನ್ನು ಆರ್ಜೆಡಿ ಹಂಚಿಕೊಂಡಿದೆ. ಬಿಜೆಪಿಗಿಂತ ಶೇ. 1.86 ಮತ್ತು ಜೆಡಿಯುಗಿಂತ 3.97ರಷ್ಟು ಅಧಿಕ ಮತಗಳನ್ನು ಪಡೆದುಕೊಂಡಿದೆ. ಇಷ್ಟಾದರೂ ಎನ್ಡಿಎ ಇಷ್ಟೊಂದು ಮುನ್ನಡೆ ಸಾಧಿಸಲು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗೆ ವಿರೋಧಪಕ್ಷಗಳು ಉತ್ತರ ಕಂಡುಕೊಳ್ಳಲೇಬೇಕು. ಬಿಹಾರದ ಒಟ್ಟು ಫಲಿತಾಂಶ ಅಲ್ಲಿನ ಮಹಿಳೆಯರ ಪಾಲಿಗೆ, ಶೋಷಿತ ಸಮುದಾಯಗಳ ಪಾಲಿಗೆ ಒಳಿತನ್ನು ಮಾಡುತ್ತವೆ ಎಂದು ನಿರೀಕ್ಷಿಸುವಂತಿಲ್ಲ. ಯಾಕೆಂದರೆ, ಈ ಫಲಿತಾಂಶ ಬಿಜೆಪಿಯೊಳಗಿರುವ ಕೋಮುವಾದಿ ಶಕ್ತಿಗಳಿಗೆ ಹೊಸ ಹುರುಪನ್ನು ತಂದಿದೆ. ನಿತೀಶ್ರನ್ನು ಬದಿಗೊತ್ತಿ ಚಿರಾಗ್ ಎನ್ನುವ ಎಳೆನಿಂಬೆಕಾಯಿಯನ್ನು ಬಳಸಿಕೊಂಡು ಬಿಹಾರವನ್ನು ಹಿಂದುತ್ವದ ಹೆಸರಿನಲ್ಲಿ ಆಳುವ ಕನಸು ಕಾಣಲು ಆರಂಭಿಸಿವೆ. ಈಗಾಗಲೇ ಬಡತನ, ನಿರುದ್ಯೋಗದಿಂದ ತತ್ತರಿಸಲ್ಪಟ್ಟಿರುವ ಬಿಹಾರದಲ್ಲಿ ಹಿಂದುತ್ವ ಶಕ್ತಿಗಳು ಗಟ್ಟಿಯಾಗಿ ಬೇರೂರಿದರೆ ಅದು ಬಿಹಾರವನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆಗ ಬಿಹಾರದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಬಹುದು.
ತೈವಾನ್ ಪಾಲಿಗೆ ಅಬ್ಬಬ್ಬಾ ಲಾಟರಿ... ಅಮೆರಿಕ ಜೊತೆ 330 ಮಿಲಿಯನ್ ಡಾಲರ್ ಡೀಲ್!
ಚೀನಾ ಜೊತೆಗೆ ಅಮೆರಿಕದ ಒಪ್ಪಂದ ನಡೆದ ನಂತರ ಕೂಡ ಮತ್ತೊಂದು ಪ್ರಮುಖ ನಿರ್ಧಾರವನ್ನ ಕೈಗೊಂಡಿದೆ. ಅದರಲ್ಲೂ ತೈವಾನ್ ಮತ್ತು ಚೀನಾ ಎಣ್ಣೆ &ಸೀಗೇಕಾಯಿ ರೀತಿ ಕಿತ್ತಾಡುವಾಗಲೂ ಅಮೆರಿಕ ಮಹತ್ವದ ಒಪ್ಪಂದಕ್ಕೆ ಇದೀಗ ಮುಂದಾಗಿದೆ. ಈ ಮೂಲಕ 330 ಮಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳ ಡೀಲ್ ತೈವಾನ್ &ಅಮೆರಿಕದ ನಡುವೆ ಫೈನಲ್ ಆಗಿದೆ. ಇದು ಮತ್ತೊಮ್ಮೆ
ಬಿಹಾರ ಚುನಾವಣೆ ಸೋಲಿನ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೊಸ ಗೇಮ್ ಪ್ಲಾನ್?
2025 ಬಿಹಾರ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ನಾಯಕರು ಚಿಂತೆಯಲ್ಲೇ &ಬೇಸರದಲ್ಲೇ ಕೂರುವಂತೆ ಆಗಿದೆ. ಯಾಕಂದ್ರೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಆ ರೀತಿಯ ಸೋಲು ಎದುರಾಗಿದೆ. ಇಂತಹ ಸೋಲನ್ನು ಕನಸಿನಲ್ಲೂ ಅಂದುಕೊಳ್ಳದ ಕಾಂಗ್ರೆಸ್ ನಾಯಕರಿಗೆ ಈಗ ದೊಡ್ಡ ದೊಡ್ಡ ಸವಾಲುಗಳು ಎದುರಾಗುತ್ತಿವೆ. ಹೀಗಿದ್ದಾಗ, ಬಿಹಾರ ಚುನಾವಣೆ ಸೋಲಿನ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೊಸ ಗೇಮ್ ಪ್ಲಾನ್? ಹಾಗಾದರೆ ಕರ್ನಾಟಕ ಕಾಂಗ್ರೆಸ್ನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ?
ಅಂಗವಿಕಲರ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಕೋರಿದ ಪಿಐಎಲ್; ಸಮಗ್ರ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು : ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ಸೇರಿ ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಖಾತ್ರಿಪಡಿಸುವ 'ಅಂಗವಿಕಲರ ಹಕ್ಕುಗಳ ಕಾಯ್ದೆ-2016' ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ 6 ವಾರಗಳಲ್ಲಿ ಸಮಗ್ರ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಹಾಗೂ ಅವರ ಇಬ್ಬರು ಮಕ್ಕಳಾದ ವೈ.ಕಾರ್ತಿಕ್ ಮತ್ತು ವೈ.ಕೌಶಿಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರ ಸಬಲೀಕರಣ ಇಲಾಖೆ ಹಾಗೂ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಕಾಯ್ದೆಯ ಸೆಕ್ಷನ್ 17, 24, 34, 35, 37 ಮತ್ತು 88ರ ಜಾರಿಗೆ ಸಂಬಂಧಿಸಿದಂತೆ ಸಮಗ್ರ ವಸ್ತುಸ್ಥಿತಿ ವರದಿಯನ್ನು 6 ವಾರಗಳಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು. ವಿಶೇಷವೆಂದರೆ, ಪಿಐಎಲ್ ಸಲ್ಲಿಸಿರುವ ಮೊದಲನೇ ಅರ್ಜಿದಾರ ವೈ.ಕಾರ್ತಿಕ್ ಸ್ವತಃ ದೃಷ್ಟಿದೋಷ ಸಮಸ್ಯೆ ಎದುರಿಸುತ್ತಿದ್ದಾರೆ. ಅರ್ಜಿದಾರರ ವಾದವೇನು? ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪ್ರದೀಪ್ ನಾಯಕ್ ವಾದ ಮಂಡಿಸಿ, 2024ರ ಸಿಎಜಿ ವರದಿ ಪ್ರಕಾರ ಅಂಗವಿಕಲರ ಕಲ್ಯಾಣಕ್ಕೆ ನಿಗದಿಪಡಿಸಬೇಕಾದ ನಿಧಿಯನ್ನು ಹಂಚಿಕೆ ಮಾಡಿಲ್ಲ. ಹಣ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿಲ್ಲ. ಸರ್ಕಾರಿ ಉದ್ಯೋಗದಲ್ಲಿ ಶೇ. 5 ಮೀಸಲಾತಿ ಕಲ್ಪಿಸಬೇಕು. ಆ ಕೆಲಸವೂ ಆಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಖಾಸಗಿ ಕ್ಷೇತ್ರದಲ್ಲಿ ಅಂಗವಿಕಲರನ್ನು ನೇಮಕ ಮಾಡಿಕೊಳ್ಳುವ ಉದ್ಯೋಗದಾತರಿಗೆ ಪ್ರೋತ್ಸಾಹ ಧನ (ಇನ್ಸೆಂಟಿವ್) ನೀಡುತ್ತಿಲ್ಲ. ಕೃಷಿ ಭೂಮಿ, ಮನೆ ಹಂಚಿಕೆ ಮಾಡಬೇಕು. ಅದನ್ನೂ ಮಾಡಲಾಗುತ್ತಿಲ್ಲ. ಕಾಯ್ದೆಯ ಸೆಕ್ಷನ್ 34 ಮೀಸಲಾತಿಗೆ ಸಂಬಂಧಿಸಿದ್ದಾಗಿದೆ. ಸೆಕ್ಷನ್ 35ರಲ್ಲಿ ಅಂಗವಿಕಲಿಗೆ ಉದ್ಯೋಗ ಕಲ್ಪಿಸುವ ಉದ್ಯೋಗದಾತರಿಗೆ ಪ್ರೋತ್ಸಾಹ ಧನ, ಸೆಕ್ಷನ್ 37 ವಿಶೇಷ ಯೋಜನೆಗೆ ಸಂಬಂಧಿಸಿವೆ ಎಂದು ತಿಳಿಸಿದರು. ಅರ್ಜಿಯಲ್ಲೇನಿದೆ? ಅರ್ಜಿದಾರರಲ್ಲಿ ಒಬ್ಬರಾಗಿರುವ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು 2024 ಮತ್ತು 2025 ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರ ಸಮರ್ಪಕ ಉತ್ತರ ಕೊಡದ ಕಾರಣ ಹಾಗೂ 2024ನೇ ಸಾಲಿನ ಸಿಎಜಿ ವರದಿಯ ಆಕ್ಷೇಪಣೆಗಳನ್ನು ಆಧರಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರು ವೈಯುಕ್ತಿಕವಾಗಿ ಯಾವುದೇ ಪರಿಹಾರ ಕೋರುತ್ತಿಲ್ಲ. ಅಂಗವಿಕಲರ ಬಗೆಗಿನ ಕಾಳಜಿಯಿಂದಾಗಿ ಈ ಅರ್ಜಿ ಸಲ್ಲಿಸಲಾಗಿದೆ. 2016ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ತಂದು ದಶಕವಾಗುತ್ತಾ ಬಂದರೂ, ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ಸೇರಿ ಅಂಗವಿಕಲರ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಲಭ್ಯಗಳಿಗೆ ಸಂಬಂಧಿಸಿದ ಕಾಯ್ದೆಯ ಸೆಕ್ಷನ್ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಂಗವಿಕಲರಿಗೆ ಹೆಚ್ಚುವರಿಯಾಗಿ ಶಾಲೆ ಮತ್ತು ಸಂಸ್ಥೆಗಳನ್ನು ತೆರೆಯಬೇಕು. ಎಲ್ಲ ಶಾಲೆಗಳಲ್ಲಿ ಅಂಗವಿಕಲರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಬೇಕು. ಅಂಗವಿಕಲರಿಗಾಗಿ ವಿಶೇಷ ತರಬೇತಿ ಕೇಂದ್ರ ಆರಂಭಿಸಬೇಕು. ಸರ್ಕಾರಿ ಉದ್ಯೋಗದಲ್ಲಿ ಅಂಗವಿಕಲರಿಗೆ ಶೇ.4 ಮೀಸಲಾತಿ ನೀಡಬೇಕು. ಸರ್ಕಾರದ ಪ್ರತಿ ಇಲಾಖೆಯಲ್ಲೂ ಅಂಗವಿಕಲರ ಕಲ್ಯಾಣಕ್ಕೆ ಶೇ. 5ರ ಬಜೆಟ್ ಮೀಸಲಿಡಬೇಕು. ವಿಶೇಷ ಅಂಗವಿಕಲತೆ ಗುರುತಿನ ಚೀಟಿ (ಯುಡಿಡಿ) ನೀಡಬೇಕು. ಅನರ್ಹರಿಗೆ ನೀಡಿರುವ ಯುಡಿಡಿ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಮೂಡುಬಿದಿರೆ | ಸಹಕಾರ ಸಪ್ತಾಹ ಸಂಭ್ರಮಕ್ಕೆ ಚಾಲನೆ
ಎಂ.ಜಾರ್ಜ್ ಮೋನಿಸ್ಗೆ ʼಸಹಕಾರ ಕಲ್ಪವೃಕ್ಷ ಪ್ರಶಸ್ತಿʼ ಪ್ರದಾನ
ಭಾಗ್ಯನಗರ | ಆಹಾರದಲ್ಲಿ ವಿಷ ಮಿಶ್ರಣ; ಮೂವರ ಸ್ಥಿತಿ ಗಂಭೀರ, ಇಬ್ಬರ ಬಂಧನ
ಭಾಗ್ಯನಗರ(ಬಾಗೇಪಲ್ಲಿ) : ಒಂದೇ ಕುಟುಂಬದ 8 ಮಂದಿಗೆ ಆಹಾರಕ್ಕೆ ವಿಷ ಬೆರೆಸಿ ಕೊಲೆಗೆ ಯತ್ನಿಸಿರುವ ಘಟನೆ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದ್ದು, ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಸ್ವಸ್ಥಗೊಂಡವರನ್ನು ಬಾಗೇಪಲ್ಲಿ ತಾಲೂಕು ಪರಗೋಡು ಪಂಚಾಯತ್ ವ್ಯಾಪ್ತಿಯ ದೇವಿರೆಡ್ಡಿಪಲ್ಲಿ ಗ್ರಾಮದ ಮದ್ದಿರೆಡ್ಡಿ, ಭಾಗ್ಯಮ್ಮ, ಮಂಜುನಾಥ, ಈಶ್ವರಮ್ಮ, ಸುಬ್ರಮಣಿ, ಮಣಿ, ಬಾನು, ಈಶ್ವರಮ್ಮ ಎಂದು ಗುರುತಿಸಲಾಗಿದೆ. ಆರೋಪಿಗಳಾದ ದೇವರೆಡ್ಡಿಪಲ್ಲಿ ಗ್ರಾಮದ ಚೌಡರೆಡ್ಡಿ ಮತ್ತು ಪಾಪಿರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ವಸ್ಥಗೊಂಡವರು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಹಾರ ಚುನಾವಣೆ ಗೆಲುವು, ಅಭಿವೃದ್ಧಿಗೆ ಒಲಿದ ಜಯ: ಶಾಸಕ ಸತೀಶ್ ರೆಡ್ಡಿ
ಬಿಹಾರ ಚುನಾವಣೆಯ ಗೆಲುವು ಅಭಿವೃದ್ಧಿ ಕಾರ್ಯಗಳಿಗೆ ಒಲಿದ ಜಯ ಎಂದು ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕರಾದ ಸತೀಶ್ ರೆಡ್ಡಿ ಅವರು ಪ್ರತಿಪಾದಿಸಿದರು. ಬಿಹಾರ ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ದಿಗ್ವಿಜಯ ಸಿಕ್ಕಿದ್ದು, ಸಂತಸದ ವಿಚಾರ. ಅಭೂತಪೂರ್ವ ಗೆಲುವನ್ನು ದಾಖಲಿಸಿದ ಎನ್ಡಿಎ ಅಭ್ಯರ್ಥಿಗಳಿಗೆ ಹಾಗೂ ಚುನಾವಣೆಯ ಗೆಲುವಿಗಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಪ್ರಮುಖವಾಗಿ ಮತದಾರ ಬಂಧುಗಳಿಗೆ
ನ.16ರಂದು ಮಂಗಳೂರಿನಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ
ಸಹಕಾರ ಮಾಣಿಕ್ಯ ಪ್ರಶಸ್ತಿ, ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ
ರಾಯಚೂರು | ಬೈಕ್ಗಳೆರಡು ಮುಖಾಮುಖಿ ಢಿಕ್ಕಿ : ಇಬ್ಬರು ಮೃತ್ಯು
ರಾಯಚೂರು : ಬೈಕ್ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಿಂಗಸೂಗೂರು ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ. ಪ್ರೀತಮ್ (18), ಸಿದ್ದಯ್ಯ ಸ್ವಾಮಿ ಯರಡೋಣಿ (39)ಮೃತರು. ಅಪಘಾತದಲ್ಲಿ ಪ್ರೀತಮ್ ಸ್ಥಳದಲ್ಲೇ ಮೃತಪಟ್ಟರೆ, ಸಿದ್ದಯ್ಯ ಸ್ವಾಮಿ ಯರಡೋಣಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸಿದ್ದಯ್ಯ ಸ್ವಾಮಿ ಹಾಗೂ ಆನಂದ ಪತ್ತಾರ್ ಎಂಬವರು ಕೆಲಸದ ನಿಮಿತ್ತ ಬೈಕ್ನಲ್ಲಿ ಪಟ್ಟಣದ ಹೊರವಲಯಕ್ಕೆ ತೆರಳುತ್ತಿದ್ದಾಗ ಲಿಂಗಸೂಗೂರು ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಕೂಡಲೇ, ಸ್ಥಳೀಯರು ಗಾಯಾಳುಗಳನ್ನು ಲಿಂಗಸೂಗೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಹಾರದ ಫಲಿತಾಂಶ ವಾಸ್ತವಕ್ಕೆ ಹೊಂದಿಕೆಯಾಗುತ್ತಿಲ್ಲ: ದೀಪಾಂಕರ್ ಭಟ್ಟಾಚಾರ್ಯ ಗಂಭೀರ ಆರೋಪ
ಪಾಟ್ನಾ, ನ.14: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ರಾಜ್ಯದ ವಾಸ್ತವತೆಗೆ ಯಾವುದೇ ರೀತಿಯಲ್ಲಿ ಹೊಂದಿಕೆಯಾಗುತ್ತಿಲ್ಲ ಎಂದು ಸಿಪಿಐ(ಎಂಎಲ್) ಲಿಬರೇಶನ್ ನ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ. ಎರಡು ದಶಕಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರವು 2010ರ ಸಾಧನೆಯನ್ನು ಮರುಕಳಿಸಿದಂತೆ ತೋರುತ್ತಿರುವ ಈ ಫಲಿತಾಂಶವು ಅಸ್ವಾಭಾವಿಕ ಎಂದು ಅವರು ಹೇಳಿದ್ದಾರೆ. “ಫಲಿತಾಂಶಗಳು ಸಂಪೂರ್ಣವಾಗಿ ಅಸ್ವಾಭಾವಿಕ. ಬಿಹಾರದ ವಾಸ್ತವಕ್ಕೆ ಇದು ಹೊಂದಿಕೆಯಾಗುವುದಿಲ್ಲ” ಎಂದು ಪಿಟಿಐಗೆ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ. ಮತದಾರರ ಸಂಖ್ಯೆಯಲ್ಲಿನ ಗೊಂದಲವನ್ನೂ ಉಲ್ಲೇಖಿಸಿದ ದೀಪಾಂಕರ್, ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯ ನಂತರ ಬಿಹಾರದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 7.42 ಕೋಟಿ ಹೆಸರುಗಳಿದ್ದರೆ, ಚುನಾವಣೆಯ ನಂತರ ಬಿಡುಗಡೆಗೊಂಡ ಚುನಾವಣಾ ಆಯೋಗದ ಪತ್ರಿಕಾ ಪ್ರಕಟನೆಯಲ್ಲಿ 7,45,26,858 ಮತದಾರರಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದರು. “ಮೂರು ಲಕ್ಷಕ್ಕೂ ಹೆಚ್ಚಿನ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ! ಈ ‘ಹೆಚ್ಚುವರಿ’ ಮತದಾರರು ಎಲ್ಲಿಂದ ಬಂದರು? ಈ ಬಗ್ಗೆ ಚುನಾವಣಾ ಆಐಗವು ಸ್ಪಷ್ಟನೆ ನೀಡುವುದಿಲ್ಲವೇ?” ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿನ ಪೋಸ್ಟ್ ನಲ್ಲಿ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ. ಈ ಬಾರಿ ಮಹಾಘಟಬಂಧನ್ ನ ಭಾಗವಾಗಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಸಿಪಿಐ(ಎಂಎಲ್) ಲಿಬರೇಶನ್, ಮಧ್ಯಾಹ್ನದ ವೇಳೆಗೆ ಘೋಸಿ ಎಂಬ ಒಂದೇ ಸ್ಥಾನದಲ್ಲಿ ಮುನ್ನಡೆ ಸಾಧಿಸಿತ್ತು. 2020ರ ಚುನಾವಣೆಯಲ್ಲಿ ಪಕ್ಷವು 19 ಸ್ಥಾನಗಳಲ್ಲಿ ಸ್ಪರ್ಧಿಸಿ 12 ಸ್ಥಾನಗಳನ್ನು ಗೆದ್ದಿತ್ತು. After SIR, Bihar had an electoral roll of 7.42 crore. The post-poll ECI press note puts the figure at 7,45,26,858! An increase of more than 3,00,000! Where did this 'extra 2 ab' come from? Will @ECISVEEP care to explain? @yadavtejashwi @RahulGandhi @cpimlliberation @cpimspeak pic.twitter.com/Y0K0gjPg2T — Dipankar (@Dipankar_cpiml) November 14, 2025
ಚೆಂಬು | ಮನೆಯಿಂದ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಸುಳ್ಯ, ನ.14: ಚೆಂಬು ಗ್ರಾಮದ ಮನೆಯೊಂದರಿಂದ ನಗ-ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿಗಳಾದ ಸಿದ್ದಲಿಂಗು ಎನ್. (28) ಮತ್ತು ರಘು ಎನ್. (26) ಬಂಧಿತ ಆರೋಪಿಗಳು. ಬಂಧಿತರಿಂದ 8,50,000 ರೂ. ನಗದು, 120 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚೆಂಬು ಗ್ರಾಮದ ನಿವಾಸಿ ವೀರಪ್ಪ ಪಿ. ಅವರ ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಅಂದಾಜು 15,000 ರೂ. ನಗದು ಮತ್ತು 120 ಗ್ರಾಂ ತೂಕದ ಚಿನ್ನಾಭರಣಗಳನ್ನು ನ.5ರಂದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ದೂರು ಸ್ವೀಕರಿಸಿದ್ದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಸ್ಫೋಟದ ಶಂಕಿತ ನಾಲ್ಕು ವೈದ್ಯರ ನೋಂದಣಿ ರದ್ದು - ಏನೇನು ನಿಬಂಧನೆ?
ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ನಾಲ್ವರು ವೈದ್ಯರ ನೋಂದಣಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ರದ್ದುಗೊಳಿಸಿದೆ. ಮುಝಾಫರ್ ಅಹ್ಮದ್, ಅ'ದೀಲ್ ಅಹ್ಮದ್ ರಾಥರ್, ಮುಝಾಮಿಲ್ ಶಕೀಲ್ ಮತ್ತು ಶಹೀನ್ ಸ'ಈದ್ ಅವರು ಭಾರತದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಇನ್ನು ಮುಂದೆ ಅರ್ಹರಲ್ಲ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ರಾಜ್ಯ ವೈದ್ಯಕೀಯ ಮಂಡಳಿಗಳು ನೀಡಿದ ಸಾಕ್ಷ್ಯಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದು ವೈದ್ಯಕೀಯ ವೃತ್ತಿಯ ಘನತೆಗೆ ವಿರುದ್ಧವಾಗಿದೆ ಎಂದು ಆಯೋಗ ತಿಳಿಸಿದೆ.
ಮೂಡುಬಿದಿರೆ | ಬೆಳುವಾಯಿ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನ ಆಚರಣೆ
ಮಕ್ಕಳಿಂದ ಛದ್ಮವೇಷ, ನೃತ್ಯ ಸ್ಪರ್ಧೆ
Bihar Election Result; ಭದ್ರಕೋಟೆಯಲ್ಲೇ ತಿಣುಕಾಡಿ ಗೆದ್ದ ತೇಜಸ್ವಿ ಯಾದವ್!
ಮಹಾಘಟಬಂಧನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಆರ್ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಕುಟುಂಬದ ಭದ್ರಕೋಟೆಯಾದ ರಾಘೋಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಹಣಾಹಣಿಯಲ್ಲಿ, ಅವರು ಬಿಜೆಪಿಯ ಸತೀಶ್ ಕುಮಾರ್ ಯಾದವ್ ಅವರನ್ನು 14,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಹಾಘಟಬಂಧನ ಸೋಲಿಗೆ ಲಾಲು ಪ್ರಸಾದ್ ಅವರ ಕುಟುಂಬದೊಳಗಿನ ಭಿನಮತವೂ ಕಾರಣ ಎನ್ನಲಾಗಿದೆ.
ಪ್ರೊ.ಬರಗೂರು ರಾಮಚಂದ್ರಪ್ಪ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡವರಲ್ಲ: ಸಲೀಂ ಅಹ್ಮದ್
‘ನಾಡೋಜ ಬರಗೂರು ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ
ಮಂಗಳೂರು | ಕಲ್ಲು, ಮರಳು ಗಣಿಗಾರಿಕೆ ಆರಂಭ : ನಿಗಾ ವಹಿಸಿರುವ ಕಂದಾಯ, ಪೊಲೀಸ್ ಇಲಾಖೆ
ಮಂಗಳೂರು, ನ.14: ಈಗಾಗಲೇ ಪ್ರಾರಂಭವಾಗಿರುವ ಕೆಂಪು ಕಲ್ಲು, ಮರಳು ಗಣಿಗಾರಿಕೆಯ ಬಗ್ಗೆ ನಿಗಾವಹಿಸಲು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಕೆಂಪು ಕಲ್ಲು ಸಾಗಾಟದ ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ಅವರು ಉಳಾಯಿಬೆಟ್ಟುವಿನ ಕಲ್ಲಿನ ಕೋರೆಗೆ ಶುಕ್ರವಾರ ತೆರಳಿ ಪರಿಶೀಲನೆ ನಡೆಸಿದರು. ನೀರು ಮಾರ್ಗದಲ್ಲಿ ಕಲ್ಲು ಸಾಗಾಟದ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದರು. ಸರಕಾರಕ್ಕೆ ಪಾವತಿಸಬೇಕಾದ ರಾಜಸ್ವವನ್ನು ಪಾವತಿಸಿ ಕಲ್ಲು, ಮರಳು ಗಣಿಗಾರಿಕೆಯನ್ನು ನಡೆಸಲು ಪರವಾನಿಗೆಯನ್ನು ಪಡೆದಿರುವ ಪರವಾನಿಗೆದಾರರು ಸಾರ್ವಜನಿಕರಿಂದ ಹೆಚ್ಚಿನ ದರ ಪಡೆಯದಂತೆ ಎಚ್ಚರ ವಹಿಸಲಾಗುತ್ತಿದೆ. ಕಲ್ಲು ಮರಳು ಸಾಗಾಟವಾಗುವ ವಾಹನಗಳಲ್ಲಿ ಹೆಚ್ಚಿನ ತೂಕ (ಓವರ್ಲೋಡ್) ಪರಿಶೀಲಿಸುವುದು, ಪ್ರತಿದಿನಕ್ಕೆ ಪಡೆಯುವ ಪರವಾನಿಗೆಯನ್ನು ದುರುಪಯೋಗಪಡಿಸಿದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ. ಮುಂಜಾನೆಯಿಂದ ತಡರಾತ್ರಿವರೆಗೂ ಪರಿಶೀಲನೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಉಪ ತಹಶೀಲ್ದಾರರು, ಗ್ರಾಮ ಸಹಾಯಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಗಳೂರು | ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು, ನ.12: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಲ್ಲೆ ಪ್ರಕರಣದ ಆರೋಪಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕನ್ಯಾನ ನಿವಾಸಿ ಮೊಯಿದ್ದೀನ್ ಶಾಕೀರ್ ಯಾನೆ ಮೊಯ್ದು ಶಾಕೀರ್ (27) ಬಂಧಿತ ಆರೋಪಿ. ಈತ ಕನ್ಯಾನ ನಿವಾಸಿ ಆನಂದ ಎಂಬವರಿಗೆ 2020ರ, ಸೆ.9ರಂದು ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಈತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಆರೋಪಿ ಮೇಲೆ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಜಾರಿಗೊಳಿಸಿತ್ತು. ಆರೋಪಿಯನ್ನು ನ.13ರಂದು ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸ್ತಗಿರಿ ಮಾಡಿ, ನ.14ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ಸೂಕ್ತ ಜಾಮೀನಿನೊಂದಿಗೆ ಬಿಡುಗಡೆ ಮಾಡಿದೆ.
ಉಡುಪಿ | ನ.16ರಂದು ಆದರ್ಶ ಆಸ್ಪತ್ರೆಯಲ್ಲಿ ಡಯಾಬಿಟೀಸ್ ಮೇಳ
ಉಡುಪಿ, ನ.14: ನಗರದ ಆದರ್ಶ ಆಸ್ಪತ್ರೆ, ಆದರ್ಶ ಚಾರಿಟೇಬಲ್ ಟ್ರಸ್ಟ್, ಜಿಲ್ಲಾಸ್ಪತ್ರೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾ ಸರ್ವೇಕ್ಷಣಾ ಘಟಕ, ಪ್ರಸಾದ್ ನೇತ್ರಲಯ, ರೆಡ್ಕ್ರಾಸ್ ಉಡುಪಿ ಐಎಂಎ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ನ.16ರ ರವಿವಾರ ನಗರದ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ಆವರಣದಲ್ಲಿ ಡಯಾಬಿಟೀಸ್ ಮೇಳವನ್ನು ಆಯೋಜಿಸಿದೆ ಎಂದು ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಹಿರಿಯ ವೈದ್ಯಕೀಯ ತಜ್ಞ ಡಾ.ಜಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ. ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ಶಿಬಿರ ನಡೆಯಲಿದ್ದು, ನುರಿತ ತಜ್ಞ ವೈದ್ಯರು ಮಧುಮೇಹ ಕಾಯಿಲೆ ಬಗ್ಗೆ ವಿಸ್ತೃತ ಮಾಹಿತಿ ಹಾಗೂ ತಪಾಸಣೆಯನ್ನು ನಡೆಸಲಿದ್ದಾರೆ ಎಂದರು. ವಿಶ್ವದಲ್ಲಿಂದು 60 ಕೋಟಿ ಮಧುಮೇಹಿಗಳಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ 85 ಕೋಟಿಗೇರುವ ನಿರೀಕ್ಷೆ ಇದೆ. ಅದೇ ರೀತಿ ಭಾರತದಲ್ಲಿ ಸದ್ಯ 11 ಕೋಟಿ ಮಧುಮೇಹಿ ಕಾಯಿಲೆಯವರು ಹಾಗೂ 14 ಕೋಟಿ ಪ್ರಿಡಯಾಬಿಟಿಸ್ ಹೊಂದಿರುವ ರೋಗಿಗಳಿದ್ದಾರೆ. ಚೀನಾವನ್ನು ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಡಯಾಬಿಟೀಸ್ ರೋಗಿಗಳಿದ್ದಾರೆ. ಜೀವನಶೈಲಿಯಿಂದ ಬರುವ ಈ ರೋಗದ ಕುರಿತಂತೆ ಜನಜಾಗೃತಿ ಅಗತ್ಯ ಎಂದು ಅವರು ಹೇಳಿದರು. ಡಯಾಬಿಟೀಸ್ ಶಿಬಿರವನ್ನು ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಲಿದ್ದು, ಡಿಎಚ್ಓ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾಸರ್ಜನ್ ಡಾ.ಎಚ್. ಅಶೋಕ್, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ್, ಎಪಿಐ ಅಧ್ಯಕ್ಷ ಡಾ.ಸುರೇಶ್ ಹೆಗ್ಡೆ, ಐಎಂಎ ಅಧ್ಯಕ್ಷ ಡಾ.ಅಶೋಕಕುಮಾರ್ ಉಪಸ್ಥಿತರಿರುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಸುಹಾಸ್ ಜಿ.ಸಿ., ಮ್ಯಾನೇಜರ್ ಡಿಯಾಗೋ ಕ್ವಾಡ್ರಸ್, ರೋವಿನ ಡಿಸೋಜ ಉಪಸ್ಥಿತರಿದ್ದರು.
ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ ಎಲ್ಲಿ? ಶಾಲೆಗಳಿಗೆ ರಜೆ ಇರುತ್ತಾ? ಇಲ್ಲಿದೆ ಸ್ಪಷ್ಟನೆ
ವೃಕ್ಷಮಾತೆ ಖ್ಯಾತಿಯ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರು ವಿಧಿವಶರಾಗಿದ್ದಾರೆ. ಈ ಹಿನ್ನೆಲೆ ತಿಮ್ಮಕ್ಕ ಅವರ ಅಂತ್ಯಕ್ರಿಯೆ ಯಾವಾಗ ಎಲ್ಲಿ ನಡೆಯಲಿದೆ? ಹಾಗೂ ಆ ದಿನ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತಾ? ಎಂಬ ಗೊಂದಲಗಳು ಮೂಡಿತ್ತು. ಈ ಎಲ್ಲದಕ್ಕೂ ಸದ್ಯ ತೆರೆಬಿದ್ದಿದ್ದು, ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಗೆ ಜಾಗ ಫಿಕ್ಸ್ ಆಗಿದೆ. ಶನಿವಾರವೇ ತಿಮ್ಮಕ್ಕ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಉಡುಪಿ | ಹಳೆ ಬ್ಯಾಂಕ್ ಖಾತೆಯ ಹಸ್ತಾಂತರಕ್ಕೆ ವಿಶೇಷ ಶಿಬಿರ ಪ್ರಾರಂಭ
ಉಡುಪಿ, ನ.14: ಭಾರತ ಹಣಕಾಸು ಸಚಿವಾಲಯದ ಮಾರ್ಗಸೂಚಿಯಂತೆ ದೀರ್ಘ ಕಾಲದವರೆಗೆ ಹಕ್ಕು ಪಡೆಯದೇ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಹಾಗೂ ಷೇರುಗಳನ್ನು ಅವರ ವಾರಸುದಾರರಿಗೆ ಕಾನೂನುಬದ್ದವಾಗಿ ಹಸ್ತಾಂತರಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪಂಚಾಯತ್, ಆರ್ಬಿಐ, ಲೀಡ್ ಬ್ಯಾಂಕ್ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕುಗಳ ಆಶ್ರಯದಲ್ಲಿ ವಿಶೇಷ ಶಿಬಿರವು ಇಂದು ಮಣಿಪಾಲದ ಜಿಲ್ಲಾ ಪಂಚಾಯತ್ ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಶಿಬಿರವನ್ನು ಜಿಪಂ ಮುಖ್ಯ ಲೆಕ್ಕಾಧಿಕಾರಿ ನಿಶ್ಚಿತ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 78 ಕೋಟಿ ರೂ. ಮೌಲ್ಯದ ನಿಷ್ಕ್ರಿಯ ಗೊಂಡ ಖಾತೆಗಳಿವೆ. ಆ ಖಾತೆಯಲ್ಲಿರುವ ಹಣವನ್ನು ವಾರಸುದಾರರಿಗೆ ತಲುಪಿಸುವ ಉದ್ದೇಶದಿಂದ ಈ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳು, ವಿಮೆ ಮತ್ತು ಇತರ ವಲಯಕ್ಕೆ ಸಂಬಂಧಿಸಿದ ಕಚೇರಿ ಶಾಖೆಗಳಲ್ಲಿ ಡಿ.31ರವರೆಗೆ ವಿಶೇಷ ಶಿಬಿರ ವನ್ನು ಆಯೋಜಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದವರು ಹೇಳಿದರು. ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಠೇವಣಿ ಪಡೆಯುವ ಕುರಿತಾದ ಮಾಹಿತಿಯುಳ್ಳ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಶಿಬಿರದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಆರ್ಬಿಐನ ಎಜಿಎಂ ನಿಶಾ ಠಾಕೂರ್, ಕೆನರಾ ಬ್ಯಾಂಕ್ ನ ಅರ್ಚನಾ, ಲೀಡ್ ಬ್ಯಾಂಕ್ ಮೆನೇಜರ್ (ಪ್ರಭಾರ) ಕೆ. ಎಸ್. ಮಹಾದೇವಪ್ಪ, ಉಡುಪಿ ಜಿಪಂ ಯೋಜನಾಧಿಕಾರಿ ವಿಜಯಕುಮಾರ್ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು, ಎಲ್ಐಸಿ ಅಧಿಕಾರಿ ಗಳು, ಗ್ರಾಹಕರು ಉಪಸ್ಥಿತರಿದ್ದರು.
ನಮ್ಮ ನೀರಾವರಿ ಯೋಜನೆಗಳ ಪರ ಕೋರ್ಟ್ ತೀರ್ಪಿದ್ದರೂ ಕೇಂದ್ರದ ಅಸಹಕಾರದಿಂದ ಅನುಷ್ಠಾನ ಸ್ಥಗಿತ : ಡಿ.ಕೆ.ಶಿವಕುಮಾರ್
ಬೆಂಗಳೂರು: “ಕೃಷ್ಣಾ, ಮಹದಾಯಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಪರ ನ್ಯಾಯಾಲಯದ ತೀರ್ಪು ಬಂದಿದ್ದರೂ ಅಧಿಸೂಚನೆ ಹೊರಡಿಸದ, ಅನುಮತಿ ನೀಡದ ಕೇಂದ್ರ ಸರ್ಕಾರದ ಅಸಹಕಾರದಿಂದ ಈ ಯೋಜನೆಗಳು ಸ್ಥಗಿತಗೊಂಡಿವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು. ತಾವು ರಚಿಸಿರುವ 'ನೀರಿನ ಹೆಜ್ಜೆ' ಕೃತಿಯನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು. “ಕೃಷ್ಣಾ ನದಿ ವಿವಾದದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸುತ್ತಿಲ್ಲ. ಅಂದು ಯೋಜನೆಗೆ ಒಪ್ಪಿದ್ದ ಮಹಾರಾಷ್ಟ್ರ ಇಂದು ವಿರೋಧ ವ್ಯಕ್ತಪಡಿಸುತ್ತಿದೆ. ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದರೂ ಅನುಷ್ಠಾನ ಆಗಿಲ್ಲ. ಗೋವಾದಲ್ಲಿ ಒಬ್ಬ ಸಂಸದ ಇದ್ದಾನೆ. ನಮ್ಮಲ್ಲಿ 28 ಸಂಸದರಿದ್ದರೂ ನಮ್ಮ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಯೋಜನೆ ಜಾರಿಗೆ ಟೆಂಡರ್ ಕರೆಯಲಾಗಿದೆ. ಆದರೆ ಕೇಂದ್ರದ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ” ಎಂದರು. “ರಾಜ್ಯದ ಪ್ರಮುಖ ಕೃಷ್ಣಾ, ಮಹದಾಯಿ, ತುಂಗಭದ್ರಾ, ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕೇಂದ್ರದ ಮಂತ್ರಿಗಳನ್ನು ಐದು ಬಾರಿ ಭೇಟಿ ಮಾಡಿದ್ದೇನೆ. ಯಾವುದೇ ಫಲಿತಾಂಶ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಹಿತ ಕಾಪಾಡುವುದು ಹೇಗೆ?” ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು ಧ್ವನಿ ಎತ್ತುತ್ತಿಲ್ಲ: “ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರ ಅಧಾರದ ಮೇಲೆ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್ ನಲ್ಲಿ ಅನುದಾನ ತೋರಿಸಿದ್ದರು. ಆದರೆ ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನೆ ಮಾಡುವ ಆತ್ಮಸ್ಥೈರ್ಯ ಬಿಜೆಪಿಯ ಯಾವ ಸಂಸದರಿಗೂ ಇಲ್ಲ. ಅವರು ರಾಜ್ಯದ ಪರ ಒಂದೇ ಒಂದು ಮಾತು ಆಡಿಲ್ಲ. ಅಷ್ಟಾದರೂ ಇವರು ಸಂಸದರಾಗಿ ಹೇಗೆ ಮುಂದುವರಿಯುತ್ತಿದ್ದಾರೆ ಎಂಬುದೇ ನನಗೆ ಅರಿವಾಗುತ್ತಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನೆರೆಯ ತಮಿಳುನಾಡು, ಆಂಧ್ರ ಪ್ರದೇಶದವರು ತಮ್ಮ ರಾಜ್ಯದ ವಿಚಾರ ಬಂದಾಗ ಪಕ್ಷಬೇಧ ಮರೆತು ಒಂದಾಗಿ ಧ್ವನಿ ಎತ್ತುತ್ತಾರೆ. ನಮ್ಮ ಕೈಯಲ್ಲಿ ಎಷ್ಟು ದಿನ ಅಧಿಕಾರ ಇರುತ್ತದೆ ಎಂಬುದಕ್ಕಿಂತ, ಅಧಿಕಾರ ಇದ್ದಷ್ಟು ದಿನ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ” ಎಂದು ಕಿಡಿಕಾರಿದರು. “ನೀರು ಎಲ್ಲರಿಗೂ ಬೇಕು. ಬೆಂಗಳೂರು ಅಷ್ಟು ದೊಡ್ಡದಾಗಿ ಬೆಳೆಯಲು ಕಾರಣ ನೀರು. ಬೆಂಗಳೂರು ಜಾಗತಿಕ ನಗರ ಎಂದು ವಾಜಪೇಯಿ ಅವರು ತಿಳಿಸಿದ್ದರು. ಈ ರಾಜ್ಯದಲ್ಲಿ ಮಹರಾಜರು ಕಟ್ಟಿದ ಅಣೆಕಟ್ಟುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಣೆಕಟ್ಟುಗಳು ನಿರ್ಮಾಣವಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ನನಗೆ ರಾಜಕಾರಣ ಮಾತನಾಡಲು ಇಷ್ಟವಿಲ್ಲ. ಆದರೂ ಕಾಂಗ್ರೆಸ್ ಬಿಟ್ಟು ಬೇರೆ ಸರ್ಕಾರಗಳು ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟು ನಿರ್ಮಿಸಿದೆಯೇ?” ಎಂದು ಪ್ರಶ್ನಿಸಿದರು. 10 ನದಿ ವಿವಾದಗಳ ಪೈಕಿ ಕರ್ನಾಟಕದ್ದೇ 5 ನದಿ ವಿವಾದಗಳಿವೆ: “ನೆಹರೂ ಅವರು ಅಣೆಕಟ್ಟುಗಳೇ ಆಧುನಿಕ ಭಾರತದ ದೇವಾಲಯ ಎಂದು ಕರೆದರು. ಅವರು ತುಂಗಭದ್ರಾ ಅಣೆಕಟ್ಟೆ ನಿರ್ಮಾಣ ಸಂದರ್ಭ ಕರ್ನಾಟಕಕ್ಕೆ ನೀಡಿ, ನೆರವು ಕೊಟ್ಟಿದ್ದರು. ದೇಶದಲ್ಲಿರುವ 10 ನದಿ ವಿವಾದಗಳ ಪೈಕಿ ಐದು ಕರ್ನಾಟಕದ್ದೇ ಆಗಿವೆ. ಈ ಬಗ್ಗೆ ಪುಸ್ತಕದಲ್ಲಿ ತಿಳಿಸಿದ್ದೇನೆ” ಎಂದರು. “ರಾಜ್ಯದಲ್ಲಿ ಪ್ರತ್ಯೇಕ ಜಲ ಆಯೋಗ ಸ್ಥಾಪಿಸಲಾಗುವುದು. ನೀರಾವರಿಯಿಂದ ಕುಡಿಯುವ ಉದ್ದೇಶ ಹಾಗೂ ಕೈಗಾರಿಕೆಗಳಿಗೆ ನೀರು ಒದಗಿಸುವ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ಸಲಹೆ ನೀಡಲು ಈ ಆಯೋಗದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
ಉಡುಪಿ | ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ: ಲೋಕೇಶ್ ಸಿ.
ಪೆರ್ವಾಜೆಯಲ್ಲಿ ಜಿಲ್ಲಾ ಮಕ್ಕಳ ದಿನಾಚರಣೆ
ಯುನಿವೆಫ್ | ಯುವಕರು-ವಿದ್ಯಾರ್ಥಿಗಳ ಸ್ನೇಹ ಮಿಲನ
ಮಂಗಳೂರು , ನ.14: ಯುನಿವೆಫ್ ಕರ್ನಾಟಕ ಆಶ್ರಯದಲ್ಲಿ ವಿದ್ಯಾರ್ಥಿ ಹಾಗೂ ಯುವಕರ ಸ್ನೇಹ ಮಿಲನ ಕಾರ್ಯಕ್ರಮ ಫಳ್ನೀರ್ ನ ಲುಲು ಸೆಂಟರ್ ನಲ್ಲಿರುವ ಅಲ್ ವಹ್ದಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. 2025 ಸೆ.19 ರಿಂದ ಜ.2ರ ವರೆಗೆ ‘ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20ನೇ ವರ್ಷದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ಅಭಿಯಾನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ಜನಾಬ್ ರಫೀಉದ್ದೀನ್ ಕುದ್ರೋಳಿ ಅವರು ದಿಕ್ಸೂಚಿ ಭಾಷಣ ಮಾಡಿದರು. ‘‘ಯುವಕರು ಸುಲಭವಾಗಿ ದಾರಿ ತಪ್ಪಿ ನಡೆಯುವ ಅವಕಾಶಗಳಿರುವ ಇಂದಿನ ಕಾಲದಲ್ಲಿ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಯುನಿವೆಫ್ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು. ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರು ವಿದ್ಯಾರ್ಥಿ ಹಾಗೂ ಯುವಕರೊಂದಿಗೆ ಸಂವಾದ ನಡೆಸಿ, ‘‘ಪ್ರಸಕ್ತ ಪರಿಸ್ಥಿತಿಯನ್ನು ಬದಲಾಯಿಸಬೇಕೆಂಬ ಬಯಕೆ ಯುವಕರಲ್ಲಿ ಮೂಡದಿದ್ದರೆ ಅದನ್ನು ಹೇಗೆ ಮಾಡಬೇಕೆಂಬ ಯೋಜನೆಯೂ ಮೂಡಿ ಬರುವುದಿಲ್ಲ. ವ್ಯವಸ್ಥಿತವಾಗಿ ಸುಳ್ಳು ಹರಡುವವರ ವಿರುದ್ಧ ಸತ್ಯ ಹರಡುವ ಕಾರ್ಯ ತ್ವರಿತವಾಗಿ ನಡೆಯಬೇಕಾಗಿದೆ. ಅದಕ್ಕಾಗಿ ಯುವಕರು ಸನ್ನದ್ಧರಾಗಬೇಕು’’ ಎಂದರು. ಸಿರಾಜುಲ್ ಹಸನ್ ಕಿರಅತ್ ಪಠಿಸಿದರು. ಯುನಿವೆಫ್ ಕ್ಯಾಂಪಸ್ ಫೋರಮ್ ಸದಸ್ಯ ಮುಹಮ್ಮದ್ ಅಯಾನ್ ಆಸಿಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಮುಹಮ್ಮದ್ ಸುಹೈಮ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುನಿವೆಫ್ ಕ್ಯಾಂಪಸ್ ಫೋರಮ್ ಅಧ್ಯಕ್ಷ ಇಹ್ಸಾನ್ ರಫೀಕ್ ವಂದಿಸಿದರು.
ಬಿಹಾರ ಚುನಾವಣಾ ಫಲಿತಾಂಶ - ಅಂತೂ ಇಂತೂ ಬಂತು ರಾಹುಲ್ ಗಾಂಧಿ ಫಸ್ಟ್ ರಿಯಾಕ್ಷನ್
ಬಿಹಾರ ಚುನಾವಣಾ ಫಲಿತಾಂಶ ಹೊರಬೀಳುತ್ತಲೇ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದವು. ಇಡೀ ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಏನೂ ಹೇಳಿರಲಿಲ್ಲ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ರಾತ್ರಿಯ ಸುಮಾರಿಗೆ ಅವರಿಂದ ಪ್ರತಿಕ್ರಿಯೆ ಬಂದಿದೆ. ಏನಂದ್ರು ಅವರು? ಇಲ್ಲಿದೆ ವಿವರ.
ಡಿಕೆಶಿ ಬರೆದಿರುವ ನೀರಿನ ಹೆಜ್ಜೆ: ವಿವಾದ-ಒಪ್ಪಂದ-ತೀರ್ಪು ಕೃತಿ ಬಿಡುಗಡೆ
ಗೇರು ಕೃಷಿಗೆ ಕೇಂದ್ರ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ : ಸಚಿವೆ ಶೋಭಾ ಕರಂದ್ಲಾಜೆ
ಕಾಜು ಶತಮಾನೋತ್ಸವ ಸಮ್ಮೇಳನ-2025
ಕಲಬುರಗಿ | ಅಷ್ಟಗಾ ಗ್ರಾಮದಲ್ಲಿ ಲಘು ಭೂಕಂಪನ : ರಿಕ್ಟರ್ ಮಾಪಕದಲ್ಲಿ 2.0 ತೀವ್ರತೆ ದಾಖಲು
ಕಲಬುರಗಿ: ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ತಿಳಿಸಿದೆ. ಕಲಬುರಗಿ ತಾಲೂಕಿನ ಕಲ್ಲಹಂಗರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಷ್ಟಗಾ ಗ್ರಾಮದ ವ್ಯಾಪ್ತಿಯಲ್ಲಿ ಭೂ ಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.0 ತೀವ್ರತೆ ದಾಖಲಾಗಿದೆ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪನವಾಗಿದೆ. ಕಲಬುರಗಿ ನಗರದಿಂದ ಸುಮಾರು 12 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ ಎಂದು KSNDMC ಮಾಹಿತಿ ನೀಡಿದೆ.
Mangaluru | ಸುರತ್ಕಲ್ನಲ್ಲಿ ಸಿಎನ್ಜಿ ಗ್ಯಾಸ್ ಸಿಲಿಂಡರ್ ಸೋರಿಕೆ
ಸುರತ್ಕಲ್: ಸಿಎನ್ಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದ ಘಟನೆ ರಾ.ಹೆ. 66ರ ಸುರತ್ಕಲ್ ಅಥರ್ವಾ ಆಸ್ಪತ್ರೆ ಬಳಿ ಶುಕ್ರವಾರ ರಾತ್ರಿ ವರದಿಯಾಗಿದೆ. ಗೇಲ್ ಇಂಡಿಯಾ ಕಂಪೆನಿಗೆ ಸೇರಿದ ತೆರೆದ ಲಾರಿಯಲ್ಲಿ ಸಿಎನ್ ಜಿ ಆಟೊ ಅನಿಲವನ್ನು ಪಣಂಬೂರು ಶೇಖರಣಾ ಘಟಕದಿಂದ ಉಡುಪಿ ಕಡೆ ಬೃಹತ್ ಸಿಲಿಂಡರ್ ಗಳ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದೆ ಎನ್ನಲಾಗಿದ್ದು, ಕೆಲಹೊತ್ತು ಸಾರ್ವಜನಿಕರು ಆತಂಕಕ್ಕೀಡಾದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸುರತ್ಕಲ್ ಪೊಲೀಸರು ಮತ್ತು ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಹೆದ್ದಾರಿಯ ಎರಡೂ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ದೂರದಲ್ಲೆ ತಡೆದು ನಿಲ್ಲಿಸಿದರು ಎನ್ನಲಾಗಿದೆ. ಈ ಸಂದರ್ಭ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಗೇಲ್ ಇಂಡಿಯಾ ಕಂಪೆನಿಗೆ ಮಾಹಿತಿ ನೀಡಿ ಟೆಕ್ನೀಶಿಯನ್ ಗಳನ್ನು ಕರೆಸಿಕೊಂಡು ಸೋರಿಕೆಯನ್ನು ತಡೆಗಟ್ಟಿ ಲಾರಿಯನ್ನು ಪಣಂಬೂರು ಶೇಖರಣಾ ಘಟಕಕ್ಕೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಯಾದಗಿರಿ | ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿದ್ದ ನಗರಸಭೆ ಮಾಜಿ ಅಧ್ಯಕ್ಷೆ ಚಿಕಿತ್ಸೆ ಫಲಿಸದೆ ಮೃತ್ಯು
ಯಾದಗಿರಿ: ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿದ್ದ ನಗರಸಭೆ ಮಾಜಿ ಅಧ್ಯಕ್ಷೆ ಅಂಜಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನವೆಂಬರ್ 12ರಂದು ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ನಗರಸಭೆ ಮಾಜಿ ಅಧ್ಯಕ್ಷೆ ಮತ್ತು ಸಮಾಜ ಕಲ್ಯಾಣ ಇಲಾಖೆ ದ್ವೀತಿಯ ದರ್ಜೆ ಸಹಾಯಕಿ ಅಂಜಲಿ ಅವರ ಕಾರನ್ನು ಹಿಮ್ಮೆಟ್ಟಿಸಿಕೊಂಡು ಬಂದ ದುಷ್ಕರ್ಮಿಗಳು ಗ್ರಿನ್ ಸಿಟಿ ಬಳಿ ತಡೆದು ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ಮಾಡಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಂಜಲಿ ಅವರನ್ನು ಗುಲ್ಬರ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ರವಾನಿಸಲಾಗಿತ್ತು. ಆದರೆ ಅವರು ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಾಲುಮರದ ತಿಮ್ಮಕ್ಕ ನಿಧನ; ಸರ್ಕಾರಿ ರಜೆ ಕುರಿತು ಹರಿದಾಡಿದ ಸುದ್ದಿ ಸುಳ್ಳು: ಮಂಡ್ಯ ಜಿಲ್ಲಾಡಳಿತ
ಸಾಲುಮರದ ತಿಮ್ಮಕ್ಕನವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ನವೆಂಬರ್ 14, 2025 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಜೊತೆಗೆ ಶಾಲಾ ಕಾಲೇಜುಗಳಿಗೆ ರಜೆ ಎಂದು ತಿಳಿಸುವ ನಕಲಿ ಸರ್ಕಾರಿ ಅಧಿಸೂಚನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ ಎಂದು ಜಿಲ್ಲಾಡಳಿತ ತಿಳಿಸಿದೆ.
ಬಿಹಾರದಲ್ಲಿ ಎನ್ಡಿಎ ಗೆದ್ದಿದ್ದು ಹೇಗೆ?
ಹೊಸದಿಲ್ಲಿ, ನ. 14: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಐತಿಹಾಸಿಕ ಗೆಲುವು ಸಾಧಿಸಿದೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಅದು 208 ಸ್ಥಾನಗಳನ್ನು ಗೆದ್ದಿದೆ. ಈ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಮಹಿಳೆಯರು ಮತ್ತು ಯುವ ಮತದಾರರು ಎನ್ಡಿಎ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆಂದು ಭಾವಿಸಲಾಗಿದೆ. ಎನ್ಡಿಎ ಅಭೂತಪೂರ್ವ ಯಶಸ್ಸಿಗೆ ಸ್ಥೂಲವಾಗಿ ಐದು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ►ಸಮರ್ಪಕ ಸ್ಥಾನ ಹಂಚಿಕೆ : ಸ್ಥಾನ ಹೊಂದಾಣಿಕೆಯು ಬಹುತೇಕ ಸೌಹಾರ್ದ ರೀತಿಯಲ್ಲಿ ನಡೆದಿದೆ. ಎನ್ಡಿಎಯ ಘಟಕ ಪಕ್ಷಗಳ ನಡುವೆ ಎಲ್ಲಿಯೂ ಸ್ಪರ್ಧೆ ಏರ್ಪಡದಂತೆ ನೋಡಿಕೊಳ್ಳಲಾಗಿದೆ. ►‘ಜಂಗಲ್ ರಾಜ್’ ಗುಮ್ಮ : ಬಿಹಾರದಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ತನ್ನ ಪ್ರಚಾರದ ವೇಳೆ ‘ಜಂಗಲ್ ರಾಜ್’ ಮತ್ತೆ ಬರಬಹುದು ಎಂಬ ಬೆದರಿಕೆಯನ್ನು ಜನರಲ್ಲಿ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ಆರ್ಜೆಡಿಯೊಂದಿಗೆ ಗುರುತಿಸಿಕೊಂಡ ಗೂಂಡಾಗಳು ಉಪಮುಖ್ಯಮಂತ್ರಿ ವಿಜಯಕುಮಾರ್ ಸಿನ್ಹಾರ ವಾಹನಗಳ ಸಾಲಿನ ಮೇಲೆ ನಡೆಸಿದ್ದಾರೆನ್ನಲಾದ ದಾಳಿಯನ್ನು ತನ್ನ ಲಾಭಕ್ಕೆ ಬಳಸುವಲ್ಲಿ ಎನ್ಡಿಎ ಯಶಸ್ವಿಯಾಯಿತು. ►ಜಾತಿ ಸಮೀಕರಣದ ವಿಸ್ತರಣೆ : ಎನ್ಡಿಎ ಭವ್ಯ ಗೆಲುವಿಗೆ ಮುಖ್ಯ ಕಾರಣಗಳಲ್ಲಿ ಒಂದು ಜಾತಿ ಸಮಿಕರಣದ ವಿಸ್ತರಣೆ. ಹಿಂದೆ, ಬಿಹಾರ ರಾಜಕಾರಣ ನಡೆಯುತ್ತಾ ಬಂದಿದ್ದು ಮುಸ್ಲಿಮ್-ಯಾದವ್ ಸಮೀಕರಣದಲ್ಲಿ. ಅದರಿಂದ ಆರ್ಜೆಡಿ ಪ್ರಯೋಜನ ಪಡೆದಿತ್ತು. ಆದರೆ, 2025ರಲ್ಲಿ, ಮಹಿಳಾ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ)ಗಳ ಸಮ್ಮಿಲನವು ಮುನ್ನೆಲೆಗೆ ಬಂತು. ಅದರ ಲಾಭವನ್ನು ಎನ್ಡಿಎ ಪಡೆಯಿತು. ►ಮಹಿಳೆಯರು : ಎನ್ಡಿಎಯ ಬೃಹತ್ ವಿಜಯದಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಸುಮಾರು ಒಂದೂವರೆ ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10,000 ರೂ. ನಗದು ವರ್ಗಾವಣೆ ಮಾಡಿರುವುದು ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಮಹಿಳೆಯರ ಮತದಾನವು ಪುರುಷರಿಗಿಂತ10-20 ಶೇಕಡದಷ್ಟು ಹೆಚ್ಚಾಗಿತ್ತು. ►14 ಲಕ್ಷ ಹೊಸ ಮತದಾರರ ಸೇರ್ಪಡೆ : 14 ಲಕ್ಷ ಹೊಸ ಮತದಾರರ ಸೇರ್ಪಡೆಯು ಎನ್ಡಿಎಯ ಮತನೆಲೆಯನ್ನು ವಿಸ್ತರಿಸಿತು. ಹೊಸ ಮತದಾರರ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಸೋಲು | ಲಾಲು, ಆರ್ಜೆಡಿಗೆ ತೀವ್ರ ಹಿನ್ನಡೆ
ಪಾಟ್ನಾ, ನ. 14: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ಆರ್ಜೆಡಿ ಮತ್ತು ಅದರ ಸ್ಥಾಪಕ ಲಾಲುಪ್ರಸಾದ್ ಯಾದವ್ ಗೆ ತೀವ್ರ ಹಿನ್ನಡೆಯನ್ನು ತಂದಿದೆ. ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ, ಕಿರಿಯ ಮಗ ತೇಜಸ್ವಿ ಯಾದವ್ ಆರಂಭದಲ್ಲಿ ಅನುಭವಿಸಿದ ಹಿನ್ನಡೆ ಆರ್ಜೆಡಿಗೆ ದೊಡ್ಡ ಹೊಡೆತವಾಗಿದೆ. ಹದಿನೈದು ವರ್ಷಗಳ ಆರ್ಜೆಡಿ ಆಳ್ವಿಕೆಯ ವೇಳೆ ಬಿಹಾರ ಕಂಡ ಜಂಗಲ್ ರಾಜ್ ಹಾಲಿ ಚುನಾವಣಾ ಹಿನ್ನಡೆಯಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಪಕ್ಷದದ ಭದ್ರಕೋಟೆ ರಾಘೋಪುರದಲ್ಲಿ ಒಂದು ಹಂತದಲ್ಲಿ ತೇಜಸ್ವಿ ಹಿನ್ನಡೆ ಅನುಭವಿಸಿದರು. ಈ ಕ್ಷೇತ್ರದಿಂದ ಲಾಲು ಮತ್ತು ತೇಜಸ್ವಿಯ ತಾಯಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಆಯ್ಕೆಯಾಗಿದ್ದರು. 2015ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತೇಜಸ್ವಿ ಸುಲಭವಾಗಿ ಗೆಲ್ಲಬೇಕಾಗಿತ್ತು. ಒಂದು ಹಂತದಲ್ಲಿ, ಅವರು 5,000 ಮತಗಳ ಹಿನ್ನಡೆಯನ್ನೂ ಅನುಭವಿಸಿದರು. ಆದರೆ, ಅಂತಿಮವಾಗಿ, 10,000ಕ್ಕಿಂತ ಅಧಿಕ ಮತಗಳ ಅಂತರದಿಂದ ಗೆದ್ದರು.
ಬಿಹಾರ ಚುನಾವಣೆ | ಉವೈಸಿ ಪಕ್ಷಕ್ಕೆ ಐದು ಸ್ಥಾನ!
ಪ್ರತ್ಯೇಕವಾಗಿ ಸ್ಪರ್ಧಿಸಿ ಗೆದ್ದ ಎಐಎಂಐಎಂ
ಎಸ್ಐಆರ್ ಆಟ ಮತ್ತೆ ನಡೆಯಲು ಬಿಡುವುದಿಲ್ಲ: ಅಖಿಲೇಶ್ ಯಾದವ್
ಲಕ್ನೊ, ನ. 14: ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ನಡೆಸಲಾದ ಆಟವನ್ನು ಇನ್ನು ಮುಂದೆ ಇತರ ರಾಜ್ಯಗಳಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದಾರೆ. ‘ಎಕ್ಸ್’ನ ಪೋಸ್ಟ್ನಲ್ಲಿ ಅಖಿಲೇಶ್ ಯಾದವ್, ಬಿಹಾರದಲ್ಲಿ ಎಸ್ಐಆರ್ ಮೂಲಕ ನಡೆಸಿದ ಆಟ ಈಗ ಬಹಿರಂಗಗೊಂಡಿದೆ. ಪಶ್ಚಿಮಬಂಗಾಳ, ತಮಿಳುನಾಡು, ಉತ್ತರಪ್ರದೇಶ ಹಾಗೂ ಇತರ ಯಾವುದೇ ರಾಜ್ಯಗಳಲ್ಲಿ ಅಂತಹ ಚುನಾವಣಾ ಪಿತೂರಿಗಳು ಸಾಧ್ಯವಾಗಲಾರದುʼ, ಎಂದು ಹೇಳಿದ್ದಾರೆ. ಸಿಸಿಟಿವಿಯಂತೆ ನಮ್ಮ ಪಿಪಿಟಿವಿ, ಅಥವಾ ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಪ್ರಹಾರಿ (ಕಾವಲು ಸಂಸ್ಥೆ) ಜಾಗರೂಕವಾಗಿದ್ದು, ಬಿಜೆಪಿಯ ತಂತ್ರಗಳನ್ನು ವಿಫಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಒಂದು ಪಕ್ಷವಲ್ಲ. ಬದಲಾಗಿ ಅದು ವಂಚಕ ಪಕ್ಷ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಗೆಲುವು ಸಾಧಿಸಿದ ಜೆಡಿಯು ಅಭ್ಯರ್ಥಿ!
ಪಾಟ್ನಾ, ನ. 14: ಜನ ಸುರಾಜ್ ಪಕ್ಷ(ಜೆಎಸ್ಯು)ದ ಬೆಂಬಲಿಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾರಾಗೃಹದಲ್ಲಿರುವ ಜನತಾ ದಳ(ಯು)ದ ನಾಯಕ ಅನಂತ್ ಸಿಂಗ್ ಮೊಕಾಮ ವಿಧಾನ ಸಭಾ ಕ್ಷೇತ್ರದಲ್ಲಿ 28,000ಕ್ಕೂ ಅಧಿಕ ಮತಗಳ ಅಂತರದಿಂದ ಅಭೂತಪೂರ್ವ ಜಯ ಗಳಿಸಿದ್ದಾರೆ. ಅನಂತ್ ಸಿಂಗ್ ತನ್ನ ಸಮೀಪದ ಪ್ರತಿಸ್ಪರ್ಧಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ದ ವೀನಾ ದೇವಿ ಅವರನ್ನು 28,206 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅನಂತ್ ಸಿಂಗ್ 91,416 ಮತಗಳನ್ನು ಪಡೆದುಕೊಂಡಂಡರೆ, ವೀಣಾ ದೇವಿ ಅವರು 63,210 ಮತಗಳನ್ನು ಪಡೆದುಕೊಂಡಿದ್ದಾರೆ ಮೊಕಾಮಾ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ 5 ಬಾರಿ ಜಯ ಗಳಿಸಿರುವ ಅನಂತ್ ಸಿಂಗ್ 2005ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿ (ಯು) ಅಭ್ಯರ್ಥಿಯಾಗಿ ಮೊದಲ ಭಾರಿಗೆ ಸ್ಪರ್ಧಿಸಿದ್ದರು. ಅನಂತರ ಅವರು 2010ರಲ್ಲಿ ಕೂಡ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದರು. ಆದರೆ, ಐದು ವರ್ಷಗಳ ಬಳಿಕ ಜೆಡಿ (ಯು)ಗೆ ರಾಜೀನಾಮೆ ನೀಡಿದ್ದರು. ಅದೇ ವರ್ಷ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಹಾಗೂ ಜೆಡಿ(ಯು) ಅಭ್ಯರ್ಥಿಯನ್ನು ಸೋಲಿಸಿದರು. 2020ರ ಚುನಾವಣೆಗೆ ಮುನ್ನ ಅವರು ಆರ್ಜೆಡಿಯೊಂದಿಗೆ ಸೇರಿದರು ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜಯ ಗಳಿಸಿದರು. ಸಿಂಗ್ ಅವರ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳಿದ್ದು, ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಳಿಕ 2022ರಲ್ಲಿ ಅವರು ತನ್ನ ಸ್ಥಾನವನ್ನು ಕಳೆದುಕೊಂದ್ದರು. ಆನಂತರ ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ನೀಲಮ್ ದೇವಿ ಸ್ಪರ್ಧಿಸಿ ಸ್ಥಾನವನ್ನು ಉಳಿಸಿಕೊಂಡಿದ್ದರು. ರಾಜಕಾರಣಿಯಾಗಿ ಬದಲಾದ ಭೂಗತ ಪಾತಕಿ ದುಲಾರ್ ಸಿಂಗ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿ ಅನಂತ್ ಸಿಂಗ್ ನವೆಂಬರ್ 2ರಂದು ಬಂಧಿತರಾಗಿದ್ದರು. ಪ್ರಶಾಂತ್ ಕಿಶೋರ್ ಅವರ ಜನ ಸೂರಜ್ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ಮಾಡುತ್ತಿದ್ದಾಗ ಯಾದವ್ ಅವರನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.
ರಾಯಚೂರು: ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಸಕ್ಕರೆ ಕಾರ್ಖಾನೆ ಬಳಿ 60ರಿಂದ 70 ಕಬ್ಬು ತುಂಬಿದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿದ್ದು, ಇದರ ಹಿಂದೆ ಸರಕಾರದ ಗೊಂದಲ ಹಾಗೂ ಕಾರ್ಖಾನೆ ಮಾಲಕರ ಸಂಚು ಅಡಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಆರೋಪಿಸಿದರು. ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಾಮರಸ ಮಾಲೀಪಾಟೀಲ್, ಕಬ್ಬು ಬೆಳೆಗಾರರು ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಿದ್ದರು, ಪ್ರತಿಭಟನೆ ವೇಳೆ ಏಕಾಏಕಿ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಕೃತ್ಯ ಯಾರೇ ಮಾಡಿದ್ದರೂ ರೈತ ಸಂಘ ಅದನ್ನು ಖಂಡಿಸುತ್ತದೆ. ಈ ಘಟನೆ ಬಗ್ಗೆ ಸಾಕಷ್ಟು ಜನರು ರೈತರೇ ಬೆಂಕಿ ಹಚ್ಚಿದ್ದಾರೆ ಎಂದು ಹೇಳುತ್ತಿದ್ದು, ತಾವು ಬೆಳೆದ ಬೆಳೆಗೆ ತಾವೇ ಬೆಂಕಿ ಹಚ್ಚುವ ಕೆಲಸ ರೈತರು ಮಾಡುವುದಿಲ್ಲ. ಕಾರ್ಖಾನೆ ಮಾಲಕರ ವ್ಯವಸ್ಥಿತವಾದ ಸಂಚು ಈ ಘಟನೆಗೆ ಕಾರಣವಾಗಿದ್ದು, ಘಟನೆಗೂ ಮುನ್ನ ಕಾರ್ಖಾನೆಯಲ್ಲಿ ಸಾಕಷ್ಟು ಜನ ಗೂಂಡಾಗಳನ್ನು ಇರಿಸಿಕೊಂಡು ಸಂಚು ರೂಪಿಸಲಾಗಿದೆ. ಕೂಡಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಘಟನೆಗೆ ಕಾರಣರಾದವರೂ ಯಾರೇ ಆಗಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮವಾಗಬೇಕು. ನಷ್ಟ ಉಂಟಾದ ರೈತರಿಗೆ ಪರಿಹಾರ ನೀಡಬೇಕು. ರೈತರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ 5.50 ಎಕರೆ ಪ್ರದೇಶದಲ್ಲಿ ಹತ್ತಿಯನ್ನು ಬೆಳೆಯಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹತ್ತಿ ಬೆಳೆ ಗಣನೀಯವಾಗಿ ಹೆಚ್ಚಳವಾಗಿದ್ದು, ಸರಕಾರದಿಂದ 2110 ರೂ.ಬೆಂಬಲ ಬೆಲೆ ಯೋಜನೆಯಲ್ಲಿ ಹತ್ತಿ ಖರೀದಿ ಮಾಡುತ್ತಿದ್ದು, ಆದರೆ ಮುಕ್ತ ಮಾರುಕಟ್ಟೆಯಲ್ಲಿ 3300ರೂ. ಕ್ವಿಂಟಾಲ್ಗೆ ನೀಡಲಾಗುತ್ತಿದೆ. ಖರೀದಿ ಕೇಂದ್ರದಲ್ಲಿ ರೈತರಿಗೆ ಸ್ಲಾಟ್ ಮಾಡಿಕೊಳ್ಳಲು 30 ಸೆಕೆಂಡ್ ಕಾಲಾವಕಾಶ ನೀಡಲಾಗಿದ್ದು, ಇಷ್ಟು ಕಡಿಮೆ ಸಮಯದಲ್ಲಿ ರೈತರು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ತೂಕದಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ಅನ್ಲೋಡ್ ಸಮಯದಲ್ಲಿ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ. ಖರೀದಿ ಕೇಂದ್ರ ಮತ್ತು ಮುಕ್ತ ಮಾರುಕಟ್ಟೆಯ ಈ ನಡೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು. ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿದೆ, ಸರಕಾರದಿಂದ ವೈಮಾನಿಕ ಸಮೀಕ್ಷೆ ನಡೆಸಲಾಗಿದ್ದು, ಈವರೆಗೂ ಪರಿಹಾರ ಘೋಷಣೆಯಾಗಿಲ್ಲ. ಕೇಂದ್ರದಿಂದ ಹಣ ಬಂದರೂ ಪರಿಹಾರ ನೀಡಲು ಸರಕಾರ ಮುಂದಾಗುತ್ತಿಲ್ಲ. ಜಿಲ್ಲೆಯ ಈ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಕೈಗೆ ಸಿಗುವುದಿಲ್ಲ. ಇಲ್ಲಿನ ಮಂತ್ರಿಗಳು ಶಾಸಕರೂ ಕೂಡ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ, ಬೂದಯ್ಯ ಸ್ವಾಮಿ, ದೇವರಾಜ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಿಹಾರ ಗೆಲುವು | ಮತದಾರರಿಗೆ ನಾನು ತಲೆ ಬಾಗಿ ನಮಿಸುತ್ತೇನೆ: ನಿತೀಶ್ ಕುಮಾರ್
ಪಾಟ್ನಾ,ನ.14: ತನ್ನ ಆಡಳಿತಾರೂಢ ಎನ್ಡಿಎ ಬಣವನ್ನು ಭರ್ಜರಿಯಾಗಿ ಗೆಲ್ಲಿಸಿದ್ದಕ್ಕೆ ಶುಕ್ರವಾರ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಿಹಾರವು ಇನ್ನಷ್ಟು ಪ್ರಗತಿಯನ್ನು ಸಾಧಿಸುವ ಮೂಲಕ ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದಾಗಲಿದೆ ಎಂದು ಘೋಷಿಸಿದ್ದಾರೆ. ಬೃಹತ್ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿರುವ ಅವರು, ವಿಧಾನಸಭಾ ಚುನಾವಣೆಗಳಲ್ಲಿ ಎನ್ಡಿಎ ಸಂಪೂರ್ಣ ಒಗ್ಗಟ್ಟನ್ನು ಪ್ರದರ್ಶಿಸಿತ್ತು ಎಂದು ಹೇಳಿದ್ದಾರೆ. ‘ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಭರ್ಜರಿ ಬಹುಮತವನ್ನು ನೀಡುವ ಮೂಲಕ ರಾಜ್ಯದ ಜನರು ನಮ್ಮ ಸರಕಾರದಲ್ಲಿ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ರಾಜ್ಯದ ಎಲ್ಲ ಗೌರವಾನ್ವಿತ ಮತದಾರರಿಗೆ ನಾನು ತಲೆ ಬಾಗಿ ನಮಿಸುತ್ತೇನೆ ಮತ್ತು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ’ಎಂದು ನಿತೀಶ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಎನ್ಡಿಎದ ಎಲ್ಲ ಪಾಲುದಾರ ಪಕ್ಷಗಳಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಎನ್ಡಿಎಗೆ ಭಾರೀ ಗೆಲುವು | ಬಿಹಾರ ಹೂಕೋಸು ಕೃಷಿಯನ್ನು ಅನುಮೋದಿಸಿದೆ: ಆಘಾತಕಾರಿ ಹೇಳಿಕೆ ನೀಡಿದ ಅಸ್ಸಾಂ ಸಚಿವ
1989ರಲ್ಲಿ ಬಿಹಾರದ ಭಾಗಲ್ಪುರದ ಕೋಮು ಗಲಭೆ ʼಲೋಗಾಯಿನ್ ಹತ್ಯಾಕಾಂಡʼ ನೆನಪಿಸಿದ ಸಚಿವ!
ರಾಯಚೂರು | ಜೆಸ್ಕಾಂ ನೌಕರರ ಬಡ್ತಿ ವಿಳಂಬ ಖಂಡಿಸಿ ಪ್ರತಿಭಟನೆ
ರಾಯಚೂರು: ಜೆಸ್ಕಾಂ ವೃತ್ತ ಮಟ್ಟದಲ್ಲಿ 94 ನೌಕರರ ಬಡ್ತಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವತಿಯಿಂದ ನಗರದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ರಾಯಚೂರಿನಲ್ಲಿ 94 ನೌಕರರಿಗೆ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಣೆಗೊಂಡು ಅಕ್ಷೇಪಣೆ ಸಲ್ಲಿಸಲು ನೀಡಿರುವ ಅವಧಿ ಮುಕ್ತಾಯಗೊಂಡಿದ್ದರೂ, ಇಲ್ಲಿಯವರೆಗೂ ಅಂತಿಮ ಜೇಷ್ಠತಾ ಪಟ್ಟಿ ಹೊರಡಿಸದೆ ಕೆಳ ಹಂತದ ನೌಕರರ ಬಡ್ತಿಯಲ್ಲಿ ವಿಳಂಬ ಧೋರಣೆಯನ್ನು ಖಂಡಿಸಿದರು. 7 ದಿನಗಳೊಳಗಾಗಿ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಣೆ ಮತ್ತು ಬಡ್ತಿ ಪ್ರಕ್ರಿಯೆ ಮಾಡಬೇಕು. 12 ಬಿ ಅಡಿಯಲ್ಲಿ ಕಿರಿಯ ಅಭಿಯಂತರರ ಹುದ್ದೆಗೆ ಬಡ್ತಿ ನೀಡಬೇಕು, ಟಿ.ಎಲ್.ಎಮ್ ನೌಕರರಿಗೆ ಬಡ್ತಿ ನೀಡಬೇಕು. ಲೈನ್ ಮೆಕ್ಯಾನಿಕ್ ದರ್ಜೆ-1 ಮತ್ತು 2, ಸ್ಟೇಷನ್ ಮೆಕ್ಯಾನಿಕ್ ದರ್ಜೆ 2 ಮತ್ತು 1, ಲೈನ್ ಮ್ಯಾನ್ ಮತ್ತು ಸಹಾಯಕ ಲೈನ್ ಮ್ಯಾನ್ ಹುದ್ದೆಗಳಿಗೆ ಬಡ್ತಿ ನೀಡಬೇಕು. ಪವರ್ ಮ್ಯಾನ್, ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಬಡ್ತಿ ನೀಡಬೇಕು, ವೃತ್ತ ಮಟ್ಟದಲ್ಲಿ ಬಾಕಿ ಇರುವ ಹುದ್ದೆಗಳು ಬಡ್ತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜೆಎಲ್ ಗೋಪಿ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಚಿನ್ನಪ್ಪ, ಸಂಜೀವ್ ಕುಮಾರ್, ನರಸಪ್ಪ, ಶಿವಮೂರ್ತಿ, ಮಲ್ಲಣ್ಣ, ರಾಮಕೃಷ್ಣ, ಹನುಮಂತರಾಯ್, ಅಮರೇಶ, ಈರಣ್ಣ, ಮಲ್ಲಿಕಾ ಉಪಸ್ಥಿತರಿದ್ದರು.
ʻಭವಿಷ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗಲಿದೆ, ಮಿತ್ರಪಕ್ಷಗಳು ಎಚ್ಚರದಿಂದಿರಿ: ಪ್ರಧಾನಿ ಮೋದಿ ಎಚ್ಚರಿಕೆ
ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ಇಬ್ಭಾಗವಾಗುವ ಸಾಧ್ಯತೆಯಿದೆ. ಹೀಗಾಗಿ ಅವರಿಗೆ ಬೆಂಬಲ ನೀಡುವ ಮಿತ್ರ ಪಕ್ಷಗಳು ಎಚ್ಚರವಾಗಿರಬೇಕು ಎಂದು ಹೇಳಿದರು. ಮತಗಳ್ಳತನದಂತಹ ಆಧಾರರಹಿತ ಆರೋಪಗಳನ್ನು ಮಾಡುವ ಕಾಂಗ್ರೆಸ್ ಈಗ ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್ ಆಗಿ ಬದಲಾಗಿದೆ ವಾಗ್ದಾಳಿ ನಡೆಸಿದರು
ಉಕ್ರೇನ್ ರಾಜಧಾನಿಯ ಮೇಲೆ ರಶ್ಯ ದಾಳಿ; 4 ಮಂದಿ ಮೃತ್ಯು
ಕೀವ್, ನ.14: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಶ್ಯ ನಡೆಸಿದ ಬೃಹತ್ ದಾಳಿಯಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ರಾಜಧಾನಿಯ 10 ಜಿಲ್ಲೆಗಳನ್ನು ಗುರಿಯಾಗಿಸಿ ರಶ್ಯವು ಸುಮಾರು 430 ಡ್ರೋನ್ ಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ಸಹಿತ 18 ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿದ್ದು ಹಲವಾರು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಜನತೆ ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ. ದಾಳಿಯಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ವಿದ್ಯುತ್ ಮತ್ತು ನೀರು ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದ್ದು ಖಾರ್ಕಿವ್ ಮತ್ತು ಒಡೆಸಾ ಪ್ರಾಂತದ ಮೇಲೆಯೂ ದಾಳಿ ನಡೆಸಲಾಗಿದೆ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಧ್ಯೆ, ಗುರುವಾರ ರಾತ್ರಿಯಿಂದ ಉಕ್ರೇನ್ನ 216 ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಶುಕ್ರವಾರ ಹೇಳಿದೆ.
ಬಾಲಿ | ಮಿನಿಬಸ್ ಅಪಘಾತದಲ್ಲಿ 5 ಚೀನೀ ಪ್ರವಾಸಿಗರ ಮೃತ್ಯು
ಜಕಾರ್ತ, ನ.14: ಇಂಡೋನೇಶ್ಯಾದ ಬಾಲಿ ದ್ವೀಪದಲ್ಲಿ ಚೀನಾದ ಪ್ರವಾಸಿಗರಿದ್ದ ಮಿನಿ ಬಸ್ಸು ಅಪಘಾತಕ್ಕೀಡಾಗಿದ್ದು 5 ಮಂದಿ ಸಾವನ್ನಪ್ಪಿದ್ದಾರೆ. ಇತರ 8 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಬಾಲಿ ದ್ವೀಪದ ದಕ್ಷಿಣದಿಂದ ಉತ್ತರದ ಕಡೆಗೆ ಪ್ರವಾಸಿಕರನ್ನು ಕರೆದೊಯ್ಯುತ್ತಿದ್ದ ಬಸ್ಸು ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಮರಕ್ಕೆ ಅಪ್ಪಳಿಸಿ ಉರುಳಿ ಬಿದ್ದಿದೆ. ಬಸ್ಸಿನ ಚಾಲಕನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಎಚ್-1ಬಿ ವೀಸಾ ಕಾರ್ಯಕ್ರಮ ಅಂತ್ಯಗೊಳಿಸುವ ಮಸೂದೆ ಮಂಡನೆಗೆ ಅಮೆರಿಕ ಯೋಜನೆ: ವರದಿ
ವಾಷಿಂಗ್ಟನ್, ನ.14: ಅಮೆರಿಕದ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ಹಂತಹಂತವಾಗಿ ರದ್ದುಗೊಳಿಸುವ ಉದ್ದೇಶದ ಮಸೂದೆಯನ್ನು ಶೀಘ್ರವೇ ಮಂಡಿಸುವ ಯೋಜನೆಯಿದೆ ಎಂದು ರಿಪಬ್ಲಿಕನ್ ಪಕ್ಷದ ಸಂಸದೆ ಟೇಲರ್ ಗ್ರೀನ್ ಘೋಷಿಸಿದ್ದಾರೆ. ಈ ಕ್ರಮವು ಎಚ್-1ಬಿ ವೀಸಾ ಕಾರ್ಯಕ್ರಮದ ದೊಡ್ಡ ಫಲಾನುಭವಿಗಳಾದ ಭಾರತೀಯ ವೃತ್ತಿಪರರಿಗೆ ಗಮನಾರ್ಹ ಪರಿಣಾಮಗಳನ್ನು ಉಂಟು ಮಾಡಬಹುದು. `ಬೃಹತ್ ತಂತ್ರಜ್ಞಾನ ಸಂಸ್ಥೆಗಳು, ಕೃತಕ ಬುದ್ಧಿಮತ್ತೆ(ಎಐ) ಕಂಪೆನಿಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಅಮೆರಿಕದ ಪ್ರಮುಖ ಉದ್ಯಮಗಳು ಸ್ಥಳೀಯ ಕಾರ್ಮಿಕರಿಗೆ ಹಾನಿಯಾಗುವ ರೀತಿಯಲ್ಲಿ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ದುರುಪಯೋಗ ಪಡಿಸಿಕೊಂಡಿವೆ' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಉದ್ದೇಶಿತ ಮಸೂದೆಯು `ಅಮೆರಿಕನ್ನರು ಮೊದಲು ಎಂಬ ಪರಿಕಲ್ಪನೆಯನ್ನು ಮುಂದುವರಿಸುತ್ತದೆ. ತನಗೆ ಅಮೆರಿಕನ್ ಜನರ ಬಗ್ಗೆ ಪೂರ್ಣ ವಿಶ್ವಾಸವಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲೂ ಅಮೆರಿಕದ ಕಾರ್ಮಿಕರಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಮುಂದಿನ ಪೀಳಿಗೆಗೆ ಅಮೆರಿಕನ್ ಕನಸನ್ನು ರಕ್ಷಿಸಲು ಈ ಮಸೂದೆ ಅಗತ್ಯವಾಗಿದೆ. ಆದರೆ ವೈದ್ಯರು ಮತ್ತು ನರ್ಸ್ಗಳಿಗೆ ವಾರ್ಷಿಕ 10,000 ವೀಸಾ ನೀಡುವುದನ್ನು ಸದ್ಯಕ್ಕೆ ಮುಂದುವರಿಸಲಾಗುವುದು ಮತ್ತು ಮುಂದಿನ 10 ವರ್ಷಗಳಲ್ಲಿ ಹಂತಹಂತವಾಗಿ ರದ್ದುಗೊಳಿಸಲಾಗುವುದು ಎಂದು ಗ್ರೀನ್ ಹೇಳಿದ್ದಾರೆ.
ಅಮನ್ ಸೆಹ್ರಾವತ್, ನೇಹಾ ಸಾಂಗ್ವಾನ್ ಮೇಲಿನ ಅಮಾನತು ಹಿಂಪಡೆದ ಡಬ್ಲ್ಯುಎಫ್ಐ
ಹೊಸದಿಲ್ಲಿ, ನ.14: ತಮ್ಮ ತೂಕ ಮಿತಿಯನ್ನು ಮೀರಿದ್ದಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ ಹಾಗೂ ಭರವಸೆಯ ಕುಸ್ತಿಪಟು ನೇಹಾ ಸಾಂಗ್ವಾನ್ ಮೇಲೆ ಹೇರಲಾಗಿದ್ದ ಅಮಾನತನ್ನು ಭಾರತದ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ಶುಕ್ರವಾರ ಹಿಂಪಡೆದಿದೆ. ಅಮಾನತಿನಿಂದಾಗಿ ಈ ಇಬ್ಬರು ಕ್ರಮವಾಗಿ ವಿಶ್ವ ಚಾಂಪಿಯನ್ ಶಿಪ್ ಹಾಗೂ ವಿಶ್ವದ ಅಂಡರ್-20 ಚಾಂಪಿಯನ್ ಶಿಪ್ ನಿಂದ ಅನರ್ಹರಾಗಿದ್ದರು. ಇಬ್ಬರು ಕುಸ್ತಿಪಟುಗಳಿಂದ ಕ್ಷಮಾಪಣಾ ಪತ್ರಗಳನ್ನು ಸ್ವೀಕರಿಸಿದ ನಂತರ, ದೇಶದ ಅಗ್ರ ಕೋಚ್ ಗಳನ್ನು ಸಂಪರ್ಕಿಸಿದ ಬಳಿಕ ಡಬ್ಲ್ಯುಎಫ್ಐ ಈ ನಿರ್ಧಾರ ಕೈಗೊಂಡಿದೆ. ಇದೀಗ ಇಬ್ಬರು ಕುಸ್ತಿಪಟುಗಳು ಮುಂದಿನ ವರ್ಷದ ಏಶ್ಯನ್ ಗೇಮ್ಸ್ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಆಡಲು ಅರ್ಹತೆ ಪಡೆದಿದ್ದಾರೆ. ನೇಹಾ(59ಕೆಜಿ)ಆಗಸ್ಟ್ನಲ್ಲಿ ಬಲ್ಗೇರಿಯಾದಲ್ಲಿ ನಡೆದ ವಿಶ್ವದ ಅಂಡರ್-20 ಚಾಂಪಿಯನ್ಶಿಪ್ನಲ್ಲಿ ಹೆಚ್ಚು ತೂಕ ಹೊಂದಿದ್ದರು. ಅಮನ್ ಸೆಪ್ಟಂಬರ್ ನಲ್ಲಿ ಕ್ರೊಯೇಶಿಯದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ತೂಕ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದರು. ನೇಹಾ ಹಾಗೂ ಅಮನ್ ಕ್ರಮವಾಗಿ ಎರಡು ಹಾಗೂ ಒಂದು ವರ್ಷ ಕಾಲ ಅಮಾನತುಗೊಂಡಿದ್ದರು.
ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ | 15 ಸಿಕ್ಸರ್ ಸಿಡಿಸಿದ ಸೂರ್ಯವಂಶಿ!
ಹೊಸದಿಲ್ಲಿ, ನ.14: ದೋಹಾದಲ್ಲಿ ಶುಕ್ರವಾರ ನಡೆದ ಎಸಿಸಿ ಪುರುಷರ ರೈಸಿಂಗ್ ಸ್ಟಾರ್ಸ್ ಏಶ್ಯಕಪ್ ಟೂರ್ನಿಯಲ್ಲಿ 15 ಸಿಕ್ಸರ್ ಗಳ ಸಹಿತ ಕೇವಲ 42 ಎಸೆತಗಳಲ್ಲಿ 144 ರನ್ ಗಳಿಸಿದ ವೈಭವ್ ಸೂರ್ಯವಂಶಿ ಭಾರತ ‘ಎ’ ತಂಡವು ಯುಎಇ ತಂಡದ ವಿರುದ್ಧ 4 ವಿಕೆಟ್ ಗಳ ನಷ್ಟಕ್ಕೆ 297 ರನ್ ಗಳಿಸುವಲ್ಲಿ ನೆರವಾದರು. ನಿರ್ಭಿತಿಯ ಬ್ಯಾಟಿಂಗ್ ನಿಂದ ಯುಎಇ ಬೌಲರ್ ಗಳನ್ನು ಬೆಂಡೆತ್ತಿದ ಸೂರ್ಯವಂಶಿ ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿದರು. ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು ಪ್ರಿಯಾಂಶ್ ಆರ್ಯ(10 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಕೇವಲ 42 ಎಸೆತಗಳಲ್ಲಿ 11 ಬೌಂಡರಿ ಹಾಗೂ 15 ಸಿಕ್ಸರ್ ಗಳ ಸಹಿತ 144 ರನ್ ಗಳಿಸಿದ ಸೂರ್ಯವಂಶಿ ಅವರು ನಮನ್ ಧೀರ್(34 ರನ್)ಅವರೊಂದಿಗೆ ಕೇವಲ 57 ಎಸೆತಗಳಲ್ಲಿ 163 ರನ್ ಜೊತೆಯಾಟ ನಡೆಸಿದರು. ಸೂರ್ಯವಂಶಿ 12.3 ಓವರ್ ಗಳಲ್ಲಿ ಔಟಾದಾಗ ಭಾರತ ‘ಎ’ ತಂಡವು 3 ವಿಕೆಟ್ಗಳ ನಷ್ಟಕ್ಕೆ 195 ರನ್ ಗಳಿಸಿತು. ನಾಯಕ ಹಾಗೂ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೇವಲ 32 ಎಸೆತಗಳಲ್ಲಿ ಔಟಾಗದೆ 83 ರನ್ ಕಲೆ ಹಾಕಿದರು. ಶರ್ಮಾ ಇನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಗಳಿದ್ದವು.
ವಿಜಯನಗರ | ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ 2 ವರ್ಷ ತರಬೇತಿಗೆ ಅರ್ಜಿ ಆಹ್ವಾನ
ವಿಜಯನಗರ(ನ.14): 2025-26ನೇ ಸಾಲಿನ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ನ್ಯಾಯಾಧೀಕರಣದಲ್ಲಿ ಎರಡು ವರ್ಷಗಳ ತರಬೇತಿ ಭತ್ಯೆ ನೀಡುವ ಸಲುವಾಗಿ ಅರ್ಹ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ವೈ.ಎ.ಕಾಳೆ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ನ.23 ಕೊನೆಯ ದಿನವಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಅವಧಿಯೊಳಗೆ ಪೂರಕ ದಾಖಲಾತಿಗಳೊಂದಿಗೆ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಒಂದು ಪ್ರತಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಯನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ | ಗ್ಯಾರೇಜ್ನಲ್ಲಿ ಜೆಸಿಬಿ ಮಧ್ಯೆ ಸಿಲುಕಿ ಯುವಕ ಮೃತ್ಯು
ಕಾರ್ಕಳ, ನ.14: ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಜೆಸಿಬಿ ಅಡಿಗೆ ನಡುವೆ ಸಿಲುಕಿ ಮೃತಪಟ್ಟ ಘಟನೆ ನ.13ರಂದು ಮಧ್ಯಾಹ್ನ ವೇಳೆ ಮಿಯ್ಯಾರು ಗ್ರಾಮದ ಇಂಡಸ್ಟೀಯಲ್ ಏರಿಯಾದಲ್ಲಿ ನಡೆದಿದೆ. ಮೃತರನ್ನು ಚಿಂಟು ಚೌಹಾಣ್(26) ಎಂದು ಗುರುತಿಸಲಾಗಿದೆ. ಇವರು ವಿಶ್ವಾಸ್ ಗ್ಯಾರೇಜ್ನಲ್ಲಿ ಜೆಸಿಬಿ ಆಪರೇಟರ್ ಸಾಗರ್, ಜೆಸಿಬಿಯ ಮುಂದಿನ ಬಕೆಟ್ನ್ನು ಎತ್ತಿಹಿಡಿದಿದ್ದು, ಒಮ್ಮೆಲೇ ನಿರ್ಲಕ್ಷತನದಿಂದ ಕೆಳಗೆ ಇಳಿಸಿದ ಪರಿಣಾಮ ಜೆಸಿಬಿ ರಿಪೇರಿ ಕೆಲಸ ಮಾಡುತ್ತಿದ್ದ ಚಿಂಟು ಚೌಹಾಣ್ ಜೆಸಿಬಿಯ ಮುಂದಿನ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿದರೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ | ಅರ್ಜಿ ವಿಚಾರಣೆ ನ.19ಕ್ಕೆ ಮುಂದೂಡಿದ ಹೈಕೋರ್ಟ್
ಕಾಸರಗೋಡು: ಮಂಗಳೂರು - ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್ ಶುಲ್ಕ ವಸೂಲು ವಿರುದ್ದ ಹೋರಾಟ ಸಮಿತಿ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ.19ಕ್ಕೆ ಮುಂದೂಡಲಾಗಿದೆ. ನ.12 ರಿಂದ ಶುಲ್ಕ ವಸೂಲಿಗೆ ಗುತ್ತಿಗೆ ಕಂಪೆನಿ ತೀರ್ಮಾನಿಸಿತ್ತು. ಈ ನಡುವೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಶುಲ್ಕ ವಸೂಲಿ ಮುಂದೂಡಲಾಗಿತ್ತು. ಟೋಲ್ ವಸೂಲಿಯನ್ನು ಹೈಕೋರ್ಟ್ ತೀರ್ಪು ಬರುವ ತನಕ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿತ್ತು.
ಕಾರ್ಕಳ | ಮೊಬೈಲ್ ಕೊಡಿಸದಿದ್ದಕ್ಕೆ ಕಲ್ಲಿನ ಕೋರೆಗೆ ಹಾರಿ ಬಾಲಕ ಆತ್ಮಹತ್ಯೆ
ಕಾರ್ಕಳ, ನ.14: ಮನೆಯವರು ಹೊಸ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಳಿಕೆ ಗ್ರಾಮದ ಕೊಡ್ಸರಬೆಟ್ಟು ಎಂಬಲ್ಲಿ ನಡೆದಿದೆ. ಮೃತರನ್ನು ನಂದಳಿಕೆಯ ಸುರೇಖಾ ಎಂಬವರ ಮಗ ಸುಮಂತ ದೇವಾಡಿಗ(16) ಎಂದು ಗುರುತಿಸಲಾಗಿದೆ. ಸುಮಂತ ನಿಟ್ಟೆ ಕಾಲೇಜಿನಲ್ಲಿ ಮೊದಲನೇ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ನ.12ರಂದು ಸಂಜೆ ಮನೆಯಲ್ಲಿ ತನ್ನ ತಾಯಿಯೊಂದಿಗೆ ಹೊಸ ಮೊಬೈಲ್ ತೆಗೆದುಕೊಡ ಬೇಕೆಂದು ಜಗಳ ಮಾಡಿ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದನು. ಹುಡುಕಾಡಿದಾಗ ನ.13ರಂದು ಮಧ್ಯಾಹ್ನ ವೇಳೆ ಕೊಡ್ಸರಬೆಟ್ಟು ಕಲ್ಲಿನ ಕೋರೆಯ ನಿಂತ ನೀರಿನಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಮೊಬೈಲ್ ಕೊಡಿಸದ ಸಿಟ್ಟಿನಲ್ಲಿ ಆತ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ವಿಜಯನಗರ | ಕಡ್ಡಾಯ ಮತ್ತು ಉಚಿತ ಶಿಕ್ಷಣ ಎಲ್ಲಾ ಮಕ್ಕಳಿಗೂ ಸಿಗಬೇಕಿದೆ : ನ್ಯಾ. ಎನ್.ಸುಬ್ರಮಣ್ಯ
ವಿಜಯನಗರ : ಸಾಕ್ಷರತೆಯಲ್ಲಿ ಕೇರಳ ರಾಜ್ಯವನ್ನು ಹಿಂದಿಕ್ಕುವಷ್ಟು ಶೈಕ್ಷಣಿಕ ಪ್ರಗತಿ ಕಾರ್ಯಗಳು ವಿವಿಧ ರಾಜ್ಯಗಳು ಸಾಧಿಸಬೇಕಿದೆ. ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯ್ದೆಯಡಿ ಯಾವ ಮಗು ಕೂಡ ಶಿಕ್ಷಣದಿಂದ ವಂಚಿತರಾಗದಿರಲಿ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಸುಬ್ರಮಣ್ಯ ಹೇಳಿದರು. ನಗರದ ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಸಂವಿಧಾನದ 21ಎ ವಿಧಿಯ ಅನ್ವಯ ಶಿಕ್ಷಣ ಹಕ್ಕು ಕಾಯಿದೆಯಡಿ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಹಕ್ಕಿನ ಪ್ರಕಾರ ಎಲ್ಲಾ ಮಕ್ಕಳು ಯಾವುದೇ ಶಾಲೆಯಲ್ಲಿ ಶಿಕ್ಷಣ ಪಡೆಯಬಹುದು. ಮಕ್ಕಳಿಗೆ ಜಾತಿ, ಲಿಂಗ, ಧರ್ಮ ಮತ್ತು ಇತರೆ ಕಾರಣಗಳಿಂದ ವಿದ್ಯಾಭ್ಯಾಸ ಮಾಡುವುದಕ್ಕೆ ಅವಕಾಶ ನಿರಾಕರಿಸುವಂತಿಲ್ಲ. ಕೇರಳ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದೆ. ನಿರುದ್ಯೋಗ ಸಮಸ್ಯೆ ತೀರಾ ಕಡಿಮೆ ಇದೆ. ಕೇರಳ ಕೇವಲ ಸಾಕ್ಷರತೆಯಲ್ಲಿ ಅಷ್ಟೇ ಅಲ್ಲದೇ ವಿವಿಧ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸಿದೆ. ಇದಕ್ಕೆ ಕಾರಣ ಶಿಕ್ಷಣಕ್ಕೆ ಮೊದಲನೇ ಆದ್ಯತೆ ನೀಡಿರುವುದಾಗಿದೆ ಎಂದು ಹೇಳಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್ ಮಾತನಾಡಿ, ಪ್ರತಿ ಮಕ್ಕಳಲ್ಲಿರುವ ಮುಗ್ಧತೆ, ಸಂತೋಷವನ್ನು ಸಂಭ್ರಮಿಸುವ ಆಚರಣೆಯೇ ಮಕ್ಕಳ ದಿನಾಚರಣೆಯಾಗಿದೆ. ಜವಾಹರ್ ಲಾಲ್ ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ನೆಹರೂ ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ ಹಾಗಾಗಿ ನೆಹರೂ ಅವರು ಜನ್ಮದಿನವನ್ನು ಮಕ್ಕಳಿಗೆ ಸಮರ್ಪಿಸಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರು ತಮ್ಮ ಜನ್ಮದಿವನ್ನು ಶಿಕ್ಷಕರಿಗೆ ಸಮರ್ಪಿಸಿದರೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಜನ್ಮದಿನವನ್ನು ಮಕ್ಕಳಿಗೆ ಮೀಸಲಿರಿಸಿದರು. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಪೋಷಕರು ಮತ್ತು ಶಿಕ್ಷಕರು ಸದಾವಕಾಶ ನೀಡಬೇಕು. ನಮ್ಮ ದೇಶ ಅಭಿವೃದ್ಧಿಗೆ ಮುಂದಿನ ಸತ್ಪ್ರಜೆಗಳ ಕೊಡುಗೆ ಹೆಚ್ಚಿದೆ. ಹಾಗಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಕ್ಕಳಿಗೆ ಪ್ರಮುಖವಾಗಿದೆ ಎಂದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಆಡಳಿತಾಧಿಕಾರಿ ಎಂ.ಗುರುರಾಘವೇಂದ್ರಚಾರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ ಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಕುಮಾರ ಉಂಕಿ, ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ರಮಾ.ಆರ್, ಚಿತ್ತವಾಡ್ಗಿ ಪಿಎಸ್ಐ ಸೋಮ್ಲನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
Bihar Results: ಎನ್ಡಿಎಗೆ ಜೈ ಎಂದ ಬಿಹಾರಿಗಳಿಗೆ ಭರಪೂರ ಭರವಸೆ ನೀಡಿದ ಪ್ರಧಾನಿ ಮೋದಿ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಇದು ಕೇವಲ ಎನ್ಡಿಎ ಗೆಲುವು ಅಲ್ಲ, ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವು ಕೂಡ ಎಂದಿದ್ದಾರೆ. ಅಲ್ಲದೆ ಬಿಹಾರದಲ್ಲಿ ಮತ್ತೆ
ಗಂಗೊಳ್ಳಿ | ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು
ಗಂಗೊಳ್ಳಿ, ನ.14: ಕೆರೆಗೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆ ನ.13ರಂದು ಬೆಳಗ್ಗೆ ಆಲೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಆಲೂರು ಗ್ರಾಮದ ಮಂಜಯ್ಯ ಶೆಟ್ಟಿ(84) ಎಂದು ಗುರುತಿಸಲಾಗಿದೆ. ಮಂಜಯ್ಯ ಬೆಳಗ್ಗೆ ಜಾನುವಾರುಗಳನ್ನು ಮೇಯಿಸಲು ಹೋಗಿದ್ದು, ಈ ವೇಳೆ ಮನೆಯ ಬಳಿಯ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ | ನೇಪಾಲ ಮೂಲದ ಯುವಕ ಆತ್ಮಹತ್ಯೆ
ಬ್ರಹ್ಮಾವರ, ನ.14: ಬ್ರಹ್ಮಾವರದ ಬಾರೊಂದರಲ್ಲಿ ಕಳೆದ 5 ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ಸೂರಜ್ ಬಾಹುಲ್(28) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ನ.13ರಂದು ರಾತ್ರಿ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಎಂಬಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ರಾಯಚೂರು : ದೇವದುರ್ಗ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿರುವ ಕೋರ್ಟ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರ ಹೆಸರನ್ನು ಕೈಬಿಟ್ಟಿರುವುದು ನೋವು ತಂದಿದೆ. ಇದರಿಂದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಅಸಮಾಧಾನವಾಗಿದೆ. ಹೀಗಾಗಿ ಶಾಸಕ ಸ್ಥಾನದ ಹಕ್ಕುಚ್ಯುತಿಯಾಗಿರುವುದಕ್ಕೆ ಸಭಾಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು. ದೇವದುರ್ಗಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕಿ ಕರೆಮ್ಮ ಜಿ.ನಾಯಕ, ನಮ್ಮ ನೋವು, ಅಸಮಧಾನ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಮೇಲಿದೆಯೇ ಹೊರತು ನ್ಯಾಯಾಂಗ ಇಲಾಖೆ ಮೇಲಲ್ಲ. ಕ್ಷೇತ್ರಕ್ಕೆ ಹೈಕೋರ್ಟ್ ನ್ಯಾಯಾಧೀಶರು, ನಮ್ಮ ತಾಲೂಕಿನವರೇ ಆಗಿರುವ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಬರುತ್ತಿರುವುದಕ್ಕೆ ನಮಗೆಲ್ಲ ಸಂತಸವಿದೆ. ಆದರೆ ಈ ರೀತಿ ಅವಮಾನಿಸಿರುವ ಕುರಿತು ದೂರು ಸಲ್ಲಿಸಿದ್ದು ಲೋಕೋಪಯೋಗಿ ಇಲಾಖೆ ಸಚಿವರ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದರು. ನ್ಯಾಯದ ಪರ ನಡೆದಿರುವ ಹೋರಾಟದಲ್ಲಿ ಪಾಲ್ಗೊಂಡ ಕಾರಣಕ್ಕೆ ನನ್ನ ಮೇಲೆ ಪೊಲೀಸ್ ಪ್ರಕರಣಗಳು ದಾಖಲಾಗಿವೆಯೇ ಹೊರತು ಯಾವುದೇ ಗಂಭೀರವಾದ ಪ್ರಕರಣಗಳು ದಾಖಲಾಗಿಲ್ಲ. ಪ್ರಕರಣಗಳು ದಾಖಲಾಗಿರುವುದೇ ಮಾನದಂಡವಾಗಿದ್ದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿರುವ ಸಚಿವರ ಮೇಲಿಲ್ಲವೇ? ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಈ ಕಾರ್ಯಕ್ರಮದಲ್ಲಿ ಏನಾದರೂ ಗಲಾಟೆ, ಪ್ರತಿಭಟನೆಗಳು ನಡೆಸಿದರೆ ನಿಮ್ಮನ್ನೇ ಟಾರ್ಗೇಟ್ ಮಾಡಬೇಕಾಗಬೇಕಾಗುತ್ತದೆ ಎಂದು ಓರ್ವ ಉನ್ನತ ಮಟ್ಟದ ಅಧಿಕಾರಿಗಳು ಧಮ್ಕಿ ಹಾಕಿದ್ದು, ದಾಖಲೆಗಳ ಸಮೇತ ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ತಿಳಿಸುತ್ತೇನೆ. ಆದರೆ ಕ್ಷೇತ್ರದ ಮತದಾರರು ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸವಿಟ್ಟಿದ್ದಾರೆ. ಮತದಾರರ ಋಣ ತೀರಿಸುವುದಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವೆ ಎಂದು ಹೇಳಿದರು.
ಸಾಲುಮರದ ತಿಮ್ಮಕ್ಕಗೂ ಉಡುಪಿಗೂ ಅವಿನಾಭಾವ ಸಂಬಂಧ !
ಉಡುಪಿ, ನ.14: ವಯೋ ಸಹಜತೆಯಿಂದ ಇಂದು ನಿಧನರಾದ ‘ವೃಕ್ಷಮಾತೆ’ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೂ ಮತ್ತು ಉಡುಪಿಗೂ ಅವಿನಾಭಾವ ಸಂಬಂಧ ಇದೆ. 2014ರಿಂದ ಈ ನಂಟು ತುಂಬಾ ಗಟ್ಟಿಯಾಗಿ ನೆಲೆಯೂರಿತ್ತು. 2014ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಲುಮರದ ತಿಮ್ಮಕ್ಕ, ಬಹಳ ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದರು. ಅವರನ್ನು ನೋಡಲು ಬೆಂಗಳೂರಿಗೆ ಹೋಗಿದ್ದ ಉಡುಪಿಯ ಅವಿನಾಶ್ ಕಾಮತ್ಗೆ ಈ ವಿಚಾರ ತಿಳಿಯಿತು. ಅದಕ್ಕೆ ಅವರು ಉಡುಪಿಯಲ್ಲಿ ಅಜ್ಜಿಯ ಆರೋಗ್ಯಕ್ಕೆ ಧನಸಹಾಯ ಮಾಡಬೇಕೆಂಬ ಉದ್ದೇಶದಿಂದ ‘ನೆರಳು- ನೆರವು’ ಅಭಿಯಾನವನ್ನು ನಡೆಸಿದರು. ಈ ಅಭಿಯಾನದ ಮೂಲಕ ಸುಮಾರು 2,36,000ರೂ. ಮೊತ್ತವನ್ನು ಸಂಗ್ರಹಿಸಲಾಗಿತ್ತು. ಗುಣಮುಖರಾದ ಬಳಿಕ ತಿಮ್ಮಕ್ಕ ಅವರನ್ನು ಉಡುಪಿಗೆ ಕರೆಸಿ ಆ ಮೊತ್ತವನ್ನು ಅವರಿಗೆಯೇ ಹಸ್ತಾಂತರಿಸಲಾಗಿತ್ತು. ಅಲ್ಲಿಂದ ಸಾಲುಮರದ ತಿಮ್ಮಕ್ಕನವರಿಗೂ ನಮ್ಮ ಉಡುಪಿಗೂ ಅವಿನಾಭಾವ ಸಂಬಂಧ ಬೆಳೆಯಿತು. ಆ ಬಳಿಕ ಅವರು ನಿರಂತರ ಉಡುಪಿಗೆ ಹಲವು ಬಾರಿ ಬಂದಿದ್ದರು. ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉದ್ಘಾಟನೆಯನ್ನು 2019ರಲ್ಲಿ ತಿಮ್ಮಕ್ಕ ಅವರು ಮಾಡಿದ್ದರು. ಪ್ರತಿಸಲ ಉಡುಪಿಗೆ ಬಂದಾಗ ತಿಮ್ಮಕ್ಕ ಗಿಡ ನೆಡುತ್ತಿದ್ದರು. ಅಜ್ಜಿಯ ಕುರಿತ 24 ನಿಮಿಷದ ಸಾಕ್ಷಚಿತ್ರವನ್ನು ಉಡುಪಿಯ ರವಿರಾಜ್ ಎಚ್.ಪಿ. ಅವಿನಾಶ್ ಕಾಮತ್ ನಿರ್ಮಿಸಿದ್ದರು. ಇದನ್ನು ಅಂದಿನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಡುಗಡೆಗೊಳಿಸಿದ್ದರು. ಅದೇ ರೀತಿ ತಿಮ್ಮಕ್ಕ ಅವರ ಕುರಿತು ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ‘ನೆರಳನು ನೀಡುವ ಮರಕೇ ನರಳು ಸಾಲುಮರದ ತಿಮ್ಮಕ್ಕ’ ಎಂಬ ಹಾಡು ರಚಿಸಿದ್ದರು. ಆ ಹಾಡು ಇದೀಗ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಉಡುಪಿಯ ಬಡಗಬೆಟ್ಟು ಸೊಸೈಟಿ ಹಮ್ಮಿಕೊಂಡಿದ್ದ ಪರಿಸರ ಸಂಬಂಧ ಕಾರ್ಯಕ್ರಮಕ್ಕೆ ತಿಮ್ಮಕ್ಕ ಅವರೇ ಚಾಲನೆ ನೀಡಿದ್ದರು. ಅದೇ ಸಂದರ್ಭದಲ್ಲಿ ಶಾಲೆಯ ಮೆಟ್ಟಿಲನ್ನೇ ಹತ್ತದ ಸಾಲುಮರದ ತಿಮ್ಮಕ್ಕ ಅವರನ್ನು ಮಣಿಪಾಲ ಮಾಹೆ ವಿವಿಯವರು ಕರೆಸಿ ಸನ್ಮಾನಿಸಿರುವುದು ವಿಶೇಷ. ಅದೇ ರೀತಿ ಅವಿನಾಶ್ ಕಾಮತ್ ಅವರ ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆದಿದ್ದ ಹೆಜ್ಜೆ ಗುರುತು ಕಾರ್ಯಕ್ರಮದಲ್ಲಿ ತಿಮ್ಮಕ್ಕ ಅವರನ್ನು ಕರೆಸಿ ಅವರ ಬದುಕನ್ನು ಜನರ ಮುಂದೆ ಇಡಲಾಗಿತ್ತು. ಹೀಗೆ ಸಾಲುಮರದ ತಿಮ್ಮಕ್ಕ ಹಾಗೂ ಉಡುಪಿಯ ಸಂಬಂಧದ ಬಗ್ಗೆ ಅವಿನಾಶ್ ಕಾಮತ್ ಹಾಗೂ ರವಿರಾಜ್ ಎಚ್.ಪಿ. ನೆನಪಿಸಿಕೊಂಡಿದ್ದಾರೆ.
ಪಿಜಿ ವೈದ್ಯಕೀಯ: ಸೇವಾ ನಿರತರಿಗೆ ನ.16ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ
ಬೆಂಗಳೂರು : 2025ನೆ ಸಾಲಿನ ಎಂಡಿ ಮತ್ತು ಎಂಎಸ್ ಕೋರ್ಸುಗಳಿಗೆ ನೋಂದಣಿ ಮಾಡಲು ಅರ್ಹ ಸೇವಾನಿರತ ಅಭ್ಯರ್ಥಿಗಳಿಗೆ ಆನ್ ಲೈನ್ ಪೋರ್ಟಲ್ ತೆರೆಯಲಾಗಿದ್ದು, ಆನ್ಲೈನ್ ಮೂಲಕ ನೋಂದಾಯಿಸಿಕೊಂಡು ನ.16ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಶುಕ್ರವಾರ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟಣೆ ಹೊರಡಿಸಿರುವ ಅವರು, ಪಿಜಿನೀಟ್ - 2025ರಲ್ಲಿ ನಿಗದಿಪಡಿಸಿರುವ ಕನಿಷ್ಠ ಪರ್ಸಂಟೈಲ್ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಪರ್ಸಂಟೈಲ್ ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಮಾತ್ರ ನೋಂದಣಿ ಮಾಡಿಕೊಳ್ಳಲು ಅರ್ಹರಿರುತ್ತಾರೆ ಎಂದು ಸ್ಪಷ್ಪಪಡಿಸಿದ್ದಾರೆ. ನೋಂದಣಿ ಶುಲ್ಕ, ದಾಖಲಾತಿ ಪರಿಶೀಲನೆಯ ವಿವರಗಳು, ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲಾತಿಗಳು, ಇತರ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ದಾಖಲೆಗಳ ಪರಿಶೀಲನೆಗೆ ನ.17ರಂದು(ಬೆ.11ರಿಂದ ಮ.2) ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಅವರು ಸೂಚಿಸಿದ್ದಾರೆ. ಪಿಜಿಸಿಇಟಿ: ಶುಲ್ಕ ಪಾವತಿಗೆ ನ.15ರವರೆಗೆ ದಿನಾಂಕ ವಿಸ್ತರಣೆ: ಎಂಬಿಎ, ಎಂಸಿಎ, ಎಂಇ, ಎಂಟೆಕ್ ಮತ್ತು ಎಂ.ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆ ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ಹಾಗೂ ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಳ್ಳಲು ನ.15ರಂದು ಮಧ್ಯಾಹ್ನ 3 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅದೇ ದಿನ ಸಂಜೆ 5.30ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಬೀದರ್ | ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೇರೇಪಿಸಿ : ಡಾ.ಎಸ್.ವಿ. ಪಾಟೀಲ್
ಬೀದರ್ : ಕೃಷಿ ಸಖಿಯರು ಪ್ರಸ್ತುತ ನೈಸರ್ಗಿಕ ಕೃಷಿ ತರಬೇತಿಯ ಸುದುಪಯೋಗ ಪಡೆದುಕೊಂಡು ಹೆಚ್ಚಿನ ರೈತರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಹಾಗೂ ತರಬೇತಿಯ ಆಯೋಜಕ ಡಾ.ಎಸ್.ವಿ. ಪಾಟೀಲ್ ಅವರು ಸಲಹೆ ನೀಡಿದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ, ತೋಟಗಾರಿಕಾ ಮಹಾವಿದ್ಯಾಲಯ ಬೀದರ್ ಮತ್ತು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಇದರ ಸಹಯೋಗದಲ್ಲಿ ಬೀದರ್ ಜಿಲ್ಲೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿಗಳಿಗೆ) ಬೀದರ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ನೈಸರ್ಗಿಕ ಕೃಷಿ' ಕುರಿತು ಐದು ದಿನಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೀಟನಾಶಕಗಳು, ಹಸುವಿನ ಗಂಜಲ, ಗೋಮೂತ್ರ, ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟಿನ ಮಿಶ್ರಣಗಳ ಬಳಕೆಯನ್ನು ಅಳವಡಿಸಿ ಬೆಳೆಗಳಿಗೆ ಅಗತ್ಯ ಪೋಷಕಾಂಶ ಒದಗಿಸುವುದು, ಮಣ್ಣನ್ನು ಹದವಾಗಿಸುವುದು, ಮಣ್ಣಿನಲ್ಲಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು, ಹೊರಗಿನ ಯಾವುದೇ ಪರಿಕರಗಳನ್ನು ಖರೀದಿಸದೆ ಕೈಗೊಳ್ಳುವ ಕೃಷಿಯನ್ನು ನೈಸರ್ಗಿಕ ಕೃಷಿ ಪದ್ಧತಿಯಾಗಿದೆ ಎಂದರು. ಈ ಕೃಷಿ ಪದ್ಧತಿಯಲ್ಲಿ ಹಲವಾರು ರೀತಿಯ ಪರಿಕರಗಳನ್ನು ರೈತರು ತಯಾರಿಸಿ ಬಳಸುವುದು ಉತ್ತಮ. ಇದರಿಂದ ರೈತರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ನೈಸರ್ಗಿಕವಾಗಿ ರೈತರ ಕ್ಷೇತ್ರದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ತಯಾರು ಮಾಡುವ ಜೈವಿಕ ನಿಯಂತ್ರಣ ಪರಿಕರಗಳು, ಸಸ್ಯಜನ್ಯ ಕೀಟನಾಶಕಗಳನ್ನು ಬಳಸಬೇಕು. ವಿವಿಧ ರೀತಿಯ ಕೀಟನಾಶಕಗಳು, ಅತೀ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ ಮತ್ತು ಮಾನವನ ದೇಹದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್ ಮಾತನಾಡಿ, ರೈತರು ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು ಅದರಲ್ಲೂ ಏಕ ಕೃಷಿ ಪದ್ಧತಿಗೆ ಜೋತು ಬೀಳದೆ ಹೊಸ ಪ್ರಯೋಗಗಳನ್ನು ಕೈಗೊಳ್ಳಬೇಕು. ಕೃಷಿ ಬೆಳೆಗಳಲ್ಲಿ ಅತೀ ಹೆಚ್ಚು ರಾಸಾಯನಿಕ ಕೀಟನಾಶಕ ಮತ್ತು ಗೊಬ್ಬರಗಳನ್ನು ಬಳಕೆ ಮಾಡುತ್ತಿರುವುದರಿಂದ ಹವಾಮಾನದಲ್ಲಿ ತುಂಬಾ ವೈಪರೀತ್ಯ ಉಂಟಾಗಿ, ಮಾನವನ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡುತ್ತಾ, ನೈಸರ್ಗಿಕ ಕೃಷಿ ಕಡೆಗೆ ರೈತರು ಒತ್ತು ನೀಡುತ್ತಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ. ಬಹುಬೆಳೆ, ಕೃಷಿ ಜೊತೆಗೆ ಸಾವಯವ ಕೃಷಿಯೂ ಗಮನಾರ್ಹವಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಜನರು ಕೂಡ ಸಾವಯವ ಬೆಳೆಯನ್ನು ಬಳಸುತ್ತಿರುವುದರಿಂದ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ರೈತರು ಕೃಷಿಯನ್ನು ಅಳವಡಿಸಿಕೊಂಡರೆ ಲಾಭ ಗಳಿಸಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿಶ್ವನಾಥ್ ಝಿಳ್ಳೆ ಮಾತನಾಡಿ, ಸಾವಯವ ಕೃಷಿಯು ಮಣ್ಣಿನ ಗುಣಮಟ್ಟವನ್ನು ಕಾಪಾಡುತ್ತದೆ. ಹಾಗೆಯೇ ಉತ್ತಮ ಫಲಿತಾಂಶಗಳನ್ನು ದೊರಕಿಸುತ್ತದೆ. ಸಾವಯವ ಕೃಷಿಯ ಮೂಲಕ ಬೆಳೆದ ಬೆಳೆ ವಿಪುಲವಾದ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಆಹಾರದ ನೈಸರ್ಗಿಕ ರುಚಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಾಮಾನ್ಯ ಕೃಷಿಯಲ್ಲಿ ಬಳಸುವ ಹಾನಿಕಾರಕ ರಾಸಾಯನಿಕಗಳಿಂದ ನಮ್ಮನ್ನು ದೂರವಿರಿಸುತ್ತದೆ ಎಂದು ಹೇಳಿದರು. ಸಾವಯವ ಕೃಷಿಯಲ್ಲಿ ಸಸ್ಯರೋಗದ ಅಪಾಯಗಳು ಕಡಿಮೆ ಹೀಗಾಗಿ ವೆಚ್ಚ ಕಡಿಮೆ ಮತ್ತು ಉತ್ಪಾದನೆಯು ರೈತರಿಗೆ ಹೆಚ್ಚು ಲಾಭದಾಯಕವಾಗಿರುತ್ತದೆ. ಸಾವಯವವಾಗಿ ಬೆಳೆದ ಆಹಾರ ಧಾನ್ಯಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚು. ನಮ್ಮ ರೈತರು ಹೆಚ್ಚಿನ ರೀತಿಯಲ್ಲಿ ರಫ್ತು ಮಾಡಿ ತಮ್ಮ ಆದಾಯವನ್ನು ಸಹ ದ್ವಿಗುಣಗೊಳಿಸಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ಕಮಠಾಣ ಗ್ರಾಮದ ಪ್ರಗತಿಪರ ನೈಸರ್ಗಿಕ ಕೃಷಿ ರೈತ ವೈಜನಾಥ್ ನಿಡೋದ, ಸಂಯೋಜಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ವಿಸ್ತರಣಾ ಮುಂದಾಳು ಡಾ.ವಿ.ಪಿ. ಸಿಂಗ್ ಹಾಗೂ ಸಹ ಸಂಯೋಜಕ ಡಾ.ಅಂಬರೀಶ್ ಸೇರಿದಂತೆ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಪಶ್ಚಿಮ ವಲಯ ಮಟ್ಟದ ಗೃಹರಕ್ಷಕ ದಳದ ಕ್ರೀಡಾಕೂಟ : ಉತ್ತರ ಕನ್ನಡ ಜಿಲ್ಲಾ ತಂಡಕ್ಕೆ ಸಮಗ್ರ ಪ್ರಶಸ್ತಿ
ಉಡುಪಿ, ನ.14: ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ಕಾರವಾರದ ಉತ್ತರ ಕನ್ನಡ ಜಿಲ್ಲಾ ತಂಡ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೂರು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕಾರವಾರ ಜಿಲ್ಲೆಗಳ ಗೃಹರಕ್ಷಕ ಕ್ರೀಡಾಪಟು ಗಳು ಭಾಗವಹಿಸಿದ್ದರು. ಪುರುಷರ ವಿಭಾಗದ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಉಡುಪಿಯ ರಾಜೇಶ್ ಅಂಬಿಗ ಅವರು ವೈಯಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದರೆ, ಮಹಿಳೆಯರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶೃತಿ ಸಾವಂತ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಪುರುಷರ ವಿಭಾಗದ ಗ್ರೂಪ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ತಂಡದ ಸಂದೀಪ್ ಎಚ್.ಪಿ. ಚಾಂಪಿಯನ್ ಪ್ರಶಸ್ತಿ ಪಡೆದರು. ಓಟದ ಸ್ಪರ್ಧೆಗಳಲ್ಲಿ ರಾಜೇಶ್ ಅಂಬಿಗ ಹಾಗೂ ಶೃತಿ ಸಾವಂತ ಅವರೇ ಎಲ್ಲಾ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದಿದ್ದರು. ಪುರುಷರ ವಾಲಿಬಾಲ್ ನಲ್ಲಿ ಚಿಕ್ಕಮಗಳೂರು, ಕಬಡ್ಡಿಯಲ್ಲಿ ಕಾರವಾರ ತಂಡಗಳು ಮೊದಲ ಸ್ಥಾನ ಪಡೆದವು. ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಉತ್ತರ ಕನ್ನಡ ಜಿಲ್ಲೆ ಆಗೂ ಮಹಿಳೆಯರ ವಿಬಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನಿಗಳಾದವು. ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾತನಾಡಿ, ಗೃಹರಕ್ಷಕದಳವು ಪೊಲೀಸ್ ಇಲಾಖೆಗೆ ಸರಿಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೋನಾ ಕಾಲದಲ್ಲಿ ಗೃಹರಕ್ಷಕದಳ ತನ್ನ ಕಾರ್ಯವೈಖರಿ ಮೂಲಕ ಜನರಿಂದ ಮೆಚ್ಚುಗೆ ಪಡೆದಿದೆ. ಗೃಹರಕ್ಷಕದಳದ ಸಿಬ್ಬಂದಿಗಳು ಪೊಲೀಸರ ಮಾದರಿಯಲ್ಲೇ ಸೇವೆ ನೀಡಿ ದೇಶದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮುಖ್ಯ ಅತಿಥಿಯಾಗಿ ಬಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಸಮಾಜದಲ್ಲಿ ತುರ್ತು ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗೃಹ ರಕ್ಷಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ, ಅಥ್ಲೆಟಿಕ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಹರಿಪ್ರಸಾದ್ ರೈ, ವಿವಿಧ ಜಿಲ್ಲೆಗಳ ಸಮಾದೇಷ್ಟರು ಉಪಸ್ಥಿತರಿದ್ದರು. ಜಿಲ್ಲಾ ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿ, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ವಂದಿಸಿದರು. ಬ್ರಹ್ಮಾವರ ಘಟಕದ ಪಿಎಲ್ಸಿ ಸ್ಟೀವನ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಮುಂದಿನ ವರ್ಷದಿಂದ ಎಲ್ಲ ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ಜಾರಿ : ಮಧು ಬಂಗಾರಪ್ಪ
ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಎಲ್ಲ ಶಾಲೆಗಳಲ್ಲಿ ಮೌಲ್ಯ ಶಿಕ್ಷಣವನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣವು ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು, ಅದು ಬಾಳಿನ ಮೌಲ್ಯಗಳನ್ನು ಕಲಿಸಬೇಕು. ಹೀಗಾಗಿ ಶಾಲಾ ಮಕ್ಕಳಿಗೆ ಮೌಲ್ಯ ಶಿಕ್ಷಣವನ್ನು ನೀಡಲಾಗುವುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಸಿದ್ದಪಡಿಸಲಾಗಿದ್ದು, ಅವು ಶೈಕ್ಷಣಿಕ ಚಟುವಟಿಕೆಯ ಭಾಗವಾಗಲಿವೆ ಎಂದು ಅವರು ತಿಳಿಸಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮೌಲ್ಯ ಶಿಕ್ಷಣ'ದ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಖರಗ್ಪುರ್ಗೆ ಪ್ರವೇಶಕ್ಕೆ ಅರ್ಹತೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿ ಸಂಕೇತ್ ರಾಜ್ ಅವರಿಗೆ 1 ಲಕ್ಷ ರೂ. ಪ್ರೋತ್ಸಾಹಧನದ ಚೆಕ್ ಅನ್ನು ನೀಡಲಾಯಿತು. ಜೊತೆಗೆ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.
ಉಪಚುನಾವಣೆ: ತಲಾ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಜಯ
ಹೊಸದಿಲ್ಲಿ, ನ. 13: ದೇಶಾದ್ಯಂತ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ಉಳಿದಂತೆ ಆಮ್ ಆದ್ಮಿ ಪಕ್ಷ, ಪಿಡಿಪಿ, ಜಾರ್ಖಂಡ್ ಮುಕ್ತಿ ಮೋರ್ಚ ಮತ್ತು ಮಿರೆ ನ್ಯಾಶನಲ್ ಫ್ರಂಟ್ ತಲಾ ಒಂದು ಸ್ಥಾನ ಗಳಿಸಿವೆ. ಉಪಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದೆ. ಕಾಂಗ್ರೆಸ್ ರಾಜಸ್ಥಾನದ ಅಂತ ಮತ್ತು ತೆಲಂಗಾಣದ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದೇ ವೇಳೆ, ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದ ನಗ್ರೋಟ ಮತ್ತು ಒಡಿಶಾದ ನುವಾಪಾಡ ಕ್ಷೇತ್ರಗಳನ್ನು ಗೆದ್ದಿದೆ. ಉಳಿದಂತೆ, ಪಂಜಾಬ್ ನ ತರಣ್ ತಾರಣ್ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷ, ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಕ್ಷೇತ್ರವನ್ನು ಪಿಡಿಪಿ, ಜಾರ್ಖಂಡ್ ನ ಘಾಟ್ಸಿಲ ಕ್ಷೇತ್ರವನ್ನು ಜಾರ್ಖಂಡ್ ಮುಕ್ತಿ ಮೋರ್ಚ, ಮಿಜೋರಾಮ್ ನ ಡಂಪ ಕ್ಷೇತ್ರವನ್ನು ಮಿರೆ ನ್ಯಾಶನಲ್ ಫ್ರಂಟ್ ಗೆದ್ದಿವೆ. ►ಜಮ್ಮು ಮತ್ತು ಕಾಶ್ಮೀರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ, ಬದ್ಗಾಮ್ ನಲ್ಲಿ ಪಿಡಿಪಿ ಗೆದ್ದರೆ, ನಗ್ರೋತ ಕ್ಷೇತವನ್ನು ಬಿಜೆಪಿ ಉಳಿಸಿಕೊಂಡಿದೆ. ಬದ್ಗಾಮ್ ನಲ್ಲಿ, ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ನೇತೃತ್ವದ ಆಡಳಿತಾರೂಢ ನ್ಯಾಶನಲ್ ಕಾನ್ಫರೆನ್ಸ್ ಹಿನ್ನಡೆ ಕಂಡಿದೆ. ಪ್ರತಿಪಕ್ಷ ಪಿಡಿಪಿ ಈ ಕ್ಷೇತ್ರವನ್ನು ಆಡಳಿತಾರೂಢ ಪಕ್ಷದಿಂದ ಕಸಿದುಕೊಂಡಿದೆ. ಬದ್ಗಾಮ್ ಕ್ಷೇತ್ರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಚುನಾವಣೆ ಸೋತಿರುವುದು ಇದೇ ಮೊದಲ ಬಾರಿಯಾಗಿದೆ. ಪಿಡಿಪಿಯ ಅಗಾ ಮುಂತಾಝಿರ್, ಉಮರ್ ಅಬ್ದುಲ್ಲಾ ಸರಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ನೆರವನ್ನು ಪಡೆದು ನ್ಯಾಶನಲ್ ಕಾನ್ಫರೆನ್ಸ್ನ ಅಗಾ ಮಹ್ಮೂದ್ ವಿರುದ್ಧ 4,478 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅಗಾ ಮುಂತಾಝಿರ್ 21,576 ಮತಗಳನ್ನು ಪಡೆದರೆ, ಅಗಾ ಮಹ್ಮೂದ್ 17,098 ಮತಗಳನ್ನು ಗಳಿಸಿದರು. ನಗ್ರೋಟ ಕ್ಷೇತ್ರವನ್ನು ಪ್ರತಿಪಕ್ಷ ಬಿಜೆಪಿಯು ಉಳಿಸಿಕೊಂಡಿದೆ. ಬಿಜೆಪಿಯ ದೇವಯಾನಿ ರಾಣಾ ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಪ್ಯಾಂತರ್ಸ್ ಪಾರ್ಟಿ ಅಭ್ಯರ್ಥಿ ಹರ್ಷದೇವ್ ಸಿಂಗ್ರನ್ನು 24,647 ಮತಗಳ ಅಂತರದಿಂದ ಸೋಲಿಸಿದರು. ದೇವಯಾನಿ 42,350 ಮತಗಳನ್ನು ಪಡೆದರೆ, ಹರ್ಷದೇವ್ 17,703 ಮತಗಳನ್ನು ಗಳಿಸಿದರು. ►ತೆಲಂಗಾಣ ತೆಲಂಗಾಣ ರಾಜ್ಯದ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದ ನವೀನ್ ಯಾದವ್ ವಿ. ಭಾರತ್ ರಾಷ್ಟ್ರ ಸಮಿತಿಯ ಮಗಂಟಿ ಸುನೀತಾ ಗೋಪಿನಾಥ್ ರನ್ನು 24,729 ಮತಗಳ ಅಂತರದಿಂದ ಸೋಲಿಸಿದ್ದಾರೆ. ನವೀನ್ ಯಾದವ್ 98,988 ಮತಗಳನ್ನು ಗಳಿಸಿದರೆ, ಸುನೀತಾ 74,259 ಮತಗಳನ್ನು ಪಡೆದರು. ಬಿಜೆಪಿಯ ದೀಪಕ್ ರೆಡ್ಡಿ ಲಂಕಾಲ 17,061 ಮತಗಳನ್ನು ಪಡೆದು ತೃತೀಯ ಸ್ಥಾನಿಯಾದರು. ►ರಾಜಸ್ಥಾನ ರಾಜಸ್ಥಾನದ ಅಂತ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಜಯಶಾಲಿಯಾಗಿ ಹೊರಹೊಮ್ಮಿದೆ. ಕಾಂಗ್ರೆಸ್ನ ಪ್ರಮೋದ್ ಜೈನ್ ಭಯ್ಯಾ ಬಿಜೆಪಿಯ ಮೊರ್ಪಾಲ್ ಸುಮನ್ ರನ್ನು 15,612 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರಮೋದ್ 69,571 ಮತಗಳನ್ನು ಪಡೆದರೆ, ಮೊರ್ಪಾಲ್ ಸುಮನ್ 53,959 ಮತಗಳನ್ನು ಗಳಿಸಿದರು. ►ಪಂಜಾಬ್ ಪಂಜಾಬ್ ನ ತರಣ್ ತಾರಣ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷ (ಆಪ್)ವು ಜಯ ಗಳಿಸಿದೆ. ಆಪ್ ಅಭ್ಯರ್ಥಿ ಹರ್ಮೀತ್ ಸಿಂಗ್ ಸಂದು ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಸುಖ್ವಿಂದರ್ ಕೌರ್ರನ್ನು 12,091 ಮತಗಳ ಅಂತರದಿಂದ ಪರಾಭವಗೊಳಿಸಿದರು. ಹರ್ಮೀತ್ ಸಿಂಗ್ 42,649 ಮತಗಳನ್ನು ಗಳಿಸಿದರೆ, ಸುಖ್ವಿಂದರ್ ಕೌರ್ 30,558 ಮತಗಳನ್ನು ಪಡೆದರು. ಕಾಂಗ್ರೆಸ್ನ ಕರಣ್ಬೀರ್ ಸಿಂಗ್ 15,078 ಮತಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ►ಒಡಿಶಾ ಒಡಿಶಾದ ನುವಾಪಾಡ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ ಜಯ ಗಳಿಸಿದೆ. ಬಿಜೆಪಿಯ ಜಯ ದೋಲಾಕಿಯ ಕಾಂಗ್ರೆಸ್ನ ಘಾಸಿ ರಾಮ್ ಮಝಿ ಅವರನ್ನು 83,748 ಮತಗಳ ಭರ್ಜರಿ ಅಂತರದಿಂದ ಸೋಲಿಸಿದರು. ಬಿಜೆಪಿ ಅಭ್ಯರ್ಥಿ 1,23,869 ಮತಗಳನ್ನು ಬಾಚಿಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ 40,121 ಮತಗಳನ್ನು ಪಡೆದರು. ಮೂರನೇ ಸ್ಥಾನದಲ್ಲಿರುವ ಬಿಜು ಜನತಾ ದಳ (ಬಿಜೆಡಿ) ಅಭ್ಯರ್ಥಿ ಸ್ನೇಹಾಂಗಿನಿ ಛೂರಿಯ 38,408 ಮತಗಳನ್ನು ಗಳಿಸಿದರು. ಬಿಜೆಡಿ ಶಾಸಕ ರಾಜೇಂದ್ರ ದೋಲಾಕಿಯ ಸೆಪ್ಟಂಬರ್ 8ರಂದು ನಿಧನರಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ►ಮಿಜೋರಾಮ್ ಮಿರೆರಾಮ್ನ ಡಂಪ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮಿರೆ ನ್ಯಾಶನಲ್ ಫ್ರಂಟ್ ಜಯ ಗಳಿಸಿದೆ. ಮಿರೆ ನ್ಯಾಶನಲ್ ಫ್ರಂಟ್ನ ಡಾ. ಆರ್. ಲಾಲ್ತಂಗ್ಲಿಯಾನ ರೊರಾಮ್ ಪೀಪಲ್ಸ್ ಮೂವ್ಮೆಂಟ್ನ ವನ್ಲಾಲ್ಸೈಲೋವ ಅವರನ್ನು ಕೇವಲ 562 ಮತಗಳ ಅಂತರದಿಂದ ಸೋಲಿಸಿದರು. ಡಾ. ಲಾಲ್ತಂಗ್ಲಿಯಾನ 6981 ಮತಗಳನ್ನು ಪಡೆದರೆ, ಅವರ ಸಮೀಪದ ಎದುರಾಳಿ 6,419 ಮತಗಳನ್ನು ಗಳಿಸಿದರು. ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಜಾನ್ ರೊಟ್ಲುವಂಗ್ಲಿಯಾನ 2,394 ಮತಗಳನ್ನು ಪಡೆದರು. ►ಜಾರ್ಖಂಡ್ ಜಾರ್ಖಂಡ್ ನ ಘಾಟ್ಸಿಲ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚದ ಸೋಮೇಶ್ ಚಂದ್ರ ಸೊರೇನ್ ಬಿಜೆಪಿಯ ಬಾಬುಲಾಲ್ ಸೊರೇನ್ರನ್ನು 38,601 ಮತಗಳಿಂದ ಸೋಲಿಸಿದ್ದಾರೆ. ಸೋಮೇಶ್ 1,04,936 ಮತಗಳನ್ನು ಪಡೆದರೆ, ಬಾಬುಲಾಲ್ 66,335 ಮತಗಳನ್ನು ಗಳಿಸಿದರು. ಜೆಎಮ್ಎಮ್ ಶಾಸಕ ರಾಮದಾಸ್ ಸೊರೇನ್ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ವಿಜಯೀ ಅಭ್ಯರ್ಥಿ ಸೋಮೇಶ್, ದಿವಂಗತ ಶಾಸಕರ ಮಗನಾಗಿದ್ದಾರೆ.
ಗಮಚಾ ಬೀಸಿ ಬಿಹಾರ ವಿಧಾನಸಭೆ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸಿದ ಮೋದಿ; ʻಗರ್ದಾ ಊಡಾ ದಿಯಾʼ ಎಂದು ಘೋಷಣೆ!
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭೂತಪೂರ್ವ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಸಂಭ್ರಮಾಚರಣೆಯನ್ನು ಮುನ್ನಡೆಸಿದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ 'ಗರ್ದಾ ಊಡಾ ದಿಯಾ' ಎಂದು ವಿಜಯವನ್ನು ಬಣ್ಣಿಸಿದರು. ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಜನ ಕಲ್ಯಾಣಕ್ಕೆ ಮತದಾರರು ಆಶೀರ್ವದಿಸಿದ್ದಾರೆ ಎಂದು ಅವರು ತಿಳಿಸಿದರು. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ 200ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದೆ.
ಬಿಹಾರ ಮಹಿಳೆಯರಿಗೆ 10,000 ರೂ. | ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಶಾಮೀಲು: ಅಶೋಕ್ ಗೆಹ್ಲೋಟ್ ಆರೋಪ
ಹೊಸದಿಲ್ಲಿ, ನ. 14: ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ನಡೆಯುತ್ತಿದ್ದಾಗಲೂ ರಾಜ್ಯ ಸರಕಾರವು ಮಹಿಳೆಯರಿಗೆ 10,000 ರೂಪಾಯಿ ನೀಡುತ್ತಿತ್ತು, ಆದರೆ ಚುನಾವಣಾ ಆಯೋಗವು ಮೂಕಪ್ರೇಕ್ಷಕನಾಯಿತು ಎಂದು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಶುಕ್ರವಾರ ಹೇಳಿದ್ದಾರೆ. ಎನ್ಡಿಎ ಒಕ್ಕೂಟವು ಬೃಹತ್ ವಿಜಯದತ್ತ ಮುನ್ನಡೆಯುತ್ತಿರುವಂತೆಯೇ, ಚುನಾವಣಾ ಆಯೋಗದ ವೈಫಲ್ಯಗಳತ್ತ ಬೆಟ್ಟು ಮಾಡಿರುವ ಕಾಂಗ್ರೆಸ್ ನಾಯಕ, ಅದು ಬಿಹಾರದ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿತ್ತು ಎಂದು ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಚುನಾವಣಾ ಫಲಿತಾಂಶ ನಿರಾಶಾದಾಯಕವಾಗಿದೆ ಎಂದು ಹೇಳಿದರು. ಪಿಂಚಣಿ ಪಾವತಿ ಮತ್ತು ನಗದು ಹಣ ವರ್ಗಾವಣೆಗಳು ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಅವ್ಯಾಹತವಾಗಿ ಮುಂದುವರಿಯಿತು ಎಂದು ಅವರು ನುಡಿದರು. ‘‘ವಿಧಾನಸಭಾ ಚುನಾವಣಾ ಫಲಿತಾಂಶ ನಿರಾಶಾದಾಯಕವಾಗಿದೆ. ಚುನಾವಣಾ ಪ್ರಚಾರ ನಡೆಯುತ್ತಿದ್ದಾಗಲೂ ಮಹಿಳೆಯರಿಗೆ 10,000 ರೂ. ನಗದು ಪಾವತಿ ನಡೆಯುತ್ತಿತ್ತು. ಇಂಥ ಸಂಗತಿ ಯಾವತ್ತೂ ನಡೆದಿಲ್ಲ’’ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಗೆಹ್ಲೋಟ್ ಹೇಳಿದರು. 2023ರ ರಾಜಸ್ಥಾನ ವಿಧಾನಸಭಾ ಚುನಾವಣೆಯ ವೇಳೆ, ಯೋಜನೆಯೊಂದರಡಿ ಮೊಬೈಲ್ ಫೋನ್ ಗಳ ವಿತರಣೆಯನ್ನು ಮತ್ತು ಪಿಂಚಣಿ ಪಾವತಿಯನ್ನು ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ತಕ್ಷಣವೇ ನಿಲ್ಲಿಸಲಾಗಿತ್ತು ಎಂದು ಅವರು ಹೇಳಿದರು. ‘‘ಮತಗಳ್ಳತನ’’ಕ್ಕಾಗಿ ಚುನಾವಣಾ ಆಯೋಗದ ಮೇಲೆ ವಾಗ್ದಾಳಿ ನಡೆಸಿದ ಗೆಹ್ಲೋಟ್, ಅದು ‘‘ಮೂಕಪ್ರೇಕ್ಷಕನಾಗಿತ್ತು’’ ಎಂದರು. ‘‘ಬಿಹಾರದಲ್ಲಿ ಚುನಾವಣಾ ಆಯೋಗವು ಮೂಕಪ್ರೇಕ್ಷಕನಾಗಿತ್ತು. ಅದು ಇದನ್ನು ಯಾಕೆ ತಡೆಯಲಿಲ್ಲ? ಅದು ಮಧ್ಯಪ್ರವೇಶಿಸಲೇ ಇಲ್ಲ’’ ಎಂದು ಹೇಳಿದರು. ‘‘ನ್ಯಾಯೋಚಿತ ಚುನಾವಣೆ ನಡೆಯುವಂತೆ ಚುನಾವಣಾ ಆಯೋಗ ನೋಡಿಕೊಳ್ಳುವುದಿಲ್ಲ. ಮತಗಟ್ಟೆ ವಶೀಕರಣ ಅಥವಾ ವಂಚನೆ ನಡೆದಾಗ ಚುನಾವಣಾ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಇದೇ ಮತಗಳ್ಳತನ. ಇಲ್ಲಿ ಚುನಾವಣಾ ಆಯೋಗವು ಆಡಳಿತ ಪಕ್ಷದೊಂದಿಗೆ ಶಾಮೀಲಾಗಿರುವುದರಲ್ಲಿ ಸಂಶಯವೇ ಇಲ್ಲ’’ ಎಂದು ಗೆಹ್ಲೋಟ್ ನುಡಿದರು.
ಉಡುಪಿ | ಮಕ್ಕಳ ದಿನಾಚರಣೆ: ವಿದ್ಯಾರ್ಥಿಗಳಿಗೆ 20ಸಾವಿರ ಪೆನ್ ವಿತರಣೆ
ಉಡುಪಿ, ನ.14: ಉಡುಪಿ ವಿಧಾನಸಭಾ ಕ್ಷೇತ್ರದ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ 15 ಲಕ್ಷ ರೂ. ವೆಚ್ಚದಲ್ಲಿ ಸುಮಾರು 20 ಸಾವಿರ ಪೆನ್ ವಿತರಣೆ ಕಾರ್ಯಕ್ರಮಕ್ಕೆ ಮಣಿಪಾಲ ಸರಳಬೆಟ್ಟುವಿನ ಕೃಷ್ಣಪ್ಪ ಸಾಮಂತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಪೆನ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಗರಸಭಾ ಸದಸ್ಯ ವಿಜಯಲಕ್ಷ್ಮೀ, ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸಿ ರೆಬೆಲ್ಲೋ, ಮಣಿಪಾಲ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಗಣೇಶ್ ಪ್ರಭು, ಉಪಾಧ್ಯಕ್ಷ ಗುರುದತ್ತ ಮಲ್ಯ, ನಿವೃತ್ತ ಸಂಪಾದಕ ನಿತ್ಯಾನಂದ ಪಡ್ರೆ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಟರಾಜ್ ಕಾಮತ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಸವರಾಜ್ ಜಂಬಗಿ, ಸ್ಥಳೀಯ ಪ್ರಮುಖರಾದ ಗುರುರಾಜ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಎಸ್ ಐ ಆರ್ ತಡೆಯಲ್ಲ; ಸುಪ್ರೀಂ ಕೋರ್ಟ್ ಗೆ ಹೋಗಬಹುದು: ಕೇರಳ ಹೈಕೋರ್ಟ್
ತಿರುವನಂತಪುರಂ: ಭಾರತೀಯ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ತೀವ್ರ ಮತಪಟ್ಟಿ ಪರಿಷ್ಕರಣೆಗೆ ತಡೆ ನೀಡುವಂತೆ ಕೇರಳ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಶುಕ್ರವಾರ ಕೇರಳ ಹೈಕೋರ್ಟ್ ನಿರಾಕರಿಸಿದೆ. ಇತರ ರಾಜ್ಯಗಳಲ್ಲಿ ನಡೆಸಲು ಉದ್ದೇಶಿಸಿರುವ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಇನ್ನೂ ಬಾಕಿಯಿರುವಾಗ, ಇಂತಹ ಅರ್ಜಿಗಳನ್ನು ವಿಚಾರಣೆಗೆ ಮಾನ್ಯ ಮಾಡದಿರುವ ನ್ಯಾಯಾಂಗ ಶಿಸ್ತನ್ನು ಹೈಕೋರ್ಟ್ ಗಳು ಪಾಲಿಸಬೇಕಿದೆ ಎಂದು ನ್ಯಾ. ವಿ.ಜಿ.ಅರುಣ್ ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ, ಕೇರಳ ಸರಕಾರವು ಸುಪ್ರೀಂಕೋರ್ಟ್ ಗೆ ಹೋಗಬಹುದು ಎಂದು ಏಕಸದಸ್ಯ ಪೀಠ ಸೂಚಿಸಿದೆ. ಮುಂಬರುವ ಪಂಚಾಯತಿ ಚುನಾವಣೆಗಳ ಹಿನ್ನೆಲೆಯಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ತಡೆ ನೀಡಬೇಕು ಎಂದು ಕೋರಿ ಕೇರಳ ಸರಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ಮಲ್ಪೆ | ಗುತ್ತಿಗೆ ಆಧಾರದಲ್ಲಿ ಮೀನು ಮಾರಾಟ ಫೆಡರೇಶನ್ಗೆ 9.50 ಎಕರೆ ಬಂದರು ಭೂಮಿ : ರಘುಪತಿ ಭಟ್ ವಿರೋಧ
ಉಡುಪಿ, ನ.14: ಮಲ್ಪೆ ಬಂದರು ವ್ಯಾಪ್ತಿಯ 37554.55 ಚದರ ಮೀಟರ್ ಅಂದರೆ ಸರಿ ಸುಮಾರು 9.50 ಎಕರೆ ವಿಸ್ತೀರ್ಣದ ಬಂದರು ಭೂಮಿಯನ್ನು ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿಯಮಿತ ಮುಲಿಹಿತ್ಲು, ಬೋಳಾರ್, ಮಂಗಳೂರು ಇವರಿಗೆ 15 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಕರ್ನಾಟಕ ಜಲ ಸಾರಿಗೆ ಮಂಡಳಿಯ ಸಭೆಯಲ್ಲಿ ನಿರ್ಣಯಿಸಿ ಅನುಮೋದನೆ ನೀಡಿರುವುದು ಖಂಡನೀಯ ಎಂದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ. ಈ ಜಾಗವು ಟೆಬ್ಮಾ ಶಿಫ್ ಯಾರ್ಡ್ ಹಿಂದಿರುವ ಸಿವಾಕ್ ಮತ್ತು ಹನುಮಾನ್ ವಿಠೋಭ ಭಜನಾ ಮಂದಿರದ ಸಮೀಪವಿದ್ದು, ಇದನ್ನು ಮೀನುಗಾರಿಕಾ ಉದ್ದೇಶವೆಂದು ಮೀನುಗಾರಿಕಾ ಫೆಡರೇಷನ್ಗೆ ಗುತ್ತಿಗೆ ನೀಡಿರುವುದು ಸ್ಥಳೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಜಾಗವನ್ನು ಮೀನುಗಾರಿಕಾ ಉದ್ದೇಶಕ್ಕೆಂದು ಫೆಡರೇಷನ್ಗೆ ನೀಡಿರುವುದು ಕಾನೂನು ಬಾಹಿರ ಮತ್ತು ಜನ ವಿರೋಧಿಯಾಗಿದೆ. ತಕ್ಷಣ ಈ ಆದೇಶವನ್ನು ರದ್ದು ಮಾಡಿ ಮಲ್ಪೆ ಭಾಗದಲ್ಲಿ ಇರುವ 5 ಭಜನಾ ಮಂಡಳಿಗಳ ನೇತೃತ್ವದ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ಜಾಗ ಮಂಜೂರು ಮಾಡಿ ಮರು ಆದೇಶ ಮಾಡಿ ಆ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಭೂಮಿಯನ್ನು ಮೀನುಗಾರಿಕಾ ಫೆಡರೇಷನ್ಗೆ ನೀಡಿದರೆ ಅಲ್ಲಿ ಖಾಸಗಿಯವರ ನೇತೃತ್ವದಲ್ಲಿ ಫಿಶ್ ಮಿಲ್ ಅಥವಾ ಇನ್ನಿತರ ಮೀನುಗಾರಿಕಾ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಇದು ಸ್ಥಳೀಯವಾಗಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಮಲ್ಪೆಯ ಪ್ರವಾಸೋದ್ಯಮಕ್ಕೆ ಮತ್ತು ಸ್ಥಳೀಯ ಜನಜೀವನಕ್ಕೆ ಮಾರಕವಾಗಲಿದೆ. ಮೀನುಗಾರಿಕಾ ಉದ್ದೇಶಕ್ಕೆ ಈ ಭೂಮಿಯನ್ನು ನೀಡುವುದಾದರೆ ಮೀನುಗಾರಿಕಾ ಇಲಾಖೆ ಮೂಲಕ 4ನೇ ಹಂತದ ಬಂದರಿನ ಯೋಜನೆಗೆ ಈ ಜಾಗ ಸೂಕ್ತವಾಗಿದೆಂದು ಅವರು ತಿಳಿಸಿದ್ದಾರೆ. ಶಾಸಕರ ಬಳಿಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಮನವಿ ಮಾಡಿದರೆ ನಾವು ವಿರೋಧ ಪಕ್ಷದಲ್ಲಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ನಮ್ಮ ಮಾತಿಗೆ ಬೆಲೆ ಇಲ್ಲ. ಬಿಜೆಪಿ ಶಾಸಕರ ಕೆಲಸಗಳು ಆಗುವುದಿಲ್ಲ ಎಂದು ಸಬೂಬು ನೀಡುತ್ತಾರೆ. ಆದರೆ ಶಾಸಕರ ಅಧ್ಯಕ್ಷತೆಯ ಮೀನುಗಾರಿಕಾ ಫೆಡರೇಷನ್ಗೆ ಬೆಲೆಬಾಳುವ ಸುಮಾರು 9.50 ಎಕರೆ ಜಾಗವನ್ನು 15 ವರ್ಷದ ಅವಧಿಗೆ ಕಾಂಗ್ರೆಸ್ ಸರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಕರ್ನಾಟಕ ಜಲಸಾರಿಗೆ ಮಂಡಳಿ ಅನುಮೋದನೆ ನೀಡುತ್ತದೆ. ಅಂದರೆ ಶಾಸಕರು ಕಾಂಗ್ರೆಸ್ ನೊಂದಿಗೆ ಒಳ ಒಪ್ಪಂದ ಮಾಡಿದರೇ? ಇಲ್ಲಿ ಶಾಸಕರ ಸ್ವಂತ ಲಾಭದ ಕೆಲಸ ಆಗುತ್ತದೆ. ಕ್ಷೇತ್ರದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಕೆಲಸಗಳು ಆಗುವುದಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಸಂಬಂಧ ಈಗಾಗಲೇ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದು ಅವರೊಂದಿಗೆ ಸೇರಿ ಈ ಆದೇಶ ರದ್ದುಪಡಿಸುವವರೆಗೆ ಹೋರಾಟವನ್ನು ನಡೆಸಲಾಗುವುದು. ಯಾವುದೇ ಕಾರಣಕ್ಕೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾದ ಈ ಆದೇಶವನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಜಿಲ್ಲಾಡಳಿತ ಮದ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಮತ್ತು ಮೀನುಗಾರಿಕೆ, ಬಂದರು ಒಳನಾಡು ಜಲ ಸಾರಿಗೆ ಸಚಿವರು ತಕ್ಷಣ ಕರ್ನಾಟಕ ಜಲ ಸಾರಿಗೆ ಮಂಡಳಿ ನೀಡಿದ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
2025ರ ಆವೃತ್ತಿಯ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ | ರೋಹಿತ್ ನಾಯಕತ್ವದ ಭಾರತ ತಂಡ ಪ್ರಕಟ
ಹೊಸದಿಲ್ಲಿ, ನ.14: ಚೆನ್ನೈ ಹಾಗೂ ಮಧುರೈನಲ್ಲಿ ನವೆಂಬರ್ 28ರಿಂದ ಡಿಸೆಂಬರ್ 10ರ ತನಕ ನಡೆಯಲಿರುವ 2025ರ ಆವೃತ್ತಿಯ ಎಫ್ಐಎಚ್ ಪುರುಷರ ಜೂನಿಯರ್ ವಿಶ್ವಕಪ್ ಟೂರ್ನಿಗಾಗಿ ಹಾಕಿ ಇಂಡಿಯಾವು 18 ಸದಸ್ಯರನ್ನು ಒಳಗೊಂಡ ತಂಡವನ್ನು ಶುಕ್ರವಾರ ಪ್ರಕಟಿಸಿದೆ. ಪಿ.ಆರ್. ಶ್ರೀಜೇಶ್ ಕೋಚಿಂಗ್ ನಿಂದ ಪಳಗಿರುವ ಭಾರತದ ಜೂನಿಯರ್ ಹಾಕಿ ತಂಡಕ್ಕೆ ಡಿಫೆಂಡರ್ ಹಾಗೂ ಡ್ರ್ಯಾಗ್ ಫ್ಲಿಕರ್ ರೋಹಿತ್ ನಾಯಕತ್ವವಹಿಸಿದ್ದಾರೆ. ರೋಹಿತ್ ನೇತೃತ್ವದಲ್ಲಿ ಭಾರತ ತಂಡವು ಸುಲ್ತಾನ್ ಆಫ್ ಜೊಹೋರ್ ಕಪ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿತ್ತು. ಭಾರತ ತಂಡವು ‘ಬಿ’ ಗುಂಪಿನಲ್ಲಿ ಚಿಲಿ, ಸ್ವಿಟ್ಸರ್ಲ್ಯಾಂಡ್ ಹಾಗೂ ಓಮಾನ್ ತಂಡಗಳೊಂದಿಗೆ ಸ್ಥಾನ ಪಡೆದಿದೆ. ತಂಡದಲ್ಲಿ ಗೋಲ್ಕೀಪರ್ ಗಳಾದ ಬಿಕ್ರಮ್ಜೀತ್ ಸಿಂಗ್ ಹಾಗೂ ಪ್ರಿನ್ಸ್ದೀಪ್ ಸಿಂಗ್, ಅನುಭವಿಗಳಾದ ಡಿಫೆಂಡರ್ ಅಮಿರ್ ಅಲಿ ಅವರಿದ್ದಾರೆ. ಗುರ್ಜೊತ್ ಒಳಗೊಂಡ ಯುವ ಫಾರ್ವರ್ಡ್ಗಳು ಹಾಗೂ ಸಮತೋಲಿತ ಮಿಡ್ ಫೀಲ್ಡರ್ ಗಳಿದ್ದಾರೆ. ಭುಜನೋವಿನಿಂದಾಗಿ ಸ್ಟಾರ್ ಸ್ಟ್ರೈಕರ್ ಅರೈಜೀತ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ. ►ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಗೋಲ್ಕೀಪರ್ ಗಳು : ಬಿಕ್ರಮ್ಜೀತ್ ಸಿಂಗ್, ಪ್ರಿನ್ಸ್ದೀಪ್ ಸಿಂಗ್ ► ಡಿಫೆಂಡರ್ ಗಳು : ರೋಹಿತ್, ಟಲೆಮ್ ಪ್ರಿಯೊಬಾರ್ತ, ಅನ್ಮೋಲ್ ಎಕ್ಕಾ,ಆಮಿರ್ ಅಲಿ, ಸುನೀಲ್ ಪಾಲಾಕ್ಷಪ್ಪ ಬೆನ್ನೂರ್, ಶಾರ್ದಾನಂದ ತಿವಾರಿ. ► ಮಿಡ್ ಫೀಲ್ಡರ್ ಗಳು : ಅಂಕಿತ್ ಪಾಲ್, ಇಂಗ್ಲೆಂಬಾ ಲುವಾಂಗ್, ಅದ್ರೋಹಿತ್ ಎಕ್ಕಾ, ರೋಶನ್ ಕುಜುರ್, ಮನ್ಮೀತ್ ಸಿಂಗ್, ಗುರ್ಜೋತ್ ಸಿಂಗ್. ► ಫಾರ್ವರ್ಡ್ಗಳು : ಅರ್ಷದೀಪ ಸಿಂಗ್, ಸೌರಭ್ ಆನಂದ್ ಕುಶ್ವಾಹ, ಅಜೀತ್ ಯಾದವ್, ದಿಲ್ರಾಜ್ ಸಿಂಗ್ ► ಮೀಸಲು ಆಟಗಾರರು : ರವ್ನೀತ್ ಸಿಂಗ್,ರೋಹಿತ್ ಕುಲ್ಲು.
ಮಂಗಳೂರು | ನ.15-19: ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಮಂಗಳೂರು,ನ.14 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗಿದೆ. ನ.15 ರಂದು ಪುತ್ತೂರು ತಾಲೂಕಿನ ಪಾಣಾಜೆ ಹಾಗೂ ನ.18 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು, ಪುತ್ತೂರು ತಾಲೂಕಿನ ಕೊಯಿಲ, ಉಪ್ಪಿನಂಗಡಿ, ಸುಳ್ಯ ತಾಲೂಕಿನ ಬೆಳ್ಳಾರೆ ಹಾಗೂ ನ.19 ರಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಆರೋಗ್ಯ ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ. ಶಿಬಿರದ ಸದುಪಯೋಗವನ್ನು ಎಂಡೋಸಲ್ಫಾನ್ ಸಂತ್ರಸ್ತರು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
IPL | ಕೆಕೆಆರ್ ಬೌಲಿಂಗ್ ಕೋಚ್ ಆಗಿ ಟಿಮ್ ಸೌಥಿ
ಕೋಲ್ಕತಾ, ನ.14: ನ್ಯೂಝಿಲ್ಯಾಂಡ್ ನ ಮಾಜಿ ವೇಗದ ಬೌಲರ್ ಟಿಮ್ ಸೌಥಿ ಅವರನ್ನು 2026ರ ಆವೃತ್ತಿಯ ಐಪಿಎಲ್ ಟೂರ್ನಿಗೆ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ಶುಕ್ರವಾರ ಪ್ರಕಟಿಸಿದೆ. ‘ಸೌಥಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿನ ವಿಶಾಲ ಅನುಭವ, ಈ ಹಿಂದೆ ಫ್ರಾಂಚೈಸಿಯೊಂದಿಗಿನ ನಂಟು ಕೆಕೆಆರ್ ಕೋಚಿಂಗ್ ಸ್ಟಾಫ್ ಗೆ ಅಮೂಲ್ಯ ಸೇರ್ಪಡೆಯಾಗಿಸಿದೆ’ ಎಂದು ಫ್ರಾಂಚೈಸಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ತಲೆಮಾರಿನ ಓರ್ವ ಶ್ರೇಷ್ಠ ವೇಗದ ಬೌಲರ್ ಆಗಿರುವ ಸೌಥಿ 15 ವರ್ಷಗಳ ಕಾಲ ನ್ಯೂಝಿಲ್ಯಾಂಡ್ ಕ್ರಿಕೆಟ್ಗೆ ಮಹತ್ವದ ಕೊಡುಗೆ ನೀಡಿದ್ದರು. ತನ್ನ ದೇಶವನ್ನು 107 ಟೆಸ್ಟ್ ಪಂದ್ಯಗಳು, 161 ಏಕದಿನ ಹಾಗೂ 126 ಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಸೌಥಿ 776 ಅಂತರರಾಷ್ಟ್ರೀಯ ವಿಕೆಟ್ ಗಳನ್ನು ಪಡೆದಿದ್ದಾರೆ. ತನ್ನ ಸ್ವಿಂಗ್, ನಿಖರತೆ ಹಾಗೂ ನಾಯಕತ್ವದಿಂದ ಖ್ಯಾತಿ ಪಡೆದಿರುವ ಸೌಥಿ ನ್ಯೂಝಿಲ್ಯಾಂಡ್ ನ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. 2019ರ ಐಸಿಸಿ ವಿಶ್ವಕಪ್ ಅಭಿಯಾನ ಹಾಗೂ 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸೌಥಿ ಅವರು ಕೆಕೆಆರ್ ಕುಟುಂಬಕ್ಕೆ ಹೊಸಬರಲ್ಲ. ತನ್ನ ಐಪಿಎಲ್ ವೃತ್ತಿಜೀವನದಲ್ಲಿ 2021, 2022,2023ರಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು. 2025ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪ್ರಕಟಿಸಿದ್ದರು. ‘‘ಕೆಕೆಆರ್ ನನಗೆ ಯಾವಾಗಲೂ ಮನೆಯಂತೆ ಭಾಸವಾಗುತ್ತಿತ್ತು. ಹೊಸ ಹುದ್ದೆಯೊಂದಿಗೆ ಆ ತಂಡಕ್ಕೆ ವಾಪಸಾಗುತ್ತಿರುವುದು ನನಗೆ ಲಭಿಸಿರುವ ಗೌರವ. ಫ್ರಾಂಚೈಸಿಯು ಉತ್ತಮ ಸಂಸ್ಕೃತಿ, ಉತ್ಸಾಹಿ ಅಭಿಮಾನಿಗಳು ಹಾಗೂ ಉತ್ತಮ ಆಟಗಾರರನ್ನು ಹೊಂದಿದೆ. ಬೌಲರ್ ಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವೆ. ಈ ಮೂಲಕ 2026ರ ಐಪಿಎಲ್ ನಲ್ಲಿ ತಂಡದ ಯಶಸ್ಸಿಗೆ ನೆರವಾಗುವೆ’’ಎಂದು ಸೌಥಿ ಹೇಳಿದ್ದಾರೆ.
ಉಡುಪಿ | ಅಪಾಯದ ಸ್ಥಿತಿಯಲ್ಲಿದ್ದ ಟ್ರಾನ್ಸ್ಫಾರ್ಮರ್ ಕೊನೆಗೂ ದುರಸ್ತಿ
ಉಡುಪಿ, ನ.14: ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದ್ದ, ನಗರಸಭೆಯ 25ನೇ ಕುಂಜಿಬೆಟ್ಟು ವಾರ್ಡಿನಲ್ಲಿ ಬರುವ ಗೋವಿಂದ ಪುಷ್ಕರಣಿ 1 ನೇ ಅಡ್ಡರಸ್ತೆ ಬಳಿಯಿದ್ದ ಟ್ರಾನ್ಸ್ಫಾರ್ಮರ್ ಕಂಬವನ್ನು ಆಯಕಟ್ಟಿನ ಸ್ಥಳದಲ್ಲಿ ಅಳವಡಿಸಲಾಗಿದೆ. ಮಳೆ ನೀರು ಹರಿಯುವ ಕಾಲುವೆಯಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸಿರುವ ಒಂದು ಕಂಬವಿತ್ತು, ಮತ್ತೊಂದು ಕಂಬವು ಕಾಲುವೆ ದಂಡೆಯ ಮೇಲಿತ್ತು. ಟ್ರಾನ್ಸ್ಫಾರ್ಮರ್ ಬೀಳುವ ಮೂನ್ಸೂಚನೆ ತಿಳಿದು ಕಂಬಕ್ಕೆ ಎರಡು ಹಗ್ಗಗಳನ್ನು ಕಟ್ಟಿ ಖಾಸಗಿಯವರ ತೆಂಗಿನ ಮರಕ್ಕೆ ಕಟ್ಟಿಡಲಾಗಿತ್ತು. ಸಮಸ್ಯೆಯನ್ನು ಗಮನಿಸಿದ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಕಂಬಗಳ ದುರಸ್ತಿಗೆ ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಣರಾಜ್ ಭಟ್, ಕಿರಿಯ ಅಭಿಯಂತರ ಅಶೋಕ್ ಶೆಟ್ಟಿ ಮುತುವರ್ಜಿಯಲ್ಲಿ ಟ್ರಾನ್ಸ್ಫಾರ್ಮರ್ ನ ದುರಸ್ಥಿ ಪಡೆದುಕೊಂಡಿತು. ನ.28ರಂದು ಉಡುಪಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸನಿಹದ ಗದ್ದೆ ಬಯಲಿನಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆಂದು ಹೇಳಲಾಗುತಿತ್ತು. ಇದೇ ಸ್ಥಳದಲ್ಲಿಯೇ ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿರುವ ಟ್ರಾನ್ಸ್ಫಾರ್ಮರ್ ಕಂಬ ಇತ್ತು.
ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ 5 ವಿಕೆಟ್ ಗೊಂಚಲು ಪಡೆದು ದಾಖಲೆ ನಿರ್ಮಿಸಿದ ಬುಮ್ರಾ
ಕೋಲ್ಕತಾ, ನ.14: ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅತ್ಯಮೋಘ ಬೌಲಿಂಗ್(5-27)ಸಂಘಟಿಸಿ ಈಡನ್ ಗಾರ್ಡನ್ಸ್ ನಲ್ಲಿ ಶುಕ್ರವಾರ ಆರಂಭವಾದ ಮೊದಲ ಟೆಸ್ಟ್ ನ ಮೊದಲ ದಿನದಾಟದಲ್ಲೇ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ತಂಡವು ಕೇವಲ 159 ರನ್ ಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ವಿಕೆಟ್ ನಷ್ಟವಿಲ್ಲದೆ 57 ರನ್ ಕಲೆ ಹಾಕಿ ದೊಡ್ಡ ಮೊತ್ತ ಕಲೆ ಹಾಕುವತ್ತ ಚಿತ್ತಹರಿಸಿತ್ತು. ಆದರೆ ಬುಮ್ರಾ ಅವರು ಇಬ್ಬರೂ ಆರಂಭಿಕ ಆಟಗಾರರನ್ನು ಬೆನ್ನುಬೆನ್ನಿಗೆ ಪೆವಿಲಿಯನ್ ಗೆ ಕಳುಹಿಸಿ ಶಾಕ್ ನೀಡಿದರು. ಬುಮ್ರಾ ಹೊಡೆತಕ್ಕೆ ತತ್ತರಿಸಿದ ಪ್ರವಾಸಿ ತಂಡದ ಇನಿಂಗ್ಸ್ ಸಂಪೂರ್ಣ ಹಳಿ ತಪ್ಪಿತು. ದಕ್ಷಿಣ ಆಫ್ರಿಕಾ ತಂಡವು ಕೇವಲ 102 ರನ್ ಗೆ ತನ್ನೆಲ್ಲಾ 10 ವಿಕೆಟ್ ಗಳನ್ನು ಕಳೆದುಕೊಂಡಿದ್ದು, ಮಧ್ಯಮ ಸರದಿಯು ಬುಮ್ರಾ ಅವರ ನಿಖರ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉದುರಿಹೋಯಿತು. ಬುಮ್ರಾ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 16ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಈ ಮೂಲಕ ಭಾರತದ ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಭಗತ್ ಚಂದ್ರಶೇಖರ್ರೊಂದಿಗೆ ಸ್ಥಾನ ಪಡೆದಿದ್ದಾರೆ. ಭಾರತೀಯ ಬೌಲರ್ ಗಳ ಪೈಕಿ ಲೆಜೆಂಡ್ಗಳಾದ ಆರ್.ಅಶ್ವಿನ್(37), ಅನಿಲ್ ಕುಂಬ್ಳೆ(35), ಹರ್ಭಜನ್ ಸಿಂಗ್(25) ಹಾಗೂ ಕಪಿಲ್ದೇವ್(23)ಅತ್ಯಂತ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಕೆಲವೇ ಪಂದ್ಯಗಳಲ್ಲಿ ಆಡಿದ್ದರೂ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ಕ್ಷಿಪ್ರವಾಗಿ ಬೆಳೆದು ನಿಂತಿದ್ದಾರೆ. 27 ರನ್ ಗೆ 5 ವಿಕೆಟ್ ಗಳನ್ನು ಕಬಳಿಸಿರುವ ಬುಮ್ರಾ ಅವರು ವಿಭಿನ್ನ ಕಾರಣಕ್ಕೆ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಕೆತ್ತಿದ್ದಾರೆ. 2019ರ ನಂತರ ಭಾರತ ನೆಲದಲ್ಲಿ ಟೆಸ್ಟ್ ಕ್ರಿಕೆಟಿನ ಮೊದಲ ದಿನದಾಟದಲ್ಲೇ ಐದು ವಿಕೆಟ್ ಗೊಂಚಲು ಪಡೆದ ಭಾರತದ 2ನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. 2019ರಲ್ಲಿ ಇದೇ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ಇಶಾಂತ್ ಶರ್ಮಾ ಐದು ವಿಕೆಟ್ ಗಳನ್ನು ಪಡೆದಿದ್ದರು. 2008ರಲ್ಲಿ ಅಹ್ಮದಾಬಾದ್ನಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಮೊದಲ ದಿನವೇ ಟೆಸ್ಟ್ ಕ್ರಿಕೆಟ್ ನಲ್ಲಿ ಐದು ವಿಕೆಟ್ ಪಡೆದ ಕೊನೆಯ ವೇಗದ ಬೌಲರ್ ಆಗಿದ್ದಾರೆ. ನ್ಯೂಝಿಲ್ಯಾಂಡ್ ನ ಮ್ಯಾಟ್ ಹೆನ್ರಿ ಕಳೆದ ವರ್ಷ ಬೆಂಗಳೂರು ಟೆಸ್ಟ್ ನ ಮೊದಲ ದಿನದಾಟ ಮಳೆಗಾಹುತಿಯಾದ ನಂತರ ಎರಡನೇ ದಿನದಾಟದಲ್ಲಿ ಐದು ವಿಕೆಟ್ ಗುಚ್ಛ ಪಡೆದಿದ್ದರು. ಇಂದು ಬುಮ್ರಾಗೆ ಉತ್ತಮ ಸಾಥ್ ನೀಡಿದ ಮುಹಮ್ಮದ್ ಸಿರಾಜ್ ಹಾಗೂ ಕುಲದೀಪ ಯಾದವ್ ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಮೋಟಾರು ಸೈಕಲ್ಗಳನ್ನು ಪ್ರಯಾಣಿಕರನ್ನು ಸಾಗಿಸುವ ವಾಹನಗಳೆಂದು ವ್ಯಾಖ್ಯಾನಿಸಲಾಗಿಲ್ಲ; ಸರಕಾರದ ಪ್ರತಿಪಾದನೆ
ಓಲಾ, ಉಬರ್, ರ್ಯಾಪಿಡೋ ಸಲ್ಲಿಸಿರುವ ಮೇಲ್ಮನವಿ
ಟ್ರಂಪ್ ಕ್ಷಮೆ ಯಾಚಿಸಿದ ಬಿಬಿಸಿ, ಆದರೆ ಮಾನನಷ್ಟ ಮೊಕದ್ದಮೆಗೆ ವಿರೋಧ
ಲಂಡನ್, ನ.14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2021ರ ಜನವರಿ 6ರಂದು ಮಾಡಿದ್ದ ಭಾಷಣವನ್ನು ಎಡಿಟ್ ಮಾಡಿ ಪ್ರಸಾರ ಮಾಡಿದ ವಿಷಯದ ಬಗ್ಗೆ ಬಿಬಿಸಿ ಮತ್ತು ತಾನು ವೈಯಕ್ತಿಕವಾಗಿ ಕ್ಷಮೆಕೋರಿದ ಪತ್ರವನ್ನು ಶ್ವೇತಭವನಕ್ಕೆ ಕಳುಹಿಸಿರುವುದಾಗಿ ಬಿಬಿಸಿಯ ಅಧ್ಯಕ್ಷ ಸಮೀರ್ ಶಾ ಗುರುವಾರ ಹೇಳಿದ್ದಾರೆ. ಆದರೆ ಈ ವಿಷಯಕ್ಕೆ ಸಂಬಂಧಿಸಿ ಮಾನನಷ್ಟ ಮೊಕದ್ದಮೆಗೆ ಯಾವುದೇ ಆಧಾರವಿಲ್ಲ ಎಂದು ಬಿಬಿಸಿ ಪ್ರತಿಪಾದಿಸಿದೆ. ` ನಾವು ಮಾಡಿದ ಎಡಿಟ್ (ಪರಿಷ್ಕರಣೆ) ನಾವು ಭಾಷಣದ ಒಂದು ವಿಭಾಗವನ್ನು ಮಾತ್ರ ತೋರಿಸುತ್ತಿದ್ದೇವೆ ಎಂಬ ಅನಿಸಿಕೆಯನ್ನು ಸೃಷ್ಟಿಸಿದೆ ಮತ್ತು ಅಧ್ಯಕ್ಷ ಟ್ರಂಪ್ ಅವರು ಹಿಂಸಾತ್ಮಕ ಕ್ರಮಗಳಿಗೆ ನೇರವಾಗಿ ಕರೆ ನೀಡಿರುವಂತೆ ತಪ್ಪು ಅನಿಸಿಕೆಯನ್ನು ಮೂಡಿಸಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ ಎಂದು ಬಿಬಿಸಿ ಹೇಳಿದೆ. ವಿಷಯದ ಬಗ್ಗೆ ಕ್ಷಮೆ ಯಾಚಿಸುವಂತೆ ಟ್ರಂಪ್ ವಕೀಲರು ಬಿಬಿಸಿಗೆ ಪತ್ರ ರವಾನಿಸಿದ್ದರು ಮತ್ತು 1 ಕೋಟಿ ಡಾಲರ್ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದರು. ಪ್ರಮಾದದ ಹೊಣೆ ಹೊತ್ತು ಬಿಬಿಸಿ ಪ್ರಧಾನ ನಿರ್ದೇಶಕ ಟಿಮ್ ಡೇವಿ ಮತ್ತು ಸುದ್ದಿ ಮುಖ್ಯಸ್ಥ ಡೆಬೋರಾ ಟರ್ನೆಸ್ ರವಿವಾರ ರಾಜೀನಾಮೆ ನೀಡಿದ್ದರು. --
ಬಿಹಾರದಲ್ಲಿ ಮಹಾಘಟಬಂಧನ್ ಧೂಳಿಪಟ; ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಸ್ಫೋಟ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಹೀನಾಯ ಸೋಲು ಕಂಡಿದೆ. ಎನ್ಡಿಎ ಮೈತ್ರಿಕೂಟ ಐತಿಹಾಸಿಕ ಗೆಲುವು ಸಾಧಿಸಿದೆ. ಮಹಾಘಟಬಂಧನ್ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ನೊಳಗೆ ತೀವ್ರ ಅಸಮಾಧಾನ ಭುಗಿಲೆದ್ದಿದ್ದು, ಕೆಲ ನಾಯಕರು ಪಕ್ಷದ ಸಂಘಟನಾ ವೈಫಲ್ಯವನ್ನು ನೇರವಾಗಿ ದೂಷಿಸಿದರೆ, ಇನ್ನು ಕೆಲವರು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಪಕ್ಷದೊಳಗಿನ ಆಂತರಿಕ ಕಚ್ಚಾಟವು ಮತ್ತೊಮ್ಮೆ ಬಹಿರಂಗಗೊಂಡಿದೆ.
ಬಿಹಾರ ಚುನಾವಣೆ | ತೇಜ್ ಪ್ರತಾಪ್ ಯಾದವ್ ಗೆ ಸೋಲು
ಪಾಟ್ನಾ,ನ.14: ಬಿಹಾರದ ಮಹುವಾ ಕ್ಷೇತ್ರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಜನಶಕ್ತಿ ಜನತಾ ದಳದ (ಜೆಜೆಡಿ) ಸ್ಥಾಪಕ ತೇಜ್ ಪ್ರತಾಪ್ ಯಾದವ್ ಸೋಲನ್ನು ಅನುಭವಿಸಿದ್ದಾರೆ. ಎಲ್ಜೆಪಿಯ ಸಂಜಯ ಕುಮಾರ್ ಸಿಂಗ್ ಅವರು 45,000ಕ್ಕೂ ಅಧಿಕ ಮತಗಳ ಅಂತರದಿಂದ ಆರ್ಜೆಡಿಯ ಹಾಲಿ ಶಾಸಕ ಮುಕೇಶ ಕುಮಾರ್ ರೌಶನ್ ಅವರಿಗೆ ಸೋಲನುಣ್ಣಿಸಿದ್ದಾರೆ. ತೇಜ್ ಪ್ರತಾಪ್ ಯಾದವ್ ಮೂರನೇ ಸ್ಥಾನಕ್ಕಿಳಿದಿದ್ದಾರೆ. ಸೋಲನ್ನೊಪ್ಪಿಕೊಂಡ ತೇಜ್ ಪ್ರತಾಪ್ ಅವರು,ಬಿಹಾರವು ಒಳ್ಳೆಯ ಆಡಳಿತಕ್ಕೆ ಬದ್ಧವಾದ ಸರಕಾರವನ್ನು ಆಯ್ಕೆ ಮಾಡಿದೆ ಮತ್ತು ಜನತೆಯ ತೀರ್ಪನ್ನು ತಾನು ಗೌರವಿಸುತ್ತೇನೆ ಎಂದು ಹೇಳಿದರು. ಮುಂದೆಯೂ ತಾನು ರಚನಾತ್ಮಕ ಪಾತ್ರವನ್ನು ವಹಿಸುವುದಾಗಿ ಪಣ ತೊಟ್ಟ ಅವರು,ಮಹುವಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ಅದ್ಭುತ ನಾಯಕತ್ವ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ಜನತೆಯ ನಂಬಿಕೆಗೆ ಸಿಕ್ಕಿರುವ ಗೌರವವಾಗಿದೆ ಎಂದರು. ಜೆಜೆಡಿ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ತೇಜ್ ಪ್ರತಾಪ್ ವೈಶಾಲಿ ಜಿಲ್ಲೆಯ ಮಹುವಾ ವಿಧಾನಸಭಾ ಕ್ಷೇತ್ರದಿಂದ 2015ರಲ್ಲಿ ಆರ್ಜೆಡಿ ಶಾಸಕರಾಗಿ ಆಯ್ಕೆಯಾಗಿದ್ದರು. 2020ರಲ್ಲಿ ಮುಕೇಶ ಕುಮಾರ್ ರೌಶನ್ ಈ ಕ್ಷೇತ್ರದ ಮೇಲೆ ಆಧಿಪತ್ಯ ಸಾಧಿಸಿದ್ದರು.
ಬಿಹಾರ ಚುನಾವಣಾ ಫಲಿತಾಂಶ | ಭಾರೀ ಮುಖಭಂಗದ ಹೊರತಾಗಿಯೂ ಬಿಜೆಪಿ, ಜೆಡಿಯುಗಿಂತ ಹೆಚ್ಚು ಮತ ಗಳಿಸಿದ ಆರ್ಜೆಡಿ
ಪಾಟ್ನಾ,ನ.14: ಆಡಳಿತಾರೂಢ ಎನ್ಡಿಎ ಬಿಹಾರದಲ್ಲಿ ಅಧಿಕಾರಕ್ಕೆ ಮರಳಿದ್ದರೆ, 2010ರ ನಂತರ ತನ್ನ ಅತ್ಯಂತ ಹೀನಾಯ ಸೋಲನ್ನು ಅನುಭವಿಸಿರುವ ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿಗೆ ಇಂತಹ ಸ್ಥಿತಿಯಲ್ಲಿಯೂ ಸಂಭ್ರಮಿಸಲು ಕಾರಣವಿದೆ. ಅದು ಚಲಾಯಿಸಲಾದ ಮತಗಳಲ್ಲಿ ಅತ್ಯಂತ ಹೆಚ್ಚಿನ ಪಾಲು ಗಳಿಸಿದೆ. ಅದು ತನ್ನ ಎದುರಾಳಿಗಳಾದ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುಗಿಂತ ಹೆಚ್ಚಿನ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. 243 ವಿಧಾನಸಭಾ ಸ್ಥಾನಗಳ ಪೈಕಿ 143 ಸ್ಥಾನಗಳಿಗೆ ಸ್ಪರ್ಧಿಸಿದ್ದ ಆರ್ಜೆಡಿ ಮತ ಎಣಿಕೆ ದಿನವಾದ ಶುಕ್ರವಾರ ಸಂಜೆಯ ವೇಳೆಗಾಗಲೇ ಶೇ.22.84ರಷ್ಟು ಮತಗಳನ್ನು ಪಡೆದಿದ್ದು, ಇದು ಬಿಜೆಪಿಗಿಂತ ಶೇ.1.86 ಮತ್ತು ಜೆಡಿಯುಗಿಂತ ಶೇ.3.97ರಷ್ಟು ಅಧಿಕವಾಗಿದೆ. 2020ರ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಏಕೈಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆರ್ಜೆಡಿ ಪ್ರಸಕ್ತ ಚುನಾವಣೆಯಲ್ಲಿ ಕೇವಲ 25 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. 2010ರಲ್ಲಿ ಆರ್ಜೆಡಿ ಕೇವಲ 22 ಸ್ಥಾನಗಳನ್ನು ಗಳಿಸಿತ್ತು. ಇಂದಿನದು ಅದಕ್ಕಿಂತ ಹೀನಾಯ ಸೋಲಾಗಿದೆ.
“ಇನ್ನು ದೇಶದಲ್ಲಿ ತುಷ್ಟೀಕರಣ ನಡೆಯಲ್ಲ, ಸಂತುಷ್ಟೀಕರಣ ಮಾತ್ರ ನಡೆಯುತ್ತೆ’ - ಬಿಹಾರದ ಜನತೆಗೆ ಧನ್ಯವಾದ ಹೇಳಿದ ಮೋದಿ
ಬಿಹಾರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 'ಸಂತುಷ್ಟೀಕರಣ'ದ ಹೊಸ ಅಲೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿಯೇ ಸಂತುಷ್ಟಿಯ ಮಂತ್ರ ಎಂದು ಸಾಬೀತುಪಡಿಸಿದ ಬಿಹಾರದ ಜನತೆಗೆ, ವಿಶೇಷವಾಗಿ ಮಹಿಳಾ ಮತದಾರರಿಗೆ ಅವರು ಧನ್ಯವಾದ ಅರ್ಪಿಸಿದರು. ಶೀಘ್ರದಲ್ಲೇ 'ನವ ಬಿಹಾರ' ಸೃಷ್ಟಿಯಾಗಲಿದ್ದು, ಹೂಡಿಕೆದಾರರನ್ನು ಆಹ್ವಾನಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದರು.
ಬಾಗಲಕೋಟೆ : ಜಿಲ್ಲೆಯ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್ ಬಳಿ ಗುರುವಾರ ಸಂಭವಿಸಿದ ಬೆಂಕಿ ಪ್ರಕರಣ ಸಂಬಂಧ ಉಂಟಾಗಿರುವ ಹಾನಿಗೆ ಸಾಧ್ಯವಿರುವ ಪರಿಹಾರ ನೀಡಲಾಗುವುದು. ಅಲ್ಲದೆ, ಈ ದುರಂತದ ಬಗ್ಗೆ ತನಿಖೆಗೆ ಆದೇಶ ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಶುಕ್ರವಾರ ದುರಂತದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಹಾನಿಯ ಪ್ರಮಾಣದ ಸಮೀಕ್ಷೆ ಆರಂಭಿಸಿದೆ. ಎಷ್ಟು ಪರಿಹಾರ ನೀಡಬೇಕೆಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಎಷ್ಟು ಸಾಧ್ಯವಿದೆಯೋ ಅಷ್ಟು ಪರಿಹಾರವನ್ನು ಸರಕಾರದಿಂದ ಇಲ್ಲವೇ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಂಸ್ಥೆಯಿಂದ ನೀಡಲಾಗುವುದು ಎಂದು ಹೇಳಿದರು. ಈ ಕೃತ್ಯದ ಹಿಂದಿರುವ ತಪ್ಪಿತಸ್ಥರು ಯಾರೇ ಇರಲಿ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸರಕಾರ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದ್ದರಿಂದಲೇ ಈ ಹಂಗಾಮಿನಲ್ಲಿ ಇಳುವರಿ ಲೆಕ್ಕಾಚಾರ ಮಾಡದೆ ಪ್ರತಿಟನ್ ಕಬ್ಬಿಗೆ ಸರಾಸರಿ 200ರಿಂದ 250ರೂ.ಹೆಚ್ಚುವರಿ ಹಣ ಕೊಡಿಸಲು ಸಫಲವಾಗಿದೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ ರಂಗರಾಜನ್ ಸಮಿತಿಯ ವರದಿ ಪ್ರಕಾರ ಬೆಳೆಗಾರರಿಗೆ 70:30 ಅನುಪಾತದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಅವರು ನುಡಿದರು. ರಾಜ್ಯದಲ್ಲಿ 7.3ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ (5.67ಲಕ್ಷ ಹೆಕ್ಟೇರ್) ಇದೆ. ಕಬ್ಬು ನುರಿಸುವುದು ವಿಳಂಬವಾದರೆ ಸಕ್ಕರೆ ಇಳುವರಿ ಕಡಿಮೆಯಾಗುವುದಷ್ಟೇ ಅಲ್ಲದೆ, ರೈತರಿಗೂ ಸಮಸ್ಯೆಯಾಗಲಿದೆ. ತೂಕ ಕಡಿಮೆಯ ಜೊತೆಗೆ ಮುಂದಿನ ಹಂಗಾಮು ವ್ಯತ್ಯಯವಾಗಲಿದೆ. ಹೀಗಾಗಿ ಕಬ್ಬು ನುರಿಸುವುದು ಸುಗಮವಾಗಿ ನಡೆಯಲು ರೈತರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ರೈತರ ಹೋರಾಟವನ್ನು ಬಳಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ ಕಿಡಿಗೇಡಿಗಳ ಮೇಲೆ ಸರಕಾರ ಕ್ರಮ ಕೈಗೊಳ್ಳಲಿದ್ದು, ಯಾರೇ ಭಾಗಿಯಾಗಿದ್ದರೂ ಬಿಡುವುದಿಲ್ಲ. ಈ ಘಟನೆಯಿಂದ ಕೆಲವು ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಲು ಹಿಂದೇಟು ಹಾಕಿದ್ದು, ಅವರಿಗೆ ರಕ್ಷಣೆ ನೀಡಲಾಗುವುದು ಎಂದು ಶಿವಾನಂದ ಪಾಟೀಲ್ ಹೇಳಿದರು. ‘ರಾಜ್ಯ ಸರಕಾರ ಯಾವುದೇ ಕಾರ್ಖಾನೆಗಳ ಮಾಲಕರಿಗೆ ಮಣಿದಿಲ್ಲ. ಮಣಿದಿದ್ದರೆ ಹೆಚ್ಚಿನ ಬೆಲೆ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಕಬ್ಬಿನ ಉಪ ಉತ್ಪನ್ನಗಳಿಂದ ಕಾರ್ಖಾನೆಗಳು ಗಳಿಸುವ ಲಾಭದ ಬಗ್ಗೆ ಹಾಗೂ ಸರಕಾರಕ್ಕೆ ಬರುವ ತೆರಿಗೆ ಬಗ್ಗೆಯೂ ತಪ್ಪು ಮಾಹಿತಿ ನೀಡುವ ಪ್ರಯತ್ನ ಆಗಬಾರದು. ಸಕ್ಕರೆ ರಫ್ತು ಪ್ರಮಾಣ ಹಾಗೂ ರಾಜ್ಯಕ್ಕೆ ನಿಗದಿಪಡಿಸಿರುವ ಎಥನಾಲ್ ಉತ್ಪಾದನೆ ಮಿತಿಯನ್ನು ಕೇಂದ್ರ ಸರಕಾರ ಹೆಚ್ಚಳ ಮಾಡಬೇಕು. ವಾಣಿಜ್ಯ ಬಳಕೆಯ ಸಕ್ಕರೆ ಬೆಲೆಯನ್ನು ಹೆಚ್ಚಳ ಮಾಡಬೇಕೆಂಬುದು ರಾಜ್ಯದ ಬೇಡಿಕೆಯಾಗಿದೆ’ -ಶಿವಾನಂದ ಪಾಟೀಲ್, ಸಕ್ಕರೆ ಸಚಿವ
ತುಳುನಾಡಿನಾದ್ಯಂತ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾ ಬಿಡುಗಡೆ
ಮಂಗಳೂರು, ನ.13: ಆರ್ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾ ಭಾರತ್ ಸಿನಿಮಾಸ್ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರಂಗಕರ್ಮಿ ಡಾ.ದೇವದಾಸ್ ಕಾಪಿಕಾಡ್, ‘ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಜೈ ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಂದು ತುಳು ಸಿನಿಮಾಕ್ಕೂ ಬೆಂಬಲ ನೀಡಬೇಕಾದ್ದು, ನಮ್ಮೆಲ್ಲರ ಕರ್ತವ್ಯ. ತುಳುವರು ಸಿನಿಮಾ ನೋಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು’ ಎಂದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ‘ತುಳು ಸಿನಿಮಾಗಳಿಗೆ ಇಂದು ನಿರ್ದಿಷ್ಟ ಥಿಯೇಟರ್ಗಳಿವೆ. ಹೀಗಾಗಿ ಸಿನಿಮಾಕ್ಕೆ ಬಂಡವಾಳ ಹಾಕಿದ ನಿರ್ಮಾಪಕರು ಗೆಲ್ಲಬೇಕಾದರೆ ತುಳುವರು ಥಿಯೇಟರ್ ಗಳಿಗೆ ಹೋಗಿ ಸಿನಿಮಾ ನೋಡಬೇಕು. ಜೈ ಸಿನಿಮಾ ಜನರ ನಿರೀಕ್ಷೆ ಹೆಚ್ಚಿಸಿದ್ದು ಸಿನಿಮಾ ಗೆಲ್ಲಲಿ‘‘ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ನಟ ನಿರ್ದೇಶಕ ರೂಪೇಶ್ ಶೆಟ್ಟಿ, ಬಿಗ್ ಸಿನೆಮಾಸ್ನ ಬಾಲಕೃಷ್ಣ ಶೆಟ್ಟಿ, ಭೋಜರಾಜ್ ವಾಮಂಜೂರ್, ಬಾಳ ಜಗನ್ನಾಥ ಶೆಟ್ಟಿ, ನಾಯಕಿ ಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ತಮ್ಮ ಲಕ್ಷ್ಮಣ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಚಿನ್ ಉಪ್ಪಿನಂಗಡಿ, ನವೀನ್ ಶೆಟ್ಟಿ, ಪ್ರೇಮ್ ಶೆಟ್ಟಿ, ಶೋಭಾ ಶೆಟ್ಟಿ, ಸುಜಾತ ಶಕ್ತಿನಗರ, ಜಯಶೀಲ ಮತ್ತಿತರರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ‘‘ಜೈ’’ ಸಿನಿಮಾ ಕುರಿತು : ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಚಿತ್ರಕತೆ ರೂಪೇಶ್ ಶೆಟ್ಟಿ ಮತ್ತು ವೇಣು ಹಸ್ರಳ್ಳಿ. ಕ್ಯಾಮರಾ ವಿನುತ್ ಕೆ., ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್. ಜೈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮನೋಜ್ ಚೇತನ್ ಡಿ ಸೋಜಡಿ, ಇನ್ನಿತರರು ಅಭಿನಯಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಬಣ್ಣಹಚ್ಚಿದ್ದಾರೆ. ಜೈ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಭಾರತ್ ಸಿನಿಮಾಸ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾದಲ್ಲಿ ತೆರೆ ಕಂಡಿದೆ. ಸಿನಿಮಾ ಸಂಪೂರ್ಣ ಮನರಂಜನೆಯ ಚಿತ್ರವಾಗಿದ್ದು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಭಾರತೀಯ ಪತ್ರಿಕೋದ್ಯಮದ ಅತ್ಯಂತ ಸವಾಲಿನ ಕ್ಷಣಗಳಿವು : ‘ದಿ ಕಾರವಾನ್’ ಸಂಪಾದಕ ಅನಂತ್
ಎಂ.ವಿ.ಕಾಮತ್ ದತ್ತಿ ಉಪನ್ಯಾಸ
ಬೀದರ್ | ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಗು ಆರೈಕೆ ಕೊಠಡಿ ಉದ್ಘಾಟನೆ
ಬೀದರ್ : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಗು ಆರೈಕೆ ಕೊಠಡಿಯನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಉದ್ಘಾಟಿಸಿದರು. ಮಗು ಆರೈಕೆ ಕೊಠಡಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಶಿಲ್ಪಾ ಶರ್ಮಾ, ಜಿಲ್ಲಾಧಿಕಾರಿಗಳ ಕಚೇರಿಗೆ ವಿವಿಧ ಅಹವಾಲು ಸಲ್ಲಿಸಲು ಹಾಗೂ ಇತರೇ ಕಾರ್ಯಗಳಿಗೆ ಚಿಕ್ಕ ಮಕ್ಕಳೊಂದಿಗೆ ಆಗಮಿಸುವ ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಅನುಕೂಲವಾಗುವಂತೆ ಮಗು ಆರೈಕೆ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದರು. ಚಿಕ್ಕ ಮಕ್ಕಳಿಗೆ ಗಮನ ಸೆಳೆಯಲು ಆಟಿಕೆಗಳನ್ನು ಇಡಲಾಗಿದೆ. ಗೋಡೆಯ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಲಾಗಿದ್ದು ಮಕ್ಕಳ ಆರೈಕೆಗೆ ಅನುಕೂಲವಾಗಲಿದೆ. ಕಚೇರಿಗೆ ಆಗಮಿಸುವ ತಾಯಂದಿರು ಮಕ್ಕಳ ಆರೈಕೆಗೆ ಈ ಕೊಠಡಿಯನ್ನು ಬಳಸಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಮಹಿಳಾ ಮಕ್ಕಳ ಇಲಾಖೆಯ ಅಧಿಕಾರಿ ಶ್ರೀಧರ್, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಸುರೇಖಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಿಮ್ಮಕ್ಕ ಪ್ರಕೃತಿ ಮೇಲೆ ನಿಷ್ಕಪಟ ಪ್ರೀತಿಯ ಜೀವಂತ ರೂಪ: ಪವನ್ ಕಲ್ಯಾಣ್ ಸಂತಾಪ
ವೃಕ್ಷಮಾತೆ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ನಿಧನರಾಗಿದ್ದಾರೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರು ತಿಮ್ಮಕ್ಕ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಪರಿಸರವನ್ನು ರಕ್ಷಿಸುವೆವು ಎಂದು ಪ್ರತಿಜ್ಞೆ ಮಾಡಿದ ಕೆಲವರು ಮರಗಳನ್ನು ನಿರ್ದಯವಾಗಿ ಕಡಿದು, ಅರಣ್ಯಗಳನ್ನು ನಾಶ ಮಾಡಿ, ನಮ್ಮ ಅಮೂಲ್ಯ
ಎನ್ಡಿಎಗೆ ಬಹುಮತ |‘ಮತಗಳ್ಳತನ ಆರೋಪ’ಕ್ಕೆ ಬಿಹಾರದ ಮತದಾರರ ಪ್ರತ್ಯುತ್ತರ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ : ಮತಗಳ್ಳತನ ಆರೋಪ ಮಾಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಬಿಹಾರ ಮತದಾರರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ದೋಣಿ. ರಾಹುಲ್ ಗಾಂಧಿ ತಮ್ಮೊಂದಿಗೆ ಮಿತ್ರಪಕ್ಷಗಳನ್ನೂ ಮುಳುಗಿಸುತ್ತಿದ್ದಾರೆ. ಮತಗಳ್ಳತನದ ಕುರಿತ ಆರೋಪದ ತಂತ್ರಗಾರಿಕೆಗೆ ಬಿಹಾರದ ಜನತೆ ಸೊಪ್ಪು ಹಾಕಲಿಲಲ್ಲ ಎಂದು ಹೇಳಿದರು. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಒಂದಂಕಿ ಫಲಿತಾಂಶಕ್ಕೂ ಪರದಾಡುವಂತಾಗಿದೆ. ರಾಹುಲ್ ಗಾಂಧಿ ತಮ್ಮ ಮಿತ್ರಪಕ್ಷಗಳ ಅಸ್ಥಿತ್ವವನ್ನೂ ಕಳೆಯುತ್ತಿದ್ದಾರೆ. ರಾಹುಲ್ ಗಾಂಧಿ ಯಾವಾಗಲೂ ಪರಮಾಣು ಮತ್ತು ಹೈಡ್ರೋಜನ್ ಬಾಂಬ್ಗಳ ಬಗ್ಗೆಯೇ ಮಾತನಾಡುತ್ತಿದ್ದರು. ಅವರು ಈ ಎಲ್ಲ ಬಾಂಬ್ಗಳನ್ನು ತಮ್ಮದೇ ಪಕ್ಷ ಮತ್ತು ಮಿತ್ರಪಕ್ಷಗಳ ಮೇಲೆ ಸ್ಫೋಟಿಸಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು. ರಾಹುಲ್ ಗಾಂಧಿ ಇನ್ನಾದರೂ ದೇಶದ ಸಾಂವಿಧಾನಿಕ ಸಂಸ್ಥೆ ಮತ್ತು ವ್ಯವಸ್ಥೆಯ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡುವುದನ್ನು ಬಿಡಬೇಕು. ಕಾಂಗ್ರೆಸ್ ಮತ್ತು ಮಹಾ ಘಟಬಂಧನ್ನ ಎಲ್ಲ ಆರೋಪಗಳನ್ನು ಬಿಹಾರದ ಜನ ತಿರಸ್ಕರಿಸಿದ್ದಾರೆ. ಇನ್ನಾದರೂ ಮತದಾರರನ್ನು, ಸಂವಿಧಾನವನ್ನು ಮತ್ತು ಸಂವಿಧಾನಿಕ ಸಂಸ್ಥೆಗಳನ್ನು ಗೌರವಿಸಲಿ ಎಂದು ಅವರು ತಿಳಿಸಿದರು. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಐತಿಹಾಸಿಕ ಗೆಲುವು ದಾಖಲಿಸಿದೆ. ಇದು ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ನಾಯಕತ್ವಕ್ಕೆ ಮತದಾರರು ನೀಡಿದ ಜನಾದೇಶ. ಇದಕ್ಕಾಗಿ ಬಿಹಾರದ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದರು .
ಕೊಪ್ಪಳ | ನಿವೇದಿತಾ ಶಾಲೆಯಲ್ಲಿ ವಿಶಿಷ್ಟವಾಗಿ ಮಕ್ಕಳ ದಿನಾಚರಣೆ
ಕೊಪ್ಪಳ : ನಿವೇದಿತಾ ಶಾಲೆಯಲ್ಲಿ ವಿಶಿಷ್ಟವಾಗಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಎರಡು ದಿನಗಳ ಕಾಲ ಅಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪಠ್ಯಪುಸ್ತಕದಲ್ಲಿರುವ ವಿವಿಧ ಪ್ರಯೋಗಳ ಮಾದರಿ, ರೇಖಾಗಣಿತದ ಚಿತ್ರಗಳು ಮತ್ತು ಐತಿಹಾಸಿಕ ಕಟ್ಟಡಗಳ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ವಿಷಯವಾರು ತಯಾರಿಸಿದ್ದ ಮಾದರಿಗಳು ವಿದ್ಯಾರ್ಥಿಗಳಿಗೆ ಅರ್ಥಮಾಡಿಕೊಳ್ಳಲು ಬಹಳ ಸುಲಭವಾಗುವಂತೆ ಇದ್ದವು, ಇದು ಕೇವಲ ಶಾಲೆಗೆ ಮಾತ್ರ ಸೀಮಿತವಾಗಿರದೆ ಬೇರೆ ಶಾಲೆಯ ಮಕ್ಕಳು ಕೂಡ ಬಂದು ನೋಡಲು ವ್ಯವಸ್ಥೆ ಮಾಡಲಾಗಿತ್ತು.ಇಷ್ಟೇ ಅಲ್ಲದೇ ವಿದ್ಯಾರ್ಥಿ ಬಜಾರ್ ಮತ್ತು ಪುಡ್ ಫೆಸ್ಟ್ ಆಯೋಜಿಸಿ ಅದರಲ್ಲಿ ವಿದ್ಯಾರ್ಥಿಗಳು ವಿವಿಧ ಖಾಧ್ಯಗಳನ್ನು ಮತ್ತು ತಿನಿಸುಗಳನ್ನು ತಯಾರಿಸಿಕೊಂಡು ಬಂದು ಮಾರಾಟ ಮಾಡಿದರು, ಪಾಲಕರು ಕೂಡ ಖಾಧ್ಯ ಮತ್ತು ತಿನಿಸುಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡಿದರು. ಎರಡನೇ ದಿನದ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಗೆ ವೇಶ ಭೂಷಣ ಸ್ಪರ್ಧೆ ಮತ್ತು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಮತ್ತು ಹಣ್ಣು ಹಾಗೂ ತರಕಾರಿಗಳಿಂದ ವಿಶೇಷ ಕಲೆಯನ್ನು ಪ್ರದರ್ಶಿಸುವ ಸ್ಪರ್ಧೆಗಳು ಇದ್ದವು. ಜೊತೆಗೆ ಜವಹಾರ್ ಲಾಲ್ ನೆಹರೂ ಅವರ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಎಲ್ಲಾ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ನಮ್ಮ ಶಾಲೆಯ 25ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಕ್ಕಳ ದಿನಾಚರಣೆ ಇರುವುದರಿಂದ ನಾವು ಅದನ್ನು ವಿಶಿಷ್ಟವಾಗಿ ಆಚರಿಸಲು ಯೋಜಿಸಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಎರಡು ದಿನಗಳ ಕಾಲ ಆಯೋಜಿಸಿದ್ದೆವು, ಇದರಿಂದ ಮಕ್ಕಳು ಕಲಿಕೆಯ ಜೊತೆಗೆ ಮನೋರಂಜನೆಯನ್ನು ಪಡೆದರು. ವಿದ್ಯಾರ್ಥಿಗಳಿಗೆ ಅವರಲ್ಲಿನ ಕಲೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದು ನಿವೇದಿತಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶಾರದಬಾಯಿ ಪುಲಸ್ಕರ್ ಹೇಳಿದರು.
ಬಿಹಾರ ವಿಧಾನಸಭೆ ಚುನಾವಣೆ: ಬಿಹಾರದ ಅತಿ ಕಿರಿಯ ಶಾಸಕಿ ಎನಿಸಿಕೊಂಡ ಗಾಯಕಿ ಮೈಥಿಲಿ ಠಾಕೂರ್! ಯಾರು ಈಕೆ?
ಖ್ಯಾತ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರು ಅಲಿನಗರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. 25ರ ಹರೆಯದ ಅವರು ಬಿಹಾರ ವಿಧಾನಸಭೆಗೆ ಆಯ್ಕೆಯಾದ ಅತಿ ಕಿರಿಯ ಶಾಸಕರಾಗಿದ್ದಾರೆ. ಬಿಜೆಪಿ ಈ ಕ್ಷೇತ್ರವನ್ನು ಮೊದಲ ಬಾರಿಗೆ ಗೆದ್ದಿದೆ. ಠಾಕೂರ್ ಅವರು ತಮ್ಮ ಸಂಗೀತ ಪ್ರದರ್ಶನಗಳಿಂದಾಗಿ ಮನೆ ಮಾತಾಗಿದ್ದಾರೆ. ಅವರು ಸಾಂಪ್ರದಾಯಿಕ ಸೋಹರ್, ನಿರ್ಗುಣ್ ಗೀತ್, ಭಜನೆಗಳು, ಛಠ್ ಗೀತ್, ಕಜ್ರಿ, ಗಜಲ್ ಮತ್ತು ಸೂಫಿ ಹಾಡುಗಳು ಸೇರಿದಂತೆ ವಿವಿಧ ಪ್ರಕಾರಗಳನ್ನು ಹಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ.
ಕಲಬುರಗಿ | ಸಕ್ರಿಯ ಕ್ಷಯರೋಗ ಪತ್ತೆ ಅಂದೋಲನ ಯಶಸ್ವಿಗೊಳಿಸಿ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಜಿಲ್ಲೆಯಲ್ಲಿ ಇದೇ ನವೆಂಬರ್ 15 ರಿಂದ 30ವರೆಗೆ ಹಮ್ಮಿಕೊಳ್ಳಲಾದ ಸಕ್ರಿಯ ಕ್ಷಯರೋಗ ಪತ್ತೆ ಅಂದೋಲನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಅಭಿಯಾನದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಮಾತನಾಡಿ, 2025ರ ಆಗಸ್ಟ್ನಿಂದ ಅಕ್ಟೋಬರ್ವರೆಗೆ ಜಿಲ್ಲೆಯಲ್ಲಿ ಒಟ್ಟು 11 ತಾಯಿ ಮರಣದ ಪ್ರಕರಣ ದಾಖಲಾಗಿವೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಾಯಿ ಮರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಇನ್ನು ಮುಂದೆ ಜಿಲ್ಲೆಯಲ್ಲಿ ತಾಯಿ ಮರಣದ ಪ್ರಕರಣವು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವೈದ್ಯರು ಕೈಗೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ನವೆಂಬರ್ 24 ರಿಂದ ಡಿಸೆಂಬರ್ 9ರವರೆಗೆ ನಡೆಯುವ ಕುಷ್ಠರೋಗ ಪತ್ತೆ ಹಚ್ಚುವ ಅಂದೋಲನ ಕಾರ್ಯಕ್ರಮದ ಹಾಗೂ ತಂಬಾಕು ಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮದ ಭಿತ್ತಿ ಪತ್ರವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಕಾಯಕಲ್ಪ ಕಾರ್ಯಕ್ರಮದಡಿ ಆಯ್ಕೆಯಾದ ಕಲಬುರಗಿ ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿ ಸನ್ಮಾನಿಸಲಾಯಿತು. ಸಭೆಯಲ್ಲಿ ಆರ್.ಸಿ.ಹೆಚ್.ಓ.ಡಾ. ಸಿದ್ರಾಮಪ್ಪ ಪಾಟೀಲ್, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶರಣಪ್ಪ ಭೂಸನೂರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಂದ್ರಕಾಂತ ನರಬೋಳಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ ಸೇರಿದಂತೆ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳು, ಜಿಮ್ಸ್ ಆಸ್ಪತ್ರೆಯ ಮುಖ್ಯಸ್ಥರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಜಿಲ್ಲಾ ತರಬೇತಿ ಕಾರ್ಯಕ್ರಮದ ಪ್ರಾಂಶುಪಾಲರು, ತಾಲೂಕು ಆರೋಗ್ಯ ಅಧಿಕಾರಿಗಳು, ಆರೋಗ್ಯ ಸಂಸ್ಥೆಯ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಂಗಳೂರು | ಬೀದಿ ನಾಯಿಗಳ ಹಾವಳಿ : ಪಾಲಿಕೆಗೆ ವರದಿ ನೀಡಲು ಸೂಚನೆ
ಮಂಗಳೂರು,ನ.14: ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳು ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಮುಖ್ಯಸ್ಥರು ತಮ್ಮ ಸಂಸ್ಥೆಯ ಆವರಣದಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದಲ್ಲಿ ಅದನ್ನು ಪರಿಶೀಲಿಸಿ ಮುಂದಿನ 5 ದಿನಗಳೊಳಗಾಗಿ ಮಾಹಿತಿ ನೀಡುವಂತೆ ಮಹಾನಗರಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ. ತಮ್ಮ ಸಂಸ್ಥೆಯ ಆವರಣದಲ್ಲಿ ಬೀದಿ ನಾಯಿಗಳ ಉಪಟಳ ತಡೆಯಲು ಹಾಗೂ ಅವುಗಳ ಪ್ರದೇಶ ನಿಯಂತ್ರಿಸಲು ಕ್ರಮ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಯಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಸಹಕರಿಸಲು ಹಾಗೂ ಅವುಗಳ ಪ್ರವೇಶ ನಿರ್ಬಂಧಿಸುವುದನ್ನು ಮೇಲ್ವಿಚಾರಣೆ ಮಾಡಲು ಸಂಸ್ಥೆ ವತಿಯಿಂದ ಒಬ್ಬ ಜವಾಬ್ದಾರಿಯುತ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬೇಕು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಪುನ: ನಾಯಿಗಳು ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಅವನ್ನು ಸ್ಥಳಾಂತರಿಸುವ ವೆಚ್ಚವನ್ನು ತಮ್ಮ ಸಂಸ್ಥೆಯಿಂದಲೇ ವಸೂಲಿ ಮಾಡಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ತಮ್ಮ ವಿರುದ್ದ ಕಾನೂನು ಕ್ರಮ ವಹಿಸಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೋಲ್ಗಾಗಿ ಕೈದಿಗಳಿಗೆ ಸುಳ್ಳು ದಾಖಲೆ ನೀಡುವ ವೈದ್ಯರ ಬಗ್ಗೆ ಗಮನವಿರಲಿ; ಸರಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ
ಬೆಂಗಳೂರು : ಸಜಾಬಂದಿಗಳಿಗೆ ಪರೋಲ್ ಪಡೆಯಲು ಅನುಕೂಲವಾಗುವಂತೆ ಸುಳ್ಳು ವೈದ್ಯಕೀಯ ದಾಖಲೆಗಳನ್ನು ನೀಡುತ್ತಿರುವ ವೈದ್ಯರ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ. ಅನಾರೋಗ್ಯಪೀಡಿತ ತಾಯಿಗೆ ಚಿಕಿತ್ಸೆ ಕಲ್ಪಿಸಲು ಪರೋಲ್ ಮಂಜೂರು ಮಾಡುವಂತೆ ಕೋರಿ ಅಪರಾಧ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಜಾಬಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿತು. ಇದೇ ವೇಳೆ, ಅರ್ಜಿದಾರನ ತಾಯಿಯ ಅನಾರೋಗ್ಯವನ್ನು ಪರಿಗಣಿಸಿ, ಆತನಿಗೆ ಪರೋಲ್ ಮಂಜೂರು ಮಾಡಿ ಆದೇಶಿಸಿತು. ಇದಕ್ಕೂ ಮುನ್ನ ವಿಚಾರಣೆ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ವೈದ್ಯಕೀಯ ದಾಖಲೆ ಆಧರಿಸಿ ಪರೋಲ್ ನೀಡಬೇಕೆಂದು ಅರ್ಜಿದಾರನ ಪರ ವಕೀಲರು ಮನವಿ ಮಾಡಿದರು. ಆಗ ಸರಕಾರದ ಪರ ವಕೀಲರು, ಹಲವು ಪ್ರಕರಣಗಳಲ್ಲಿ ಪರೋಲ್ ಕೋರುವ ಸಜಾಬಂದಿಗಳು, ತಮ್ಮ ಅರ್ಜಿಯೊಂದಿಗೆ ಸಲ್ಲಿಸಿದ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಒಂದೇ ರೀತಿಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿರುವ ಸಂಗತಿ ಗಮನಕ್ಕೆ ಬಂದಿದೆ ಎಂದು ಹೇಳಿದರು. ಸುಳ್ಳು ದಾಖಲೆ ನೀಡುವ ವೈದ್ಯರ ಬಗ್ಗೆ ಎಚ್ಚರವಹಿಸಿ: ಸರಕಾರದ ಪರ ವಕೀಲರ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಒಂದೇ ರೀತಿಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಲಾಗುತ್ತಿದೆಯೇ? ಇದು ನಿಜಕ್ಕೂ ಆಘಾತಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ, ಯಾವೆಲ್ಲ ಪ್ರಕರಣಗಳಲ್ಲಿ ಒಂದೇ ತರಹದ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಲಾಗಿದೆ? ಅಂತಹ ದಾಖಲೆಗಳನ್ನು ಯಾವ ವೈದ್ಯರು ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಕಲೆಹಾಕಿ ನ್ಯಾಯಾಲಯಕ್ಕೆ ಸಲ್ಲಿಸಿ. ಆ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗುವುದು. ಇಂತಹ ವಿಚಾರದಲ್ಲಿ ಸುಮ್ಮನೆ ಇರಬಾರದು ಎಂದು ತೀಕ್ಷ್ಣವಾಗಿ ನುಡಿದರು. ಈ ಕುರಿತು ರಾಜ್ಯ ಅಡ್ವೋಕೇಟ್ ಜನರಲ್ ಅವರ ಗಮನಕ್ಕೆ ತರಲಾಗುವುದು ಎಂದು ಸರಕಾರದ ಪರ ವಕೀಲರು ತಿಳಿಸಿದರು. ಆಗ ನ್ಯಾಯಪೀಠ, ಸುಳ್ಳು ವೈದ್ಯಕೀಯ ದಾಖಲೆಗಳ್ಳನ್ನು ಸಲ್ಲಿಸಿ ಪರೋಲ್ ಪಡೆಯವುದು ಸರಿಯಲ್ಲ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಇಂತಹ ಬೆಳವಣಿಗೆಗಳ ಮೇಲೆ ರಾಜ್ಯ ಸರಕಾರ ಕಣ್ಣಿಡಬೇಕು. ಸುಳ್ಳು ವೈದ್ಯಕೀಯ ದಾಖಲೆಗಳನ್ನು ವಿತರಿಸುವ ವೈದ್ಯರ ಬಗ್ಗೆ ಎಚ್ಚರಿಸಬೇಕು. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೌಖಿಕವಾಗಿ ಸೂಚಿಸಿತು.
ಮಂಗಳೂರು | ʼಕನಕ ಕೀರ್ತನ ಗಂಗೋತ್ರಿ' ಗಾಯನ ಕಾರ್ಯಕ್ರಮದ ಫಲಿತಾಂಶ
12 ಗಾಯಕರು, 9 ತಂಡಗಳಿಗೆ ಕನಕ ಪುರಸ್ಕಾರ
ಕಲಬುರಗಿ : ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕೆಂದು ಒತ್ತಡ ಹೇರುತ್ತಿರುವ ಕುರಿತು ಪ್ರತ್ಯೇಕ ಬೇಡಿಕೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಶುಕ್ರವಾರ ನಗರದ ಐವಾನ್ -ಎ -ಶಾಹಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯು.ಟಿ. ಖಾದರ್, ನಾವು ಯಾವಾಗಲೂ ಸಕಾರಾತ್ಮಕ ಚಿಂತನೆಗಳನ್ನು ಮಾಡಬೇಕು. ಕರ್ನಾಟಕ ಒಂದು, ಭಾರತ ದೇಶ ಒಂದು. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದ್ದರೆ, ನಾವೆಲ್ಲರೂ ಸೇರಿ ಮುಂಬರುವ ಅಧಿವೇಶನದಲ್ಲಿ ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಡಿ.8ರಿಂದ ಡಿ.19ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಸರಕಾರ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಚಳಿಗಾಲದ ಅಧಿವೇಶನ ನಡೆಸಿಕೊಂಡು ಹೋಗಬೇಕು. ಉತ್ತರ ಕರ್ನಾಟಕ ಭಾಗದ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಈ ಅಧಿವೇಶನ ಸಹಕಾರಿಯಾಗಬೇಕು ಎಂದು ಹೇಳಿದರು. ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್, ಬೆಳಗಾವಿ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗುವುದು. ಆಡಳಿತ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಬೇಕು ಎಂದರು.

17 C