ರಾಮನಗರದಲ್ಲಿ ಹೃದಯ ಚಿಕಿತ್ಸೆಗೆ ವೈದ್ಯರೇ ಇಲ್ಲ! ಇದು ದೀಪದ ಕೆಳಗಿನ ಕತ್ತಲೆಯ ಕಥೆ
ರಾಮನಗರ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಹೃದಯ ತಜ್ಞ ವೈದ್ಯರಿಲ್ಲ. ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳಿದ್ದರೂ, ವೈದ್ಯರ ನೇಮಕಾತಿಯಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲೂ ತಜ್ಞ ವೈದ್ಯರ ಕೊರತೆಯಿದೆ.
ದುಬೈ: ಹೆಲ್ತ್ ಮ್ಯಾಗಝಿನ್ ಮತ್ತು ತುಂಬೆ ಮಾಧ್ಯಮದ ಸಹಯೋಗದಲ್ಲಿ, ಆನುವಲ್ ಹೆಲ್ತ್ ಅವಾರ್ಡ್ಸ್ 2025ಕ್ಕೆ ನಾಮನಿರ್ದೇಶನ ಪ್ರಾರಂಭವಾಗಿವೆ. ಯುಎಇಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಈ ಪ್ರಶಸ್ತಿಯು ಅತ್ಯುನ್ನತ ಗೌರವ ಎಂದೇ ಗುರತಿಸಲ್ಪಟ್ಟಿದೆ. ಅಕ್ಟೋಬರ್ 9ರಂದು ಬೆಳಿಗ್ಗೆ 11 ಗಂಟೆಗೆ ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ನಡೆಯುವ ಸಮಾರಂಭದಲ್ಲಿ 15 ಯುಎಇ ನಾಗರೀಕರು ಮತ್ತು 46 ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಈ ವರ್ಷ ವಿಶೇಷವಾಗಿ ಗೌರವಿಸಲಾಗುತ್ತದೆ. ಇದೇ ಮೊದಲ ಬಾರಿಗೆ 15 ಎಮಿರಾತಿ ಆರೋಗ್ಯ ವೃತ್ತಿಪರರು ಈ ವಿಶಿಷ್ಟ ಪ್ರಶಸ್ತಿಗಳನ್ನು ಪಡೆಯಲಿ ದ್ದಾರೆ. ಸಾರ್ವಜನಿಕ ಆರೋಗ್ಯ ಸೇವೆಗಳಿಂದ ಹಿಡಿದು ಶಸ್ತ್ರಚಿಕಿತ್ಸಾ ಸಾಧನೆ, ನಾವಿನ್ಯತೆ, ಆರೈಕೆ, ವೈದ್ಯಕೀಯ ಶಿಕ್ಷಣ ಮತ್ತು ಇನ್ನೂ ಹಲವಾರು ವಿಭಾಗಗಳಲ್ಲಿ ಸಾಧನೆಗೈದವರನ್ನು ಈ ಪ್ರಶಸ್ತಿ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ. ಸಾಧಕರನ್ನು ಗುರುತಿಸಲು ತುಂಬೆ ಮಾಧ್ಯಮವು ಈ ಕುರಿತಂತೆ ಟಿ.ವಿ, ಮುದ್ರಣ ಮಾಧ್ಯಮ, ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಇದು ಕೇವಲ ನಾಮನಿರ್ದೇಶನ ಮಾತ್ರವಲ್ಲ, ಬದಲಾಗಿ ಸಾಧಕರ ಸಾಧನೆ, ಯಶೋಗಾಥೆಗಳನ್ನು ಹಂಚಿಕೊಳ್ಳುವ ವೇದಿಕೆ. ವೈದ್ಯರಿಂದ ಹಿಡಿದು ಆಸ್ಪತ್ರೆಗಳವರೆಗೂ, ಸ್ಟಾರ್ಟಪ್ ಗಳಿಂದ ಹಿಡಿದು ವೈದ್ಯಕೀಯ ಗುಂಪು ಗಳೂ ವಯಕ್ತಿಕವಾಗಿಯೂ ಈ ವೇದಿಕೆಯಲ್ಲಿ ಸಾಧನೆಯನ್ನು ಹಂಚಿಕೊಳ್ಳಲು ಸುವರ್ಣಾವಕಾಶವನ್ನು ಒದಗಿಸಲಾಗಿದೆ. ಈ ಪ್ರಶಸ್ತಿಯು ಈ ಭಾಗದಲ್ಲಿನ ಅತಿದೊಡ್ಡ ಆರೋಗ್ಯ ಪ್ರಶಸ್ತಿ ಎಂದೇ ಗುರುತಿಸಲ್ಪಟ್ಟಿದೆ. ಉತ್ತಮ ಆರೋಗ್ಯ ವೃತ್ತಿಪರರಿಗೆ ಮಾನ್ಯತೆ, ವಿಶ್ವಾಸಾರ್ಹತೆಯನ್ನು ಈ ಪ್ರಶಸ್ತಿಯ ವೇದಿಕೆಯು ಗುರುತಿಸಲಿದ್ದು, ಈ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರಿಗೆ ಸ್ಫೂರ್ತಿ ನೀಡಲಿದೆ, ಎಂದು ತುಂಬೆ ಮಾಧ್ಯಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ವಿಗ್ನೇಶ್ ಎಸ್. ಉನದ್ಕತ್ ಹೇಳಿದ್ದಾರೆ. ನಾಮನಿರ್ದೇಶನ ಮಾಡುವುದು ಹೇಗೆ? ಈ ಪ್ರಶಸ್ತಿ ಅಭಿಯಾನದಲ್ಲಿ ಪಾಲ್ಗೊಳ್ಳಲು, https://www.healthmagazine.ae/awards/ ಗೆ ಭೇಟಿ ನೀಡಬೇಕು. ಆ ಬಳಿಕ ಸೂಕ್ತ ವಿಭಾಗವನ್ನು ಆಯ್ಕೆ ಮಾಡಬೇಕು. ನಿಮ್ಮ ಸಾಧನೆ, ಆರೋಗ್ಯ ಕ್ಷೇತ್ರದಲ್ಲಿ ನಿಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ ನಾಮಿನೇಷನ್ ಅಥವಾ ನಾಮನಿರ್ದೇಶನ ಸಲ್ಲಿಸಿಬೇಕು. ಆ ಬಳಿಕ ಅನುಭವಿ ತಜ್ಞರ ಸಮಿತಿಯು ಪ್ರಾಮಾಣಿಕವಾಗಿ ಪರಿಶೀಲಿಸಿ, ಅಕ್ಟೋಬರ್ 9ರಂದು ಪ್ರಶಸ್ತಿ ವಿಜೇತರನ್ನು ಘೋಷಿಸಲಿದೆ. ನಾಮನಿರ್ದೇಶ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 20, 2025 ಎಂದು ಪ್ರಕಟನೆ ತಿಳಿಸಿದೆ.
ಬೆಂಗಳೂರು ದಕ್ಷಿಣ: ರಾಜ್ಯದ ಎಲ್ಲ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ. ಈ ಸಂಘಗಳಿಂದ ಸರಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಆಗುತ್ತದೆ. ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು. ಶುಕ್ರವಾರ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಡಾ.ವೆಂಕಟಪ್ಪ ಅವರು ಕಣ್ವ ಫೌಂಡೇಶನ್ ವತಿಯಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಯಲ್ಲಿ ಓದಿ ದೊಡ್ಡ ಮಟ್ಟಕ್ಕೆ ಬೆಳೆದಿರುವವರು ಆ ಶಾಲೆಯ ಕಲ್ಯಾಣಕ್ಕೆ ಅಗತ್ಯ ನೆರವು ನೀಡುತ್ತಾರೆ. ಇದಕ್ಕೆ ಅಗತ್ಯ ಸಂಘಟನೆ ಆಗಬೇಕು. ವೆಂಕಟಪ್ಪನವರು ಮಾಡಿರುವ ಸಾಹಸಕ್ಕೆ ಇನ್ನು ಹೆಚ್ಚಿನ ಜನ ಕೈ ಹಾಕಬೇಕು. ಇಂತಹ ಕೆಲಸಗಳು ಸಮಾಜದಲ್ಲಿ ಅವರ ಹೆಸರುಗಳನ್ನು ಶಾಶ್ವತವಾಗಿ ಉಳಿಸುತ್ತವೆ ಎಂದು ಅವರು ತಿಳಿಸಿದರು. ಮಕ್ಕಳ ಕೈಯಲ್ಲಿ ಈ ಶಾಲೆ ಉದ್ಘಾಟನೆ ಮಾಡಿಸಿದ್ದೇವೆ. ನನ್ನಂತೆಯೇ ಈ ಊರಿನ ಮಕ್ಕಳು ಬೆಳೆಯಬೇಕು ಎಂಬ ವೆಂಕಟಪ್ಪನವರ ದೂರದೃಷ್ಟಿಯಿಂದ ಈ ಜ್ಯೋತಿಯನ್ನು ಬೆಳಗಿಸಲಾಗಿದೆ. ರಾಜ್ಯದಲ್ಲಿ 2 ಸಾವಿರ ಸಿಎಸ್ಆರ್ ಶಾಲೆ ನಿರ್ಮಿಸಲು ಸರಕಾರ ಸಂಕಲ್ಪ ಮಾಡಿದೆ. ಸಿಎಸ್ಆರ್ ಶಾಲೆ ನಿರ್ಮಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿ ಮಾಡಿ ನನ್ನದೇ ಆದ ರೂಪುರೇಷೆಗಳನ್ನು ನೀಡಿದ್ದೇನೆ ಎಂದು ಶಿವಕುಮಾರ್ ಹೇಳಿದರು. ಬೆಂಗಳೂರು, ಚನ್ನಪಟ್ಟಣದ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಕೆಂಗಲ್ ಹನುಮಂತಯ್ಯ ಅವರು ನಗರಸಭೆ ಅಧ್ಯಕ್ಷರಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 6 ಲಕ್ಷ ಮಾತ್ರ ಇತ್ತು. ಇಂದು 1.40 ಕೋಟಿಗೆ ಏರಿದೆ. ಇದನ್ನು ನಿಯಂತ್ರಿಸಬೇಕು. ಜನ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡಿದರೆ ಈ ವಲಸೆ ತಪ್ಪಿಸಬಹುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು. ಸಿಎಸ್ಆರ್ ನಿಧಿಯಿಂದ ಗ್ರಾಮೀಣ ಭಾಗದಲ್ಲಿ ಶಾಲೆ ನಿರ್ಮಾಣಕ್ಕೆ ನಮ್ಮ ಜಿಲ್ಲೆ ಸಾಕಷ್ಟು ಮುಂದಿದೆ. ಇಡೀ ರಾಜ್ಯದಲ್ಲಿ ಇದು ದೊಡ್ಡ ಯೋಜನೆಯಾಗಿದೆ. ಸಿಎಸ್ಆರ್ ನಿಧಿ ಮೂಲಕ ಕನಕಪುರದಲ್ಲಿ 9, ಚನ್ನಪಟ್ಟಣದಲ್ಲಿ 5, ಮಾಗಡಿ 3, ರಾಮನಗರ 4, ಹಾರೋಹಳ್ಳಿಯಲ್ಲಿ 4 ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 24 ಶಾಲೆಗಳನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಆಮೂಲಕ ಶಿಕ್ಷಣ ಕ್ರಾಂತಿಗೆ ಕೈಹಾಕಿದ್ದೇವೆ ಎಂದು ಅವರು ಹೇಳಿದರು. ಈ ಊರಿನ ದಿವಂಗತ ಶ್ರೀನಿವಾಸ ಗೌಡರು 4 ಎಕರೆ ಜಾಗವನ್ನು ದಾನ ಮಾಡಿದ್ದಾರೆ. ಅವರನ್ನು ನಾನು ಸ್ಮರಿಸಿಕೊಳ್ಳಬೇಕು. ನಾವು ಶಾಲೆಗಳಿಗಾಗಿ ಕೆಲವು ಜಾಗ ದಾನ ಮಾಡಿದ್ದೇವೆ. ಆದರೆ ವೆಂಕಟಪ್ಪನವರು ನಿಸ್ವಾರ್ಥದಿಂದ ಸರಕಾರಿ ಶಾಲೆ ನಿರ್ಮಾಣಕ್ಕೆ 14 ಕೋಟಿ ರೂ. ವೆಚ್ಚ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಪುಟ್ಟಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಿಂಹ ಘರ್ಜಿಸಬೇಕೇ ವಿನಃ, ಬಾಯಿ ಬಡ್ಕೋಬಾರದು: ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ
ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ತನ್ನ ಹೆಸರಿಗೆ ತಕ್ಕಂತೆ ಘರ್ಜಿಸಬೇಕೇ ವಿನಃ, ಹೊರಗೆ ಬಂದು ಬಾಯಿ ಬಡ್ಕೋಬಾರದು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಟೀಕಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ನಿನಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಲಿಲ್ಲ ಏಕೆ?. ಅಲ್ಲದೆ, ದೇಶದ್ರೋಹಿಗಳಿಗೆ ಸಂಸತ್ನೊಳಗೆ ಪ್ರವೇಶಿಸಲು ಏಕೆ ಪಾಸು ನೀಡಿದ್ದರು ಎನ್ನುವುದು ಪ್ರತಾಪ್ ಸಿಂಹ ಜನತೆಗೆ ಹೇಳಬೇಕು. ಹೀಗೆ, ಪ್ರತಾಪ್ ಸಿಂಹ ವಿಚಾರವೂ ಬಿಚ್ಚಿಡಲು ನಮಗೂ ಹೆಚ್ಚು ಸಮಯ ಬೇಕಾಗಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕ ಸುಬ್ಬಾರೆಡ್ಡಿ ಅವರು ಬಡತನದಿಂದ ಮೇಲೆ ಬಂದವರು. ಸತತ ಮೂರು ಬಾರಿ ಶಾಸಕರಾಗಿ ಜನರ ಸೇವೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಈಡಿ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿ ಮಾಡಿ ಈ ರೀತಿಯ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.
ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲೂ ಆನ್ಲೈನ್ನಲ್ಲಿ ಭೂ ದಾಖಲೆ ಲಭ್ಯ
ಕಂದಾಯ ಇಲಾಖೆಯು ಜುಲೈ 1 ರಿಂದ ಡಿಜಿಟಲ್ ಭೂದಾಖಲೆ ವಿತರಣೆಯನ್ನು ಕಡ್ಡಾಯಗೊಳಿಸಿದ್ದು, ಎಲ್ಲಾ ನಾಡ ಕಚೇರಿಗಳಿಗೂ ಆನ್ಲೈನ್ ಸೇವೆಯನ್ನು ವಿಸ್ತರಿಸಿದೆ. ಸಾರ್ವಜನಿಕರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಡಿಜಿಟಲ್ ಭೂದಾಖಲೆ ಪಡೆಯಲು ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿದ್ದಾರೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕಳಪೆ ಪ್ರದರ್ಶನ ತೋರಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ತಪ್ಪು ಮಾಡಿಲ್ಲವೆಂದರೆ ಭೈರತಿ ಬಸವರಾಜಗೆ ಆತಂಕ ಏಕೆ?: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು: ರೌಡಿ ಬಿಕ್ಲು ಹತ್ಯೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಭೈರತಿ ಬಸವರಾಜ ತಪ್ಪು ಮಾಡಿಲ್ಲವೆಂದರೆ ಅವರಿಗೆ ಆತಂಕ ಏಕೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸವರಾಜ ಅವರ ಪಾತ್ರ ಏನು ಇಲ್ಲ ಎಂಬುದು ತನಿಖೆಯಲ್ಲಿ ಕಂಡು ಬಂದರೆ ಬಿ ರಿಪೋರ್ಟ್ ಸಲ್ಲಿಸುತ್ತಾರೆ. ಇದಕ್ಕೆ ಆತಂಕಪಡುವಂತದ್ದು ಏನು ಇಲ್ಲ ಎಂದರು. ಮಹಿಳೆಯೊಬ್ಬರು ಠಾಣೆಗೆ ಬಂದು, ತನ್ನ ಮಗನ ಕೊಲೆ ಪ್ರಕರಣದಲ್ಲಿ ಇಂಥವರು ಭಾಗಿಯಾಗಿದ್ದಾರೆ ಎಂದು ದೂರು ಕೊಟ್ಟ ನಂತರ ಭೈರತಿ ಬಸವರಾಜ ಹೊರಗೆ ಸುದ್ದಿಯಲ್ಲಿ ಬಂದಿದ್ದಾರೆ. ಎರಡು ವರ್ಷದಿಂದ ನಮ್ಮ ಸರಕಾರ ಇದೆ. ಬಸವರಾಜ ಯಾವತ್ತಾದರು ಈ ರೀತಿ ಹೊರಗೆ ಸುದ್ದಿಯಲ್ಲಿ ಬಂದಿದ್ದಾರಾ ಎಂದು ಅವರು ಕೇಳಿದರು. ಏನಾದರೂ ಘಟನೆ ನಡೆದಾಗ, ಯಾರಾದರು ದೂರು ಕೊಟ್ಟಾಗ ಸ್ವಾಭಾವಿಕವಾಗಿ ಹೆಸರು ಬರುತ್ತದೆ. ಆನಂತರ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಶಾಸಕ ಬಸವರಾಜ ಅವರ ಪಾತ್ರ ಏನು ಇಲ್ಲ ಎಂಬುದು ತನಿಖೆಯಲ್ಲಿ ಕಂಡು ಬಂದರೆ ಬಿ ರಿಪೋರ್ಟ್ ಸಲ್ಲಿಸುತ್ತಾರೆ. ಇದಕ್ಕೆ ಆತಂಕ ಬೇಕಾಗಿಲ್ಲ ಎಂದು ಸಚಿವರು ಹೇಳಿದರು.
ಕನ್ನಡಿಗರ ಬಗ್ಗೆ ಅವಹೇಳನಾಕಾರಿ ಹೇಳಿಕೆ: ತ್ರಿಪುರಾ ಮೂಲದ ಆರೋಪಿ ವಶಕ್ಕೆ
ಬೆಂಗಳೂರು: ಕನ್ನಡಿಗರ ಬಗ್ಗೆ ಅವಹೇಳನಾಕಾರಿ ಮಾತನಾಡಿದ ಆರೋಪದಡಿ ತ್ರಿಪುರಾ ಮೂಲದ ಆರೋಪಿಯನ್ನು ಇಲ್ಲಿನ ಬೊಮ್ಮನಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ. ಮಿಥುನ್ ಸರ್ಕಾರ್ ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ. ಕರ್ನಾಟಕ, ಕನ್ನಡಿಗರ ಕುರಿತು ನಿಂದಿಸಿದ ಆಡಿಯೋ ತುಣುಕು ಹಾಗೂ ಆರೋಪಿಯ ವಿಳಾಸ ಸಹಿತ ಡೆಲಿವರಿ ಎಕ್ಸಿಕ್ಯೂಟಿವ್ ರಂಜಿತ್ ಎಂಬುವರು ನೀಡಿದ ದೂರಿನನ್ವಯ ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯ ಫೋನ್ ನಂಬರ್ ಆಧರಿಸಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಮಿಥುನ್ ಸರ್ಕಾರ್ ಆರ್ಡರ್ ಮಾಡಿದ್ದ ಟೀ ಶರ್ಟ್ ನೀಡಲು ಜುಲೈ 17ರಂದು ರಾತ್ರಿ 9.30ಕ್ಕೆ ಡೆಲಿವರಿ ಎಕ್ಸಿಕ್ಯೂಟಿವ್ ರಂಜಿತ್ ಬಂದಿದ್ದರು. ಈ ವೇಳೆ ವಿನಾಕಾರಣ ಕನ್ನಡದ ವಿಚಾರವಾಗಿ ಮಾತು ಆರಂಭಿಸಿದ್ದ ಮಿಥುನ್, ‘ನಾವು ಶೇ.70ರಷ್ಟು ಹಿಂದಿಯವರು ಕರ್ನಾಟಕದಲ್ಲಿದ್ದೇವೆ. ನಿಮ್ಮದು ಅತಿಯಾಗಿದೆ. ನಾವು ಇಲ್ಲಿಂದ ಹೋದರೆ ನೀವು ಕನ್ನಡದವರಿಗೆ ಟೊಮೆಟೋ ಖರೀದಿಸುವುದಕ್ಕೂ 10 ರೂಪಾಯಿ ಇರುವುದಿಲ್ಲ. ನಾವು ಬಂಗಾಳಿಗಳು ಮಾಡುವ ಊಟವನ್ನು ನೀವು ಕನ್ನಡಿಗರು ಕಲ್ಪಿಸಿಕೊಳ್ಳಲೂ ಸಹ ಆಗುವುದಿಲ್ಲ. ನೀವು ರಾಗಿ ಮುದ್ದೆ, ಇಡ್ಲಿ, ದೋಸೆ, ವಾರದಲ್ಲೊಮ್ಮೆ ಚಿಕನ್ ತಿನ್ನುತ್ತೀರಿ ಅಷ್ಟೇ. ನನ್ನ ಕಾಲ್ ರೆಕಾರ್ಡ್ ಮಾಡಿಕೋ, ನನ್ನ ಫೋನ್ ನಂಬರ್ ತೆಗೆದುಕೋ, ಬೇಗೂರು ನನ್ನ ವಿಳಾಸ, ನೀನು ಬಂದು ಭೇಟಿಯಾಗಿ ನಾನು ಬುಕ್ ಮಾಡಿರುವ ಆರ್ಡರ್ ಕೊಟ್ಟು ಹೋಗು’ ಎಂದು ಧಮ್ಕಿ ಹಾಕಿರುವುದಾಗಿ ಆರೋಪಿಸಲಾಗಿದೆ. ‘ಹೊರಗಿನಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನೀವೆಲ್ಲರೂ ಹೆದರಿಸುತ್ತೀರಿ. ನೀನು ನನಗೆ ಹೆದರಿಸುತ್ತೀಯಾ?’ ಎಂದು ಮಿಥುನ್ ಹೇಳಿದಾಗ ಆಗ ಡೆಲಿವರಿ ಎಕ್ಸಿಕ್ಯೂಟಿವ್ ಸೌಮ್ಯವಾಗಿ, ‘ಸರ್ ಕಾಲ್ ರೆಕಾರ್ಡ್ ಆಗುತ್ತಿದೆ’ ಎಂದಿದ್ದಾರೆ. ಈ ವೇಳೆ ಕರ್ನಾಟಕ, ಕನ್ನಡಿಗರ ಕುರಿತು ಆರೋಪಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದಿಂದಲೂ ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಲಾಗಿದೆ.
ನೆರೆ ರಾಜ್ಯ ವಿವಿಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ನೆರೆ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎ ವ್ಯಾಸಂಗ ಮಾಡುತ್ತಿರುವ ಒಟ್ಟು 102 ವಿದ್ಯಾರ್ಥಿಗಳಿಗೆ ತಲಾ ಇಪ್ಪತ್ತೈದು ಸಾವಿರ ರೂ.ಗಳಂತೆ ವಿದ್ಯಾರ್ಥಿವೇತನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಂಜೂರು ಮಾಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ಈ ಕುರಿತಂತೆ ಪ್ರಕಟನೆ ನೀಡಿರುವ ಅವರು, ಮೂರು ವರ್ಷಗಳಿಂದ ಅನುದಾನ ಕೊರತೆಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಿದ್ದು, ಈ ಬಾರಿಯ ಕೊರತೆ ಅನುದಾನದ ನಡುವೆಯೂ ಈ ವಿಶ್ವವಿದ್ಯಾಲಯಗಳಲ್ಲಿ 2024-25ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿದ್ಯಾರ್ಥಿವೇತನ ಮಂಜೂರಾತಿಗೆ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ 21 ವಿದ್ಯಾರ್ಥಿಗಳು, ಕಾಸರಗೋಡಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ 27 ವಿದ್ಯಾರ್ಥಿಗಳು, ಮಹಾರಾಷ್ಟ್ರದ ಸೊಲ್ಲಾಪುರದ ಪುಣ್ಯಶ್ಲೋಕ ಅಹಿಲ್ಯಾದೇವಿ ಹೊಳ್ಕರ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳು, ಸೊಲ್ಲಾಪುರದ ಸಿಬಿ ಖೇಡಗಿ ಬಸವೇಶ್ವರ ಮಹಾವಿದ್ಯಾಲಯದ 23 ವಿದ್ಯಾರ್ಥಿಗಳು, ಮುಂಬೈ ವಿಶ್ವವಿದ್ಯಾಲಯದ 2 ವಿದ್ಯಾರ್ಥಿಗಳು, ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ 3 ವಿದ್ಯಾರ್ಥಿಗಳು ಹಾಗೂ ಚನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಒಬ್ಬ ವಿದ್ಯಾರ್ಥಿಗೆ ಒಟ್ಟು 102 ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂ, ಒಟ್ಟು ರೂ. 25 ಲಕ್ಷ 50 ಸಾವಿರ ರೂ. ಗಳನ್ನು ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲಾಗಿದೆ. ಹೊರರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಇದು ಕನ್ನಡದ ಹಿತದೃಷ್ಠಿಯಿಂದ ಉತ್ತಮ ಬೆಳವಣಿಗೆಯಲ್ಲ. ಈಗಾಗಲೇ ವಿದ್ಯಾರ್ಥಿಗಳ ಕೊರತೆಯಿಂದ ಮಧುರೈನ ಕಾಮರಾಜ ವಿಶ್ವವಿದ್ಯಾಲಯ ಹಾಗೂ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು ಮುಚ್ಚಲ್ಪಟ್ಟಿದ್ದು, ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಉಳಿದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗದ ಸ್ಥಿತಿಯು ಇದೇ ಹಂತಕ್ಕೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜ್ಯ ಸರಕಾರವು ಹೊರ ನಾಡಿನ ಎಂ.ಎ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾರ್ಥಿವೇತನಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡುವುದರ ಜೊತೆಗೆ ಈ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳನ್ನು ಸಬಲೀಕರಣಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
Gaza War: ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ 30 ಜನರ ಸಾವು?
ಗಾಜಾ ಪಟ್ಟಿ ಈಗ ಛಿದ್ರ ಛಿದ್ರವಾಗಿ ಹೋಗಿರುವ ನಗರವಾಗಿದ್ದು, ಎಲ್ಲಿ ನೋಡಿದರೂ ಬರೀ ಕುಸಿದಿರುವ ಕಟ್ಟಡಗಳ ಕೆಳಗೆ ಸಾವಿರಾರು ಶವಗಳು ಕೊಳೆಯುತ್ತಿವೆ. ಇಡೀ ಗಾಜಾ ಪಟ್ಟಿ ನಗರ ಇದೀಗ ನರಳುತ್ತಿದ್ದು, ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ಎಲ್ಲಾ ರೀತಿಯಲ್ಲೂ ನಡೆಯುತ್ತಿದೆ. ಆದರೆ ಎಲ್ಲ ಪ್ರಯತ್ನಗಳ ನಡುವೆ ಕೂಡ ಯುದ್ಧದ ಕೆನ್ನಾಲಿಗೆ ಇನ್ನಷ್ಟು ಹೆಚ್ಚಾಗುತ್ತಿದೆ. ಇಸ್ರೇಲ್
BSF: ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಬಿಎಸ್ಎಫ್ ಸಿಬ್ಬಂದಿಗೆ ವಿಶೇಷ ಸನ್ಮಾನ
ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟ, ಅಖಿಲ ಭಾರತ ಪೊಲೀಸ್ ಶೂಟಿಂಗ್ ಸ್ಪರ್ಧೆ ಮತ್ತು ವಿಶ್ವ ವುಶು ಚಾಂಪಿಯನ್ಶಿಪ್ ಸೇರಿದಂತೆ ಇತ್ತೀಚಿನ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದ ಮತ್ತು ಗಮನಾರ್ಹ ಯಶಸ್ಸನ್ನು ಸಾಧಿಸಿದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಕ್ರೀಡಾ ಸಿಬ್ಬಂದಿಯನ್ನು ಗೌರವಿಸಲು ನವದೆಹಲಿಯ ಬಿಎಸ್ಎಫ್ ಪ್ರಧಾನ ಕಚೇರಿಯಲ್ಲಿ ಸನ್ಮಾನ ಸಮಾರಂಭ ನೆರವೇರಿತು.
ಲಾಸ್ ಏಂಜಲೀಸ್ ಪೊಲೀಸ್ ತರಬೇತಿ ಕೇಂದ್ರದಲ್ಲಿ ಬಾಂಬ್ ಸ್ಫೋಟ - ಮೂವರು ಅಧಿಕಾರಿಗಳು ಸಾವು
ಲಾಸ್ ಏಂಜಲೀಸ್ನ ತರಬೇತಿ ಕೇಂದ್ರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಪೂರ್ವ ಲಾಸ್ ಏಂಜಲೀಸ್ನ ಬಿಸ್ಕೈಲುಜ್ ಸೆಂಟರ್ ಅಕಾಡೆಮಿ ತರಬೇತಿ ಸೌಲಭ್ಯದಲ್ಲಿ ಈ ಘಟನೆ ನಡೆದಿದೆ. ಬಾಂಬ್ ನಿಷ್ಕ್ರಿಯ ದಳದ ವಾಹನದ ಬಳಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಮೂವರು ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ.
ರಾಯಚೂರು | ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮನವಿ
ರಾಯಚೂರು : ಸಿಂಧನೂರು ನಗರದಲ್ಲಿ ನಿವೇಶಗಳನ್ನು ಹಂಚಲು ಖರೀದಿ ಮಾಡಿರುವ ಜಾಗದಲ್ಲಿ ದಲಿತ ಮತ್ತು ಅತೀ ಕಡುಬಡವರಿಗೆ ಹಕ್ಕುಪತ್ರ ನೀಡಿ ಮನೆ ನಿರ್ಮಿಸಿ ಸೇರಿ ಇತರೆ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಆರಣ್ಯಭೂಮಿ, ಸಾಮಾಜಿಕ ಅರಣ್ಯಕರಣ, ಗೋವುಗಳ ಗೋಮಾಳಗಳಿಗೆ ಕಾಯ್ದಿಸಿರುವ ನೆಪದಲ್ಲಿ ದಲಿತರನ್ನು ಒಕ್ಕಲೆಬ್ಬಿಸುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರಗಳು ಕೈಗಾರಿಗಳ ಸ್ಥಾಪನೆಗಾಗಿ ವಿದೇಶಿ ಬಂಡವಾಳಗಾರರ ಕೈವಶ ಕುತಂತ್ರವಾಗಿದೆ ಎಂದರು. ಫಾರಂ ಸಂಖ್ಯೆ 54, 53, 57 ರಲ್ಲಿ ಸಲ್ಲಿಸಿರುವ ದಲಿತರು ಹಾಗೂ ತಳ ಸಮುದಾಯಗಳ ಅರ್ಜಿಗಳನ್ನು ಪರಿಶೀಲನೆವಿಲ್ಲದೆ ರಾಶಿಗಟ್ಟಲೆ ಕೊಳೆಯುತ್ತಾ ಬಿದ್ದಿವೆ. ಜಿ.ಪಿ.ಎಸ್. ಮೂಲಕ ಉಳುಮೆ ಮಾಡುತ್ತಿಲ್ಲವೆಂದು ಹೇಳಿ ಸಾವಿರಾರು ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಆರೋಪಿಸಿದರು. ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ವಿಭಾಗೀಯ ಸಂಚಾಲಕರು ಚಿನ್ನಪ್ಪ ಹೆಡಗಿಬಾಳ, ಜಿಲ್ಲಾ ಸಂಚಾಲಕರು ಆರ್ ಅಂಬ್ರೋಸ, ಉಮೇಶ್, ಶಿವರಾಜ ಬಾಗಲವಾಡ, ಉಮೇಶ್, ಮಂಜು ರಾಯಚೂರು, ಹುಚ್ಚಪ್ಪ ಕವಿತಾಳ ಇನ್ನಿತರರು ಹಾಜರಿದ್ದರು.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ತೀರ್ಪು ಕಾಯ್ದಿರಿಸಿದ ವಿಶೇಷ ನ್ಯಾಯಾಲಯ
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಮೈಸೂರಿನ ಕೆ.ಆರ್ ನಗರ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣದ ವಾದ ಮಂಡನೆ ಪೂರ್ಣವಾಗಿದ್ದು, ವಿಶೇಷ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಬಿ.ಎನ್.ಜಗದೀಶ್, ಅಶೋಕ್ ನಾಯ್ಕ್ ವಾದ ಮಂಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲರಾದ ನಳಿನಾ ಮಾಯಗೌಡ ಪ್ರತಿವಾದ ಮಂಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಆದೇಶವನ್ನು ಕಾಯ್ದಿರಿಸಿದ್ದಾರೆ. ಜುಲೈ ೩೦ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣದ ತೀರ್ಪು ಪ್ರಕಟಿಸಲಿದೆ.
ಕುದುರೆಮುಖ ಪೊಲೀಸರಿಂದ ದಲಿತ ಯುವಕನ ಮೇಲೆ ಹಲ್ಲೆ: ಆರೋಪ
ಚಿಕ್ಕಮಗಳೂರು: ಕಳಸ ತಾಲೂಕಿನ ಕುದುರೆಮುಖ ಪೊಲೀಸ್ ಠಾಣೆ ಸಿಬ್ಬಂದಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ದಲಿತ ಯುವಕನ ಕುಟುಂಬಸ್ಥರು ಎಸ್ಪಿಗೆ ದೂರು ನೀಡಿದ್ದಾರೆ. ಕಳಸ ತಾಲೂಕಿನ ಎಸ್ಟೇಟ್ವೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ನಾಗೇಶ್ ಹಲ್ಲೆಗೊಳಗಾದ ಯುವಕ. ಗುರುವಾರ ರಾತ್ರಿ ಕುದುರೆಮುಖ ಸಮೀಪದ ರಸ್ತೆಯಲ್ಲಿ ಬರುತ್ತಿದ್ದಾಗ ಪಿಕಪ್ ವಾಹನವನ್ನು ನಿಲ್ಲಿಸಿದ ಕುದುರೆಮುಖ ಪೊಲೀಸ್ ಠಾಣೆ ಸಿಬ್ಬಂದಿ, ಮದ್ಯಪಾನ ಮಾಡಿದ್ದೀಯಾ ಎಂದು ಆರೋಪಿಸಿ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆಂದು ದಲಿತ ಯುವಕ ನಾಗೇಶ್ ಆರೋಪಿಸಿದ್ದಾನೆ. ಹಲ್ಲೆಯಿಂದಾಗಿ ಯುವಕನ ಎದೆ, ಕಣ್ಣಿಗೆ ಗಾಯವಾಗಿದ್ದು, ಆತನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಯುವಕ ದೂರು ನೀಡುವ ಭೀತಿಯಿಂದ ಪೊಲೀಸ್ ಸಿಬ್ಬಂದಿ ರಾಜಿ ಸಂಧಾನಕ್ಕೆ ಕರೆದು ಹಣ ನೀಡುವುದಾಗಿ ಹೇಳಿದ್ದಾರೆಂದು ಯುವಕ ಆರೋಪಿಸಿದ್ದು, ತನಗೆ ಹಣ ಬೇಡ ನ್ಯಾಯಬೇಕು ಎಂದು ಆಗ್ರಹಿಸಿ ಯುವಕನ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೊಪ್ಪ ಡಿವೈಎಸ್ಪಿಗೆ ದೂರು ನೀಡಿದ್ದರು. ಆದರೆ, ಎಸ್ಪಿಗೆ ದೂರು ನೀಡುತ್ತಿದ್ದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಎಂದು ತನ್ನ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಂದು ಯುವಕ ಆರೋಪಿಸಿದ್ದಾನೆ.
ಬಿತ್ತು.. ಬಿತ್ತು.. ಬಿತ್ತು... ಇನ್ನೇನು ಬೀದಿಗೆ ಬಂತು ಪಾಕಿಸ್ತಾನ! Pakistan Economy
ಪಾಕಿಸ್ತಾನ ತಾನು ಮಾಡಿಕೊಂಡ ತನ್ನದೇ ತಪ್ಪಿಗೆ ಇದೀಗ ನರಳಾಡುತ್ತಿದೆ, ಉಗ್ರರ ಕೂಪವಾಗಿರುವ ಇದೇ ಪಾಕಿಸ್ತಾನ ಈಗಾಗಲೇ ಮಾಡಬಾರದ ತಪ್ಪು ಮಾಡಿಕೊಂಡು ಮೈತುಂಬಾ ಸಾಲ ಮಾಡಿಕೊಂಡು ತೀವ್ರವಾಗಿ ನರಳಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಪಾಕಿಸ್ತಾನ ಸಾಲ ಕೇಳ್ತಾ ಮರ್ಯಾದಿ ಕಳೆದುಕೊಂಡು ಪರದಾಡುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಸಂಚಲನ ಸೃಷ್ಟಿಸಿದೆ. ಹೌದು, ಪಾಕಿಸ್ತಾನ ಊರೆಲ್ಲಾ ಸಾಲ ಮಾಡಿಕೊಂಡು
ಬೀದರ್ | ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಒಂದು ದಿನದ ಪ್ರತಿಭಟನಾ ಧರಣಿ
ಬೀದರ್ : ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ, ಸಮಾಜೀಕ ಅರಣ್ಯೀಕರಣ ಹಾಗೂ ಗೊವುಗಳ ಗೋ ಮಾಳಗಳಿಗೆ ಕಾಯ್ದಿರಿಸುವ ನೆಪದಲ್ಲಿ ಒಕ್ಕಲೆಬ್ಬಿಸುವುದನ್ನು ಖಂಡಿಸುತ್ತಾ, ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯು ಒಂದು ದಿನದ ಪ್ರತಿಭಟನಾ ಧರಣಿ ನಡೆಸಿತು. ಇಂದು ಬೀದರ್ ನ ತಹಶೀಲ್ದಾರ್ ಕಚೇರಿ ಮುಂದೆ ಮುಂಜಾನೆ 11 ಗಂಟೆಯಿಂದ ಸಾಯಂಕಾಲದ ಸುಮಾರು 4 ಗಂಟೆವರೆಗೆ ಧರಣಿ ಸತ್ಯಾಗ್ರಹ ನಡೆಸಲಾಯಿತು. ಬೀದರ್ ನ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೀದರ್ ತಾಲೂಕಿನ ಅಲಿಯಬಾದ್ ಗ್ರಾಮದ ಸರ್ವೆ ನಂ.37, 38, 40 ರಲ್ಲಿ ದಲಿತ ಕುಟುಂಬಕ್ಕೆ ಸೇರಿದ ಭೂಮಿಯನ್ನು ನಕಲಿ ಪ್ರಮಾಣ ಪತ್ರ ಸಲ್ಲಿಸಿ ಮೇಲ್ವರ್ಗದವರೊಬ್ಬರ ಹೆಸರಿಗೆ ಪಹಣಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ಇದ್ದರೂ ಕೂಡ ಆ ದಲಿತ ಕುಟುಂಬಕ್ಕೆ ಕಿರಕುಳ ನೀಡುತ್ತಿದ್ದಾರೆ. ಹೀಗಾಗಿ ಆ ಮೇಲ್ವರ್ಗದ ಕುಟುಂಬದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಇತಂಹ ಸುಮಾರು ದಲಿತರ ಭೂಮಿಯನ್ನು ಅರಣ್ಯ ಇಲಾಖೆಯಿಂದ ಒತ್ತುವರಿ ಮಾಡಲಾಗಿದ್ದು, ಇದನ್ನು ಕೈ ಬಿಡಬೇಕು. ದಲಿತರು ಸುಮಾರ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳು ಶೀಘ್ರದಲ್ಲಿ ಪರಿಹರಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ, ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ರಾಜಕುಮಾರ್ ಬನ್ನೇರ್, ಜಿಲ್ಲಾ ಸಂಚಾಲಕ ರಮೇಶ್ ಮಂದಕನಳ್ಳಿ, ಝೆರೆಪ್ಪಾ ರಾಂಪೂರೆ, ಸುಭಾಷ್ ಜ್ಯೋತಿ, ಕೈಲಾಸ್ ಮೇಟಿ, ಸಂಜುಕುಮಾರ್ ಬ್ಯಾಗಿ, ಅಹಮ್ಮದ್ ಅಲಿಯಾಬಾದ್, ಖಾಜಾ ಮೈನೋದ್ದಿನ್, ಗೌತಮ್ ಸಾಗರ್, ಬಸವರಾಜ್ ಕಾಂಬಳೆ, ನಾಗೇಂದ್ರ ಜನವಾಡಾ, ಲಕ್ಷ್ಮಣ್ ಶೇರಿಕರ್, ಜಗದೇವಿ ಕೆ.ಭಂಡಾರಿ, ರಂಜೀತಾ ಜೈನೂರ್, ದೇವಸಿಲಾ ಸದಾಫುಲೆ, ರುಕ್ಮಿಣಿ ಕಾಂಬಳೆ, ಸುಧಾಕಾರ್ ಮಾಳಗೆ, ಸುವರ್ಣಾ ಪುಜಾರಿ ಇದ್ದರು. ಹಾಗೆಯೇ ಆರ್.ಪಿ.ಐ ಪಕ್ಷದ ರಾಜ್ಯಾಧಕ್ಷ ಮಹೇಶ ಗೋರನಾಳಕರ್, ಭೂಮಿಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಸಾಮಾಜೀಕ ಹೊರಾಟಗಾರ ಶಶಿ ಪೊಲೀಸ್ ಪಾಟೀಲ್, ಅಂಬಾದಾಸ್ ಗಾಯಕವಾಡ್, ಬೀರು ಸಿಂಗ್, ಗೌತಮ್ ಪ್ರಸಾದ್ ಇವರು ಈ ಹೋರಾಟಕ್ಕೆ ಬೆಂಬಲಿಸಿದ್ದಾರೆ.
ಚೈತ್ರಾ ಕುಂದಾಪುರ ವಿರುದ್ಧದ ವಂಚನೆ ಪ್ರಕರಣ: ಹಣ ಬಿಡುಗಡೆ ಕೋರಿ ಗೋವಿಂದಬಾಬು ಪೂಜಾರಿ ಅರ್ಜಿ
ಬೆಂಗಳೂರು: ಚೈತ್ರಾ ಕುಂದಾಪುರ, ಅಭಿನವಶ್ರೀ ಹಾಲವೀರಪ್ಪಜ್ಜ ಮತ್ತಿತರ ವಿರುದ್ಧ ದಾಖಲಾದ 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಹಣ ಬಿಡುಗಡೆ ಕೋರಿ ದೂರುದಾರ ಉದ್ಯಮಿ ಗೋವಿಂದಬಾಬು ಪೂಜಾರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ದೂರುದಾರರ ಪರ ಹಿರಿಯ ವಕೀಲ ಚಂದ್ರಮೌಳಿ, ನಮ್ಮ ಹಣ ಬಿಡುಗಡೆ ಕೋರಿದ್ದ ಅರ್ಜಿ ವಜಾಗೊಂಡಿದೆ. ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಹಣ ಪಡೆದಿದ್ದರು. ಚೈತ್ರಾ ಕುಂದಾಪುರ ಅವರೀಗ ಬಿಗ್ ಬಾಸ್ ಸೆಲೆಬ್ರಿಟಿ. ಪೊಲೀಸರು ವಶಕ್ಕೆ ಪಡೆದಿರುವ ಹಣ ನಮಗೆ ಮರಳಿಸಬೇಕು ಎಂದು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.
ಮಹಾರಾಷ್ಟ್ರದಲ್ಲಿ ಹಿರಿಯ ಸಚಿವರು ಮತ್ತು ಐಎಎಸ್, ಐಪಿಎಸ್ ಅಧಿಕಾರಿಗಳು ಹನಿಟ್ರ್ಯಾಪ್ಗೆ ಬಲಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಅವರ ಬಳಿ ಈ ಸಂಬಂಧಿತ ದಾಖಲೆಗಳಿವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ದಾಖಲೆ ಬಿಡುಗಡೆ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ. ಸದನದಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಸರ್ಕಾರವು ತನಿಖೆಗೆ ಭರವಸೆ ನೀಡಿದೆ. ಈ ಪ್ರಕರಣ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಗಾಝಾದಲ್ಲಿ ವಿಶ್ವಸಂಸ್ಥೆ ಏಜೆನ್ಸಿಗಳ ಮುಖ್ಯಸ್ಥರಿಗೆ ವೀಸಾ ನವೀಕರಣಕ್ಕೆ ಇಸ್ರೇಲ್ ನಿರಾಕರಣೆ: ವಿಶ್ವಸಂಸ್ಥೆ ಕಳವಳ
ವಿಶ್ವಸಂಸ್ಥೆ, ಜು.18: ಗಾಝಾದಲ್ಲಿ ವಿಶ್ವಸಂಸ್ಥೆಯ ಕನಿಷ್ಠ ಮೂರು ಏಜೆನ್ಸಿಗಳ ಮುಖ್ಯಸ್ಥರಿಗೆ ವೀಸಾಗಳನ್ನು ನವೀಕರಿಸಲು ಇಸ್ರೇಲ್ ನಿರಾಕರಿಸಿರುವುದಾಗಿ ವರದಿಯಾಗಿದೆ. ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿನ ಏಜೆನ್ಸಿ(ಒಸಿಎಚ್ಎ)ಯ ಸ್ಥಳೀಯ ಮುಖ್ಯಸ್ಥರು, ಮಾನವ ಹಕ್ಕುಗಳ ಏಜೆನ್ಸಿ(ಒಎಚ್ಸಿಎಚ್ಆರ್)ಯ ಸ್ಥಳೀಯ ಮುಖ್ಯಸ್ಥರು ಮತ್ತು ಗಾಝಾದಲ್ಲಿ ಫೆಲೆಸ್ತೀನೀಯರನ್ನು ಬೆಂಬಲಿಸುವ ಸಂಸ್ಥೆ (ಯುಎನ್ಆರ್ಡಬ್ಲ್ಯೂಎ)ಯ ಸ್ಥಳೀಯ ಮುಖ್ಯಸ್ಥರ ವೀಸಾವನ್ನು ಕೆಳ ತಿಂಗಳಿನಿಂದ ನವೀಕರಿಸಲಾಗಿಲ್ಲ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜಾರಿಕ್ ಹೇಳಿದ್ದಾರೆ. ಅಗತ್ಯವಿರುವ ನಾಗರೀಕರಿಗೆ ಸಹಾಯವನ್ನು ನೀಡುವುದು ಮತ್ತು ತನ್ನ ಸಿಬ್ಬಂದಿಗಳ ಪ್ರತ್ಯಕ್ಷ ಅನುಭವವನ್ನು ವರದಿ ಮಾಡುವುದಷ್ಟೇ ತನ್ನ ಕಾರ್ಯವಲ್ಲ, ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಪ್ರತಿಪಾದಿಸುವುದೂ ತನ್ನ ಜವಾಬ್ದಾರಿಯಾಗಿದೆ ಎಂದು ವಿಶ್ವಸಂಸ್ಥೆ ಮಾನವೀಯ ವ್ಯವಹಾರಗಳ ಏಜೆನ್ಸಿಯ ಮುಖ್ಯಸ್ಥ ಟಾಮ್ ಫ್ಲೆಚರ್ ಹೇಳಿದ್ದಾರೆ. ಆದರೆ ಪ್ರತೀ ಬಾರಿಯೂ ನಾವು ನೋಡಿದ್ದನ್ನು ವರದಿ ಮಾಡಿದಾಗ ನಮ್ಮ ಮೇಲೆ ಹೆಚ್ಚಿನ ಪ್ರತಿಬಂಧ ವಿಧಿಸುವ ಬೆದರಿಕೆ ಒಡ್ಡಲಾಗುತ್ತಿದೆ. ಗಾಝಾದಲ್ಲಿ ನಮ್ಮ ಕಾರ್ಯಕ್ಕೆ ಅತೀ ಹೆಚ್ಚಿನ ಸವಾಲು ಎದುರಾಗಿದೆ. ನಾಗರಿಕರ ರಕ್ಷಣೆಯ ಕುರಿತ ನಮ್ಮ ಕೆಲಸಕ್ಕೆ ಪ್ರತಿಯಾಗಿ ಇಸ್ರೇಲ್ ನಮ್ಮ ವೀಸಾಗಳನ್ನು ನವೀಕರಿಸುತ್ತಿಲ್ಲ ಅಥವಾ ಅದರ ಅವಧಿಯನ್ನು ಕಡಿಮೆಗೊಳಿಸುತ್ತಿದೆ ಎಂದು ಫ್ಲೆಚರ್ ಹೇಳಿದ್ದಾರೆ. ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಫ್ಲೆಚರ್ `ಗಾಝಾದಲ್ಲಿನ ಭೀಕರ ಪರಿಸ್ಥಿತಿಯನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಆಹಾರದ ಕೊರತೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು ಆಹಾರಕ್ಕೆ ಕಾಯುವ ಫೆಲೆಸ್ತೀನೀಯರ ಮೇಲೆ ಗುಂಡಿನ ದಾಳಿ ನಡೆಸಲಾಗುತ್ತಿದೆ. ಜಿನೆವಾ ನಿರ್ಣಯದ ಅಡಿಯಲ್ಲಿ ನಾಗರಿಕರಿಗೆ ಅಗತ್ಯದ ನೆರವು ಒದಗಿಸುವ ತನ್ನ ಬದ್ಧತೆಗೆ ಇಸ್ರೇಲ್ ವಿಫಲವಾಗಿದೆ. ಗಾಝಾ ಪ್ರವೇಶಿಸಲು ಮತ್ತು ತಮ್ಮ ಕಾರ್ಯಗಳನ್ನು ಮುಂದುವರಿಸಲು ಸಿಬ್ಬಂದಿಗಳಿಗೆ ಭದ್ರತಾ ಕ್ಲಿಯರೆನ್ಸ್ ಅನ್ನು ಇಸ್ರೇಲ್ ನೀಡುತ್ತಿಲ್ಲ. ಜೀವ ಉಳಿಸುವ ತುರ್ತು ವೈದ್ಯಕೀಯ ತಂಡದ ಸಿಬ್ಬಂದಿಗಳಿಗೂ ಗಾಝಾ ಪ್ರವೇಶಿಸಲು ಅನುಮತಿ ನಿರಾಕರಿಸಲಾಗುತ್ತಿದೆ. ನೆರವು ವಿತರಿಸುವ ನೂರಾರು ಸಿಬ್ಬಂದಿಗಳು ಹತರಾಗಿದ್ದಾರೆ ಮತ್ತು ಕೆಲಸ ಮುಂದುವರಿಸಿರುವ ಸಿಬ್ಬಂದಿಗಳೂ ಅಪಾಯಕಾರಿ ಮತ್ತು ಸವಾಲಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ' ಎಂದು ಹೇಳಿದರು. ವಿಶ್ವಸಂಸ್ಥೆಯಲ್ಲಿ ಇಸ್ರೇಲಿನ ರಾಜಕೀಯ ಸಂಯೋಜಕಿ ರೆಯುಟ್ ಶಪಿರ್ ಬೆನ್-ನಫ್ತಾಲಿ ಈ ಹೇಳಿಕೆಯನ್ನು ವಿರೋಧಿಸಿದ್ದು `ಒಸಿಎಚ್ಎ ತನ್ನ ಹೇಳಿಕೆಗಳು ಹಾಗೂ ಕಾರ್ಯಗಳಲ್ಲಿ ತಟಸ್ಥತೆ ಮತ್ತು ನಿಷ್ಪಕ್ಷಪಾತವನ್ನು ತ್ಯಜಿಸಿದ್ದು ಇಸ್ರೇಲ್ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ' ಎಂದು ಆರೋಪಿಸಿದರು. ಅಕ್ಟೋಬರ್ 7ರ ದಾಳಿಯು ಇಸ್ರೇಲ್ ನಲ್ಲಿ ಸುಮಾರು 1,200 ಮಂದಿಯನ್ನು ಹತ್ಯೆ ಮಾಡಿದೆ ಮತ್ತು ಸುಮಾರು 250 ಮಂದಿಯನ್ನು ಒತ್ತೆಸೆರೆಯಲ್ಲಿ ಇರಿಸಲು ಮತ್ತು ಗಾಝಾ ಯುದ್ಧಕ್ಕೆ ಹಾಗೂ ಮಾನವೀಯ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ ಎಂಬುದನ್ನು 15 ಸದಸ್ಯರ ಒಸಿಎಚ್ಎ ಏಜೆನ್ಸಿ ಮರೆತಿರುವಂತೆ ಕಾಣುತ್ತದೆ . ವಾಸ್ತವಾಂಶವನ್ನು ಮರೆಮಾಚಿ ಇಸ್ರೇಲನ್ನು ಅಪರಾಧಿಗಳ ಸ್ಥಾನದಲ್ಲಿ ಇರಿಸಲಾಗಿದೆ. ಆದರೆ ಇಸ್ರೇಲಿಗಳ ಸಂಕಷ್ಟಕ್ಕೆ ಮಾತ್ರವಲ್ಲ, ಫೆಲೆಸ್ತೀನೀಯರ ಸಮಸ್ಯೆಗೂ ಮೂಲ ಕಾರಣವಾದ ಹಮಾಸ್ನ ಕಾರ್ಯಗಳ ಬಗ್ಗೆ ಮೌನ ವಹಿಸಲಾಗಿದೆ ಎಂದವರು ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ. ►ಗಾಝಾ ಪ್ರವೇಶಕ್ಕೆ ಅನುಮತಿ ನಿರಾಕರಣೆ ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿಯ ಕಚೇರಿಯ ಮುಖ್ಯಸ್ಥರಿಗೆ ಗಾಝಾ ಪ್ರವೇಶಿಸಲು ಇಸ್ರೇಲ್ ಅನುಮತಿ ನಿರಾಕರಿಸುತ್ತಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿಯ ವಕ್ತಾರೆ ರವೀನಾ ಶಮ್ದಾಸನಿ ಹೇಳಿದ್ದಾರೆ. 2025ರ ಫೆಬ್ರವರಿಯಲ್ಲಿ ಅವರು ಗಾಝಾದಲ್ಲಿನ ತನ್ನ ಕಚೇರಿಯನ್ನು ಪ್ರವೇಶಿಸಲು ಮುಂದಾದಾಗ ಪ್ರವೇಶ ನಿರಾಕರಿಸಲಾಗಿತ್ತು. ಆ ಬಳಿಕ ಅವರು ತನ್ನ ಕಚೇರಿಯನ್ನು ಪ್ರವೇಶಿಸಿಲ್ಲ. ನೆರವು ಕಾರ್ಯಕರ್ತರು, ವಿಶ್ವಸಂಸ್ಥೆ ಸಿಬ್ಬಂದಿಗಳು, ಪತ್ರಕರ್ತರಿಗೂ ಗಾಝಾ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ' ಎಂದು ರವೀನಾರನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
ಸುರಪುರ | ದಲಿತರ ಭೂಮಿ, ವಸತಿ ಹಕ್ಕಿಗಾಗಿ ಅಂಬೇಡ್ಕರ್ ವಾದ ಸಂಘಟನೆಯಿಂದ ಧರಣಿ
ಸುರಪುರ: ರಾಜ್ಯ ಮತ್ತು ದೇಶದಲ್ಲಿನ ಎಲ್ಲ ದಲಿತರು ಕಳೆದ ಅನೇಕ ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿರುವ ಜಮೀನುಗಳಿಗೆ ಸರಕಾರ ಕೂಡಲೇ ಹಕ್ಕು ಪತ್ರವನ್ನು ನೀಡಿ ದಲಿತರ ಭೂಮಿ ಮತ್ತು ವಸತಿ ಬೇಡಿಕೆಯನ್ನು ಈಡೇರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಒತ್ತಾಯಿಸಿದರು. ನಗರದ ತಹಶೀಲ್ದಾರ್ ಕಚೇರಿ ಮುಂದೆ ನಡೆದ ಒಂದು ದಿನದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ಇಂದು ನಮ್ಮ ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲಾ ತಹಶೀಲ್ದಾರ್ ಕಚೇರಿಗಳ ಮುಂದೆ ಧರಣಿಯನ್ನು ನಡೆಸಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಮುಖಂಡರಾದ ಗೋಪಾಲ ವಜ್ಜಲ್ ಮಾತನಾಡಿದರು. ನಂತರ ಸಾಯಂಕಾಲದ ವೇಳೆ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು. ಧರಣಿಯಲ್ಲಿ ಸಂಘಟನೆ ತಾಲೂಕು ಸಂಚಾಲಕ ಶರಣಪ್ಪ ತಳವಾರಗೇರ, ಗೊಲ್ಲಾಳಪ್ಪ ಕಟ್ಟಿಮನಿ, ಪರಶುರಾಮ ಸಾಸನೂರ, ಮಲ್ಲಿಕಾರ್ಜುನ ಹಾದಿಮನಿ, ಪ್ರಕಾಶ ಕಟ್ಟಿಮನಿ, ಪ್ರಶಾಂತ ಉಗ್ರಂ, ಶರಣು ಅಂಬರಖೇಡ, ಲಾಲು ಚವ್ಹಾಣ, ಮಲ್ಲಿಕಾರ್ಜುನ ವಾಗಣಗೇರಿ, ಮೌನೇಶ ತೆಗ್ಗೆಳ್ಳಿ, ಬಲಭೀಮ ಹಾದಿಮನಿ, ಸುರೇಶ ಸಾಸನೂರ,ನಾಗಪ್ಪ ದೊಡ್ಮನಿ,ಹಣಮಂತ ಹೊಸ್ಮನಿ,ಸದಾನಂದ ಕಟ್ಟಿಮನಿ, ಮಲ್ಲು ಕೆ.ಸಿ.ಪಿ., ಹಣಮಂತ ಅಂಬಲಿಹಾಳ, ಕೆಂಚಪ್ಪ ಕಟ್ಟಿಮನಿ, ಬಸವರಾಜ ಶಖಾಪುರ, ಹಣಮಂತ, ಬಸವರಾಜ ಮದ್ರಕಿ,ಸುರೇಶ ಚಿಕ್ಕನಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಹೂವಿನಹಳ್ಳಿ ಗ್ರಾಮದ ಸರಕಾರಿ ಭೂಮಿ ಸರ್ವೇ ನಂಬರ್ 21, 22 ಮತ್ತು 23ರಲ್ಲಿ ನಿರ್ಮಿಸಿರುವ ಅನಧಿಕೃತ ಗೋಡಾನ್ ಕೂಡಲೇ ತೆರವುಗೊಳಿಸಿ ಸರಕಾರಿ ಭೂಮಿ ರಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆ ಇದೇ ವಿಷಯಕ್ಕಾಗಿ ಹೋರಾಟ ನಡೆಸಲಿದೆ. - ಮಾಳಪ್ಪ ಕಿರದಳ್ಳಿ ಜಿಲ್ಲಾ ಸಂಚಾಲಕ ಕೆಡಿಎಸ್ಎಸ್ ಅಂಬೇಡ್ಕರ್ ವಾದ
ಆಳಂದ | ಮನೆ ಕಳವು ಪ್ರಕರಣ : ಇಬ್ಬರು ಮಹಿಳೆಯರ ಬಂಧನ
ಕಲಬುರಗಿ: ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ಜು.15ರಂದು ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿ 51,600 ರೂ. ಮೌಲ್ಯದ ಕಳವಾದ ಆಭರಣ ಮತ್ತು ನಗದು ವಶಕ್ಕೆ ಪಡೆಯುವಲ್ಲಿ ಅಳಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆಳಂದನ ವಡ್ಡರಗಲ್ಲಿಯ ಲಕ್ಷ್ಮೀಬಾಯಿ ರಮೇಶ್ ಗೊಲ್ಲರ್ (35), ವಾಟರ್ ಟ್ಯಾಂಕ್ ಹತ್ತಿರ ನಿವಾಸಿ ಭಾರತಿ ಗೋವಿಂದ ಸಾವ್ಳೆ (25) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಡಕಲ್ ಗ್ರಾಮ ನಿವಾಸಿ ಸುನೀತಾ ಮಲ್ಲಿಕಾರ್ಜುನ ಜಮಾದಾರ ಅವರು ತಮ್ಮ ಮನೆಯಲ್ಲಿ ಅಪರಿಚಿತ ಕಳ್ಳರು ನುಗ್ಗಿ ಬಂಗಾರ-ಬೆಳ್ಳಿ ಆಭರಣಗಳು, ನಗದು ಕಳವು ಮಾಡಿದ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿದ ಆಳಂದ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿ, ಅವರ ಬಳಿಯಿದ್ದ ಬಂಗಾರ ಮತ್ತು ನಗದು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ | ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿಗೆ 10 ವರ್ಷ ಜೈಲು, 50 ಸಾವಿರ ರೂ. ದಂಡ
ಕಲಬುರಗಿ: ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಿ ಆಕೆಯನ್ನು ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಫರಹತಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ ಮಿಣಜಗಿ ಗ್ರಾಮದ ಹೊನ್ನಪ್ಪ ಶರಣಪ್ಪ ದೊಡ್ಡಮನಿ ಎಂಬಾತನೆ ಈ ಶಿಕ್ಷೆಗೆ ಒಳಗಾದ ಅಪರಾಧಿ ಎಂದು ತಿಳಿದುಬಂದಿದೆ. ಅಪರಾಧಿ ಹೊನ್ನಪ್ಪ ಶರಣಪ್ಪ ದೊಡ್ಡಮನಿ, 2024ರ ಜ.22ರಂದು ಅಸ್ವಸ್ಥ ಮಹಿಳೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗುತ್ತಿದ್ದ ವೇಳೆ ಮಹಿಳೆ ಚೀರಾಡಿದ್ದರಿಂದ ಆಕೆಯ ಸೋದರತ್ತೆ ಬಂದು ನೋಡಿದಾಗ ಹೊನ್ನಪ್ಪ ಪರಾರಿಯಾಗಿದ್ದ. ನಂತರ ಆಕೆ ಮಹಿಳೆಯ ಸಹೋದರ ಮತ್ತು ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಠಾಣೆಯ ತನಿಖಾಧಿಕಾರಿಗಳಾದ ಮಲ್ಲಿಕಾರ್ಜುನ ಇಕ್ಕಳಕಿ, ಬಾಲಚಂದ್ರ ಲಕ್ಕಂ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮುಹಮ್ಮದ್ ಮುಜೀರ್ ಉಲ್ಲಾ ಸಿ.ಜಿ. ಅವರು, ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಎನ್. ಬಳಬಟ್ಟಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ದೀಪ ಆರುವ ಮುನ್ನ ಜೋರಾಗಿ ಉರಿಯುತ್ತೆ: ಸಿಎಂಗೆ ವಿಜಯೇಂದ್ರ ಹೀಗಂದಿದ್ದೇಕೆ?
ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಮಾಡಿದ್ದಾರೆ. ನೀವು ಕಾಂಗ್ರೆಸ್ ಶಾಸಕರಿಗೆ ಮುಖ್ಯಮಂತ್ರಿಯೋ ಅಥವಾ ಕರ್ನಾಟಕದ ಮುಖ್ಯಮಂತ್ರಿಯೋ? ಅಲುಗಾಡುತ್ತಿರುವ ನಿಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು, ಕಾಂಗ್ರೆಸ್ನ ಆಂತರಿಕ ಬೇಗುದಿಯನ್ನು ತಣ್ಣಗಾಗಿಸಲು, ಅತೃಪ್ತ ಕಾಂಗ್ರೆಸ್ ಶಾಸಕರನ್ನು ತೃಪ್ತಿಪಡಿಸಲು ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇವಲ ಕಾಂಗ್ರೆಸ್
ಪಹಲ್ಗಾಮ್, ಆಪರೇಶನ್ ಸಿಂಧೂರ್ ಬಗ್ಗೆ ಸಂಸತ್ ನಲ್ಲಿ ಕನಿಷ್ಠ 2 ದಿನ ಚರ್ಚೆಯಾಗಬೇಕು: ಜೈರಾಮ್ ರಮೇಶ್
ಹೊಸದಿಲ್ಲಿ, ಜು. 18: ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಶನ್ ಸಿಂಧೂರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆಗಳು ಮತ್ತು ಚೀನಾ ಮುಂತಾದ ವಿಷಯಗಳ ಕುರಿತು ಸಂಸತ್ ನಲ್ಲಿ ಕನಿಷ್ಠ ಎರಡು ದಿನ ಚರ್ಚೆ ನಡೆಯಬೇಕು ಎಂಬ ಪ್ರತಿಪಕ್ಷದ ಬೇಡಿಕೆಯಲ್ಲಿ ಯಾವುದೇ ರಾಜಿಯಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶುಕ್ರವಾರ ಹೇಳಿದ್ದಾರೆ. ಸಂಸತ್ ನ ಮುಂಗಾರು ಅಧಿವೇಶನದ ಮುನ್ನ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಈ ಎಲ್ಲಾ ವಿಷಯಗಳಿಗೆ ಸದನದಲ್ಲಿ ಪ್ರತಿಕ್ರಿಯಿಸಬೇಕು ಎಂದು ಹೇಳಿದರು. ಮುಂಗಾರು ಅಧಿವೇಶನವು ಸೋಮವಾರ ಆರಂಭಗೊಳ್ಳಲಿದೆ. ಈ ವಿಷಯದಲ್ಲಿ ‘ಇಂಡಿಯಾ’ ಮೈತ್ರಿಕೂಟವು ಒಗ್ಗಟ್ಟಿನಿಂದಿದೆ ಎಂದು ಅವರು ತಿಳಿಸಿದರು. ಅದರ ಪ್ರಮುಖ ನಾಯಕರು ಶನಿವಾರ ಆನ್ಲೈನ್ ನಲ್ಲಿ ಮಾತುಕತೆ ನಡೆಸುತ್ತಾರೆ ಹಾಗೂ ಬಳಿಕ, ದಿಲ್ಲಿಯಲ್ಲಿ ಸಭೆ ಸೇರಲಿದ್ದಾರೆ ಎಂದು ಅವರು ನುಡಿದರು. ಚುನಾವಣಾ ಆಯೋಗವು ಬಿಹಾರದಲ್ಲಿ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾಗಬೇಕೆಂಬ ಇಂಡಿಯಾ ಮೈತ್ರಿಕೂಟದ ಬೇಡಿಕೆಯಲ್ಲೂ ಯಾವುದೇ ರಾಜಿಯಿಲ್ಲ ಎಂದು ರಮೇಶ್ ಹೇಳಿದರು. ‘‘ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಸಂಸತ್ ನಲ್ಲಿ ಕನಿಷ್ಠ ಎರಡು ಇಡೀ ದಿನ ಚರ್ಚೆ ನಡೆಯಬೇಕು. ಆ ದಾಳಿ ನಡೆಸಿರುವ ಭಯೋತ್ಪಾದಕರು ಈಗಲೂ ತಪ್ಪಿಸಿಕೊಂಡಿದ್ದಾರೆ. ಆಪರೇಶನ್ ಸಿಂಧೂರ ಬಗ್ಗೆ ಮೊದಲು ಸೇನಾಪಡೆಗಳ ಮುಖ್ಯಸ್ಥ ಜನರಲ್ ಚೌಹಾಣ್, ಬಳಿಕ ಗ್ರೂಪ್ ಕ್ಯಾಪ್ಟನ್ ಶಿವಕುಮಾರ್ ಮತ್ತು ಮೂರನೆಯದಾಗಿ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ ಮಹತ್ವದ ಸಂಗತಿಗಳನ್ನು ಹೇಳಿದ್ದಾರೆ’’ ಎಂದು ಅವರು ತಿಳಿಸಿದರು. ‘‘ಮೂವರು ಅತ್ಯಂತ ಹಿರಿಯ, ಗೌರವಾನ್ವಿತ, ಅನುಭವಿ ರಕ್ಷಣಾ ಅಧಿಕಾರಿಗಳು ಆಪರೇಶನ್ ಸಿಂಧೂರ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಅದಕ್ಕಾಗಿಯೇ ನಾವು ಚರ್ಚೆಯಾಗಬೇಕೆಂದು ಹೇಳುತ್ತಿರುವುದು’’ ಎಂದು ರಮೇಶ್ ನುಡಿದರು.
ಐಐಟಿ ರೂರ್ಕಿಯಿಂದ ಮೋಡಿ ಲಿಪಿಯಿಂದ ದೇವನಾಗರಿಗೆ ಲಿಪ್ಯಂತರ ಮಾಡುವ ತಂತ್ರಾಂಶ ಅಭಿವೃದ್ಧಿ
ಹೊಸದಿಲ್ಲಿ, ಜು. 18: ಐತಿಹಾಸಿಕ ‘ಮೋಡಿ’ ಲಿಪಿಯಿಂದ ದೇವನಾಗರಿ ಲಿಪಿಗೆ ಅಕ್ಷರಗಳನ್ನು ಹೊಂದಿಸುವುದಕ್ಕಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿಯು ಜಗತ್ತಿನ ಮೊದಲ ಕೃತಕ ಬುದ್ಧಿಮತ್ತೆ ತಂತ್ರಾಂಶ (ಎಐ ಫ್ರೇಮ್ವರ್ಕ್)ವನ್ನು ಅಭಿವೃದ್ಧಿಪಡಿಸಿದೆ. ವಿಶನ್ ಲಾಂಗ್ಜೇಜ್ ಮೋಡೆಲ್ (ವಿಎಲ್ಎಮ್) ರಚನೆಯನ್ನು ಆಧರಿಸಿದ ‘‘ಎಮ್ಒಎಸ್ಸಿನೆಟ್’’ ಮಾದರಿಯು ಮಧ್ಯಕಾಲೀನ ಹಸ್ತಪ್ರತಿಗಳನ್ನು ಸಂರಕ್ಷಿಸಿಡಲು ಪ್ರಭಾವಶಾಲಿ ಸಲಕರಣೆಯೊಂದನ್ನು ಒದಗಿಸುತ್ತದೆ. ಜೊತೆಗೆ, ಅದು ಡಿಜಿಟಲ್ ಇಂಡಿಯಾ ಮತ್ತು ಭಾಷಿಣಿ ಮುಂತಾದ ಯೋಜನೆಗಳ ಅಡಿಯಲ್ಲಿ ಬೃಹತ್ ಪ್ರಮಾಣದ ಡಿಜಿಟಲೀಕರಣಕ್ಕೆ ಬೆಂಬಲ ನೀಡುತ್ತದೆ. ‘‘ಐತಿಹಾಸಿಕ ಲಿಪಿಗಳಿಂದ ಆಧುನಿಕ ನೋಟದವರೆಗೆ’’ ಎಂಬ ಹೆಸರಿನ ಯೋಜನೆಯು, ‘‘ಮೋಡಿ ಟ್ರಾನ್ಸ್’’ನ್ನು ಪರಿಚಯಿಸಿದೆ. ಇದು ಈ ಮಾದರಿಯ ಮೊದಲ ದತ್ತಾಂಶ ಕೋಶವಾಗಿದೆ. ಅದರಲ್ಲಿ ಶಿವಕಾಲೀನ್, ಪೇಶ್ವಕಾಲೀನ್ ಮತ್ತು ಆಂಗ್ಲಕಾಲೀನ್ ಎಂಬ ಮೂರು ಐತಿಹಾಸಿಕ ಕಾಲಗಳ ಮೋಡಿ ಲಿಪಿ ಹಸ್ತಪ್ರತಿಗಳ 2,000ಕ್ಕೂ ಅಧಿಕ ಚಿತ್ರಗಳಿವೆ. ಜೊತೆಗೆ, ಪರಿಣತರ ಪರಿಶೀಲನೆಗೆ ಒಳಪಟ್ಟಿರುವ ದೇವನಾಗರಿ ಲಿಪ್ಯಂತರಗಳಿವೆ.
ಅಂಡಮಾನ್ ಸಹಕಾರಿ ಬ್ಯಾಂಕ್ ಹಗರಣ: ಕಾಂಗ್ರೆಸ್ ನ ಮಾಜಿ ಸಂಸದ ಬಂಧನ
ಪೋರ್ಟ್ಬ್ಲೇರ್, ಜು. 18: ಅಂಡಮಾನ್ ಮತ್ತು ನಿಕೋಬಾರ್ ರಾಜ್ಯ ಸಹಕಾರಿ ಬ್ಯಾಂಕ್ ನಿಯಮಿತ (ಎಎನ್ಎಸ್ಸಿಬಿಎಲ್)ದ ಸಾಲ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಶುಕ್ರವಾರ ಕಾಂಗ್ರೆಸ್ ನ ಮಾಜಿ ಸಂಸದ ಕುಲದೀಪ್ ರೈ ಶರ್ಮಾರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದರು. ಹಿಂದೆ ಎಎನ್ಎಸ್ಸಿಬಿಎಲ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶರ್ಮಾರನ್ನು ಪೋರ್ಟ್ ಬ್ಲೇರ್ ನ ಖಾಸಗಿ ಆಸ್ಪತ್ರೆಯೊಂದರಿಂದ ಬಂಧಿಸಲಾಯಿತು. ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ. ಎಎನ್ಎಸ್ಸಿಬಿಎಲ್ ಹಗರಣದಲ್ಲಿ ಶರ್ಮಾರನ್ನು ಬಂಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಮತ್ತು ಆರ್ಎಸ್ಎಸ್ ಮಾಡಿರುವ ಪಿತೂರಿಯ ಭಾಗವಾಗಿದೆ ಎಂದು ಕಾಂಗ್ರೆಸ್ ನ ಅಂಡಮಾನ್ ಮತ್ತು ನಿಕೋಬಾರ್ ಘಟಕದ ಉಸ್ತುವಾರಿ ಮಾಣಿಕಮ್ ಟಾಗೋರ್ ಆರೋಪಿಸಿದ್ದಾರೆ. ‘‘ಇಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೊಲೀಸರು ಎಎನ್ಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಕುಲದೀಪ್ ರೈ ಶರ್ಮಾರನ್ನು ಬಂಧಿಸಿದ್ದಾರೆ. ಬಿಜೆಪಿ ನಾಯಕತ್ವ ಮತ್ತು ಆರ್ಎಸ್ಎಸ್ ನಿರಂತರವಾಗಿ ಕಾಂಗ್ರೆಸ್ ನಾಯಕತ್ವಕ್ಕೆ ಕಿರುಕುಳ ನೀಡುತ್ತಿರುವುದು ದುರದೃಷ್ಟಕರವಾಗಿದೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದರೂ ಆಗಿರುವ ಟಾಗೋರ್ ಹೇಳಿದರು.
3,000 ಅತ್ಲೀಟ್ ಗಳಿಗೆ ತಿಂಗಳಿಗೆ 50 ಸಾವಿರ ರೂ. ನೆರವು: ಅಮಿತ್ ಶಾ ಘೋಷಣೆ
ಹೊಸದಿಲ್ಲಿ, ಜು. 18: ಸುಮಾರು 3,000 ಅತ್ಲೀಟ್ ಗಳಿಗೆ ತಿಂಗಳಿಗೆ 50,000 ರೂ. ನೆರವು ನೀಡುವ ಮೂಲಕ 2036ರ ಒಲಿಂಪಿಕ್ಸ್ ಗೆ ಸರಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಮತ್ತು ಇದಕ್ಕಾಗಿ ವಿವರವಾದ ವ್ಯವಸ್ಥಿತ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. 21ನೇ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಗೇಮ್ಸ್- 2025ರಲ್ಲಿ ಭಾಗವಹಿಸಲಿರುವ ಭಾರತೀಯ ತಂಡದ ಸನ್ಮಾನ ಕಾರ್ಯಕ್ರಮ ಹೊಸದಿಲ್ಲಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಅಮಿತ್ ಶಾ, ‘‘ಸೋಲು ಮತ್ತು ಗೆಲುವು ಜೀವನದ ನಿರಂತರ ಚಕ್ರವಾಗಿದೆ. ಗೆಲ್ಲಲು ಗುರಿಯನ್ನು ನಿಗದಿಪಡಿಸುವುದು, ಗೆಲುವಿಗೆ ಯೋಜನೆಯನ್ನು ಹಾಕುವುದು ಪ್ರತಿಯೊಬ್ಬರ ಹವ್ಯಾಸವಾಗಬೇಕು ಮತ್ತು ಗೆಲ್ಲುವುದು ಒಂದು ಅಭ್ಯಾಸವಾಗಬೇಕು’’ ಎಂದು ಹೇಳಿದರು. ಕ್ರೀಡೆಯನ್ನು ಪ್ರತಿಯೊಂದು ಗ್ರಾಮಕ್ಕೆ ಒಯ್ಯಲು ಮೋದಿ ಸರಕಾರವು ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಗೃಹ ಸಚಿವರು ಹೇಳಿದರು. ‘‘ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಕಳೆದ 10 ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಅದಕ್ಕೆ ನೀಡಲಾಗುತ್ತಿರುವ ಬಜೆಟನ್ನು ಐದು ಪಟ್ಟು ಹೆಚ್ಚಿಸಲಾಗಿದೆ. ಸರಕಾರವು ಸುಮಾರು 3,000 ಅತ್ಲೀಟ್ ಗಳಿಗೆ ತಿಂಗಳಿಗೆ 50,000 ರೂ. ನೆರವು ನೀಡುವ ಮೂಲಕ 2036ರ ಒಲಿಂಪಿಕ್ಸ್ ಗೆ ಸಿದ್ಧತೆಗಳನ್ನು ನಡೆಸುತ್ತಿದೆ ಹಾಗೂ ಅದಕ್ಕಾಗಿ ವಿವರವಾದ ಯೋಜನೆಯೊಂದನ್ನು ರೂಪಿಸುತ್ತಿದೆ’’ ಎಂದು ಅವರು ನುಡಿದರು. 2036ರ ಒಲಿಂಪಿಕ್ಸ್ ನಲ್ಲಿ ಭಾರತವು ಅಗ್ರ ಐದು ಪದಕ ವಿಜೇತ ದೇಶಗಳ ಪಟ್ಟಿಯಲ್ಲಿರುತ್ತದೆ ಎಂಬ ವಿಶ್ವಾಸವನ್ನು ಅಮಿತ್ ಶಾ ವ್ಯಕ್ತಪಡಿಸಿದರು.
ಬೆಂಗಳೂರು: ಬಹುತೇಕ ಜನ ಸಾಮಾನ್ಯರ ಬದುಕಿನ ವಿಷಯದಲ್ಲಿ ಅಷ್ಟೇನು ಆಸಕ್ತಿ ವಹಿಸದೆ ಕೇವಲ ಚುನಾವಣೆ, ದೇವರು, ಧರ್ಮ ಎಂದುಕೊಂಡು ಬದುಕಿರುವ ಬಿಜೆಪಿಗರು ಇದೀಗ ಬಿಹಾರದ ಚುನಾವಣೆ ಹತ್ತಿರ ಇರುವ ಸಂದರ್ಭ ನೋಡಿಕೊಂಡು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’(ಎಸ್ಐಆರ್) ಎಂಬ ಹೊಸ ತಂತ್ರವನ್ನು ಬಳಸಲು ಆರಂಭಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಾರಿಯ ಸಮೀಕ್ಷೆಗಳು ಎನ್ಡಿಎ ಮಿತ್ರಕೂಟದ ಪಕ್ಷಗಳ ಪರವಾಗಿ ಇಲ್ಲವೆಂಬ ಸುದ್ದಿಯನ್ನು ಕೇಳಿದಾಕ್ಷಣ, ಎಚ್ಚರಿಕೆ ವಹಿಸಿರುವ ಬಿಜೆಪಿಗರು, ಮತದಾನದ ಮೇಲೆ ಪ್ರಭಾವ ಬೀರುವ ದೃಷ್ಟಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಎಂಬ ಹೊಸ ಕುತಂತ್ರವನ್ನು ಪ್ರಯೋಗ ಮಾಡುತ್ತಿದ್ದು, ಇದು ಬಿಹಾರದ ಪ್ರಜ್ಞಾವಂತರ ವಲಯದಲ್ಲಿ ಟೀಕೆಗೆ ಗುರಿಯಾಗಿದೆ ಎಂದು ಹೇಳಿದ್ದಾರೆ. ದೇಶದಾದ್ಯಂತ ಕೇವಲ ಚುನಾವಣೆ ಮಾಡುವುದೊಂದೇ ಕೆಲಸ, ಜನ ಸಾಮಾನ್ಯರು ಏನಾದರೂ ಆಗಲಿ ಎಂಬಂತೆ ಯೋಚಿಸಿ, ಅದೇ ರೀತಿಯಲ್ಲಿ ನಡೆದುಕೊಳ್ಳುವ ಬಿಜೆಪಿಗರು, ಜನಾಭಿಪ್ರಾಯವು ತಮ್ಮ ವಿರುದ್ಧ ಇದೆ ಎಂದಾಗಲೆಲ್ಲಾ ಐಟಿ, ಈಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳನ್ನು ಢಾಳಾಗಿ ಬಳಸಿಕೊಂಡಂತಹ ಉದಾಹರಣೆ ಇದೆ ಎಂದು ಮಹದೇವಪ್ಪ ತಿಳಿಸಿದ್ದಾರೆ. ಇದು ಸಾಲದು ಎಂಬಂತೆ ಆಪರೇಷನ್ ಕಮಲದಂತಹ ಕೆಟ್ಟ ಪ್ರವೃತ್ತಿಯೂ ಸಹ ಶುರುವಾಗಿದ್ದು ಇವರಿಂದಲೇ. ಇನ್ನು ಧಾರ್ಮಿಕ ಅಸಹನೆಯ ಕಾರಣದಿಂದಾಗಿ ಇವರು ಜಾರಿ ಮಾಡಲು ಹೊರಟಿದ್ದ ಸಿಎಎ ಮತ್ತು ಎನ್ಆರ್ಸಿ ಕಾಯ್ದೆಗಳೂ ಸಹ ಬಿಜೆಪಿಯ ಕೆಟ್ಟ ರಾಜಕೀಯ ತಂತ್ರಗಳ ಒಂದು ಭಾಗವೇ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾ ರಾಜಕೀಯವನ್ನು ನಡೆಸಿದ ಇವರು, ಜಮ್ಮು ಕಾಶ್ಮೀರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಉಂಟು ಮಾಡಲು ಯತ್ನಿಸಿದ್ದರು. ಇನ್ನು ಮಧ್ಯಪ್ರದೇಶದಲ್ಲಿ ಇದ್ದ ಸರಕಾರವನ್ನು ಕೆಡವಿದ್ದ ಇವರು, ಗುಜರಾತ್ ನಲ್ಲಿ ಬಲವಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಮಿಷ ಒಡ್ಡಿ, ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಚುನಾವಣೆಗಳನ್ನು ನಡೆಸಿದರು. ಕರ್ನಾಟಕದಲ್ಲಿಯೂ ಸಹ ಇಂತಹದ್ದೇ ಪ್ರಯತ್ನಗಳನ್ನು ನಡೆಸಿದ್ದ ಇವರು ಜನಾಭಿಪ್ರಾಯದ ಎದುರು ತಲೆಬಾಗಿದ್ದನ್ನು ನಾವೆಲ್ಲರೂ ಕಂಡಿದ್ದೇವೆ ಎಂದು ಮಹದೇವಪ್ಪ ತಿಳಿಸಿದ್ದಾರೆ. ಈ ಸದ್ಯ ಬಹು ಚರ್ಚಿತ ವಿಷಯವಾಗಿರುವ ಬಿಹಾರ ಚುನಾವಣೆ ಹೊತ್ತಿನಲ್ಲಿ ಆಗುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ’ಯನ್ನು ಬಿಜೆಪಿಗರ ಚುನಾವಣಾ ಕುತಂತ್ರದ ಭಾಗವೆಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಪರಿಷ್ಕರಣೆ ನೆಪದಲ್ಲಿ ಪ್ರಾಂತ್ಯವಾರು ತಮ್ಮ ಅನುಕೂಲಕ್ಕೆ ತಕ್ಕಂತೆ ಮತದಾರರನ್ನು ಹೊರಗಿಡುವ ಸಂಚು ಮಾಡುತ್ತಿರುವ ಇವರು ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎನ್ನುವ ಬದಲು ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಇದ್ದಾರೆಯೇ? ಎಂದು ಹೇಳುತ್ತಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮೂಲ ಮತದಾರರೆಲ್ಲರಿಗೂ ಎಣಿಕೆ ಪತ್ರವನ್ನು ತುಂಬಲು ಸೂಚಿಸಲಾಗಿದ್ದು ಇದೇ ಮೊದಲು ಇಂತಹ ಬೆಳವಣಿಗೆ ಬಿಹಾರದಲ್ಲಿ ನಡೆಯುತ್ತಿದ್ದು, ಎಲ್ಲರ ಅನುಮಾನಗಳಿಗೆ ಕಾರಣವಾಗಿದೆ. ಚುನಾವಣಾ ಗೆಲುವಿನ ದೃಷ್ಟಿಯಿಂದ ಬಿಜೆಪಿಗರು ತಾವು ಎಲ್ಲೆಲ್ಲಿ ದುರ್ಬಲರಾಗಿದ್ದಾರೋ ಅಲ್ಲೆಲ್ಲಾ ಇಂತಹ ಕೆಟ್ಟ ನೀತಿಯನ್ನು ಅನುಸರಿಸುವುದು ವಾಡಿಕೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೆಟ್ಟ ನೀತಿಗಳು ಸಾರ್ವಜನಿಕ ಅಭಿಪ್ರಾಯವನ್ನು ಅಗೌರವಿಸುವಂತಹ ಸಂಗತಿಯಾಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ. ಒಂದು ವ್ಯಕ್ತಿ, ಒಂದು ಮೌಲ್ಯ ಎಂದು ಹೇಳಿದ, ಬಾಬಾ ಸಾಹೇಬರು ಕೇವಲ ಚುನಾವಣಾ ಮತದ ಮೌಲ್ಯವನ್ನು ಮಾತ್ರವೇ ನಮಗೆ ಹೇಳಿಲ್ಲ. ಬದಲಿಗೆ ವ್ಯಕ್ತಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯದ ಕುರಿತಾಗಿ ಅವರು ಹೇಳಿದ್ದಾರೆ. ಪ್ರಜಾಪ್ರಭುತ್ವವನ್ನು ನಿರ್ಧರಿಸುವ ಒಂದು ಮತದ ಮೌಲ್ಯದಿಂದ ಸಾಮಾಜಿಕ ಐಕ್ಯತೆ ಮತ್ತು ರಾಜಕೀಯ ಸ್ವಾತಂತ್ರ್ಯ ಮೂಡಿ ಬರಬೇಕೆಂಬುದು ಬಾಬಾ ಸಾಹೇಬರ ಮೂಲ ಆಶಯ. ಆದರೆ ಮತದಾನ ವ್ಯವಸ್ಥೆಯನ್ನು ಭ್ರಷ್ಟಗೊಳಿಸಲು ಹೊರಟಿರುವ ಬಿಜೆಪಿಗರ ಈ ಪ್ರಯತ್ನಗಳು ನಿಜಕ್ಕೂ ಬಾಬಾ ಸಾಹೇಬರ ಕಲ್ಪನೆಯ ಐಕ್ಯತೆ ಮತ್ತು ಸ್ವಾತಂತ್ರ್ಯದ ಕಲ್ಪನೆಗೆ ವಿರುದ್ಧವಾಗಿದ್ದು ಇದು ದೇಶವನ್ನು ಆಂತರಿಕವಾಗಿ ದುಸ್ಥಿತಿಗೆ ತಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಿಹಾರದಲ್ಲಿ ಆಗುತ್ತಿರುವ ಮತದಾನ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಮತ್ತು ಪ್ರಜ್ಞಾವಂತ ಮನಸ್ಸುಗಳೂ ಇದರ ವಿರುದ್ಧ ದನಿಯಾಗಬೇಕೆಂದು ಕೋರುತ್ತೇನೆ ಎಂದು ಮಹದೇವಪ್ಪ ಮನವಿ ಮಾಡಿದ್ದಾರೆ.
ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಜೀವ ಬೆದರಿಕೆ ಆರೋಪ: ಪ್ರಕರಣ ದಾಖಲು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಬಂದಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಬೈನ 76 ವರ್ಷದ ವಿನಿತ ಕಜೇರಿಯಾ ಎಂಬಾತನ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೂ.24ರಂದು ಅನಂತ್ ಕುಮಾರ್ ಹೆಗಡೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಬಂದಿತ್ತು. ಈ ಸಂದೇಶದ ಕುರಿತು ನ್ಯಾಯಾಲಯದ ಅನುಮತಿ ಪಡೆದ ನಂತರ, ಜು.18ರಂದು ಸುರೇಶ್ ಶೆಟ್ಟಿ ಅವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ವಿನಿತ ಕಜೇರಿಯಾ ಎಂಬಾತನನ್ನು ಗುರುತಿಸಲಾಗಿದ್ದು, ಈತನಿಂದ ಬಂದ ಬೆದರಿಕೆಯ ಇ-ಮೇಲ್ನ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಡಾಬಸ್ಪೇಟೆಯಲ್ಲಿ ಕಾರು ಓವರ್ಟೇಕ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಗಡೆ ಮತ್ತು ಅವರ ಬೆಂಬಲಿಗರ ವಿರುದ್ಧ ಹಲ್ಲೆ ಆರೋಪದಡಿ ದೂರು ದಾಖಲಾಗಿತ್ತು. ಸೈಫ್ ಖಾನ್ ಎಂಬವರು ದೂರು ನೀಡಿದ್ದು, ಹೆಗಡೆ ಅವರ ಗನ್ಮ್ಯಾನ್ ಶ್ರೀಧರ್ ಮತ್ತು ಚಾಲಕ ಮಹೇಶ್ನನ್ನು ಪೊಲೀಸರು ಬಂಧಿಸಿ ದ್ದರು. ಈ ಪ್ರಕರಣದಲ್ಲಿ ಹೆಗಡೆ ಅವರಿಗೆ ನೋಟಿಸ್ ಜಾರಿಯಾಗಿತ್ತು ಮತ್ತು ಜು.7ರಂದು ಅವರು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ತನಿಖೆಯನ್ನು ತೀವ್ರಗೊಳಿಸಲಾ ಗಿದೆ. ಆರೋಪಿ ವಿನಿತ ಕಜೇರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ (BNS) ಸೂಕ್ತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
ಜಾಮೀನು ಅರ್ಜಿ | ಆರೋಪಿಯ ಕ್ರಿಮಿನಲ್ ಪೂರ್ವಾಪರಗಳ ಬಹಿರಂಗಕ್ಕೆ ಹೈಕೋರ್ಟ್ಗಳಿಗೆ ಸುಪ್ರೀಂ ಸೂಚನೆ
ಹೊಸದಿಲ್ಲಿ,ಜು.18: ಜಾಮೀನು ಅರ್ಜಿಗಳಲ್ಲಿ ಕ್ರಿಮಿನಲ್ ಪೂರ್ವಾಪರಗಳನ್ನು ಬಹಿರಂಗಗೊಳಿಸುವಂತೆ ಆರೋಪಿಗೆ ನಿರ್ದೇಶನವನ್ನು ತಾನು ಹೊರಡಿಸಿರುವ ನಿಯಮಗಳಲ್ಲಿ ಸೇರಿಸಿಕೊಳ್ಳುವುದನ್ನು ಪರಿಗಣಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಎಲ್ಲ ಉಚ್ಚ ನ್ಯಾಯಾಲಯಗಳಿಗೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್,ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಧೀಶರ ವಿರುದ್ಧ ರಾಜಸ್ಥಾನ ಉಚ್ಚ ನ್ಯಾಯಾಲಯದ ಕಟ್ಟುನಿಟ್ಟಿನ ಕ್ರಮಗಳನ್ನು ಅನಗತ್ಯವೆಂದು ತೆಗೆದುಹಾಕಿದ ಸಂದರ್ಭದಲ್ಲಿ ಈ ಆದೇಶವನ್ನು ಹೊರಡಿಸಿತು. ‘ದೇಶದ ಪ್ರತಿಯೊಂದೂ ಉಚ್ಚ ನ್ಯಾಯಾಲಯವು ತನ್ನ ನಿಯಮಗಳಲ್ಲಿ ಮತ್ತು/ಅಥವಾ ಕ್ರಿಮಿನಲ್ ಪಾರ್ಶ್ವ ನಿಯಮಗಳಲ್ಲಿ ಇಂತಹುದೇ ನಿಬಂಧನೆಯನ್ನು ಸೇರಿಸಿಕೊಳ್ಳುವುದನ್ನು ಪರಿಗಣಿಸಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಏಕೆಂದರೆ ಅದು ಆರೋಪಿಯು ಹಿಂದೆ ದಾಖಲಾಗಿದ್ದ ಯಾವುದೇ ಇತರ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದನೇ/ಳೇ ಎನ್ನುವುದನ್ನು ಬಹಿರಂಗಗೊಳಿಸುವ ಬಾಧ್ಯತೆಯನ್ನು ವಿಧಿಸುತ್ತದೆ’ ಎಂದು ಪೀಠವು ಹೇಳಿತು. ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ತನ್ನ ನಿಯಮಗಳಲ್ಲಿ ಇಂತಹ ನಿಬಂಧನೆಯನ್ನು ಹೊಂದಿರುವುದನ್ನು ಸರ್ವೋಚ್ಚ ನ್ಯಾಯಾಲಯವು ಉಲ್ಲೇಖಿಸಿತು.
ಕಾಂಗ್ರೆಸ್ ನಾಯಕತ್ವ ಖಂಡಿಸಿ INDIA ತೊರೆದ ಆಪ್; ಬಿಹಾರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇವೆ: ಸಂಜಯ್ ಸಿಂಗ್
ಆಮ್ ಆದ್ಮಿ ಪಕ್ಷವು ಐಎನ್ಡಿಐಎ ಒಕ್ಕೂಟದಿಂದ ಹೊರಬಂದಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮಾತ್ರ ಈ ಮೈತ್ರಿ ಸೀಮಿತವಾಗಿತ್ತು. ದಿಲ್ಲಿ, ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಆಪ್ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ವಿಫಲವಾಗಿದೆ ಎಂದು ಸಂಜಯ್ ಸಿಂಗ್ ಟೀಕಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಐಎನ್ಡಿಐಎ ನಾಯಕರ ಸಭೆ ನಡೆಯಲಿದೆ. ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.
ಮಾದಕ ವಸ್ತು ಸೇವನೆ ಪ್ರಕರಣ: ಆರೋಪಿ ಸೆರೆ
ಮಂಗಳೂರು, ಜು.18: ನಗರದ ಕಾವೂರು ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ತೋಟಬೆಂಗ್ರೆ ನಿವಾಸಿ ಸುಹಾಲ್ ಸಿ. ಪುತ್ರನ್ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜು.17ರಂದು ಸಂಜೆ 5:50ರ ವೇಳೆಗೆ ಆರೋಪಿಯು ಕಾವೂರು ಜಂಕ್ಷನ್ ಬಳಿ ಮಾದಕ ವಸ್ತು ಸೇವಿಸಿ ತಿರುಗಾಡುತ್ತಿದ್ದ ಮಾಹಿತಿಯ ಮೇರೆಗೆ ಕಾವೂರು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಮಂಗಳೂರು: ನೂತನ ಡಿಸಿಪಿ ಅಧಿಕಾರ ಸ್ವೀಕಾರ
ಮಂಗಳೂರು, ಜು.18: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಮಿಥುನ್ ಎಚ್.ಎನ್. ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಮಿಥುನ್ ಎಚ್.ಎನ್. ಉುಪಿ ಕರಾವಳಿ ಕಾವಲು ಪಡೆಯ ಎಸ್ಪಿಯಾಗಿದ್ದರು. ಈ ಹಿಂದೆ ಡಿಸಿಪಿಯಾಗಿದ್ದ ಸಿದ್ದಾರ್ಥ ಗೋಯಲ್ ಅವರನ್ನು ಬಾಗಲಕೋಟೆ ಎಸ್ಪಿಯಾಗಿ ನಿಯುಕ್ತಿ ಮಾಡಲಾಗಿದ. ಅವರ ಸ್ಥಾನಕ್ಕೆ ಜು.14ರಂದು ನಕ್ಸಲ್ ನಿಗ್ರಹ ಪಡೆಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಗುರುವಾರ ಈ ಆದೇಶವನ್ನು ರದ್ದು ಪಡಿಸಿ ನಕ್ಸಪ್ ನಿಗ್ರಹ ಪಡೆಯ ಹುದ್ದೆಯಲ್ಲಿ ಮುಂದುವರಿಸಿದೆ. ಮಿಥುನ್ ಅವರನ್ನು ನೇಮಕಗೊಳಿಸಿ ಸರಕಾರ ಗುರುವಾರ ಆದೇಶಿಸಿದ್ದು, ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಗೃಹ ಆರೋಗ್ಯ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು : ಸಚಿವ ಈಶ್ವರ್ ಖಂಡ್ರೆ
ಬೀದರ್ : ಮನೆ ಬಾಗಿಲಲ್ಲಿಯೇ ಆರೋಗ್ಯ ಸೇವೆ ಒದಗಿಸುವ ಗೃಹ ಆರೋಗ್ಯ ಯೋಜನೆಯು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಲ್ಲಾ ಅಸಾಂಕ್ರಮಿಕ ನಿಯಂತ್ರಣ ಕೋಶ ಇವರ ಸಹಯೋಗದಲ್ಲಿ ನಡೆದ ಗೃಹ ಆರೋಗ್ಯ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಸೇವೆ, ಮನೆ ಮನೆಗೆ ಎಂಬ ಧ್ಯೇಯದಲ್ಲಿ 14 ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಡಯಾಬಿಟಿಕ್ ಪೂಟ್, ಡಯಾಬಿಟಿಕ್ ರೆಟಿನೋಪತಿ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಸಮಸ್ಯೆ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ಧೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಧೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಲಿವರ್ ಕಾಯಿಲೆ, ರಕ್ತಹೀನತೆ ಆರೋಗ್ಯ ಸಮಸ್ಯೆಗಳು ಇರುವ 30 ವರ್ಷ ಮೇಲ್ಪಟ್ಟವರಿಗೆ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ಅನುಸರಿಸಬೇಕಾದ ವಿಧಾನದ ಬಗ್ಗೆ ಈ ಯೋಜನೆಯಿಂದ ಮನೆ ಮನೆಗೆ ಭೇಟಿ ನೀಡುವುದರ ಮೂಲಕ ಸೇವೆ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು. ನಮ್ಮ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ರೋಗಿಗಳ ನಿಯಂತ್ರಣಕ್ಕೆ ಹೆಚ್ಚು ಕ್ರಮ ಕೈಗೊಳ್ಳುತ್ತಿದೆ. ಇಂದಿನ ಪರಿಸರ ಮಾಲಿನ್ಯದಿಂದ ಆಹಾರ, ನೀರು, ಗಾಳಿ ಮಲೀನವಾಗುತ್ತಿದೆ. ಬದಲಾದ ಜೀವನ ಶೈಲಿ, ಒತ್ತಡದ ಜೀವನ ಮತ್ತು ದುಶ್ಚಟಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿ ರೋಗಿಗಳಿಗೆ ಅನುವು ಮಾಡಿಕೊಡುತ್ತಿದೆ. ನಗರೀಕರಣ ಮತ್ತು ಕೈಗಾರೀಕರಣ ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಧ್ಯಾನೇಶ್ವರ್ ನಿರಗುಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಅಹಮದುದ್ದಿನ್ ಹಾಗೂ ಜಿಲ್ಲಾ ಸರ್ವೇಕ್ಷಣಾ ಆಧಿಕಾರಿ ಶಂಕ್ರಪ್ಪಾ ಬೊಮ್ಮಾ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ, ನರ್ಸ್, ಟೆಕ್ನಿಷಿಯನ್ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ತೆರಿಗೆ ಪಾವತಿಯಲ್ಲಿ ದ.ಕ. ಜಿಲ್ಲೆಯ ಜನರ ಬದ್ಧತೆ ಶ್ಲಾಘನೀಯ: ಡಾ. ಆನಂದ್
ಮಂಗಳೂರು: ಮನೆ ತೆರಿಗೆ ಸಹಿತ ಯಾವುದೇ ಸರಕಾರಿ ಪಾವತಿಗಳನ್ನು ಬಹಳ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಪಾವತಿಸುವ ದ.ಕ.ಜಿಲ್ಲೆಯ ಜನರ ಮನೋಭಾವನೆ ಶ್ಲಾಘನೀಯ ಎಂದು ದ.ಕ.ಜಿಪಂ ನಿಕಟಪೂರ್ವ ಸಿಇಒ ಮತ್ತು ವಿಜಾಪುರ ಜಿಲ್ಲಾಧಿಕಾರಿ ಡಾ. ಕೆ. ಆನಂದ್ ಹೇಳಿದ್ದಾರೆ. ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಮತ್ತು ನೂತನ ಸಿಇಒ ಅವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸರಕಾರಿ ನೌಕರರಿಗೆ ಉತ್ತಮವಾಗಿ ಕೆಲಸ ಮಾಡುವ ವಾತಾವರಣ ಇದೆ. ಹಲವು ಇಲಾಖೆಗಳಲ್ಲಿ ಸಾಕಷ್ಟು ಸಿಬ್ಬಂದಿಯ ಕೊರತೆಯ ಮಧ್ಯೆಯೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ಡಾ. ಆನಂದ್ ಹೇಳಿದರು. ಸರಕಾರಿ ಕಚೇರಿಗೆ ಬರುವ ಸಾರ್ವಜನಿಕರ ಕೆಲಸವನ್ನು ತ್ವರಿತವಾಗಿ ಮಾಡಿಕೊಡುವುದು ಮತ್ತು ಅವರಿಗೆ ನಿಯಮದ ಬಗ್ಗೆ ಸರಳವಾಗಿ ತಿಳಿಸಿಕೊಡುವುದು ಸರಕಾರಿ ನೌಕರರ ಆದ್ಯತೆಯಾಗಬೇಕು ಎಂದು ಡಾ. ಆನಂದ್ ತಿಳಿಸಿದರು. ಜಿಪಂ ನೂತನ ಮುಖ್ಯ ಕಾರ್ಯನಿರ್ವಾಹಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಸರ್ವರ ಸಹಕಾರ ಕೋರಿದರು. ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ವರಿಷ್ಠಾಧಿಕಾರಿ ಡಾ.ಆರುಣ್ ಕೆ. ನಿರ್ಗಮಿತ ಸಿಇಒ ಅವರ ಕಾರ್ಯಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಿಸಿಪಿ ಮಿಥುನ್ ಎಚ್ಎನ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಪಿಲಿಕುಳ ಪ್ರಾಧಿಕಾರದ ಆಯುಕ್ತ ಡಾ. ಆರುಣ್ ಕುಮಾರ್ ಶೆಟ್ಟಿ, ಜಿಲ್ಲಾ ಅರೋಗ್ಯಧಿಕಾರಿ ಡಾ.ತಿಮ್ಮಯ್ಯ, ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಕುಮಾರ್, ಜಿಪಂ ಯೋಜನಾ ನಿರ್ದೇಶಕ ಜಯರಾಮ್, ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಮತ್ತಿತರರು ಶುಭ ಹಾರೈಸಿದರು. ಜಿಪಂ ಯೋಜನಾಧಿಕಾರಿ ಸಂಧ್ಯಾ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಶಕುಂತಲಾ ವಂದಿಸಿದರು.
ರೌಡಿಶೀಟರ್ ಹತ್ಯೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಣೆ
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ, ಕೆಆರ್ ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಬಂಧಿಸದಂತೆ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ ಕಾನೂನು ಪ್ರಕಾರ ತನಿಖೆ ನಡೆಸುವಂತೆ ಹೈಕೋರ್ಟ್ ತನಿಖಾಧಿಕಾರಿಗಳಿಗೆ ಅನುಮತಿ ನೀಡಿದೆ. ರೌಡಿಶೀಟರ್ ಶಿವಪ್ರಕಾಶ್ ಕೊಲೆ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ವಿಚಾರಣೆಗೆ ಹಾಜರಾಗುವಂತೆ ಜಾರಿ ಮಾಡಿದ್ದ ನೋಟಿಸ್ ರದ್ದು ಕೋರಿ ಬಿಜೆಪಿ ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಮೇಲಿನ ಆದೇಶ ನೀಡಿದೆ. ಅರ್ಜಿದಾರರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 35(3)ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಅದರಂತೆ ವಿಚಾರಣೆ ನಡೆಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಬಜ್ಪೆ: ಹಣ ಪಡೆದು ವಂಚಿಸಿದ ಆರೋಪ; ದಂಪತಿಯ ವಿರುದ್ಧ ಪ್ರಕರಣ ದಾಖಲು
ಬಜ್ಪೆ: ವಿದೇಶಕ್ಕೆ ಹೋಗಲು ವಿಸಾ ವ್ಯವಸ್ಥೆ ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ದಂಪತಿಯ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಮಂಗಳೂರು ಶಿವಭಾಗ್ ಕದ್ರಿ 4ನೇ ರಿಂಗ್ ಕ್ರಾಸ್ ನಿವಾಸಿಗಳಾದ ಮರಿಯಾ ಜೋಸೆಫ್(54) ಮತ್ತು ಅವರ ಗಂಡ ಜೋಸೆಫ್ (59 ) ತಿಳಿದು ಬಂದಿದೆ. ಬಜ್ಪೆ ನಿವಾಸಿಯಾಗಿರುವ ವಿರಾಜ್ ಎಂಬವರು ಉರ್ವಾದಲ್ಲಿ ಪಿ.ಜಿ ನಡೆಸುತ್ತಿದ್ದರು. ಮರಿಯ ಜೋಸೆಫ್ ಮತ್ತು ಅವರ ಗಂಡ ಜೋಸೆಫ್ ತರಕಾರಿ ಖರೀದಿಸಲು ಬರುತ್ತಿದ್ದರು. ಅಂಗಡಿಯಲ್ಲಿ ವಿರಾಜ್ ಅವರ ಮಗ ಆಶಿಶ್ ಎಂ.ಆರ್.ನನ್ನು ಕಂಡು ಆತನಿಗೆ ವಿಸಾ ಕೊಡಿಸುವುದಾಗಿ ತಿಳಿಸಿದ್ದರು. ವಿಸಾ ಹೊಂದಿಸಲು ಹಣ ಬೇಕಾಗಿದೆ ಎಂದು 2024 ಆಗಸ್ಟ್ ನಿಂದ 2024ರ ಸೆಪ್ಟಂಬರ್ ನಡುವೆ ಸುಮಾರು 1.97 ಲಕ್ಷ ರೂ. ನೀಡಿದ್ದು, ಜೋಸೆಫ್ ದಂಪತಿ ಈ ವರೆಗೆ ವಿಸಾವನ್ನೂ ಹೊಂದಿಸದೇ ಹಣವನ್ನೂ ಹಿಂದಿರುಗಿಸದೇ ವಂಚಿಸುತ್ತಿದ್ದಾರೆ ಎಂದು ವಿರಾಜ್ ಅವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರು ಆಧರಿಸಿ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೀದರ್ | ನಿಗಧಿತ ಅವಧಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಪೂರ್ಣಗೊಳಿಸಿ : ಸಿಇಓ ಡಾ.ಗಿರೀಶ್ ಬದೋಲೆ
ಬೀದರ್ : ಬಸವಕಲ್ಯಾಣ ತಾಲ್ಲೂಕಿನ ಹಣಮಂತವಾಡಿ (ಆರ್) ಗ್ರಾಮದ SETTING UP OF 3KLD FAECAL SLUDGE TREATMENT PLANT IN ಕಾಮಗಾರಿಯ ಸ್ಥಳ ಪರಿಶೀಲಿಸಿ ಕೂಡಲೆ ಅಂದಾಜು ಪತ್ರಿಕೆಯಂತೆ ಕಾಮಗಾರಿ ಪ್ರಾರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಬಸವಕಲ್ಯಾಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಸೂಚಿಸಿದರು. ಇಂದು ಬಸವಕಲ್ಯಾಣ ತಾಲ್ಲೂಕಿನ ಹಣಮಂತವಾಡಿ (ಆರ್), ಮಲ್ಲಿಕಾರ್ಜುನ್ ವಾಡಿ ಹಾಗೂ ಹುಲಸೂರ್ ತಾಲ್ಲೂಕಿನ ಗೋರ್ಟಾ (ಬಿ) ಗ್ರಾಮಗಳ ಜಲ ಜಿವನ ಮೀಷನ್ ಕಾಮಗಾರಿಗಳ ಪರಿವೀಕ್ಷಣೆ ಮಾಡಿ ಅವರು ಮಾತನಾಡಿದರು. ಮಲ್ಲಿಕಾರ್ಜುನ್ ವಾಡಿ ಗ್ರಾಮದ ಜಲ ಜಿವನ ಮೀಷನ್ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿಯು ಈಗಾಗಲೇ ಹರ ಘರ ಜಲ್ ಗ್ರಾಮವೆಂದು ಘೋಷಿಸಿ, ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗಿದೆ. ಕಾಮಗಾರಿಯ ಕಾರ್ಯಾಚರಣೆ ಮತ್ತು ನಿರ್ವಹಣೆಯು ಗ್ರಾಮ ಪಂಚಾಯತಿಯಿಂದ ನಿರ್ವಹಿಸಬೇಕಾಗಿದೆ. ಆದ್ದರಿಂದ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯು ಸಕ್ರಿಯಗೊಂಡು, ನಿಗದಿತ ಸಮಯಕ್ಕೆ ಸಭೆಗಳನ್ನು ಜರುಗಿಸಿ, ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯು ಉತ್ತಮ ರಿತಿಯಲ್ಲಿ ನಿರ್ವಹಿಸಬೇಕು ಎಂದು ಸಮಿತಿಯ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ತಿಳಿ ಹೇಳಿದರು. ಈ ಸಂದರ್ಭದಲ್ಲಿ ಬಸವಕಲ್ಯಾಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಶುಲ್ಟಿ ಹಾಗೂ ಬಸವಕಲ್ಯಾಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವರಾಜ್ ಪಲ್ಲೇರಿ ಸೇರಿದಂತೆ ಜಿಲ್ಲಾ ಯೋಜನಾ ವ್ಯವಸ್ಥಾಪಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ಶಾಖಾಧಿಕಾರಿ, ಹಣಮಂತವಾಡಿ (ಆರ್), ಮಲ್ಲಿಕಾರ್ಜುನ್ ವಾಡಿ ಹಾಗೂ ಗೋರ್ಟಾ (ಬಿ) ಗ್ರಾಮಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಇತರರು ಉಪಸ್ಥಿತರಿದ್ದರು.
ಜು.19: ದ.ಕ.ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ
ಮಂಗಳೂರು,ಜು.19:ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದ್ದು, ಹಲವೆಡೆ ಮನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.ಜು.19ರಂದು ದ.ಕ.ಜಿಲ್ಲೆಗೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಗುರುವಾರ ರಾತ್ರಿಯಿಂದ ಶುಕ್ರವಾರ ರಾತ್ರಿಯವರೆಗೆ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಿರಂತರ ಮಳೆಯಾಗಿದೆ. ಅಲ್ಲದೆ ಜಿಲ್ಲೆಯ 7 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ನಗರದ ಅಡು ಮರೋಳಿ ಶೋಭಾ ಶೆಟ್ಟಿ ಎಂಬವರ ಮನೆಯ ಎತ್ತರದ ಕಾಂಪೌಂಡ್ ಕುಸಿದು ಅಪಾರ ನಷ್ಟ ಉಟಾಗಿದೆ. ಆಸುಪಾಸಿನ ಮೂರ್ನಾಲ್ಕು ಮನೆಗಳ ಹಿಂಬದಿಯ ಗುಡ್ಡ ಕುಸಿದಿದ್ದು ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಶಾಸಕ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರದ 45ನೇ ಪೋರ್ಟ್ ವಾರ್ಡಿನ ಪಾಂಡೇಶ್ವರ ನ್ಯೂ ರೋಡ್ನಲ್ಲಿ ನಿರಂತರ ಮಳೆಯಿಂದಾಗಿ ಮನೆ ಹಾಗೂ ತಡೆಗೋಡೆಗೆ ಹಾನಿಯಾಗಿದೆ. ಮಾಜಿ ಕಾರ್ಪೊರೇಟರ್ ಲತೀಫ್ ಕಂದಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. *ದ.ಕ ಜಿಲ್ಲೆಯಲ್ಲಿ ಗರಿಷ್ಠ 30.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 35 ಕಿ.ಮೀ ನಿಂದ 40ಕಿ.ಮೀ.ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಈ ಹಣವನ್ನು ಹಂಚಿಕೆ ಮಾಡಲಾಗುವುದು. ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರ ನೀಡಬೇಕು ಎಂದು ಸೂಚಿಸಲಾಗಿದೆ. ಅನುದಾನ ಬಿಡುಗಡೆಗೆ ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದರು. ಜುಲೈ 30 ಮತ್ತು 31 ರಂದು ಜಿಲ್ಲಾವಾರು ಸಭೆ ನಡೆಯಲಿದೆ.
ಕಲಬುರಗಿ | ದಲಿತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದು ಖಂಡನಿಯ : ಸಿದ್ದು ಕೆರೂರ್
ಕಲಬುರಗಿ: ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ವಿದೇಶಿ ಬಂಡವಾಳಗಾರರಿಗೆ ಬಳಸಿಕೊಳ್ಳುತ್ತಿರುವುದು ದಲಿತರನ್ನು ಸಂಪೂರ್ಣವಾಗಿ ಭೂಮಿಯಿಂದ ಹೊರದಬ್ಬುವ ಕುತಂತ್ರವಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜೇವರ್ಗಿ ತಾಲ್ಲೂಕು ಸಂಚಾಲಕ ಸಿದ್ದು ಕೆರೂರ್ ಆಕ್ರೋಶ ವ್ಯಕ್ತಪಡಿಸಿದರು. ಜೇವರ್ಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದಸಂಸ ರಾಜ್ಯ ಸಮಿತಿ ಹೆಂಡ ಬೇಡ ಭೂಮಿ ಬೇಕು ಎನ್ನುವ ಘೋಷಣೆ 80ರ ದಶಕದಲ್ಲಿ ಮೊಳಗಿಸಿತ್ತು. ಅದೇ ರೀತಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು, ಅರಣ್ಯ ಭೂಮಿ/ಸಾಮಾಜಿಕ ಅರಣೀಕರಣ, ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸುವ ನೆಪವನ್ನು ಖಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪುಂಡಲಿಕ ಗಾಯಕವಾಡ, ವಿಜಯ್ ಕುಮಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಸಮಿತಿಯ ಹರಿ ಕರಕಿಹಳ್ಳಿ, ಮಾಂತೇಶ್ ದೊರೆ, ಶರಣಬಸಪ್ಪ ಲಕಣಪುರ್, ಯಶವಂತ್ ಬಡಿಗೇರ, ರೇವಣಸಿದ್ದಪ್ಪ ಬಿರಾಳ, ಶ್ರೀಮಂತ ಕಿಲೇದಾರ, ಜೈ ಭೀಮ್ ನರಬೋಳ, ಬಸವರಾಜ ವರ್ಷನಳ್ಳಿ, ಭೀರಲಿಂಗ ಕೆಲ್ಲುರ, ಹನುಮಂತ್ ಜಟ್ನಾಕರ, ಮಲ್ಲಿಕಾರ್ಜುನ್ ಧನಕರ್, ಮಡಿವಾಳ ಸಾಗರ ಲಕ್ಷಣ ಡೊಳ್ಳೆ, ಸಾಯಬಣ್ಣ ಹರನಾಳ, ಸಿದ್ದಣ್ಣ ಹಂಚಿನಾಳ, ಶಂಕ್ರಪ್ಪ ಅಂಬರಖೆಡ, ಚಂದ್ರಶೇಖರ ಅಂಬರಾಖೇಡ, ಬಸವರಾಜ ನೆದಲಗಿ, ಕುಮಣ್ಣ ನೆದಲಗಿ, ಅಮೋಘಸಿದ್ದ ವರ್ಚನಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಆಡಳಿತ-ಪ್ರತಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು; ಆಗಸ್ಟ್ 11ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ರಾಜ್ಯ ವಿಧಾನ ಮಂಡಲ ಉಭಯ ಸದನಗಳ ಮಹತ್ವದ ‘ಮುಂಗಾರು ಅಧಿವೇಶನ’ವು ಆಗಸ್ಟ್ 11ರಿಂದ 22ರ ವರೆಗೆ ನಡೆಯಲಿದೆ. ಶುಕ್ರವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ಸಂಬಂಧ ರಾಜ್ಯಪತ್ರವನ್ನು ಪ್ರಕಟಿಸಿದ್ದು, ಆಗಸ್ಟ್ 11ರ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಸಮಾವೇಶಗೊಳ್ಳಲಿದೆ ಎಂದು ಆದೇಶ ಹೊರಡಿಸಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಶನಿವಾರ ಮತ್ತು ರವಿವಾರ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು 9 ದಿನಗಳ ಕಾಲ ಅಧಿವೇಶನ ಕಲಾಪ ಜರುಗಲಿದ್ದು, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ, ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ. ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ, ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ, ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್, ಅಧಿಕಾರಿಯೊಬ್ಬರ ಮೇಲೆ ಸಿಎಂ ಕೈ ಎತ್ತಿದ ಪ್ರಕರಣ, ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಶಾಸಕರ ಸಭೆ, ಅಧಿಕಾರ ಹಂಚಿಕೆ ವಿಚಾರವು ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಟಾನದ ಉಮೇದಿನಲ್ಲಿರುವ ರಾಜ್ಯ ಸರಕಾರ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಲು ಸನ್ನದ್ಧವಾಗಿದೆ. ಪರಿಷತ್ ಸದಸ್ಯ ರವಿಕುಮಾರ್ ರಿಂದ ಮುಖ್ಯ ಕಾರ್ಯದರ್ಶಿ, ಕಲಬುರಗಿ ಜಿಲ್ಲಾಧಿಕಾರಿ ವಿರುದ್ದ ಅವಹೇಳನಕಾರಿ ಪದಗಳ ಬಳಕೆ ಸಹಿತ ಇನ್ನಿತರ ಸಂಗತಿಗಳನ್ನು ಪ್ರಸ್ತಾಪಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜುಗೊಂಡಿದ್ದು, ಮುಂಗಾರು ಅಧಿವೇಶನ ತೀವ್ರ ಕುತೂಹಲ ಸೃಷ್ಟಿಸಿದೆ.
ಕಲಬುರಗಿ | ವಿದ್ಯಾರ್ಥಿನಿಯರು ಉತ್ತಮ ಗುರಿ ಮೂಲಕ ಸಾಧನೆ ಮಾಡಬೇಕು : ಡಾ. ಜಗದೇವಿ
ಕಲಬುರಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಉತ್ತಮ ಗುರಿ ಮೂಲಕ ಸಾಧನೆ ಸಾಧ್ಯವಿದೆ ಎಂದು ಯಾದಗಿರಿ ಇಎಸ್ಐ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಜಗದೇವಿ ವಿ. ಜ್ಯೋತಿ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಅಂತಿಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಇಂದು ಸಾಕಷ್ಟು ಜವಾಬ್ದಾರಿಗಳಿವೆ. ಕೌಟಂಬಿಕ ನಿರ್ವಹಣೆ ಜೊತೆಗೆ ಸಮಾಜವನ್ನು ಮಾನವೀಯ ಮೌಲ್ಯಗಳ ಮೇಲೆ ಕಟ್ಟುವ ಬಹುದೊಡ್ಡ ಜವಾಬ್ದಾರಿಗಳಿವೆ ಎಂದರು. ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ವಿಭಾಗದ ಸಂಯೋಜಕರಾದ ಜ್ಯೋತಿ ಕೆ., ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಪ್ರಕಾಶ್ ಎಂ.ಬಡಿಗೇರ್ ಮಾತನಾಡಿದರು. ಎಂ.ಎ. ಇತಿಹಾಸ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಶ್ವೇತಾ ಹಾಗೂ ಭಾಗ್ಯಲಕ್ಷ್ಮೀ ಅನಿಸಿಕೆ ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಎಲ್ಲಾ ಶಿಕ್ಷಕರ ಸಲಹೆ ಸೂಚನೆಗಳನ್ನು ಪಡೆದು ಭವಿಷ್ಯ ರೂಪಿಸಿಕೊಂಡು ಕಾಲೇಜಿಗೆ ಕೀರ್ತಿ ತರಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ.ಸುರೇಶ ಬಡಿಗೇರ್, ಡಾ.ಸೂರ್ಯಕಾಂತ ಸೊನ್ನದ, ಡಾ.ಪ್ರಕಾಶ ಪಾಟೀಲ, ಡಾ.ಚಂದ್ರಶೇಖರ್, ಅಣವೀರಪ್ಪ ಬೋಳೆವಾಡ ಹಾಗೂ ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಉಡುಪಿ ಜಿಲ್ಲೆಯಾದ್ಯಂತ ಗಾಳಿಮಳೆಗೆ ಐದು ಮನೆಗಳಿಗೆ ಹಾನಿ
ಉಡುಪಿ, ಜು.18: ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರವೂ ಭಾರೀ ಮಳೆಯಾಗಿದ್ದು, ಗಾಳಿಮಳೆಗೆ ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಕಾರ್ಕಳ- 33.5ಮಿ.ಮೀ., ಕುಂದಾಪುರ- 21.4ಮಿ.ಮೀ., ಉಡುಪಿ- 33.6ಮಿ.ಮೀ., ಬೈಂದೂರು- 25.2ಮಿ.ಮೀ., ಬ್ರಹ್ಮಾವರ- 25.8ಮಿ.ಮೀ., ಕಾಪು- 34.3ಮಿ.ಮೀ., ಹೆಬ್ರಿ-16.1ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 26.0ಮಿ.ಮೀ. ಮಳೆಯಾಗಿದೆ. ಬ್ರಹ್ಮಾವರ ತಾಲೂಕು ಕಾರ್ಕಡ ಗ್ರಾಮದ ರತ್ನ ಆಚಾರ್ತಿ ಅವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿ 20,000ರೂ., ಚಾಂತಾರು ಗ್ರಾಮದ ಜ್ಯೋತಿ ದೇವಾಡಿಗ ಅವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 15,000ರೂ. ನಷ್ಟ ಉಂಟಾಗಿದೆ. ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಗಾಯತ್ರಿ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 40,000ರೂ., ಕಂದಾವರ ಗ್ರಾಮದ ಅಕ್ಕಮ್ಮ ಎಂಬವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿ 50,000ರೂ. ಕಾಪು ತಾಲೂಕು ತೆಂಕ ಗ್ರಾಮದ ಅಬ್ದುಲ್ ಶರೀಫ್ ಇವರ ಮನೆ ಮಳೆಯಿಂದ ಭಾಗಶಃ ಹಾನಿಯಾಗಿ 100,000ರೂ. ನಷ್ಟವಾಗಿದೆ.
ಕಲಬುರಗಿ | ಜಿಲ್ಲಾಧಿಕಾರಿಗಳಿಂದ “ಯುವನಿಧಿ ಯೋಜನೆಯ ನೋಂದಣಿ ಅಭಿಯಾನ”ಕ್ಕೆ ಚಾಲನೆ
ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯಡಿ ಅರ್ಹ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ಅಭಿಯಾನಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಿದರು. ಈ ಯೋಜನೆಯಡಿ 2023-24 ಮತ್ತು 2024-25ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಪಾಸಾದ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅರ್ಹ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೋಮಾದಾರರಿಗೆ 1,500 ರೂ.ಗಳ ನಿರುದ್ಯೋಗಿ ಭತ್ಯೆಯನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ನೇರವಾಗಿ ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ದಲ್ಲಿ ನೋಂದಾಯಿಸಿಕೊಳ್ಳಲು ಅಥವಾ ತಮ್ಮ ಸಮೀಪದ ಕರ್ನಾಟಕ ಓನ್/ ಗ್ರಾಮ ಓನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಹ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂರವಾಣಿ ಸಂಖ್ಯೆ 08472-274846 ಗೆ ಅಥವಾ ಈ ಕಚೇರಿಗೆ ಖುದ್ದಾಗಿ ಸಂಪರ್ಕಿಸಬೇಕು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಕೌಶಾಲಾಭಿವೃದ್ಧಿ ಅಧಿಕಾರಿ ನಾಗೂಬಾಯಿ ದೊಡ್ಡಮನಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶರಣಪ್ಪ ಹಾಗೂ ಪಿಯೂಷ ಪರಿಹಾರ ಮಾದರಿ ವೃತ್ತಿ ಕೇಂದ್ರದ ಸತೀಶ ಕುಮಾರ ರಾಠೋಡ ಅವರು ಉಪಸ್ಥಿತರಿದರು.
ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ: ಕನಿಷ್ಠ 4 ಮೃತ್ಯು; 1,300 ಮಂದಿ ಸ್ಥಳಾಂತರ
ಸಿಯೋಲ್, ಜು.18: ದಕ್ಷಿಣ ಕೊರಿಯಾದಲ್ಲಿ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು 1,300ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಚುಂಗ್ಚೆವಾಂಗ್ ಪ್ರಾಂತದ ಕೆಲವು ಭಾಗಗಳಲ್ಲಿ ಬುಧವಾರದಿಂದ ಗುರುವಾರದವರೆಗೆ 16.5 ಇಂಚು ಮಳೆಯಾಗಿದೆ. ಒಸಾನ್ ನಗರದಲ್ಲಿ ರಸ್ತೆ ಮೇಲ್ಸೇತುವೆಯ ಗೋಡೆ ಕುಸಿದು ಕೆಳಗಿನ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಾಗ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ದಕ್ಷಿಣ ಪ್ರಾಂತದಲ್ಲಿ ಹಲವೆಡೆ ಪ್ರವಾಹದಿಂದಾಗಿ ಇತರ ಮೂವರು ಸಾವನ್ನಪ್ಪಿದ್ದಾರೆ. ಜಲಾವೃತಗೊಂಡ ಪ್ರದೇಶದಿಂದ 1,382 ಮಂದಿಯನ್ನು ಸ್ಥಳಾಂತರಿಸಲಾಗಿದ್ದು 46 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ | ಟಿಆರ್ಎಫ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಅಮೆರಿಕ; ಭಾರತದಿಂದ ಸ್ವಾಗತ
ಹೊಸದಿಲ್ಲಿ,ಜು.18: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತೈಬಾ(ಎಲ್ಇಟಿ)ದ ಸಂಯೋಜಿತ ಗುಂಪು ದಿ ರೆಸಿಸ್ಟನ್ಸ್ ಫ್ರಂಟ್(ಟಿಆರ್ಎಫ್)ನ್ನು ವಿದೇಶಿ ಭಯೋತ್ಪಾದಕ ಸಂಘಟನೆ(ಎಫ್ಟಿಓ) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ(ಎಸ್ಡಿಜಿಟಿ) ಎಂದು ಅಮೆರಿಕವು ಔಪಚಾರಿಕವಾಗಿ ಘೋಷಿಸಿದೆ. ಅಮೆರಿಕದ ನಿರ್ಧಾರವನ್ನು ಭಾರತವು ಸ್ವಾಗತಿಸಿದೆ. 26 ಜನರನ್ನು ಬಲಿ ತೆಗೆದುಕೊಂಡಿದ್ದ ಎ.22ರ ಭಯೋತ್ಪಾದಕ ದಾಳಿಯ ಹೊಣೆಯನ್ನು ಟಿಆರ್ಎಫ್ ವಹಿಸಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ. ‘ಟಿಆರ್ಎಫ್ನ್ನು ಎಫ್ಟಿಒ ಮತ್ತು ಎಸ್ಡಿಜಿಟಿ ಎಂದು ಘೋಷಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯ ನಿರ್ಧಾರವನ್ನು ಭಾರತ ಸರಕಾರವು ಸ್ವಾಗತಿಸುತ್ತದೆ. ಈ ವಿಷಯದಲ್ಲಿ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರ ನಾಯಕತ್ವವನ್ನು ನಾವು ಅಂಗೀಕರಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ವು ಶುಕ್ರವಾರ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ಟಿಆರ್ಎಫ್ ತಾನು ಎರಡು ಸಲ ಹೊಣೆಗಾರಿಕೆಯನ್ನು ಒಪ್ಪಿಕೊಂಡಿದ್ದ ಪಹಲ್ಗಾಮ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದನೆ ಚಟುವಟಿಕೆಗಳಿಗೆ ಕಾರಣವಾಗಿದೆ ಎಂದೂ ಎಂಇಎ ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೂ ಅಮೆರಿಕದ ನಿರ್ಧಾರವನ್ನು ಎಕ್ಸ್ ಪೋಸ್ಟ್ನಲ್ಲಿ ಪ್ರಶಂಸಿಸಿದ್ದಾರೆ. ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಕಾರ ಪಹಲ್ಗಾಮ್ ದಾಳಿಯು ಎಲ್ಇಟಿ ನಡೆಸಿದ್ದ 2008ರ ಮುಂಬೈ ದಾಳಿಗಳ ಬಳಿಕ ಭಾರತೀಯ ಪ್ರಜೆಗಳ ಮೇಲಿನ ಅತ್ಯಂತ ಮಾರಣಾಂತಿಕ ದಾಳಿಯಾಗಿತ್ತು. ತೀರ ಇತ್ತೀಚಿಗೆ 2024ರಲ್ಲಿ ಸೇರಿದಂತೆ ಭಾರತೀಯ ರಕ್ಷಣಾ ಪಡೆಗಳ ವಿರುದ್ಧ ಹಲವಾರು ದಾಳಿಗಳ ಹೊಣೆಯನ್ನೂ ಟಿಆರ್ಎಫ್ ವಹಿಸಿಕೊಂಡಿದೆ ಎಂದೂ ಅಮೆರಿಕದ ವಿದೇಶಾಂಗ ಇಲಾಖೆಯು ತಿಳಿಸಿದೆ. ►ಭಯೋತ್ಪಾದನೆಯನ್ನು ಎದುರಿಸಲು ಅಮೆರಿಕ ಬದ್ಧ:ರೂಬಿಯೊ ‘ವಿದೇಶಾಂಗ ಇಲಾಖೆಯು ತೆಗೆದುಕೊಂಡಿರುವ ಈ ಕ್ರಮಗಳು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು,ಭಯೋತ್ಪಾದನೆಯನ್ನು ಎದುರಿಸಲು ಮತ್ತು ಪಹಲ್ಗಾಮ್ ದಾಳಿಗೆ ನ್ಯಾಯಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕರೆಯನ್ನು ಜಾರಿಗೊಳಿಸಲು ಟ್ರಂಪ್ ಆಡಳಿತದ ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದು ಮಾರ್ಕೊ ರೂಬಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಕಲಂ 219 ಮತ್ತು ಕಾರ್ಯ ನಿರ್ವಾಹಕ ಆದೇಶ 13224ರ ಅನುಗುಣವಾಗಿ ಎಫ್ಟಿಒ ಮತ್ತು ಎಸ್ಡಿಜಿಟಿ ಎಂದು ಎಲ್ಇಟಿಯ ನಿಯೋಜನೆಗೆ ಟಿಆರ್ಎಫ್ ಮತ್ತು ಇತರ ಸಹವರ್ತಿ ಅಲಿಯಾಸ್ಗಳನ್ನು ಸೇರಿಸಲಾಗಿದೆ. ವಿದೇಶಾಂಗ ಇಲಾಖೆಯು ಎಲ್ಇಟಿಯ ಎಫ್ಟಿಒ ನಿಯೋಜನೆಯನ್ನು ಪುನರ್ ಪರಿಶೀಲಿಸಿದೆ ಮತ್ತು ಅದನ್ನು ಮುಂದುವರಿಸಿದೆ. ಫೆಡರಲ್ ರಿಜಿಸ್ಟರ್ ನಲ್ಲಿ ಪ್ರಕಟಗೊಂಡ ಬಳಿಕ ಎಫ್ಟಿಒ ಘೋಷಣೆಗೆ ತಿದ್ದುಪಡಿಗಳು ಜಾರಿಗೆ ಬರಲಿವೆ ಎಂದೂ ಅವರು ತಿಳಿಸಿದ್ದಾರೆ. ಅಮೆರಿಕದಲ್ಲಿಯ ಭಾರತೀಯ ರಾಯಭಾರ ಕಚೇರಿಯೂ ಹೇಳಿಕೆಯೊಂದನ್ನು ಹೊರಡಿಸಿ ಈ ಕ್ರಮವನ್ನು ಭಾರತ-ಅಮೆರಿಕ ನಡುವಿನ ಬಲವಾದ ಭಯೋತ್ಪಾದನೆ ನಿಗ್ರಹ ಸಹಕಾರದ ಇನ್ನೊಂದು ನಿದರ್ಶನವಾಗಿದೆ. ಭಯೋತ್ಪಾದನೆಗೆ ಯಾವುದೇ ಸಹಿಷ್ಣುತೆ ಇಲ್ಲ ಎಂದು ತಿಳಿಸಿದೆ.
ಉತ್ತರ ಪ್ರದೇಶದ ಬಾಗಪತ್ನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೀಷಾ ಎಂಬಾಕೆ ನೊಯ್ಡಾದ ಕುಂದನ್ ಎಂಬುವವರನ್ನು 2023ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ಪತಿ ಮತ್ತು ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಮನೀಷಾ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಅಲ್ಲದೆ, ವಿಡಿಯೊದಲ್ಲಿ ತನಗೆ ಆದ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾದಗಿರಿ | ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಕಚೇರಿಯ ಕೇಸ್ ವರ್ಕರ್
ಯಾದಗಿರಿ: ಇಲ್ಲಿನ ತಹಶೀಲ್ದಾರ್ ಕಚೇರಿಯ ಕೇಸ್ ವರ್ಕರ್ ಒಬ್ಬರು ತಹಶೀಲ್ದಾರ್ ಕಚೇರಿಯಲ್ಲಿ 50 ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದಾಗಲೇ ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರೋಪಿಯನ್ನು ವಡಗೇರಾ ತಹಶೀಲ್ದಾರ ಕಚೇರಿಯ ಕೇಸ್ ವರ್ಕರ್ ಪ್ರವೀಣಕುಮಾರ ಎಂದು ಗುರುತಿಸಲಾಗಿದೆ. ವಡಗೇರಾ ತಹಶೀಲ್ದಾರ್ ಭೂ ವ್ಯಾಜ್ಯದಲ್ಲಿ ಬಾಕಿಯಿದ್ದ ವಿವಾದ ಪ್ರಕರಣವನ್ನು ವಿಲೇವಾರಿ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಡಗೇರಾದ ಮುಹಮ್ಮದ್ ಸಲಿಂ ಮುಲ್ಲಾ ಎಂಬುವವರು ನೀಡಿದ ದೂರಿನ ಮೇಲೆ ಈ ದಾಳಿ ನಡೆದಿದ್ದು, ಲೊಕಾಯುಕ್ತ ಎಸ್ ಪಿ ಉಮೇಶ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಜೆ.ಎಚ್ ಇನಾಂದಾರ್, ಪಿಐ ಸಿದ್ದರಾಯ ಬಳೂರ್ಗಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಎಕ್ಸ್’ನಲ್ಲಿ ‘ಕರ್ನಾಟಕದ ಸುಪ್ರೀಂ ಕೋರ್ಟ್’ಖಾತೆ!
ಬೆಂಗಳೂರು, ಜು. 18: ಕರ್ನಾಟಕ ಹೈಕೋರ್ಟ್ನಲ್ಲಿ ಶುಕ್ರವಾರ ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನಿರ್ಬಂಧಿತ ಆನ್ಲೈನ್ ಚಟುವಟಿಕೆಗಳ ಅಪಾಯಗಳ ಬಗ್ಗೆ ಎಚ್ಚರಿಸಿದರು. ‘‘ಕರ್ನಾಟಕದ ಸುಪ್ರೀಂ ಕೋರ್ಟ್’’ ಎಂಬ ಹೆಸರಿನಲ್ಲಿ ನಕಲಿ ಖಾತೆಯೊಂದನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸೃಷ್ಟಿಸಲಾಗಿದೆ ಹಾಗೂ ಇದು ಪರಿಶೀಲನೆಗೂ ಒಳಪಟ್ಟಿದೆ ಎಂದು ಅವರು ಹೇಳಿದರು. ಕೇಂದ್ರ ಸರಕಾರದ ವಿರುದ್ಧ ಸಾಮಾಜಿಕ ಮಾಧ್ಯಮ ದೈತ್ಯ ‘ಎಕ್ಸ್ ಕಾರ್ಪ್’ ದಾಖಲಿಸಿದ ಪ್ರಕರಣದಲ್ಲಿ ಹಾಜರಾದ ಅವರು, ‘‘ಕರ್ನಾಟಕ ಸುಪ್ರೀಂ ಕೋರ್ಟ್’’ ಎಂಬ ಹೆಸರಿನ ನಕಲಿ ಖಾತೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಸಾರ್ವಜನಿಕರನ್ನು ತಪ್ಪುದಾರಿಗೆಳೆಯಲು ಡಿಜಿಟಲ್ ವೇದಿಕೆಗಳನ್ನು ಹೇಗೆ ಎಷ್ಟು ಸುಲಭವಾಗಿ ದುರುಪಯೋಗಪಡಿಸಬಹುದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ‘‘ಈ ಖಾತೆಯನ್ನು ನಾವು ಸೃಷ್ಟಿಸಿದ್ದೇವೆ. ಮತ್ತು ಎಕ್ಸ್ ಕಂಪೆನಿಯು ಅದರ ಪರಿಶೀಲನೆಯನ್ನೂ ಮಾಡಿದೆ. ಈಗ ನಾನು ಅದರಲ್ಲಿ ಏನು ಬೇಕಾದರೂ ಬರೆಯಬಹುದು. ಇದನ್ನು ಕರ್ನಾಟಕದ ಸುಪ್ರೀಂ ಕೋರ್ಟ್ ಹೇಳಿದೆ ಎಂಬುದಾಗಿ ಲಕ್ಷಾಂತರ ಜನರು ನಂಬುತ್ತಾರೆ’’ ಎಂದು ಮೆಹ್ತಾ ವಾದಿಸಿದರು. ಮಾಹಿತಿ ತಂತ್ರಜ್ಞಾನ ಕಾಯಿದೆಯ 79ನೇ ಪರಿಚ್ಛೇದದಡಿ ಸರಕಾರಿ ಅಧಿಕಾರಿಗಳು ಹೊರಡಿಸಿರುವ ‘ಟೇಕ್ಡೌನ್’ (ಖಾತೆಗಳನ್ನು ಅಳಿಸಿಹಾಕುವಂತೆ ಸೂಚಿಸುವ) ಆದೇಶಗಳನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಈ ನಾಟಕೀಯ ಬೆಳವಣಿಗೆ ಸಂಭವಿಸಿತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಕ್ಸ್ ಕಾರ್ಪ್ ಪರ ವಕೀಲ ಕೆ.ಜಿ. ರಾಘವನ್, ಇಂಥ ಪುರಾವೆಗಳನ್ನು ಔಪಚಾರಿಕವಾಗಿ ನ್ಯಾಯಾಲಯದ ದಾಖಲೆಗೆ ಸಲ್ಲಿಸದೆ ನೇರವಾಗಿ ನ್ಯಾಯಾಧೀಶರಿಗೆ ಸಲ್ಲಿಸುವಂತಿಲ್ಲ ಎಂದು ಹೇಳಿದರು. ‘‘ಪರಿಶೀಲನೆ ಅಥವಾ ಹಿನ್ನೆಲೆ ಇಲ್ಲದೆ ನೀವು ಇದನ್ನು ನೇರವಾಗಿ ನ್ಯಾಯಾಧೀಶರಿಗೆ ಸಲ್ಲಿಸುವಂತಿಲ್ಲ’’ ಎಂದು ಅವರು ಹೇಳಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಮ್. ನಾಗಪ್ರಸನ್ನ, ರಾಘವನ್ ರ ಆತಂಕವನ್ನು ಒಪ್ಪಿಕೊಂಡರಾದರೂ, ಸಾಲಿಸಿಟರ್ ಜನರಲ್ ಈ ವಿಷಯವನ್ನು ಉದಾಹರಣೆಯಾಗಿಯಷ್ಟೇ ನೀಡಿದರು ಎಂದು ಹೇಳಿದರು. ‘‘ಇಂಥ ನಕಲಿ ಖಾತೆಗಳನ್ನು ಸೃಷ್ಟಿಸುವುದು ತೀರಾ ಸುಲಭ ಎನ್ನುವುದಷ್ಟೇ ಅವರ ವಾದವಾಗಿತ್ತು’’ ಎಂದು ನ್ಯಾಯಾಧೀಶರು ಹೇಳಿದರು. ಬಳಿಕ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲ ರಾಘವನ್, ಈ ನಕಲಿ ಖಾತೆಯನ್ನು ಎಕ್ಸ್ ತೆಗೆದುಹಾಕಿದೆ ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದು, ಬಿಜೆಪಿ ಸರ್ಕಾರವು ಸಾರಿಗೆ ಸಂಸ್ಥೆಗಳನ್ನು 5900 ಕೋಟಿ ರೂ. ನಷ್ಟದಲ್ಲಿಟ್ಟಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ತಮ್ಮ ಸರ್ಕಾರದ ಅವಧಿಯಲ್ಲಿ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡಲಾಗುತ್ತಿತ್ತು ಮತ್ತು ಬಸ್ಸುಗಳ ಟ್ರಿಪ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಬಸ್ಸುಗಳ ಸಬ್ಸಿಡಿಯನ್ನು ಖಾಸಗಿ ಕಂಪನಿಗಳಿಗೆ ನೀಡುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ | ಶರೀರದ ಮೇಲೆಯೇ ಡೆತ್ ನೋಟ್ ಬರೆದುಕೊಂಡು ಮಹಿಳೆಯ ಆತ್ಮಹತ್ಯೆ
ಹೊಸದಿಲ್ಲಿ,ಜು.18: ಪತಿಯ ಮನೆಯಲ್ಲಿ ವರದಕ್ಷಿಣೆ ಕಿರುಕುಳವನ್ನು ಎದುರಿಸುತ್ತಿದ್ದ ಮಹಿಳೆಯೋರ್ವಳು ತನ್ನ ಶರೀರದ ಮೇಲೆ ಆತ್ಮಹತ್ಯಾ ಪತ್ರವನ್ನು ಬರೆದುಕೊಂಡು ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾಗಪತ್ನಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು,ಮನೀಷಾ(28) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯಾಗಿದ್ದಾಳೆ. ಪೆನ್ನಿನಿಂದ ತನ್ನ ತೋಳು, ಕಾಲುಗಳು ಮತ್ತು ಹೊಟ್ಟೆಯ ಮೇಲೆ ಬರೆದುಕೊಂಡಿರುವ ಟಿಪ್ಪಣಿಯಲ್ಲಿ ಆಕೆ ತನ್ನ ಪತಿ ಕುಂದನ್ ಮತ್ತು ಆತನ ಕುಟುಂಬದ ಕಿರುಕುಳದಿಂದ ತಾನು ಅನುಭವಿಸಿದ್ದ ನೋವನ್ನು ತೋಡಿಕೊಂಡಿದ್ದಾಳೆ. ತನ್ನ ಸಾವಿಗೆ ಕುಂದನ್ ಮತ್ತು ಆತನ ಕುಟುಂಬವೇ ಕಾರಣ ಎಂದು ಆಕೆ ಹೇಳಿದ್ದಾಳೆ. ತನ್ನ ಸಾವಿಗೆ ಅತ್ತೆ-ಮಾವನನ್ನು ದೂಷಿಸಿ ವೀಡಿಯೊವೊಂದನ್ನೂ ಮನೀಷಾ ಮಾಡಿದ್ದಾಳೆ. ಪೋಲಿಸರಿಗೆ ಲಭ್ಯವಾಗಿರುವ ವೀಡಿಯೊ ತುಣುಕು,ಮನೀಷಾ ಅಳುತ್ತಲೇ ತನ್ನ ಗಂಡ,ಆತನ ತಂದೆ ಮತ್ತು ತಾಯಿ ಹಾಗೂ ಸೋದರ ವರದಕ್ಷಿಣೆಗಾಗಿ ಹೇಗೆ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನುವುದನ್ನು ವಿವರಿಸಿದ್ದಾಳೆ. ಮನೀಷಾ ತಿಳಿಸಿರುವಂತೆ ಆಕೆಯ ಕುಟುಂಬವು ಮದುವೆಗಾಗಿ 20 ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದರೂ ವರದಕ್ಷಿಣೆಯಾಗಿ ಈಗಾಗಲೇ ಬುಲೆಟ್ ಬೈಕ್ ನೀಡಿದ್ದರೂ ತವರಿನಿಂದ ಕಾರು ಮತ್ತು ದೊಡ್ಡ ಮೊತ್ತದ ಹಣವನ್ನು ತರುವಂತೆ ಅವರು ಆಕೆಗೆ ಪದೇ ಪದೇ ಕಿರುಕುಳ ನೀಡುತ್ತಿದ್ದರು. ತನ್ನ ಅತ್ತೆ-ಮಾವ ತನಗೆ ಆಗಾಗ್ಗೆ ಥಳಿಸುತ್ತಿದ್ದರು ಮತ್ತು ಗರ್ಭಪಾತ ಮಾಡಿಕೊಳ್ಳುವಂತೆ ಬಲವಂತಗೊಳಿಸಿದ್ದರು ಎಂದೂ ಮನೀಷಾ ಆರೋಪಿಸಿದ್ದಾಳೆ. ವರದಕ್ಷಿಣೆ ಬೇಡಿಕೆಗೆ ತಾನು ಮಣಿಯದಿದ್ದಾಗ ಅತ್ತೆ-ಮಾವ ತನಗೆ ವಿದ್ಯುತ್ ಆಘಾತ ನೀಡಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ಮನೀಷಾ ಪತ್ರದಲ್ಲಿ ಹೇಳಿದ್ದಾಳೆ. ಮನೀಷಾ 2023ರಲ್ಲಿ ನೊಯ್ಡಾ ನಿವಾಸಿ ಕುಂದನ್ ನನ್ನು ಮದುವೆಯಾಗಿದ್ದಳು. ಕೆಲವೇ ತಿಂಗಳುಗಳಲ್ಲಿ ಅತ್ತೆ-ಮಾವ ವರದಕ್ಷಿಣೆಗಾಗಿ ಒತ್ತಾಯಿಸಲು ಆರಂಭಿಸಿದ್ದರು. ಮಾನಸಿಕ ಹಿಂಸೆ ಹೆಚ್ಚಾದಾಗ ಮನೀಷಾ ಜುಲೈ 2024ರಲ್ಲಿ ತನ್ನ ತವರುಮನೆಗೆ ಮರಳಿದ್ದಳು. ಸಾವಿಗೆ ನಾಲ್ಕು ದಿನಗಳ ಮೊದಲು ಮನೀಷಾಳ ಕುಟುಂಬವು ಆಕೆಗೆ ಪತಿಯಿಂದ ವಿಚ್ಛೇದನ ಕೊಡಿಸುವ ಬಗ್ಗೆ ಚರ್ಚೆ ಆರಂಭಿಸಿತ್ತು. ಆದರೆ ತನ್ನ ಪತಿಯ ಮನೆಯವರು ವರದಕ್ಷಿಣೆಯಾಗಿ ಪಡೆದಿದ್ದ ವಸ್ತುಗಳನ್ನು ಮರಳಿಸುವವರೆಗೂ ತಾನು ವಿಚ್ಛೇದನ ಕಾಗದಪತ್ರಗಳಿಗೆ ಸಹಿ ಹಾಕುವುದಿಲ್ಲ ಎಂದು ಮನೀಷಾ ಸ್ಪಷ್ಟ ಪಡಿಸಿದ್ದಳು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದರು. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಅಮೆರಿಕದಲ್ಲಿ ಕಳ್ಳತನ ಮಾಡಿದ ಭಾರತೀಯ ಮಹಿಳೆ | ವಿದೇಶಗಳಲ್ಲಿ ಉತ್ತಮವಾಗಿ ನಡೆದುಕೊಳ್ಳಿ: ಕೇಂದ್ರ
ಹೊಸದಿಲ್ಲಿ,ಜು.18: ತಾವಿರುವ ನೆಲದ ಕಾನೂನುಗಳನ್ನು ಪಾಲಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ವು ವಿದೇಶಗಳಲ್ಲಿಯ ಭಾರತೀಯ ಪ್ರಜೆಗಳನ್ನು ಕೇಳಿಕೊಂಡಿದೆ. ಅಮೆರಿಕದ ಮಾಲ್ ವೊಂದರಲ್ಲಿ ಹಲವಾರು ವಸ್ತುಗಳನ್ನು ಕಳವು ಮಾಡಿ ಪೋಲಿಸರ ಕೈಗೆ ಸಿಕ್ಕಿಬಿದ್ದ ಭಾರತೀಯ ಮಹಿಳೆಯ ವೀಡಿಯೊ ವೈರಲ್ ಆದ ಬೆನ್ನಿಗೇ ಸರಕಾರದ ಈ ಸಂದೇಶ ಹೊರಬಿದ್ದಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ವೈರಲ್ ಆಗಿರುವ ವೀಡಿಯೊ ಕುರಿತು ಪ್ರಶ್ನೆಗೆ ಉತ್ತರಿಸಿದ ಎಂಇಎ ವಕ್ತಾರ ರಣದೀಪ ಜೈಸ್ವಾಲ್ ಅವರು,ಯಾವುದೇ ದೇಶದಲ್ಲಿ ವಾಸವಾಗಿರುವವರು,ಅವರು ಆ ದೇಶದ ಪ್ರಜೆಯಾಗಿರಲಿ ಅಥವಾ ವಿದೇಶಿ ಪ್ರಜೆಯಾಗಿರಲಿ,ಅಲ್ಲಿಯ ಕಾನೂನುಗಳನ್ನು ಪಾಲಿಸುವುದು ಅವರ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು. ‘ನಮ್ಮ ಜನರು ವಿದೇಶಕ್ಕೆ ಹೋದಾಗಲೆಲ್ಲ,ತಮಗಾಗಿ ಒಳ್ಳೆಯ ಮತ್ತು ಧನಾತ್ಮಕ ವರ್ಚಸ್ಸನ್ನು ರೂಪಿಸಿಕೊಳ್ಳಲು ಮತ್ತು ತಮ್ಮ ಮೂಲಕ ನಮ್ಮ ದೇಶದ ಉತ್ತಮ ವರ್ಚಸ್ಸನ್ನೂ ಬಿಂಬಿಸುವಂತಾಗಲು ಆ ದೇಶದ ಕಾನೂನುಗಳನ್ನು ಗೌರವಿಸುವಂತೆ ಮತ್ತು ಪಾಲಿಸುವಂತೆ ನಾವು ಅವರನ್ನು ಯಾವಾಗಲೂ ಒತ್ತಾಯಿಸುತ್ತೇವೆ’ ಎಂದರು. ಅಮೆರಿಕ ಪ್ರವಾಸದಲ್ಲಿದ್ದ ಭಾರತೀಯ ಮಹಿಳೆ ಇಲಿನಾಯ್ಸ್ ನಲ್ಲಿಯ ಟಾರ್ಗೆಟ್ ಮಾಲ್ ನಲ್ಲಿ ಏಳು ಗಂಟೆಗೂ ಅಧಿಕ ಸಮಯ ಸುತ್ತಾಡಿ 1,300 ಡಾಲರ್ (ಸುಮಾರು 1.1 ಲಕ್ಷ ರೂಪಾಯಿ)ಮೌಲ್ಯದ ವಸ್ತುಗಳನ್ನು ಎತ್ತಿಕೊಂಡಿದ್ದಳು. ಬಳಿಕ ಹಣವನ್ನು ಪಾವತಿಸದೆ ಮಾಲ್ ನಿಂದ ಹೊರಹೋಗಲು ಪ್ರಯತ್ನಿಸಿದ್ದಳು. ಕಳೆದ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿದ್ದು, ಟಾರ್ಗೆಟ್ ಉದ್ಯೋಗಿಯೋರ್ವರು ಮಹಿಳೆಯೊಂದಿಗೆ ಜಗಳವಾಡಿದ ವೀಡಿಯೊ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ವಸ್ಯುಗಳ ಮೌಲ್ಯವನ್ನು ಪಾವತಿಸುತ್ತೇನೆ, ತನ್ನನ್ನು ಬಿಟ್ಟು ಬಿಡಿ ಎಂದು ಮಹಿಳೆ ಗೋಗರೆದಿದ್ದೂ ವೀಡಿಯೊದಲ್ಲಿ ದಾಖಲಾಗಿದೆ. ‘ನಿಮಗೆ ತೊಂದರೆ ಕೊಟ್ಟಿದ್ದಕ್ಕಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನಾನು ಈ ದೇಶದವಳಲ್ಲ, ನಾನು ಇಲ್ಲಿ ಉಳಿದುಕೊಳ್ಳುತ್ತಿಲ್ಲ’ ಎಂದು ಮಹಿಳೆ ಹೇಳಿಕೊಂಡಿದ್ದಳು. ಆಕೆಯನ್ನು ವಿಚಾರಣೆ ನಡೆಸುತ್ತಿದ್ದ ಮಹಿಳಾ ಪೋಲಿಸ್ ಅಧಿಕಾರಿ ಇದಕ್ಕೆ ಪ್ರತಿಕ್ರಿಯಿಸಿ,‘ಭಾರತದಲ್ಲಿ ವಸ್ತುಗಳನ್ನು ಕದಿಯಲು ನಿಮಗೆ ಅನುಮತಿಯಿದೆಯೇ? ನನಗೆ ಹಾಗೆ ಅನ್ನಿಸುತ್ತಿಲ್ಲ ’ಎಂದು ಹೇಳಿದ್ದರು. ಈ ನಡುವೆ ಭಾರತದಲ್ಲಿಯ ಅಮೆರಿಕದ ರಾಯಭಾರ ಕಚೇರಿಯು ವೀಸಾ ಎಚ್ಚರಿಕೆಯನ್ನು ಹೊರಡಿಸಿದ್ದು,ಅಮೆರಿಕದಲ್ಲಿ ಹಲ್ಲೆ,ಕಳ್ಳತನ ಅಥವಾ ಲೂಟಿ ಮಾಡಿದರೆ ಕಾನೂನು ಸಮಸ್ಯೆಗಳು ಎದುರಾಗುವುದು ಮಾತ್ರವಲ್ಲ,ಅದು ವೀಸಾ ರದ್ದುಗೊಳ್ಳಲೂ ಕಾರಣವಾಗಬಹುದು. ಇಂತಹ ಕೃತ್ಯಗಳಿಂದ ಭವಿಷ್ಯದಲ್ಲಿ ಯುಎಸ್ ವೀಸಾಗಳಿಗೆ ಅನರ್ಹಗೊಳ್ಳಬಹುದು ಮತ್ತು ದೇಶಕ್ಕೆ ಮರುಪ್ರವೇಶವನ್ನು ನಿರ್ಬಂಧಿಸಬಹುದು. ಅಮೆರಿಕವು ಕಾನೂನು ಮತ್ತು ಸುವ್ಯವಸ್ಥೆಯನ್ನು ಗೌರವಿಸುತ್ತದೆ ಹಾಗೂ ವಿದೇಶಿ ಸಂದರ್ಶಕರು ತನ್ನ ಎಲ್ಲ ಕಾನೂನುಗಳನ್ನು ಪಾಲಿಸಬೇಕು ಎಂದು ನಿರೀಕ್ಷಿಸುತ್ತದೆ ಎಂದು ತಿಳಿಸಿದೆ.
ಉಡುಪಿ ಟ್ರಾಫಿಕ್ ಎಸ್ಸೈ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು
ಉಡುಪಿ, ಜು.18: ನಗರದ ಕರಾವಳಿ ಬೈಪಾಸ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಜು.17ರಂದು ಬೆಳಗ್ಗೆ ನಡೆದಿದೆ. ಪೊಲೀಸ್ ಉಪನಿರೀಕ್ಷಕ ಹುಸೇನಸಾಬ ಕಾಶಿಮಸಾಬ ಚಪ್ಪರಕರ ಸಿಬ್ಬಂದಿ ಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಅಂಬಲಪಾಡಿ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಕಾರನ್ನು ಚಾಲಕ ಸೀಟ್ ಬೆಲ್ಟ್ ಧರಿಸದ ಕಾರಣ ತಡೆದು ನಿಲ್ಲಿಸಿದರು. ಚಾಲಕನ ಬಳಿ ದಾಖಲೆ ಪತ್ರ ತೋರಿಸುವಂತೆ ಹೇಳಿದಾಗ ಚಾಲಕನು ದಾಖಲಾತಿ ನೀಡದೇ ಕಾರನ್ನು ಚಲಾಯಿಸಿಕೊಂಡು ಹೋಗಲು ಮುಂದಾ ದನು. ನಂತರ ಚಾಲಕನ ದಾಖಲಾತಿ ನೋಡಿದಾಗ ಚಾಲಕನ ಹೆಸರು ಕುರಿಯನ್ ಎಂಬುದಾಗಿ ಇತ್ತು. ಆತನಿಗೆ ನೋಟೀಸ್ ನೀಡಿದಾಗ ಆತ ಸಹಿ ಮಾಡಲು ನಿರಾಕರಿಸಿ, ಪೊಲೀಸ್ ಉಪನಿರೀಕ್ಷಕರ ಕೈಯಲ್ಲಿದ್ದ ವಾಹನ ಚಾಲನ ಪ್ರಮಾಣಪತ್ರವನ್ನು ಕಿತ್ತುಕೊಳ್ಳಲು ದಾಳಿ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ | ಭತ್ತ ನಾಟಿ ಮಾಡುವ ವೇಳೆ ಮೈಮೇಲೆ ಬಿದ್ದ ವಿದ್ಯುತ್ ತಂತಿ : ಮೂವರು ಮೃತ್ಯು
ಯಾದಗಿರಿ : ಭತ್ತ ನಾಟಿ ಮಾಡುವ ವೇಳೆ ವಿದ್ಯುತ್ ವಯರ್ ತುಂಡಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಹುಣಸಗಿ ತಾಲೂಕಿನ ಅಗತಿರ್ಥ ಗ್ರಾಮದ ಭತ್ತದ ಗದ್ದೆಯಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಈರಪ್ಪ (40), ಸುರೇಶ (26), ಮೌನೇಶ್ (22) ಎಂದು ಗುರುತಿಸಲಾಗಿದೆ. ಮೃತ ದೇಹವನ್ನು ಶುಕ್ರವಾರ ಸಂಜೆ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಹಿಳೆಗೆ 11.61ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಜು.18: ಮಹಿಳೆಯೊಬ್ಬರಿಗೆ ಆನ್ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಹಾಸಿನಿ ಎಂಬವರಿಗೆ ಅಪರಿಚಿತರು ವಾಟ್ಯಾಪ್ ಮೂಲಕ ಸಂದೇಶ ಕಳುಹಿಸಿದ್ದು, ಕೆಲಸ ಹುಡುಕುವ ಬಗ್ಗೆ ಮಾಹಿತಿ ಪಡೆದಿದ್ದರು. ನಂತರದಲ್ಲಿ ಅಪರಿಚಿತರು ಟೆಲಿಗ್ರಾಂ ಗ್ರೂಪ್ಗೆ ಸೇರುವಂತೆ ಸುಹಾಸಿನಿಗೆ ಲಿಂಕ್ ಕಳುಹಿಸಿ ಕೊಟಿದ್ದರು. ಅದನ್ನು ನಂಬಿದ ಅವರು ಒಟ್ಟು 11,61,256ರೂ. ಹೂಡಿಕೆ ಮಾಡಿದ್ದು, ಬಳಿಕ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ ಲಾಭಾಂಶವನ್ನಾಗಲಿ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.
ರಾಯಚೂರು | ಕೆಡಿಪಿ ಸಭೆಯಲ್ಲಿ ರಮ್ಮಿ ಆಡಿದ ಅರಣ್ಯ ಅಧಿಕಾರಿ!
ರಾಯಚೂರು: ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಗಂಭೀರ ವಿಷಯದ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರವೀಣ ಅವರು ತಮ್ಮ ಮೊಬೈಲ್ ನಲ್ಲಿ ಆನ್ಲೈನ್ ರಮ್ಮಿ ಆಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಚಿವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅಭಿವೃದ್ಧಿಯ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ಮಾಡುವಾಗ, ಗಾಂಭೀರ್ಯತೆ ತೋರದೆ ಮೊಬೈಲ್ ನಲ್ಲಿ ರಮ್ಮಿ ಆಡುತ್ತಾ ಕಾಲಾಹರಣ ಮಾಡಿ ಅಶಿಸ್ತು ತೋರಿದ್ದಾರೆ ಎಂದು ಕೆಲ ಖಾಸಗಿ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸಭೆಯಲ್ಲಿಯೆ ಸಚಿವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಸಭಾಂಗಣದಿಂದ ಹೊರಗೆ ಕಳುಹಿಸಿದರು. ಬಳಿಕ ಅಧಿಕಾರಿ ವಿರುದ್ದ ನೋಟೀಸ್ ನೀಡಿ ಶಿಸ್ತು ಕ್ರಮ ಜರುಗಿಸಿ, ಸರಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ನೀತಿಶ್ ಕೆ. ಅವರಿಗೆ ಆದೇಶಿಸಿದರು.
Nandini Milk: ನಂದಿನಿ ಹಾಲಿನ ಪ್ಯಾಕೆಟ್ಗೆ ಹೊಸ ರೂಪ; ಏನಿದರ ವಿಶೇಷತೆ?
ಜಾಗತಿಕ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕ ಮಾತ್ರವಲ್ಲದೆ, ದೆಹಲಿ ಸೇರಿ ವಿದೇಶಗಳಲ್ಲಿ ನಂದಿನಿ ಹೆಸರುವಾಸಿಯಾಗಿದೆ. ತನ್ನ ಗುಣಮಟ್ಟದಿಂದ ನಂದಿನಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದೆ. ಇದೀಗ ನಂದಿನಿ ಹಾಲಿನ ಪ್ಯಾಕೆಟ್ ವಿಚಾರದಲ್ಲೂ ಬದಲಾವಣೆಯ ಪರ್ವ ಶುರುವಾಗಿದೆ. ಇಲ್ಲಿವರೆಗೆ ಬಳಸುತ್ತಿದ್ದ ಹಾಲಿನ ಪ್ಯಾಕೆಟ್ಗಳಿಗೆ ಗುಡ್ಬೈ ಹೇಳಲಾಗುತ್ತಿದ್ದು, ಪರಿಸರಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಈ
52 ದೇಶಗಳ ಜನರಿಗೆ ಗಲ್ಫ್ ರಾಷ್ಟ್ರದಿಂದ ಸಿಹಿಸುದ್ದಿ : ನಿಮ್ಮೂರ ಡಿಎಲ್ ಅಲ್ಲೂ ವ್ಯಾಲಿಡ್ - FAQ
UAE New rules to ease the tourist transactions : ಸಂಯುಕ್ತ ಅರಬ್ ಗಣರಾಜ್ಯ ಹೊಸ ಪದ್ದತಿಯನ್ನು ಜಾರಿಗೆ ತಂದಿದೆ. ಆ ಮೂಲಕ, ತಮ್ಮ ದೇಶಕ್ಕೆ ಬರುವ ಪ್ರವಾಸಿಗರಿಗೆ ಸುಲಭವಾಗಲಿ ಎನ್ನುವ ಕಾರಣಕ್ಕಾಗಿ ಈ ಹೊಸ ರೂಲ್ಸ್ ಅನ್ನು ಜಾರಿ ಮಾಡುತ್ತಿದೆ. 52 ದೇಶದ ಜನರು ಇದರ ಲಾಭವನ್ನು ಪಡೆಯಬಹುದಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಏರ್ ಇಂಡಿಯಾ ವಿಮಾನ ದುರಂತದ ಸಂತ್ರಸ್ತರಿಗೆ 500 ಕೋಟಿ ರೂಪಾಯಿಯ ಟ್ರಸ್ಟ್ ರಚಿಸಿದ ಟಾಟಾ ಗ್ರೂಪ್
ಹೊಸದಿಲ್ಲಿ : ಏರ್ ಇಂಡಿಯಾ ವಿಮಾನ ದುರಂತದ ಸಂತ್ರಸ್ತರಿಗಾಗಿ 500 ಕೋಟಿ ರೂಪಾಯಿಯ ಕಲ್ಯಾಣ ಟ್ರಸ್ಟ್ ರಚಿಸುವುದಾಗಿ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ಗಳು ಶುಕ್ರವಾರ ಘೋಷಿಸಿವೆ. 'AI-171 ಸ್ಮಾರಕ ಮತ್ತು ಕಲ್ಯಾಣ ಟ್ರಸ್ಟ್' ಅನ್ನು ಮುಂಬೈನಲ್ಲಿ ನೋಂದಾಯಿಸಲಾಗಿದೆ. ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ತಲಾ 250 ಕೋಟಿ ರೂ.ದೇಣಿಗೆಯನ್ನು ಈ ಟ್ರಸ್ಟ್ಗೆ ನೀಡುತ್ತಿದೆ. ಇದರಲ್ಲಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಘೋಷಿಸಿರುವ 1 ಕೋಟಿ ರೂ. ಪರಿಹಾರದ ಮೊತ್ತವು ಸೇರಿದೆ. ಅಹ್ಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ಒಂದು ತಿಂಗಳ ಬಳಿಕ ನೂತನ ಟ್ರಸ್ಟ್ ರಚಿಸಲಾಗಿದೆ. ಟ್ರಸ್ಟ್ ವಿಮಾನ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡವರ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭರಿಸಲಿದೆ. ಅದೇ ರೀತಿ ಹಾನಿಗೊಳಗಾದ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ನ ನವೀಕರಣಕ್ಕೆ ಸಹಕಾರವನ್ನು ನೀಡಲಿದೆ ಎಂದು ತಿಳಿದು ಬಂದಿದೆ.
ಕೊಡಗಿನೊಳಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ - ಲಾರಿ ಚಾಲಕರಿಂದ ತೀವ್ರ ಆಕ್ಷೇಪ
ಮಡಿಕೇರಿಯಲ್ಲಿ ಕೂರ್ಗ್ ಲಾರಿ ಚಾಲಕರು ಮತ್ತು ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಡಳಿತದ ಆದೇಶವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲಾಯಿತು. ಭಾರಿ ವಾಹನಗಳ ಸಂಚಾರಕ್ಕೆ ಹೇರಿರುವ ನಿಷೇಧದಿಂದ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಜಿಲ್ಲಾಧಿಕಾರಿಗಳ ಆದೇಶವು ಹೊರ ಜಿಲ್ಲೆಯ ವಾಹನಗಳಿಗೆ ಅನ್ವಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದೇಶವನ್ನು ಸರಿಪಡಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು: ಧರ್ಮಸ್ಥಳ ದೂರಿನ ತನಿಖಾಧಿಕಾರಿಯು ಭೇದಿಸಿರುವ ಅತ್ಯಾಚಾರ, ಕೊಲೆ, ಶವಗಳ ಹೊರತೆಗೆಯುವಿಕೆಯ ಪ್ರಕರಣಗಳೆಷ್ಟು? ಈ ಸ್ವರೂಪದ ಪ್ರಕರಣಕ್ಕೆ ಅಗತ್ಯವಿರುವ ಪರಿಣತಿಯನ್ನು ಈ ಅಧಿಕಾರಿಯು ಹೊಂದಿದ್ದಾರೆಂದು ಪೋಲಿಸ್ ಇಲಾಖೆಯು ಹೇಳುತ್ತಿದೆಯೇ? ಎಂದು ಸುಪ್ರೀಂ ಕೋರ್ಟ್ ವಕೀಲ ಕೆ ವಿ ಧನಂಜಯ್ ಅವರು ಪ್ರಶ್ನಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು ಧರ್ಮಸ್ಥಳದಲ್ಲಿ ಕೊಲೆ ಮತ್ತು ಅತ್ಯಾಚಾರಕ್ಕೊಳ ಗಾದ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆಯೆನ್ನುವ ಪ್ರಕರಣದಂತಹ ಇನ್ನೊಂದು ಪ್ರಕರಣ ಕಳೆದ 100 ವರ್ಷಗಳಲ್ಲಿ ನ್ಯಾಯಾಲಯದ ತೀರ್ಪುಗಳಲ್ಲಿ ಕಾಣಸಿಗುವುದಿಲ್ಲ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮತ್ತು ಸರ್ಕಾರವು ತನಿಖೆಗೆಂದು ನೇಮಿಸಿರುವ ಅಧಿಕಾರಿಯ ವಯಸ್ಸು ಸುಮಾರು 29. ಅವರು ಧರ್ಮಸ್ಥಳ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದಾರೆ. ಈ ಅಧಿಕಾರಿಯು ಭೇದಿಸಿರುವ ಅತ್ಯಾಚಾರ, ಕೊಲೆ, ಶವಗಳ ಹೊರತೆಗೆಯುವಿಕೆಯ ಪ್ರಕರಣಗಳೆಷ್ಟು? ಈ ಸ್ವರೂಪದ ಪ್ರಕರಣಕ್ಕೆ ಅಗತ್ಯವಿರುವ ಪರಿಣತಿಯನ್ನು ಈ ಅಧಿಕಾರಿಯು ಹೊಂದಿದ್ದಾರೆಂದು ಪೋಲಿಸ್ ಇಲಾಖೆಯು ಹೇಳುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಕಳಕಳಿ ಇದ್ದಲ್ಲಿ ಧರ್ಮಸ್ಥಳ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಿಸಲಾದ ತನಿಖಾಧಿಕಾರಿಯ ಬಗ್ಗೆ ಸರ್ಕಾರವು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಸ್ಪಷ್ಟನೆಯ ನಂತರ, ತನಿಖೆಯ ಪ್ರಗತಿ ಕುರಿತಾಗಿ ಚರ್ಚಿಸಬಹುದು ಎಂದು ವಕೀಲ ಕೆ ವಿ ಧನಂಜಯ್ ಅವರು ಆಗ್ರಹಿಸಿದ್ದಾರೆ. ಪ್ರಕರಣವನ್ನು ದಾಖಲಿಸುವುದಾಗಿ ದೂರುದಾರನ ವಕೀಲರು ಸಾರ್ವಜನಿಕವಾಗಿ ಪ್ರಕಟಿಸಿದ್ದು 22 ಜೂನ್ 2025ರಂದು. ದೂರನ್ನು ದಕ್ಷಿಣ ಕನ್ನಡ ಪೊಲೀಸರಿಗೆ ವಕೀಲರು ನೀಡಿದ್ದು ದಿನಾಂಕ 3 ಜುಲೈ ರಂದು. ಆ ರಾತ್ರಿಯೇ ದೂರಿನ ಪರಿಷ್ಕೃತ ಪ್ರತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಯಿತು. ಎಫ್ ಐ ಆರ್ ದಾಖಲಿಸಿದ್ದು 4 ಜುಲೈರಂದು. ಇದರ ಪರಿಷ್ಕೃತ ಪ್ರತಿಯನ್ನೂ ಸಾರ್ವಜನಿಕವಾಗಿ ಪ್ರಕಟಿಸಲಾಯಿತು ಎಂದು ವಕೀಲ ಧನಂಜಯ್ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ, ಕೊಲೆ ಪ್ರಕರಣಗಳಲ್ಲಿ ಕಾರ್ಯಾನುಭವ ಮತ್ತು ಪರಿಣತಿ ಪಡೆದ ಅಧಿಕಾರಿಗಳೇ ತನಿಖೆ ಮಾಡಿದ್ದರೂ, ಪ್ರತಿ ನೂರು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುವ ಪ್ರಕರಣಗಳು 9 ಮಾತ್ರ. ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದ ಸೆಷನ್ಸ್ ನ್ಯಾಯಾಲಯಗಳು ಕಳೆದ 7 ವರ್ಷಗಳಲ್ಲಿ ನೀಡಿರುವ ತೀರ್ಪುಗಳನ್ನು ಅಧ್ಯಯನ ನಡೆಸಿರುವ ನಮ್ಮ ತಂಡ ಈ ಮಾಹಿತಿಯನ್ನು ಕಂಡುಕೊಂಡಿದೆ ಎಂದು ಅವರು ಪ್ರಕಟನೆಯಲ್ಲಿ ಉಲ್ಲೇಖಿಸಿದ್ದಾರೆ.
ಹಕ್ಕು ಪತ್ರ ನೀಡದಿದ್ದರೆ ಅಹೋ ರಾತ್ರಿ ಧರಣಿ : ಶ್ಯಾಮರಾಜ್ ಬಿರ್ತಿ
ಬ್ರಹ್ಮಾವರ, ಜು.18: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಇಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಹಾಗೂ ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಇದರ ಅಂಗವಾಗಿ ಬ್ರಹ್ಮಾವರ ತಾಲೂಕು ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಹಿರಿಯ ದಲಿತ ಮುಖಂಡರಾದ ಅಣ್ಣಪ್ಪ ಕುಕ್ಕುಡೆ ಮತ್ತು ವಾರಂಬಳ್ಳಿ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಎಸ್. ನಾರಾಯಣ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಉಧ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದ.ಸಂ.ಸ.ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಈ ದೇಶದಲ್ಲಿ ಭೂಮಿಯಿಂದ ವಂಚಿತರಾದ ಸಮುದಾಯ ಒಂದಿದ್ದರೆ ಅದು ದಲಿತ ಸಮುದಾಯ.ಬಾಬಾಸಾಹೇಬರು ನಮಗೆ ಶಿಕ್ಷಣ ಸಂಘಟನೆ ಹೋರಾಟ ಎಂಬ ಮೂರು ಧ್ಯೇಯ ವಾಕ್ಯವನ್ನು ನೀಡಿದ್ದಾರೆ ಎಂದರು. ಈಗಿನ ಕಾಲಘಟ್ಟದಲ್ಲಿ ಭೂಮಿ ಇದ್ದರೆ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ. ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಡಿಸಿ ಮನ್ನಾ ಭೂಮಿ ಇದ್ದರೂ ಜಿಲ್ಲಾಡಳಿತ ಅದನ್ನು ಭೂರಹಿತರಿಗೆ ಹಂಚುತ್ತಿಲ್ಲಾ , ಹೆಚ್ಚಿನ ಡಿಸಿ ಮನ್ನಾ ಭೂಮಿಯನ್ನು ಮೇಲ್ವರ್ಗದವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅತಿಕ್ರಮಣವಾದ ಡಿಸಿ ಮನ್ನಾ ಭೂಮಿಯನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಭೂರಹಿತರಿಗೆ ಹಂಚಬೇಕು ಎಂದರು. ಅದೇರೀತಿ ಅಕ್ರಮ ಸಕ್ರಮದಲ್ಲೂ ಸಹ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅರ್ಜಿಗಳನ್ನು ವಿಲೇವಾರಿ ಮಾಡದೇ ಬರಿ ಶ್ರೀಮಂತರ ಮತ್ತು ಮೇಲ್ವರ್ಗದವರಿಗೆ ಜಮೀನು ಮಂಜೂರು ಮಾಡಿದ್ದಾರೆ. ಸರಕಾರಿ ಭೂ ಹಂಚಿಕೆ ಸಮಯದಲ್ಲಿ ಶೇಖಡಾ 50 ರಷ್ಟು ಭೂಮಿಯನ್ನು ನಿಮ್ನ ವರ್ಗದವರಿಗೆ ಕಾಧಿರಿಸಬೇಕೆಂಬ ಕಾನೂನು ಇದ್ದರೂ ಆ ಕಾನೂನನ್ನು ಗಾಳಿಗೆ ತೂರಿ ರಾಜಕಾರಣಿಗಳು ತಮ್ಮ ತಮ್ಮ ಜನಾಂಗದವರಿಗೇ ಮಂಜೂರು ಮಾಡಿದ್ದು ಮಾಹಿತಿ ಹಕ್ಕಿನಲ್ಲಿ ಸಿಕ್ಕಿದೆ ಎಂದು ದೂರಿದರು. ಆದಷ್ಟು ಬೇಗ ದಲಿತರ ಬೇಡಿಕೆ ಇಡೇರಿಸದೇ ಇದ್ದರೇ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಹಗಲು ರಾತ್ರಿ ಅನಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದವರು ಎಚ್ಚರಿಸಿದರು. ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರು ಪ್ರತಿಭಟನಾ ಸ್ಥಳಕ್ಕೇ ಬಂದು ಮನವಿ ಸ್ವೀಕರಿಸಿದರು. ಬ್ರಹ್ಮಾವರ ತಾಲೂಕು ಕಛೇರಿ ಎಧುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ , ಕುಮಾರ್ ಕೋಟ , ಮಂಜುನಾಥ ಬಾಳ್ಕುದ್ರು , ತಾಲೂಕು ಸಂಚಾಲಕ ಹರಿಶ್ಚಂದ್ರ ಬಿರ್ತಿ , ಸಂಘಟನಾ ಸಂಚಾಲಕ ಶ್ರೀನಿವಾಸ ವಡ್ಡರ್ಸೆ , ಪ್ರಕಾಶ್ ಹೇರೂರು , ಸುಧಾಕರ ಮಾಸ್ತರ್ ಗುಜ್ಜರ್ ಬೆಟ್ಟು , ಬಿರ್ತಿ ಸುರೇಶ , ಪ್ರಶಾಂತ್ ಬಿರ್ತಿ , ಚೈತನ್ಯ ಬಿರ್ತಿ, ಕುಸುಮಾ ಹಂಗಾರಕಟ್ಟೆ , ಆರೂರು ಸಂಚಾಲಕರಾದ ನರಸಿಂಹ ಆರೂರು , ಶರತ್ ಆರೂರು , ಬೋಜರಾಜ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.
ಹೊಸದಾಗಿ ನೇಮಕವಾಗುವ ಪೊಲೀಸ್ ಸಿಬ್ಬಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ : ಅಲೋಕಕುಮಾರ್
ಕಲಬುರಗಿ: ಹೊಸದಾಗಿ ನೇಮಕವಾಗುವ ಪೊಲೀಸ್ ಸಿಬ್ಬಂದಿಗೆ ಎಕೆ 47, ಎಂಪಿ 5 ಗನ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯ ಜೊತೆಗೆ ಸೈಬರ್ ಕ್ರೈಂ ತಡೆಗಟ್ಟುವ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ ಎಂದು ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೀಗ ಬೋಧಿಸುತ್ತಿರುವ ಪಠ್ಯಕ್ರಮದಲ್ಲಿ ಕೆಲ ಬದಲಾವಣೆಗಳನ್ನು ತರಲಾಗಿದೆ. ಪೊಲೀಸ್ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಈಗ ಅಗತ್ಯವಿಲ್ಲ. ಹೀಗಾಗಿ, ಅಂತಹ ಪಾಠಗಳನ್ನು ಸಂಕ್ಷಿಪ್ತಗೊಳಿಸಿ ಜನರೊಂದಿಗೆ ಹೇಗೆ ವರ್ತಿಸಬೇಕು. ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡುವುದು, ಸೈಬರ್ ಕ್ರೈಂ, ಆರ್ಥಿಕ ಅಪರಾಧಗಳು, ಮಹಿಳೆ, ಮಕ್ಕಳು, ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ನಿರ್ವಹಿಸುವ ಬಗ್ಗೆ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿ ಆ ಕುರಿತು ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ ಈ ತರಬೇತಿ ಕಳೆದ ಜನವರಿಯಿಂದ ನಡೆಯುತ್ತಿರುವ 25ನೇ ಬ್ಯಾಚ್ನಿಂದ ಆರಂಭಿಸಲಾಗಿದೆ ಎಂದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪಿಎಸ್ಐ, ಡಿಎಸ್ಪಿಗಳಿಗೆ ತರಬೇತಿ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಮೊದಲ ಬಾರಿಗೆ ನಾವು ಪೊಲೀಸ್ ಪೇದೆಗಳಿಗೆ ಆದ್ಯತೆ ನೀಡಿ ತರಬೇತಿ ನೀಡುತ್ತಿದ್ದೇವೆ ಎಂದರು. ವಾಸ್ತವ ವರದಿ ನೀಡಬೇಕು: ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಪೇದೆಗಳಿಗೆ ಮೂರು ತಿಂಗಳ, ಮೂರು ವಾರ (ಸಾಂಡ್ವಿಜ್ ಟ್ರೇನಿಂಗ್) ಫೀಲ್ಡ್ ಗೆ ಹೋಗಿ ವಾಸ್ತವವಾಗಿ ಅಧ್ಯಯನ ಮಾಡಿ ವರದಿ ನೀಡಬೇಕು. ಅಗ್ನಿದುರಂತ ನಡೆದರೆ ಹೇಗೆ ನಡೆದುಕೊಂಡು ಹೋಗಬೇಕು, ಅತ್ಯಾಚಾರ ಪ್ರಕರಣ ಹೇಗೆ ಅಟೆಂಡ್ ಮಾಡಬೇಕು, ಹೇಗೆ ಅಹವಾಲು ಸ್ವೀಕರಿಸಬೇಕು, ಹೇಗೆ ತನಿಖೆ ಮಾಡಬೇಕು, ವಿಡಿಯೋ ಕಾನ್ಪ್ರೆನ್ಸ್, ಆಡಿಯೊ ಸಾಕ್ಷಿಗಳು ಕೋರ್ಟ್ನಲ್ಲಿ ಹಾಜರುಪಡಿಸುವುದು ಸೇರಿದಂತೆ ಇತರ ಅಪರಾಧ ಪ್ರಕರಣಗಳು ಬೇಧಿಸುವ ಕುರಿತು 10ನಿಮಿಷಗಳ ವಿಡಿಯೋ ಸಿದ್ಧಪಡಿಸಿ ಅದನ್ನು ಶಿಬಿರಾರ್ಥಿಗಳಿಗೆ ತೋರಿಸಲಾಗುತ್ತಿದೆ. ತರಬೇತಿ ಅವಧಿಯಲ್ಲಿಯೇ ಅವರನ್ನು ಸಮಗ್ರವಾಗಿ ತರಬೇತಿ ನೀಡಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು. ಬಹುತೇಕ ಅಪರಾಧಗಳು ರಾತ್ರಿಯೇ ನಡೆಯುವ ಸಾಧ್ಯತೆ ಇರುವುದರಿಂದ ರಾತ್ರಿ ವೇಳೆಯಲ್ಲಿ ಹೇಗೆ ಪ್ರಕರಣ ಬೇಧಿಸುವ ಕುರಿತು ತಿಂಗಳಿಗೊಮ್ಮೆ ರಾತ್ರಿ 12 ಗಂಟೆಗೆ ಲಾಠಿ ಪ್ರಹಾರ, ಫೈರಿಂಗ್ ಮಾಡುವ ಕುರಿತು ತರಬೇತಿ ನೀಡಲಾಗುತ್ತಿದೆ ಮತ್ತು ಈ ಲಾಠಿ ಮತ್ತು ಫೈರಿಂಗ್ ಅನ್ನು ವ್ಯಕ್ತಿಗಳ ಎದೆಗೆ ಮಾಡದೆ ಸೊಂಟದ ಕೆಳಗಡೆ ಮಾಡುವ ಕುರಿತು ತರಬೇತಿ ನೀಡಲಾಗುತ್ತಿದೆ. ನಾವು ವ್ಯಕ್ತಿಯನ್ನು ಕೊಲ್ಲುವ ಉದ್ದೇಶವಿಲ್ಲ, ಹೊರತಾಗಿ ಆತನನ್ನು ಬಂಧಿಸಿ ಸನ್ಮಾರ್ಗಕ್ಕೆ ಕರೆದುಕೊಂಡು ಬರುವಂತೆ ಮಾಡಬೇಕಾಗಿದೆ ಎಂದರು.
ಮಂಗಳೂರು: ನಗರದ ಜೆಪ್ಪುಬಪ್ಪಾಲ್ ನಿವಾಸಿ ದಿ.ಫ್ರಾನ್ಸಿಸ್ರ ಪತ್ನಿ ಕ್ಯಾಥೆರಿನ್ ಡಿಸೋಜ (86) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ಶನಿವಾರ ಬೆಳಗ್ಗೆ 10.15ಕ್ಕೆ ನಗರದ ಕಾಸ್ಸಿಯಾ ಸ್ಮಶಾನದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಒತ್ತಡಕ್ಕೆ ಮಣಿದು ಸಿಎಂ ಜಾತಿ ಗಣತಿ ವರದಿ ತಿರಸ್ಕಾರ: ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ದಸ್ತಗೀರ್ ಸಾಹೇಬ್
ಮಂಗಳೂರು: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಮಂಡಿಸಲಾದ ಜಾತಿಗಣತಿ ವರದಿಯು ಸೋರಿಕೆಯಾಗಲು ರಾಜ್ಯ ಸರಕಾರದ ವೈಫಲ್ಯವೇ ಕಾರಣವಾಗಿದೆ. ಇದೀಗ ಅಹಿಂದ ವರ್ಗದ ಈ ವರದಿ ಯನ್ನು ತಿರಸ್ಕರಿಸಿ ಇತರ ರಾಜ್ಯದ ಮಾದರಿ ಮೂಲಕ ಜಾತಿಗಣತಿ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯು ಖಂಡನೀಯ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಹಾಜಿ ದಸ್ತಗೀರ್ ಆಗಾ ಸಾಹೇಬ್ ಹೇಳಿದ್ದಾರೆ. ಅವರು ನಗರದಲ್ಲಿ ಮುಸ್ಲಿಂ ಲೀಗ್ ಮುಖಂಡರ ಜೊತೆ ಚರ್ಚೆ ನಡೆಸಿ ಮಾತನಾಡಿದರು. ಯಾವುದೇ ಒತ್ತಡಗಳಿಗೆ ಮಣಿಯದೆ ಎಲ್ಲಾ ವರ್ಗದವರ ಪರವಾಗಿರುವ ಕಾಂತರಾಜು ವರದಿಯೇ ಸೂಕ್ತ ವಾಗಿದೆ. ಈ ವರದಿಯ ಜಾರಿಗಾಗಿ ಮುಸ್ಲಿಂ ಲೀಗ್ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವು ದೆಂದು ಹಾಜಿ ದಸ್ತಗೀರ್ ಆಗಾ ಸಾಹೇಬ್ ಎಚ್ಚರಿಕೆ ನೀಡಿದರು. ದ.ಕ.ಜಿಲ್ಲಾಧ್ಯಕ್ಷ ಸಿ. ಅಬ್ದುರ್ರಹ್ಮಾನ್, ಹಾಜಿ ಅಬ್ದುಲ್ ರೆಹ್ಮಾನ್, ಸಯ್ಯದ್ ಶಾಹುಲ್ ಹಮೀದ್ ತಂಳ್, ರಿಯಾಝ್ ಹರೇಕಳ, ಶಬೀರ್ ಅಬ್ಬಾಸ್ ತಲಪಾಡಿ, ಎಚ್. ಮುಹಮ್ಮದ್ ಇಸ್ಮಾಯಿಲ್ ಬಂದರ್, ನೌಶಾದ್ ಮಲಾರ್ ಉಪಸ್ಥಿತರಿದ್ದರು.
ʻರೇಷನ್ ಕಾರ್ಡ್ಗೆ ಇ-ಕೆವೈಸಿ ಮಾಡಿಸಲು ಒಂದು ತಿಂಗಳು ಕಾಲವಕಾಶʼ : ಕೆಎಚ್ ಮುನಿಯಪ್ಪ
ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ಆಹಾರ ಸಚಿವ ಕೆ.ಎಚ್.ಮುನಿಯಪ್ಪನವರು ಸೂಚನೆ ನೀಡಿದ್ದಾರೆ. ಒಂದು ತಿಂಗಳೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಆಹಾರ ಧಾನ್ಯಗಳು ಗೋದಾಮುಗಳಲ್ಲಿ ಹಾಳಾಗದಂತೆ ನೋಡಿಕೊಳ್ಳಲು ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿದ ಧಾನ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೆಲಸಕ್ಕೆ ನೆಪ ಹೇಳುವ ನಿಮಗೆ ನಾಚಿಕೆ ಆಗಲ್ಲವೇ?: ಕಂದಾಯ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತರಾಟೆ
ಬೆಂಗಳೂರು: ಕೆಲಸ ಮಾಡಿ, ಕಚೇರಿಗೆ ಹೋಗಿ ಎಂದರೆ ನೆಪ ಹೇಳುತ್ತೀರಾ. ನಿಮಗೆ ಈ ಬಗ್ಗೆ ನಾಚಿಕೆ ಆಗಲ್ಲವೇ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ಶುಕ್ರವಾರ ವಿಕಾಸಸೌಧದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಎಸಿ, ತಹಶೀಲ್ದಾರ್, ಉಪ ತಹಶೀಲ್ದಾರ್ ಗಳ ಸಭೆಯಲ್ಲಿ ಅಧಿಕಾರಿಗಳಿಗೆ ಮಾತಿನ ಮೂಲಕ ಚಾಟಿ ಬೀಸಿದ ಸಚಿವರು, ಭೂ ಸುರಕ್ಷಾ ಯೋಜನೆಯ ಅಡಿ ಭೂ ದಾಖಲೆಗಳು ಡಿಜಿಟಲೀಕರಣಗೊಳ್ಳುವ ಪ್ರಕ್ರಿಯೆ ಇಡೀ ರಾಜ್ಯದಲ್ಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳು ಕೆಟ್ಟ ದಾಖಲೆ ಹೊಂದಿವೆ ಎಂದು ಬೇಸರ ವ್ಯಕ್ತಪಡಿಸಿದರು. ಭೂ ಸುರಕ್ಷಾ ಯೋಜನೆ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಆದರೆ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿದ್ದಾರೆ. ಆನ್ಲೈನ್ ಪ್ರಮಾಣೀಕೃತ ಪತ್ರ ಹಂಚಿಕೆ ವಿಚಾರವನ್ನು ತಹಶೀಲ್ದಾರರು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿದ್ದಾರೆ. ರಾಜ್ಯಾದ್ಯಂತ 21 ಲಕ್ಷ ಪುಟ ಹಂಚಿಕೆ ಆಗಿದ್ದರೆ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಕೇವಲ 27 ಪುಟ ಹಂಚಿಕೆ ಆಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಚಿವರು ತೀವ್ರ ಅಸಮಾಧಾನ ಹೊರಹಾಕಿದರು. ಬೆಂಗಳೂರು ನಗರ, ಗ್ರಾಮೀಣ ಜಿಲ್ಲೆಯ ತಹಶೀಲ್ದಾರರು ಕಚೇರಿಗೆ ಹೋಗಲ್ಲ, ನಿಮಗೆ ಬೇರೆಲ್ಲಿ ಕಚೇರಿ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಇಲ್ಲಿವರೆಗೆ ನಾನು ಸಹಿಸಿಕೊಂಡಿದ್ದೇನೆ. ಮುಂದೆ ಸಹಿಸಿಕೊಳ್ಳುವ ಮಾತೇ ಇಲ್ಲ. ಅಧಿಕಾರಿಗಳನ್ನು ದಾರಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸಭೆಯಲ್ಲಿ ಮೌನವಾಗಿ ಇದ್ದ ಅಧಿಕಾರಿಗಳ ನಡೆಗೆ ಗರಂ ಆದ ಸಚಿವರು, ಮಾತನಾಡಲು, ಉತ್ತರಿಸಲು ಏನು ರೋಗ ಬಂದಿದೆ ನಿಮಗೆ?. ನಾಚಿಕೆ ಆಗಬೇಕು ನಿಮಗೆ, ಇಷ್ಟು ನೆಪಗಳನ್ನು ಹೇಳಲು. ಬಯೋಮೆಟ್ರಿಕ್ ಕೊಡಲು ಏನು ಸಮಸ್ಯೆ. ಕೆಲಸ ಆಗಬಾರದು ಎಂಬುವುದೇ ಇವರ ಉದ್ದೇಶ ಇರಬಹುದು ಎಂದು ಹೇಳಿದರು. ತಮ್ಮ ವ್ಯಾಪ್ತಿಯಲ್ಲಿನ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿ ತಹಶೀಲ್ದಾರ್ಗಳಿಗೇ ಗೊತ್ತಿಲ್ಲ ಎಂದರೆ ಏನರ್ಥ? ತಹಶೀಲ್ದಾರ್ಗೆ ಕೆಸಿಎಸ್ಆರ್ ನಿಯಮ ಗೊತ್ತಿಲ್ಲವೇ? ಯಾರ ಕಿವಿಗೆ ದಾಸವಾಳ ಹೂ ಇಡುವ ಪ್ರಯತ್ನ ಮಾಡುತ್ತೀದ್ದೀರಾ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜತೆಗೆ ಅನೇಕಲ್ ತಹಶೀಲ್ದಾರರ ವಿರುದ್ಧ ಇದೇ ಸಂದರ್ಭದಲ್ಲಿ ಕ್ರಮಕ್ಕೆ ಸೂಚಿಸಿದರು. ‘ಎ’ ಖಾತಾ ಸದುಪಯೋಗ ಪಡೆಯಿರಿ: ಕೃಷ್ಣಭೈರೇಗೌಡ ‘ಬಿ’ ಖಾತಾ ಹೊಂದಿರುವವರು ಅದನ್ನು ‘ಎ’ ಖಾತಾವಾಗಿ ಮಾರ್ಪಡಿಸಿಕೊಳ್ಳಲು ರಾಜ್ಯ ಸರಕಾರ ಅವಕಾಶ ಕಲ್ಪಿಸಿದ್ದು, ಇದನ್ನು ಅರ್ಹರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ನಾಟಕದ ಮೂಲಕ ಸೌಹಾರ್ದದ ಪರಂಪರೆ ಬೆಸೆಯೋಣ : ಪುಂಡರೀಕಾಕ್ಷ
ಮಂಗಳೂರು: ತುಳುನಾಡಿನ ಗತಕಾಲದ ಸೌಹಾರ್ದದ ಬದುಕು ಹಾಗೂ ಕಥನಗಳು ಎಲ್ಲರಿಗೂ ಗೊತ್ತಿವೆ. ಆದರೆ ಮುಂದಿನ ಪೀಳಿಗೆಗೆ ಸೌಹಾರ್ದತೆಯನ್ನು ಸಾರುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ನಾಟಕ ಹಾಗೂ ಸಾಂಸ್ಕೃತಿಕ ರೂಪಕಗಳು ಹೆಚ್ಚು ಪರಿಣಾಮಕಾರಿಯಾಗಲಿದೆ. ಹಾಗಾಗಿ ನಾಟಕದ ಮೂಲಕ ಸೌಹಾರ್ದದ ಪರಂಪರೆ ಬೆಸೆಯೋಣ ಎಂದು ಜಿಎಸ್ಟಿ-ಆದಾಯ ತೆರಿಗೆ ಸಲಹೆಗಾರ ಯು.ಪುಂಡರೀಕಾಕ್ಷ ಮೂಲ್ಯ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ನಿರ್ಮಿಸಿದ ಪಡೀಲ್ ಅಮೃತ ಕಾಲೇಜ್ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ’ಪಗಪು’ ತುಳು ನಾಟಕದ ಪ್ರಥಮ ಪ್ರದರ್ಶನವನ್ನು ಬಲ್ಮಠ ಸರಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ, ಮತ, ಭೇದವನ್ನು ಮರೆತು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ತುಳು ಭಾಷೆಗೆ ಇದೆ. ತುಳುವಿನ ಮೂಲಕ ನಾವೆಲ್ಲರೂ ಒಗ್ಗಟ್ಟನ್ನು ಮತ್ತು ಬಾಂಧವ್ಯವನ್ನು ಬೆಸೆಯೋಣ ಎಂದು ಪುಂಡರೀಕಾಕ್ಷ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇಂಟ್ಯಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಶ್ ಬಸು, ಅಮೃತ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಹಾಸ ಕಣ್ವತೀರ್ಥ, ಬಲ್ಮಠ ಸರಕಾರಿ ಪಿಯು ಹೆಣ್ಮಕ್ಕಳ ಕಾಲೇಜಿನ ಪ್ರಾಂಶುಪಾಲೆ ವನಿತಾ ದೇವಾಡಿಗ ಮಾತನಾಡಿದರು. ನಾಟಕದ ನಿರ್ದೇಶಕ ಜಗನ್ ಪವಾರ್ ಬೇಕಲ್ ಸ್ವಾಗತಿಸಿದರು. ಅಕಾಡಮಿ ಸದಸ್ಯ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ವಂದಿಸಿದರು.
PM ಮೋದಿ ಇಲ್ಲದಿದ್ದರೆ ಚುನಾವಣೆಯಲ್ಲಿ BJP 150 ಸ್ಥಾನ ಗೆಲ್ಲುವುದೂ ಕಷ್ಟ: ಸಂಸದ ನಿಶಿಕಾಂತ್ ದುಬೆ ಸ್ಫೋಟಕ ಹೇಳಿಕೆ!
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಇಲ್ಲದಿದ್ದರೆ, ಬಿಜೆಪಿ ಮುಂಬರುವ ಚುನಾವಣೆಗಳಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಮೋದಿಯವರ ವರ್ಚಸ್ಸೇ ಪಕ್ಷದ ಗೆಲುವಿಗೆ ಮೂಲ ಮಂತ್ರವಾಗಿದ್ದು, 2029ರ ಚುನಾವಣೆಯಲ್ಲೂ ಅವರ ನಾಯಕತ್ವ ಅನಿವಾರ್ಯವೆಂದು ಅವರು ಪ್ರತಿಪಾದಿಸಿದ್ದಾರೆ. ಮೋದಿ ಅವರ ಹೆಸರೇ ಪಕ್ಷಕ್ಕೆ ಮತಗಳನ್ನು ತಂದುಕೊಡುತ್ತದೆ ಎಂದು ದುಬೆ ಅಭಿಪ್ರಾಯಪಟ್ಟಿದ್ದಾರೆ.
ಮುಡಾ ಬಡಾವಣೆ: ನಿವೇಶನಕ್ಕೆ ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕೊಣಾಜೆ ಗ್ರಾಮದಲ್ಲಿರುವ 11.64 ಎಕರೆ ಜಮೀನಿನಲ್ಲಿ ರಚಿಸಿರುವ ಉದ್ದೇಶಿತ ವಸತಿ ಬಡಾವಣೆಯಲ್ಲಿ ವಾಸದ ನಿವೇಶನಗಳ ಹಂಚಿಕೆಗಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆ.14ರೊಳಗೆ ಮುಡಾ ಪ್ರಾಧಿಕಾರದ ಕಚೇರಿ ವೇಳೆ ಅರ್ಜಿ ಸ್ವೀಕರಿಸಬಹುದು. ನಿವೇಶನಗಳ ಬೆಲೆ ತಾತ್ಕಾಲಿಕವಾಗಿದ್ದು, ವ್ಯತ್ಯಾಸವಾಗುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Explainer: ದೊಡ್ಡ ಆ್ಯಂಟೆನಾ, ಬಹುದೊಡ್ಡ ಕನಸುಗಳು; ನಿಸಾರ್ ಹಿಂದಿನ ಕಥೆ
ಇಸ್ರೋ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಿಸಾರ್ ಉಪಗ್ರಹವು ಜುಲೈ 2025 ರ ಅಂತ್ಯದ ವೇಳೆಗೆ ಉಡಾವಣೆಗೆ ಸಿದ್ಧವಾಗಿದ್ದು, ಭೂಮಿಯ ಮೇಲ್ಮೈಯನ್ನು ಅಧ್ಯಯನ ಮಾಡಲಿದೆ. ಇದು ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು ಮತ್ತು ಪರಿಸರ ವ್ಯವಸ್ಥೆಯ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಿದ್ದು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ರೈತರಿಗೆ ಉಪಯುಕ್ತವಾಗಲಿದೆ. ಈ ಯೋಜನೆಯು ಭಾರತಕ್ಕೆ ಎಷ್ಟು ಉಪಕಾರಿಯಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಗಿರೀಶ್ ಲಿಂಗಣ್ಣನವರ ಈ ಲೇಖನದಲ್ಲಿದೆ.
ಸೊಳ್ಳೆಗಳ ಉತ್ಪತ್ತಿ ಕಾರ್ಖಾನೆಯಾಗಿರುವ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ!
ಉಡುಪಿ: ನಗರದ ಕವಿ ಮುದಣ್ಣ ಮಾರ್ಗದ ನಗರಸಭೆ ಕಛೇರಿ ಬಳಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ್ ಒಳಾಂಗಣದ ಸುತ್ತಲು ಗಿಡ ಗಂಟಿಗಳು ಬೆಳೆದು ನಿಂತಿದ್ದು, ಆಸ್ಪತ್ರೆಯ ಪರಿಸರವು ರೋಗವಾಹಕ ಸೊಳ್ಳೆಗಳ ಉತ್ಪತ್ತಿಯ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಜಿಲ್ಲಾ ಆರೋಗ್ಯ ಇಲಾಖೆ, ನಗರಾಡಳಿತ ತಕ್ಷಣ ಗಿಡಗಂಟಿಗಳನ್ನು ಕಟಾವುಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸರದಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿರುವುದರಿಂದ ಉರಗಾದಿ, ವಿಷ ಜಂತುಗಳು ನೆಲೆ ಪಡೆಯಲು ಯೋಗ್ಯ ಸ್ಥಳವಾದಂತಾಗಿದೆ. ಪರಿಸರ ಶುಚಿತ್ವದ ಸಂದೇಶ ಸಾರಬೇಕಾದ ಆಸ್ಪತ್ರೆಯ ಮಡಿಲಿನಲ್ಲಿ ಅಶುಚಿತ್ವದ ವಾತಾವರಣ ಸೃಷ್ಟಿಯಾಗಿರುವುದು ವಿಪರ್ಯಾಸದ ಸಂಗತಿ ಎನಿಸಿಕೊಂಡಿದೆ. ಡೆಂಗ್ಯೂ, ಮಲೇರಿಯ ಜ್ವರ ಬಾಧಿಸುವ ಭೀತಿಯು ಎದುರಾಗಿದೆ. ಪ್ರತಿ ವರ್ಷದ ಮಳೆಗಾಲದಲ್ಲೂ ಆಸ್ಪತ್ರೆಯ ಸುತ್ತಲು ಗಿಡಗಂಟಿಗಳು ಬೆಳೆದು ಸಮಸ್ಯೆ ಉದ್ಭವಿಸುವುದು ಕಂಡುಬರುತ್ತದೆ. ಹಾಗಾಗಿ ನೆಲವನ್ನು ಸಮತಟ್ಟು ಗೊಳಿಸಿ ನೆಲಹಾಸು ಅಳವಡಿಸುವುದರಿಂದ, ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಲು ಸೂಕ್ತ ಪರಿಹಾರವಾಗಿದ್ದು, ಆರೋಗ್ಯ ಇಲಾಖೆ ಗಮನಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯರ್ಕರ್ತರು ತಿಳಿಸಿದ್ದಾರೆ.
ಪತ್ರಕರ್ತರ ಆರೋಗ್ಯ ತಪಾಸಣೆಗೆ ಚಾಲನೆ
ಉಡುಪಿ, ಜು.18: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ, ಕಾರ್ಕಳ, ಕುಂದಾಪುರ, ಕಾಪು, ಬೈಂದೂರು, ಹೆಬ್ರಿ, ಬೈಂದೂರು ತಾಲೂಕು ಸಂಘಗಳ ಸಹಯೋಗದೊಂದಿಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಕಾರದೊಂದಿಗೆ ಪತ್ರಕರ್ತರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಇಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸಚಿನ್ ಕಾರಂತ್, ಮಾರುಕಟ್ಟೆ ವ್ಯವಸ್ಥಾಪಕ ಮೋಹನ್ ಶೆಟ್ಟಿ, ಸಂಘದ ಜಿಲ್ಲಾಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿ ಕಾರಿ ಉಮೇಶ್ ಮಾರ್ಪಳ್ಳಿ, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ, ಕುಂದಾಪುರ ತಾಲೂಕು ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ, ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಹಂತಗಳಲ್ಲಿ ಒಟ್ಟು 50 ಮಂದಿ ಪತ್ರಕರ್ತರು ಮಧುಮೇಹ, ಕಿಡ್ನಿ, ಇಸಿಜಿ, ಇಕೋ, ಎಕ್ಸ್ರೇ, ಅಲ್ಟ್ರಾಸೌಂಡ್, ತಜ್ಞ ವೈದ್ಯರಿಂದ ಸಮಾಲೋಚನೆ ಸೇರಿದಂತೆ ಹಲವು ರೀತಿಯ ತಾಪಸಣೆ ಮಾಡಿಕೊಳ್ಳಲಿದ್ದಾರೆ
ಬೀದಿ ಶ್ವಾನಗಳ ಪುರ್ನವಸತಿ ಕೇಂದ್ರ ಸ್ಥಾಪನೆಗೆ ಆಗ್ರಹ
ಉಡುಪಿ, ಜು.18: ಉಡುಪಿ ನಗರದಲ್ಲಿ ಬೀದಿ ಶ್ವಾನಗಳ ಸಂಖ್ಯೆಯು ಮಿತಿ ಮಿರಿದ್ದು, ಬೀದಿ ನಾಯಿಗಳ ಹೆಚ್ಚಳದಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಮಸ್ಯೆಗಳು ಉದ್ಭವಿಸಿವೆ. ಆದುದರಿಂದ ಬೀದಿ ನಾಯಿಗಳಿಗೆ ಜಿಲ್ಲಾಡಳಿತ, ನಗರಾಡಳಿತವು ನಗರದ ಹೊರ ವಲಯದಲ್ಲಿ ಆಯಕಟ್ಟಿನ ಸ್ಥಳವನ್ನು ಗುರುತಿಸಿ ಪುನರ್ವ ಸತಿ ಕೇಂದ್ರವನ್ನು ಸ್ಥಾಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರತಿ ಜೀವಿಗಳಿಗೆ ಬದುಕುವ ಹಕ್ಕಿದೆ. ಅವುಗಳ ಬದುಕನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಅವುಗಳು ಬದುಕಲು ಪೂರಕ ವ್ಯವಸ್ಥೆ ಕಲ್ಪಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವಾಗಿದೆ. ಕೇಂದ್ರದಲ್ಲಿ ಆಶ್ರಯ ಪಡೆದಿರುವ ಬೀದಿ ನಾಯಿಗಳಿಗೆ ಊಟೋಪಚಾರ, ಔಷಧೋಪಚಾರ, ಆರೈಕೆಯ ವ್ಯವಸ್ಥೆಗೊಳಿಸ ಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ಸಹ ಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ. ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳ, ರಥಬೀದಿ, ನಗರದ ಚಿತ್ತರಂಜನ್ ವೃತ್ತ, ಸಿಟಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ, ನರ್ಮ್ ಬಸ್ ನಿಲ್ದಾಣ, ಸರಕಾರಿ ಹಳೆ ಮತ್ತು ಹೊಸ ಬಸ್ಸು ನಿಲ್ದಾಣ, ಜಿಲ್ಲಾಸ್ಪತ್ರೆಯ ವಠಾರ, ಅಜ್ಜರಕಾಡು ಉದ್ಯಾನವನ, ಮಹಾತ್ಮ್ಮ ಗಾಂಧಿ ಕ್ರೀಡಾಂಗಣ, ಬೀಡಿನಗುಡ್ಡೆ ಬಯಲು ರಂಗ ಮಂದಿರ, ಮೀನು ಮಾರುಕಟ್ಟೆ, ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ, ಇಂದ್ರಾಳಿಯ ರೈಲು ನಿಲ್ದಾಣ, ಹೀಗೆ ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ಹೊರ ವಲಯದಲ್ಲೂ ಬೀದಿ ನಾಯಿಗಳ ಗುಂಪೇ ನೆಲೆಪಡೆದಿವೆ. ನಾಯಿಗಳು ನಡುರಸ್ತೆಯಲ್ಲಿ ಸಂಚರಿಸುವುದರಿಂದ ವಾಹನ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಸಾರ್ವಜನಿಕರನ್ನು ಅಟ್ಟಿಸಿಕೊಂಡು ಬರುವ ಕಚ್ಚುವ ಪ್ರಕರಣಗಳು ಆಗಾಗ ಸಂಭವಿಸತ್ತಲೇ ಇರುರುತ್ತವೆ. ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಗಳು ಎದುರಾದಂತೆ, ಮಾನವ ಪೋಷಣೆಯಲ್ಲಿ ಬದುಕಬೇ ಕಾದ ನಾಯಿಗಳು, ಪೋಷಕರಿಲ್ಲದೆ ಬೀದಿನಾಯಿಗಳಾಗಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಿವೆ. ಆಹಾರದ ಕೊರತೆಯು ಎದುರಾಗಿದೆ. ಪ್ರಾಣಿ ಪ್ರಿಯರು ಉಣಬಡಿಸಿದ ಬಿಸ್ಕೆಟ್ಟೇ ಅವುಗಳಿಗೆ ಅರೆಹೊಟ್ಟೆ ಆಹಾರವಾಗಿದೆ. ಅಲ್ಲದೆ ವಾಹನ ಅಪಘಾತದಿಂದ ಗಾಯಾಳಾಗಿ, ಅಂಗನೂನ್ಯತೆಯಿಂದ ಅಸಹಾಯಕವಾಗಿ ಬದುಕ ಬೇಕಾದ ಪರಿಸ್ಥಿತಿ ಬೀದಿ ನಾಯಿಗಳದಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ವ್ಯವಸ್ಥೆ ಅವುಗಳಿಗಿಲ್ಲ. ವಿಘ್ನಸಂತೋಷಿಗಳಿಂದ ಕಲ್ಲೇಸತದ ಪೆಟ್ಟುತಿನ್ನಬೇಕಾದ ಪರಿಸ್ಥಿತಿಯು ಇದೆ. ಬೀದಿ ನಾಯಿಗಳಿಂದ ಸಾರ್ವಜನಿಕರಿಗೂ ತೊಂದರೆ ಒಂದೆಡೆಯಾದರೆ, ಬೀದಿ ನಾಯಿ ಪಟ್ಟದಿಂದಾಗಿ ಅವುಗಳ ಬದುಕು ಕೂಡ ಅಸಹಾಯಕವಾಗಿದೆ. ಎದುರಾಗಿರುವ ಸಮಸ್ಯೆ ಬಗೆಹರಿಸಲು ಬೀದಿ ಶ್ವಾನಗಳ ಪುರ್ನವಸತಿ ಕೇಂದ್ರ ಸ್ಥಾಪನೆಯೇ ಉತ್ತರವಾಗಿದೆ. ಜಿಲ್ಲಾಡಳಿತ, ನಗರಾಡಳಿತ ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನಹರಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಛತ್ತೀಸ್ಗಢ | ಭದ್ರತಾ ಪಡೆಗಳಿಂದ ಜಂಟಿ ಕಾರ್ಯಾಚರಣೆ : 6 ನಕ್ಸಲರ ಹತ್ಯೆ
ನಾರಾಯಣಪುರ: ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಆರು ಮಂದಿ ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾರಾಯಣಪುರ ಅಬುಜ್ಮದ್ ಪ್ರದೇಶದ ಕಾಡಿನಲ್ಲಿ ಮಧ್ಯಾಹ್ನ ಭದ್ರತಾ ಪಡೆಗಳ ಜಂಟಿ ತಂಡಗಳು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಹಲವು ಬಾರಿ ಗುಂಡಿನ ಚಕಮಕಿ ನಡೆದಿದೆ. ಇಲ್ಲಿಯವರೆಗೆ ಎನ್ಕೌಂಟರ್ ನಡೆದ ಸ್ಥಳದಲ್ಲಿ ಆರು ನಕ್ಸಲರ ಮೃತದೇಹಗಳು ಪತ್ತೆಯಾಗಿದೆ. ಸ್ಥಳದಿಂದ ರೈಫಲ್ಗಳು, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Reliance Retail: ರಿಲಯನ್ಸ್ ರೀಟೇಲ್ನಿಂದ ಕೆಲ್ವಿನೇಟರ್ ಬ್ರ್ಯಾಂಡ್ ಸ್ವಾಧೀನ
ಮುಂಬೈ, ಜುಲೈ 18: ರಿಲಯನ್ಸ್ ರೀಟೇಲ್ನಿಂದ ಶುಕ್ರವಾರ ಘೋಷಣೆ ಮಾಡಿರುವಂತೆ, ಕೆಲ್ವಿನೇಟರ್ (Kelvenator) ಬ್ರ್ಯಾಂಡ್ ಅನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಎಫ್ಎಂಸಿಜಿ ವಲಯದಲ್ಲಿ ತನ್ನ ನಾಯಕತ್ವ ವ್ಯಾಪಿಸಿಕೊಳ್ಳುವುದಕ್ಕೆ ಸಿದ್ಧವಾಗಿರುವ ರಿಲಯನ್ಸ್ ರೀಟೇಲ್ಗೆ ಇದು ಕಾರ್ಯತಂತ್ರ ಕ್ರಮವಾಗಿ ಮಹತ್ವದ ಮೈಲುಗಲ್ಲಾಗಿದೆ. ಈ ಸ್ವಾಧೀನದ ಬೆಳವಣಿಗೆಯು ದೇಶದಾದ್ಯಂತ ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯ ಮತ್ತು ಆಯ್ಕೆಯನ್ನು ದೊರಕಿಸುವ
ರಾಯಚೂರು | ನಕಲಿ ದಾಖಲೆ ಸೃಷ್ಟಿಸಿ ಭೂಮಾಫಿಯಾ ಮಾಡುತ್ತಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹ
ರಾಯಚೂರು : ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಾಫಿಯಾ ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ಅಂಬಾಜಿ ರಾವ್ ಮೈದರಕರ್ ಆಗ್ರಹಿಸಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭೂ ಲೂಟಿ, ನಕಲಿ ದಾಖಲೆ ಸೃಷ್ಟಿ ಮತ್ತು ನಕಲಿ ಹೆಸರಿನಲ್ಲಿ ಆಸ್ತಿಗಳ ಪರಿವಹಣ ನಡೆದಿದೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಉಂಟುಮಾಡಿದೆ ಎಂದರು. ನೂರಾರು ಎಕರೆ ಭೂಮಿ ಹಾಗೂ ನೂರಾರು ಪ್ಲಾಟ್ಗಳ ನಕಲಿ ದಾಖಲೆಗಳ ಆಧಾರದ ಮೇಲೆ ಮರು ಮಾರಾಟವಾಗಿದ್ದು,ಇದು ಕೇವಲ ಖಾಸಗಿ ವ್ಯಕ್ತಿಗಳ ಕಾರ್ಯವಲ್ಲ, ಇದರ ಹಿಂದೆ ಮಹಾನಗರ ಪಾಲಿಕೆ, ಸಬ್-ರಿಜಿಸ್ಟ್ರಾರ್ ಕಚೇರಿ ಮತ್ತು ಇತರ ಇಲಾಖೆಗಳ ಕೆಲವು ಅಧಿಕಾರಿಗಳೂ ಕೈಜೋಡಿಸಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಸಹಕಾರದಿಂದ ನಕಲಿ ಮ್ಯೂಟೇಷನ್, ಇ-ಖಾತೆಗಳು ಸೃಷ್ಟಿಯಾಗುತ್ತಿವೆ. ಇನ್ನಷ್ಟು ಆತಂಕಕರವಾದ ವಿಷಯವೆಂದರೆ-ಇದರಲ್ಲಿ ತೀವ್ರ ಭ್ರಷ್ಟಾಚಾರ ನಡೆದಿದ್ದು,ಸಾರ್ವಜನಿಕ ಆಸ್ತಿಗಳ ಲೂಟಿ ನಡೆ-ಯುತ್ತಿದೆ ಎಂಬ ಸ್ಪಷ್ಟ ಸಾಕ್ಷ್ಯಗಳಿದ್ದರೂ ಅಧಿಕಾರಿಗಳ ವಿರುದ್ಧ ಯಾವುದೇ ತುರ್ತು ಕ್ರಮಕೈಗೊಳ್ಳದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಈಗಾಗಲೇ ಹಲವಾರು ಪ್ರಕರಣಗಳು ಕೂಡ ದಾಖಲಾಗಿದ್ದು , ಅಧಿಕಾರಿಗಳ ಹೆಸರುಗಳು ಇದ್ದರೂ ಅವರ ವಿರುದ್ಧ ಅಮಾನತ್ತು, ತನಿಖೆ ಅಥವಾ ಶಿಕ್ಷಾತ್ಮಕ ಕ್ರಮವನ್ನೂ ಜಿಲ್ಲಾಡಳಿತ ಅಥವಾ ಆಯುಕ್ತರು ಮಹಾನಗರ ಪಾಲಿಕೆ ರಾಯಚೂರು ಇವರು ಕೈಗೊಳ್ಳದೇ ಮೂಖ ಪ್ರೇಕ್ಷಕರಾಗಿದ್ದಾರೆಂದು ಆರೋಪಿಸಿದರು. ಈ ಪ್ರಕರಣಗಳಲ್ಲಿ ಹೆಸರುಗಳಿರುವ ಎಲ್ಲಾ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ಭ್ರಷ್ಟ ಅಧಿಕಾರಿಗಳ ವಿರುದ್ಧ ಇಲಾಖಾತ್ಮಕ ವಿಚಾರಣೆ ನಡೆಯಬೇಕು. ಜಿಲ್ಲೆಯ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳು ಹಾಗೂ ಮಹಾನಗರ ಪಾಲಿಕೆ ಕಚೇರಿಗಳಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ಸಿಸಿಟಿವಿ ಅಳವಡಿಸುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಸೂದ್ ಅಲಿ, ಚಂದ್ರು ಉಪಸ್ಥಿತರಿದ್ದರು.
ಹೊಸಪೇಟೆ | ದ್ವಿತೀಯ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ವಿಜಯನಗರ : ಜಿಲ್ಲೆಯ ಮಾದಿಗ ಮಹಾಸಭಾ ವತಿಯಿಂದ 2ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಎ.ಸಿ ಬುದ್ಧ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಎ.ಬಸವರಾಜ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹೆಚ್.ಶೇಷ ಮಾತನಾಡಿದರು. ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಪೂರ್ಣಾಂದ ಭಾರತಿ ಸ್ವಾಮೀಜಿಗಳು ಮಾತಂಗ ಪರ್ವತ ಹಂಪಿ ವಹಿಸಿ, ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಕುಮಾರ್, ಮಾದಿಗ ಸಮಾಜದ ಗಣ್ಯರಾದ ಎಂ ಸಿ ವೀರಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘ ಅಧ್ಯಕ್ಷರಾದ ಕೆ.ಪಿ. ಉಮಾಪತಿ, ಬಲ್ಲಹುಣಸಿ ರಾಮಣ್ಣ, ಸೋಮಶೇಖರ್ ಕಮಲಾಪುರ, ಪೂಜಾಪ್ಪ, ಕೆ.ಉಚ್ಚಂಗಪ್ಪ, ಹಡಗಲಿ, ನಿಂಗಪ್ಪ, ಪಿ.ಸಂತೋಷ್ ಕುಮಾರ್, ಕೊಟ್ರೇಶ್, ನಾಗಪ್ಪ, ಲಕ್ಷ್ಮಣ ಹಾಗೂ ಮಾದಿಗ ಮಹಾಸಭಾ ಕಾರ್ಯಧ್ಯಕ್ಷರಾದ ಶ್ರೀನಿವಾಸ್ ಎಚ್ ಉಪಾಧ್ಯಕ್ಷರಾದ ಕರಿಯಪ್ಪ, ಬಿ ಹನುಮಂತಪ್ಪ ಜಿ ಪಂಪಾಪತಿ ವಿಜಯ್ ಕುಮಾರ್, ರವಿ ನಿಂಗಪ್ಪ ಆಗೋಲಿ ಸುಹೇಲ್ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಇದ್ದರು.
ಉಡುಪಿ: ದಲಿತರ ಭೂಮಿ - ವಸತಿ ಹಕ್ಕಿಗಾಗಿ ಪ್ರತಿಭಟನೆ
ಉಡುಪಿ, ಜು.18: ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಘಟಕದ ಕರೆಯಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಭೂಮಿ ಮತ್ತು ವಸತಿ ಹಕ್ಕುಗಳಿಗೆ ಆಗ್ರಹಿಸಿ ದಸಂಸ ಜಿಲ್ಲಾ ಮತ್ತು ತಾಲೂಕು ಸಮಿತಿಯ ವತಿಯಿಂದ ಇಂದು ಉಡುಪಿ ಬನ್ನಂಜೆಯಲ್ಲಿರುವ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ದಸಂಸ ರಾಜ್ಯ ಸಮಿತಿ ಸಂಚಾಲಕ ಹಾಗೂ ಹಿರಿಯ ದಲಿತ ಮುಖಂಡ ಸುಂದರ್ ಮಾಸ್ಟರ್, ಉಡುಪಿ ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಜಮೀನುಗಳನ್ನು ಅರ್ಹ ಭೂರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಗೆ ಮರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಉಡುಪಿ ಜಿಲ್ಲೆಯ ಅಕ್ರಮ-ಸಕ್ರಮ ಸಮಿತಿಗಳು ಕರ್ನಾಟಕ ಭೂಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯ ಶೇ.50ರಷ್ಟನ್ನು ದಲಿತ ಸಮುದಾಯಗಳಿಗೆ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು. ಇವು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಉಡುಪಿ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಇಂದಿನ ಪ್ರತಿಭಟನೆಯನ್ನು ಉಡುಪಿ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳ ತಾಲೂಕು ಕಚೇರಿಗಳೆದುರು ನಡೆಸಲಾಯಿತು. ಉಡುಪಿ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲೆ ಹಾಗೂ ತಾಲೂಕಿನ ದಲಿತ ಮುಖಂಡರುಗಳಾದ ಶಂಕರ್ದಾಸ್, ಭಾಸ್ಕರ್ ನಿಟ್ಟೂರು, ಪುಷ್ಪರಾಜ್, ಕೃಷ್ಣ ಬೆಳ್ಳೆ, ಲಕ್ಕವ್ವ, ಬಸವರಾಜ್ ಮಣಿಪಾಲ, ಕಿರಣ್, ಲೋಹಿತ್ ಕುಮಾರ್, ರವಿ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರಿನಿಂದ ಶಿವಮೊಗ್ಗ ಸಾಗರ ತಾಳಗುಪ್ಪಕ್ಕೆ ವಿಶೇಷ ರೈಲು; ವೇಳಾಪಟ್ಟಿ ಏನು?
ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ, ರೈಲ್ವೆ ಇಲಾಖೆಯು ಯಶವಂತಪುರದಿಂದ ಶಿವಮೊಗ್ಗ ಮಾರ್ಗವಾಗಿ ತಾಳಗುಪ್ಪಕ್ಕೆ ಜುಲೈ 25 ಮತ್ತು 26 ರಂದು ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ. ಈ ರೈಲು ತುಮಕೂರು, ಅರಸೀಕೆರೆ, ಮತ್ತು ಶಿವಮೊಗ್ಗ ಟೌನ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ. 20 ಬೋಗಿಗಳ ಈ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Explainer: ಜೂ. 22 to ಜು. 18: ಏನಿದು ಧರ್ಮಸ್ಥಳ ಕೇಸ್? 'ಶನಿವಾರ ಎಲ್ಲ ಗೊತ್ತಾಗಲಿದೆ' ಎಂದ ಸಿದ್ದರಾಮಯ್ಯ!
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ, ಅತ್ಯಾಚಾರ ಮತ್ತು ನಾಪತ್ತೆ ಪ್ರಕರಣಗಳು ಮತ್ತೆ ಮುನ್ನೆಲೆಗೆ ಬಂದಿವೆ. ನಿಗೂಢ ಸಾಕ್ಷಿಯೊಬ್ಬರ ದೂರಿನಿಂದ ತನಿಖೆ ಚುರುಕುಗೊಂಡಿದ್ದು, ಎಸ್ಐಟಿ ತನಿಖೆಗೆ ಆಗ್ರಹ ಹೆಚ್ಚಾಗಿದೆ. ಇದೇ ವೇಳೆ ಪ್ರಕರಣದ ಬಗ್ಗೆ ಶನಿವಾರ ಸ್ಪಷ್ಟ ಚಿತ್ರ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದು ಕುತೂಹಲ ಮೂಡಿಸಿದೆ.
ಬಳ್ಳಾರಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿರುವ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಶೇ.100ರಷ್ಟು ಸಾಧನೆ ಮಾಡಬೇಕು. ಈ ದಿಸೆಯಲ್ಲಿ ಆಯಾ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ 2013ರನ್ವಯ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯ 2024-25ನೇ ಸಾಲಿನ ಮಾರ್ಚ್-2025 ಮತ್ತು ಜೂನ್-2025 ಅಂತ್ಯದವರೆಗಿನ ಪ್ರಗತಿಯ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಡಿ ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಆಯಾ ಉದ್ದೇಶಗಳಿಗೆ ಮಾತ್ರವೇ ಬಳಕೆ ಮಾಡಬೇಕು ಎಂದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಸಕೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಾಘವೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಪಕ್ಷದವರನ್ನು ಪರಿಗಣನೆಗೆ ತೆಗೆದುಕೊಳ್ಳದ ಕಾಂಗ್ರೆಸ್ ಸರಕಾರ: ಬಿ. ಶ್ರೀರಾಮುಲು ಟೀಕೆ
ಬೆಂಗಳೂರು: ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಾಗ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಪ್ರತಿಪಕ್ಷದ ಸದಸ್ಯರು ಎಂದರೆ ಲೆಕ್ಕವಿಲ್ಲದವರು ಎಂಬಂತಾಗಿದೆ. ವಿರೋಧ ಪಕ್ಷದವರನ್ನು ಪರಿಗಣನೆಗೆ ತೆಗೆದುಕೊಳ್ಳಬಾರದೆಂಬ ಅಲಿಖಿತ ನಿಯಮ ಕಾಂಗ್ರೆಸ್ ಪಕ್ಷದಲ್ಲಿ ಇದೆಯೇ? ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ. ಶುಕ್ರವಾರ ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಒಂದು ಶಾಸನ ಸಭೆ ಎಂದರೆ ರಾಜ್ಯವನ್ನು ಮುನ್ನಡೆಸುವವರಿಗೆ ಪಕ್ಷಪಾತ, ಬೇಧಭಾವ ಇರಬಾರದು. 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಎರಡು ಬಾರಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವಾರು ಹುದ್ದೆಗಳನ್ನು ನಿಭಾಯಿಸಿರುವ ನಿಮ್ಮಂತಹವರಿಗೆ ಪ್ರತಿಪಕ್ಷದವರನ್ನು ಪರಿಗಣಿಸಬೇಕೆಂಬ ಸಾಮಾನ್ಯಜ್ಞಾನ ಇಲ್ಲದಿದ್ದರೆ ಹೇಗೆ? ಎಂದು ಕೇಳಿದ್ದಾರೆ. ಆಡಳಿತ ಪಕ್ಷದ ಸದಸ್ಯರ ಪ್ರತಿ ಕ್ಷೇತ್ರಗಳಿಗೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ನಿಮಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಕ್ಷೇತ್ರಗಳಿಗೂ ಅನುದಾನ ಕೊಟ್ಟಿದ್ದರೆ ಕರ್ನಾಟಕವೇನೂ ಮುಳುಗಡೆಯಾಗುತ್ತಿತ್ತೇ? ಕಳೆದ ಎರಡೂವರೆ ವರ್ಷಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದ ಕಾರಣ ಕ್ಷೇತ್ರದಲ್ಲಿ ಹಲವಾರು ಮೂಲಭೂತ ಸಮಸ್ಯೆಗಳು ಎದುರಾಗಿವೆ. 50 ಕೋಟಿ ರೂ. ಅನುದಾನವನ್ನು ಅಷ್ಟಕ್ಕೂ ನೀವೇನು ಕಾಂಗ್ರೆಸ್ ಪಕ್ಷದ ದೇಣಿಗೆಯಿಂದ ಕೊಡುತ್ತಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ಒಡೆದಾಳುವ ನೀತಿಯನ್ನು ನಿಲ್ಲಿಸಿ. ಕುಂತಿರುವ ಕುರ್ಚಿ ಅಲುಗಾಡುತ್ತಿದ್ದು, ಸಿಎಂ ಬದಲಾವಣೆಗೆ ಸ್ವಪಕ್ಷೀಯರೇ ಉಸ್ತುವಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ನಾಳೆ ಬಲಾಬಲ ಪ್ರದರ್ಶನ ನಡೆದರೆ ನನ್ನ ಪರವಾಗಿ ಶಾಸಕರು ಕೈ ಎತ್ತಲಿ ಎಂಬ ನಿಮ್ಮ ದುರಾಲೋಚನೆಯನ್ನು ಬಿಟ್ಟು ಪ್ರತಿಪಕ್ಷಗಳ ಸದಸ್ಯರ ಕ್ಷೇತ್ರಗಳಿಗೂ ಅಷ್ಟೇ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಶ್ರೀರಾಮುಲು ಆಗ್ರಹಿಸಿದ್ದಾರೆ. ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಾಗ ಹಾಗೆ ಮುಖ್ಯಮಂತ್ರಿ @siddaramaiah ಅವರ ಅಧಿಕಾರವಧಿಯಲ್ಲಿ ಪ್ರತಿಪಕ್ಷದ ಸದಸ್ಯರು ಎಂದರೆ ಲೆಕ್ಕವಿಲ್ಲದವರು ಎಂಬಂತಾಗಿದೆ. ವಿರೋಧ ಪಕ್ಷದವರನ್ನು ಪರಿಗಣನೆಗೆ ತೆಗೆದುಕೊಳ್ಳಬಾರದೆಂಬ ಅಲಿಖಿತ ನಿಯಮ @INCIndia ಪಕ್ಷದಲ್ಲಿ ಇದೆಯೇ. ? ಒಂದು ಶಾಸನ ಸಭೆ ಎಂದರೆ ರಾಜ್ಯವನ್ನು… pic.twitter.com/oIe3VkMDmm — B Sriramulu (@sriramulubjp) July 18, 2025
ವಿಟ್ಲ: ಜುಲೈ 20ರಿಂದ ಸಿಪಿಐ 25ನೇ ಜಿಲ್ಲಾ ಸಮ್ಮೇಳನ
ವಿಟ್ಲ: ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ದ.ಕ ಜಿಲ್ಲೆ ಇದರ 25ನೇ ಜಿಲ್ಲಾ ಸಮ್ಮೇಳನ ಜುಲೈ 20ರಿಂದ 22ರ ವರೆಗೆ ವಿಟ್ಲದಲ್ಲಿ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್ ಅವರು ತಿಳಿಸಿದರು. ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಭಾರತ ಕಮ್ಯುನಿಸ್ಟ್ ಪಕ್ಷ ಭಾರತದ ಮೊಟ್ಟ ಮೊದಲು ಕಮ್ಯುನಿಸ್ಟ್ ಪಕ್ಷವಾಗಿದೆ. 1925ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಮಹಾ ಧಿವೇಶನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಉದಯವಾಗಿದೆ. ಪಕ್ಷ ಕಾರ್ಮಿಕರ, ರೈತರ , ಹಿಂದುಳಿದವರ ಹಾಗೂ ಬಡವರ ಏಳಿಗೆಗಾಗಿ ಶ್ರಮಿಸುತ್ತ ಬಂದಿದೆ. 2025 ಡಿಸೆಂಬರ್ 26ಕ್ಕೆ 100 ವರ್ಷ ಪೂರೈಸುತ್ತಿ ರುವ ಸಿಪಿಐ ಶತಮಾನೋತ್ಸವ ಸಂಭ್ರಮಾಚರಣೆಯನ್ನು ವರ್ಷವಿಡಿ ಆಚರಿಸುತ್ತಿದೆ ಎಂದರು. ದ.ಕ ಕಮ್ಯೂನಿಸ್ಟ್ ಪಕ್ಷದ ಮತ್ತೊಬ್ಬ ಮಹಾನ್ ನಾಯಕ ವಿಟ್ಲದವರೇ ಆದ ಕೆ ದಾಸಪ್ಪ ಮಾಸ್ಟರ್ ರವರು ವಿಟ್ಲ ಸೀಮೆಯಲ್ಲಿ ಬೀಡಿ ಮತ್ತು ಇತರ ಕಾರ್ಮಿಕ ಸಂಘಟನೆ ಕಟ್ಟಿ ಅಲ್ಲಿ ಪಕ್ಷವನ್ನು ಬೆಳೆಸಿರುವ ಮಾಸ್ಟರ್, ವಿಟ್ಲ ವಿಧಾನ ಸಭಾ ಕ್ಷೇತ್ರದಲ್ಲಿ ಬಿ ವಿ ಕಕ್ಕಿಲ್ಲಾಯರು ಆರಿಸಿ ಬರುವಲ್ಲಿ ಮುಖ್ಯ ಪಾತ್ರ ವಹಿಸಿದವರು. ಅವರ ಹಾದಿಯಲ್ಲಿ ಮುಂದುವರಿದ ಎನ್ ಎ ಹಮೀದ್ ಕಾರ್ಮಿಕ ಸಂಘಟನೆ ಎಐಟಿಯುಸಿ ಹಾಗೂ ಸಿಪಿಐ ಪಕ್ಷವನ್ನು ವಿಟ್ಲ ಸೀಮೆಯಲ್ಲಿ ಬೆಳೆಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಅವರುಗಳ ನೆನಪಿಗಾಗಿ ಸಮ್ಮೇಳನದ ವೇದಿಕೆ ಮತ್ತು ದ್ವಾರ ವನ್ನು ಅವರಿಗೆ ಅರ್ಪಿಸಲಾಗಿದೆ ಎಂದರು. ಜುಲೈ 20 ಮತ್ತು 21 ರ ವರೆಗೆ ಒಕ್ಕೆತ್ತೂರು ರಾಯಲ್ ಹಾಲ್ ನಲ್ಲಿ ಪ್ರತಿನಿಧಿ ಸಮ್ಮೇಳನ ನಡೆಯಲಿದ್ದು, ಜುಲೈ 22ರಂದು ವಿಟ್ಲದಲ್ಲಿ ಸಾವಿರಾರು ಸದಸ್ಯರ, ಕಾರ್ಮಿಕರ, ರೈತರ ಕೂಡುವಿಕೆಯಲ್ಲಿ ಆಕರ್ಷಕ ವರ್ಣ ರಂಜಿತ ಮೆರವಣಿಗೆ ವಿಟ್ಲ ಪೇಟೆಯಲ್ಲಿ ನಡೆದು ಬಹಿರಂಗ ಸಭೆಯೊಂದಿಗೆ ಸಮಾಪನಗೊಳ್ಳಲಿದೆ. ವಿಟ್ಲ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯುವ ಸಭೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ ಹಸೈನಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವೈದ್ಯರಾದ ಡಾ. ಬಿ ಶ್ರೀನಿವಾಸ ಕಕ್ಕಿಲ್ಲಾಯ, ಸಿಪಿಐ ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ವಿ ಕುಕ್ಯಾನ್, ಹೆ.ಚ್ ವಿ ರಾವ್, ಶಶಿಕಲ ಗಿರೀಶ್ , ವಿ.ಎಸ್ ಬೇರಿಂಜ, ಶಿವಾನಂದ ಉಡುಪಿ ಮೊದಲಾದ ವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ ಹಸೈನಾರ್, ಜಿಲ್ಲಾ ಸಹಕಾರ್ಯದರ್ಶಿ ವಿ.ಎಸ್ ಬೇರಿಂಜ, ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ರಾಮಮುಗೇರ ಉಪಸ್ಥಿತರಿದ್ದರು.
ವಿಜಯನಗರ | ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು : ಸಿಇಓ ಮುಹಮ್ಮದ್ ಅಲಿ ಅಕ್ರಂ ಷಾ
ವಿಜಯನಗರ(ಹೊಸಪೇಟೆ) : ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟ ಸೇರಿ ಶುಚಿ, ರುಚಿ, ಸ್ವಾಸ್ಥ್ಯದೊಂದಿಗೆ ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು .ಇದಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯತೆ ಮುಖ್ಯ. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಿ ಎಂದು ಜಿಪಂ ಸಿಇಓ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಂ ಷಾ ಸೂಚನೆ ನೀಡಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಜಯ ವಿಠಲ ಸಭಾಂಗಣದಲ್ಲಿ ಏರ್ಪಡಿಸಿದ್ದ ʼಅತಿಸಾರ ಭೇದಿ ನಿಯಂತ್ರಣ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆʼಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು. ಜಿಲ್ಲೆಯಲ್ಲಿ ತೀವ್ರ ಅತಿಸಾರದಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದನ್ನು ಗುರಿಯಾಗಿಸಿ ತೀವ್ರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್ ನಾಯ್ಕ.ಎಲ್.ಆರ್, ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿದರು. ಈ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ಗೌಡ, ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ.ಸತೀಶ್ಚಂದ್ರ, ಶಿಶು ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಧರ್ಮಸ್ಥಳ ಪ್ರಕರಣ: ಸಕಾರ ಎಸ್ಐಟಿ ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಲು ಡಿವೈಎಫ್ಐ ಆಗ್ರಹ
ಬೆಂಗಳೂರು, ಜು.18: ಧರ್ಮಸ್ಥಳದಲ್ಲಿ ಕ್ರೂರವಾಗಿ ಹತ್ಯೆಗೈದು ಹೆಣಗಳನ್ನು ಹೂತು ಹಾಕಿದ ಪ್ರಕರಣ ಗಳ ಸಾಕ್ಷಿ ನೀಡಲು ಪ್ರತ್ಯಕ್ಷದರ್ಶಿ ದೂರದಾರರು ಮುಂದೆ ಬಂದಿದ್ದಾರೆ. ಹಾಗಾಗಿ ರಾಜ್ಯ ಸರಕಾರ ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ ಕುರಿತು ಎಸ್ಐಟಿ ರಚಿಸಿ ನಿಷ್ಪಕ್ಷಪಾತ ತನಿಖೆಗೆ ಮುಂದಾಗಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿಯು ಒತ್ತಾಯಿಸಿದೆ. ಧರ್ಮಸ್ಥಳದಲ್ಲಿ ಕೊಲೆಗೈದ ಶವಗಳನ್ನು ಹೂತು ಹಾಕಿರುವುದಾಗಿ ಪ್ರತ್ಯಕ್ಷದರ್ಶಿಯಾಗಿರುವ ದೂರುದಾರ ವ್ಯಕ್ತಿ (ನಾಪತ್ತೆ) ತಲೆಮರೆಸಿಕೊಳ್ಳದಂತೆ ಕಾಯುವ ಹಾಗೂ ರಕ್ಷಣೆ ಒದಗಿಸುವ ಮಹತ್ವದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಕಾಂಗ್ರೆಸ್ ಸರಕಾರ ಈ ಕುರಿತು ಕಟ್ಟೆಚ್ಚರ ವಹಿಸಬೇಕಿದೆ. ಹೆಚ್ಚುಕಮ್ಮಿಯಾದರೆ ಸರಕಾರದ ಮೇಲೆ ಗಂಭೀರ ಪರಿಣಾಮ ಆಗಲಿದೆ ಎಂಬುದನ್ನು ಮರೆಯಬಾರದು. ಧರ್ಮಸ್ಥಳದ ಬಗ್ಗೆ ತಮಗಿರುವ ಇರುವ ಭಾವನಾತ್ಮಕ ನಂಟನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಇಡೀ ಸನ್ನಿವೇಶವನ್ನು ಇನ್ನಷ್ಟು ಸಂಕೀರ್ಣಗೊಳಿಸಲು ಮುಂದಾಗಬಾರದು. ಕಾಂಗ್ರೆಸ್ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲದಿದ್ದರೆ ಎಸ್ಐಟಿ ರಚನೆಯಿಂದಲೂ ನ್ಯಾಯ ಸಿಗಲಾರದು. ಸೌಜನ್ಯ ಪ್ರಕರಣ ತನಿಖೆಯ ಸಂದರ್ಭ ಎಸ್ಐಟಿ ರಚನೆಯಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಧರ್ಮಸ್ಥಳದ ಪಾತಕಗಳ ಸತ್ಯಾಸತ್ಯತೆ ತಿಳಿಯುವುದು ರಾಜ್ಯದ ಜನತೆಯ ಹಕ್ಕಾಗಿದೆ. ಹಾಗಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿ ಹಾಲಿ ಅಥವಾ ನಿವೃತ್ತ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಡಿವೈಎಫ್ಐ ರಾಜ್ಯ ಸಮಿತಿಯ ಅಧ್ಯಕ್ಷ ಲವಿತ್ರ ವಸ್ತ್ರದ ಮತ್ತು ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನರ ಸಾವಿನ ಮೇಲೆ ಸಮಾವೇಶಕ್ಕೆ ಸರಕಾರದ ಸಿದ್ಧತೆ: ಆರ್. ಅಶೋಕ್
ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಹಗರಣ, 2,500 ರೈತರ ಆತ್ಮಹತ್ಯೆ 1200 ನವಜಾತ ಶಿಶುಗಳ ಸಾವು, ಬಾಣಂತಿಯರ ಸಾವು, ಹತ್ತಕ್ಕೂ ಅಧಿಕ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಆತ್ಮಹತ್ಯೆ, ಆರ್ಸಿಬಿ ಸಂಭ್ರಮಾಚರಣೆ ವೇಳೆ 11 ಸಾವು, ಇಂತಹ ಘಟನೆಗಳನ್ನು ಸಂಭ್ರಮಿಸಲು ಸರಕಾರ ಸಮಾವೇಶ ಮಾಡುತ್ತಿದ್ದೆಯೇ? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದರು. ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ನಡೆಸುತ್ತಿದ್ದಾರೆ. ಇದು ಅವರ ಅಳಿವು-ಉಳಿವಿನ ಸಮಾವೇಶವಾಗಿದೆ. ಆರಂಭದಿಂದಲೂ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳುತ್ತಲೇ ಇದ್ದಿದ್ದರಿಂದ ಯಾವಾಗಲೂ ಸರಕಾರವನ್ನು ಅಸ್ಥಿರತೆ ಕಾಡುತ್ತಿದೆ. ಈ ಸಮಾವೇಶದಿಂದ ಜನರಿಗೆ ಯಾವುದೇ ಉಪಯೋಗವಿಲ್ಲ ಎಂದು ಹೇಳಿದರು. ಆರ್ಸಿಬಿ ಕಾರ್ಯಕ್ರಮ ಸರಕಾರದ ವತಿಯಿಂದ ನಡೆದಿಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದರು. ಸಿಐಡಿ ಹಾಗೂ ನ್ಯಾ.ಕುನ್ಹಾ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಸರಕಾರದ ಪಾತ್ರದ ಬಗ್ಗೆ ಹೇಳದೆ, ಪೊಲೀಸರ ಮೇಲೆ ಆರೋಪ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರಿಗೆ ಆದೇಶ ಕೊಟ್ಟ ಸರಕಾರದ ತಪ್ಪಿನ ಬಗ್ಗೆ ಎಲ್ಲೂ ಹೇಳಿಲ್ಲ. ಇಂತಹ ಸಮಯದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಇದೇ ರೀತಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಸಮಾವೇಶ ನಡೆಸಿದರೆ ಆಗ ಯಾರ ಬಲ ಹೆಚ್ಚಿದೆ ಎಂದು ತೀರ್ಮಾನಿಸಬಹುದು. ಇಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಪರಸ್ಪರ ಸ್ಪರ್ಧೆ ನಡೆಯುತ್ತಿದೆ ಎಂದು ಅಶೋಕ್ ಹೇಳಿದರು. ವಿರೋಧ ಪಕ್ಷದ ಶಾಸಕ ಬೈರತಿ ಬಸವರಾಜು ಅವರನ್ನು ಬಗ್ಗುಬಡಿಯಲು ಪೊಲೀಸರೆ ಎಫ್ಐಆರ್ ನಲ್ಲಿ ಅವರ ಹೆಸರು ಬರೆದಿದ್ದಾರೆ. ದೂರು ಕೊಟ್ಟ ಮಹಿಳೆಯೇ ಮುಂದೆ ಬಂದು ಶಾಸಕರ ಹೆಸರನ್ನು ಹೇಳಿಲ್ಲ ಎಂದಿದ್ದಾರೆ. ಆದರೂ ಸರಕಾರ ದ್ವೇಷ ಸಾಧಿಸುತ್ತಿದೆ ಎಂದು ಅವರು ಆರೋಪಿಸಿದರು. ಬೆಂಗಳೂರಿನಲ್ಲಿ ಗಟ್ಟಿಯಾದ ಕಲ್ಲು ಇರುವುದರಿಂದ ಸುರಂಗ ಮಾಡುವುದು ಕಷ್ಟ. ಅದರ ಬದಲು ಮೆಟ್ರೊ ಯೋಜನೆಗೆ ಒತ್ತು ನೀಡಬಹುದಿತ್ತು. ಮೊದಲು ಮೇಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಸಾಕು. ಬೆಂಗಳೂರನ್ನು ಒಡೆದರೆ ನಾಡಪ್ರಭು ಕೆಂಪೇಗೌಡರಿಗೆ ಅಪಮಾನವಾಗುತ್ತದೆ. ಒಡೆಯುವುದು ಕಾಂಗ್ರೆಸ್ನ ಬುದ್ಧಿ. ಅಭಿವೃದ್ಧಿ ಮಾಡುವುದರ ಬದಲು ಒಡೆಯುವುದು ಸರಿಯಲ್ಲ. ಬ್ರ್ಯಾಂಡ್ ಬೆಂಗಳೂರಿನ ಹೆಸರಲ್ಲಿ ಇದುವರೆಗೆ ಒಂದು ಯೋಜನೆಯೂ ಜಾರಿಯಾಗಿಲ್ಲ ಎಂದು ಅವರು ತಿಳಿಸಿದರು. ಸರಕಾರದಲ್ಲಿ ಹಣವಿಲ್ಲ. ಒಂದು ರೂಪಾಯಿ ಖರ್ಚು ಮಾಡುವಾಗ ಬಹಳ ಯೋಚನೆ ಮಾಡಬೇಕು. ಅದಕ್ಕಾಗಿ ಬೀದಿ ವ್ಯಾಪಾರಿಗಳಿಂದ ಬರುವ ಜಿಎಸ್ಟಿ ಹೆಚ್ಚಿಸಲು ರಾಜ್ಯ ಸರಕಾರ ಕುತಂತ್ರ ಮಾಡಿದೆ. ಈ ಮೂಲಕ ಕೇಂದ್ರ ಸರಕಾರದ ಮೇಲೆ ಆರೋಪ ಹೊರಿಸಲಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೂ ಹಾನಿಯಾಗಲಿದೆ. ಜನರಿಗೆ ಅನ್ಯಾಯವಾಗಿದ್ದರೆ, ಈ ಬಗ್ಗೆ ಕೇಂದ್ರ ಸರಕಾರಕ್ಕೆ ತಿಳಿಸಲಾಗುವುದು ಎಂದು ಅಶೋಕ್ ಹೇಳಿದರು. ಬಿಜೆಪಿ ಸರಕಾರ ಇದ್ದಾಗ ವಿರೋಧ ಪಕ್ಷದ ನಾಯಕರು ಕೇಳಿದ ಮನೆಯನ್ನೆ ಕೊಡಲಾಗುತ್ತಿತ್ತು. ಕಳೆದೆರಡು ವರ್ಷಗಳಿಂದ ನನಗೆ ಮನೆ ನೀಡುವಂತೆ ಅನೇಕ ಪತ್ರಗಳನ್ನು ಬರೆದರೂ ಸರಕಾರ ಸ್ಪಂದಿಸಿಲ್ಲ. ನೀತಿ ಸಂಹಿತೆ, ಶಿಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿಗೂ ಪತ್ರ ಬರೆಯುವ ಮುಖ್ಯಮಂತ್ರಿ, ಇಲ್ಲಿ ಶಿಷ್ಟಾಚಾರ ಪಾಲಿಸುತ್ತಿಲ್ಲ. ವಿರೋಧ ಪಕ್ಷದ ನಾಯಕನಾದ ನನಗೆ ಮನೆ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. -ಆರ್.ಅಶೋಕ್, ವಿಪಕ್ಷ ನಾಯಕ
ಕಾಂಗೋ ಪ್ರತಿನಿಧಿಗಳಿಗೆ 'ವನತಾರಾ'ದಿಂದ ಅಂತರರಾಷ್ಟ್ರೀಯ ವನ್ಯಜೀವಿ ಕಲ್ಯಾಣ ತರಬೇತಿ
ಗುಜರಾತ್, 18 ಜುಲೈ 2025 : ತನ್ನ ಜಾಗತಿಕ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳ ಭಾಗವಾಗಿ ಅನಂತ್ ಅಂಬಾನಿ ಸ್ಥಾಪಿಸಿದ ಉಪಕ್ರಮವಾದ ವನತಾರಾ, ಪ್ರಸ್ತುತ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ (ಡಿಆರ್ಸಿ) ಸಂರಕ್ಷಿತ ಪ್ರದೇಶಗಳ ಮೇಲ್ವಿಚಾರಣೆ ಮಾಡುವ ಪ್ರಮುಖ ಪ್ರಾಧಿಕಾರವಾದ ಇನ್ಸ್ಟಿಟ್ಯೂಟ್ ಕಾಂಗೋಲೈಸ್ ಫಾರ್ ಲಾ ಕನ್ಸರ್ವೇಶನ್ ಡಿ ಲಾ ನೇಚರ್ನಿಂದ (ಐಸಿಸಿಎನ್) 15 ಸದಸ್ಯರ ನಿಯೋಗವನ್ನು ಆಯೋಜಿಸುತ್ತಿದೆ.
ರಾಜ್ಯ ಕಾಂಗ್ರೆಸ್ ಸರಕಾರವು 135 ಶಾಸಕರ ಬಲದೊಂದಿಗೆ ಸುಭದ್ರವಾಗಿದೆ : ಸಚಿವ ಸಂತೋಷ್ ಲಾಡ್
ಕೊಪ್ಪಳ: ಬೇರೆ ಪಕ್ಷಗಳೊಂದಿಗೆ ಸೇರಿ ಸಮ್ಮಿಶ್ರ ಸರಕಾರ ರಚನೆ ಮಾಡಿರುವ ಕೇಂದ್ರ ಬಿಜೆಪಿ ಸರಕಾರ ಐಸಿಯುನಲ್ಲಿದೆ. ಆದರೆ, ನಮ್ಮ ರಾಜ್ಯ ಕಾಂಗ್ರೆಸ್ ಸರಕಾರವು 135 ಶಾಸಕರ ಬಲದೊಂದಿಗೆ ಸುಭದ್ರವಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಆಂದ್ರ ಸಿಎಂ ಚಂದ್ರ ಬಾಬು ನಾಯ್ಡು ಅವರು ಎನಾದರು ಪತಾಕೆ ಹಾರಿಸಿದರೆ ಇವರ ಸರಕಾರ ಹೋದಂತೆ, ಎರಡುವರೆ ವರ್ಷದಿಂದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅವರು ಕೇಳುತಿದ್ದಾರೆ. ಅದಕ್ಕೆ ನಾವು ಉತ್ತರಿಸುತ್ತಾ ಬಂದಿದ್ದೇವೆ. ಆದರೆ, ಪ್ರಧಾನಿ ಅವರ ಬದಲಾವಣೆ ಬಗ್ಗೆ ಉತ್ತರಿಸುವುದಿಲ್ಲ. ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ದೇಶದಲ್ಲಿ ಬಡತನ ಜಾಸ್ತಿ ಇದೆ ಎಂದು ಪ್ರಧಾನಿ ವಿರುದ್ಧ ಮಾತನಾಡುತ್ತಾರೆ. ಆರೆಸೆಸ್ಸ್ ಅಧ್ಯಕ್ಷರು ಕೂಡ 75 ವರ್ಷಗಳ ನಂತರ ಪಿಎಂ ಬದಲಾವಣೆ ಆಗಬೇಕು ಎಂದಿದ್ದಾರೆ. ಪ್ರಧಾನಿ ಮೋದಿಯವರಿಗೆ 75ವರ್ಷ ವಯಸ್ಸು ತುಂಬಲಿದೆ ಇದಕ್ಕೆ ಬಿಜೆಪಿಯವರು ಉತ್ತರಿಸುವರೇ ? ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಸುರ್ಜೆವಾಲ ಅವರು ಪದೇ ಪದೇ ಭೇಟಿ ನಿಡುವ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವೊಂದು ಕೈ ಶಾಸಕರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಪಕ್ಷದೊಳಗಿನ ಸಮಸ್ಯೆ ಸರಿಪಡಿಸುವುದಕ್ಕಾಗಿ ಹಾಗೂ ಶಿಸ್ತು ತರುವುದಕ್ಕಾಗಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು, ಕರ್ನಾಟಕಕ್ಕೆ ಆಗಮಿಸಿ ಶಾಸಕರು ಮತ್ತು ಸಚಿವರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು. ಮಾಜಿ ಸಂಸದ ಪ್ರತಾಪ ಸಿಂಹ ಅವರು ವಿಶ್ವದ ಆರ್ಥಿಕ ಸಲಹೆಗಾರನೆಂದು ಬಿರುದುಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ಯಾರು ಬಗ್ಗೆ ಮಾತನಾಡಿಲ್ಲ, ಸೈದ್ಧಾಂತಿಕವಾಗಿ ವಿಚಾರಧಾರೆ ವ್ಯಕ್ತಪಡಿಸಿರಬಹುದು. ಅದಕ್ಕೆ ಪ್ರತಾಪ ಸಿಂಹ ಏನಾದರೂ ಅಂದಿದ್ದರೇ ಅವರ ಬಗ್ಗೆ ನಾನು ಏನು ಮಾತನಾಡಲ್ಲ ಎಂದು ಹೇಳಿದರು. ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ 56 ಲಕ್ಷ ಲೇಬರ್ ಕಾರ್ಡ್ ಗಳಿದ್ದವು. ಇದರಲ್ಲಿ ಪರಿಶೀಲನೆ ನಡೆಸಿ, 20ಲಕ್ಷ ಕಾರ್ಡ್ ರದ್ದು ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಶೀಲನೆ ನಡೆಸಿ, ನಿಜವಾದ ಕಾರ್ಮಿಕರಿಗೆ ಮಾತ್ರ ಕಾರ್ಮಿಕರ ಕಾರ್ಡ್ ಕೊಡಲಾಗುವುದು. ಕಾರ್ಮಿಕ ಇಲಾಖೆಯಲ್ಲಿ ಅವ್ಯವಹಾರವಾಗಿದ್ದರೆ. ಅದರ ಬಗ್ಗೆ ನಿಖರವಾದ ದೂರು ಕೊಟ್ಟರೆ ಖಂಡಿತ ಪರಿಶೀಲಿಸಿ, ಕ್ರಮ ಜರುಗಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಧರ್ಮಸ್ಥಳದಲ್ಲಿ ಕಾನೂನಾತ್ಮಕವಾಗಿ ಏನಾಗಿದೆ ಎಂಬುದರ ಕುರಿತು ವಿಚಾರ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನಮ್ಮ ಸರಕಾರ ಯಾರ ಬೆಂಬಲಕ್ಕೂ ಇಲ್ಲ. ಸುಖಾಸುಮ್ಮನೆ ಈ ವಿಚಾರದಲ್ಲಿ ರಾಜ್ಯ ಸರಕಾರವನ್ನು ಎಳೆದು ತರುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಈ ವೇಳೆ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪೂರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸದ ಗುಪ್ತಾ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಕಾಂಗ್ರೇಸ್ ವಕ್ತಾರೆ ಶೈಲಜಾ ಹಿರೇಮಠ, ಕಾವೇರಿ, ಮತ್ತು ಅಕ್ಬರ್ ಪಾಷ ಪಲ್ಟನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.